ಮೋದಿ:20 ತಿಂಗಳು ಗಮನಿಸಲೇಬೇಕಾದ 20 ಅಂಶಗಳು

Update: 2016-01-28 11:31 GMT

  24,716: ಇದು ಬಿಎಸ್‌ಇ ಸೂಚ್ಯಂಕದ ಮಟ್ಟ. ಅವರು ಅಧಿಕಾರಕ್ಕೆ ಬಂದಾಗ, ಸೂಚ್ಯಂಕ ಮಟ್ಟ 30 ಸಾವಿರ ಮಟ್ಟವನ್ನು ತಲುಪಿತ್ತು. ಅವರ ಆಡಳಿತ, ನೀತಿಗಳಲ್ಲಿ ಬದಲಾವಣೆ, ವಿದೇಶಿ ಬಂಡವಾಳದ ಹರಿವಿನ ಬಗ್ಗೆ ಇದ್ದ ನಿರೀಕ್ಷೆ ಇದಕ್ಕೆ ಕಾರಣ. ಹಿಂದಿನ ದಿನ 23,800ಕ್ಕೆ ಇಳಿದಿದ್ದ ಸೂಚ್ಯಂಕ ಮರುದಿನ 500 ಪಾಯಿಂಟ್ ಏರಿಕೆ ಕಂಡು ತಲುಪಿದ ಮಟ್ಟ ಇದು. ಖಂಡಿತವಾಗಿಯೂ ಜಾಗತಿಕ ಅಂಶಗಳೂ ಇದರಲ್ಲಿ ಪಾತ್ರ ಹೊಂದಿವೆ ಎನ್ನುವುದು ಒಪ್ಪುವಂಥದ್ದು. ಆದರೆ ಭಾರತ ಹೊಳೆಯುತ್ತಿಲ್ಲ ಹಾಗೂ ಕಾಂಗ್ರೆಸ್ ಮಂದಿ ಈಗಾಗಲೇ, ಮೋದಿಯವರ ನೇತೃತ್ವದಲ್ಲಿ ಸೂಚ್ಯಂಕ 20 ತಿಂಗಳ ವರ್ತುಲ ಮುಗಿಸಿದೆ ಎಂದು ಅಣಕವಾಡುವಂತಾಗಿದೆ.

3,228: ಭಾರತದಂಥ ದೊಡ್ಡ ಆರ್ಥಿಕತೆಗಳಲ್ಲಿ ಸೂಚ್ಯಂಕದ ಚಂಚಲತೆ ಅಭಿವೃದ್ಧಿಯ ಮಾನದಂಡವಲ್ಲ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಖಂಡಿತವಾಗಿಯೂ ಮಾನದಂಡವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಮಹಾರಾಷ್ಟ್ರದಲ್ಲೇ 3,000ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರ ಇದುವರೆಗೂ ಕೃಷಿಕ್ಷೇತ್ರಕ್ಕೆ ನೆರವಿಗೆ ಕೆಲ ಕ್ರಮ ಕೈಗೊಂಡಿದ್ದರೂ, ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅದು ಆತ್ಮಹತ್ಯೆ ತಡೆಗೆ ಪರಿಣಾಮಕಾರಿ ಸಾಧನವಾಗಲಾರದು. ಇದಕ್ಕೆ ಇಡೀ ನೀತಿಯಲ್ಲಿ ಸಮಗ್ರ ಬದಲಾವಣೆಯೇ ಬೇಕು. ಇದೀಗ ಸರಕಾರ 8,800 ಕೋಟಿ ರೂಪಾಯಿಯ ರೈತ ವಿಮಾ ಯೋಜನೆಗೆ ಅನುಮೋದನೆ ನೀಡಿದ್ದು, ಇದರ ಪರಿಣಾಮವನ್ನು ಕಾದು ನೋಡಬೇಕು.

26: ಇದು ಮೋದಿ 2015ರಲ್ಲಿ ಪ್ರವಾಸ ಕೈಗೊಂಡ ದೇಶಗಳ ಸಂಖ್ಯೆ. ಆದರೆ ವಿದೇಶಗಳನ್ನು ತಲುಪುವ ಪ್ರಧಾನಿ ದೃಷ್ಟಿ, ಅವರ ವಿರೋಧಿಗಳಿಗೆ ಹೊಸ ಅಸ್ತ್ರ ಒದಗಿಸಿದೆ. ಮೋದಿಯವರ ದೇಶೀಯ ಆದ್ಯತೆಗಳು ಪ್ರಶ್ನಾರ್ಹವಾಗಿವೆ. ಅವರ ವಿದೇಶಿ ಭೇಟಿಯ ಮೂಲ ಉದ್ದೇಶ ಬಂಡವಾಳ ಆಕರ್ಷಿಸುವುದಾದರೂ, ಮೋದಿ ತಮ್ಮ ಇಮೇಜ್ ಬೆಳೆಸಿಕೊಳ್ಳಲು ನಡೆಸುತ್ತಿರುವ ಸರ್ಕಸ್ ಇದು ಎಂಬ ವಾದವೂ ಕೇಳಿಬರುತ್ತಿದೆ. ಇನ್ನಾದರೂ ಮೋದಿ ವಿದೇಶಗಳನ್ನು ಸುತ್ತುವುದನ್ನು ಕಡಿಮೆ ಮಾಡಿ ತಮ್ಮ ಸಚಿವರು ಅಸಂಖ್ಯಾತ ಯೋಜನೆಗಳ ಬಗ್ಗೆ ಯಾವ ಸಾಧನೆ ಮಾಡಿದ್ದಾರೆ ಎನ್ನುವುದನ್ನು ಪರಿಶೀಲಿಸಬೇಕಾಗಿದೆ.

62.63: ಗಣರಾಜ್ಯೋತ್ಸವದ ಮುನ್ನ ಅಂತ್ಯಗೊಂಡ ವಾರದಲ್ಲಿ ಡಾಲರ್ ಎದುರು ರೂಪಾಯಿ 67 ರೂಪಾಯಿ ಮಟ್ಟದಲ್ಲಿ ಸ್ಥಿರಗೊಂಡಿದೆ. 2013ರಲ್ಲಿ ಇದು ಸಾರ್ವಕಾಲಿಕ ಕೆಳಮಟ್ಟವಾದ 68.60 ರೂಪಾಯಿ ತಲುಪಿತ್ತು. ಆದರೆ ಇದು ಮೋದಿ ಅಧಿಕಾರಕ್ಕೆ ಬರುವ ಮುನ್ನ ಇದ್ದ ಬೆಂಬಲಿಗರ ನಿರೀಕ್ಷೆಗೆ ವ್ಯತಿರಿಕ್ತವಾದದ್ದು. ಭಾರತ ಡಾಲರ್ ಎದುರು 40- 45 ರೂಪಾಯಿ ಮಟ್ಟದಲ್ಲಿ ಸ್ಥಿರಗೊಳ್ಳುತ್ತದೆ ಎಂದು ಅವರು ನಂಬಿದ್ದರು. ಮೋದಿ ಈ ಸಂಖ್ಯೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳದಿದ್ದರೆ ಆಮದು ಬಿಲ್ ಹೆಚ್ಚುತ್ತಲೇ ಹೋಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಶೇ. 3.2: 

ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಒಂದು ವರ್ಷದಲ್ಲಿ ಇಳಿದಿರುವ ಕೈಗಾರಿಕಾ ಪ್ರಗತಿಯ ದರ ಇದು. ಕೈಗಾರಿಕಾ ಉತ್ಪಾದನೆ ಸೂಚ್ಯಂಕದ ಅನ್ವಯ ಇದನ್ನು ಅಳೆಯಲಾಗುತ್ತದೆ. ಅಕ್ಟೋಬರ್‌ನಲ್ಲಿ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟವಾದ ಶೇಕಡ 9.9ರ ಪ್ರಗತಿ ದಾಖಲಿಸಲಾಗಿದೆ. ಜಾಗತಿಕ ಹಿಂಜರಿಕೆ ನಡುವೆಯೂ ಭಾರತ ಅದ್ಭುತ ಪ್ರಗತಿ ದಾಖಲಿಸಿದೆ ಎಂದು ಬೀಗುತ್ತಿರುವಾಗಲೇ ಈ ಅಂಕಿ ಅಂಶ ಬಹಿರಂಗವಾಗಿದೆ.

30 ಡಾಲರ್: ಇದು ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ. 2007ರಲ್ಲಿ ಬ್ಯಾರಲ್‌ಗೆ 100 ಡಾಲರ್‌ಗಿಂತಲೂ ಅಧಿಕ ಇದ್ದ ದರ ಮೂರನೆ ಎರಡರಷ್ಟು ಕುಸಿದಿದೆ. ಬೆಲೆ ಮತ್ತಷ್ಟು ಕುಸಿಯುವ ಸೂಚನೆ ಇದ್ದರೂ, ಮೋದಿ ಸರಕಾರ ಮಾತ್ರ ಅಧಿಕ ದರದಲ್ಲೇ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಈ ಭಾರೀ ಮೊತ್ತದ ಸೆಸ್ ಎಲ್ಲಿ ಹೋಗುತ್ತಿದೆ ಎಂಬ ಬಗ್ಗೆ ಸರಿಯಾದ ವಿವರಣೆ ಮಾತ್ರ ಸಿಗುತ್ತಿಲ್ಲ.

ಏಳು ಲಕ್ಷ: ಇದು ದೇಶದ ಎಂಟು ಪ್ರಮುಖ ನಗರಗಳಲ್ಲಿ ಮಾರಾಟವಾಗದೇ ಉಳಿದಿರುವ ಸ್ಥಿರಾಸ್ತಿಗಳ ಸಂಖ್ಯೆ. ವಾರದಿಂದ ವಾರಕ್ಕೆ ಇದು ಏರುತ್ತಲೇ ಇದೆ. ಜಿಡಿಪಿ ಪ್ರಬಲವಾಗಿ ಏರಿಕೆಯಾಗುತ್ತಿದ್ದರೂ, ರಿಯಲ್ ಎಸ್ಟೇಟ್‌ನಂಥ ಪ್ರಮುಖ ವಲಯ ಚೇತರಿಸಿಕೊಳ್ಳದಿದ್ದರೆ ಮುಂದಿನ ಪರಿಸ್ಥಿತಿ ಏನು ಎನ್ನುವುದನ್ನು ವಿವರಿಸುವ ಸ್ಥಿತಿಯಲ್ಲಿ ಸರಕಾರ ಇಲ್ಲ.

ಏಳು: ಏಳು ಮಂದಿ ಭದ್ರತಾ ಪಡೆ ಸಿಬ್ಬಂದಿ ಪಠಾಣ್‌ಕೋಟ್ ಉಗ್ರರ ದಾಳಿಯಲ್ಲಿ ಹತರಾದರು. ಇದನ್ನು ಆರಂಭಿಕ ಹಂತದಲ್ಲೇ ಬಗ್ಗುಬಡಿದರೂ, ಮತ್ತೊಂದು ಜೀವವನ್ನು ಬಲಿ ತೆಗೆದುಕೊಂಡಿತು. ಶವಗಳನ್ನು ಮುಂದಿಟ್ಟುಕೊಂಡು ಮಾತುಕತೆಗೆ ಭಾರತ ಸಿದ್ಧವಿಲ್ಲ ಎನ್ನುತ್ತಿದ್ದ ಮೋದಿಯವರ ಬಿಜೆಪಿ ಸಂಧಾನ ಮಾತುಕತೆ ಮುಂದುವರಿಸುವ ಇರಾದೆಯಲ್ಲಿದೆ. ಮುಂದಿನ ದಿನಗಳಲ್ಲಿ ಉಗ್ರರ ವಿರುದ್ಧದ ಮೋದಿ ತೋಳ್ಬಲಕ್ಕೆ ಮತ್ತಷ್ಟು ಪರೀಕ್ಷೆಗಳು ಎದುರಾಗುವ ಸಾಧ್ಯತೆ ಇದೆ.

55: ಕಳೆದ ಅಧಿವೇಶನದಲ್ಲಿ ರಾಜ್ಯಸಭೆಯ ಕಲಾಪಕ್ಕೆ ನಿಗದಿಯಾಗಿದ್ದ 112 ಗಂಟೆಗಳ ಪೈಕಿ 55 ಗಂಟೆ ವ್ಯರ್ಥವಾಯಿತು. ವಿರೋಧ ಪಕ್ಷಗಳ ಗದ್ದಲದಿಂದ ಇದು ಸಂಭವಿಸಿದ್ದರೂ, ಈ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಲಕ್ಷಣ ಕಾಣುತ್ತಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನಮಾನವನ್ನೂ ನೀಡದ ಬಿಜೆಪಿಯ ಧಾರ್ಷ್ಟ್ಯದ ಹಿನ್ನೆಲೆಯಲ್ಲಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಲದಿಂದ ಸರಕಾರಕ್ಕೆ ಬೆವರಿಳಿಸುತ್ತಿದೆ. ಜಿಎಸ್‌ಟಿಯಂಥ ಮಹತ್ವದ ಕಾಯ್ದೆಗಳ ವಿಚಾರದಲ್ಲೇ ಅಸಹಕಾರ ತೋರುತ್ತಿದೆ. ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಇದ್ದ ಏಕೈಕ ಅವಕಾಶವಾಗಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವೈಫಲ್ಯದೊಂದಿಗೆ ಕನಸು ಭಗ್ನಗೊಂಡಿದೆ. ಇಷ್ಟಾಗಿಯೂ ವಿರೋಧ ಪಕ್ಷಗಳ ಬಗೆಗಿನ ಮೋದಿ ಧೋರಣೆ ಬದಲಾಗಿಲ್ಲ.

4: 2016ರಲ್ಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ದಿಲ್ಲಿ ಮತ್ತು ಬಿಹಾರದಲ್ಲಿ ಎದುರಾದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಇದು ಬಿಜೆಪಿಗೆ ಮಹತ್ವದ್ದಾಗಿದೆ. ಮೋದಿ- ಶಾ ಜೋಡಿಯಿಂದ ಪವಾಡ ನಿರೀಕ್ಷಿಸುತ್ತಿದ್ದ ಬಿಜೆಪಿಗೆ ಇದು ಭ್ರಮನಿರಸನಕ್ಕೆ ಕಾರಣವಾಗಿದೆ. ತಮಿಳುನಾಡು, ಪಶ್ಚಿಮಬಂಗಾಳ, ಅಸ್ಸಾಂ ಹಾಗೂ ಕೇರಳದಲ್ಲಿ ಬಿಜೆಪಿಯ ಓಟವನ್ನು ಕಟ್ಟಿಹಾಕುವ ತಂತ್ರವನ್ನು ವಿರೋಧ ಪಕ್ಷಗಳು ರೂಪಿಸುತ್ತಿವೆ. ಈ ರಾಜ್ಯಗಳಲ್ಲಿ ಬಿಜೆಪಿಯನ್ನು ಮೇಲೆತ್ತುವ ಯಾವ ನಾಯಕರೂ ಇಲ್ಲ ಹಾಗೂ ಮೋದಿ ಕೂಡಾ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಸಮರ್ಪಕವಾಗಿ ಬಿಂಬಿಸಿಕೊಳ್ಳುವಲ್ಲಿ ವಿಫಲರಾಗಿ ದ್ದಾರೆ.

ಶೇಕಡ 90:
ಮೋದಿಯವರ ಮಹತ್ವಾ ಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದಲ್ಲಿ ತಲುಪಬೇಕಿರುವ ಗುರಿ ಇದು. ಮತ್ತದೇ ಸಮಸ್ಯೆ. ಈ ಅಂಕಿ ಅಂಶಕ್ಕೆ ಮಹತ್ವ ನೀಡಬೇಕು ಎಂದು ಮೋದಿಗೆ ಅನಿಸುತ್ತಿಲ್ಲ. ಅವರು ಇದಕ್ಕೆ ಸೂಕ್ತರಾದವರನ್ನು ನೇಮಿಸುತ್ತಲೂ ಇಲ್ಲ. ಮಹತ್ವದ ಯೋಜನೆಗಳಾದ ‘ಡಿಜಿಟಲ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಮೇಕ್ ಇನ್ ಇಂಡಿಯಾ’, ‘ಸ್ಮಾರ್ಟ್ ಸಿಟಿ ಯೋಜನೆ’ಗಳ ವಿಚಾರದಲ್ಲಿ ರಾಜ್ಯಗಳು ತಮ್ಮ ಆದ್ಯತೆಗಳನ್ನು ನಿಗದಿಪಡಿಸುವಂತೆ ಮನವೊಲಿಸುವಲ್ಲಿ ವಿಫಲವಾದ ನೀತಿ ಆಯೋಗದ ಪುನರ್ರಚನೆಗೆ ಮೋದಿ ಮುಂದಾದರೂ ಆಶ್ಚರ್ಯವಿಲ್ಲ.

98 ಸಾವಿರ ಕೋಟಿ: ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ತಗಲುವ ಅಂದಾಜು ವೆಚ್ಚ (2015ರ ಅಂದಾಜಿನಂತೆ). 2024ರೊಳಗೆ ಇದನ್ನು ಪೂರ್ಣಗೊಳಿಸುವ ಯೋಜನೆ ಇದೆ. ಜಪಾನ್ ಇದಕ್ಕೆ ಹಣಕಾಸು ನೆರವು ನೀಡುವುದರಿಂದ ಹೆಚ್ಚುವರಿಯಾಗಿ 4,400 ಕೋಟಿ ರೂಪಾಯಿ ಹೊರೆ ಬಿದ್ದಿದೆ. ವಾಸ್ತವವಾಗಿ ಇದಕ್ಕೆ ಪ್ರಯಾಣಿಕರಿಂದ ಅಷ್ಟೊಂದು ಒತ್ತಡವಿದೆಯೇ ಅಥವಾ ಅದರ ಬದಲಾಗಿ ಈ ಹಣದಲ್ಲಿ ಇಡೀ ಭಾರತೀಯ ರೈಲ್ವೆ ಪುನರುಜ್ಜೀವನಗೊಳಿಸಲು ಆದ್ಯತೆ ನೀಡಬಹುದಿತ್ತೇ?

13: ಪ್ರಧಾನಮಂತ್ರಿಗಳ ಮೇಕ್ ಇನ್ ಇಂಡಿಯಾ ಪ್ರಕಾಶಿಸುತ್ತಿರುವಂತೆಯೇ ಸತತ ಹದಿಮೂರು ತಿಂಗಳಿಂದ ರಫ್ತು ಪ್ರಮಾಣ ಕುಸಿಯುತ್ತಲೇ ಇದೆ. ಮೇಕ್ ಇನ್ ಇಂಡಿಯಾ ಮ್ಯಾಜಿಕ್ ತಳಮಟ್ಟಕ್ಕೆ ವರ್ಗಾವಣೆಯಾಗುತ್ತಿಲ್ಲ ಅಥವಾ ರಫ್ತು ಹೆಚ್ಚಿಸುತ್ತಿಲ್ಲ. ಭಾರತದ ರಫ್ತು ಪ್ರಮಾಣ 2014-15ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 3.5ರಷ್ಟು ಕಡಿಮೆಯಾಗಿದೆ.

2: ಸತತ ಎರಡು ವರ್ಷಗಳ ಮಳೆ ಕೊರತೆ ರೈತರನ್ನು ಕಂಗೆಡಿಸಿದೆ. ಇದರಲ್ಲಿ ಸುಧಾರಣೆ ಲಕ್ಷಣಗಳೂ ಕಾಣುತ್ತಿಲ್ಲ. ಚೀನಾ ಹಾಗೂ ವಿಶ್ವದ ಇತರ ದೇಶಗಳು ಸಂಕಷ್ಟದ ಸ್ಥಿತಿಯಲ್ಲಿದ್ದು, ಆಂತರಿಕ ಬಳಕೆಯೇ ಭಾರತಕ್ಕೆ ಆಧಾರವಾಗಬೇಕು. ಆದರೆ ಕೃಷಿ ಸಮಸ್ಯೆ ಹೆಚ್ಚಿದಷ್ಟೂ, ಆರ್ಥಿಕ ಪ್ರಗತಿಯ ಮೋದಿ ಯೋಜನೆಗಳು ತಲೆ ಕೆಳಗಾಗಲಿವೆ.

200: ಅಕ್ಟೋಬರ್, ನವೆಂಬರ್‌ನಲ್ಲಿ ಒಂದು ಕೆ.ಜಿ. ತೊಗರಿಬೇಳೆ ಬೆಲೆ 200 ರೂಪಾಯಿಯನ್ನು ತಲುಪಿತ್ತು. ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಈರುಳ್ಳಿ, ತರಕಾರಿ ಬೆಲೆ ಗಗನಕ್ಕೇರಿದೆ. ಮೋದಿಯವರ ಇಮೇಜ್‌ಗೆ ವಿರುದ್ಧವಾಗಿ ಬೆಲೆ ಏರಿಕೆ ತಡೆಯುವಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ.

40: ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ ಹಾಗೂ ಇದನ್ನು ಪ್ರಶ್ನಿಸಿಸುವವರ ಮೇಲಿನ ಅಸಹಿಷ್ಣುತೆ ನಿಯಂತ್ರಿಸಲು ಕೇಂದ್ರ ಸರಕಾರ ವಿಫಲವಾದ್ದನ್ನು ಖಂಡಿಸಿ 40 ಮಂದಿ ಸಾಹಿತಿಗಳು, ತಮ್ಮ ಅಕಾಡಮಿ ಪ್ರಶಸ್ತಿಗಳನ್ನು ಮರಳಿಸಿದ್ದಾರೆ. ಇದನ್ನು ಚಾಕಚಕ್ಯತೆಯಿಂದ ನಿಭಾಯಿಸುವ ಬದಲು ಬಿಜೆಪಿ ಪರ ಧ್ವನಿಗಳು, ಪ್ರಶಸ್ತಿ ವಾಪಸಾತಿಯ ಸಾಹಿತಿಗಳ ಮೂಲ ಉದ್ದೇಶವನ್ನೇ ಪ್ರಶ್ನಿಸಿ ಇದೊಂದು ದೊಡ್ಡ ಕುತಂತ್ರದ ಭಾಗ ಎಂದು ಬಣ್ಣಿಸಿ, ವಿವಾದ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾದವು. ಇದು ಬಿಜೆಪಿ ಎಂದೂ ಸರಿ ಮಾಡಿಕೊಳ್ಳಲಾಗದ ಹಾನಿ. ಈ ವಿಷಯದ ಬಗ್ಗೆ ಮೋದಿ ಸುದೀರ್ಘ ಮೌನ ವಹಿಸಿದ್ದೂ, ಬಿಜೆಪಿ ಉಗ್ರರಿಗೆ ವರದಾನವಾಯಿತು.

15,000,00: ವಿದೇಶಗಳಲ್ಲಿರುವ ಕಾಳಧನವನ್ನು ದೇಶಕ್ಕೆ ವಾಪಸು ತಂದರೆ ದೇಶದ ಪ್ರತಿಯೊಬ್ಬ ನಾಗರಿಕನಿಗೆ 15 ಲಕ್ಷ ರೂಪಾಯಿ ಪಡೆಯಬಹುದು ಎನ್ನುವುದು ಚುನಾವಣಾ ಸಂದರ್ಭದಲ್ಲಿ ಮೋದಿಯವರ ಆಶ್ವಾಸನೆಯಾಗಿತ್ತು. ಆದರೆ ಇದನ್ನು ಕೆಲವೇ ದಿನಗಳ ಬಳಿಕ ಅಮಿತ್ ಶಾ ಚುನಾವಣಾ ಪ್ರಹಸನ ಎಂದು ಬಣ್ಣಿಸಿದರು. ಇದರಿಂದ ಕೆಲ ಬಿಜೆಪಿ ಬೆಂಬಲಿಗರೇ ಮೋಸಹೋದೆವು ಎಂದುಕೊಳ್ಳುವಂತಾಯಿತು.

66: ಮೋದಿಯವರ ಸಂಪುಟ ಗಾತ್ರ. ಕನಿಷ್ಠ ಸರಕಾರ- ಗರಿಷ್ಠ ಆಡಳಿತ ಎಂಬ ಘೋಷಣೆಯೊಂದಿಗೆ ಆರಂಭವಾದ 45 ಮಂದಿಯ ಸಂಪುಟ ಇದೀಗ 66ಕ್ಕೆ ಬೆಳೆದಿದೆ. ಯುಪಿಎ ಸರಕಾರ ಹೊಂದಿದ್ದ ಸಚಿವರ ಸಂಖ್ಯೆಗಿಂತ ಕೇವಲ 11 ಕಡಿಮೆ. ಇದಕ್ಕಿಂತ ಹೆಚ್ಚಾಗಿ ಹಲವು ಸಚಿವರ ಕ್ಷಮತೆ ಬಗ್ಗೆ ದೊಡ್ಡ ಸಂದೇಹಗಳಿವೆ. ಇಡೀ ತಂಡದ ಕ್ಷಮತೆ ಬಗ್ಗೆ ಗಮನ ಹರಿಸುವ ಬದಲು 20 ತಿಂಗಳನ್ನು ದೊಡ್ಡ ಯೋಜನೆಗಳಿಗೆ ಚಾಲನೆ ನೀಡುವಲ್ಲೇ ಕಳೆದರು.

50 ಇಂಚು: ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವದಲ್ಲಿ ಭಾಗ ವಹಿಸಲು ಗೌನು ಸಿದ್ಧಪಡಿಸಲು ಅಲ್ಲಿನ ಅಧಿಕಾರಿಗಳಿಗೆ ನೀಡಿದ ಮಾಹಿತಿಯಂತೆ, ಪ್ರಧಾನಿಯವರ ಎದೆಯ ಅಳತೆ 50 ಇಂಚು. ಆದರೆ ಮೋದಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಇಡೀ ಭಾರತವನ್ನು ಗುಜರಾತ್‌ನಂತೆ ಬೆಳೆಸಲು ಬೇಕಾದ 56 ಇಂಚಿನ ಗುಂಡಿಗೆ ಇದೆ ಎಂದು ಹೇಳಿಕೊಂಡಿದ್ದರು. ಪ್ರಧಾನಿ ಯವರ ಆ ಹೇಳಿಕೆಗೂ ಈ ಮಾಹಿತಿಗೂ ತಾಳೆಯಾಗುತ್ತಿಲ್ಲ.

0: ಪ್ರಧಾನಿ ಅಧಿಕಾರಕ್ಕೆ ಬಂದ ಬಳಿಕ ಪರಸ್ಪರ ಸಂವಾದದ ಪತ್ರಿಕಾಗೋಷ್ಠಿ ನಡೆಸಿದ್ದು ಸೊನ್ನೆ. ಮಾಧ್ಯಮವನ್ನು ಸಾಮಾಜಿಕ ಜಾಲತಾಣ, ರೇಡಿಯೊ ಹಾಗೂ ರ್ಯಾಲಿಗಳ ಮೂಲಕವೇ ತಲುಪಲು ಮೋದಿ ಆದ್ಯತೆ ನೀಡಿದರು. ಆದರೆ ಇದು ಏಕಮುಖ ಸಂವಾದ ಅವರನ್ನು ಸಾರ್ವಜನಿಕರಿಂದ ಪ್ರತ್ಯೇಕವಾಗಿ ಮಾಡಿದ್ದು, ಪರಸ್ಪರ ಸಂಪರ್ಕ ಇಲ್ಲದೆ ಭಾಷಣ ಮಾಡುವಂತೆ ಗೋಚರಿಸುತ್ತಿದೆ. ಮನಮೋಹನ ಸಿಂಗ್ ದುರ್ಬಲ ಸಂವಹನಕಾರರಾದರೆ, ಮೋದಿ ಉದ್ದೇಶಪೂರ್ವಕವಾಗಿಯೇ ಮಾಧ್ಯಮವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಹೊಸ ಸ್ನೇಹಿತರನ್ನು ಗೆಲ್ಲಲು ಸಾಧ್ಯವೇ?

ಬಿಜೆಪಿ ಮುಖಂಡ ಅರುಣ್ ಶೌರಿ ಅವರ ಸಲಹೆಯಂತೆ ಮೋದಿ ಉಳಿಕೆ ಅವಧಿಯಲ್ಲಾದರೂ ಹೆಡ್‌ಲೈನ್ ನಿರ್ವಹಿಸುವ ಬದಲು ಆರ್ಥಿಕತೆ ನಿರ್ವಹಿಸಲಿ. ಹಾಗೆ ಮಾಡಬೇಕಾದರೆ ಮೋದಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು. ಸಲಹೆಗಳನ್ನು ಪಡೆದು ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಪಾಠ ಬೆಳೆಸಿಕೊಳ್ಳಬೇಕು. ಸಹಕಾರ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಬೇಕು. ರಾಜಕೀಯ ವಿರೋಧಿಗಳ ಜತೆಗಿನ ಸಂಘರ್ಷ ವನ್ನು ಚಾಣಾಕ್ಷತನದಿಂದ ನಿರ್ವಹಿಸುವ ಮೂಲಕ ತಮ್ಮ ಬಾಕ್ಸಿಂಗ್ ಗ್ಲೌಸ್ ಕಿತ್ತುಹಾಕಬೇಕು.

Writer - ಆಕಾಶ್ ಬ್ಯಾನರ್ಜಿ

contributor

Editor - ಆಕಾಶ್ ಬ್ಯಾನರ್ಜಿ

contributor

Similar News