ಅರಸು ರಾಜಕಾರಣಿಯಲ್ಲ, ಅಪ್ಪಟ ವಿಜ್ಞಾನಿ: ಶ್ರೀಹರಿ ಖೋಡೆ

Update: 2016-02-03 18:34 GMT

ಅರಸರ ಕಾರ್ ಡ್ರೈವರ್ ಖೋಡೆ
ನಾನಾಗ ವಿದ್ಯಾರ್ಥಿ, 18 ವರ್ಷದ ಹುಡುಗ. ಅರಸು ಬಾಂಬೆಯಿಂದ ಬೆಂಗಳೂರಿಗೆ ಫ್ಲೈಟ್‌ನಲ್ಲಿ ಬರುವಾಗ ನಮ್ಮ ತಂದೆಗೆ ಫೋನ್ ಮಾಡಿ, ಏರ್‌ಪೋರ್ಟಿಗೆ ಕಾರ್ ಕಳಿಸಲು ಹೇಳಿದರು. ನಮ್ಮ ತಂದೆ, ನನ್ನ ಕರೆದು, ‘ಅರಸು ದೊಡ್ಡ ಮನುಷ್ಯರು, ಡ್ರೈವರ್ ಕಳಿಸೋದು ನಮ್ಮ ಘನತೆಗೆ ತಕ್ಕುದಲ್ಲ, ನೀನೇ ಡ್ರೈವರ್ ಆಗಿ, ಗೌರವಯುತವಾಗಿ ಕರೆದುಕೊಂಡು ಬಾ’ ಎಂದು ಕಾರ್ ಕೀ ಕೊಟ್ಟು ಕಳುಹಿಸಿದರು. ಅರಸರನ್ನು ನಾನು ನೋಡಿದ್ದು ಅದೇ ಮೊದಲು. ಪರಿಚಯ ಮಾಡಿಕೊಂಡೆ, ಕಾರ್ ರೆಡಿ ಇದೆ ಎಂದೆ, ಬಂದು ಕೂತರು. ಅವರು ನನ್ನನ್ನು ಡ್ರೈವರ್ ಥರ ನೋಡಲಿಲ್ಲ, ನಾನು ಅವರನ್ನು ಬೇರೆಯವರೆಂದು ಭಾವಿಸಲಿಲ್ಲ. ಹೀಗಾಗಿ ನಮ್ಮ ನಡುವೆ ಆಪ್ತತೆ ಬೆಳೆಯಿತು.
 
ಅರಸು ಆಗ ಸೆಂಟ್ರಲ್ ಸಿಲ್ಕ್ ಬೋರ್ಡ್ ಚೇರ್ಮನ್ ಆಗಿದ್ದರು. ಅವರನ್ನು ಏರ್‌ಪೋರ್ಟಿನಿಂದ ಅವರ ಮಲ್ಲೇಶ್ವರಂ ಮನೆಗೆ ಡ್ರಾಪ್ ಮಾಡುವುದು ನನ್ನ ಕೆಲಸವಾಗಿತ್ತು. ಮಾರ್ಗ ಮಧ್ಯೆ ಧರ್ಮರಾಯನ ದೇವಸ್ಥಾನದ ಹತ್ತಿರವಿದ್ದ ಗುಂಡಪ್ಪ ಹೊಟೇಲ್, ಆ ಕಾಲಕ್ಕೆ ಭಾರೀ ಫೇಮಸ್ಸಾಗಿತ್ತು, ಅಲ್ಲಿಗೆ ಹೋಗಿ ಒಂದು ಸ್ವೀಟು, ಖಾರ ತಿಂದು ಬಾದಾಮಿ ಹಾಲು ಕುಡಿದರು. ನನ್ನ ಕಡೆ ನೋಡಿ ‘ಅಮ್ಮಾವ್ರಿಗೆ ಹೇಳಬೇಡಪ್ಪಾ’ ಎಂದರು. ಆ ಹೊಟೇಲ್, ಆ ಸ್ವೀಟು ಅರಸು ಅವರಿಗೆ ತುಂಬಾ ಇಷ್ಟ.ಅಂದಿನಿಂದ ಅರಸು ಅವರಿಗೆ, ನಮ್ಮ ಮನೆ ಕಡೆಯಿಂದ ಪರ್ಮನೆಂಟ್ ಕಾರ್ ಡ್ರೈವರ್ ಆದ ನಾನು, ಅವರ ಸಿಂಪ್ಲಿಸಿಟಿಗೆ ಮಾರುಹೋಗಿ, ಅವರ ಹಿಂದೆ ಸುಳಿದಾಡುವ, ಅವರ ಮನೆಯಲ್ಲಿ ಮಗನಂತೆ ಓಡಾಡುವ ಮಟ್ಟಕ್ಕೆ ಬೆಳೆದು ನಿಂತೆ.

ಕಲ್ಲಳ್ಳಿ ಟ್ರಿಪ್‌ನಲ್ಲಿ ಕಂಡ ಅರಸು
ಒಂದು ದಿನ ಅರಸು ಫೋನ್ ಮಾಡಿ, ‘ಬಾರಪ್ಪ, ಕಲ್ಲಳ್ಳಿಗೆ ಹೋಗಿಬರೋಣ’ ಎಂದರು. ಆಗ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಸ್ವಂತ ಊರಿಗೆ ಹೋಗಬೇಕಾದರೂ ಅಫೀಷಿಯಲ್ ಕಾರ್ ಬಳಸುತ್ತಿರಲಿಲ್ಲ. ಹಾಗಾಗಿ ನಮ್ಮದೇ ಕಾರ್, ನಾನೇ ಡ್ರೈವರ್. ಮಾರ್ಗ ಮಧ್ಯೆ ಯಾವುದಾದರೂ ಸಿಗ್ನಲ್ ಸಿಕ್ಕರೆ, ರೈಲ್ವೆ ಕ್ರಾಸ್ ಬಂದರೆ ನಿಲ್ಲಿಸಬೇಕಾಗಿತ್ತು. ನಾನು ಸಿಎಂ, ಇದು ಸಿಎಂ ಪ್ರಯಾಣಿಸುತ್ತಿರುವ ಕಾರು ಎಂಬ ವಿಶೇಷವೇನಿಲ್ಲ. ಹಿಂದೆ ಮುಂದೆ ಯಾವ ಎಸ್ಕಾರ್ಟೂ ಇಲ್ಲ.

ಕಲ್ಲಳ್ಳಿಯ ಅವರ ಮನೆಗೆ ಹೋದರೆ, ಹಳ್ಳಿಯ ಜಮೀನ್ದಾರರ ಸಾಮಾನ್ಯ ಮನೆಯಂತಿತ್ತು. ರಾಜ್ಯದ ಮುಖ್ಯಮಂತ್ರಿಯ ಮನೆ ಎಂಬ ನನ್ನ ಕಲ್ಪನೆ, ನೋಡಿದಾಕ್ಷಣ ಕರಗಿಹೋಗಿತ್ತು. ಅವತ್ತೇ ವಾಪಸ್ ಬರುವ ಪ್ರೋಗ್ರಾಂ ಇತ್ತು, ಆದರೆ ಏನೋ ಆಗಿ, ಅಲ್ಲಿಯೇ ಹಾಲ್ಟ್ ಮಾಡಬೇಕಾಯಿತು. ನನ್ನ ಬಳಿ ನೈಟ್ ಡ್ರೆಸ್ ಇಲ್ಲ. ಅರಸು ಅವರದೇ ಒಂದು ಪೈಜಾಮ ಕೊಟ್ಟರು. ದೊಗಳೆ, ಅದನ್ನೇ ಹಾಕ್ಕೊಂಡೆ, ಕಾಣದಂಗಾದೆ, ಕಣ್ಮುಚ್ಚಿ ಮಲಗಿದೆ. ಬೆಳಗ್ಗೆ 5 ಗಂಟೆಗೆ ಎಬ್ಬಿಸಿದರು. ನೋಡಿದರೆ, ಅರಸು ಆಗಲೇ ಎದ್ದು ಬಿಸಿ ನೀರು ಕಾಯಿಸಿದ್ರು, ಸ್ನಾನ ಮಾಡು ಅಂದ್ರು, ಬಚ್ಚಲು ಮನೆಗೆ ಹೋದರೆ ಬ್ರಷ್, ಪೇಸ್ಟಿಲ್ಲ, ಅದು ಹೇಗೋ ಮೇನೇಜ್ ಆಯ್ತು. ಶೇವ್ ಮಾಡಲಿಕ್ಕೆ... ಅವರ ಬ್ಲೇಡ್‌ನೇ ಕೊಟ್ಟರು. ಅಡುಗೆ ಮನೆ, ನೆಲದ ಮೇಲೆ, ಸೌದೆ ಒಲೆ. ನಾನು ಟೇಬಲ್ ಹುಡುಕ್ತಿದೀನಿ ತಿಂಡಿ ತಿನ್ನಲಿಕ್ಕೆ. ನೆಲದ ಮೇಲೆ ಮಣೆ ಹಾಕಿ ಕೂರಿಸಿದ್ರು, ‘ಬಿಸಿ ಬಿಸಿ ತಿನ್ನಬೇಕಪ್ಪ, ಒಲೆ ಪಕ್ಕ ಕೂತು ಉಣ್ಣೋದರ ಮಜವೇ ಬೇರೆ’ ಎಂದರು. ಎಷ್ಟು ಸಿಂಪಲ್ ಅಂದರೆ, ಛೆ, ಮುಖ್ಯಮಂತ್ರಿಯಾದವರು ಹೀಗೂ ಇರ್ತಾರ ಎನ್ನಿಸಿತು. ಡ್ರೆಸ್ ಮಾಡ್ಕೊಂಡು ಹೊರಗೆ ಬಂದರು, ಆಗಲೇ ಊರಿನ ಜನ ಬಂದು ಕಾಯ್ತಿದ್ದರು. ಅವರನ್ನೆಲ್ಲ ನೋಡಿದ ಅರಸು, ‘ಏನ್ರೋ, ಚೆನ್ನಾಗಿದ್ದೀರೇನ್ರೊ’ ಅಂದ್ರು. ಒಳಗಿದ್ದ ಅರಸು ಇವರೇನಾ ಅನ್ನುವಷ್ಟು, ಸಂಪೂರ್ಣ ಬದಲಾದ ವ್ಯಕ್ತಿತ್ವ. ಮಾತಿನಲ್ಲಿ, ಗತ್ತಿನಲ್ಲಿ, ದರ್ಬಾರಲ್ಲಿ ಥೇಟ್ ರಾಜನಂತೆ. ಅಂದರೆ ಆ ಜನರೆದುರು ಅರಸು ಹಾಗೆಯೇ ಇರಬೇಕು, ಹಾಗಿದ್ದರೇನೇ ಅವರನ್ನು ಅರಸು ಎನ್ನುವುದು. ಹೊರಗೆ ಕಾಣಿಸಿಕೊಳ್ಳಬೇಕಾದ ಆ ಸ್ಟ್ರಕ್ಚರ್ ಇದೆಯಲ್ಲ, ಅದು ಮೂಳೆ ಮಾಂಸ ತುಂಬಿಕೊಂಡಂತಿರಬೇಕು, ಇಲ್ಲದಿದ್ದರೆ ಎಲುಬಿಲ್ಲದ ಪ್ರಾಣಿ ಅಂತ ಆಡಿಕೊಂಡುಬಿಡ್ತಾರೆ. ಆಮೇಲೆ ಅದನ್ನು ಉಪಯೋಗಿಸ್ಕೋಬೇಕು, ದುರುಪಯೋಗಪಡಿಸಿಕೊಳ್ಳಬಾರದು ಎನ್ನುತ್ತಿದ್ದರು.

ಅರಸು ಎಂಬ ಅಪ್ಪಟ ವಿಜ್ಞಾನಿ
   
ನಾನು ಗಮನಿಸಿದ ಹಾಗೆ, ಅರಸು ಸುತ್ತ ಎಲ್ಲಾ ಕ್ಷೇತ್ರದ, ವರ್ಗದ ಜನರೂ ನೆರೆಯುತ್ತಿದ್ದರು. ಎಲ್ಲ ವಿಷಯಗಳ ಬಗ್ಗೆಯೂ ಅಥೆಂಟಿಕ್ ಆಗಿ ಮಾತನಾಡುವ ಬುದ್ಧಿವಂತಿಕೆ ಅರಸುಗಿತ್ತು. ಅದರಲ್ಲೂ ರಾಜಕಾರಣಿಗಳ ಜೊತೆ ಮಾತನಾಡುವಾಗ, ಅಲ್ಲಿ ರಾಜಕಾರಣ ಬಿಟ್ಟು ಮಿಕ್ಕಿದ್ದೆಲ್ಲ ಇರುತ್ತಿತ್ತು. ಪ್ರಕೃತಿ, ಸಂಸ್ಕೃತಿ, ಮನುಷ್ಯ ಮತ್ತು ಮಾನವೀಯತೆ ಬಗ್ಗೆನೇ ಹೆಚ್ಚು ಮಾತನಾಡುತ್ತಿದ್ದರು. ಪಾಲಿಟಿಕ್ಸ್ ತುಂಬಾ ಕಮ್ಮಿ. ಪಾಲಿಟಿಕ್ಸ್ ಬಗ್ಗೆ ಅವರದ್ದೊಂದು ಸಿದ್ಧ ವ್ಯಾಖ್ಯಾನವಿತ್ತು. ‘ಪಾಲಿಟಿಕ್ಸ್ ಇಸ್ ಎ ಪ್ರಿಪ್ಲಾನ್ಡ್ ಪ್ರೋಗ್ರಾಂ ಆಫ್ ಸಂಬಡಿ ಎಲ್ಸ್ ವಿತ್ ಸೆಲ್ಫ್‌ಸೆಂಟರ್ಡ್‌ ಐಡಿಯಾಲಜಿಸ್ಟ್ ’ ಇದನ್ನು ಯಾವಾಗಲೂ ಹೇಳುತ್ತಿದ್ದರು. ಯುವಕರು ಕೃಷಿಕರಾಗಬೇಕು ಅನ್ನೋದು ಅವರ ಆಸೆಯಾಗಿತ್ತು. ನನಗೆ, ‘ನೀವು ಕೃಷಿ ಮಾಡ್ರಿ, ನಾನು ಜಮೀನು ಕೊಡಸ್ತೀನಿ’ ಅಂತಿದ್ರು. ಕನಕಪುರ ರೋಡ್‌ನಲ್ಲಿ ನಮ್ಮ ತಾತನ 40 ಎಕರೆ ಭೂಮಿ ಇತ್ತು. ಅಲ್ಲಿಗೆ ಬರ್ತಿದ್ರು. ರೇಷ್ಮೆ ಹುಳ ಸಾಕಣೆ ನೋಡಿ ಅದರ ಬಗ್ಗೆ ಮಾತಾಡ್ತಿದ್ರು. ಅವರು ಜಿಯಾಲಜಿ ಸ್ಟೂಡೆಂಟು. ಜನ ಈಗ ಅವರನ್ನು ಸಮಾಜ ವಿಜ್ಞಾನಿ ಅಂತ ಕರೀಬಹುದು. ನಾನು ಮಾತ್ರ ಅವರನ್ನು ಅಪ್ಪಟ ವಿಜ್ಞಾನಿ ಎನ್ನುತ್ತೇನೆ. ಭೂಮಿ, ನೀರು ಮತ್ತು ಸೂರ್ಯನ ಬಗ್ಗೆ ಅಥೆಂಟಿಕ್ಕಾಗಿ ಮಾತನಾಡ್ತಿದ್ರು. ಈ ಮೂರು ಇದ್ರೆ ನೋಟು ಏಕೆ, ಕರೆನ್ಸಿಲೆಸ್ ಲೈಫ್ ಬಂದು ಬಡತನವನ್ನು ನಿರ್ಮೂಲನೆ ಮಾಡಬಹುದು. ಸೂರ್ಯನ ಕಿರಣ ನಮ್ಮ ದೇಶದ ಮೇಲೆ ಯಥೇಚ್ಛವಾಗಿ ಬೀಳುತ್ತೆ, ಸಮರ್ಥವಾಗಿ ಬಳಸಿಕೊಂಡರೆ ಅಭಿವೃದ್ಧಿ ಹೊಂದುತ್ತೇವೆ. ಮನುಷ್ಯ ಈ ಪ್ರಕೃತಿಯ ಸೃಷ್ಟಿ. ಅದನ್ನು ನಾವು ನಿರ್ಲಕ್ಷಿಸಬಾರದು ಎಂದು ಪರಿಸರ ವಿಜ್ಞಾನವನ್ನು ವಿವರಿಸುತ್ತಿದ್ದರು. ಗಿಡ ಚಿಗುರುವ ಬೆಳೆಯುವ ಕ್ರಿಯೆ ಇದೆಯಲ್ಲ, ಇದನ್ನು ನಾವು ನಮ್ಮ ಮಕ್ಕಳು ಪ್ರತಿದಿನ ನೋಡುವಂತೆ ಮಾಡಬೇಕು. ಹುಟ್ಟುವ, ಚಿಗುರೊಡೆಯುವ ಪ್ರಕೃತಿಯ ವಿಸ್ಮಯ ಅವರಲ್ಲಿ ಮಾನವೀಯ ಗುಣವನ್ನು ಕಲಿಸುತ್ತದೆ. ಮನೆ ಮುಂದೆ ನೀವೊಂದು ತುಳಸಿ ಗಿಡ ಹಾಕಿ, ಅದನ್ನು ಮಕ್ಕಳು ಗಮನಿಸುವಂತೆ ಮಾಡಿ, ಅದರ ಬೆಳವಣಿಗೆ ಇದೆಯಲ್ಲ ಅದು ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ ಎನ್ನುತ್ತಿದ್ದರು. ಒಂದು ಸಲ ಬೆಳಗ್ಗೇನೆ ಸುತ್ತಾಡೋದಿಕ್ಕೆ ಕರೆದುಕೊಂಡು ಹೋದ್ರು. ಹುಟ್ಟುವ ಸೂರ್ಯನನ್ನು ತೋರಿಸಿ, ‘ನೋಡಿ, ಅವನಿಗೆ ಅಹಂಕಾರನೇ ಇಲ್ಲ. ನನ್ನಿಂದ ಈ ಜಗತ್ತು ಬೆಳಗ್ತಾಯಿದೆ, ಈ ಗಿಡ-ಮರಗಳು ಹಸಿರು ಉತ್ಪತ್ತಿ ಮಾಡ್ತಿವಿ, ಅದನ್ನ ಪ್ರಾಣಿ-ಪಕ್ಷಿಗಳು ಅವಲಂಬಿಸಿವೆ ಎನ್ನುವುದರ ಬಗ್ಗೆ ಪರಿವೆಯೇ ಇಲ್ಲ. ಸೂರ್ಯನಿಗೆ ವಂಚನೆ ಗೊತ್ತಿಲ್ಲ. ಮನುಷ್ಯ ಪ್ರಾಣಿಗೆ ಮಾತ್ರ ಅಹಂಕಾರ, ವಂಚನೆ, ಪದವಿ, ಪ್ರತಿಷ್ಠೆ ಎಲ್ಲ’.

ಮನುಷ್ಯ ಅಕ್ಷಯಪಾತ್ರೆಯಾಗಬೇಕು...
‘ಮನುಷ್ಯ ಕೊಡುವ ಅಕ್ಷಯಪಾತ್ರೆಯಾಗಬೇಕು ಎನ್ನುವುದು ಅರಸು ಅವರ ಬಹುದೊಡ್ಡ ಬಯಕೆಯಾಗಿತ್ತು. ಅದಕ್ಕೆ ಅವರದೇ ಆದ ಲಾಜಿಕ್ಕಿತ್ತು. ಈಗ ಗಿಡ-ಮರ ಹಣ್ಣು ಕೊಡುತ್ತವೆ, ನಾನು ಕೊಟ್ಟೆ ಅಂತ ಯಾವತ್ತಾದರೂ ಹೇಳಿದ್ದು ನೋಡಿದ್ದೀರಾ? ಪಾತ್ರೆಯಲ್ಲಿ ಅಡುಗೆ ಸಿದ್ಧವಿದೆ. ಹಂಚುವ ಸೌಟು ನನಗೇ ಇರಲಿ ಅಂದರೆ ಆಗುತ್ತ? ಹಾಗೆಯೇ ಪಾಲಿಟಿಕ್ಸ್‌ನಿಂದ ಸಿಗುವ ಸೋಷಿಯಲ್ ಪವರ್‌ನ ಎಲ್ಲರಿಗೂ ಸಮಾನವಾಗಿ ಹಂಚಬೇಕಾದ್ದು ಧರ್ಮ. ಅದನ್ನ ನಾನೊಬ್ಬನೇ ಅಲ್ಲ, ಎಲ್ಲರೂ ಮಾಡಬೇಕು’ ಎಂದು ಹೇಳಿದ್ದರು.
ಹಿಂದುಳಿದವರ ಬಗ್ಗೆ ಅವರಿಗೆ ವಿಶೇಷವಾದ ಪ್ರೀತಿ ಇತ್ತು. ಹಿಂದುಳಿದವರು ಯಾರು ಎಂದರೆ, ಆರೋಗ್ಯ, ಆಶ್ರಯ, ಶಿಕ್ಷಣ ಮತ್ತು ತಮ್ಮ ಕಾಲ ಮೇಲೆ ತಾವು ನಿಲ್ಲಲು ಶಕ್ತಿ ಇಲ್ಲದವರು ಎಂದು ವ್ಯಾಖ್ಯಾನಿಸುತ್ತಿದ್ದರು. ಎಲ್ಲರೂ ಸುಖವಾಗಿರಬೇಕು- ಲಕ್ಷುರಿ ಇಲ್ಲದೇ ಇದ್ದರೂ ಪರವಾಗಿಲ್ಲ, ಮಾನ ಕಾಪಾಡಿಕೊಳ್ಳುವಷ್ಟಾದರೂ ಹಣ ಇರಬೇಕು. ಮುಂದುವರಿದವರು ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತಾರೆ. ಆದರೆ ಹಿಂದುಳಿದವರಿಗೆ ಪ್ಲಾನ್ ಇರಲಿ, ಟೂಲ್ಸೇ ಇಲ್ಲ. ನಾನು ಆ ಟೂಲ್ಸ್ ಕೊಡಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಿದ್ದರು.
ಕಾಡಿನಲ್ಲಿ ಅರಸು ಕಣ್ಮರೆ

ಅರಸು ಯಾವುದಾದರೂ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾದರೆ ಎದೆಗುಂದುತ್ತಿರಲಿಲ್ಲ. ಮತ್ತೊಬ್ಬರನ್ನು ಆಶ್ರಯಿಸುತ್ತಿರಲಿಲ್ಲ. ಅಥವಾ ಇನ್ಯಾರನ್ನೋ ಮುಂದೆ ಮಾಡುತ್ತಿರಲಿಲ್ಲ. ನನಗೆ ಫೋನ್ ಮಾಡಿ, ‘ಬಾರಪ್ಪ, ಒಂಚೂರು ಕಾಡು ನೋಡಿ ಬರೋಣ’ ಎನ್ನುತ್ತಿದ್ದರು. ನನಗೆ ಈ ಕಾಡು ನೋಡುವುದು ವಿಚಿತ್ರವಾಗಿ ಕಾಣುತ್ತಿತ್ತು. ಅದು ದೂರದ ಕಾಡಾಗಿರಬಹುದು ಅಥವಾ ಇಲ್ಲಿಯೇ ಎಲ್ಲಾದರೂ ಸರಿ. ಒಬ್ಬರೆ ಮೂರ್ನಾಲ್ಕು ಕಿಲೋಮೀಟರ್ ನಡಕೊಂಡು ಕಾಡಿನೊಳಕ್ಕೆ ಹೋಗಿಬಿಡುತ್ತಿದ್ದರು. ಜೊತೆಗೆ ಯಾರೂ ಹೋಗುವಂತಿಲ್ಲ. ಎರಡುಮೂರು ಗಂಟೆಗಳ ಕಾಲ ಒಬ್ಬರೇ ಕಾಡೊಳಗೆ ಏನು ಮಾಡುತ್ತಾರೆ ಎಂದು ಪ್ರಶ್ನಾರ್ಥಕವಾಗಿ ನೋಡಿದರೆ, ‘ಜನ ನನ್ನನ್ನು ಆರಿಸಿ ಕಳುಹಿಸಿರುವುದು ನನ್ನ ಬುದ್ಧಿ ಖರ್ಚು ಮಾಡಿ ನಿರ್ಧಾರ ತೆಗೆದುಕೊಳ್ಳಲಿ ಎಂದು. ನಾನ್ಯಾಕೆ ಯಾರ್ಯಾರಾದರೋ ಬುದ್ಧಿಯನ್ನು, ಸಿದ್ಧಾಂತವನ್ನು, ಆಲೋಚನೆಗಳನ್ನು ಅವಲಂಬಿಸಬೇಕು. ನನಗೆ ಯೋಚಿಸಲು ಸಮಯ ಬೇಕು, ಪ್ರಶಾಂತ ವಾತಾವರಣವಿರಬೇಕು. ಅದು ಈ ಕಾಡಿನಲ್ಲಿ ಸಿಗುತ್ತದೆ, ಬಂದೆ’ ಎನ್ನುತ್ತಿದ್ದರು.

ಶೇಕ್ಸ್‌ಪಿಯರ್ ಓದಿದ್ರು...
 ನನಗೆ ಒಂದು ಸಲ ಅಪಘಾತವಾಯಿತು. ಕಾರಿನಲ್ಲಿದ್ದ ಅಷ್ಟೂ ಜನ ಸತ್ತು ನಾನೊಬ್ಬ ಮಾತ್ರ ಉಳಿದಿದ್ದೆ. ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆ ಸೇರಿದ್ದೆ. ಅರಸು ನನ್ನ ನೋಡಲು ಆಸ್ಪತ್ರೆಗೆ ಬಂದು, ‘ನೋಡಪ್ಪಾ, ದೇವರು ದೊಡ್ಡೋನು, ನಿನಗೆ ಇನ್ನೊಂದು ಜನ್ಮ ಸಿಕ್ಕಿದೆ. ಎಲ್ಲವನ್ನು ಮಕ್ಕಳಿಗೆ ವಹಿಸಿ, ಇನ್ನುಮುಂದೆ ಸಮಾಜಸೇವೆ ಮಾಡು, ಹಾಗಂತ ಭಾಷೆ ಕೊಡು’ ಎಂದು ಬಲವಂತವಾಗಿ ನನ್ನಿಂದ ಭಾಷೆ ತೆಗೆದುಕೊಂಡಿದ್ದರು. ಆಸ್ಪತ್ರೆಯಲ್ಲಿ ಸಮಯ ಕಳೆಯುವುದು ಕಷ್ಟ ಎಂದು ಒಂದಷ್ಟು ಪುಸ್ತಕಗಳನ್ನು ತಂದು ಕೊಟ್ಟಿದ್ದರು. ಇಂಗ್ಲಿಷ್ ಪುಸ್ತಕಗಳು. ಸರ್, ನಾನು ಇಂಟರ್ ಮೀಡಿಯಟ್ ಮಾತ್ರ ಓದಿರೋದು ಅಂದೆ. ಅದಕ್ಕೆ ಅರಸು, ಅಲ್ಲೇ ಪಕ್ಕದಲ್ಲಿ ಕೂತು ಶೇಕ್ಸ್‌ಪಿಯರ್‌ನ ಒಂದು ಅಧ್ಯಾಯವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಓದಿದ್ದರು.

ಆಮೇಲೆ ಒಂದು ಸಲ, ‘ಹರಿ, ನಿನ್ನಲ್ಲೊಂದು ಕೆಟ್ಟ ಗುಣ ಇದೇಪ್ಪಾ, ಚಾಡಿ ಹೇಳೋ ಹವ್ಯಾಸ ಬಿಟ್ಟುಬಿಡಪ್ಪ’ ಅಂದು, ‘ಒಂದು ಕೆಲಸ ಮಾಡು, ದಿನಾ ಒಂದು ಪದ್ಯ ಬರಿ, ನಾಳೆ ಬರ್ತಾ ಆಕಾಶದ ಮೇಲೆ ಒಂದು ಪದ್ಯ ಬರಕೊಂಡು ಬಾ’ ಎಂದರು. ಕೆಟ್ಟ ಕನ್ನಡದಲ್ಲಿ ಪದ್ಯ ಅಂತ ಹೇಳುವ ಒಂದಷ್ಟು ಸಾಲುಗಳನ್ನು ಗೀಚಿಕೊಂಡು ಹೋಗಿ ಕೊಟ್ಟೆ, ‘ಚೆನ್ನಾಗಿದೆ, ಕೆಲವು ಪದಗಳು ರಿಪೀಟ್ ಆಗಿವೆ, ಪದಗಳ ಬಳಕೆ ಹೇಗಿರಬೇಕು ಅಂದ್ರೆ, ಹಂಸ ನಡಿಗೆ ಅಂತಾರಲ್ಲ ಹಾಗಿರಬೇಕಪ್ಪ’ ಅಂದು ತಿದ್ದಿದರು. ಅಂದಿನಿಂದ ಶುರುವಾದ ನನ್ನ ಪದ್ಯ ಬರೆಯುವ ಚಟ ಇವತ್ತಿಗೂ ಬಿಟ್ಟಿಲ್ಲ. ದಿನಕ್ಕೊಂದು ಪದ್ಯ ಬರೀತಾ ಬಂದಿದ್ದೇನೆ. ಐದಾರು ಸಾವಿರ ಪದ್ಯ ಬರೆದಿದ್ದೇನೆ.

ಬದ್ಮಾಶ್... ಎಲ್ಲಿ ಅವನು
ಅರಸರ ಕಲ್ಲಳ್ಳಿಯ ತೋಟದಲ್ಲಿ ಯಾರೋ ಕಾಯಿ ಕದೀತಿದ್ದರು. ಮುಖ್ಯಮಂತ್ರಿಗಳ ತೋಟದಲ್ಲಿ ಕಳ್ಳತನವೆಂದರೆ, ಅದು ಸುದ್ದಿಯಾದರೆ ಅವಮಾನವಲ್ಲವೆ. ಅದಕ್ಕೆ ಅರಸು ನನ್ನ ಕರೆದು, ‘ಏನ್ಮಾಡ್ತಿಯೋ ಗೊತ್ತಿಲ್ಲ, ಕಳ್ಳನನ್ನು ಹಿಡಿಯೋ ಕೆಲಸ ನಿನ್ನದು’ ಎಂದರು. ಮುಖ್ಯಮಂತ್ರಿಗಳ ತೋಟಕ್ಕೆ ನುಗ್ಗಿ ಕಾಯಿ ಕದಿಯೋವಷ್ಟು ಧೈರ್ಯ ಯಾರಿಗಿದೆ, ಗೊತ್ತಿರೋರೆ ಇರಬೇಕು, ಸ್ಥಳೀಯರೇ ಆಗಿರಬೇಕು ಅಂತ ಯೋಚಿಸಿ, ತೋಟದ ಪಕ್ಕದಲ್ಲಿ ಒಂದು ಕಳ್ಳೇಕಾಯಿ ಅಂಗಡಿ ಹಾಕಿ, ಒಬ್ಬ ಮುದುಕಿ ಕೂರಿಸಿ, ಎರಡು ಮೂರು ದಿನ ಕಾದೆ. ಆ ಕಳ್ಳ ಕಾಯಿ ಮಾರೋಕೆ ಬಂದ, ಕಾದಿದ್ದು ಹಿಡಿಕೊಂಡೆ. ಕಾರಲ್ಲಿ ಕರೆದುಕೊಂಡು ಬೆಂಗಳೂರಿಗೆ ಬಂದೆ. ಅರಸು ಬಾಲಬ್ರೂಯಿಲಿದ್ದರು. ಹೋಗಿ ‘ಸರ್, ಕಳ್ಳ ಸಿಕ್ಕಿದ, ಹಿಡಿಕೊಂಡು ಬಂದಿದ್ದೇನೆ’ ಅಂದೆ. ತಕ್ಷಣ ಅರಸು ಸಿಟ್ಟಿನಿಂದ, ‘ಬದ್ಮಾಶ್, ಎಲ್ಲಿ ಅವನು ಕರ್ಕೊಂಡ್ ಬಾ’ ಎಂದರು. ಅವರ ಮುಂದೆ ಆತನನ್ನು ನಿಲ್ಲಿಸುತ್ತಿದ್ದಂತೆ, ವಾಯ್ಸೆ ಚೇಂಜು, ‘ಯಾಕೋ ಚೆಲುವ, ಅದ್ಯಾಕ್ ಕದ್ಯಕೋದೊ, ಕೇಳಿದ್ರೆ ಕೋಡ್ತಿದ್ದನಲ್ಲೋ’ ಎಂದರು. ಆತ, ‘ದುಡ್ಡಿತ್ತಿಲ್ಲ ಬುದ್ಧಿ, ಕಷ್ಟಿತ್ತು ಕದ್ದೆ, ತೆಪ್ಪಾಯ್ತು’ ಅಂದ. ಅರಸು ನನ್ನತ್ತ ತಿರುಗಿ, ‘ಭಾಳ ವರ್ಷದಿಂದ ನಮ್ಮಲ್ಲೇ ಕೆಲಸ ಮಾಡಿಕೊಂಡಿದ್ದೋನು, ಕಷ್ಟಪಟ್ಟು ಗೇದಿದಾನೆ, ತಿಂದರೆ ತಿಂತಾನೆ ಬಿಡು, ಅಮ್ಮಾವ್ರಿಗೆ ಹೇಳಬೇಡ’ ಎಂದು ಹೇಳಿ ಬಸ್ ಚಾರ್ಜ್ ಕೊಟ್ಟು ಊರಿಗೆ ಕಳುಹಿಸಿಕೊಟ್ಟಿದ್ದರು. ಹಣಕ್ಕೂ ಅರಸು ಅವರಿಗೂ ಆಗಿಬರುತ್ತಿರಲಿಲ್ಲ. ಅಧಿಕಾರ ಇದ್ದಾಗ ಹಲವರು ಹಲವು ಕೆಲಸಗಳಿಗಾಗಿ ಅಧಿಕಾರಸ್ಥರನ್ನು ಸಂಪರ್ಕಿಸುವುದು ಸಹಜ. ಹಾಗೆಯೇ ಅರಸು ಅವರನ್ನು ಬಂದು ನೋಡುವವರು, ಹಣ ಕೊಟ್ಟು ಹೋಗುವವರು ಇದ್ದರು. ಆದರೆ ಅರಸು ಅವರಲ್ಲೊಂದು ಗುಣವಿತ್ತು. ಅದೇನೆಂದರೆ, ಈ ಥರ ಏನಾದರೂ ಹಣ ಬಂದರೆ, ಅದನ್ನು ತೆಗೆದು ನನ್ನ ಕೈಗೆ ಕೊಡುತ್ತಿದ್ದರು. ಕೊಟ್ಟು ಪ್ರಯಾರಿಟಿ ಮೇಲೆ ಹಂಚಲಿಕ್ಕೆ ಹೇಳುತ್ತಿದ್ದರು. ಶಾಸಕರ ಮಕ್ಕಳ ಮದುವೆಗೆ ಮೊದಲ ಪ್ರಾಶಸ್ತ್ಯ, ನಂತರ ಅವರ ಕಷ್ಟಗಳಿಗೆ, ಆಸ್ಪತ್ರೆ ಖರ್ಚುಗಳಿಗೆ ಹೀಗೆ ಬಿಡಿಗಾಸು ಉಳಿಯದಂತೆ ಹಂಚಿಬಿಡುತ್ತಿದ್ದರು. ಎಲ್ಲ ಖಾಲಿ ಎಂದಾಗ ಅವರಿಗಾಗುತ್ತಿದ್ದ ಖುಷಿ, ಅದನ್ನು ಹೇಳಲಿಕ್ಕಾಗುವುದಿಲ್ಲ. ಆಗ ನನ್ನ ಕರೆದು, ಒಂದು ವ್ಹಿಸ್ಕಿ ಕೊಡು ಎನ್ನುತ್ತಿದ್ದರು. ಅವರಿಗಾಗಿ ನನ್ನ ಕಾರಿನಲ್ಲಿ ಒಂದು ವ್ಹಿಸ್ಕಿ ಬಾಟಲ್ ಇಟ್ಟಿರುತ್ತಿದ್ದೆ. ಈಗಲೂ ಇದೆ, ಅರಸು ಇಲ್ಲ.
ಕಣಜಕ್ಕೆ ಕಣ್ಣೀರು

ಒಂದು ದಿನ ಅರಸು ಅಳುತ್ತಾ ಕೂತಿದ್ದರು. ನಾನು ಹೋಗಿ, ಏನಾಯ್ತು ಅಂದೆ, 'ಎಲ್ಲಾ ಮುಗೀತು...' ಎಂದು ಸುಮ್ಮನಾದರು. ಸರಕಾರ ವೇರ್ ಹೌಸಿಂಗ್ ಕಾರ್ಪೊರೇಷನ್‌ಗಳನ್ನು ತೆರೆಯಲು, ದವಸ ಧಾನ್ಯಗಳನ್ನು ಶೇಖರಣೆ ಮಾಡಲು ಹೊಸ ಕಾನೂನನ್ನು ಜಾರಿಗೆ ತಂದಿತ್ತು. 'ಕಣಜ ಹೋಯ್ತು, ರೈತನ ಧೈರ್ಯ ಹೋಯ್ತು, ಇನ್ಮುಂದೆ ಯಾರೂ ಸಂತೋಷದಿಂದಿರಲು ಸಾಧ್ಯವಿಲ್ಲ' ಎಂದರು. ನನಗರ್ಥವಾಗಲಿಲ್ಲ. ಹೇಗೆ ಸರ್ ಎಂದೆ. 'ಒಂದು ಮನೇಲಿ ಕಣಜ ಇದೆ ಅಂದ್ರೆ, ಆ ಸಂಸಾರ ನಾಲ್ಕೈದು ವರ್ಷ ನೆಮ್ಮದಿಯಿಂದ ಬದುಕುತ್ತೆ. ಇನ್ನೊಬ್ಬರ ಮುಂದೆ ಕೈಯೊಡ್ಡುವ, ಯಾವುದಕ್ಕೂ ಹೆದರುವ ಪ್ರಮೇಯವೇ ಬರುವುದಿಲ್ಲ. ಈಗ ಅದೇ ಇಲ್ಲಾಂದ್ರೆ, ರೈತನ ಕತೆ ಮುಗೀತು ಅಂತ' ಎಂದು ವೌನವಾದರು

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News