ಪ.ಬಂಗಾಳದಲ್ಲಿ ಕದನ ಕುತೂಹಲ

Update: 2016-02-06 18:27 GMT


 ಪ.ಬಂಗಾಳದಲ್ಲಿ ಎಡರಂಗ ಹಾಗೂ ಕಾಂಗ್ರೆಸ್ ಪರಸ್ಪರ ಹತ್ತಿರವಾಗತೊಡಗಿವೆ ಎಂಬ ಮಾತುಗಳು ಕೇಳಿಬರತೊಡಗಿವೆ.ಕೆಲವು ವಾರಗಳ ಹಿಂದಿನವರೆಗೂ ನಾವು ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲವೆಂದು ಹೇಳಿಕೊಳ್ಳುತ್ತಿದ್ದ ದಿಲ್ಲಿಯಲ್ಲಿರುವ ಎಡಪಕ್ಷಗಳ ನಾಯಕರು ಈಗ ಸ್ವಲ್ಪ ಮೆತ್ತಗಾಗಿರುವ ಹಾಗೆ ಕಾಣುತ್ತಿದೆ.

ಇತ್ತೀಚೆಗೆ ಸಿಪಿಎಂನ ದಿಲ್ಲಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಸಿಪಿಎಂ ನಾಯಕ ಸೀತಾರಾಮ ಯೆಚೂರಿಗೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡಲು ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿಯನ್ನೇರ್ಪಡಿಸುವ ಸಾಧ್ಯತೆಯ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು. ಈ ಪ್ರಶ್ನೆಗಳಿಗೆ ನಸುನಗುತ್ತಲೇ ಉತ್ತರಿಸಿದ ಯೆಚೂರಿ, ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ ಈ ಬಗ್ಗೆ ತಾನು ಹೆಚ್ಚೇನೂ ಹೇಳಲು ಸಿದ್ಧನಿಲ್ಲವೆಂದು ತಿಳಿಸಿದರು. ಕೆಲವರ ಪ್ರಕಾರ, ಚುನಾವಣಾ ಮೈತ್ರಿಯನ್ನು ಏರ್ಪಡಿಸುವುದಕ್ಕೆ ಸಂಬಂಧಿಸಿ ಯೆಚೂರಿ ಕೆಲವು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದರೆನ್ನಲಾಗಿದೆ. ಆದರೆ ರಾಜಕೀಯ ವೀಕ್ಷಕರು, ಎರಡೂ ಪಕ್ಷಗಳ ನಡುವೆ ಔಪಚಾರಿಕವಾದ ಚುನಾವಣಾ ಹೊಂದಾಣಿಕೆ ನಡೆಯಲಿದೆಯೆಂದು ಹೇಳುತ್ತಾರೆ. ಆದರೆ ಮಮತಾ ತುಂಬಾ ಬಲಿಷ್ಠವಾದ ವಿಕೆಟ್, ಆಗಿರುವುದರಿಂದ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ, ಎಡಪಕ್ಷಕ್ಕೆ ಟಿಎಂಸಿ ಭದ್ರಕೋಟೆಗೆ ಲಗ್ಗೆ ಹಾಕುವುದು ಕಷ್ಟ ಸಾಧ್ಯ ಎನ್ನಲಾಗಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷವು ಸಿಪಿಎಂ ಜೊತೆ ಮೈತ್ರಿ ಬೆಳೆಸಿದಲ್ಲಿ, ಯೆಚೂರಿ ಎಡಪಕ್ಷದ ವರ್ಚಸ್ಸನ್ನು ಶಾಶ್ವತವಾಗಿ ಬದಲಾಯಿಸಿದಂತಾಗುತ್ತದೆ.

ಸ್ಮತಿಯ ಮಹತ್ವಾಕಾಂಕ್ಷೆಗಳು


 ಉತ್ತರಪ್ರದೇಶದಲ್ಲಿ ಮಹತ್ತರವಾದ ಸಾಧನೆ ಮಾಡುವ ಕನಸನ್ನು ಸ್ಮತಿ ಇರಾನಿ ಬಹಳ ಸಮಯದಿಂದ ಪೋಷಿಸಿಕೊಂಡೇ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ಗಾಂಧಿ ವಿರುದ್ಧ ಅವರು ‘ವೀರೋಚಿತ ’ಹೋರಾಟವನ್ನೇ ನೀಡಿದ್ದರು. ಆದಾಗ್ಯೂ ಆ ಚುನಾವಣೆಯಲ್ಲಿ ಆಕೆ ಸೋತರು. ಆದರೆ, ಅವರಲ್ಲಿನ ಭರವಸೆಗಳು ಸಾಯಲಿಲ್ಲ.ದಿಲ್ಲಿ ವಿಧಾನಸಭಾ ಚುನಾವಣೆಯ ಲ್ಲಿಯೂ ಸ್ಮತಿಗೆ ಮಿಂಚಲು ಸಾಕಷ್ಟು ಅವಕಾಶ ವಿತ್ತು. ಆದರೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್ ಬೇಡಿಯವರನ್ನು ಪಕ್ಷ ಘೋಷಿಸಿದ ಬಳಿಕ ಈ ಅವಕಾಶ ಕೂಡಾ ತಪ್ಪಿಹೋಯಿತು. ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಸನ್ನಿಹಿತವಾಗುತ್ತಿರುವಂತೆಯೇ, ಸ್ಮತಿ ಇರಾನಿ, ಪದೇ ಪದೇ ಆ ರಾಜ್ಯಕ್ಕೆ ಭೇಟಿ ನೀಡತೊಡಗಿದ್ದಾರೆ.

ಆದಾಗ್ಯೂ, ಪಕ್ಷದ ಕೇಂದ್ರ ನಾಯಕತ್ವಕ್ಕೆ ಆಕೆಯ ಯೋಜನೆಗಳ ಅರಿವಿದೆ. ಮೊದಲಿಗೆ ಆಕೆ ಪಕ್ಷದ ರಾಜ್ಯ ನಾಯಕತ್ವವನ್ನು ಎದುರಿಸಬೇಕಾಗಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿರುವ ಪ್ರಿಯಾಂಕಾ ಗಾಂಧಿಯನ್ನು ಎದುರಿಸುವಲ್ಲಿ ಅವರಿಗಿರುವ ಸಾಮಥ್ಯದ ಬಗ್ಗೆ ಸಂದೇಹಗಳು ವ್ಯಕ್ತವಾಗಿವೆ. ಈ ಮಧ್ಯೆ ಬಿಜೆಪಿ, ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ಓರ್ವ ಒಬಿಸಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆಯೆನ್ನಲಾಗಿದೆ. ಕೆಲವು ರಾಜಕಾರಣಿಗಳಿಗೆ ಅದೃಷ್ಟ ಬಾಗಿಲು ಬಡಿಯುತ್ತದೆ. ಆದರೆ ಸ್ಮತಿ ಇರಾನಿಯ ಪಾಲಿಗೆ ಮಾತ್ರ ಹಾಗಾಗಿಲ್ಲ.

ಶಾ ಶೈನಿಂಗ್
    ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅಮಿತ್ ಶಾ ಲೀಲಾಜಾಲವಾಗಿ ಬಾಚಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಪಕ್ಷದಲ್ಲಿ ಶಾ ಹಾಗೂ ಮೋದಿಯ ಪ್ರಾಬಲ್ಯದ ವಿರುದ್ಧ ಹೋರಾಡಲು ಎದುರಾಳಿ ಸಂಜಯ್ ಜೋಶಿ ವಿಫಲವಾಗಿರುವುದೇ ಇದಕ್ಕೆ ಕಾರಣ. ಸಂಜಯ್ ಜೋಶಿ, ತಡವಾಗಿಯಾದರೂ ದಿಲ್ಲಿ ರಾಜಕಾರಣಕ್ಕೆ ಮರುಪ್ರವೇಶ ಮಾಡಲು ಭರ್ಜರಿ ತಯಾರಿ ಮಾಡಿಕೊಂಡೇ ಬಂದಿದ್ದರು. ಅವರ ಬೆಂಬಲಿಗರು, ‘‘ಜನ್ ಜನ್ ಕಿ ಯೇ ಪುಕಾರ್, ಸಂಜಯ್ ಜೋಶಿ ಆಬ್ ಕಿ ಬಾರ್’ ಎಂಬಂತಹ ಘೋಷಣೆಗಳುಳ್ಳ ಪೋಸ್ಟರ್‌ಗಳನ್ನು ಕಾರ್ಯಾಲಯದ ಪರಿಸರದಲ್ಲಿ ಅಂಟಿಸಿದ್ದರು. ಆದರೆ ಅಧ್ಯಕ್ಷ ಪಟ್ಟವನ್ನೇರುವ ಹಾದಿ ಶಾಗೆ ತೀರಾ ಸುಗಮವಾಗಿತ್ತು.ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಕೂಡಾ ಎದುರಿಗೆ ಕಾಣಿಸಿಕೊಳ್ಳಲಿಲ್ಲ. ತನ್ನ ವಿರೋಧಿಗಳೆಂದೇ ಪರಿಗಣಿತರಾಗಿದ್ದ ವಸುಂಧರಾ ರಾಜೇ ಸಿಂಧಿಯಾ ಹಾಗೂ ಶಿವರಾಜ್‌ಸಿಂಗ್, ಪ್ರಧಾನ ಅನುಮೋದಕರಾಗಿದ್ದುದು. ಶಾ ಅವರ ವರ್ಚಸ್ಸನ್ನು ಇನ್ನೂ ಹೆಚ್ಚಿಸಿತು. ಮೋದಿ ವಿರೋಧಿ ಪಾಳಯದ ಸಂಜಯ್ ಜೋಶಿ ಇದೀಗ ತನ್ನ ಮುಂದಿನ ನಡೆ ಬಗ್ಗೆ ಯೋಚಿಸುತ್ತಿರಬೇಕು. ಆದರೆ ಮೋದಿ ಹಾಗೂ ಶಾ, ಅವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ.

ಪಟೇಲ್ ಬಳಿಕ ಲಾಲಾಲಜಪತ್ ರಾಯ್ ಸರದಿ
ಒಂದು ಪಕ್ಷಕ್ಕೆ ಭವ್ಯ ಇತಿಹಾಸವನ್ನು ಹೊಂದುವುದರಿಂದ ತುಂಬಾ ಲಾಭವಿದೆ. ಕಾಂಗ್ರೆಸ್‌ಗಿರುವ ಈ ಅನುಕೂಲತೆಯನ್ನು ಬಿಜೆಪಿಯು ಕೆಲವು ಸಮಯದಿಂದ ಅರಿತುಕೊಳ್ಳತೊಡಗಿದೆ. ಬಿಜೆಪಿಯಲ್ಲಿ ಹೇಳಿಕೊಳ್ಳುವಂತಹ ಐತಿಹಾಸಿಕ ರಾಷ್ಟ್ರ ನಾಯಕರಿಲ್ಲ. ಆದರೆ ಬಿಜೆಪಿಯು ಕೆಲವು ರಾಷ್ಟ್ರ ನಾಯಕರನ್ನು ತನ್ನದೇ ಭಾಗವೆಂದು ಘೋಷಿಸುವ ಮೂಲಕ ಆ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡುತ್ತಿದೆ.

ಹೀಗಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಸುಭಾಶ್ಚಂದ್ರ ಬೋಸ್ ಬಳಿಕ, ಸ್ವಾತಂತ್ರ ಹೋರಾಟಗಾರ ಲಾಲಾಲಜಪತ್ ರಾಯ್‌ರನ್ನು ಪಕ್ಷದ ‘ಆರಾಧ್ಯ ವ್ಯಕ್ತಿ’ಯಾಗಿ ಬಿಡುವ ಸಮಯ ಸನ್ನಿಹಿತವಾಗಿದೆ. ಪಂಜಾಬ್ ಚುನಾವಣೆಗೆ ತೆರಳುವ ಮುನ್ನ ಆ ರಾಜ್ಯದವರಾದ ಲಾಲಾಲಜಪತ್‌ರಾಯ್‌ಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ದೊರೆಯುವ ನಿರೀಕ್ಷೆಯಿದೆ.

ಪ್ರಶಂಸೆ ಹಾಗೂ ಟೀಕೆ
   ಕೇಂದ್ರ ಸಂಪುಟ ಪುನಾರಚನೆಗೆ ಸಂಬಂಧಿಸಿ ರಾಜಧಾನಿಯಲ್ಲಿ ಈಗ ವದಂತಿಗಳ ಮಹಾಪೂರವೇ ಹರಿಯುತ್ತಿದೆ. ಆದರೆ ಪ್ರಧಾನಿ ಮೋದಿ, ಈ ವಿಷಯದಲ್ಲಿ ತುಸು ಕಾದುನೋಡುವ ನೀತಿ ಅನುಸರಿಸುತ್ತಿರುವ ಹಾಗೆ ಕಾಣುತ್ತಿದೆ. ಇತ್ತೀಚೆಗೆ ಅವರು ಕರೆದ ಸಭೆಯೊಂದರಲ್ಲಿ ಕೆಲವು ಸಚಿವರಿಗೆ ಪ್ರಶಂಸೆಗಳು ದೊರೆತರೆ, ಇನ್ನು ಕೆಲವರು ಟೀಕೆಯನ್ನು ಎದುರಿಸಬೇಕಾಯಿತು. ಕೆಲವು ಸಚಿವರ ಕಾರ್ಯನಿರ್ವಹಣೆ ಬಗ್ಗೆ ಪ್ರಧಾನಿಗೆ ಸಮಾಧಾನವಿಲ್ಲವೆಂಬುದಕ್ಕೆ ಇದು ಸೂಚನೆಯಾಗಿದೆ. ಕೆಲವು ವರದಿಗಳ ಪ್ರಕಾರ,ಸರಕಾದ ಸಾಧನೆಗಳನ್ನು ಜನತೆಗೆ ತಿಳಿಸುವಲ್ಲಿ ಕೆಲವು ಸಚಿವರ ಅಸಾಮರ್ಥ್ಯವು, ಮೋದಿಯ ದೂರಿನ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿತ್ತು. ಸದ್ಭಾವನೆಯ ಸಂದೇಶವನ್ನು ಹರಡಲು ಪ್ರತೀ ತಿಂಗಳೂ ಕನಿಷ್ಠ 30 ತಾಸುಗಳನ್ನು ಮೀಸಲಿಡುವಂತೆ ಅವರು ಸಚಿವರಿಗೆ ಕರೆ ನೀಡಿದರು. ಕೆಲವು ಸಚಿವರು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆಯೂ ಪ್ರಧಾನಿ ಅಸಮಾಧಾನಗೊಂಡಿದ್ದಾರೆ. ಇಂತಹ ಹೇಳಿಕೆಗಳು, ಸರಕಾರದ ಕಲ್ಯಾಣ ಕಾರ್ಯಕ್ರಮಗಳ ಮೇಲಿನ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆಯೆಂದು ಅವರು ಭಾವಿಸುತ್ತಾರೆ. ಆದರೆ, ಯಾವುದೇ ನಿರ್ಧಾರವನ್ನು ವಿಳಂಬವಾಗಿ ಕೈಗೊಳ್ಳುತ್ತಿದೆಯೆಂಬ ಅಪವಾದ ಈ ಸರಕಾರದ ಮೇಲಿರುವುದರಿಂದ, ಈ ಸಚಿವರಿಗೆ ತಮ್ಮ ಸಾಧನೆಗಳೇನೆಂಬುದನ್ನು ಬಿಂಬಿಸುವುದು ತುಂಬಾ ಕಷ್ಟವಾಗಲಿದೆ.

Writer - ಪತ್ರಕರ್ತ

contributor

Editor - ಪತ್ರಕರ್ತ

contributor

Similar News

ನಾಸ್ತಿಕ ಮದ