ನವಜಾತ ಶಿಶುಮರಣ ಭಾರತದಲ್ಲೇ ಏಕೆ ಅಧಿಕ?

Update: 2016-02-09 17:44 GMT

ಭಾರತದಲ್ಲಿ ಇರುವ ದೊಡ್ಡ ಅಪಾಯಗಳೆಂದರೆ, ಸಕಾಲಿಕ ಹಾಗೂ ಗುಣಮಟ್ಟದ ಪ್ರಸವಪೂರ್ವ ಮೇಲ್ವಿಚಾರಣೆ ಹಾಗೂ ಆರೈಕೆ ವ್ಯವಸ್ಥೆಯ ಕೊರತೆ

ನಿಸ್ತೇಜ ಕಣ್ಣು, ಮಾಸಲು ಚರ್ಮ, ಮುಖದಲ್ಲಿ ಗಾಢ ನೋವಿನ ಛಾಯೆಯ ಆ ಯುವತಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಬಳಿಯ ಬುಡಕಟ್ಟು ಜನಾಂಗದವಳು. ಜೇನು ಸಂಗ್ರಹಿಸುವ ಕಸುಬು.
ತನ್ನ ಗಂಡು ಮಗು ಹುಟ್ಟುತ್ತಲೇ ಹೇಗೆ ಕಣ್ಣುಮುಚ್ಚಿತು ಎನ್ನುವ ನೋವು ಪದೇ ಪದೇ ಶಾಂತಾಳನ್ನು ಬಾಧಿಸುತ್ತಿತ್ತು. ಹೆರಿಗೆ ನೋವು ಕಾಣಿಸಿಕೊಂಡಾಗ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರವಾದ ಹುಣಸೂರಿಗೆ 20 ಕಿ.ಮೀ. ರಿಕ್ಷಾದಲ್ಲಿ ಪ್ರಯಾಣಿಸಿದ್ದಳು. ಎರಡು ದಿನ ಹಿಂದೆಯೇ ಗರ್ಭದಲ್ಲೇ ಮಗು ಮೃತಪಟ್ಟಿತ್ತು ಎಂದು ವೈದ್ಯರು ತಿಳಿಸಿದರು. 20ರ ಸುಮಾರಿನ ಈಕೆಗೆ ಗರ್ಭಾವಸ್ಥೆಯ ಮಧುಮೇಹಕ್ಕೆ ಚಿಕಿತ್ಸೆ ನೀಡಲಾಯಿತು. ತಾಯಿಗೆ ಈ ಚಿಕಿತ್ಸೆ ನೀಡದಿದ್ದರೆ ಮಗುವಿನ ಪ್ರಾಣವನ್ನು ಬಲಿ ಪಡೆಯುವ ರೋಗ ಅದು.
ನಾಗಪುರದಲ್ಲಿ ಇಂಥ ಸಾವು ಸಾಮಾನ್ಯ ಎಂದು ಶಾಂತಾ ಹೇಳುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ ಗ್ರಾಮದಲ್ಲಿ ಕನಿಷ್ಠ ಇಂತಹ 50 ಸಾವು ಸಂಭವಿಸಿದೆ ಎನ್ನುತ್ತಾರೆ. ಆದರೆ ಇದಕ್ಕೆ ದಾಖಲೆಗಳಿಲ್ಲ. ಎಲುಬಿನ ಹಂದರದಂತಿದ್ದ ಅಂಬಿಕಾಗೆ ಕೂಡಾ 25ರ ಆಸುಪಾಸು. ಆಕೆಯ ಮಗು ಕೂಡಾ ಹುಟ್ಟುವ ಮುನ್ನವೇ ಕಣ್ಣುಮುಚ್ಚಿತ್ತು. ಸೂಲಗಿತ್ತಿ ಹಾಗೂ ಅತ್ತೆ ಆಕೆಯ ಹೆರಿಗೆ ಮಾಡಿಸಿದ್ದರು. ಮೈಸೂರಿನ ಭಾರತೀಯ ಸಾರ್ವಜನಿಕ ಆರೋಗ್ಯ ಸಂಶೋಧನಾ ಸಂಸ್ಥೆ ಎಂಬ ಸ್ವಯಂಸೇವಾ ಸಂಸ್ಥೆಯ ವೈದ್ಯೆ ಭಾವನಾ ನಿರಂಜನ ಕುಮಾರ್, ಯಾಕೆ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಲಿಲ್ಲ ಎಂದು ಪ್ರಶ್ನಿಸಿದಾಗ ದಿಢೀರನೆ ಹೆರಿಗೆಯಾಯಿತು ಎಂಬ ಉತ್ತರ ಬಂತು.
ಅಂಬಿಕಾ ಹಾಗೂ ಶಾಂತಾ ಜೇನುಕುರುಬ ಕುಟುಂಬಕ್ಕೆ ಸೇರಿದವರು. ಈ ಬುಡಕಟ್ಟಿನ ಬಹುತೇಕ ಮಹಿಳೆಯರು ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳುತ್ತಾರೆ. 2015ರಲ್ಲಿ ಹುಟ್ಟುವ ಮುನ್ನವೇ ಮೃತಪಟ್ಟ ದೇಶದ 5.92 ಲಕ್ಷ ಮಕ್ಕಳಲ್ಲಿ ಇವರ ಮಕ್ಕಳೂ ಸೇರಿದ್ದಾರೆ. ಜಾಗತಿಕ ವೈದ್ಯಕೀಯ ನಿಯತಕಾಲಿಕ ಲ್ಯಾನ್ಸೆಟ್ ಬಿಡುಗಡೆ ಮಾಡಿದ ಸಂಶೋಧನಾ ವರದಿಯ ಪ್ರಕಾರ, ಇಡೀ ವಿಶ್ವದಲ್ಲೇ ಈ ಸಂಖ್ಯೆ ಅತ್ಯಧಿಕ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ, ಗರ್ಭಧಾರಣೆಯ 28 ವಾರಗಳ ಬಳಿಕವೂ ಜೀವದ ಸಂಕೇತಗಳೇ ಇಲ್ಲದ ಮಕ್ಕಳನ್ನು ಪ್ರಸವಪೂರ್ವ ಮೃತಮಕ್ಕಳು ಎಂದು ಪರಿಗಣಿಸಲಾಗುತ್ತದೆ. ವಿಶ್ವಾದ್ಯಂತ 2000ನೆ ಇಸ್ವಿಯಲ್ಲಿ ಪ್ರತಿ 1,000 ಹೆರಿಗೆಗಳಲ್ಲಿ 24.7ರಷ್ಟು ಇಂಥ ಪ್ರಕರಣಗಳು ಕಂಡುಬರುತ್ತಿದ್ದವು. 2015ರ ವೇಳೆಗೆ ಈ ಪ್ರಮಾಣ 18.4ಕ್ಕೆ ಇಳಿದಿದೆ. ಭಾರತದಲ್ಲಿ ಈ ವೇಳೆಯಲ್ಲಿ ಪ್ರಸವಪೂರ್ವ ಸಾವಿನ ಪ್ರಮಾಣ 33.3ರಿಂದ 23ಕ್ಕೆ ಇಳಿದಿದೆ. ಉಗಾಂಡಾ, ಘಾನಾ ಹಾಗೂ ಮೊಜಾಂಬಿಕ್‌ನಂಥ ತೀರಾ ಬಡದೇಶಗಳಲ್ಲಿ ಇರುವ ಸ್ಥಿತಿ ಭಾರತದಲ್ಲೂ ಇದೆ.
ಜಾಗತಿಕವಾಗಿ ಪ್ರಸವಪೂರ್ವ ಶಿಶುಮರಣ ಇಳಿಕೆ ಪ್ರಮಾಣ ಶೇ.2 ಆಗಿದ್ದು, ಇದು ಹೆರಿಗೆ ಸಂದರ್ಭದ ಸಾವಿನ ಇಳಿಕೆ ಪ್ರಮಾಣ (ಶೇ.3) ಹಾಗೂ ಐದುವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳ ಮರಣ ಇಳಿಕೆ (ಶೇ.4.5)ಗಿಂತ ಕಡಿಮೆ. ಭಾರತದಲ್ಲಿ ಹೆರಿಗೆ ಸಾವಿನ ಪ್ರಮಾಣ ಶೇ.5.3 ರಷ್ಟು ಹಾಗೂ ನವಜಾತ ಶಿಶು ಮರಣ ಶೇ.4.6ರಷ್ಟು ಇಳಿಯುತ್ತಿದ್ದರೆ ಪ್ರಸವಪೂರ್ವ ಶಿಶುಮರಣ ಪ್ರಮಾಣ ಶೇ. 2.4ರ ದರದಲ್ಲಷ್ಟೇ ಕಡಿಮೆಯಾಗುತ್ತಿದೆ.
ಭಾರತದಲ್ಲಿ ಇರುವ ದೊಡ್ಡ ಅಪಾಯಗಳೆಂದರೆ, ಸಕಾಲಿಕ ಹಾಗೂ ಗುಣಮಟ್ಟದ ಪ್ರಸವಪೂರ್ವ ಮೇಲ್ವಿಚಾರಣೆ ಹಾಗೂ ಆರೈಕೆ ವ್ಯವಸ್ಥೆಯ ಕೊರತೆ. ಸಾಂಕ್ರಾಮಿಕವಲ್ಲದ ರೋಗಗಳಾದ ಹೈಪರ್ ಟೆನ್ಷನ್ ಹಾಗೂ ಮಧುಮೇಹ, ಪೌಷ್ಟಿಕಾಂಶ ಕೊರತೆಯಿಂದ ಬರುವ ಗರ್ಭಿಣಿಯರ ರಕ್ತಹೀನತೆ, ಜೀವವೈಜ್ಞಾನಿಕ ಅಂಶಗಳಾದ ಜನ್ಮಜಾತ ಗರ್ಭಪಾತ, ಸೋಂಕು, ಜೀವನಶೈಲಿ, ಪರಿಸರಾತ್ಮಕ ಅಂಶಗಳಾದ ಮದ್ಯಪಾನ, ಧೂಮಪಾನ, ಸಾಮಾಜಿಕ ತಾರತಮ್ಯ, ಬಡತನ, ಸಾರಿಗೆ ಹಾಗೂ ಸಾಮಾನ್ಯ ಜೀವನ ಸ್ಥಿತಿಗಳು ಮುಖ್ಯ ಕಾರಣಗಳು.
ದುರ್ಬಲ ವರ್ಗದ ಮಹಿಳೆಯರಲ್ಲಿ ಪ್ರಸವಪೂರ್ವ ಶಿಶು ಮರಣ ಸಾಧ್ಯತೆ ಸಾಮಾನ್ಯ ವರ್ಗದವರಿಗಿಂತ ದುಪ್ಪಟ್ಟು ಅಧಿಕ. ಲ್ಯಾನ್ಸೆಟ್ ಅಧ್ಯಯನದ ಪ್ರಕಾರ ನಾಗಪುರದ ಪರಿಸ್ಥಿತಿ ದೇಶಾದ್ಯಂತ ಇದೆ. ಆರೋಗ್ಯಸ್ಥಿತಿ ಹದಗೆಡಲು ಕಾರಣವೆಂದರೆ ವೈದ್ಯರು ಬುಡಕಟ್ಟು ಮಹಿಳೆಯರನ್ನು ಸ್ಪರ್ಶಿಸಲು ನಿರಾಕರಿಸುವುದು. ಜೇನುಕುರುಬ ಮಹಿಳೆಯರು ಸಂಘಟಿತ ಆರೋಗ್ಯ ವ್ಯವಸ್ಥೆಯ ಸೌಲಭ್ಯ ಪಡೆಯಲು ಹಿಂಜರಿಯುವುದು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇಂಥ ತಾರತಮ್ಯ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ. ವೈದ್ಯರನ್ನು ಕಾಣಲು ಗಂಟೆಗಟ್ಟಲೆ ಕಾದರೂ ವೈದ್ಯರು ತಪಾಸಣೆ ವೇಳೆ ನಮ್ಮನ್ನು ಸ್ಪರ್ಶಿಸಲೂ ಮುಂದಾಗುವುದಿಲ್ಲ ಎನ್ನುವುದು ಅವರ ಆರೋಪ.

ಇಪ್ಪತ್ತನೆ ವಾರದ ಸ್ಕ್ಯಾನಿಂಗ್‌ಗಾಗಿ ನಾನು ಜಿಲ್ಲಾಸ್ಪತ್ರೆಗೆ ಹೋದಾಗ, ಯಾರೂ ನನಗೆ ಚಿಕಿತ್ಸೆ ನೀಡಲಿಲ್ಲ. ಎರಡು ಗಂಟೆ ಕಾದರೂ ಯಾರೂ ನನ್ನನ್ನು ಕರೆಯಲಿಲ್ಲ. ಆದ್ದರಿಂದ ಸ್ಕ್ಯಾನಿಂಗ್ ಮಾಡಿಸದೇ ವಾಪಸಾದೆ ಎಂದು ಶಾಂತಾ ಹೇಳುತ್ತಾರೆ. ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದ ಮಂದಿಗೆ 20 ಕಿ.ಮೀ. ದೂರದ ಆಸ್ಪತ್ರೆಗೆ ಹೋಗುವುದೆಂದರೆ ಸುಲಭದ ಮಾತಲ್ಲ. ಪ್ರಯಾಣಕ್ಕೆ ಗಂಡಂದಿರನ್ನೇ ಅವಲಂಬಿಸಬೇಕು. ಸಾಮಾನ್ಯವಾಗಿ ಗಂಡಸರು ಪಕ್ಕದ ಕೊಡಗು ಜಿಲ್ಲೆಯ ಕಾಫಿ ಪ್ಲಾಂಟೇಷನ್‌ಗಳಲ್ಲಿ ದಿನಗೂಲಿಗಳಾಗಿ ದುಡಿಯುವ ಕಾರಣದಿಂದ ಕುಟುಂಬದಿಂದ ದೂರ ಇರುತ್ತಾರೆ.
ನಾಗಪುರದಲ್ಲಿ ಬಹುತೇಕ ಮಂದಿ ಅನಕ್ಷರಸ್ಥರು. ಆರೋಗ್ಯ ಅಗತ್ಯತೆ ಬಗ್ಗೆ ಅರಿವು ಇಲ್ಲದವರು. ಇಷ್ಟಾಗಿಯೂ ಶಾಂತಾ ಜಿಲ್ಲಾ ಆಸ್ಪತ್ರೆಗೆ ಹೋಗುವ ಸಾಹಸ ಮಾಡಿದರು. ಸಾಮಾನ್ಯವಾಗಿ ಬಹುತೇಕ ಮಂದಿ, ಅರಣ್ಯದ ಒಳಗೆ ವಾಸವಾಗಿದ್ದು, ಸಾಂಪ್ರದಾಯಿಕ ಔಷಧಕ್ಕೇ ಮೊರೆ ಹೋಗುತ್ತಾರೆ.
ಕಳೆದ ಕೆಲ ವರ್ಷಗಳಿಂದ ಪಿಎಚ್‌ಆರ್‌ಐಐನಂಥ ಸ್ವಯಂಸೇವಾ ಸಂಸ್ಥೆಗಳು ಮತ್ತು ಸರಕಾರಿ ಕಾರ್ಯಕರ್ತರು ಗರ್ಭಿಣಿ, ಬಾಣಂತಿ ಹಾಗೂ ಶಿಶುಗಳ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಗರ್ಭಿಣಿಯಾಗಿದ್ದಾಗ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ನಿರಂತರವಾಗಿ ತಪಾಸಣೆಗೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವಂತೆ ಉತ್ತೇಜಿಸುತ್ತಿದ್ದಾರೆ. ಹೀಗೆ ಅವರಾಗಿ ಮುಂದೆಬಂದರೆ ತಾರತಮ್ಯಕ್ಕೆ ಅವಕಾಶ ಇಲ್ಲದಾಗುತ್ತದೆ.
ಇಲ್ಲಿ ಮಹಿಳೆಯರು ಸಾಮಾನ್ಯವಾಗಿ ರಕ್ತಹೀನತೆಯಿಂದ ಬಳಲುತ್ತಿದ್ದರೂ, ಅವರಿಗೆ ನೀಡುವ ಕಬ್ಬಿಣಾಂಶದ ಗುಳಿಗೆಗಳನ್ನು ಸೇವಿಸುವುದಿಲ್ಲ. ಏಕೆ ಎಂದು ಪ್ರಶ್ನಿಸಿದರೆ, ಮುಗ್ಧ ನಗೆ ಬೀರುತ್ತಾರೆ. ಬಹುಶಃ ಅವರಿಗೆ ಗುಳಿಗೆ ತೆಗೆದುಕೊಂಡು ರೂಢಿ ಇಲ್ಲದ ಕಾರಣಕ್ಕೆ ಹಾಗೆ ಮಾಡುತ್ತಾರೆ ಎನ್ನುವುದು ವೈದ್ಯರ ಅಭಿಮತ ಎಂದು ನಿರಂಜನಕುಮಾರ್ ಹೇಳುತ್ತಾರೆ.
ಪ್ರತಿಫಲ ನಿಶ್ಚಿತ
ಗರ್ಭಿಣಿಯರ ಆರೋಗ್ಯ ಸೇವೆಗೆ ಗಮನ ಹರಿಸಿದ ರಾಜ್ಯಗಳಲ್ಲಿ ಆರೋಗ್ಯವಂತ ಶಿಶುಗಳು ಜನಿಸಿವೆ. ಉದಾಹರಣೆಗೆ ಸುರಕ್ಷಿತ ತಾಯ್ತನಕ್ಕಾಗಿ ಜನನಿ ಸುರಕ್ಷಾ ಯೋಜನೆಯನ್ನು 2005ರಲ್ಲಿ ಆರಂಭಿಸಲಾಗಿದ್ದು, ಇದರ ಅನ್ವಯ ಸಾಂಸ್ಥಿಕ ಹೆರಿಗೆ ಉತ್ತೇಜಿಸಲು ತಾಯಂದಿರಿಗೆ ನಗದು ಪ್ರೋತ್ಸಾಹಕಗಳನ್ನು ನಿಡಲಾಗುತ್ತಿದೆ. ಇದರಿಂದಾಗಿ ಸಾಂಸ್ಥಿಕ ಹೆರಿಗೆ ಪ್ರಮಾಣ 2006-07ರಲ್ಲಿ ಶೇ.56.7 ಇದ್ದುದು 2010-11ರ ವೇಳೆಗೆ ಶೇ.78.5ಕ್ಕೆ ಹೆಚ್ಚಿದೆ ಎಂದು ಸರಕಾರಿ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ, ಕರ್ನಾಟಕದಲ್ಲಿ ಶೇ.94ರಷ್ಟು ಸಾಂಸ್ಥಿಕ ಹೆರಿಗೆಗಳು ಆಗುತ್ತಿವೆ. ಉತ್ತರಾಖಂಡ ಮತ್ತು ಮೇಘಾಲಯದಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಕ್ರಮವಾಗಿ ಶೇ.61 ಹಾಗೂ 584ರಷ್ಟು ಮಾತ್ರ ಸಾಂಸ್ಥಿಕ ಹೆರಿಗೆಗಳು ಆಗುತ್ತಿವೆ. ಉಳಿದಂತೆ ಮನೆಗಳೇ ಪ್ರಸೂತಿಗೃಹಗಳು. ಇದರಲ್ಲಿ ಬಹುತೇಕ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ನೆರವು ಇಲ್ಲದೇ ಆಗುವಂಥವು ಮತ್ತು ಅನೈರ್ಮಲ್ಯ ವಾತಾವರಣದಲ್ಲಿ ಆಗುವ ಹೆರಿಗೆಗಳು. ಇಂಥ ಮನೆಹೆರಿಗೆಗಳಿಗೆ ಮುಖ್ಯ ಕಾರಣಗಳೆಂದರೆ ಅನುಕೂಲ, ಹೊಲಿಗೆ ಬಗೆಗಿನ ಭೀತಿ, ಸಾರಿಗೆ ಕೊರತೆ ಹಾಗೂ ಆಸ್ಪತ್ರೆಯ ದುಬಾರಿ ದರ.
ಜನನಿ ಸುರಕ್ಷಾ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಳೆದ ಒಂದು ದಶಕದಲ್ಲಿ 7.4 ಲಕ್ಷದಿಂದ 104 ಲಕ್ಷಕ್ಕೆ ಹೆಚ್ಚಿದೆ. ಅದರೆ ಶೇ.15ರಷ್ಟು ಜನನಿ ಸುರಕ್ಷಾ ಯೋಜನೆ ಸಂಸ್ಥೆಗಳಲ್ಲಷ್ಟೇ ಸಮರ್ಪಕ ಹೆರಿಗೆ ಮಾಡಿಸಲು ಅಗತ್ಯವಾದ ಸೌಲಭ್ಯಗಳಿವೆ.
(ಕೃಪೆ: ಇಂಡಿಯಾಸ್ಪೆಂಡ್.ಕಾಮ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News