ಸಿಯಾಚಿನ್ ವಿಶ್ವದಾಖಲೆ ಯಾವ ಪುರುಷಾರ್ಥಕ್ಕೆ...?

Update: 2016-02-12 08:33 GMT

    ಹತ್ತು ಮಂದಿ ಭಾರತೀಯ ಯೋಧರ ಹಿಮಸಮಾಧಿಗೆ ಕಾರಣವಾದ ಸಿಯಾಚಿನ್ ಹಿಮಪಾತ ನನಗೆ ಈ ನೀರ್ಗಲ್ಲನದಿ ಗಿನ್ನಿಸ್ ವಿಶ್ವದಾಖಲೆ ಪುಸ್ತಕದಲ್ಲಿ ದಾಖಲಾಗಿರುವುದನ್ನು ನೆನಪಿಸಿತು. ಶಾಲಾಬಾಲಕನಾಗಿದ್ದಾಗಿನ ಗಿನ್ನಿಸ್ ದಾಖಲೆ ಪುಸ್ತಕದ ಹಲವು ಬ್ರಿಟಿಷ್ ಸಂಪುಟಗಳು ಈ ನೆನಪಿಗೆ ಕಾರಣವಾಗಿವೆ. ನಾನು ಒತ್ತಡಪೂರ್ವಕವಾಗಿ ಅದನ್ನು ಓದಿರಲಿಲ್ಲ; ಬದಲಾಗಿ ಅದರಲ್ಲಿ ಒಳಗೊಂಡಿದ್ದ ಮಾಹಿತಿಗಳು ಪದೇ ಪದೇ ಅದನ್ನು ಓದುವಂತೆ ಆಕರ್ಷಿಸಿತ್ತು. ಇದರ ಅಮೆರಿಕನ್ ಅವತರಣಿಕೆಯನ್ನೂ ಖರೀದಿಸಲು ನಾನು ತಾಯಿಯ ಮನವೊಲಿಸಿದ್ದೆ. ಆದರೆ ಅದರಲ್ಲಿ ಇದ್ದ ಮಾಹಿತಿಗಳು ನನಗೆ ಆಸಕ್ತಿ ಇಲ್ಲದ ವಿಷಯಗಳಾಗಿದ್ದು, ನ್ಯಾಷನಲ್ ಫುಟ್‌ಬಾಲ್ ಲೀಗ್‌ನಂಥ ವಿಷಯಗಳಿಂದ ಕೂಡಿತ್ತು. ಬ್ರಿಟಿಷ್ ಸಂಪುಟ ಹೆಚ್ಚು ವಾಸ್ತವಿಕ ಮತ್ತು ಕಡಿಮೆ ಸಂಕುಚಿತ.
ಭಾರತೀಯರು ಹೊಂದಿರುವ ವಿಶ್ವದಾಖಲೆಗಳು ಕಡಿಮೆ ಎನ್ನುವುದು ಆರಂಭದಲ್ಲೇ ನನ್ನ ಗಮನಕ್ಕೆ ಬಂದಿತ್ತು. ಅವಿಭಜಿತ ಭಾರತದ ಹಾಕಿ ತಂಡಗಳ ಅಜೇಯ ದಾಖಲೆಯಂತೆ, ಶ್ರೇಷ್ಠ ಈಜುಗಾರ ಮಿಹಿರ್ ಸೆನ್ ಅವರನ್ನು ಇಲ್ಲಿ ಉಲ್ಲೇಖಿಸಬೇಕು. ಬಹುಶಃ ಸುದೀರ್ಘ ಕಾನೂನು ವ್ಯಾಜ್ಯಗಳು ದಾಖಲಾಗಿರುವುದು ಭಾರತದಲ್ಲಿ.

ಜಗತ್ತಿನ ಅತೀ ಉದ್ದದ ಮೀಸೆಯ ವ್ಯಕ್ತಿ, ವಿಶ್ವದ ಅತೀ ಉದ್ದದ ಉಗುರು ಬೆಳೆಸಿದ ಸುಧೀರ್ ಚಿಲ್ಲಾಳ್ ಅವರ ಉಲ್ಲೇಖವಿದೆ. ಅಂತೆಯೇ ಒಂದು ಕಿಲೋಮೀಟರ್‌ಗೂ ಉದ್ದದ ಖರಗಪುರದ ರೈಲ್ವೆ ಪ್ಲಾಟ್‌ಫಾರಂಗಳ ಉಲ್ಲೇಖ ಭವನ ಮತ್ತು ನಿರ್ಮಾಣ ವಿಭಾಗದಲ್ಲಿದೆ.
ಕೆಲ ವರ್ಷಗಳ ಬಳಿಕ ಕೊಲ್ಕತ್ತಾಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದೆ. ಆ ರೈಲು ಖರಗಪುರ ರೈಲು ನಿಲ್ದಾಣದಲ್ಲಿ ನಿಂತಿತು. ನಿಲ್ದಾಣ ತಲುಪುತ್ತಿದ್ದಂತೆ ನನಗೆ ರೋಮಾಂಚನವಾಯಿತು. ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ನನಗೆ ವಿಶ್ವ ಪರಂಪರೆಯ ತಾಣಕ್ಕೆ ಸಮ ಎನಿಸಿತು. ಆ ರೈಲು ತಡವಾಗಿ ನಿಲ್ದಾಣ ತಲುಪಿತ್ತು. ಜನವರಿಯ ಆ ರಾತ್ರಿ ಚಳಿ ಹಾಗೂ ಮಂಜಿನಿಂದ ಕೂಡಿತ್ತು. ನಾನು ಪ್ಲಾಟ್‌ಫಾರಂನತ್ತ ಹೆಜ್ಜೆ ಹಾಕಿದೆ. ಇಂಜಿನ್‌ವರೆಗೂ ನಡೆದುಕೊಂಡು ಹೋದೆ. ಇಡೀ ಅಷ್ಟುದ್ದಕ್ಕೂ ದೃಷ್ಟಿ ಹಾಯಿಸಿದೆ. ಆ ಕಾಂಕ್ರಿಟ್ ನಿರ್ಮಾಣ ನನ್ನ ಕಣ್ಣಳತೆಯ ದೂರವನ್ನೂ ಮೀರಿತ್ತು. ರೈಲು ಹೊರಡಬಹುದು ಎಂಬ ಆತಂಕದಲ್ಲಿ ನಾನು ವಾಪಸಾದೆ. ಕಿಟಕಿ ಬದಿಯಲ್ಲಿ ಕುಳಿತು ಪ್ಲಾಟ್‌ಫಾರಂ ಉದ್ದವನ್ನು ವೀಕ್ಷಿಸಿದೆ. ಆಗ ನನಗೆ ಮೊದಲ ಬಾರಿಗೆ ಒಂದು ಪ್ರಶ್ನೆ ಮನಸ್ಸಿನಲ್ಲಿ ಮೂಡಿತು. ವಿಶ್ವದ ಅತಿ ಉದ್ದದ ಪ್ಯಾಸೆಂಜರ್ ರೈಲಿಗಿಂತ ಉದ್ದವಾದ ಪ್ಲಾಟ್‌ಫಾರಂ ಏಕೆ ನಿರ್ಮಾಣ ಮಾಡಿದರು? ಅದಕ್ಕೆ ಒಂದು ಕಾರಣವಿರಬೇಕು ಎಂದುಕೊಂಡೆ. ಆದರೆ ಅದನ್ನು ಪತ್ತೆ ಮಾಡುವುದು ಸಾಧ್ಯವೇ ಆಗಲಿಲ್ಲ.


  ಗ್ಲೋಕಲ್ ಹೆಮ್ಮೆ

ಇದೀಗ ಖರಗಪುರ ರೈಲ್ವೆ ಪ್ಲಾಟ್‌ಫಾರಂನ ಎವರೆಸ್ಟ್ ಆಗಿ ಉಳಿದಿಲ್ಲ. ಇತ್ತೀಚೆಗೆ ಗೋರಖಪುರ ಈ ದಾಖಲೆ ಮುರಿದಿದೆ. 1.3 ಕಿಲೋಮೀಟರ್ ಉದ್ದದ ರೈಲ್ವೆ ಪ್ಲಾಟ್‌ಫಾರಂ ಉದ್ಘಾಟನೆಯಾದಾಗ ಸ್ಥಳೀಯರು ವಿಶ್ವದಾಖಲೆ ನಿರ್ಮಿಸಿದ ಸಂಭ್ರಮ ಆಚರಿಸಿದ್ದರು. ಈ ದಾಖಲೆಯಿಂದಾಗಿ ಪಟ್ಟಣವನ್ನು ಇನ್ನು ಕಟ್ಟಕಡೆಯ ಹಳ್ಳಿಗಾಡು ಎಂದು ಕರೆಯುವಂತಿಲ್ಲ ಎಂದು ಜನ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಯಾವ ವರದಿ ಕೂಡಾ ಅಷ್ಟು ಉದ್ದದ ಪ್ಲಾಟ್‌ಫಾರಂ ಏಕೆ ನಿರ್ಮಿಸಿದರು ಎಂಬುದನ್ನು ಬಹುಶಃ ವಿವರಿಸಿಲ್ಲ.


ಖರಗಪುರ ಅನುಭವ, ನನಗೆ ದಾಖಲೆಗಳು ಅರ್ಥಪೂರ್ಣ ಅಥವಾ ಉದ್ದೇಶರಹಿತವಾಗಿರುತ್ತವೆ ಎನ್ನುವುದನ್ನು ಮನವರಿಕೆ ಮಾಡಿತು. ಮಿಹಿರ್‌ಸೆನ್ ಹಾಗೂ ನಮ್ಮ ಹಾಕಿ ತಂಡದ ಹೆಜ್ಜೆಗಳು, ಜನಪ್ರಿಯ ಕ್ರೀಡೆಗಳಲ್ಲಿ ಪ್ರಬಲ ಸ್ಪರ್ಧೆ ಎದುರಿಸಿ ಮಾಡಿದ ಸಾಧನೆಗಳು. ಇದು ಖಂಡಿತವಾಗಿಯೂ ಅರ್ಥಪೂರ್ಣ. ಆದರೆ ರೈಲ್ವೆ ಪ್ಲಾಟ್‌ಫಾರಂ ಹಾಗೂ ಸುಧೀರ್ ಚಿಲ್ಲಾಳ್ ಅವರ ಉಗುರುಗಳ ದಾಖಲೆ (ಇದು ತೀರಾ ಉದ್ದವಾಗಿ ಬೆಳೆದ ಕಾರಣದಿಂದ ಒಂದು ಕೈ ಯಾವ ಬಳಕೆಯೂ ಇಲ್ಲದಂತಾಗಿದೆ) ಉದ್ದೇಶರಹಿತ ಎನಿಸುತ್ತವೆ. ಲಿಮ್ಕಾ ದಾಖಲೆಗಳ ಪುಸ್ತಕ ಪ್ರಕಟನೆ ಆರಂಭವಾದಾಗಿನಿಂದ ಹಾಗೂ ಇದಕ್ಕೆ ಸಂಬಂಧಿಸಿದ ಟೆಲಿವಿಷನ್ ಷೋ ಕೂಡಾ ಆರಂಭವಾದ ಬಳಿಕ, ಭಾರತೀಯರ ಉದ್ದೇಶರಹಿತ ಸಾಧನೆಗಳ ಗೀಳು ಹೆಚ್ಚಿತು. ಸಾಮಾನ್ಯವಾಗಿ ಯಾರೂ ಮಾಡದ ಸಾಹಸಗಳನ್ನು ಮಾಡಿ, ದಾಖಲೆ ನಿರ್ಮಿಸುವ ಚಾಳಿ ಹುಟ್ಟುಕೊಂಡಿತು. ಉದಾಹರಣೆಗೆ ಬಲ್ಬ್ ಜಗಿಯುವುದು, ಹಾವುಗಳು ತುಂಬಿರುವ ಪಂಜರದಲ್ಲಿ ವಾಸ, ಹಿಮ್ಮುಖವಾಗಿ ಸೈಕಲ್ ಚಲಾಯಿಸುವುದು ಹೀಗೆ.


1984ರಿಂದ ಸಿಯಾಚಿನ್ ಕೂಡಾ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಯಾಯಿತು. ವಿಶ್ವದ ಅತಿ ಎತ್ತರದ ಯುದ್ಧಕ್ಷೇತ್ರವಾಗಿ ಇದು ದಾಖಲೆ ಸೇರಿತು. ಇದು ಅರ್ಥಪೂರ್ಣ ದಾಖಲೆ ಎಂದು ಸಹಜವಾಗಿಯೇ ಅನಿಸುತ್ತದೆ. ಈ ಹಿಮಪರ್ವತದಲ್ಲಿ ನೂರಾರು ಜೀವಗಳು ಬಲಿಯಾಗಿವೆ. ಇಲ್ಲಿ ಸೇನೆಯನ್ನು ನಿರ್ವಹಿಸಲು ಹಲವು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ. ಹಲವು ದಶಕಗಳಿಂದ ವಿರೋಧಿಗಳ ವಿರುದ್ಧ ಹಾಗೂ ಪ್ರತಿಕೂಲ ಅಂಶಗಳ ವಿರುದ್ಧ ಹೋರಾಡುವ ಸೈನಿಕರ ಪರಾಕ್ರಮ ಹಾಗೂ ಬದ್ಧತೆ ಬಗ್ಗೆ ಖಂಡಿತಾಗಿಯೂ ನಾವು ಹೆಮ್ಮೆ ಪಡಲೇಬೇಕು. ಇಷ್ಟಾಗಿಯೂ ನಮ್ಮ ಸೈನಿಕರು ಏಕೆ ಅಲ್ಲಿದ್ದಾರೆ? 1972ರ ಶಿಮ್ಲಾ ಒಪ್ಪಂದದ ಭಾಗವಾಗಿ ವಾಸ್ತವ ನಿಯಂತ್ರಣ ರೇಖೆ ಅಸ್ತಿತ್ವಕ್ಕೆ ಬಂದಿದೆ. ಇದಾದ ಬಳಿಕ ಬಾಂಗ್ಲಾದೇಶ ಯುದ್ಧ ನಡೆಯಿತು. ನಕ್ಷೆ ನಿರ್ಮಿಸುವವರು ಈ ಶಿಖರ ಹಾಗೂ ಕಣಿವೆಗಳನ್ನು ಜಾಗರೂಕತೆಯಿಂದ ವಿಭಾಗಿಸಿದರು. ಯಾವ ಮಾನವ ವಾಸತಾಣವೂ ಸಾಧ್ಯವಾಗದ ಜಾಗದವರೆಗೆ ತಲುಪಿದರು. ಆ ನಿರ್ದಿಷ್ಟ ಕೇಂದ್ರದಿಂದ ವಾಸ್ತವ ನಿಯಂತ್ರಣ ರೇಖೆ ಉತ್ತರಕ್ಕೆ ಇದೆ ಎಂದು ಉಲ್ಲೇಖಿಸಿದರು. ಭಾರತೀಯರು ಇದನ್ನು ನೇರವಾಗಿ ಉತ್ತರಕ್ಕೆ ಎಂದು ಭಾವಿಸಿದರು. ಆದರೆ ಪಾಕಿಸ್ತಾನ ಹಾಗೂ ಅಮೆರಿಕ ಇದನ್ನು ಕರಕೊರಮ್ ಪಾಸ್‌ವರೆಗಿನ ನಕ್ಷೆಯುದ್ದಕ್ಕೂ ಇದೆ ಎಂದು ಅರ್ಥೈಸಿಕೊಂಡರು. ಅಂದರೆ ನೇರವಾಗಿ ಉತ್ತರಕ್ಕೆ ಹೋಗುವ ಬದಲು ಈಶಾನ್ಯಕ್ಕೆ ಹೋಗುತ್ತದೆ ಎಂದುಕೊಂಡರು. ತಮ್ಮ ವಿಶ್ಲೇಷಣೆಯನ್ನು ಸಮರ್ಥಿಸಿಕೊಳ್ಳಲು ಪಾಕಿಸ್ತಾನ, ಈ ವಲಯಕ್ಕೆ ಪರ್ವತಾರೋಹಿಗಳಿಗೆ ಅನುಮತಿ ನೀಡಲು ಆರಂಭಿಸಿತು. ಇದಕ್ಕೆ ಪ್ರತಿಯಾಗಿ ಭಾರತ ಸ್ಪಂದಿಸಿ, ಈ ಬರಡು ಮೊನಚು ಪ್ರದೇಶಕ್ಕೆ ಸೇನೆಯನ್ನು ಕಳುಹಿಸಿತು.


ಅಸಂಗತ ಚಿತ್ರದಂತೆ


ಭಾರತದ ಕ್ರಮ ಮೇಲ್ನೋಟಕ್ಕೆ ಸಮರ್ಥನೀಯ. ಆದರೆ ಯೋಚನೆ ಮಾಡಿ ತೆಗೆದುಕೊಂಡಂತೆ ಅನಿಸುವುದಿಲ್ಲ. ಅಲ್ಲಿ ಸೇನೆ ಯಾವ ಕೆಲಸ ಮಾಡಬೇಕು? ತೀರಾ ಅತ್ಯುತ್ಸಾಹದ ಪರ್ವತಾರೋಹಿಗಳನ್ನು ಹೊರತುಪಡಿಸಿದರೆ ಶಾಶ್ವತವಾಗಿ ಯಾರೂ ಭೇಟಿ ನೀಡಲು ಸಾಧ್ಯವಾಗದ ಜಾಗವನ್ನು ಕಾಯುವ ಕೆಲಸ ಮಾಡುತ್ತಾರೆ. ಜತೆಗೆ ಇದಕ್ಕೆ ಯಾವ ಆರ್ಥಿಕ ಮೌಲ್ಯವೂ ಇಲ್ಲ. ಕಳೆದ 32 ವರ್ಷಗಳಿಂದ ಸೈನಿಕರನ್ನು ಇಲ್ಲಿಗೆ ಪರ್ಯಾಯವಾಗಿ ನಿಯೋಜಿಸಲಾಗುತ್ತದೆ. ತೀರಾ ದುರ್ದೆಸೆಯ ಬದುಕು. ಲಘು ಉಷ್ಣತೆ (ಹೈಪರ್‌ಥರ್ಮಿಯ) ಹಾಗೂ ಚಳಿಹುಣ್ಣಿನಿಂದ ಬಳಲಬೇಕಾಗುತ್ತದೆ. ಅದು ನಿರ್ಜನ ಪ್ರದೇಶದ ಹಿತಾಸಕ್ತಿಗಾಗಿ ಹಾಗೂ ಅತೀ ಎತ್ತರದ ಬಗ್ಗೆ ಅತೀವ ಪ್ರೀತಿ ಹೊಂದಿದ ವಿಕೃತ ಪ್ರೀತಿಗಾಗಿ ಈ ಪಾಡು. ಜಾಗತಿಕ ಎಚ್ಚರಿಕೆಯಂತೆ ಈ ನೀರ್ಗಲ್ಲ ನದಿ ಹಿಂದೆ ಸರಿದರೂ ಸಿಯಾಚಿನ್ ಬದುಕು ಆರಾಮದಾಯಕವಾಗದು. ಏಕೆಂದರೆ ಬದಲಾಗುವ ಉಷ್ಣತೆಯ ಪ್ರಮಾಣ ಅತ್ಯಲ್ಪ. ಆದರೆ ಅದು ಭೂಪ್ರದೇಶಕ್ಕೆ ಅಪಾಯಕಾರಿಯಾಗಬಲ್ಲದು. ಅದು ಕೇವಲ ಭಾರತೀಯರಿಗೆ ಮಾತ್ರ ಸೀಮಿತವಲ್ಲ. ಎರಡು ವರ್ಷದ ಹಿಂದೆ ಹಿಮಪಾತದಿಂದ 129 ಮಂದಿ ಪಾಕಿಸ್ತಾನಿ ಸೈನಿಕರು ಹಾಗೂ 11 ಮಂದಿ ನಾಗರಿಕರು ಗಾಯತ್ರಿ ಸೆಕ್ಟರ್‌ನಲ್ಲಿ ಬಲಿಯಾಗಿದ್ದರು. ಇದು ನೀರ್ಗಲ್ಲ ನದಿಗೆ ಸನಿಹದಲ್ಲಿರುವ ಪ್ರದೇಶ.


ಇಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಇಳಿಯುವ ಮುನ್ನ ಭಾರತ ರಾಜತಾಂತ್ರಿಕ ಪ್ರಯತ್ನದಿಂದ ಸಮಸ್ಯೆ ಇತ್ಯರ್ಥಕ್ಕೆ ನಿರ್ಧರಿಸಬೇಕಿತ್ತು. ಬದಲಾಗಿ ವಿಶ್ವದ ಅತೀ ಎತ್ತರದ ಯುದ್ಧಕ್ಷೇತ್ರ ಎಂಬ ಉದ್ದೇಶರಹಿತ ವಿಶ್ವದಾಖಲೆ ನಿರ್ಮಿಸಲು ನಾವು ಗಮನ ಕೊಟ್ಟೆವು. ಬಹುಶಃ ಮೂಲಸ್ವರೂಪದ ಪರಿಸರದಲ್ಲಿ ನಾವು ಮಾಡಿರುವ ವಿಷಕಾರಿ ಹೊಲಸನ್ನು ಸ್ವಚ್ಛಗೊಳಿಸುವ ಮೂಲಕ ಸಾಧ್ಯವಾದಷ್ಟು ಬೇಗ ಅದರಿಂದ ಮುಕ್ತಿ ಪಡೆಯಬೇಕು. ಕಳೆದ ವಾರ ನಾನು ಹಿಮಪಾತದ ಬಗ್ಗೆ ಓದಿದಾಗ, ನನ್ನ ಮನಸ್ಸಿನಲ್ಲಿ ಬಾಬ್ ದೈಲಾನ್ ಅವರ ಮಾತುಗಳು ನೆನಪಿಗೆ ಬಂದವು. ಹಲವಾರು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಕೊಳ್ಳುವವರೆಗೆ ಎಷ್ಟು ಸಾವುಗಳು ಸಂಭವಿಸಬಹುದು?


 ಪ್ರತಿ ಸಾವು ಕೂಡಾ ನನ್ನಂಥವರಿಗೆ ಸಿಯಾಚಿನ್ ಸಂಘರ್ಷ ಅರ್ಥಹೀನ ಎನಿಸುವಂತೆ ಮಾಡುತ್ತದೆ. ಸಿಯಾಚಿನ್ ಪ್ರದೇಶವನ್ನು ಶ್ರೇಷ್ಠ ಹಾಗೂ ಅರ್ಥಪೂರ್ಣ ಎಂದು ಪರಿಗಣಿಸುವವರು ವಿಭಿನ್ನವಾಗಿ ಯೋಚಿಸಬಹುದು. ಅಂಥವರಿಗೆ ಪ್ರತಿ ಸಾವು ಕೂಡಾ ಆ ಭೂಮಿಯನ್ನು ಪವಿತ್ರಗೊಳಿಸಬಹುದು. ಸಹಜವಾಗಿಯೇ ಇದನ್ನು ಹೆಚ್ಚು ಸೈನಿಕರು ಹಾಗೂ ಸಂಪನ್ಮೂಲದ ಮೂಲಕ ರಕ್ಷಿಸಬೇಕು ಎಂಬ ಪ್ರವೃತ್ತಿ ಬೆಳೆಸಬಹುದು. ಇದನ್ನು ಕಡಿಮೆ ಮಾಡಿದಷ್ಟೂ, ಹಿಮಸಮಾಧಿಯಲ್ಲಿ ಹುತಾತ್ಮರಾದವರಿಗೆ ನಾವು ಮಾಡುತ್ತಿರುವ ದ್ರೋಹ ಎನಿಸಬಹುದು. ಕಳೆದ ಮೂರು ದಶಕಗಳಲ್ಲಿ, ಜಾಗೃತ ರಾಷ್ಟ್ರೀಯವಾದಿಗಳು ಬಹುಮತ ಗಳಿಸಿದವರು ಹುತಾತ್ಮರ ದಿನವನ್ನು ಆಚರಿಸುವಲ್ಲಿ ಆಸಕ್ತಿ ತೋರಿಸಿದರೇ ವಿನಃ ಬಲಿದಾನದ ಅಗತ್ಯತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುಂದಾಗಲಿಲ್ಲ. ವಿಳಂಬ ಮಾಡದೇ ಸಿಯಾಚಿನ್ ಪ್ರದೇಶವನ್ನು ಅದರ ಮೇಲೆ ಸಹಸ್ರಮಾನಗಳಿಂದ ಪ್ರಭುತ್ವ ಸಾಧಿಸಿದ್ದ ಹಿಮಚಿರತೆ ಹಾಗೂ ಕಾಡುಮೇಕೆಗಳಿಗೆ ಬಿಟ್ಟುಕೊಡುವುದೇ ಸೂಕ್ತ.


   ಕಾಶ್ಮೀರ ಸಿಯಾಚಿನ್ ದುರಂತದಲ್ಲಿ ಮೂವರು ಕನ್ನಡಿಗರ ಹೆಸರು ಇದೀಗ ದೇಶದ ಜನರ ಬಾಯಲ್ಲಿ ನಲಿದಾಡುತ್ತಿವೆ. ಹನುಮಂತಪ್ಪ ಕೊಪ್ಪದ ಹಿಮ ಸಮಾಧಿಯೊಳಗೆ ಆರು ದಿನ ಜೀವ ಉಳಿಸಿಕೊಂಡು ಗುರುವಾರ ಇಲ್ಲವಾದರು. ಇದೇ ಸಂದರ್ಭದಲ್ಲಿ ಹಿಮದಲ್ಲಿ ಸಮಾಧಿಯಾದ ಕರ್ನಾಟಕದ ಇನ್ನಿಬ್ಬರು ಯೋಧರ ಕಿರುಪರಿಚಯ ಇಲ್ಲಿದೆ.

ಹಾಸನದ ನಾಗೇಶ್
  ಜಮ್ಮು-ಕಾಶ್ಮೀರದ ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಹಾಸನ ತಾಲೂಕು ತೇಜೂರು ಗ್ರಾಮದ ಯೋಧ ಸುಬೇದಾರ್ ನಾಗೇಶ್, ತಿಮ್ಮೇಗೌಡ ಮತ್ತು ಲಕ್ಷ್ಮಮ್ಮ ದಂಪತಿಯ ಆರು ಮಕ್ಕಳಲ್ಲಿ ಎರಡನೆಯವರು.
 ಇವರು 21 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆಯೇ ನಾಗೇಶ್ ನಿವೃತ್ತರಾಗಬೇಕಿತ್ತು. ಮನೆಯನ್ನು ಕಟ್ಟಿಸುವ ಉದ್ದೇಶದಿಂದ ನಾಲ್ಕು ವರ್ಷ ಸೇವೆಯನ್ನು ವಿಸ್ತರಿಸಿಕೊಂಡಿದ್ದರು. ಈ ವರ್ಷ ನಿವೃತ್ತರಾಗಲಿದ್ದರು.
14 ವರ್ಷಗಳ ಹಿಂದೆ ಆಶಾ ಎಂಬವರನ್ನು ಮದುವೆಯಾಗಿದ್ದ ನಾಗೇಶ್‌ಗೆ ಅಮಿತ್ (12) ಮತ್ತು ಪ್ರೀತಂ (9) ಎಂಬಿಬ್ಬರು ಮಕ್ಕಳಿದ್ದಾರೆ.

ಇವರ ತಂದೆ ತಾಯಿ ತೀರಿಕೊಂಡಿದ್ದು, ಅಣ್ಣ ವೆಂಕಟೇಶ್ ಕುಟುಂಬದ ಒಂದೂವರೆ ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಸಹೋದರಿಯರಾದ ಭಾಗ್ಯಲಕ್ಷ್ಮೀ, ವಿಜಯಲಕ್ಷ್ಮೀ, ಶಾಂತಿ, ಸಾವಿತ್ರಿಯವರದ್ದು ಮದುವೆಯಾಗಿದೆ. ನಾಗೇಶ್ ಐದು ತಿಂಗಳ ಹಿಂದೆ ಮನೆಗೆ ಬಂದಿದ್ದರು. ಮುಂದಿನ ತಿಂಗಳ ರಜೆಯಲ್ಲಿ ಮನೆಗೆ ಬರಬೇಕಿತ್ತು. ಹೊಸ ಮನೆಯ ಕೆಲಸವೂ ಮುಗಿದಿತ್ತು. ಕಳೆದ ಐದು ದಿನಗಳ ಹಿಂದೆ ಫೋನ್ ಮಾಡಿ ಮುಂದಿನ ತಿಂಗಳು ರಾಜೆ ಹಾಕಿ ಬರುತ್ತಿದ್ದೇನೆ, ಹೊಸಮನೆ ಗೃಹಪ್ರವೇಶ ಮಾಡಿಸೋಣ ಎಂದು ಹೇಳಿದ್ದರು.
ಯೋಧ ಮಹೇಶ್
 ಕಾಶ್ಮೀರದ ಸಿಯಾಚಿನ್ ಬಳಿ ಸಂಭವಿಸಿದ ಹಿಮಪಾತದಲ್ಲಿ ಮೈಸೂರು ಜಿಲ್ಲೆ, ಎಚ್.ಡಿ.ಕೋಟೆ ತಾಲೂಕಿನ ಯೋಧ ಪಿ.ಎನ್.ಮಹೇಶ್ ಮೃತಪಟ್ಟಿದ್ದಾರೆ.
ಮಹೇಶ್ ಮೂಲತಃ ಕೆ.ಆರ್.ನಗರ ತಾಲೂಕು ಪಶುಪತಿ ಗ್ರಾಮದವರಾಗಿದ್ದಾರೆ. ಇವರು ಪಟ್ಟಣದ ಶಿವಾಜಿ ರಸ್ತೆಯ ನಿವಾಸಿ ದಿ.ನಾಗರಾಜ್ ಮತ್ತು ಸರ್ವಮಂಗಳಾ ದಂಪತಿಯ ಪುತ್ರ.

 ಸಿಯಾಚಿನ್ ಬಳಿ ವೀರಯೋಧ ಕನ್ನಡಿಗ ಪಿ.ಎನ್.ಮಹೇಶ್ ಸೇರಿದಂತೆ 10 ಮಂದಿ ಸೈನಿಕರು ಹಿಮಪಾತದಲ್ಲಿ ಸಿಲುಕಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ಕಂಡ ಕುಟುಂಬ, ಆತನ ಬ್ಯಾಚ್‌ನ ಸ್ನೇಹಿತರೊಬ್ಬರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ 'ಹಿಮಪಾತದಲ್ಲಿ ಸಿಲುಕಿರುವ 10 ಮಂದಿ ಸೈನಿಕರಲ್ಲಿ ಮಹೇಶ್ ಕೂಡ ಒಬ್ಬ' ಎಂದು ಮಹೇಶ್ ಸಹೋದರ ಮಂಜುನಾಥ್‌ಗೆ ತಿಳಿಸಿದ್ದಾರೆ. ಪಿ.ಎನ್.ಮಹೇಶ್ 10ನೆ ತರಗತಿವರೆಗೆ ವ್ಯಾಸಂಗ ಮಾಡಿದ್ದು, ತಂದೆಯ ಮರಣದ ನಂತರ ಕಿತ್ತು ತಿನ್ನುವ ಬಡತನ ಮತ್ತು ಆತನಲ್ಲಿದ್ದ ಅಚಲವಾದ ದೇಶಪ್ರೇಮದಿಂದಾಗಿ ಸೈನಿಕನಾಗುವ ಆಸೆ ಚಿಗುರೊಡೆದು ದೇಶ ರಕ್ಷಣೆಗೆ ಸೇರ್ಪಡೆಯಾಗಿದ್ದರು.

Writer - ಗಿರೀಶ್ ಸಹಾನೆ

contributor

Editor - ಗಿರೀಶ್ ಸಹಾನೆ

contributor

Similar News