ಬೆಟದೂರ ಹುಲಿ ಹನುಮಂತಪ್ಪ

Update: 2016-02-11 18:52 GMT

ಲಾನ್ಸ್ ನಾಯ್ಕ್ ಹನುಮಂತಪ್ಪ ಕೊಪ್ಪದ ಎಂಬ ಯೋಧನೊಬ್ಬ ಭಾರತೀಯ ಭೂ ಸೇನೆಯಲ್ಲಿದ್ದನೆಂಬುದು ಇಡೀ ದೇಶಕ್ಕೆ ತಿಳಿದುದು ಬಹುಶಃ ಈ ನಾಲ್ಕು ದಿನಗಳಲ್ಲಿ ಆದರೆ, ಅವರೀಗ ಜೀವನದ ಅದ್ಭುತ ದ್ಯೋತಕವಾಗಿ ಮೂಡಿ ಬಂದಿದ್ದಾರೆ.

 ದೇಶದ ಅತ್ಯುನ್ನತ ಸಮರ ಭೂಮಿ ಸಿಯಾಚಿನ್‌ನಲ್ಲಿ ಭೀಕರ ಹಿಮ ಪಾತವಾದಾಗ ತನ್ನ 9 ಮಂದಿ ಸಹೋದ್ಯೋಗಿಗಳೊಡನೆ 25 ಅಡಿ ಹೂತು ಹೋದರೂ, 6 ದಿನಗಳ ಬಳಿಕ, ಕುಟುಕು ಜೀವದೊಡನಿದ್ದ ಹನುಮಂತಪ್ಪನ ವರನ್ನು ರಕ್ಷಣಾ ತಂಡ ಹೊರ ತೆಗೆದಿತ್ತು. ಅವರ ಸಹೋದ್ಯೋಗಿಗಳು ಅದಾಗಲೇ ಅವರಿಗೆ ವಿದಾಯ ಹೇಳಿದ್ದರು. ಗಾಳಿಯ ಪೊಟ್ಟಣವೊಂದು ಅವರನ್ನು ಬದುಕಿಸಿತ್ತೆಂದು ಅಧಿಕಾರಿಗಳು ಹೇಳಿದ್ದಾರೆ.
ಅವರು ಸದಾ ಹೋರಾಟಗಾರರಾಗಿದ್ದರೆಂಬುದು ಹನುಮಂತಪ್ಪನವರನ್ನು ತಿಳಿದಿದ್ದವರು ಹೇಳುವ ಮಾತು. 'ಖಚಿತ ಆದರೆ ಮೃದು-ಮಾತಿನವರು' ಎಂಬುದು ಬಂಧು-ಮಿತ್ರರು ಅವರನ್ನು ಬಣ್ಣಿಸುತ್ತಿದ್ದ ರೀತಿ.
ಹನುಮಂತಪ್ಪ ಯುವ ಪತ್ನಿ ಹಾಗೂ 2ರ ಹರೆಯದ ಮಗಳನ್ನು ಅಗಲಿದ್ದಾರೆ. ಹಿಮಪಾತದ ಹಿಂದಿನ ದಿನ ಅವರು ಕುಟುಂಬದೊಂದಿಗೆ ಮಾತನಾಡಿದ್ದರು.ರಜೆಯಲ್ಲಿ ಮನೆಗೆ ಬರುವ ಭರವಸೆ ನೀಡಿದ್ದರೆಂದು ನಿಕಟವರ್ತಿಗಳು ತಿಳಿಸಿದ್ದಾರೆ.
ಶಕ್ತಿ, ಸಾಹಸ ಹಾಗೂ ನಿಷ್ಠೆಗೆ ಹೆಸರಾದ ಶ್ರೀ ಹನುಮಂತ ದೇವರ ಹೆಸರನ್ನು ಹನುಮಂತಪ್ಪನವರಿಗೆ ಇರಿಸಿದ್ದರು.
ಕರ್ನಾಟಕದ ಅವರ ಹುಟ್ಟೂರಿನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಪ್ರತಿ ದಿನ 6ಕಿ.ಮೀ.ಗೂ ಹೆಚ್ಚು ನಡೆದೇ ಹೋಗಬೇಕಿತ್ತು.
ಹನುಮಂತಪ್ಪ ಸೇವೆಯಿಂದ 3ಬಾರಿ ತಿರಸ್ಕರಿಸಲ್ಪಟ್ಟಿದ್ದರೂ, ಹಟ ಬಿಡದೆ ಆಯ್ಕೆಯಾಗು ವವರೆಗೂ ಪ್ರಯತ್ನಿಸಿದ್ದರು. ಆತನೊಬ್ಬ ಅಭಿಜಾತ ಹೋರಾಟಗಾರನೆಂದು ಅವರ ಸೋದರ ಹೇಳಿದ್ದಾರೆ. ಹನುಮಂತಪ್ಪ ಊರಲ್ಲಿ ಸಾಕಷ್ಟು ಸ್ಫೂರ್ತಿ ತುಂಬಿದ್ದರು.ಗ್ರಾಮದ ಅನೇಕರು ಸೇನೆಗೆ ಸೇರುವಂತೆ ಮಾಡಿದ್ದರು.
ಅವರೊಬ್ಬ ಯೋಗ ಪರಿಣತರಾಗಿದ್ದರು ಹಾಗೂ ತಮಗೂ ಪ್ರಾಣಾಯಾಮದ ಕುರಿತು ಸಲಹೆ ನೀಡುತ್ತಿದ್ದರೆಂದು ಹನುಮಂತಪ್ಪನವರ ಸಹೋದ್ಯೋಗಿಗಳ ತಿಳಿಸಿದ್ದಾರೆ.
ಯೋಗದ ಕಾರಣದಿಂದಲೇ ಅವರು ನೀರ್ಗಲ್ಲುಗಳ ನಡುವೆ ಅಷ್ಟು ದಿನ ಬದುಕಿದ್ದರೆಂದು ಅನೇಕರು ಹೇಳುತ್ತಾರೆ.
10 ಮದ್ರಾಸ್ ರೆಜಿಮೆಂಟ್‌ನ ಭಾಗವಾಗಿ, ಹನುಮಂತಪ್ಪ ಇತ್ತೀಚೆಗಷ್ಟೇ ಸಿಯಾಚಿನ್‌ನಲ್ಲಿ ನಿಯೋಜನೆಗೊಂಡಿದ್ದರು.

ಶೋಕಸಾಗರದಲ್ಲಿ ಮುಳುಗಿರುವ ಬೆಟದೂರು
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ಪವಾಡಸದೃಶವಾಗಿ ಜೀವಂತ ಪಾರಾಗಿ ದಿಲ್ಲಿಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಸಾವಿನ ಸುದ್ದಿ ಗುರುವಾರ ಅವರ ಸ್ವಗ್ರಾಮಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ್ದು, ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿದೆ. ತನ್ಮಧ್ಯೆ ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ನಿಮಿಷಗಳ ವೌನವನ್ನಾಚರಿಸಿ ವೀರಯೋಧನ ಆತ್ಮಕ್ಕೆ ಶಾಂತಿ ಕೋರಿದರು.
ಹನುಮಂತಪ್ಪ ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಬಂಧುಗಳು,ಸ್ನೇಹಿತರು, ಗ್ರಾಮಸ್ಥರು ಮತ್ತು ಪತ್ರಕರ್ತರ ದಂಡೇ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಅವರ ನಿವಾಸದ ಬಳಿ ಸೇರಿದ್ದರು.
ಹನುಮಂತಪ್ಪನವರ ತಾಯಿ ಬಸಮ್ಮ,ಪತ್ನಿ ಮಹಾದೇವಿ,ಪುತ್ರಿ ಮತ್ತು ನಿಕಟ ಬಂಧುಗಳು ದಿಲ್ಲಿಯಲ್ಲಿದ್ದರೆ, ಗ್ರಾಮದಲ್ಲಿರುವ ಕುಟುಂಬದ ಇತರ ಸದಸ್ಯರ ರೋದನ ಮುಗಿಲು ಮುಟ್ಟಿತ್ತು.
ಫೆ.13ರಂದು ನಡೆಯಲಿರುವ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಪಕ್ಷದ ಅಭ್ಯರ್ಥಿಯ ಪರ ಬೆಂಗಳೂರಿನಲ್ಲಿ ಬಹಿರಂಗ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಎರಡು ನಿಮಿಷಗಳ ವೌನವನ್ನಾಚರಿಸಿ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು.
ಹನುಮಂತಪ್ಪ ದೇಶಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದ ಅವರು, ರಾಜ್ಯಕ್ಕೆ ಹುತಾತ್ಮ ಯೋಧನ ಪಾರ್ಥಿವ ಶರೀರದೊಂದಿಗೆ ಮರಳಲು ವಿಶೇಷ ವಿಮಾನದ ವ್ಯವಸ್ಥೆ ಸೇರಿದಂತೆ ಹನುಮಂತಪ್ಪನವರ ಕುಟುಂಬಕ್ಕೆ ಎಲ್ಲ ರೀತಿಯ ನೆರವನ್ನೂ ಒದಗಿಸುವಂತೆ ತಾನೀಗಾಗಲೇ ದಿಲ್ಲಿಯಲ್ಲಿರುವ ಕರ್ನಾಟಕ ಭವನದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಸಿಯಾಚಿನ್ ದುರಂತಕ್ಕೆ ಬಲಿಯಾದ ರಾಜ್ಯದ ಎಲ್ಲ ಮೂವರು ಯೋಧರ ಕುಟುಂಬಗಳಿಗೆ ಪರಿಹಾರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಪ್ರಕಟಿಸಿದರು. ಮೈಸೂರಿನ ಮಹೇಶ ಮತ್ತು ಹಾಸನದ ನಾಗೇಶ ಇನ್ನಿಬ್ಬರು ಹುತಾತ್ಮ ಯೋಧರಾಗಿದ್ದಾರೆ.
ಹನುಮಂತಪ್ಪ ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡು ಊರಿಗೆ ಮರಳುತ್ತಾನೆ ಎಂದು ನಾವು ಭಾವಿಸಿದ್ದೆವು. ಆದರೆ ಅವನ ನಿಧನದ ಸುದ್ದಿ ನಮಗೆ ಬರಸಿಡಿಲಿನಂತಾಗಿದೆ. ನಾವು ಎಲ್ಲ ದೇವರುಗಳಿಗೂ ಪ್ರಾರ್ಥಿಸಿದ್ದೆವು,ಆದರೆ ದೇವರಿಗೆ ನಮ್ಮ ಮೊರೆ ಕೇಳಿಸಲಿಲ್ಲ. ಅವನ ಕುಟುಂಬ ತುಂಬ ಆಘಾತಕ್ಕೊಳಗಾಗಿದೆ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಹುತಾತ್ಮ ಯೋಧನ ಸ್ನೇಹಿತ ಮಂಜುನಾಥ ಹೇಳಿದರು.
ನಮಗೆ ತೀವ್ರ ದುಃಖವಾಗಿದೆ, ಆದರೆ ಅಷ್ಟೇ ಹೆಮ್ಮೆಯೂ ಇದೆ. ಹನುಮಂತಪ್ಪ ದೇಶ ರಕ್ಷಣೆಯ ಕರ್ತವ್ಯದಲ್ಲಿ ಹುತಾತ್ಮನಾಗಿದ್ದಾನೆ. ಅವನು ನಮ್ಮೂರಿನ ಮಗ ಎಂದು ಇನ್ನೋರ್ವ ಹೇಳಿದರು.
ಹಿಮರಾಶಿಯಲ್ಲಿ ಹನುಮಂತಪ್ಪ ಜೀವಂತವಾಗಿ ಪತ್ತೆಯಾದಾಗಿನಿಂದ ಧಾರವಾಡ ಜಿಲ್ಲೆಯ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಅವರ ಚೇತರಿಕೆ ಮತ್ತು ವಾಪಸಾತಿಗಾಗಿ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು. ಇದು ಶಾಲಾಮಕ್ಕಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಹಲವಾರು ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು ಹನುಮಂತಪ್ಪನವರ ಚೇತರಿಕೆಗಾಗಿ ಹಾರೈಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News