ವಿಶ್ವಾಸ್ ಹುಟ್ಟುಹಬ್ಬಕ್ಕೆ ಎಎಪಿ ನಾಯಕ ಗೈರು
ಅದು ಎಎಪಿ ನಾಯಕರೊಬ್ಬರ ಹುಟ್ಟುಹಬ್ಬದ ಸಂತೋಷಕೂಟವಾಗಿತ್ತು. ಆದರೆ ವಿಜಯ್ ಗೋಯಲ್,ವಿಜೇಂದರ್ ಗುಪ್ತಾರಂತಹ ಹಿರಿಯ ಬಿಜೆಪಿ ನಾಯಕರೂ ಅಲ್ಲಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ದಿಲ್ಲಿ ಪೊಲೀಸ್ ಆಯುಕ್ತ ಬಿ.ಎಸ್.ಬಾಸ್ಸಿ ಕೂಡಾ ಉಪಸ್ಥಿತರಿದ್ದರು. ಹೌದು. ಎಎಪಿ ನಾಯಕ ಕುಮಾರ್ ವಿಶ್ವಾಸ್‌ರ 46ನೆ ಹುಟ್ಟುಹಬ್ಬವು ನಿಜಕ್ಕೂ ಗಣ್ಯಅತಿಥಿಗಳಿಂದ ತುಂಬಿತುಳುಕುತ್ತಿತ್ತು. ಆದರೆ ಅತಿ ಗಣ್ಯ ವ್ಯಕ್ತಿಯಾದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ಆಗಮಿಸಿರಲಿಲ್ಲ. ಕೇಜ್ರಿವಾಲ್ ಬರುವರೆಂದು ಹಲವು ಎಎಪಿ ನಾಯಕರು ಕಾದುಕುಳಿತಿದ್ದರು. ಆದರೆ ಅವರು ಬರಲೇ ಇಲ್ಲ. ಈ ಮೂಲಕ ಕೇಜ್ರಿವಾಲ್ ಅವರು ಪಕ್ಷದ ನಾಯಕರು ಒಂದೋ ತೆಪ್ಪಗಿರಬೇಕು ಇಲ್ಲವೇ ಹೊರನಡೆಯಿರಿ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಕೇಜ್ರಿವಾಲ್ ಅವರ ಮನಸ್ಥಿತಿಯನ್ನು ಅಂದಾಜಿಸಲು ವಿಶ್ವಾಸ್ ಅವರು ಪಕ್ಷದ ಹಿರಿಯ ನಾಯಕರನ್ನು ಆಹ್ವಾನಿಸಿದ್ದರು.ತನಗೆ ತಿಳಿಸದೆಯೇ ಪಕ್ಷದ ಬದ್ಧವೈರಿಗಳನ್ನು ಹುಟ್ಟುಹಬ್ಬದ ಕೂಟಕ್ಕೆ ಆಹ್ವಾನಿಸಿರುವುದನ್ನು ಕೇಜ್ರಿವಾಲ್ ಗಂಭೀರವಾಗಿ ಪರಿಗಣಿಸಿದ್ದಾರೆಂದು, ಎಎಪಿ ನಾಯಕರು ವಿಶ್ವಾಸ್‌ಗೆ ತಿಳಿಸಿದರೆನ್ನಲಾಗಿದೆ. ವಿಶ್ವಾಸ್ ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆಂದೂ ಹೇಳಲಾಗುತ್ತಿದೆ. ಅವರು ನಿಜವಾಗಿಯೂ ಹಾಗೆ ಮಾಡುವರೇ ಅಥವಾ ಅದೊಂದು ಮಾಮೂಲಿ ಹುಟ್ಟುಹಬ್ಬದ ಕೂಟವಾದಿತೇ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ ವಿಶ್ವಾಸ್ ಕೇಜ್ರಿವಾಲ್‌ಗೆ ಇರಿಸುಮುರಿಸುಂಟು ಮಾಡಿರುವುದಂತೂ ನಿಜ.