ಬದುಕಿನ ಕೊನೆಯ ಕ್ಷ ಣದವರೆಗೂ ಸಮಾಜಮುಖಿಯಾಗಿ ಬದುಕಿದ ಸಿ.ಎಚ್. ಕೃಷ್ಣಶಾಸ್ತ್ರಿ ಬಾಳಿಲ

Update: 2016-02-14 18:39 GMT

 ಮೊನ್ನೆ ಮೊನ್ನೆಯಷ್ಟೇ ಮಂಗಳೂರಿನಲ್ಲಿ ನಡೆದ ‘ಸಹಬಾಳ್ವೆ ಸಾಗರ’ ರಾಷ್ಟ್ರೀಯ ಸಮಾವೇಶದ ಪೂರ್ವತಯಾರಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿ, ಸಮಾವೇಶದ ದಿನ ಮುಂದಿನ ಸಾಲಿನಲ್ಲಿ ಕುಳಿತು ವೇದಿಕೆಯ ಮೇಲಿನ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಗಮನಿಸುತ್ತಾ, ಇಷ್ಟವೆನಿಸಿದ ಮಾತುಗಳಿಗೆ ತಲೆದೂಗುತ್ತಾ, ಚಪ್ಪಾಳೆ ತಟ್ಟುತ್ತಾ ಸಂಯೋಜಕರನ್ನು ಹುರಿದುಂಬಿಸುತ್ತಿದ್ದ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲರು ನಮ್ಮನ್ನು ಅಗಲಿದ್ದಾರೆ ಎನ್ನುವುದನ್ನು ಯಾಕೋ ಈಗಲೂ ನಂಬಲು ಆಗುತ್ತಲೇ ಇಲ್ಲ.
ಹೀಗೆ ನಂಬಲಾಗದಿರಲು ಕಾರಣವೂ ಇದೆ. ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸುದೀರ್ಘ 27 ವರ್ಷ (1972-1999) ಶಿಕ್ಷಕನಾಗಿ ದುಡಿದು, ನಿವೃತ್ತಿಹೊಂದಿದ ಕೆಲ ವರ್ಷಗಳ ತರುವಾಯ ಮಂಗಳೂರು ನಗರದಲ್ಲಿ ನೆಲೆಸಲು ಬಂದ ಶಾಸ್ತ್ರಿಗಳು ಹಿಂದೆಂದಿಗಿಂತಲೂ ಹೆಚ್ಚು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಸಾರ್ವಜನಿಕ ಜೀವನದಲ್ಲಿ ಮಾತು ಮತ್ತು ಕೃತಿಯ ನಡುವೆ ಸಂಬಂಧವಿಲ್ಲದಂತೆ ಬದುಕುವವರು, ಜನರನ್ನು ವಂಚಿಸುವ ಕಾವೀಧಾರಿಗಳು, ಶಾಂತಿ ಸಹಬಾಳ್ವೆಯ ಬದುಕನ್ನು ಕೆಡಿಸುವ ಕೋಮುವಾದಿಗಳು, ಶಿಕ್ಷಣದ ದಿಕ್ಕು ತಪ್ಪಿಸುವವರು ಮೊದಲಾದವರನ್ನು ಕಂಡರಾಗದ ಶಾಸ್ತ್ರಿಗಳು ಮೊನಚು ಬರೆವಣಿಗೆಯ ಮೂಲಕ ತಮ್ಮದೇ ಆದ ರೀತಿಯಲ್ಲಿ ಅವರ ವಿರುದ್ಧ ಹೋರಾಟ ನಡೆಸಿದವರು; ಹಾಗೆ ಹೋರಾಡುವವರೊಂದಿಗೆ ಗುರುತಿಸಿಕೊಂಡು ಅವರಿಗೆ ಮಾರ್ಗದರ್ಶನ, ಬೆಂಬಲ ನೀಡಿದವರು. ತಮ್ಮ ಸತ್ಯನಿಷ್ಠುರ ಲೇಖನಗಳನ್ನು ಕೆಲ ಪತ್ರಿಕೆಗಳು ಪ್ರಕಟಿಸಲು ಮುಂದೆ ಬರದಿದ್ದಾಗ ‘ವಾರ್ತಾಭಾರತಿ’ಯಂತಹ ಜನಪರ ಪತ್ರಿಕೆಗಳನ್ನು ನೆಚ್ಚಿಕೊಂಡು ಅವುಗಳಲ್ಲಿ ನಿರಂತರವಾಗಿ ಬರೆಯುತ್ತಿದ್ದವರು. ದಕ್ಷಿಣಕನ್ನಡದಲ್ಲಿ ಕೋಮುಶಕ್ತಿಗಳು ಮೇಲುಗೈ ಸಾಧಿಸುವಂತಾಗುವಲ್ಲಿ, ಇವನ್ನೆಲ್ಲ ನೋಡುತ್ತ ಮೌನವಾಗಿ ಕುಳಿತ ಇಲ್ಲಿನ ಪ್ರಜ್ಞಾವಂತ ಹಿರಿಯರ ಪಾತ್ರವೂ ಇದೆ ಎಂಬ ದೂರು ಕೇಳಿಬರುತ್ತಿದ್ದ ಹೊತ್ತಿನಲ್ಲಿ, ಎಲ್ಲರೂ ಹಾಗಿಲ್ಲ, ನಾವು ಭರವಸೆ ಕಳೆದುಕೊಳ್ಳಬೇಕಾಗಿಲ್ಲ, ನಮ್ಮಿಂದಿಗೆ ಅಮೃತಸೋಮೇಶ್ವರ, ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ ಮೊದಲಾದ ಕೆಲ ಸಾಕ್ಷಿಪ್ರಜ್ಞೆಗಳು ಇದ್ದೇ ಇವೆ ಎಂದು ನಾವೆಲ್ಲ ಎದೆಯುಬ್ಬಿಸಿ ಹೇಳುವಂತಾಗಿತ್ತು. ಇಲ್ಲಿ ಅವರಂಥವರ ಅಗತ್ಯ ಇನ್ನೂ ಇದೆ, ತುಂಬಾ ಇದೆ ಎಂಬ ಹೊತ್ತಿನಲ್ಲಿಯೇ, ತಾನು ಭೂಮಿಗೆ ಬಂದ ಕೆಲಸವಾಯಿತು ಎಂಬಂತೆ ಧುತ್ತೆಂದು ಎದ್ದು ನಡೆದೇಬಿಟ್ಟರು ಶಾಸ್ತ್ರಿಗಳು!
ಲೇಖಕ, ಚಿಂತಕ, ಶಿಕ್ಷಣತಜ್ಞ ಸಿ.ಎಚ್. ಕೃಷ್ಣಶಾಸ್ತ್ರಿಗಳು (1941-2016) ಕ್ರಿಯಾಶೀಲತೆಗೆ, ಜೀವನೋತ್ಸಾಹಕ್ಕೆ ಇನ್ನೊಂದು ಹೆಸರಿನಂತೆ ಬದುಕಿದವರು. ಶಿಕ್ಷಣ, ಸಾಹಿತ್ಯ, ಕಲೆ ಇತ್ಯಾದಿ ಚಟುವಟಿಕೆಗಳು ಜಿಲ್ಲೆಯ ಎಲ್ಲೇ ನಡೆಯಲಿ ಅಲ್ಲಿ ಹಾಜರಾಗಿ ತಮ್ಮ ಜ್ಞಾನ ವಿಸ್ತರಿಸಿಕೊಳ್ಳುತ್ತಿದ್ದವರು. ಜಿಲ್ಲೆಯ ಮಟ್ಟಿಗೆ ಶಿಕ್ಷಣ ಎಂಬ ಪದ ಕಿವಿಗೆ ಬಿದ್ದರೆ ಸಾಕು ತಕ್ಷಣ ನೆನಪಾಗುವ ಮುಖ್ಯ ಹೆಸರು ಶಾಸ್ತ್ರಿಗಳದ್ದು. ಪಾಠ ಬೋಧನೆಯ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಾಗಾರವಿರಲಿ, ವಿಚಾರಸಂಕಿರಣವಿರಲಿ ಅಲ್ಲಿ ಶಾಸ್ತ್ರಿಗಳು ಅನಿವಾರ್ಯ ಎಂಬಂತಹ ಮಹತ್ತ್ವ ಅವರದು. ಇದಕ್ಕೆ ಮುಖ್ಯ ಕಾರಣ ಪ್ರಾಥಮಿಕ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅವರ ಜ್ಞಾನ ಮತ್ತು ಅನುಭವ; ಆಧುನಿಕ ಮತ್ತು ವಿನೂತನ ಚಿಂತನೆ. ಅವರು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಶಿಕ್ಷೆ ನೀಡುವುದಕ್ಕೆ ವಿರುದ್ಧವಿದ್ದವರು. ಶಿಕ್ಷೆಯಿಂದ ಯಾವುದೇ ಪ್ರಯೋಜನವಿಲ್ಲ, ಪ್ರೀತಿಯಿಂದ ಮಕ್ಕಳನ್ನು ಗೆಲ್ಲಬೇಕು, ಹಾಗೆ ಮಕ್ಕಳ ಮಿದುಳಿಗೆ ಹೊಕ್ಕ ಕಲಿಕೆ ಮಾತ್ರ ಶಾಶ್ವತ ಎಂಬ ನಿಲುವು ಹೊಂದಿದ್ದವರು. ಶಾಲೆಗಳಲ್ಲಿ ನೀಡಲಾಗುವ ರ್ಯಾಂಕುಗಳು ಮತ್ತು ನಡೆಸಲಾಗುವ ಸ್ಪರ್ಧೆಗಳು ಅವೈಜ್ಞಾನಿಕ ಮಾತ್ರವಲ್ಲ ಅಮಾನವೀಯ ಎಂಬ ನೆಲೆಯಲ್ಲಿ ಅವನ್ನು ಖಂಡತುಂಡವಾಗಿ ವಿರೋಧಿಸುತ್ತಾ ಬಂದವರು. ಶಿಕ್ಷಣದ ಬಗ್ಗೆ ದೂರದೃಷ್ಟಿಯಿಂದ ಕೂಡಿದ ಅವರ ಚಿಂತನೆಗಳನ್ನು ತಿಳಿದುಕೊಳ್ಳಬೇಕಾದರೆ ಅವರ ಶಿಕ್ಷಣ ನೋಟ ಕೃತಿಯನ್ನು ಓದಬೇಕು.

ಮೂಲತಃ ಅಡ್ಯನಡ್ಕ ಬಳಿಯ ಮೂಡಂಬೈಲಿನವರಾದ (ಚಕ್ರಕೋಡಿ ಮನೆತನದವರು) ಶಾಸ್ತ್ರಿಗಳು ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸುದೀರ್ಘ ಕಾಲ ಬೋಧನೆ ನಡೆಸಿ ಬಾಳಿಲದವರೇ ಆಗಿಬಿಟ್ಟವರು (ಅವರ ಹೆಸರಿನೊಂದಿಗೆ ಬಾಳಿಲ ಅಂಟಿಕೊಳ್ಳಲು ಇದೇ ಕಾರಣ). ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಎಲ್ಲಕ್ಕಿಂತಲೂ ಹೆಚ್ಚಾಗಿ ಸುತ್ತಲ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಪ್ರೀತಿಪಾತ್ರರಾದವರು. ಮೂಡಂಬೈಲಿನ ಮನೆಯಲ್ಲಿ ಗ್ರಂಥಾಲಯವೊಂದನ್ನು ತೆರೆದು ಊರವರಲ್ಲಿ ಓದುವ ಆಸಕ್ತಿ ಬೆಳೆಸಿದ ಮಹನೀಯರು ಇವರು (ಈ ಗ್ರಂಥಾಲಯದ ಬಗ್ಗೆ ನಾಡಿನ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಲೇಖನವೇ ಪ್ರಕಟವಾಗಿತ್ತು). ಇಂಗ್ಲಿಷ್ ಬಗ್ಗೆ ಆಳ ಜ್ಞಾನ ಹೊಂದಿದ್ದ ಅವರು ವ್ಯಾಕರಣಬದ್ಧ ಇಂಗ್ಲಿಷ್ ಬಳಕೆ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾಗಿದ್ದರು. ಇಂಗ್ಲಿಷ್ ಭಾಷಾ ಬಳಕೆಯಲ್ಲಿ ಮಾಡುವ ಚಿಕ್ಕಪುಟ್ಟ ದೋಷಗಳ ಬಗ್ಗೆ ಅವರು ಎಚ್ಚರಿಸುತ್ತಾ ಅವನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಿದ್ದವರು (ಮಾಧ್ಯಮಗಳು ಡೆಂಗ್ಯು ಎಂದು ತಪ್ಪಾಗಿ ಬರೆಯುತ್ತಿವೆ. ಅದು ಡೆಂಗಿ ಎಂದಾಗಬೇಕು ಎಂದು ಅವರು ಇತ್ತೀಚೆಗೆ ಒಂದು ಲೇಖನವನ್ನೇ ಬರೆದಿದ್ದರು). ದಕ್ಷಿಣಕನ್ನಡ ಜಿಲ್ಲೆಯ ಪತ್ರಿಕಾ ಓದುಗರಿಗೆ ಶಾಸ್ತ್ರಿಗಳದು ತೀರಾ ಪರಿಚಿತ ಹೆಸರು. ಸರಿಸುಮಾರು ಮೂರು ನಾಲ್ಕು ದಶಕಗಳಲ್ಲಿ, ಅವರು ವಿಶೇಷವಾಗಿ ಶಿಕ್ಷಣ ಸಂಬಂಧಿಯಾದ ಎಷ್ಟು ಲೇಖನಗಳನ್ನು ಬರೆದಿರಬಹುದು ಎಂಬುದನ್ನು ಲೆಕ್ಕವಿಟ್ಟವರಿಲ್ಲ. ಅವರ ವಿದ್ವತ್ತಿಗೆ ಮನ್ನಣೆಯೆಂಬಂತೆ 2010 ರಲ್ಲಿ ನಡೆದ 14ನೆ ಬಂಟ್ವಾಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ಆರಿಸಲಾಯಿತು. ಇಷ್ಟೊಂದು ವಿದ್ವತ್ತು ಮತ್ತು ಸಾಧನೆಯ ಹೊರತಾಗಿಯೂ ಎನಗಿಂತ ಕಿರಿಯರಿಲ್ಲ ಎಂಬಂತಹ ವಿನಯವನ್ನು, ಸ್ನೇಹಶೀಲ ವ್ಯಕ್ತಿತ್ವವನ್ನು ರೂಢಿಸಿಕೊಂಡವರು ಅವರು.
 ನಿಧನದ ಬಳಿಕ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನಮಾಡಬೇಕು ಎಂದು ಸೂಚಿಸುವ ಮೂಲಕ ಸಾವಿನಲ್ಲೂ ಆದರ್ಶ ಮೆರೆದವರು ಶಾಸ್ತ್ರಿಗಳು. ಅವರ ಕಣ್ಮರೆಯಿಂದ ಒಬ್ಬ ಶಿಕ್ಷಣತಜ್ಞ, ಜನಪರ ಚಿಂತಕನನ್ನು ಮಾತ್ರ ಕಳೆದುಕೊಂಡಿರುವುದಲ್ಲ, ಈ ಕ್ಷೇತ್ರದಲ್ಲಿ ಕೆಲಸಮಾಡುವವರು ಒಬ್ಬ ಉತ್ತಮ ಮಾರ್ಗದರ್ಶಕ ಮತ್ತು ಪ್ರಬಲ ಬೆಂಬಲಿಗನನ್ನೂ ಕಳೆದುಕೊಂಡಂತಾಗಿದೆ. ಯಾಕೋ ಅವರು ಇನ್ನಷ್ಟು ಕಾಲ ನಮ್ಮಿಂದಿಗಿರಬೇಕಾಗಿತ್ತು ಎಂದು ಮನಸು ಮತ್ತೆ ಮತ್ತೆ ಹೇಳುತ್ತಿದೆ. ಏನೇ ಇರಲಿ, ಅವರ ಸಮಾಜಮುಖಿ ಚಿಂತನೆ, ಕ್ರಿಯಾಶೀಲ ವ್ಯಕ್ತಿತ್ವ ನಮಗೆ ಪ್ರೇರಣಾಶಕ್ತಿಯಾಗಬೇಕು. ಅನುಕರಣೀಯವೂ ಅನುಸರಣೀಯವೂ ಆದ ಹಾದಿಯೊಂದನ್ನು ಅವರು ತೋರಿಸಿಕೊಟ್ಟಿದ್ದಾರೆ. ಆ ಹಾದಿಯಲ್ಲಿ ನಡೆಯುವುದು ನಮಗೆ ಬಿಟ್ಟ ವಿಚಾರ. ಆ ಹಾದಿಯಲ್ಲಿ ನಡೆಯುವುದಕ್ಕಿಂತ ಪ್ರಾಯಶಃ ಇನ್ನೊಂದು ಉತ್ತಮ ಶ್ರದ್ಧಾಂಜಲಿ ಅವರಿಗಿರಲಾರದೇನೋ.

Writer - ಶ್ರೀನಿವಾಸ ಕಾರ್ಕಳ

contributor

Editor - ಶ್ರೀನಿವಾಸ ಕಾರ್ಕಳ

contributor

Similar News