ಬತ್ತುತ್ತಿರುವ ನದಿಗಳು... ಖಾಲಿಯಾಗುತ್ತಿರುವ ಜಲಾಶಯ..!

Update: 2016-02-15 18:22 GMT

ಇದು ಉತ್ತರ ಕರ್ನಾಟಕದ ನೀರಿನ ದುಃಸ್ಥಿತಿ...

ಕಳೆದ ನಾಲ್ಕು ದಶಕಗಳ ಬಳಿಕ ಜಿಲ್ಲೆಯ ಜನತೆಯ ಜೀವ ಜಲವಾಗಿರುವ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಕೈಕೊಟ್ಟ ಮುಂಗಾರು ಹಾಗೂ ಹಿಂಗಾರು ಮಳೆಯಿಂದಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಸಂಗ್ರಹಣವಾಗಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗೆ ನೀರು ಪೂರೈಕೆಯಷ್ಟೇ ಅಲ್ಲ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಕೆಲ ತಾಲೂಕುಗಳಿಗೆ ಕುಡಿಯುವ ನೀರು ಸರಬರಾಜು ಕೂಡ ಅಸಾಧ್ಯ ಎಂಬ ಸ್ಥಿತಿ ಉದ್ಭವಿಸಿದೆ.
ಜನರಿಗೆ ಕುಡಿಯುವ ನೀರಿನ ತೊಂದರೆ. ಜಾನುವಾರುಗಳಿಗೆ ಮೇವಿನ ಕೊರತೆ. ಕುಡಿಯುವ ನೀರಿಲ್ಲದೆ ಜನರು ಗುಳೇ ಹೊರಟರೆ, ಮೇವಿಲ್ಲದೆ ಜಾನುವಾರುಗಳನ್ನು ಮಾರುಕಟ್ಟೆಯಲ್ಲಿ ಮಾರುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಪ್ರಸಕ್ತ ವರ್ಷ ಸಕಾಲಕ್ಕೆ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜನ, ಜಾನುವಾರುಗಳು ಸಂಕಷ್ಟ ಎದುರಿಸುವ ಪ್ರಸಂಗ ಬಂದೊಂದಗಿದೆ.
ಹಿಡಕಲ್ ಜಲಾಶಯದಲ್ಲಿ ಪ್ರಸ್ತುತ (ಕೇವಲ ಹಿಡಕಲ್ ಜಲಾಶಯದಲ್ಲಿ) 11 ಟಿಎಂಸಿ ಹಾಗೂ ನವೀಲು ತೀರ್ಥ ಜಲಾಶಯದಲ್ಲಿ 4 ಟಿಎಂಸಿ ನೀರು ಸಂಗ್ರಹವಿದೆ ಹೀಗಾಗಿ ಲಭ್ಯವಿರುವ ನೀರಿನಲ್ಲಿ ಬೆಳಗಾವಿ ನಗರ, ಹುಕ್ಕೇರಿ, ಸಂಕೇಶ್ವರ, ಗೋಕಾಕ, ರಾಯಬಾಗ ಹಾಗೂ ಬಾಗಲಕೋಟೆ, ಮುಧೋಳ ಹುಬ್ಬಳ್ಳಿ-ಧಾರವಾಡ, ಗದಗ, ರಾಮದುರ್ಗ, ಸವದತ್ತಿ, ಬೈಲಹೊಂಗಲ ನಗರಗಳಿಗೆ ನೀರು ಪೂರೈಸಬೇಕು. ಪ್ರಸಕ್ತ ವರ್ಷದ ಭೀಕರ ಬರದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರಿನ ಸಂಗ್ರಹ ಸಾಧ್ಯವಾಗಿಲ್ಲ. ಕಳೆದ ಮೂರು ತಿಂಗಳ ಹಿಂದೆ ಕೃಷಿ ಚಟುವಟಿಕೆಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಕುಡಿಯುವ ನೀರಿಗೂ ಲೆಕ್ಕ ಮಾಡಿ ನೀರು ಪೂರೈಸುವ ಸ್ಥಿತಿ ಹಿಡಕಲ್ ಜಲಾಶಯದ ಅಧಿಕಾರಿಗಳದ್ದಾಗಿದೆ.
ಈಗಾಗಲೇ ಜಲಾಶಯದಲ್ಲಿ ಕುಡಿಯುವ ನೀರಿಗೆ ಮಾತ್ರ ನೀರು ಲಭ್ಯವಿದ್ದು, ಕಾಲುವೆಯ ನೀರನ್ನು ಕೃಷಿ ಚಟುವಟಿಕೆಗೆ ಬಳಕೆ ಮಾಡಿದರೆ ಮಾರ್ಚ್, ಏಪ್ರಿಲ್ ವೇಳೆಗೆ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆ ಹೆಚ್ಚಾಗಲಿದೆ. ಹೀಗಾಗಿ ನೀರು ಪೋಲಾಗುವುದರ ಮೇಲೆ ಅಧಿಕಾರಿಗಳು ನಿಗಾವಹಿಸುವ ಅಗತ್ಯವೂ ಇದೆ. ಇನ್ನು ಬೆಳಗಾವಿ ನಗರ ಸೇರಿದಂತೆ ಹುಕ್ಕೇರಿ ಹಾಗೂ ಸಂಕೇಶ್ವರಕ್ಕೆ ಕುಡಿಯುವ ನೀರಿಗಾಗಿ 3 ಟಿಎಂಸಿ ನೀರು ಸಂಗ್ರಹಿಸಿಡಲಾಗಿದೆ.
ಕಳೆದ ಒಂದು ವರ್ಷದಿಂದ ಶಾಲಾ ಮಕ್ಕಳಿಗೆ ಕುಡಿಯಲು, ಹಾಗೂ ಬಿಸಿಯೂಟ ಅಡುಗೆ ಮಾಡಲು ನೀರಿಲ್ಲದೆ ನಿತ್ಯ ಶಾಲಾ ಮಕ್ಕಳು ನೀರು ಕುಡಿಯಲು ಹರಸಾಹಸ ಪಡುವಂತಾಗಿತ್ತುೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ಕೊಳವೆ ಬಾವಿಗೆ ಕೈಪಂಪ್ ಅಳವಡಿಸಿದ್ದು, ಆದರೆ ನೀರು ತಳ ಮಟ್ಟದಲ್ಲಿರುವುದರಿಂದ ಆ ಕೊಳವೆ ಬಾವಿಯಲ್ಲಿ ನೀರಿಲ್ಲದ್ದಂತಾಗಿದೆ. ಪಕ್ಕದ ಜಮೀನಿನ ಮಾಲಕರ ಕೊಳವೆ ಬಾವಿಯಿಂದ ನೀರು ತರುವಂತಹ ಪರಿಸ್ಥ್ಥಿತಿ ನಿರ್ಮಾಣವಾಗಿದೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವ ಹೈನುಗಾರಿಕೆಗೆ ಮೇವಿನ ಕೊರತೆ ಬಿಸಿ ಮುಟ್ಟಿಸಿದ್ದು, ರೈತರು ಮೇವಿಗಾಗಿ ಪರದಾಡುವಂತಹ ಪ್ರಸಂಗ ಬಂದೊದಗಿದೆ. ಜಿಲ್ಲೆಯ ಪ್ರತಿಯೊಂದೂ ಗ್ರಾಮದ ರೈತರು ಒಕ್ಕಲುತನದ ಜೊತೆಗೆ ಹೈನುಗಾರಿಕೆ ಉದ್ಯಮ ಮಾಡುತ್ತಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಭೀಕರ ಬರಗಾಲದಿಂದಾಗಿ ಎಮ್ಮೆಗಳನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪಶುಖಾದ್ಯ ಬೇಲೆಗಳೂ ಗಗನಕ್ಕ್ಕೇರಿದ್ದು, ಹೈನುಗಾರಿಕೆ ಸಾಕಪ್ಪಾ ಸಾಕು ಎನ್ನುವ ಪರಿಸ್ಥಿತಿ ರೈತರಿಗೆ ಬಂದೂದಗಿದೆ.
ಎಮ್ಮೆ ಮತ್ತು ಆಕಳನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪ್ರಸಂಗ ಬಂದೊದಗಿದೆ. ಮೇವಿನ ಕೊರತೆಯಿಂದಾಗಿ ಎಮ್ಮೆಗಳನ್ನು ಮಾರಾಟ ಮಾಡಿದ್ದರು. ಮತ್ತೆ ಈ ವರ್ಷ ರೈತರಿಗೆ ಮಾರಾಟ ಮಾಡುವ ಪ್ರಸಂಗ ಬಂದೊದಗಿದೆ. ರೈತರು ಹೈನುಗಾರಿಕೆಯನ್ನು ಉಳಿಸಿಕೊಳ್ಳಲು ದುಬಾರಿ ಬೆಲೆ ನೀಡಿ ಖರೀದಿಸಲು ಮುಂದಾಗುತ್ತಿದ್ದಾರೆ.
ಕಳೆದ 2010 ರಿಂದ 2016 ರವರೆಗೆ ಮಳೆಯ ಪ್ರಮಾಣ ಕುಸಿಯುತ್ತಲೇ ಬಂದಿದೆ. ಆದರೆ ಈ ವರ್ಷದ ಮಳೆಗಾಲ ಸಮರ್ಪಕವಾಗದೆ ಭೀಕರ ಬರಗಾಲ ಬಂದಿದ್ದು, ಸಾರ್ವಜನಿಕರಿಗೆ, ರೈತರ ಜೊತೆಗೆ ಜಾನುವಾರುಗಳಿಗೂ ಬಿಸಿ ಮುಟ್ಟಿಸಿದೆ. ಮುಂದಾಲೋಚನೆ ಮಾಡಿ ಮೇವು ಅತ್ತ-ಇತ್ತ ತಿರುಗಾಡಿ ಸಂಗ್ರಹ ಮಾಡುವ ಪ್ರಸಂಗ ಬಂದೊದಗಿದೆ.
ಸರಕಾರದ ಮತ್ತು ಅಧಿಕಾರಿಗಳ ದ್ವಂದ್ವ ನೀತಿಯಿಂದ ಜಿಲ್ಲೆಯ ಜನತೆ ಕೆಲಸ ಅರಸಿಕೊಂಡು ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಗುಳೇ ಹೊರಟರೆ. ಜಾನುವಾರುಗಳಿಗೆ ಮೇವಿಲ್ಲದೆ ಅವುಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸರಕಾರ ಮತ್ತು ಅಧಿಕಾರಿಗಳು ಇನ್ನಾದರೂ ಜನರ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸುವ ಕಾಯಕಕ್ಕೆ ಮುಂದಾಗಬೇಕಾಗಿದೆ.

ನದಿಗಳ ಸ್ವಚ್ಛತೆ ಕುರಿತು ಯೋಜನೆಗಳನ್ನು ರೂಪಿಸಬೇಕು.
ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬರಗಾಲದ ಛಾಯೆ ಆವರಿಸಿದ್ದು, ತಾಲೂಕಿನಲ್ಲಿನ ಪ್ರಮುಖ ನದಿಗಳಲ್ಲೊಂದಾದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಬತ್ತಿ ಹೋಗಿರುವುದರಿಂದ ರೈತರಲ್ಲಿ ನದಿ ತೀರದ ಜನತೆಯಲ್ಲಿ ಆತಂಕ ಮೂಡಿಸಿದೆ. ಈ ಬಾರಿ ಫೆಬ್ರವರಿ ತಿಂಗಳಲ್ಲಿಯೇ ನದಿಯಲ್ಲಿನ ನೀರಿನ ಮಟ್ಟ ಕುಸಿಯುತ್ತಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ. ಸಾಮಾನ್ಯವಾಗಿ ಜೂನ್ ಕೊನೆಯ ವಾರದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ನದಿಗಳಲ್ಲಿ ಹೊಸ ನೀರು ಬರಲು ಆರಂಭವಾಗುತ್ತದೆ. ಆದರೆ ಫೆಬ್ರವರಿ ಮೊದಲ ವಾರದಲ್ಲೇ ಈ ಪರಿಸ್ಥಿತಿ ಬಂದೊದಗಿದೆ. ಇನ್ನು ಫೆಬ್ರವರಿ, ಮಾರ್ಚ, ಎಪ್ರಿಲ್ ಮತ್ತು ಮೇ ಹೀಗೆ ನಾಲ್ಕು ತಿಂಗಳ ಕಾಲ ಹೇಗೆ ಕಳೆಯಬೇಕೆಂಬ ಪ್ರಶ್ನೆ ಜನರನ್ನು ಕಾಡುತ್ತಿದೆ...
ಬರುವ ದಿನಮಾನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ಖಚಿತ. ನದಿಗಳಲ್ಲಿ ತ್ಯಾಜ್ಯ ನೀರು ಹೋಗದಂತೆ ಮತ್ತು ನೈರ್ಮಲ್ಯ ಕಾಪಾಡಲು ಸಾರ್ವಜನಿಕರು, ರೈತರು, ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು. ನದಿಗಳು ರೈತರ ಜೀವನಾಡಿ. ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಅದರಂತೆ ಸಂಬಂಧ ಪಟ್ಟ ಇಲಾಖೆಗಳು ನದಿಗಳ ಸ್ವಚ್ಛತೆ ಕುರಿತು ಯೋಜನೆಗಳನ್ನು ರೂಪಿಸಬೇಕು...

ಕುಡಿಯಲು ಮಾತ್ರ ನೀರು ಬಳಕೆ...
ಜಿಲ್ಲೆಯ 15 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹಿಡಕಲ್ ಜಲಾಶಯದಲ್ಲಿ 11 ಟಿಎಂಸಿ ಹಾಗೂ ನವಿಲು ತೀರ್ಥ ಜಲಾಶಯದಲ್ಲಿ 4 ಟಿಎಂಸಿ ನೀರು ಸಂಗ್ರಹವಿದೆ. ಅದನ್ನು ಕುಡಿಯುವ ನೀರಿಗಾಗಿ ಮಾತ್ರ ಉಪಯೋಗಕ್ಕೆ ಬಳಸಲಾಗುತ್ತದೆ. ಈ ವರ್ಷ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಜಿಲ್ಲೆಯ ಘಟಪ್ರಭಾ ಜಲಾಶಯದಲ್ಲಿನ ನೀರನ್ನು ಬೆಳಗಾವಿ, ಹುಕ್ಕೇರಿ, ಸಂಕೇಶ್ವರ, ರಾಯಬಾಗ ಹಾಗೂ ಬಾಗಲಕೊಟೆ ನಗರಗಳಿಗೆ ಹಾಗೂ ಮಲಪ್ರಭಾ ಜಲಾಶಯದಲ್ಲಿನ ನೀರನ್ನು ಸವದತ್ತಿ, ಬೈಲಹೊಂಗಲ್, ರಾಮದುರ್ಗ ತಾಲೂಕಿನ ಕೆಲ ಗ್ರಾಮಗಳಿಗೆ, ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಹಾಗೂ ಗದಗ, ಬಾಗಲಕೋಟೆ ಜಿಲ್ಲೆಯಲ್ಲಿನ ಗ್ರಾಮಗಳಿಗೆ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿಗೆ ಮಾತ್ರ ಸರಬರಾಜು ಮಾಡಲಾಗುತ್ತದೆ.
  ಎನ್.ಜಯರಾಮ, ಜಿಲ್ಲಾಧಿಕಾರಿ ಬೆಳಗಾವಿ

Writer - ಕೆ.ಶಿವು ಲಕ್ಕಣ್ಣವರ

contributor

Editor - ಕೆ.ಶಿವು ಲಕ್ಕಣ್ಣವರ

contributor

Similar News