ಮುಝಫ಼ರ್ ನಗರ್ ಗಲಭೆ ವಿಚಾರಣೆ : ಹಣ, ಬೆದರಿಕೆ ಮೂಲಕ ಸಂತ್ರಸ್ಥರ ಬಾಯಿ ಮುಚ್ಚಿಸುತ್ತಿರುವ ರಾಜಕೀಯ

Update: 2016-02-17 12:28 GMT

ಲಕ್ನೋ: ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಮೂರು ವರ್ಷದ ಹಿಂದೆ ಭುಗಿಲೆದ್ದ ಹಿಂಸಾಚಾರ 60 ಮಂದಿಯನ್ನು ಬಲಿತೆಗೆದುಕೊಂಡು, ಸಾವಿರಾರು ಕುಟುಂಬಗಳನ್ನು ನಿರ್ವಸತಿಗರನ್ನಾಗಿಸಿದ ಘಟನೆಗೆ ಮೂರು ವರ್ಷ ಸಂದಿದೆ. ಆದರೆ ಇಂಥ ಭೀಕರ ಘಟನೆ ಬಗೆಗಿನ ತನಿಖೆ ಕುಂಟುತ್ತಲೇ ಸಾಗಿದ್ದು, ಹಣಕಾಸು ಹಾಗೂ ರಾಜಕೀಯ ಬೆದರಿಕೆ, ತನಿಖೆಗೆ ತಡೆಯಾಗಿದೆ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.

ಹತ್ತು ಗಲಭೆ ಪ್ರಕರಣಗಳಲ್ಲಿ ನ್ಯಾಯಾಲಯ 32 ಮಂದಿಯನ್ನು ದೋಷಮುಕ್ತಗೊಳಿಸಿದೆ. ಆರು ಮಂದಿ ಅತ್ಯಾಚಾರ ಸಂತ್ರಸ್ತರ ಪೈಕಿ ಐದು ಮಂದಿ ಪ್ರತಿಕೂಲ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ನಡೆದ 534 ಗಲಭೆ ಪ್ರಕರಣಗಳ ತನಿಖೆಗೆ ನೇಮಕ ಮಾಡಿದ್ದ ವಿಶೇಷ ತನಿಖಾ ಘಟಕ ಅರ್ಧಕ್ಕಿಂತಲೂ ಹೆಚ್ಚು ಮಂದಿ ಆರೋಪಿಗಳನ್ನು ಆರೋಪಮುಕ್ತಗೊಳಿಸಿದೆ. ಬಹುತೇಕ ಎಲ್ಲ ಅಗ್ನಿಸ್ಪರ್ಶ, ಲೂಟಿಯಂಥ ಗಂಭೀರ ಪ್ರಕರಣಗಳು. ಸಂತ್ರಸ್ತರೇ ದೂರು ವಾಪಾಸು ಪಡೆದದ್ದು ಇದಕ್ಕೆ ಕಾರಣ. ಬಹುತೇಕ ಸಂತ್ರಸ್ತರು ತಮ್ಮ ದೂರು ವಾಪಾಸು ಪಡೆಯುವ ಅಫಿಡವಿಟ್ ಸಲ್ಲಿಸಿದ್ದಾರೆ.

ನ್ಯಾಯಾಲಯ ತಲುಪಿದ ಪ್ರಕರಣಗಳಲ್ಲಿ ಸಂತ್ರಸ್ತರೇ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಉದಾಹರಣೆಗೆ ಲಾಖ್‌ನಲ್ಲಿ 10 ಮಂದಿ ಹತ್ಯೆ ಪ್ರಕರಣ ಹಾಗೂ ಪುಘಾನಾದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿದ್ದರು. ಆದರೆ ಎಫ್‌ಐಆರ್‌ನಲ್ಲಿ ಹೆಸರು ದಾಖಲಿಸಿದ್ದ ಹತ್ತು ಮಂದಿಯನ್ನು ಗುರುತಿಸಲು ಸಂತ್ರಸ್ತರೇ ನಿರಾಕರಿಸಿದರು. ಸಾಕ್ಷಿಗಳು ಹಾಗೂ ಸಂತ್ರಸ್ತರು ತಮ್ಮ ಕಾರಣದ ಸಲುವಾಗಿ ಹೋರಾಡುವಂತೆ ಪ್ರೇರಣೆ ನೀಡುವಲ್ಲಿ ನಮಗೆ ಸಮಸ್ಯೆ ಎದುರಾಯಿತು ಎಂದು ಜಿಲ್ಲಾ ಸರ್ಕಾರಿ ವಕೀಲ ದುಷ್ಯಂತ್ ತ್ಯಾಗಿ ಹೇಳುತ್ತಾರೆ.

"ಅವರು ಏಕೆ ಹಿಂದಕ್ಕೆ ಸರಿದರು ಎನ್ನುವುದು ಗೊತ್ತಿಲ್ಲ. ನನಗೆ ಕೆಳಹಂತದ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ 80 ಪ್ರಕರಣಗಳಿವೆ. ಶೇಕಡ 100ರಷ್ಟು ಪ್ರಕರಣದಲ್ಲಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ" ಎಂದು ವಿವರಿಸಿದರು. ತೆರೆಯ ಹಿಂದೆ ಹಣಕಾಸು ಹಾಗೂ ಅಪರಾಧ ಬೆದರಿಕೆಗಳು ಹಸ್ತಕ್ಷೇಪ ಮಾಡುತ್ತಿವೆ ಎಂಬ ವದಂತಿ ದಟ್ಟವಾಗಿದೆ.

ತ್ಯಾಗಿಯವರ ಮೊದಲು ಈ ಹುದ್ದೆಯಲ್ಲಿ ಸಾಜಿದ್ ರಾಣಾ ಅವರು ಆರೋಪಿಗಳು ಹಾಗೂ ಸಂತ್ರಸ್ತರ ನಡುವೆ ಸಂಧಾನ ಏರ್ಪಡಿಸಿ, ಆರೋಪಿಗಳು ದೋಷಮುಕ್ತರಾಗಲು ಸಹಕರಿಸಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಸರ್ಕಾರಿ ವಕೀಲರ ಪಟ್ಟಿಯಿಂದ ಕೈಬಿಡಲಾಗಿತ್ತು.

ಗಲಭೆಯಲ್ಲಿ ತಮ್ಮ ಮಗ ಆಸ್ ಮಹಮ್ಮದ್‌ನನ್ನು ಕಳೆದುಕೊಂಡ ಮಹ್ಮದ್ ಇಕ್ಬಾಲ್ ಹೇಳುವಂತೆ, "ರಾಣಾ ಅವರ ನಿರ್ಲಕ್ಷ್ಯ ಮನೋಭಾವ, ಆರೋಪಿಗಳು ದೋಷಮುಕ್ತರಾಗಲು ಸಹಕರಿಸಿತು. ನನಗೆ ಶಾಮ್ಲಿಯಲ್ಲಿ ಬಹಳಷ್ಟು ಬಾರಿ ಬೆದರಿಕೆ ಹಾಕಲಾಗಿದೆ. ಪತ್ನಿ ಸಲ್ಮಾ ಇದರಿಂದ ಹತಾಶರಾಗಿದ್ದಾರೆ. ಆದರೂ ತಮ್ಮ ವಂಶದ ಕುಡಿಯನ್ನು ಬಲಿಪಡೆದ ರಾಕ್ಷಸರಿಗೆ ಪವಿತ್ರ ನ್ಯಾಯಾಲಯದಲ್ಲಿ ಶಿಕ್ಷೆಯಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಈ ನ್ಯಾಯಾಲಯಗಳಲ್ಲಿ ನಮ್ಮ ಪ್ರಕರಣಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಅವರು ಹೇಳುತ್ತಾರೆ.

ಅದರೆ ರಾಣಾ ಇದನ್ನು ಅಲ್ಲಗಳೆಯುತ್ತಾರೆ. ಸಾಕ್ಷಿಗಳು ಹಾಗೂ ಸಂತ್ರಸ್ತರೇ ಬೆನ್ನು ಹಾಕಿದರೆ ನಾವೇನು ಮಾಡಲು ಸಾಧ್ಯ? ಅವರನ್ನು ತಡೆಯಲು ಸಾಧ್ಯವಿಲ್ಲ ಹಾಗೂ ನನ್ನನ್ನು ಹೊಣೆಗಾರನಾಗಿಸುವಂತಿಲ್ಲ" ಎನ್ನುವುದು ಅವರ ಸಮರ್ಥನೆ.

ಸಂತ್ರಸ್ತರಲ್ಲಿ ಬಹುತೇಕ ಎಲ್ಲರೂ ಕಡುಬಡವರು. ಜನ ಇದರ ದುರ್ಲಾಭ ಪಡೆಯುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಆಸಿಫ್ ರಹಿ ಹೇಳುತ್ತಾರೆ. ಸರ್ಕಾರ ಇವರಿಗೆ ನೀಡಿದ ಪರಿಹಾರ ಸಾಕು ಎಂಬ ಮನೋಭಾವ ಹೊಂದಿದೆ. ಅದು ಅವರಿಗೆ ಭದ್ರತೆಯನ್ನೂ ನೀಡದೇ ಪರೋಕ್ಷವಾಗಿ ಒತ್ತಡ ತಂತ್ರಗಳಿಗೆ ಮಣಿಯುವಂತೆ ಮಾಡಿದೆ" ಎಂದು ಅವರು ಪ್ರತಿಪಾದಿಸುತ್ತಾರೆ.

ಮುಜಾಫರ್‌ನಗರದಿಂದ 20 ಕಿಲೋಮೀಟರ್ ದೂರದ ಶಹಾಪುರವನ್ನೇ ಉದಾಹರಣೆಗೆ ತೆಗೆದುಕೊಂಡರೆ, ಹಲವು ಮಂದಿ ಸಂತ್ರಸ್ತರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಬಹುತೇಕ ಎಲ್ಲರೂ ಕೂಲಿಕಾರರು. ಆದರೆ ಅವರು ಕೂಲಿಗಾಗಿ ಹೊರಗೆ ಹೋಗುವಂತೆಯೂ ಇಲ್ಲ. ಎಲ್ಲಿ ದಾರಿಮಧ್ಯದಲ್ಲಿ ತಮ್ಮ ಮೇಲೆ ಮತ್ತೆ ಹಲ್ಲೆ ನಡೆಯುತ್ತದೆಯೋ ಎಂಬ ಭೀತಿಯಿಂದ ಬದುಕು ಸಾಗಿಸುತ್ತಿದ್ದಾರೆ.

"ನಮ್ಮಲ್ಲಿ ಬಹಳಷ್ಟು ಮಂದಿಯನ್ನು ದಾರಿಮಧ್ಯದಲ್ಲಿ ತಡೆದು ಹಲ್ಲೆ ಮಾಡಿ, ಪ್ರಕರಣ ವಾಪಾಸು ಪಡೆಯಿರಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಬೆದರಿಸಿದ್ದಾರೆ" ಎಂದು ಮುಜಾಫರ್‌ನಗರದಿಂದ 60 ಕಿಲೋಮೀಟರ್ ದೂರದ ಕಾಂಧ್ಲಾ ಶಿಬಿರದಲ್ಲಿರುವ ಮಹ್ಮದ್ ಹಾರೂನ್ ಅಸಹಾಯಕವಾಗಿ ಹೇಳುತ್ತಾರೆ. ಈ ಬಗ್ಗೆ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಯಾರನ್ನೂ ಬಂಧಿಸಿಲ್ಲ. ಪೊಲೀಸ್‌ಠಾಣೆಯಲ್ಲಿ ಪ್ರಕರಣಗಳು ದಾಖಲಾಗುವುದೇ ಅಪರೂಪವೆನಿಸಿದ್ದು, ಬದಲಾಗಿ ಪ್ರಕರಣ ವಾಪಾಸು ಪಡೆಯುವುದೇ ಅಧಿಕವಾಗಿದೆ.

ಪ್ರಮುಖವಾಗಿ ಒಂಬತ್ತು ಗ್ರಾಮಗಳಲ್ಲಿ ಮತ್ತೆಂದೂ ಮುಸ್ಲಿಂ ಸಮುದಾಯದವರು ಜೀವಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಪ್ರಾರ್ಥನಾ ಮಂದಿರಗಳಿಗೆ ಬೀಗ ಜಡಿಯಲಾಗಿದ್ದರೆ, ಆಸ್ತಿಪಾಸ್ತಿ ನಷ್ಟವಾಗಿದೆ.

ಯಾರು ಸಂಧಾನ ಪ್ರಸ್ತಾವ ಮುಂದಿಡುತ್ತಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ. ಅವರೆಲ್ಲರೂ ಪ್ರದೇಶದ ಪ್ರಬಲರು. ಎರಡು ಆಸೆ ಹುಟ್ಟಿಸುತ್ತಿದ್ದಾರೆ. ಪ್ರಕರಣ ವಾಪಾಸು ಪಡೆಯಲು ಹಣ ಹಾಗೂ ಮತ್ತೆಂದೂ ನಾವು ವಾಪಾಸಾಗಲಾರದೆ ತೊರೆದು ಬಂದ ಆಸ್ತಿಗೆ ಇನ್ನಷ್ಟು ಹಣ" ಎಂದು ಸಂತ್ರಸ್ತರೊಬ್ಬರು ಹೇಳುತ್ತಾರೆ. ದಿನಕ್ಕೆ 50 ರೂಪಾಯಿಯ ದುಡಿಮೆಗೂ ಅವಕಾಶವಿಲ್ಲದ ಮಂದಿ ಇಂಥ ಪ್ರಸ್ತಾವಕ್ಕೆ ಒಪ್ಪಿಕೊಳ್ಳುತ್ತಿದ್ದಾರೆ. ಮತ್ತಷ್ಟು ನರಳಿಕೆ ಅವರಿಗೆ ಬೇಕಾಗಿಲ್ಲ ಎಂದು ವಿವರಿಸುತ್ತಾರೆ.

ಅತ್ಯಾಚಾರ ಸಂತ್ರಸ್ತೆಯ ಪತಿ ಇಂಥ ಎಲ್ಲ ಅತ್ಯಾಚಾರ ಸಂತ್ರಸ್ತೆಯರ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಈಗ ವಕೀಲರೂ ಸೇರಿ ಯಾರೊಂದಿಗೂ ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ. ಜನವರಿಯಿಂದೀಚೆಗೆ ಆತ ಯಾರೊಂದಿಗೂ ಮಾತನಾಡುತ್ತಿಲ್ಲ. ಇದಕ್ಕೂ ಮುನ್ನ ಒಂದು ರಾಜಕೀಯ ಪಕ್ಷದ ಗುಂಪು ನ್ಯಾಯಾಲಯ ಆವರಣದಲ್ಲಿ ಆತನನ್ನು ಹಿಡಿದು, ಪಿಸ್ತೂಲು ಹೊಂದಿದ ಆರೋಪ ಹೊರಿಸಿದೆ. ಆ ಗುಂಪು ಪೊಲೀಸ್ ಠಾಣೆಗೆ ಆತನನ್ನು ಒಪ್ಪಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹಿಸಿತು. ಆದರೆ ಕೆಲ ಸಾಮಾಜಿಕ ಕಾರ್ಯಕರ್ತರ ಮಧ್ಯಪ್ರವೇಶದಿಂದ ಆತ ಬಚಾವಾದ.

"ನನಗೆ ಹಾಗೂ ಪತ್ನಿಯ ಮೇಲೆ ತೀವ್ರ ಒತ್ತಡ ತರಲಾಗುತ್ತಿದೆ" ಎಂದು ಅತ್ಯಾಚಾರ ಸಂತ್ರಸ್ತೆಯ ಪತಿ ಹೇಳುತ್ತಾರೆ. ಅದು ಕೂಡಾ ಅತ್ಯಾಚಾರಕ್ಕೆ ಒಳಗಾದ ಇತರ ಸಂತ್ರಸ್ತರಿಂದ ಹಾಗೂ ಗಂಡಂದಿರಿಂದ. ಪ್ರಕರಣ ವಾಪಾಸು ಪಡೆಯಲು ಪದೇ ಪದೇ ಒತ್ತಡ ತರುತ್ತಿದ್ದಾರೆ. ಇಷ್ಟಾಗಿಯೂ ಎಲ್ಲ ಒತ್ತಡವನ್ನೂ ಮೆಟ್ಟಿನಿಂತು ಹೋರಾಡುವ ಸಂಕಲ್ಪವನ್ನು ಪತಿ ಹೊಂದಿದ್ದಾರೆ.

"ತೀರಾ ಪ್ರಬಲ ಸಾಕ್ಷಿಗಳಿದ್ದ ಪ್ರಕರಣದಲ್ಲಿ ಕೂಡಾ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ. ಸಂತ್ರಸ್ತರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುವವರೆಗೂ ಇದು ಬದಲಾಗುವ ಸಾಧ್ಯತೆಯೇ ಇಲ್ಲ" ಎಂದು ಯುವವಕೀಲ ಅಕ್ರಮ್ ಅಖ್ತರ್ ಹೇಳುತ್ತಾರೆ.

ಬಹುತೇಕ ಪ್ರಕರಣಗಳನ್ನು ವಜಾಗೊಳಿಸಿ ಮೂರು ಸಾವಿರಕ್ಕೂ ಅಧಿಕ ಮಂದಿಯ ಮೇಲಿನ ಆರೋಪಗಳನ್ನು ವಜಾ ಮಾಡಿರುವ ಕ್ರಮದ ಬಗ್ಗೆ ಮಾಹಿತಿಹಕ್ಕು ಕಾಯ್ದೆಯಲ್ಲಿ ಪ್ರಶ್ನಿಸಿದಾಗ ಅದರ ಮುಖ್ಯಸ್ಥ ವಿನೋದ್ ಪಾಂಡೆ, ಈ ಮಾಹಿತಿಯನ್ನು ಬಹಿರಂಗಗೊಳಿಸಲಾಗದು ಎಂದು ಉತ್ತರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News