ಕಡಿವಾಣ ಇಲ್ಲದ ಕಳಪೆ ಔಷಧ ದಂಧೆ

Update: 2016-02-17 17:49 GMT

ಜನಸಾಮಾನ್ಯರು ಸಂಜೀವಿನಿ ಎಂದು ಪರಿಗಣಿಸುವ ಔಷಧ ಕೂಡಾ ಕಲಬೆರಕೆ, ಕಳಪೆ ಗುಣಮಟ್ಟದ್ದಾದರೆ?
ಹೌದು. ದೇಶದಲ್ಲಿ ಸಿಗುವ ಶೇ.4.5ರಷ್ಟು ಔಷಧಗಳು ಕಳಪೆ ಗುಣಮಟ್ಟದ್ದು. ಪ್ರಸಿದ್ಧ ಕಂಪೆನಿಗಳ ಔಷಧಗಳೂ ಇದಕ್ಕೆ ಹೊರತಲ್ಲ. ಇದರ ಕ್ಷಮತೆ ಕಡಿಮೆ; ಪರಿಣಾಮವಾಗಿ ರೋಗ ಗುಣವಾಗುವುದು ನಿಧಾನ. ಚಿಕಿತ್ಸೆ ಅವಧಿಯಲ್ಲೇ ಒಂದು ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಕಾರಣಕ್ಕೆ ವೈದ್ಯರು ಹೊಸ ಔಷಧಗೆ ಬದಲಾಯಿಸುವುದೂ ನಮ್ಮಲ್ಲಿ ಹೊಸದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಈ ನಿಧಾನ ವಿಷ ಮಾರಕವಾದ ಬ್ಯಾಕ್ಟೀರಿಯಾಗಳಲ್ಲಿ ಪ್ರತಿನಿರೋಧಕ ಶಕ್ತಿ ಬೆಳೆಯಲು ಕಾರಣವಾಗುತ್ತದೆ.
ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ವೈದ್ಯಕೀಯ ವೆಚ್ಚ ಭರಿಸುವುದೇ ಜನತೆಯ ಪಾಲಿಗೆ ದೊಡ್ಡ ಹೊರೆ ಎನಿಸಿದ ಭಾರತದಂಥ ದೇಶದಲ್ಲಿ ಚಿಕಿತ್ಸಾ ವೆಚ್ಚದ ಶೇ.58.2 ಭಾಗ ಜನರ ಕಿಸೆಗೆ ಕತ್ತರಿ. ಭಾರತದಲ್ಲಿ ಒಟ್ಟು ವೈದ್ಯಕೀಯ ವೆಚ್ಚದ ಶೇ.70ರಿಂದ 77ರಷ್ಟನ್ನು ಔಷಧಗಳೇ ನುಂಗುತ್ತವೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶ.
ವೈದ್ಯರು ಸಾಮಾನ್ಯವಾಗಿ ಬರೆದುಕೊಡುವ ಲಾಭದಾಯಕ ಔಷಧಗಳು ಕಳಪೆಯಾಗಿರುವ ಸಾಧ್ಯತೆಯೂ ಅಧಿಕ ಎನ್ನುತ್ತಾರೆ ತಜ್ಞರು. ಸಾಮಾನ್ಯವಾಗಿ ನಾವು ಬಳಸುವ ನೋವು ನಿವಾರಕ ಗುಳಿಗೆ (ಡಿಕ್ಲೋಫೆನಕ್ ಸೋಡಿಯಂ)ಯ 32 ಮಾದರಿಯನ್ನು ಔಷಧವಿಜ್ಞಾನ ನಿಯತಕಾಲಿಕವೊಂದು 2015ರ ಡಿಸೆಂಬರ್‌ನಲ್ಲಿ ಪರೀಕ್ಷಿಸಿ ನಡೆಸಿ ಈ ನಿರ್ಧಾರಕ್ಕೆ ಬಂದಿದೆ. ಅಂತೆಯೇ 2016ರಲ್ಲಿ ಅಂತಾರಾಷ್ಟ್ರೀಯ ಔಷಧವಿಜ್ಞಾನ ನಿಯತಕಾಲಿಕ, ನಾವು ಸಾಮಾನ್ಯವಾಗಿ ಬಳಸುವ ಆಂಟಿಬಯೋಟಿಕ್ ಗುಳಿಗೆ (ಅಮೋಕ್ಸಿಲಿನ್ ಟ್ರೈಹೈಡ್ರೇಟ್)ಯ 46 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದೆ. ಇವೆರಡು ಅಧ್ಯಯನಗಳಲ್ಲಿ ಕ್ರಮವಾಗಿ ಶೇ.15.62 ಹಾಗೂ ಶೇ.13.04ರಷ್ಟು ಕಳಪೆ ಔಷಧ ಪತ್ತೆಯಾಗಿದೆ ಎಂದು ಸೋಲನ್‌ನ ಜಾಯ್‌ಪೀ ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಫಾರ್ಮಸಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಹ್ಮದ್ ನವಾಝ್ ಖಾನ್ ಹೇಳುತ್ತಾರೆ.
ದುಬಾರಿ ಬೆಲೆಯ ಪ್ರಸಿದ್ಧ ಕಂಪೆನಿಗಳ ಔಷಧಗಳೂ ಇದಕ್ಕೆ ಹೊರತಾಗಿಲ್ಲ. ಖ್ಯಾತ ಕಂಪೆನಿಗಳ ಔಷಧಗಳ ಗುಣಮಟ್ಟ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಿಂದ ಗ್ರಾಹಕರು ದುಬಾರಿಯಾದರೂ ಈ ಔಷಧ ಖರೀದಿಗೆ ಮುಂದಾಗುತ್ತಾರೆ. ಇದು ನಿಜಕ್ಕೂ ಖೇದಕರ ಎಂದು ಅಭಿಪ್ರಾಯಪಡುತ್ತಾರೆ.
ಆರೋಗ್ಯ ಸಚಿವಾಲಯ ಅಧೀನದ ಸ್ವಾಯತ್ತ ಸಂಸ್ಥೆಯಾದ ಫಾರ್ಮಾಕೋಪಿಯಾ ಕಮಿಷನ್ ಹೇಳುವ ಪ್ರಕಾರ, ನಿರ್ದಿಷ್ಟ ಗುಳಿಗೆಯ ಕವಚದಲ್ಲಿ ನಮೂದಿಸಿರುವ ಔಷಧ ಅಂಶದ ಶೇ.90ರಿಂದ 110ರಷ್ಟು ಪ್ರಮಾಣದಲ್ಲಿ ಆ ಗುಳಿಗೆಯಲ್ಲಿ ನಿರ್ದಿಷ್ಟ ರಾಸಾಯನಿಕ ಇರಬೇಕು. ಇದು ಈ ಮಾನದಂಡವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ, ಕಳಪೆ ಗುಣಮಟ್ಟದ ಔಷಧಗಳ ಸಂಖ್ಯೆ ದುಪ್ಪಟ್ಟಾಗಬಹುದು.
ಗುಣಮಟ್ಟ ನಿಯಂತ್ರಣ
ಆದರೆ ಸರಕಾರದ ಅಂಕಿ ಅಂಶ ಹೇಳುವಂತೆ ಕಳೆದ 25 ವರ್ಷದಲ್ಲಿ ಇಂಥ ಕಳಪೆ ಹಾಗೂ ನಕಲಿ ಔಷಧಗಳ ಪ್ರಮಾಣ ಅರ್ಧದಷ್ಟು ಇಳಿದಿದೆ. 1990ರಲ್ಲಿ ಶೇ.9ರಷ್ಟಿದ್ದ ಇಂಥ ಔಷಧಗಳು ಇದೀಗ 4.5ಕ್ಕೆ ಇಳಿದಿವೆ. ಆದರೆ ಭಾರತದಲ್ಲಿ ನಕಲಿ ಔಷಧ ಎಂದರೆ ಮೇಲ್ಭಾಗದಲ್ಲಿ ನಮೂದಿಸಿರುವ ರಾಸಾಯನಿಕಗಳನ್ನು ಹೊಂದಿಲ್ಲದ ಔಷಧಗಳ ಪ್ರಮಾಣ ತೀರಾ ಕಡಿಮೆ ಅಂದರೆ ಶೇ.0.046 ಮಾತ್ರ ಇದೆ. ಈ ಆಧಾರದಲ್ಲಿ ಭಾರತದಲ್ಲಿ ನಕಲಿ ಔಷಧ ಕಡಿಮೆ ಎಂದು ಮಾಧ್ಯಮದಲ್ಲಿ ಸರಕಾರ ಬಿಂಬಿಸಿಕೊಳ್ಳುತ್ತಿದೆ.
ಆದರೆ ವಿಶ್ವದಲ್ಲಿ ಪೂರೈಕೆಯಾಗುವ ಶೇ.35ರಷ್ಟು ನಕಲಿ ಔಷಧಗಳು ಭಾರತದಿಂದ ಬಂದವು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದಾಗಿ ಎಕನಾಮಿಕ್ ಟೈಮ್ಸ್ 2003ರಲ್ಲಿ ವರದಿ ಮಾಡಿತ್ತು. ಆದರೆ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಅಲ್ಲಗಳೆದು, ವಾಸ್ತವವಾಗಿ, ನಿಖರವಾಗಿ ಈ ಪ್ರಮಾಣ ಅಧ್ಯಯನ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿತು.
ಅಸೋಚಾಮ್ 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಭಾರತದ ಔಷಧಗಳಲ್ಲಿ ಶೇ.25ಷ್ಟು ನಕಲಿ ಅಥವಾ ಕಳಪೆ ಗುಣಮಟ್ಟದ್ದು. ಆದರೆ ಈ ಅಂದಾಜಿನಲ್ಲಿ ಕೆಲ ದೋಷಗಳಿವೆ ಎಂದು ವರದಿಯನ್ನು ಮತ್ತೆ ಹಿಂದಕ್ಕೆ ಪಡೆಯಲಾಯಿತು.
ಕಳೆದ ವರ್ಷ ಸಿಡಿಎಸ್‌ಸಿ ದೇಶಾದ್ಯಂತ 74,199 ಮಾದರಿಗಳನ್ನು ದೇಶಾದ್ಯಂತ ಪರೀಕ್ಷಿಸಿತು. ಆದರೆ ವರ್ಷಕ್ಕೆ 383 ಶತಕೋಟಿ ಔಷಧಗಳ ಬಳಕೆಯಾಗುತ್ತಿರುವ ದೇಶದಲ್ಲಿ ಈ ಮಾದರಿ ತೀರಾ ಸಣ್ಣ ಪ್ರಮಾಣದ್ದು. ಆದರೆ ಈ ಔಷಧಗಳನ್ನು ಉತ್ಪಾದಿಸುವ ಸಂಸ್ಥೆಗಳ ವಿವರ ಲಭ್ಯವಿಲ್ಲ. ದೇಶದಲ್ಲಿ ಇಂಥ ಔಷಧ ಉತ್ಪಾದಕ ಸಂಸ್ಥೆಗಳ ಪಟ್ಟಿಯಾಗಲಿ, ಈ ಉದ್ದೇಶಕ್ಕೆ ಲೈಸೆನ್ಸ್ ಪಡೆದ ಕಂಪೆನಿಗಳ ಕ್ರೋಡೀಕೃತ ಪಟ್ಟಿಯಾಗಲಿ ಇಲ್ಲ. ಇದರಿಂದ ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ ಸಾಧ್ಯವಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಫಾರ್ ರಿಸರ್ಚ್ ಆನ್ ಇಂಟರ್‌ನ್ಯಾಷನಲ್ ಎಕನಾಮಿಕ್ ರಿಲೇಷನ್ಸ್ ವರದಿ ಹೇಳಿದೆ.

ಇಂಥ ಪಟ್ಟಿಯನ್ನು ಪರಿಶೀಲಿಸದೆ, ಮಾದರಿಗಳನ್ನು ಪಡೆಯು ವುದರಿಂದ ಯಾವ ಲಾಭವೂ ಇಲ್ಲ ಎಂದು ಗ್ರಾಹಕ ನೀತಿ ತಜ್ಞ ಮತ್ತು ಸೇಫ್ ಮೆಡಿಸಿನ್ ಸಂಸ್ಥೆಯ ಸಂಸ್ಥಾಪಕ ಬೆಜೊನ್ ಮಿಶ್ರಾ ಅಭಿಪ್ರಾಯಪಡುತ್ತಾರೆ. ಸಿಡಿಎಸ್‌ಸಿಒ ಮಾತ್ರ ಇಂಥ ನಕಲಿ, ಕಳಪೆ ಗುಣಮಟ್ಟದ ಔಷಧ ಪಟ್ಟಿಯ ಡಿಜಿಟಲ್ ಅವತರಣಿಕೆಯನ್ನು ಪ್ರಕಟಿಸುತ್ತದೆ. ಇದು ಯಾರ ಉಪಯೋಗಕ್ಕೆ?

ದೀರ್ಘಾವಧಿ ಪ್ರಕರಣ- ದಂಡ ಅಪರೂಪ
ಇಂಥ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ತೀರಾ ಕಡಿಮೆ. ಆದ್ದರಿಂದ ಇದನ್ನು ಔಷಧ ತಯಾರಿಕೆ ಉದ್ಯಮ ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂಥ ಪ್ರಕರಣಗಳಿಗೆ ಮರಣ ದಂಡನೆ ವಿಧಿಸುವಂತೆ ಎನ್‌ಡಿಎ ಸರಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಮಶೇಲ್‌ಕರ್ ಸಮಿತಿ ಶಿಫಾರಸು ಮಾಡಿತ್ತು. ಆದರೆ ಮುಂದಿನ ಯುಪಿಎ ಸರಕಾರ ಇದಕ್ಕೆ ತಣ್ಣೀರೆರಚಿ ಜೀವಾವಧಿ ಶಿಕ್ಷೆ ಇಳಿಸಿತು ಎಂದು ಮಿಶ್ರಾ ವಿವರಿಸುತ್ತಾರೆ.
ಗ್ರಾಹಕರು ತಾವು ಪಡೆದ ಔಷಧ ಗುಣಮಟ್ಟವನ್ನು ತಾವೇ ಪರೀಕ್ಷಿಸಿಕೊಳ್ಳಲು ಅಗತ್ಯವಾದ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ದೊಡ್ಡ ಕಂಪೆನಿಗಳು ಇದಕ್ಕೆ ಸಹಕಾರ ನೀಡಬೇಕು. ಉದಾಹರಣೆಗೆ ಫಾರ್ಮಾಸೆಕ್ಯೂರ್ ಎಂಬ ಜಾಗತಿಕ ದೃಢೀಕರಣ ತಂತ್ರಜ್ಞಾನ ಸಂಸ್ಥೆ ವಿಶಿಷ್ಟವಾದ ಅಲ್ಫಾನ್ಯುಮರಿಕ್ ಕೋಡ್ ಅಭಿವೃದ್ಧಿಪಡಿಸಿದ್ದು, ಇದನ್ನು ಉತ್ಪಾದನೆಯ ಎಲ್ಲ ಹಂತದಲ್ಲೂ ಬಳಸಲಾಗುತ್ತದೆ. ಇದನ್ನು ಖರೀದಿಸುವ ಗ್ರಾಹಕರು ಮೊಬೈಲ್ ಆಫ್ ಅಥವಾ ಎಸ್ಸೆಮ್ಮೆಸ್ ಮೂಲಕ ಆ ಕೋಡ್ ನೀಡಿ, ಆ ಔಷಧ ಗುಣಮಟ್ಟದ್ದೇ ಅಥವಾ ಕಳಪೆಯೇ ಎಂಬ ಮಾಹಿತಿಯನ್ನು ತಕ್ಷಣ ಪಡೆಯಲು ಅವಕಾಶವಿದೆ.
ಸಾಮಾನ್ಯವಾಗಿ ಒಂದು ವಿಚಾರಣೆಗೆ ಒಂದು ಸಂಕೇತವನ್ನು ನಾವು ವಿಶ್ಲೇಷಿಸುತ್ತೇವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಸಮಿತ್ ಯಾದವ್ ಹೇಳುತ್ತಾರೆ. ಅದೇ ಉತ್ಪನ್ನದ ಬಗ್ಗೆ ಎರಡನೆ ವಿಚಾರಣೆ ಬಂದಾಗ ಮೊದಲ ಪ್ರಕ್ರಿಯೆಯೇ ಅನ್ವಯವಾಗಯತ್ತದೆ. ಆದರೆ ಮೂರು ಅಥವಾ ಹೆಚ್ಚು ವಿಚಾರಣೆಗಳು ಬಂದಾಗ ಖಂಡಿತವಾಗಿಯೂ ಪ್ರಶ್ನೆ ಉದ್ಭವಿಸುತ್ತದೆ ಎಂಬ ವಿವರ ನೀಡುತ್ತಾರೆ. ಆದರೆ ಬಹುತೇಕ ಭಾರತೀಯ ಕಂಪೆನಿಗಳು ಇಂಥ ದೃಢೀಕರಣ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿಲ್ಲ ಎಂದು ಯಾದವ್ ಹೇಳುತ್ತಾರೆ. ಇದನ್ನು ಎಲ್ಲ ಕಂಪೆನಿಗಳಿಗೂ ಕಡ್ಡಾಯಗೊಳಿಸಿದರೆ ಮಾತ್ರ ಗುಣಮಟ್ಟ ಸುಧಾರಿಸಲು ಸಾಧ್ಯ ಎನ್ನುವುದು ಅವರ ಸ್ಪಷ್ಟ ನಿಲುವು.
ಇನ್ಫ್ರಾರೆಡ್ ಸ್ಪೆಕ್ಟ್ರೋಸ್ಕೊಪಿ ಎಂಬ ಇನ್ನೊಂದು ತಂತ್ರಜ್ಞಾನ ಕೂಡಾ ಕಳಪೆ ಗುಣಮಟ್ಟವನ್ನು ಪತ್ತೆ ಮಾಡಲು ಲಭ್ಯವಿದ್ದು, ಇದರಲ್ಲಿ ನೂರಾರು ಮಾದರಿಗಳನ್ನು ಕೆಲವೇ ನಿಮಿಷಗಳಲ್ಲಿ ಪರೀಕ್ಷೆಗೆ ಒಳಪಡಿಸಬಹುದಾಗಿದೆ. ಇದು ಸಾಂಪ್ರದಾಯಿಕವಾಗಿ ಬಳಸುವ ಕ್ರೊಮೆಟೋಗ್ರಫಿ ತಂತ್ರಜ್ಞಾನಕ್ಕಿಂತ ಸಂಪೂರ್ಣ ಭಿನ್ನ ಎಂದು ಖಾನ್ ಹೇಳುತ್ತಾರೆ.
ಖಂಡಿತವಾಗಿಯೂ ಭಾರತದ ಕಳಪೆ ಔಷಧ ಸಮಸ್ಯೆಗೆ ಪರಿಹಾರ ಇದೆ.

ಕಳಪೆ ಔಷಧ: ಪರಿಣಾಮ ಏನು?
ಸಿಡಿಎಸ್‌ಸಿಓ ಪರೀಕ್ಷೆಯಲ್ಲಿ ಔಷಧ ಒಳಗೊಂಡಿರುವ ರಾಸಾಯನಿಕಗಳು ಮತ್ತು ಅದರ ವಿಧಾನದ ತಾಂತ್ರಿಕತೆಗಳು ಕಳಪೆ ಎಂದು ಕಂಡುಬಂದಲ್ಲಿ ನೋಟಿಸ್ ನೀಡಲಾಗುತ್ತದೆ. ಹೀಗೆ ನೋಟಿಸ್ ಪಡೆದ ಆರು ಕಂಪೆನಿಗಳ ಪೈಕಿ ಒಂದು ಕಂಪೆನಿ ಮಾತ್ರ ಈ ಬಗ್ಗೆ ಕೇಳಿದ ಪ್ರಶ್ನೆಗೆ ಸ್ಪಂದಿಸಿದೆ. ಮಧ್ಯಪ್ರದೇಶದ ಅಕ್ಪಶ್ ಫಾರ್ಮಸ್ಯೂಟಿಕಲ್ಸ್ ಹೇಳಿಕೆ ಪ್ರಕಾರ, ಆ ಎಲ್ಲ ಔಷಧಗಳನ್ನು ಮಾರುಕಟ್ಟೆಯಿಂದ ವಾಪಸು ಪಡೆದು ಕಾರಣ ಕಂಡುಹಿಡಿಯಲಾಗಿದೆ. ಅದರಲ್ಲಿ ಕಂಡುಬಂದ ಲೋಪವನ್ನು ಮುಂದೆ ಸರಿಪಡಿಸಲಾಗಿದೆ ಎಂದು ನಿರ್ದೇಶಕ ಗಿರಿಧರಲಾಲ್ ಜದ್ವಾನಿ ಹೇಳುತ್ತಾರೆ.
ಇತರ ಹಲವು ಕಂಪೆನಿಗಳು ಈ ನೋಟಿಸ್‌ನ ಕ್ರಮಬದ್ಧತೆಯನ್ನು ಪ್ರಶ್ನಿಸಿವೆ. ಅದೇ ಔಷಧಗಳನ್ನು ನಮ್ಮ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ಸಿದ್ಧಪಡಿಸಿ, ನೋಟಿಸ್‌ನ ಔಚಿತ್ಯವನ್ನು ಪ್ರಶ್ನಿಸಿದ್ದಾಗಿ ಈ ಕಂಪೆನಿಗಳ ಮಾಲಕರು ಹೇಳುತ್ತಾರೆ. ನೋಟಿಸ್ ಬಳಿಕವೂ ತಮ್ಮ ಉತ್ಪಾದನಾ ವಿಧಾನ ಸರಿಪಡಿಸಿಕೊಳ್ಳದ ಕಂಪೆನಿಗಳ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಆದರೆ ಇಂಥ ಪ್ರಕರಣ ತೀರಾ ವಿರಳ.
ಕಳೆದ ಜುಲೈನಲ್ಲಿ ಪಂಜಾಬ್ ಅಧಿಕಾರಿಗಳು ನಕಲಿ ಹೈಡ್ರಾಕ್ಸಿಪ್ರೊಜೆಸ್ಟೋನ್ ಕ್ಯಾಪ್ರೊಯೇಟ್ ಚುಚ್ಚುಮದ್ದು ತಯಾರಿಸುವ ಘಟಕ ಹಾಗೂ ಅದರ ಮಾರಾಟಗಾರರ ಮಳಿಗೆ ಮೇಲೆ ದಾಳಿ ನಡೆಸಿದರು. ಇದು ಅವಧಿಪೂರ್ವ ಪ್ರಸವವನ್ನು ತಡೆಯುವ ಹಾರ್ಮೋನ್ ಚುಚ್ಚುಮದ್ದು. ಇದರ ವಾಸ್ತವ ಬೆಲೆಯ ಐದನೆ ಒಂದರಷ್ಟು ಅಂದರೆ 10ರಿಂದ 12 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲ ಮಾಲನ್ನು ವಶಪಡಿಸಲಾಗಿದೆ ಎಂದು ಪಂಜಾಬ್ ಡ್ರಗ್ ಕಂಟ್ರೋಲರ್ ಭಾಗ್‌ಸಿಂಗ್ ಹೇಳಿದರು. ವಾಸ್ತವವಾಗಿ ಇರಬೇಕಾದ ಯಾವ ಅಂಶವೂ ಅದರಲ್ಲಿ ಇರಲಿಲ್ಲ ಹಾಗೂ ಕೆಮಿಸ್ಟ್‌ಗಳಿಗೆ ಮಾರಾಟ ಮಾಡುವಾಗ ಯಾವ ಬಿಲ್ ಕೂಡಾ ನೀಡಿರಲಿಲ್ಲ ಎಂದು ಅವರು ವಿವರಿಸಿದರು.ಈ ನಿರ್ದಿಷ್ಟ ಚುಚ್ಚುಮದ್ದು ತಯಾರಿಕೆ ಲೈಸೆನ್ಸ್ ರದ್ದು ಮಾಡಿದ್ದೇವೆ. ಆದರೆ ಇತರ ಔಷಧಗಳ ಉತ್ಪಾದನೆ ಮುಂದುವರಿದಿದೆ. ಆದರೆ ಈ ಪ್ರಕರಣದಲ್ಲಿ ಉತ್ಪಾದಕರಿಗೆ ಇದುವರೆಗೆ ಶಿಕ್ಷೆ ಆಗಿಲ್ಲ. ಕಾನೂನು ನೋಟಿಸ್‌ಗೆ ಉತ್ತರಿಸಿದ ಉತ್ಪಾದಕ, ತಮ್ಮ ಔಷಧಯನ್ನು ಕೊಲ್ಕತ್ತಾದ ಕೇಂದ್ರೀಯ ಡ್ರಗ್ ಲ್ಯಾಬೊರೇಟರಿಯಲ್ಲಿ ಪರೀಕ್ಷಿಸಲು ಆಗ್ರಹಿಸಿದ್ದಾರೆ. ಇದಕ್ಕೆ ಸಮಯಾವಕಾಶ ಹಿಡಿಯುತ್ತದೆ. ಹೀಗೆ ಪರಿಸ್ಥಿತಿಯ ಲಾಭ ಪಡೆಯಲಾಗುತ್ತದೆ ಎಂದು ಅವರು ಹೇಳುತ್ತಾರೆ.
ದೇಶದಲ್ಲಿ ವಾರ್ಷಿಕ 15 ಸಾವಿರ ಮಾದರಿಗಳನ್ನು ಪರೀಕ್ಷಿ ಸುವ ಏಳು ಪ್ರಯೋಗಾಲಯಗಳಷ್ಟೇ ನಮ್ಮಲ್ಲಿವೆ. ಹೆಚ್ಚು ಔಷಧ ಉತ್ಪಾದನಾ ಘಟಕಗಳು ಹುಟ್ಟಿಕೊಂಡಿರುವುದರಿಂದ ಪ್ರಯೋ ಗಾಲಯ ಸೌಲಭ್ಯ ಸಾಕಾಗುತ್ತಿಲ್ಲ ಎಂದು ಖಾನ್ ಹೇಳುತ್ತಾರೆ.

Writer - ಚಾರು ಬಾಹ್ರಿ

contributor

Editor - ಚಾರು ಬಾಹ್ರಿ

contributor

Similar News