ತಪ್ಪು ವ್ಯಕ್ತಿಯ ಪುತ್ಥಳಿ ಎಂದು ಗೊತ್ತಾಗಿದ್ದು 40 ವರ್ಷ ಬಳಿಕ!
ಲಂಡನ್, ಫೆ. 17: ಬೆಂಕಿ ಕಡ್ಡಿಯನ್ನು ಕಂಡು ಹಿಡಿದ ಹತ್ತೊಂಬತ್ತನೆ ಶತಮಾನದ ಸಂಶೋಧಕ ಜಾನ್ ವಾಕರ್ ಗೌರವಾರ್ಥ ಬ್ರಿಟನ್‌ನ ಅವರ ಊರಿನಲ್ಲಿ ಗ್ರಾಮಸ್ಥರು ಅವರ ಪುತ್ಥಳಿಯೊಂದನ್ನು ಪ್ರತಿಷ್ಠಾಪಿಸಿದರು.
ಆದರೆ, ಅದು ತಪ್ಪು ವ್ಯಕ್ತಿಯ ಪುತ್ಥಳಿ ಎಂಬುದಾಗಿ 40 ವರ್ಷಗಳ ಬಳಿಕ ಗೊತ್ತಾಗಿದೆ.
ಡರ್ಹಮ್ ಕೌಂಟಿಯ ಸ್ಟಾಕ್ಟನ್-ಆನ್-ಟೀಸ್ ಎಂಬ ಪಟ್ಟಣದಲ್ಲಿ 1977ರಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಆದರೆ, ವಾಸ್ತವವಾಗಿ ಜನರು ಸ್ಥಾಪಿಸಿದ್ದು 19ನೆ ಶತಮಾನದವರೇ ಆದ ನಟ ಜಾನ್ ವಾಕರ್‌ರದ್ದು. ವಿಶೇಷವೆಂದರೆ, ಸ್ಟಾಕ್ಟನ್‌ನ ಬೆಂಕಿ ಕಡ್ಡಿ ಸಂಶೋಧಕನಿಗೂ ಈ ನಟನಿಗೂ ಹತ್ತಿರದ ಹೋಲಿಕೆಗಳಿದ್ದವು. ಆದರೆ, ನಟ ಜಾನ್ ವಾಕರ್ ಈ ಊರಿಗೆ ಯಾವತ್ತೂ ಬಂದಿರಲಿಲ್ಲ.
ಈ ವಿಷಯ ಕಳೆದ ವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಬಹಿರಂಗವಾಯಿತು. ಪ್ರತಿಮೆಯನ್ನು ಯಾಕೆ ಮರೆಮಾಚಲಾಗಿದೆ ಎಂಬುದಾಗಿ ಕೌನ್ಸಿಲರ್ ಲಿನ್ ಹಾಲ್ ಪ್ರಶ್ನಿಸಿದರು.
ಪಟ್ಟಣದ ಕ್ಯಾಸಲ್‌ಗೇಟ್ ಶಾಪಿಂಗ್ ಸೆಂಟರ್‌ನ ಮೂಲೆಯಲ್ಲಿರುವ ವಾಕರ್‌ರ ಪುತ್ಥಳಿ ಬೇರೆ ವ್ಯಕ್ತಿಯದ್ದು ಎಂದು ಕೌನ್ಸಿಲ್‌ನ ಸಂಸ್ಕೃತಿ ಮತ್ತು ಮನರಂಜನೆ ಸಮಿತಿಯ ಮುಖ್ಯಸ್ಥ ರೂಬೆನ್ ಕೆಂಚ್ ತಿಳಿಸಿದರು.