ಹೌದು, ನಾನೂ ದೇಶವಿರೋಧಿ; ಏಕೆಂದರೆ...

Update: 2016-02-19 14:35 GMT

1990ರ ದಶಕದಲ್ಲಿ ಭಾರತದ ರಾಜಕೀಯದಲ್ಲಿ ಜಾತ್ಯತೀತ ಹಾಗೂ ಢೋಂಗಿ ಜಾತ್ಯತೀತ ಎಂಬ ಸ್ಪಷ್ಟ ವಿಭಜನೆ ಕಂಡುಬಂತು. ಇದೀಗ ಮತ್ತೊಂದು ವಿಭಜನೆ ಕಾಣುತ್ತಿದೆ. ಮುಕ್ತವಾಗಿ ಹೇಳಬೇಕೆಂದರೆ ಇದು ದ್ರೋಹಕ್ಕೆ ಸಂಬಂಧಿಸಿದ್ದು. ಅಂದರೆ ರಾಷ್ಟ್ರೀಯವಾದಿಗಳು ಮತ್ತು ರಾಷ್ಟ್ರವಿರೋಧಿ ಶಕ್ತಿಗಳ ನಡುವಿನದ ಕಂದಕ ಎಂದು ಸೃಷ್ಟಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಮೊದಲ ಬಾರಿಗೆ ರಾಷ್ಟ್ರವಿರೋಧಿ ಎಂದು ಬಿಂಬಿಸಿದಾಗ ಸಹಜವಾಗಿಯೇ ಸಿಟ್ಟಾಗಿದ್ದೆ. ಇದೀಗ ಕೆಲ ವರ್ಷಗಳ ಬಳಿಕ, ಈ ಒರಟು ರಾಜಕೀಯ ಬಣ್ಣನೆಯಲ್ಲಿ, ದೇಶಭಕ್ತಿಯ ಪ್ರಮಾಣಪತ್ರವನ್ನು ಉದಾರವಾಗಿ ವಿತರಿಸಲಾಗುತ್ತಿದೆ. ಇದರಿಂದ ನನಗೆ "ಗರ್ವ್ ಸೇ ಕಹೊ ಹಮ್ ದೇಶ-ದ್ರೋಹಿ ಹೈ" (ಹೆಮ್ಮೆಯಿಂದ ನಾನು ದೇಶ ವಿರೋಧಿ) ಎಂದು ಕಿರುಚಬೇಕು ಎನಿಸುತ್ತದೆ. ಏಕೆ ಎನ್ನುವುದನ್ನು ಹೇಳುತ್ತೇನೆ ಕೇಳಿ.

ಹೌದು; ನಾನು ದೇಶ ವಿರೋಧಿ. ಏಕೆಂದರೆ, ದೇಶದ ಸಂವಿಧಾನದ 19ನೇ ವಿಧಿಯಲ್ಲಿ ಉಲ್ಲೇಖಿಸಿರುವ ಮುಕ್ತ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಸ್ತತ ವ್ಯಾಖ್ಯೆಯಲ್ಲಿ ನಂಬಿಕೆ ಇರುವ ವ್ಯಕ್ತಿ ನಾನು. ನನ್ನ ಪ್ರಕಾರ ಇದಕ್ಕೆ ತಾರ್ತಿಕ ನಿರ್ಬಂಧಗಳೆಂದರೆ, ಹಿಂಸೆ ಹಾಗೂ ದ್ವೇಷವನ್ನು ಉದ್ದೀಪಿಸುವಂಥ ಭಾಷಣಗಳಿಗೆ ಮಾತ್ರ ಇರಬೇಖು. ಆದರೆ ದ್ವೇಷ ಹುಟ್ಟಿಸುವ ಭಾಷಣ ಯಾವುದು ಎನ್ನುವುದು ಚರ್ಚಾರ್ಹ ವಿಷಯ. ಉದಾಹರಣೆಗೆ ರಾಮ ಜನ್ಮಭೂಮಿ ಚಳವಳಿಯ ಘೋಷಣೆಯಾದ, ’ಜೋ ಹಿಂದೂ ಹಿತ್ ಕಿ ಬಾತ್ ಕರೇಗಾ ವಹಿ ದೇಶ್ ಪೇ ರಾಜ್ ಕರೇಗ’ ಎನ್ನುವುದು ಮುಕ್ತವಾಗಿ ಹಿಂದೂರಾಷ್ಟ್ರಕ್ಕೆ ಕರೆ ನೀಡುವಂಥದ್ದು. ನಮ್ಮ ದೇಶದ ಕಾನೂನನ್ನು ಉಲ್ಲಂಘಿಸುವಂತೆ ಕಾಣುವಂಥದ್ದು. ಇದು ಸಮುದಾಯಗಳ ನಡುವೆ ದ್ವೇಷ ಹರಡುವಂಥದ್ದಲ್ಲವೇ? ಅಂತೆಯೇ ಖಲಿಸ್ತಾನ ಹೋರಾಟದ ’ರಾಜ್ ಕರೇಗ ಖಾಲ್ಸಾ’ ಘೋಷಣೆ ದೇಶ ದ್ರೋಹದಂತೆ ಕಾಣುತ್ತದೆಯೇ ಇಲ್ಲವೇ? ಬಲವಂತ್ ಸಿಂಗ್ ಮತ್ತು ಪಂಜಾಬ್ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ಬಗ್ಗೆ ಋಣಾತ್ಮಕ ತೀರ್ಪು ನೀಡಿದೆ.

ಹೌದು; ನಾನು ದೇಶ ವಿರೋಧಿ; ಏಕೆಂದರೆ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ ಗುರು ಪರವಾಗಿ ಜೆಎನ್‌ಯುನಲ್ಲಿ ಘೋಷಣೆ ಕೂಗಿದ್ದು ನನಗೆ ಕಸಿವಿಸಿ ಉಂಟುಮಾಡಿದ್ದರೂ, ಅದು ರಾಷ್ಟ್ರದ್ರೋಹದ ಕೃತ್ಯ ಎಂದು ನನಗೆ ಅನಿಸಿಲ್ಲ. ಈಗ ಇದಕ್ಕೆ ಪುರಾವೆಯಾಗಿ ಬಹಿರಂಗಪಡಿಸಲಾದ ಹುರುಳಿಲ್ಲದ ವಿಡಿಯೊದಲ್ಲಿ ವಿದ್ಯಾರ್ಥಿಗಳು ’ಭಾರತ್ ಕೀ ಬರಬಾದಿ’ ಎಂಬಂಥ ಘೋಷಣೆಗಳು ಹಾಗೂ ಅಫ್ಜಲ್ ಗುರುವನ್ನು ಹುತಾತ್ಮ ಎಂದು ಬಣ್ಣಿಸುವ ಘೋಷಣೆಗಳಿವೆ. ಆದರೆ ಇವರೆಲ್ಲರೂ ವಿದ್ಯಾರ್ಥಿಗಳೇ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಭಾಷಣಗಳು ಪ್ರಾಥಮಿಕವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಂಥವುಗಳು. ಆದರೆ ವಿದ್ಯಾರ್ಥಿಗಳನ್ನು ಸಂಭಾವ್ಯ ಉಗ್ರರು ಎಂದು ಪರಿಗಣಿಸಲು ಅಥವಾ ಸ್ವತಂತ್ರ್ಯ ಭಾವಸೂಕ್ಷ್ಮತೆಯ ರಾಜಕೀಯ ಅನುಯಾಯಿಗಳು ಎನ್ನಲು ಇಷ್ಟು ಸಾಕೇ? ಅಥವಾ ಅವರಿಗೆ ಸೈದ್ಧಾಂತಿಕ ಬೆಂಬಲ ನೀಡಿದರು ಎಂಬ ಕಾರನಕ್ಕೆ ಅವರನ್ನು ಜಿಹಾದಿಗಳೆಂದು ಪರಿಗಣಿಸಿ, ದೇಶದ್ರೋಹದ ಆರೋಪ ಹೊರಿಸುವಂಥದ್ದೇ?

ಹೌದು; ನಾನು ರಾಷ್ಟ್ರವಿರೋಧಿ. ಏಕೆಂದರೆ ಬಹುತ್ವದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಸ್ಪರ ಸಂವಾದ ಇರಬೇಕು ಎಂದು ನಂಬುವವನು ನಾನು. ಈಶಾನ್ಯ ಭಾರತದ ಸ್ವಾಯತ್ತತೆ ಬೇಡಿಕೆ ಬಗೆಗೆ ನಾವು ಹೇಗೆ ಸಂಧಾನ ಮಾರ್ಗವನ್ನು ಮುಂದುವರಿಸಿದ್ದೇವೆಯೋ ಹಾಗೇ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಜತೆಗೂ ಚರ್ಚೆ ಅಗತ್ಯ ಎನ್ನುವುದು ನನ್ನ ಅಭಿಪ್ರಾಯ. ನಾನು ಎಫ್‌ಟಿಐಐ ಅಥವಾ ಜೆಎನ್‌ಯುನಲ್ಲಿ ನಡೆಯುವ ಹೋರಾಟವನ್ನೂ, ಶ್ರೀನಗರ ಅಥವಾ ಇಂಫಾಲದಲ್ಲಿ ನಡೆಯುವ ವಿದ್ಯಾರ್ಥಿ ಚಳವಳಿಯ ಧ್ವನಿಯನ್ನೂ ನಾನು ಸಮಾನವಾಗಿ ಕೇಳಿಸಿಕೊಳ್ಳುತ್ತೇನೆ.

ಕಾನೂನು ಉಲ್ಲಂಘಿಸುವ, ಹಿಂಸೆಗೆ ಪ್ರಚೋದನೆ ನಿಡುವ, ಉಗ್ರಗಾಮಿ ಕೃತ್ಯ ಬೆಂಬಲಿಸುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಿ. ಆದರೆ ಅಸಮ್ಮತಿ ವ್ಯಕ್ತಪಡಿಸುವವರನ್ನು ಮಾತ್ರ ಗುರಿ ಮಾಡಬೇಡಿ. ಅಸಮ್ಮತಿ ಸೂಚಿಸುವುದು ಕೂಡಾ ಮುಕ್ತ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದಷ್ಟೇ ಮೂಲಭೂತವಾದದ್ದು. ಪರ್ಯಾಯ ಅಭಿಪ್ರಾಯಗಳ ಬಗ್ಗೆ ಪ್ರೈಮ್ ಟೈಂ ಟಿವಿಯಲ್ಲಾಗಲೀ ಅಥವಾ ಬೀದಿಯಲ್ಲಾಗಲೀ ಕಿರುಚುವುದು ಭಾರತದ ಬಗೆಗಿನ ನನ್ನ ಕಲ್ಪನೆಯಲ್ಲ.

ಹೌದು; ನಾನು ರಾಷ್ಟ್ರವಿರೋಧಿ. ಏಕೆಂದರೆ ರಾಷ್ಟ್ರೀಯತೆ ವಿಚಾರದಲ್ಲಿ ದ್ವಿಮುಖ ಧೋರಣೆಯ ಮಾತುಗಳನ್ನು ನಾನು ಆಡುವುದಿಲ್ಲ. ಅಫ್ಜಲ್‌ಗುರುವನ್ನು ಬೆಂಬಲಿಸಿರುವುದು ರಾಷ್ಟ್ರದ್ರೋಹವಾದರೆ, ಹಿಂದಿನ ಜಮ್ಮು- ಕಾಶ್ಮೀರ ಪಿಡಿಪಿ- ಬಿಜೆಪಿ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟದಲ್ಲಿದ್ದ ಅರ್ಧ ಡಜನ್ ಸಚಿವರು ತಪ್ಪಿತಸ್ಥರಾಗುತ್ತಾರೆ.

ಪಿಡಿಪಿಯ ಹಲವು ಮುಖಂಡರು, ಅಫ್ಜಲ್ ಗುರು ನೇಣು ಪ್ರಕರಣವನ್ನು ನ್ಯಾಯದ ಅಕಾಲ ಪ್ರಸವ ಎಂದು ವ್ಯಂಗ್ಯವಾಡಿ ಪ್ರತಿಭಟನೆಯನ್ನೂ ನಡೆಸಿದ್ದರು. ಅಫ್ಜಲ್‌ಗುರುವನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಕಾಶ್ಮೀರಿ ಯುವಕನೊಬ್ಬ ಭಾವಿಸಿದರೆ ಆತನನ್ನು ಕಾನೂನು ಹಾಗೂ ರಾಜಕೀಯ ಚರ್ಚೆಯಲ್ಲಿ ಅದನ್ನು ಪ್ರಶ್ನಿಸಬಹುದು. ಆದರೆ ಅವರ ನಿಲುವು ದೇಶದ ಇತರರ ನಿಲುವಿಗಿಂತ ಭಿನ್ನವಾಗಿದೆ ಎಂಬ ಕಾರಣಕ್ಕೆ ಅವರನ್ನು ಜಿಹಾದಿಗಳು ಎಂದು ಕರೆಯಲಾದೀತೆ?

ಇನ್ನೂ ಮುಂದುವರಿದು ಹೇಳುವುದಾದರೆ, ವರ್ಷದ ಜನವರಿ 30ರಂದು ಇಡೀ ದೇಶ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದರೆ, ಹಿಂದೂಮಹಾಸಭಾ ಪ್ರತಿ ವರ್ಷ ನಾಥೂರಾಂ ಗೋಡ್ಸೆಯನ್ನು ಪ್ರತಿ ವೈಭವೀಕರಿಸುತ್ತದೆ. ಇದು ರಾಷ್ಟ್ರವಿರೋಧಿ ಸಂಘಟನೆಯೇ? ನಾಥೂರಾಂ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ರಾಷ್ಟ್ರವಿರೋಧಿಯೇ ಅಲ್ಲವೇ? ಅಥವಾ ರಾಷ್ಟ್ರಪ್ರೇಮದ ವ್ಯಾಖ್ಯೆ ಅಧಿಕಾರದಲ್ಲಿರುವವರ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತದೆಯೇ?

ಹೌದು; ನಾನು ರಾಷ್ಟ್ರವಿರೋಧಿ; ಏಕೆಂದರೆ, ಗಾಯತ್ರಿಮಂತ್ರಕ್ಕೆ ಜಾಗೃತನಾಗುವ ಹೆಮ್ಮೆಯ ಹಿಂದೂವಾಗಿದ್ದೂ ನಾನು ಸುಟ್ಟ ಗೋಮಾಂಸವನ್ನು ಅತಿಯಾಗಿ ಇಷ್ಟಪಡುತ್ತೇನೆ. ಬಿಜೆಪಿ ಸಚಿವ ಮುಖ್ತರ್ ನಕ್ವಿ ಅವರ ಪ್ರಕಾರ ಇದು ಕೂಡಾ ದೇಶದ್ರೋಹದ ಕೃತ್ಯವೇ. ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಲು ಇಷ್ಟು ಸಾಕು. ದೇಶದ ಶ್ರೀಮಂತ ಹಾಗೂ ವೈವಿಧ್ಯಮಯ ತಿನಸುಗಳನ್ನು ನಾನು ಆಸ್ವಾದಿಸುತ್ತೇನೆ. ಈದ್‌ನಂದು ಕೊರ್ಮಾ, ಕ್ರಿಸ್‌ಮಸ್‌ನಂದು ಗೋವಾದಲ್ಲಿ ಕ್ಯಾಥೊಲಿಕ್ ಸ್ನೇಹಿತರಲ್ಲಿ ಹಂದಿಮಾಂಸದ ಸೊರ್ಪೊಟೇಲ್ ಹಾಗೂ ದೀಪಾವಳಿ ಸಂದರ್ಭದಲ್ಲಿ ಶ್ರೀಖಂಡ್ ಸವಿಯುತ್ತೇನೆ. ಆಹಾರದ ಹಕ್ಕು ಮತ್ತೆ ನನ್ನ ಸ್ವಾತಂತ್ರ್ಯ. ಅದು ನನ್ನನ್ನು ಬೆಳೆಸಿದೆ ಹಾಗೂ ಅದರಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ.

ಹೌದು, ನಾನು ದೇಶವಿರೋಧಿ; ಏಕೆಂದರೆ, ಭಾರತಮಾತೆಯ ಹೆಸರಿನಲ್ಲಿ ರಕ್ಷಣೆ ಇಲ್ಲದ ಪತ್ರಕರ್ತೆಯ ಮೇಲೆ ದಾಳಿ ಮಾಡಿದ ವಕೀಲರ ಕಾನೂನುಬಾಹಿರ ನೀತಿಯ ವಿರುದ್ಧ ಹಾಗೂ ಡೋಂಗಿ ರಾಷ್ಟ್ರಪ್ರೇಮಿಗಳ ಕೃತ್ಯ ತಡೆಯಲು ವಿಫಲರಾದ ಪೊಲೀಸರ ವಿರುದ್ಧ ನಾನು ಹೋರಾಡುತ್ತೇನೆ. (1992ರ ಡಿಸೆಂಬರ್‌ನ ಆ ದುರಂತ ದಿನಂದು ಕೂಡಾ ಮಹಿಳಾ ಪತ್ರಕರ್ತರ ಮೇಲೆ ಹಲ್ಲೆ ನಡೆದಿದ್ದನ್ನು ಮರೆಯುವಂತಿಲ್ಲ). ನಮ್ಮ ಸೈನಿಕರ ತ್ಯಾಗವನ್ನು ಹೊಗಳುವ ಹೆಮ್ಮೆಯ ಭಾರತೀಯ ನಾನು. ಈ ಕಾರಣದಿಂದ ನಮ್ಮ ಗಡಿಕಾಯುವ ಯೋಧರಿಗೆ ಹೆಚ್ಚಿನ ವೇತನ ನೀಡಬೇಕೇ ವಿನಃ ಈ ಆಡಳಿತ ತ್ರಿಶಂಕು ಸ್ಥಿತಿಯಲ್ಲಿ ಅವರು ಸಿಕ್ಕಿಹಾಕಿಕೊಳ್ಳುವಂತೆ ಮಾಡಬಾರದು ಎಂದು ಯೋಚಿಸುತ್ತೇನೆ. ನಾನು ಸಲಿಂಗಿಗಳ ಹಕ್ಕನ್ನು ಬೆಂಬಲಿಸುತ್ಥೇನೆ ಹಾಗೂ ಮರಣದಂಡನೆಯನ್ನೂ ತಾತ್ವಿಕವಾಗಿ ವಿರೋಧಿಸುತ್ತೇನೆ. ಜಾತಿ, ಧರ್ಮ ಅಥವಾ ಲಿಂಗದ ಹೆಸರಿನಲ್ಲಿ ನಡೆಯುವ ಯಾವ ಹಿಂಸಾಚಾರವೂ ಸಹ್ಯವಲ್ಲ. ಸಾರ್ವಜನಿಕವಾಗಿ ಕಟುವಾಸ್ತವಗಳನ್ನು ಪ್ರಶ್ನಿಸುವುದು ನನಗೆ ಇಷ್ಟ. ಅದು ನನ್ನನ್ನು ರಾಷ್ಟ್ರವಿರೋಧಿಯಾಗಿ ಮಾಡಿದರೆ ಮಾಡಲಿ ಬಿಡಿ.

ಈ ಎಲ್ಲ ಕಾರಣಗಳನ್ನೂ ಹೊರತುಪಡಿಸಿದರೂ ನಾನು ರಾಷ್ಟ್ರವಿರೋಧಿ. ಏಕೆಂದರೆ ನಾನು ಅಂಬೇಡ್ಕರ್ ಅವರ ಪರಿಕಲ್ಪನೆಯಾದ ಪ್ರಜಾಪ್ರಭುತ್ವ ಸಂವಿಧಾನವನ್ನು ನಾನು ನಂಬುತ್ತೇನೆ. ವೈವಿಧ್ಯಮಯ ಸಮಾಜದ ಮೇಲೆ "ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿ" ಹೆಸರಿನಲ್ಲಿ ಸಾಂಸ್ಕೃತಿಕ ರಾಷ್ಟ್ರೀಯವಾದದ ಹೊಸ ಅವತಾರ ವಿಧಿಸುವ ಹಕ್ಕು ಯಾರಿಗೂ ಇಲ್ಲ.

ದೇಶದ್ರೋಹಿ ಎಂಬ ನಿಂದನೆಯಿಂದ ನನಗೆ ಬೇಸರವಾದರೆ, ನನ್ನ ಮೂಲ ಐಕಾನ್ ಮಹ್ಮದ್ ಅಲಿ ಅವರ ಕಥೆಯಿಂದ ಸಾಂತ್ವನ ಪಡೆಯುವ ಪ್ರಯತ್ನ ಮಾಡುತ್ತೇನೆ. ಮಹ್ಮದ್ ಅಲಿ (ಇಸ್ಲಾಂಗೆ ಮತಾಂತರಹೊಂದುವ ಹಿಂದಿನ ಹೆಸರು ಕ್ಯಾಸಿಯಸ್ ಕ್ಲೇ) ಬಿಳಿಯರಿಗಷ್ಟೇ ಮೀಸಲಾಗಿದ್ದ ಒಂದು ಹೋಟೆಲ್‌ನ ಪ್ರವೇಶ ನಿರಾಕರಿಸಿದ್ದಕ್ಕೆ ಪ್ರತಿಭಟನಾರ್ಥವಾಗಿ ತಮ್ಮ ಚಿನ್ನದ ಪದಕವನ್ನು ನದಿಗೆ ಎಸೆದಿದ್ದರು. ಈ ಕ್ರಮದಿಂದ ಅವರನ್ನು ರಾಷ್ಟ್ರವಿರೋಧಿ ಎಂದು ಪರಿಗಣಿಸಿ, ಒಲಿಂಪಿಕ್ ಪದಕದ ಪಟ್ಟಿಯಿಂದ ಕಿತ್ತು ಹಾಕಲಾಯಿತು. ಹಲವು ವರ್ಷಗಳ ಬಳಿಕ, 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಜ್ಯೋತಿಯನ್ನು ಬೆಳಗಿದಾಗ, ದೇಶದ ಅತ್ಯಂತ ಶ್ರೇಷ್ಠ ಹೀರೊ ಎನಿಸಿದ ಮಹ್ಮದ್ ಅಲಿಯವರ ಕ್ಷಮೆ ಯಾಚಿಸುವುದು ಅಮೆರಿಕನ್ನರ ಮಾರ್ಗವಾಯಿತು. ನಿಮ್ಮಲ್ಲಿ ಕೂಡಾ ಕೆಲವು ಮಂದಿ ಒಂದು ದಿನ ’ತಪ್ಪಾಯಿತು’ ಎನ್ನುತ್ತೀರಿ ಎಂಬ ನಂಬಿಕೆ ಇದೆ!

ಘಟನೋತ್ತರ: ಕಳೆದ ವಾರ ದೆಹಲಿ ಜಿಮ್ಖಾನಾ ಲಿಟ್‌ಫೆಸ್ಟ್‌ನಲ್ಲಿ, ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ, ಅದು ಹಿಂಸೆಯನ್ನು ಪ್ರಚೋದಿಸುವವರೆಗೂ ಅದನ್ನು ಅಪರಾಧ ಎಂದು ಪರಿಗಣಿಸುವಂತಿಲ್ಲ ಎಂಬ ಹಕ್ಕನ್ನೂ ಸೇರಿಸಬೇಕು ಎಂದು ಸಲಹೆ ಮಾಡಿದ್ದೆ. ಮಾಜಿ ಸೇನಾಧಿಕಾರಿಯೊಬ್ಬರು ಕೋಪದಿಂದ ಎದ್ದುನಿಂತು, "ನೀವು ಒಬ್ಬ ರಾಷ್ಟ್ರವಿರೋಧಿ. ನಿಮ್ಮನ್ನು ಇಲ್ಲೇ ಹತ್ಯೆ ಮಾಡಬೇಕು" ಎಂದು ಉದ್ಗರಿಸಿದರು. ಜಿಮ್ಖಾನಾ ಕ್ಲಬ್‌ನ ಮೇಲ್ವರ್ಗದ ಪರಿಸರದಲ್ಲಿ ಕೂಡಾ ಇಂಥ ತಳಿಗಳು ಇವೆ ಎಂದಾದರೆ, ನಿಜಕ್ಕೂ ಆತಂಕಕಾರಿ.

ಕೃಪೆ : ಹಿಂದುಸ್ಥಾನ್ ಟೈಮ್ಸ್

Writer - ರಾಜದೀಪ್ ಸರದೇಸಾಯಿ

contributor

Editor - ರಾಜದೀಪ್ ಸರದೇಸಾಯಿ

contributor

Similar News