ತೈಲ ಬೆಲೆ ಕುಸಿತ ತಂದಿದೆ ಶ್ರೀಮಂತ ಬ್ರೂನೈ ಗೆ ಸಂಕಷ್ಟ
ಏಷ್ಯಾ ಖಂಡದ ಶ್ರೀಮಂತ ರಾಷ್ಟ್ರಗಳಲ್ಲೊಂದಾದ ಬ್ರೂನೈ ತೈಲ ಬೆಲೆ ಕುಸಿತದಿಂದಾಗಿ ಆರ್ಥಿಕ ಸಂಕಷ್ಟದತ್ತ ಹೊರಳುತ್ತಿರುವ ಪ್ರಥಮ ದೇಶವಾಗುವತ್ತ ನಿಧಾನವಾಗಿ ಹೆಜ್ಜೆಯಿಡುತ್ತಿದೆ. ಸುಮಾರು 4.2 ಲಕ್ಷ ಜನಸಂಖ್ಯೆ ಹೊಂದಿರುವ ಈ ವಿಶ್ವದ ನಾಲ್ಕನೆ ಅತೀ ಶ್ರೀಮಂತ ರಾಷ್ಟ್ರ 2015-2016ನೆ ಸಾಲಿನಲ್ಲಿ ಜಿಡಿಪಿಯ ಶೇ.16ರಷ್ಟು ವಿತ್ತೀಯ ಕೊರತೆಯನ್ನೆದುರಿಸುತ್ತಿದೆ.
ಅದರ ಅಪಾರ ತೈಲ ಸಂಪನ್ಮೂಲಗಳಿಗಿರುವ ಭಾರೀ ಬೇಡಿಕೆಯಿಂದಾಗಿ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿರುವ ಈ ರಾಷ್ಟ್ರದಲ್ಲಿ ನಾಗರಿಕರು ಯಾವುದೇ ಮಾರಾಟ ತೆರಿಗೆ ತೆರಬೇಕಾಗಿಲ್ಲ. ಶಿಕ್ಷಣವೂ ಉಚಿತವಾಗಿದ್ದು ಗೃಹ ನಿರ್ಮಾಣಕ್ಕೂ ಸಬ್ಸಿಡಿ ನೀಡಲಾಗುತ್ತಿದೆ.
ಆದರೆ ಪ್ರಾಯಶಃ ಈ ದೇಶದ ಒಳ್ಳೆಯ ದಿನಗಳು ಅಂತ್ಯಗೊಳ್ಳಲು ಆರಂಭಿಸಿದೆಯೇನೋ. ಜನವರಿ2015ರಿಂದ ಜಾಗತಿಕ ತೈಲ ಬೆಲೆ ಶೇ.40ರಷ್ಟು ಕುಸಿತವಾಗಿದ್ದರೆ, ಅತ್ಯಂತ ಹೆಚ್ಚಾಗಿದ್ದ 2008ರಿಂದ ಇಲ್ಲಿಯವರೆಗೆ ಶೇ.78ರಷ್ಟು ಕುಸಿತ ಕಂಡಿವೆ. ಮೇಲಾಗಿ ಬ್ರೂನೈ ದೇಶದ ಶೇ.95ರಷ್ಟು ರಫ್ತು ತೈಲ ಹಾಗೂ ಅನಿಲವಾಗಿರುವುದರಿಂದ ಕಳೆದ ಮೂರು ವರ್ಷಗಳಿಂದ ಸಹಜವಾಗಿ ಈ ದೇಶದ ಜಿಡಿಪಿ ಕಡಿಮೆಯಾಗಿದೆ.
ಈ ಬೆಳವಣಿಗೆ ದೇಶದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡಿದ್ದು ಸರಕಾರದ ಆದಾಯ ಕೂಡ 2012-2013 ಆರ್ಥಿಕ ವರ್ಷಕ್ಕೆ ಹೋಲಿಸಿದಾಗ ಶೇ.70ರಷ್ಟು ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2015-2016 ಆಯವ್ಯಯದಲ್ಲಿ ಶೇ.4ರಷ್ಟು ಕಡಿತಗೊಳಿಸಲಾಗಿದ್ದರೂ ಇನ್ನೂ ವೆಚ್ಚಗಳಲ್ಲಿ ಕಡಿತ ಮಾಡುವ ಅಗತ್ಯವಿದೆಯೆಂದು ಹೇಳಲಾಗುತ್ತಿದೆ. ಬಜೆಟ್ಟಿನಲ್ಲಿ ಮಾಡಲಾಗುವ ಇಂತಹ ಕಡಿತ ಅಲ್ಲಿನ ಶ್ರೀಮಂತಿಕೆ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿರುವ ಜನತೆಗೆ ಸಹಜವಾಗಿ ಸಿಟ್ಟು ತರಿಸಬಹುದು. ಬ್ರೂನೈ ಸುಲ್ತಾನ ಕೂಡ ಐಷಾರಾಮಿ ಜೀವನ ನಡೆಸುತ್ತಿದ್ದು ಆತನ ಒಟ್ಟು ಆಸ್ತಿ 27 ಮಿಲಿಯನ್ ಡಾಲರ್ ಎಂದು ಹೇಳಲಾಗುತ್ತಿದೆ. ಬ್ರೂನೈ ಈಗಾಗಲೇ ವಿಷನ್ ಬ್ರೂನೈ 2035 ಎಂಬ ಅಭಿವೃದ್ಧಿ ಯೋಜನೆಯನ್ನು ಘೋಷಿಸಿದ್ದರೆ, ಇಲ್ಲಿಯವರೆಗೆ ಈ ನಿಟ್ಟಿನಲ್ಲಿ ಏನೂ ಬೆಳವಣಿಗೆಗಳು ಕಂಡು ಬಂದಿಲ್ಲ. ತೈಲ ಹಾಗೂ ಅನಿಲ ಘಟಕಗಳನ್ನು ಹೊರತುಪಡಿಸಿ ಬೇರೆ ಕ್ಷೇತ್ರಗಳತ್ತ ಗಮನ ಹರಿಸುವುದು ಬಿಟ್ಟು ಬ್ರೂನೈ ಇನ್ನೂ ಹೆಚ್ಚು ತೈಲ ನಿಕ್ಷೇಪ ನಡೆಸಲು ನಿರ್ಧ ರಿಸಿದ್ದೇ ಈಗಿನ ಸಮಸ್ಯೆಗೆ ಕಾರಣವಾಗಿ ಬಿಟ್ಟಿದೆ.
ಇತ್ತೀಚೆಗೆ ತನ್ನ ಹೊಸ ವರ್ಷದ ಭಾಷಣದಲ್ಲಿ ದೇಶದಲ್ಲಿ ಹಲವಾರು ಬೃಹತ್ ಮೂಲಸೌಕರ್ಯಾಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ್ದರೂ ವಿದೇಶಿ ಕಂಪೆನಿಗಳು ಈಗಿನ ಪರಿಸ್ಥಿತಿಯಲ್ಲಿ ಬ್ರೂನೈಗೆ ಬಂದು ಕೈಗಾರಿಕೆಗಳನ್ನು ಸ್ಥಾಪಿಸುವವೇ ಎಂಬುದು ಈಗಿನ ಪ್ರಶ್ನೆ. ವಿಶ್ವ ಬ್ಯಾಂಕಿನ ಪ್ರಕಾರ ಉದ್ಯಮ ನಡೆಸಲು ಅನುಕೂಲಕರ ವಾತಾವರಣವಿರುವ ದೇಶಗಳಲ್ಲಿ ಜಗತ್ತಿನಲ್ಲೇ ಬ್ರೂನೈ 84ನೆ ಸ್ಥಾನದಲ್ಲಿದೆ. ಮೇಲಾಗಿ ಇಲ್ಲಿನ ಶೇ.70ರಿಂದ ಶೇ.80ರಷ್ಟು ಜನರು ಸರಕಾರಿ ನೌಕರರು ಅಥವಾ ಸರಕಾರಕ್ಕೆ ಸಂಬಂಧ ಪಟ್ಟ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿರುವುದರಿಂದ ಬೇರೆ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಆಂತರಿಕವಾಗಿ ನಿರೀಕ್ಷಿಸುವುದು ಅಸಾಧ್ಯವಾಗಿದೆ.
ಬ್ರೂನೈನ ಕರೆನ್ಸಿಯ ವೌಲ್ಯ ಸಿಂಗಾಪುರ ಡಾಲರಿಗೆ ಸಮನಾಗಿರುವುದರಿಂದ ಜೀವನ ನಡೆಸಲು ವಿಶ್ವದಲ್ಲೇ ಅತ್ಯಂತ ದುಬಾರಿ ರಾಷ್ಟ್ರವೆಂದು ಬ್ರೂನೈ ಪರಿಗಣಿತವಾಗಿದೆ.
ವಿದೇಶಿ ಕಾರ್ಮಿಕರು ಹಾಗೂ ಬಂಡವಾಳ ದೇಶದಿಂದ ಹೊರ ಹೋಗುವುದೊಂದೇ ಬ್ರೂನೈನ ಈಗಿನ ತಲೆ ನೋವಾಗುವುದಿಲ್ಲ ತನ್ನ ಮಧ್ಯಮ ಆದಾಯದ ನೆರೆ ರಾಷ್ಟ್ರಗಳಾದ ಮಲೇಷ್ಯ ಹಾಗೂ ಥಾಯ್ಲೆಂಡ್‌ಗಳನ್ನು ಮೀರಿ ಸಾಗಿ ತನ್ನ ದೇಶದ ನಾಗರಿಕರ ಮನದಲ್ಲಿ ತಾನಿನ್ನೂ ಉನ್ನತ ಸ್ಥಿತಿಯಲ್ಲಿದ್ದೇನೆಂದು ಮನವರಿಕೆ ಮಾಡದ ಹೊರತು ಬ್ರೂನೈ ತೀವ್ರ ಸಂಕಷ್ಟಕ್ಕೀಡಾಗಲಿದೆ.
ಬಿಪಿ ವರ್ಲ್ಡ್ ಎನರ್ಜಿ ಔಟ್‌ಲುಕ್ ಪ್ರಕಾರ ಬ್ರೂನೈ ದೇಶದ ತೈಲ ಸಂಪನ್ಮೂಲಗಳು ಮುಂದಿನ 22 ವರ್ಷಗಳಲ್ಲಿ ಮುಗಿಯಲಿವೆ. ಇದರ ಬಿಸಿ ದೇಶಕ್ಕೆ ತಟ್ಟುವ ಮೊದಲು ಬ್ರೂನೈ ಮೈ ಕೊಡವಿ ಸುಸ್ಥಿರ ಹಾಗೂ ಚೈತನ್ಯಯುತ ದೇಶವಾಗಿ ಹೊರಹೊಮ್ಮಲು ಸರ್ವರೀತಿಯ ಪ್ರಯತ್ನಗಳನ್ನೂ ಮಾಡಬೇಕಿದೆ.