ದುರುಪಯೋಗವಾಗುತ್ತಿರುವ ‘ದೇಶದ್ರೋಹ’ ಆರೋಪ

Update: 2016-02-20 18:12 GMT

ದೇಶದ್ರೋಹದ ಆರೋಪ; ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರ ಸಂಘಟನೆಯ ಬಗ್ಗೆ ಬಿಜೆಪಿಯ ಸಚಿವ ಬಂಡಾರು ದತ್ತಾತ್ರೇಯರವರು ಪತ್ರ ಬರೆದು ಹೇಳಿದ್ದು ದೇಶದ್ರೋಹಿಗಳು, ಸಮಾಜಘಾತುಕರು ವಿವಿಯೊಳಗೆ ಸೇರಿಕೊಂಡಿದ್ದಾರೆ ಎಂದು. ಮುಝಪರ್ ನಗರ ಗಲಭೆ ಕುರಿತ ಚಿತ್ರ ‘ಮುಝಪರ್ ನಗರ್ ಬಾಕಿ ಹೈ’ ವೀಕ್ಷಣೆಗೆ ಸಂಬಂಸಿದಂತೆ ಹೈದರಾಬಾದ್ ವಿವಿಯ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಷಿಯೇಶನ್(ಎಎಸ್‌ಎ) ಮುಖಂಡರು ತೆಗೆದುಕೊಂಡ ನಿಲುವಿಗೆ ಅವರಿಗೆ ಈ ಪಟ್ಟ ಕಟ್ಟಲಾಯಿತು ಮತ್ತು ಈ ಟ್ರೆಂಡ್ ಜೆಎನ್‌ಯುನಲ್ಲಿಯೂ ಮುಂದುವರಿದಿದೆ. ವಿದ್ಯಾರ್ಥಿ ಮುಖಂಡ ಕನ್ಹಯ್ಯಾ ಕುಮಾರ್‌ರನ್ನು ಬಂಸಲಾಗಿದೆ. ದೇಶದ್ರೋಹಿ ಈ ಟ್ಯಾಗ್‌ನ ಬಹುಮುಖ್ಯ ನಿರ್ಣಾಯಕ ಅಂಶ ಹಿಂದುತ್ವ ವಿರೋಸುವವರು... ಮೋದಿ ವಿರೋಸುವವರು... ಬಿಜೆಪಿ ವಿರೋಸುವವರು... ಹೀಗೆ ಸಾಗುತ್ತದೆ. ಅಂದಹಾಗೆ ಈ ಟ್ಯಾಗ್‌ಗೆ ಈಗಾಗಲೇ ಮುಸ್ಲಿಮ್ ಸಮುದಾಯದ ಅಮಾಯಕರನ್ನು ಸಿಕ್ಕಿಸಿ ಅವರನ್ನು ಇಡೀ ದೇಶವೇ ಸಂಶಯದಿಂದ ನೋಡುವಂತಹ ವಾತಾವರಣ ಸೃಷ್ಟಿಸುವುದರಲ್ಲಿ ಪಟ್ಟಭದ್ರರು ಯಶಸ್ವಿಯಾಗಿದ್ದಾರೆ. ಸದ್ದಿಲ್ಲದೆ ನಡೆಯುತ್ತಿರುವ ಸಂಚೆಂದರೆ ಅಂತಹ ಟ್ಯಾಗ್‌ಗೆ ಅಂಬೇಡ್ಕರ್‌ವಾದಿ ವಿದ್ಯಾರ್ಥಿ ಸಂಘಟನೆಗಳನ್ನು, ಎಡಪಂಥೀಯ ವಿದ್ಯಾರ್ಥಿ ಮುಖಂಡರುಗಳನ್ನು ಸೇರಿಸಿಕೊಳ್ಳುವುದು. ಆ ಮೂಲಕ ಹಿಂದುತ್ವದ ಬಹುಮುಖ್ಯ ವಿರೋ ನೆಲೆಯನ್ನು ದಮನಮಾಡುವ ‘ದೇಶದ್ರೋಹಿ’ ಟ್ಯಾಗ್ ಅಂಟಿಸುವ ಮಾರ್ಗ ಹುಡುಕಿಕೊಂಡಿರುವುದು. ಹಾಗಿದ್ದರೆ ಇದರ ಅರ್ಥ ವಿದ್ಯಾರ್ಥಿಗಳು ಚರ್ಚೆ-ಸಂವಾದಗಳನ್ನು ಬಿಟ್ಟು, ಹಿಂದುತ್ವದ ವಿರುದ್ಧ ದನಿ ಎತ್ತುವುದ ಬಿಟ್ಟು, ಮತಾಂತರದ ಸುದ್ದಿ ಬಿಟ್ಟು, ದನ ತಿನ್ನುವ ಪರಿಪಾಟ ಬಿಟ್ಟು, ಅಸಮಾನತೆಯ ವಿರುದ್ಧ ದನಿ ಎತ್ತುವುದು ಬಿಟ್ಟು, ಮೀಸಲಾತಿ ಕೇಳುವುದು ಬಿಟ್ಟು, ಮೀಸಲಾತಿ ಪರ ವಾದ ಮಾಡುವುದು ಬಿಟ್ಟು, ಅಸ್ಪಶ್ಯತೆ ಆಚರಿಸುವವರ ವಿರುದ್ಧ ದನಿ ಎತ್ತುವುದು ಬಿಟ್ಟು, ದೌರ್ಜನ್ಯದ ವಿರುದ್ಧ ದೂರು ನೀಡುವುದು ಬಿಟ್ಟು, ಅಸಮಾನತೆಯ ವಿರುದ್ಧ ಹೋರಾಡಿದವರ ಸಿದ್ಧಾಂತ ಪಸರಿಸುವುದು ಬಿಟ್ಟು ಬಲಪಂಥೀಯ ಸಂಘಟನೆಗಳ ಮತ್ತು ಹಿಂದುತ್ವ ಪ್ರತಿಪಾದಿಸುವ ಪಕ್ಷಗಳ ಗುಲಾಮರಾಗಬೇಕು ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸೆಲ್ಲೋಟೇಪ್ ಅಂಟಿಸಿಕೊಂಡು ಬುದ್ಧಿ ಮತ್ತು ಮನಸ್ಸು ಬಂದ್ ಮಾಡಿಕೊಳ್ಳಬೇಕು ಎಂಬುದು. ಪ್ರಶ್ನೆಯೇನೆಂದರೆ ಹೀಗೆ ಆಸೆ ಪಡುವುದು? ಅಂದರೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಚಿಂತಕರು ತಮ್ಮನ್ನು ವಿರೋಸದೆ ನಮ್ಮ ಚಿಂತನೆಗಳನ್ನು ಒಪ್ಪಿಕೊಳ್ಳಬೇಕು ಇಲ್ಲವೆ ಗಪ್‌ಚುಪ್ ಎಂದಿರಬೇಕು ಎಂದು ಹಿಂದುತ್ವವಾದಿಗಳು ಆಸೆ ಪಡುವುದು ಸಂವಿಧಾನಬದ್ಧ ನಡವಳಿಕೆ ಹೇಗಾಗುತ್ತದೆ ಮತ್ತು ಭಾರತದ ಸ್ವಾತಂತ್ರ್ಯ ನಿರ್ಮಾಪಕರು ಬ್ರಿಟಿಷರ ವಿರುದ್ಧ ಹೋರಾಡಿ ಗಳಿಸಿಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯಾದರೂ ಎಲ್ಲಿ ಸಿಗುತ್ತದೆ? ಒಂದರ್ಥದಲ್ಲಿ ಇದು ಪ್ರಜಾಪ್ರಭುತ್ವವನ್ನು ವಶಪಡಿಸಿಕೊಂಡು ದೇಶದ ಸ್ವಾತಂತ್ರ್ಯವನ್ನು ಆ ಮೂಲಕ ಜನತೆಯ, ಅದರಲ್ಲೂ ವಿದ್ಯಾರ್ಥಿಗಳ ಬೌದ್ಧಿಕ ಚಿಂತನೆಯ ಹಕ್ಕುಗಳನ್ನೇ ಕಿತ್ತುಕೊಳ್ಳುವ ಹುನ್ನಾರವಾಗುತ್ತದಲ್ಲವೇ? ಹಾಗೆಯೇ ದೇಶವಾಸಿ ವಿದ್ಯಾರ್ಥಿಗಳ ‘ಯೋಚಿಸುವ ಸ್ವಾತಂತ್ರ್ಯ, ಯೋಚಿಸಿದ್ದನ್ನು ಹೇಳುವ ಸ್ವಾತಂತ್ರ್ಯ’ವನ್ನು ಕಿತ್ತುಕೊಂಡು ಅಂತಹವರನ್ನು ದೇಶದ್ರೋಹಿಗಳೆಂದು ಕರೆದು ಜೈಲಿಗೆ ತಳ್ಳಿ ದೇಶದ ಘನತೆವೆತ್ತ ಸಂವಿಧಾನದ ವೌಲ್ಯಗಳನ್ನು ಹಳ್ಳಹಿಡಿಸಿದರೆ ಅಂತಹದ್ದು ದೇಶಪ್ರೇಮದ ಪ್ರಕ್ರಿಯೆ ಹೇಗಾಗುತ್ತದೆ ಎಂಬ ಗಂಭೀರ ಪ್ರಶ್ನೆಯನ್ನು ಕೂಡ ಇಲ್ಲಿ ಕೇಳಬೇಕಾಗುತ್ತದೆ. ನಿಜವಾದ ದೇಶಪ್ರೇಮ; ಈ ದೇಶದ ಸಮಸ್ತರೂ ಅವರು ಮೇಲು-ಕೀಳು ಎನ್ನದೆ, ಆ ಧರ್ಮ-ಈ ಧರ್ಮ ಎನ್ನದೆ ಸೌಹಾರ್ದತೆಯಿಂದ ಬದುಕುವ ವಾತಾವರಣ ನಿರ್ಮಿಸುವುದು. ಇದನ್ನೆ ಭಾರತದ ಸಂವಿಧಾನದ ಪೀಠಿಕೆ ಸ್ವಾತಂತ್ರ್ಯ- ಸಮಾನತೆ-ಸಹೋದರತೆ ಎನ್ನುತ್ತದೆ ಮತ್ತದರ ಜಾರಿ ಸಂವಿಧಾನಬದ್ಧ ಸರಕಾರದ ಹೊಣೆ ಎನ್ನುತ್ತದೆ. ಅದರಲ್ಲೂ ನೋವುಂಡವರು ಮುಂದೆ ಬರಬೇಕು, ಸಮಾನತೆಯಿಂದ ಸಮಸಮಾಜದ ಅಡಿಯಲ್ಲಿ ಬದುಕಬೇಕು ಇದು ಸಂವಿಧಾನದ ಪ್ರಮುಖ ಆಶಯ. ಯಾಕೆಂದರೆ ಸಹಸ್ರಾರು ವರ್ಷಗಳಿಂದ ಹೊಟ್ಟೆ ತುಂಬ ಉಂಡವರೇ ಮತ್ತೂ ಉಣ್ಣಬೇಕು... ಇನ್ನೊಬ್ಬರಿಗೆ ಅದನ್ನು ನೀಡುವುದಿಲ್ಲ... ಇನ್ನೊಬ್ಬರು ನಮ್ಮ ಅಡಿಯಾಳಾಗಿ ಬದುಕಬೇಕು... ನಮ್ಮ ವಿರುದ್ಧ ದನಿ ಎತ್ತಬಾರದು... ಮತ್ತು ಇದಕ್ಕೆಲ್ಲ ದೇಶಪ್ರೇಮದ ಹಣೆಪಟ್ಟಿ ಅಂಟಿಸುವುದು... ಖಂಡಿತ ಇವ್ಯಾವುವೂ ನಾಗರಿಕತೆಯ ಒಳ್ಳೆಯ ಲಕ್ಷಣಗಳಾಗುವುದಿಲ್ಲ. ನಿಜ, ಪ್ರಜಾಪ್ರಭುತ್ವದಲ್ಲಿ ಪಕ್ಷವೊಂದಕ್ಕೆ ಕೇಂದ್ರದಲ್ಲಿ ಬಹುಮತ ಬಂದಿರಬಹುದು. ಆದರೆ ಹಾಗಂತ ಆ ಬಹುಮತವನ್ನು ದಮನಕಾರಿ ನೀತಿಯಾಗಿ ಬಳಸಿಕೊಂಡು ವಿವಿಗಳಲ್ಲಿ ನಡೆಯುತ್ತಿರುವ ಬೌದ್ಧಿಕ ಚರ್ಚೆಗಳನ್ನು, ವಿರೋ ವಿದ್ಯಾರ್ಥಿ ಸಂಘಟನೆಗಳನ್ನು, ಮತ್ತವರ ಚಟುವಟಿಕೆಗಳನ್ನು ಹತ್ತಿಕ್ಕುವ ಅಸವಾಗಿ ಬಳಸಿಕೊಳ್ಳುವುದು ಅಕ್ಷಮ್ಯ. ಹಾಗೆ ಹೇಳುವುದಾದರೆ ಬಹುಪಕ್ಷ ಪದ್ಧತಿಯ ಭಾರತದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಬಂದಿರುವುದು ಶೇ.31 ಮತಗಳು ಅಷ್ಟೆ. ಇನ್ನುಳಿದ ಶೇ.69 ಮತಗಳು ಅವರಿಗೆ ಬಂದಿಲ್ಲ ಎಂದರೆ ಅವು ವಿರುದ್ಧ ಇವೆ ಎಂದರ್ಥ ಮತ್ತು ಇದನ್ನು ಹಾಲಿ ಅಕಾರದಲ್ಲಿರುವ ಮೋದಿಯವರ ಸರಕಾರ ಅರ್ಥಮಾಡಿಕೊಳ್ಳಬೇಕು.ಸಂದರ್ಭದಲ್ಲಿ ‘ದೇಶದ್ರೋಹ’ ಪಟ್ಟಕ್ಕೆ, ಹಾಗೆ ಪಟ್ಟ ಅಂಟಿಸಿಕೊಂಡ ಹೈದರಾಬಾದಿನ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಷಿಯೇಶನ್ ಮತ್ತು ಜೆಎನ್‌ಯುನ ಎಸ್‌ಎ್ಐ ಸಂಘಟನೆಗಳು ಅದನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಲೂಬಹುದು. ಅದೆಂದರೆ ನಮ್ಮದೇ ದೇಶವಾಸಿ ಶೋಷಿತ ಸಮುದಾಯಗಳ ವಿರುದ್ಧ ಅಸ್ಪಶ್ಯತೆ-ಜಾತಿಭೇದ ಆಚರಿಸುವವರು, ಅವರು ಪಡೆಯುವ ಮೀಸಲಾತಿ ವಿರುದ್ಧ ಜಾಗೃತಿ ಮೂಡಿಸುವವರು, ಅವರ ಮೂಲಭೂತಹಕ್ಕುಗಳಿಗೆ ತಡೆಯೊಡ್ಡುವವರು ಇಂತಹವರನ್ನು ಎಎಸ್‌ಎ ಮತ್ತು ಎಸ್‌ಎ್ಐನವರು ‘ದೇಶದ್ರೋಹಿ’ಗಳು ಎಂದು ವ್ಯಾಖ್ಯಾನಿಸಬಹುದು. ಯಾಕೆಂದರೆ ಇಂತಹ ಚಿಂತನೆಗಳನ್ನು ಆಗಾಗ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಮಾಡುತ್ತಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಮತ್ತು ಅವರ ಈ ಕ್ರಿಯೆಗೆ ಮೀಸಲಾತಿ ಪರಾಮರ್ಶಿಸಬೇಕು ಎಂಬ ಅವರ ಮಾತೃ ಸಂಘಟನೆಯ ಹಿರಿಯರ ಒತ್ತಾಸೆಯೂ ಇರುತ್ತದೆ. ಈಚಿನ ಉದಾಹರಣೆಯೊಂದನ್ನೇ ಹೇಳುವುದಾದರೆ ಕಳೆದ ೆೆಬ್ರವರಿ 3ರಂದು ಬೆಂಗಳೂರಿನಲ್ಲಿ ಒಬಿಸಿ/ಎಸ್ಸಿ/ಎಸ್ಟಿ ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಪ್ರತಿನಿಸುವ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ಒತ್ತಾಯಿಸಿ ಬೃಹತ್ ರ್ಯಾಲಿ ಹಮ್ಮಿಕೊಂಡಾಗ ಎಬಿವಿಪಿ ತಪ್ಪಿಯೂ ಕೂಡ ಅತ್ತ ಕಣ್ಣೆತ್ತಿ ನೋಡಲಿಲ್ಲ. ಕಡೇ ಪಕ್ಷ ವಿದ್ಯಾರ್ಥಿಗಳ ಹೋರಾಟಕ್ಕೆ ಒಂದು ಬೆಂಬಲದ ಹೇಳಿಕೆಯನ್ನು ಹೊರಡಿಸಲಿಲ್ಲ. ಆದರೆ ಅದೇ ಬಿವಿಎಸ್ ಮಾದರಿಯ ಶೋಷಿತ ಸಮುದಾಯದ ವಿದ್ಯಾರ್ಥಿ ಸಂಘಟನೆಗಳ ವಿರುದ್ಧ ಎಬಿವಿಪಿ ಹೈದರಾಬಾದ್ ಮತ್ತು ದಿಲ್ಲಿಯಲ್ಲಿ ನಡೆದಿರುವಂತೆ ಬಹಳ ಸಲೀಸಾಗಿ ದೇಶದ್ರೋಹದ ಪಟ್ಟ ಕಟ್ಟುತ್ತದೆ! ಈ ಸಂದರ್ಭದಲ್ಲಿ ಅ್ಝಲ್‌ಗುರು ಮತ್ತು ಪಾಕಿಸ್ತಾನದತ್ತ ಕೈತೋರಿಸಲಾಗುತ್ತದೆ. ಆದರೆ ವಾಸ್ತವವೆಂದರೆ ಈಚೆಗಷ್ಟೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಿಂದ ಹಿಂದಿರುವಾಗ ಅದೇ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ಕೊಟ್ಟರು! ಅಂದಹಾಗೆ ಮುಸ್ಲಿಮ್ ಸಮುದಾಯದ ನ್ಯಾಯಬದ್ಧ ಹೋರಾಟಗಳನ್ನು ಬೆಂಬಲಿಸುವ ಎಎಸ್‌ಎ ಮತ್ತು ಎಸ್‌ಎ್ಐಗಳನ್ನು ವಿರೋಸುವವರು ಮೋದಿಯವರ ಈ ಪಾಕಿಸ್ತಾನ ಭೇಟಿಯನ್ನು ಯಾವ ರೀತಿ ವ್ಯಾಖ್ಯಾನಿಸುತ್ತಾರೆ? ನಿಜ, ಪ್ರಧಾನಿ ಮೋದಿಯವರದ್ದು ಇಲ್ಲಿ ಸೌಹಾರ್ದದ ಬೇಟಿ. ಆದರೆ ಅಂತಹದ್ದೆ ಸೌಹಾರ್ದತೆ ಅಥವಾ ಮಾನವೀಯ ನೆಲೆಗಟ್ಟನ್ನು ಅ್ಝಲ್‌ಗುರು ಪ್ರಕರಣ ಅಥವಾ ಮುಝಪರ್ ನಗರ ಗಲಭೆ ಚಲನಚಿತ್ರ ವೀಕ್ಷಣೆಯ ವಿಷಯದಲ್ಲಿ ಬಲಪಂಥೀಯರು ಕಾಣಬಾರದೇಕೆ? ಈ ನಿಟ್ಟಿನಲ್ಲಿ ಸ್ಪಷ್ಟ, ಅದೆಂದರೆ ಶೋಷಿತ ಸಮುದಾಯದ ವಿದ್ಯಾರ್ಥಿಗಳ ವಿರುದ್ಧ ‘ದೇಶದ್ರೋಹ’ದ ಆರೋಪ ಇಲ್ಲಿ ದುರುಪಯೋಗವಾಗುತ್ತಿದೆ ಅಥವಾ ಹತ್ತಿಕ್ಕುವ ಅಸವಾಗಿ ಬಳಕೆಯಾಗುತ್ತಿದೆ ಎಂಬುದು. 

Writer - ರಘೋತ್ತಮ ಹೊ.ಬ. ಮೈಸೂರು

contributor

Editor - ರಘೋತ್ತಮ ಹೊ.ಬ. ಮೈಸೂರು

contributor

Similar News

ಓ ಮೆಣಸೇ...