ರಾಷ್ಟ್ರಧ್ವಜ ಹಾರಿಸಿದ್ದಕ್ಕಾಗಿ ಕೇಸು ಜಡಿದ ಆರೆಸ್ಸೆಸ್ಸೂ... ಸ್ಮೃತಿ ಇರಾನಿಯ ಧ್ವಜ ಹಾರಿಸುವ ಯೋಜನೆಯೂ...
"ಯಾರು ಝಂಡಾ ಗೌರವಿಸಲು ಇಷ್ಟಪಡುವುದಿಲ್ಲವೋ ಅಂಥವರು ದಂಡ ಹಿಡಿಯಿರಿ"- ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಿದ ಕೇಂದ್ರ ಸರ್ಕಾರದ ಕ್ರಮ ವಿರುದ್ಧ ಪ್ರತಿರೋಧವನ್ನು ಕಲ್ಪಿಸಿಕೊಂಡು ಗುರುವಾರ ರಾತ್ರಿ ಮಾಡಿ ಟ್ವೀಟ್ ಇದು. ಅರ್ನಾಬ್ ಗೋಸ್ವಾಮಿ ಟಿವಿ ಕಾರ್ಯಕ್ರಮದ ಪ್ರಕಾರ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ಧಾರದ ಬಗ್ಗೆ ಇಡೀ ದೇಶವೇ ಕುಣಿದು ಕುಪ್ಪಳಿಸುತ್ತಿದೆ. ನಿವೃತ್ತ ಸೇನಾಧಿಕಾರಿ ಜನರಲ್ ಜಿ.ಡಿ.ಬಕ್ಷಿ ಅವರಂತೂ ಭಾವುಕರಾಗಿ ಆನಂದಬಾಷ್ಪ ಸುರಿಸಿದರು. ಈ ಅಭೂತಪೂರ್ವ ದೇಶಭಕ್ತಿಯ ಚಿಲುಮೆ ಉಕ್ಕಿದ್ದರಿಂದ ಸ್ಫೂರ್ತಿ ಪಡೆದ ಬಿಜೆಪಿ ಮುಖಂಡ ನೂಪುರ್ ಶರ್ಮ, ಟ್ವೀಟರ್ ಮೂಲಕ ಶಹಬ್ಬಾಸ್‌ಗಿರಿ ಪ್ರಮಾಣಪತ್ರವನ್ನೂ ಕೊಟ್ಟರು. "ಹಿರಿಯ ಸೇನಾಧಿಕಾರಿ ಜಿ.ಡಿ.ಬಕ್ಷಿ ರಾಷ್ಟ್ರಧ್ವಜವನ್ನು ಸಮರ್ಥಿಸಿಕೊಂಡು, ಭಾವುಕರಾಗಿ ಟಿವಿ ಕಾರ್ಯಕ್ರಮದಲ್ಲೇ ಗಳಗಳನೆ ಅತ್ತರು. ಮೈನವಿರೇಳಿಸುವ ದೃಶ್ಯ! ಕಾಂಗ್ರೆಸ್+ಕಮ್ಯುನಿಸ್ಟ್+ಎಡಪಕ್ಷದಂಥ ಅವಕಾಶವಾದಿಗಳಿಗೆ ನಾಚಿಕೆಯಾಗಬೇಕು"
ಝಂಡಾ- ದಂಡದ ನೈಜ ಕಥೆ
2001ರ ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳ ಎಂಬ ಒಂದು ಸಂಘಟನೆಯ ಮೂವರು ಕಾರ್ಯಕರ್ತರು, ಕೇಶವ ಹೆಡಗೇವಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನಾಗ್ಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರ ಕಚೇರಿಯ ಆವರಣಕ್ಕೆ ಬಂದರು.
ಕೆಲವೇ ನಿಮಿಷಗಳ ಬಳಿಕ ಮೂವರು ಕಾರ್ಯಕರ್ತರಾದ ಬಾಬಾ ಮೆಂಧೆ, ರಮೇಶ್ ಕಾಳಂಬೆ ಹಾಗೂ ದಿಲೀಪ್ ಚಟ್ಟಾನಿ ರಾಷ್ಟ್ರಭಕ್ತಿಯ ಘೋಷಣೆಗಳನ್ನು ಕೂಗುತ್ತಾ ತಿರಂಗ ಹೊರತೆಗೆದರು. ಮುಂದೆ ಏನಾಯಿತು ಕಲ್ಪನೆ ಇದೆಯೇ?
ಮೊಟ್ಟಮೊದಲನೆಯದಾಗಿ ಆರ್‌ಎಸ್‌ಎಸ್ ಆವರಣದ ಉಸ್ತುವಾರಿ ಹೊಂದಿದ್ದ ಸುನೀಲ್ ಕಾಥ್ಲೆ, ಈ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸದಂತೆ ತಡೆಯುವ ಪ್ರಯತ್ನ ಮಾಡಿದರು. ತ್ರಿವರ್ಣ ಧ್ವಜ ಹಾರಿಸಲು ಅವರು ಯಶಸ್ವಿಯಾದಾಗ, ಈ ಕಾರಣಕ್ಕೆ ಆರ್‌ಎಸ್‌ಎಸ್ ಇವರನ್ನು ನ್ಯಾಯಾಲಯದ ಕಟಕಟೆಗೆ ಎಳೆಯಿತು. ಹನ್ನೆರಡು ವರ್ಷಗಳ ಸುಧೀರ್ಘ ಅವಧಿವರೆಗೆ, ಈ ಮೂವರು ರಾಷ್ಟ್ರಪ್ರೇಮಿಗಳನ್ನು ನಾಗ್ಪುರ ನ್ಯಾಯಾಲಯ ವಿಚಾರಣೆ ನಡೆಸಿತು. ಬಾಂಬೆ ಪೊಲೀಸ್ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ಅನ್ವಯವೇ ಸಂಘ ಪರಿವಾರದ ಆವರಣದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಕ್ಕೆ ಈ ಶಿಕ್ಷೆ. ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು 2013ರ ಸ್ವಾತಂತ್ರ್ಯ ದಿನದಂದು. ಅದು ಕೂಡಾ ಸಾಕಷ್ಟು ಪುರಾವೆಗಳಿಲ್ಲ ಎಂಬ ಕಾರಣಕ್ಕೆ ಆರ್.ಆರ್.ಲೋಹಿಯಾ ನ್ಯಾಯಾಲಯದಲ್ಲಿ ಇವರ ಬಂಧನ ವಿಮೋಚನೆಯಾಯಿತು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ ರಾಷ್ಟ್ರಪ್ರೇಮಿಗಳು ಝಂಡಾ ಹಾರಿಸಿದ್ದಕ್ಕೆ ದಂಡ ಪಡೆದರು.
ಆರ್‌ಎಸ್‌ಎಸ್ ಮತ್ತು ರಾಷ್ಟ್ರಧ್ವಜ
ಆರ್‌ಎಸ್‌ಎಸ್ ಹಾಗೂ ತ್ರಿವರ್ಣ ಧ್ವಜಕ್ಕೆ ಪ್ರತಿರೋಧ, ತಿರಸ್ಕಾರ ಹಾಗೂ ಸ್ವೀಕಾರದ ಆಕರ್ಷಕ ಇತಿಹಾಸವಿದೆ. ಬಹುಶಃ ಶರ್ಮಾ ಅವರಂಥ ಹೊಸಬರಿಗೆ ಸಖೇದಾಶ್ಚರ್ಯದ ಸಂಗತಿ ಎಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಕಾಂಗ್ರೆಸ್, ಕಮ್ಯುನಿಸ್ಟ್, ಎಡಪಕ್ಷಗಳಲ್ಲ) 52 ವರ್ಷ ಕಾಲ ರಾಷ್ಟ್ರಧ್ವಜವನ್ನು ತನ್ನ ಆವರಣದಲ್ಲಿ ಹಾರಿಸಿಲ್ಲ.
1947ರ ಆಗಸ್ಟ್ 15ರಂದು ಮೊಟ್ಟಮೊದಲ ಬಾರಿಗೆ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲಾಯಿತು. ಬಳಿಕ 1950ರ ಜನವರಿ 26ರಂದು. ಮತ್ತೆ ತ್ರಿವರ್ಣಧ್ವಜ ಈ ಆವರಣದಲ್ಲಿ ಕಂಗೊಳಿಸಿದ್ದು, 2002ರಲ್ಲಿ. ಆಗ ಆರ್‌ಎಸ್‌ಎಸ್ ಕೇಂದ್ರ ಕಚೇರಿ ಹಾಗೂ ಸ್ಮತಿಭವನದಲ್ಲಿ ಅಂದರೆ ಕ್ರಮವಾಗಿ ಸಂಸ್ಥಾಪಕ ಹೆಡಗೇವಾರ್ ಹಾಗೂ ಗುರು ಗೋಲ್ವಾಳ್ಕರ್ ಅವರ ಸ್ಮಾರಕ ಭವನದಲ್ಲಿ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೋಹಿತೆ ವಿಭಾಗದ ನಗರ ಸಂಘ ಚಾಲಕ ಛೋಟು ಭಯ್ಯ್ ದಕ್ರಾಸ್ ಹಾಗೂ ಡಾ|ಹೆಡಗೇವಾರ್ ಸ್ಮಾರಕ ಸಂಘದ ಶ್ರೀರಾಮ್‌ಜಿ ಜೋಶಿ ಅವರು ಕ್ರಮವಾಗಿ ಕೇಂದ್ರ ಕಚೇರಿ ಹಾಗೂ ಸ್ಮಾರಕ ಭವನದಲ್ಲಿ ಧ್ವಜಾರೋಹಣ ಮಾಡಿದರು. ಇದಕ್ಕೂ ಮೊದಲು 1947ರ ಆಗಸ್ಟ್ 15ರಂದು ಮತ್ತು 1950ರ ಜನವರಿ 26ರಂದು ಧ್ವಜಾರೋಹಣ ಮಾಡಿ ಬಳಿಕ ಸ್ಥಗಿತಗೊಳಿಸಲಾಗಿತ್ತು ಎಂದು ಆರ್‌ಎಸ್ಎಸ್ ಮೂಲಗಳು ಹೇಳಿವೆ.
ಹಾಗಾದರೆ ಸಂಘ ಪರಿವಾರದ ಕೇಂದ್ರ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಏಕೆ ವಿರೋಧ? 2002ರಲ್ಲಿ ಸಂಘ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲು ನಿರ್ಧರಿಸಿದಾಗ, ಅದರ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಕೆ. ಸೂರ್ಯನಾರಾಯಣ ರಾವ್ ಬೆಂಗಳೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿ, "ಕಳೆದ ಕೆಲ ದಿನಗಳ ಹಿಂದಿನವರೆಗೂ ಆರ್‌ಎಸ್‌ಎಸ್ ವರ್ಷಕ್ಕೆ ಎರಡು ಬಾರಿ ಧ್ವಜಾರೋಹಣ ಮಾಡಿದ್ದಿಲ್ಲ. ಸರ್ಕಾರಿ ಕಟ್ಟಡಗಳಲ್ಲಿ ಮಾತ್ರ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಇದೀಗ ಈ ನಿಯಮಾವಳಿ ಸಡಿಲಿಸಲಾಗಿದ್ದು, ನಾವು ಕೂಡಾ ರಾಷ್ಟ್ರಧ್ವಜ ಹಾರಿಸುತ್ತೇವೆ" ಎಂದಿದ್ದರು. ತಮ್ಮ ಶಾಖೆಗಳಲ್ಲಿ ಕೂಡಾ ರಾಷ್ಟ್ರಧ್ವಜ ಹಾರಿಸಲು ಏಕೆ ಬಯಸುತ್ತಿಲ್ಲ ಎಂದು ಕೇಳಿದಾಗ, ಸಂಘಟನೆಯ ಸ್ವಯಂಸೇವಕರು ಮುಖ್ಯವಾಹಿನಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರಜಾಪ್ರಭುತ್ವ ದಿನ ಸಮಾರಂಭದಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ಎಂದು ಸಮರ್ಥಿಸಿಕೊಂಡಿದ್ದರು. "ನಾವು ಸಮಾರಂಭ ಏರ್ಪಡಿಸಿದರೆ, ಶಾಲೆ- ಕಚೇರಿ ಸಮಾರಂಭಗಳಿಂದ ಅವರು ವಂಚಿತರಾಗುತ್ತಾರೆ ಎಂಬ ಕಾರಣಕ್ಕಾಗಿ ನಾವು ಆಚರಿಸುತ್ತಿಲ್ಲ" ಎಂದು ಹೇಳಿದ್ದರು.
ಪಟೇಲ್, ಸಂಘ ಮತ್ತು ತಿರಂಗ
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು 1948ರಲ್ಲಿ ಸರ್ಕಾರ ನಿಷೇಧಿಸಿತು. ಮಹಾತ್ಮಗಾಂಧೀಜಿಯವರ ಹತ್ಯೆ ಪ್ರಕರಣದಲ್ಲಿ ಇದರ ಕೈವಾಡವಿದೆ ಎಂಬ ಆರೋಪದಲ್ಲಿ ಈ ಕ್ರಮ ಕೈಗೊಂಡಿತು. ಅಂದಿನ ಗೃಹಸಚಿವ ಸರ್ದಾರ್ ಪಟೇಲ್ ಅವರನ್ನು ಸಂಘಟನೆಯ ಪ್ರಮುಖರು ಸಂಧಿಸಿ, ನಿಷೇಧ ವಾಪಾಸು ಪಡೆಯುವಂತೆ ಮನವಿ ಮಾಡಿದಾಗ ಅವರು ಹಲವು ಷರತ್ತುಗಳನ್ನು ಮುಂದಿಟ್ಟರು. ಅವುಗಳಲ್ಲೊಂದು: ಆರ್‌ಎಸ್‌ಎಸ್ ತ್ರಿವರ್ಣಧ್ವಜವನ್ನು ರಾಷ್ಟ್ರಧ್ವಜವಾಗಿ ಸ್ವೀಕರಿಸಬೇಕು. ಅವರ ಈ ನಿಲುವನ್ನು ಪಿ.ಎನ್.ಛೋಪ್ತಾ ಹಾಗೂ ಪ್ರಭಾ ಛೋಪ್ರಾ ಸಂಪಾದಿಸಿದ ಸರ್ದಾರ್ ಪಟೇಲರ ಸಂಪಾದಿತ ಕೃತಿ (ಸಂಪುಟ 13) ಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಸಂಗ್ರಹದ ಪ್ರಕಾರ, "ಪಟೇಲ್ ಅವರು 1949ರ ಡಿಸೆಂಬರ್ 17ರಂದು ಜೈಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ, ಯಾವುದೇ ಸಂಘಟನೆಗಳು ರಾಷ್ಟ್ರಧ್ವಜಕ್ಕೆ ಪರ್ಯಾಯವಾಗಿ ಬೇರೆ ಧ್ವಜ ಅತಿಕ್ರಮಿಸುವಂತೆ ಮಾಡಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದರು. ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಖಂಡಿಸಿದ್ದ ಪಟೇಲ್ ಅವರ ಭಾಷಣ ಮುಕ್ತಾಯವಾದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು ಎಂದು ಸಭೆ ಕುರಿತ ಪತ್ರಿಕಾ ವರದಿ ಹೇಳಿದ್ದಾಗಿ ಸಂಗ್ರಹದಲ್ಲಿ ಉಲ್ಲೇಖವಿದೆ.
ನಿಷೇಧಿತ ಸಂಘಟನೆಯ ಮುಖಂಡರು ಭೇಟಿಯಾಗಿದ್ದಾಗ ತಮ್ಮ ನಿಲುವನ್ನು ಎಂ.ಎಸ್.ಗೋಲ್ವಾಳ್ಕರ್ ಅವರಿಗೆ ಸ್ಪಷ್ಟಪಡಿಸಿದ್ದಾಗಿ ಪಟೇಲ್ ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದರು. ರಾಷ್ಟ್ರಧ್ವಜವನ್ನು ಸಾರ್ವತ್ರಿಕವಾಗಿ ಸ್ವೀಕರಿಸಬೇಕು. ಯಾರಾದರೂ ರಾಷ್ಟ್ರಧ್ವಜಕ್ಕೆ ಪರ್ಯಾಯವಾಗಿ ಯೋಚಿಸಿದರೆ, ಅದರ ವಿರುದ್ಧ ಹೋರಾಟ ಅನಿವಾರ್ಯ. ಆದರೆ ಆ ಹೋರಾಟ ಮುಕ್ತ ಹಾಗೂ ಸಂವಿಧಾನಾತ್ಮಕವಾಗಿರಬೇಕು ಎನ್ನುವುದು ಅವರ ನಿಲುವಾಗಿತ್ತು.
"ರಾಷ್ಟ್ರಕ್ಕೆ ನಿಷ್ಠೆಯ ವಿಚಾರದಲ್ಲಿ ಯಾವುದೇ ಪ್ರತಿರೋಧ ಇಲ್ಲ ಎಂದು ದೇಶಕ್ಕೆ ಮನವರಿಕೆಯಾಗುವ ಸಲುವಾಗಿ ಸಂಘದ ಭಗವಾಧ್ವಜದ ಜತೆಗೆ ರಾಷ್ಟ್ರಧ್ವಜವನ್ನು ಸ್ಪಷ್ಟವಾಗಿ ಸ್ವೀಕರಿಸುವುದು ಅನಿವಾರ್ಯ" ಎಂದು ಅಂದಿನ ಗೃಹ ಕಾರ್ಯದರ್ಶಿ ಎಚ್.ವಿ.ಆರ್.ಐಯ್ಯಂಗಾರ್ ಗೋಲ್ವಾಳ್ಕರ್ ಅವರಿಗೆ 1949ರ ಮೇ ತಿಂಗಳಲ್ಲಿ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.
ಆರ್‌ಎಸ್‌ಎಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಸಂಸ್ಥೆಯ ಗುರುಸಮಾನವಾದ ಭಗವಾಧ್ವಜ ಹಾಗೂ ತ್ರಿವರ್ಣಧ್ವಜ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಹೇಳಿಕೊಂಡಿತು. 2000ನೇ ಇಸ್ವಿ ಆಗಸ್ಟ್ 22ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಸಂಸತ್ತಿನಲ್ಲಿ ವಾದ ಮಂಡಿಸಿ, "ಆರ್‌ಎಸ್‌ಎಸ್ 1949ರಲ್ಲಿ ತನ್ನ ಕೇಂಧ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಭಾರತ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿತ್ತು" ಎಂದಿದ್ದರು. ಆಗ ಆರ್‌ಎಸ್‌ಎಸ್ ಮುಖಂಡರು ಅಂಥ ಒಪ್ಪಂದವನ್ನು ಹಾಜರುಪಡಿಸುವಂತೆ ಸಂಸದನಿಗೆ ಸವಾಲು ಹಾಕಿದ್ದರು.
ಸಂಘದ ಮುಖವಾಣಿ ಆರ್ಗನೈಸರ್ ಪತ್ರಿಕೆಯ 2000ನೇ ಇಸ್ವಿ ಸೆಪ್ಟೆಂಬರ್ 3ರ ಸಂಚಿಕೆಯಲ್ಲಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂ.ಜಿ.ವೈದ್ಯ, ರಾಷ್ಟ್ರಧ್ವಜ ವಿಚಾರದಲ್ಲಿ ಸಂಘದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಾದಿಸಿದ್ದರು.
2000ನೇ ಇಸ್ವಿ ಆಗಸ್ಟ್ 16ರಂದು ಲೋಕಸಭೆಯಲ್ಲಿ ಮಾತನಾಡಿದ ಸಂಸದ ಪ್ರಕಾಶ್ ಅಂಬೇಡ್ಕರ್ ಅವರು, "1949ರ ನವೆಂಬರ್ 26ರ ಗೃಹಸಚಿವಾಲಯದ ನಿರ್ಣಯದ ಅನ್ವಯ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜತೆಗೆ ಆರ್‌ಎಸ್‌ಎಸ್ ಮಾಡಿಕೊಂಡ ಒಪ್ಪಂದದ ಪ್ರಕಾರ, 1950ರ ಜನವರಿ 26ರಂದು ನಾಗ್ಪುರ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸುವುದಾಗಿ ಸ್ಪಷ್ಟಪಡಿಸಿದೆ" ಎಂದಿದ್ದಾರೆ. ಆದರೆ ಅಂಬೇಡ್ಕರ್ ಅವರು ಆ ಒಪ್ಪಂದದ ಪ್ರತಿಯನ್ನು ಹಾಜರುಪಡಿಸಲಿ ಎಂದು ಸವಾಲು ಹಾಕಿದ್ದರು. ಜತೆಗೆ ಆರ್‌ಎಸ್‌ಎಸ್ ಅವಹೇಳನ ಮಾಡುವ ಸಲುವಾಗಿ ತಮ್ಮ ಹಕ್ಕನ್ನು ಸಂಸದರು ದುರುಪಯೋಗಪಡಿಸಿಕೊಳ್ಳಬಾರದು ಎಂದು ವೈದ್ಯ ಬರೆದಿದ್ದರು.
ಇತಿಹಾಸತಜ್ಞ ರಾಮಚಂದ್ರ ಗುಹಾ ಅವರ ಪ್ರಕಾರ, 1930 ಹಾಗೂ 40ರ ದಶಕದಲ್ಲಿ, ಯಾವುದೇ ಆರ್‌ಎಸ್‌ಎಸ್ ಕಾರ್ಯಕರ್ತ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುತ್ತಿದ್ದರೆ, ಅವರ ನಿಷ್ಠೆ ಪ್ರತ್ಯೇಕತೆಗೆಯೇ ವಿನಃ ರಾಷ್ಟ್ರೀಯತೆಗೆ ಅಲ್ಲ ಎಂದು ನಿರ್ಧರಿಸಲಾಗುತ್ತಿತ್ತು. ಅವರು ತಮ್ಮ ಭಗವಾಧ್ವಜವನ್ನು ತ್ರಿವರ್ಣಧ್ವಜಕ್ಕಿಂತ ಮೇಲು ಎಂದು ಪರಿಗಣಿಸಿದ್ದರು. ಮಹಾತ್ಮಗಾಂಧೀಜಿಯವರ ಹತ್ಯೆ ಬಳಿಕ, ಆರ್‌ಎಸ್‌ಎಸ್ ಕಾರ್ಯಕರ್ತರು ಹಲವೆಡೆ ರಾಷ್ಟ್ರಧ್ವಜವನ್ನು ತುಳಿದುಹಾಕಿದ ಬಗ್ಗೆಯೂ ವರದಿಯಾಗಿತ್ತು. ಇದು ಜವಾಹರಲಾಲ್ ನೆಹರೂ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. 1948ರ ಫೆಬ್ರುವರಿ 24ರಂದು ಮಾಡಿದ ಭಾಷಣದಲ್ಲಿ ಅವರು, ವಿಷಾದದಿಂದ, ಹೇಗೆ ಹಲವೆಡೆ ಆರ್‌ಎಸ್‌ಎಸ್ ಕಾರ್ಯಕರ್ತರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರು ಎನ್ನುವುದನ್ನು ಬಣ್ಣಿಸಿದ್ದರು. ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ಮೂಲಕ ತಮ್ಮನ್ನು ತಾವೇ ದೇಶದ್ರೋಹಿಗಳೆಂದು ಖಾತ್ರಿಪಡಿಸಿದಂತೆ ಎನ್ನುವುದು ಅವರಿಗೆ ನಿಜವಾಗಿ ತಿಳಿದಿದೆ.." ಎಂದು ಹೇಳಿದ್ದರು.
ಇದೀಗ ಬಿಜೆಪಿ ತ್ರಿವರ್ಣಧ್ವಜವನ್ನು ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಹಾರಿಸಲೇಬೇಕು ಎಂದು ಅರ್ಥ ಮಾಡಿಕೊಂಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇದನ್ನು ದೇಶ ಸಂಭ್ರಮಿಸಲೇಬೇಕು.
ಸಂಘ ಕೂಡಾ ಈ ನಿರ್ಧಾರಕ್ಕೆ ಧ್ವನಿಗೂಡಿಸಲಿ ಎಂದು ಅಪೇಕ್ಷಿಸೋಣ. ನಾಗ್ಪುರದ ಸ್ಮತಿಭವನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಬುದ್ಧಿವಂತರು, ಪಟೇಲ್ ಸಾಧಿಸಲಾಗದ್ದನ್ನು ಸ್ಮತಿ ಇರಾನಿ ಸಾಧಿಸಿದರು ಎಂದು ಖುಷಿಪಡಲಿ.
ಏಕೆಂದರೆ ಸರಿಯಾಗಿ ಒಂದು ವರ್ಷ ಹಿಂದೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್, ತ್ರಿವರ್ಣಧ್ವಜದ ಅರ್ಥದಲ್ಲಿ ಹೀಗೆ ಹೇಳಿದ್ದರು. "ಬಿ.ಆರ್.ಅಂಬೇಡ್ಕರ್ ಅವರು ಕೂಡ ಭಗವಾಧ್ವಜವನ್ನು ರಾಷ್ಟ್ರಧ್ವಜವಾಗಿ ಸ್ವೀಕರಿಸಬೇಕು ಎಂಬ ನಿಲುವು ಹೊಂದಿದ್ದರು. ಜತೆಗೆ ಸಂಸ್ಕೃತ ರಾಷ್ಟ್ರಭಾಷೆಯಾಗಬೇಕು ಎಂದು ಬಯಸಿದ್ದರು. ದುರದೃಷ್ಟವಶಾತ್ ಈ ನಿಲುವನ್ನು ನಾವು ಪ್ರಚಾರ ಮಾಡಲು ಸಾಧ್ಯವಾಗಲಿಲ್ಲ" ಎಂದು ಕಾನ್ಪುರದಲ್ಲಿ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ ಹೇಳಿದ್ದರು