ಅಕಬರ್ ಅಲಿ ಕಾಣದ ಊರಿಗೆ ಮರಳಿದ ಕಾಗೆ
ಡಾ.ಎಂ. ಅಕಬರ್ ಅಲಿ ಎಂದಾಕ್ಷಣ ನೆನಪಿಂದ ರೆಕ್ಕೆ ಬಿಚ್ಚುವುದು ಕಾಗೆ. ಪ್ರಾಥಮಿಕ ತರಗತಿಯ ಪಠ್ಯ ಪುಸ್ತಕದಲ್ಲಿ ಕಾಗೆಯ ಕುರಿತಂತೆ ಅವರು ಬರೆದ ಪದ್ಯ, ಕಾಗೆಯ ಮಹತ್ವವನ್ನು ಮಕ್ಕಳಿಗೆ ಮೊದಲ ಬಾರಿಗೆ ಪರಿಚಯಿಸಿಕೊಡುತ್ತಾರೆ. ವಿದ್ಯುದಾಲಿಂಗನಕ್ಕೆ ಸಿಕ್ಕಿ ಸತ್ತಿದೆ ಕಾಗೆ ಎನ್ನುವ ಸಾಲು, ಮಕ್ಕಳೂ ಕಾಗೆಗಾಗಿ ಮಿಡಿಯುವ, ಪಕ್ಷಿಗಳ ಕುರಿತಂತೆ ಮರುಗುವ ಹಾಗೆ ಮಾಡಿತ್ತು. ಇದಾದ ಬಳಿಕ ಅಕಬರ್ ಅಲಿ ಅವರು ಕಾಗೆಯನ್ನು ಕೇಂದ್ರವಾಗಿಟ್ಟುಕೊಂಡು ‘ಲೋಕವೇ ಸಾಕ್ಷಿ’ ಎನ್ನುವ ಕವಿತೆಯನ್ನು ಬರೆದರು. ಅದು ಮಕ್ಕಳ ಕವಿತೆಯಾಗಿದ್ದರೆ, ಇದು ನವ್ಯದ ಗುಣವನ್ನು ಆವಾಹಿಸಿಕೊಂಡ, ಕಾಗೆಯ ಮೂಲಕ ಲೋಕ ಪ್ರೀತಿಯನ್ನು ಗ್ರಹಿಸುವ ಕವಿತೆ. ಕಾಮಕ್ಕೆ ರೂಪಕವಾಗಿ ಅವರು ಕಾಗೆಯನ್ನು ಮುಂದಿಡುತ್ತಾರೆ. ‘ಚುಟುಕು ಕವಿ’ ಎಂದೇ ಹೆಸರಾಗಿದ್ದರೂ, ಕಾವ್ಯ, ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಅಕಬರ್ ಅಲಿ ಇಂದು ನಮ್ಮ ಜೊತೆಗಿಲ್ಲ. ಎಂದಿಗೂ ಮುಸ್ಲಿಮ್ ತಲೆಬರಹಗಳೊಂದಿಗೆ ಗುರುತಿಸಿಕೊಳ್ಳದ ಕವಿ ಅಕಬರ್ ಅಲಿ, ನವೋದಯದ ದಟ್ಟ ಪ್ರಭಾವದಿಂದ ಸಾಹಿತ್ಯವನ್ನು ರಚಿಸಿದವರು. ಅಕಬರ್ ಅಲಿಯವರ ಇನ್ನೊಂದು ಹೆಗ್ಗಳಿಕೆಯೆಂದರೆ ಇವರು ಉತ್ತರ ಕರ್ನಾಟಕಕ್ಕೆ ಸೇರಿದವರು. ಬೆಳಗಾವಿಯ ಬಿಸಿಲಲ್ಲಿ ಅರಳಿದವರು. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲೇ ಉರ್ದು ಭಾಷೆಯಲ್ಲಿ. ಐದನೆಯ ತರಗತಿಯಿಂದ ಕಲಿತಿದ್ದು ಕನ್ನಡ ಭಾಷೆ. ಹೈಸ್ಕೂಲಿಗೆ ಸೇರಿದ್ದು ಬೆಳಗಾವಿಯ ಜಿ.ಎ.ಹೈಸ್ಕೂಲು. ಹೈಸ್ಕೂಲಿನಲ್ಲಿ ಮುಂದೆ ಇವರಿಗೆ ಡಿ. ಎಸ್. ಕರ್ಕಿ, ಎಸ್.ಡಿ. ಇಂಚಲ, ಬಸವರಾಜ ಕಟ್ಟೀಮನಿಯಂತಹ ಹಿರಿಯ ಲೇಖಕರು ಗುರುಗಳಾಗಿ ಸಿಕ್ಕಿದ್ದು, ಅವರು ಸಾಹಿತ್ಯ ಕ್ಷೇತ್ರದಲ್ಲಿ ರೆಕ್ಕೆ ಬಿಚ್ಚುವುದಕ್ಕೆ ಅನುಕೂಲವಾಯಿತು. ವಿದ್ಯಾರ್ಥಿಯಾಗಿದ್ದಾಗ ಇವರು ಬರೆದ ಕವಿತೆಯನ್ನು ಓದಿ, ಕಟ್ಟೀಮನಿಯವರು ಇವರ ಸಂಪಾದಕತ್ವದಲ್ಲೇ ಒಂದು ಕೈ ಬರಹ ಪತ್ರಿಕೆ ಹೊರತರಲು ನೆರವಾದರಂತೆ. ಹಾಗೆಯೇ ಅಕಬರ್ ಅಲಿ ಅವರು ಬರೆದ ಕವಿತೆಗಳನ್ನು ತಾವು ಪ್ರಕಟಿಸುತ್ತಿದ್ದ ಉಷಾ ಮಾಸಪತ್ರಿಕೆಯಲ್ಲಿ ಪ್ರಕಟಿಸಿ ಆತ್ಮವಿಶ್ವಾಸ ಹುಟ್ಟುವಂತೆ ಮಾಡಿದರು.
ಈಶ್ವರ ಸಣಕಲ್ಲರ, ಪಾಪು, ಕೋಚನ್ನಬಸಪ್ಪ, ಹಿರೇಮಲ್ಲೂರು ಈಶ್ವರನ್ ಮೊದಲಾದವರು ಆರಂಭಿಸಿದ ಸಾಹಿತ್ಯ ಬಳಗದ ಸಂಸರ್ಗದಲ್ಲಿ ಇನ್ನಷ್ಟು ಸಾಹಿತ್ಯಾಭಿರುಚಿಯನ್ನು ತನ್ನದಾಗಿಸಿಕೊಂಡವರು ಅಕಬರ್ ಅಲಿ. ಇವರ ಚುಟುಕು ಕಾವ್ಯ ಕೃಷಿ ಒಂದು ಆಕಸ್ಮಿಕ ಸಂದರ್ಭದಲ್ಲಿ ಮೊಳಕೆಯೊಡೆಯಿತು. 1951ರಲ್ಲಿ ಮುಂಬೈಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿ.ಕೃ.ಗೋಕಾಕರು ಬೆಳಗಾವಿಗೆ ಬಂದಿದ್ದು,ಅವರ ಸನ್ಮಾನಾರ್ಥ ಟಿಳಕವಾಡಿಯಲ್ಲೊಂದು ಸಭೆ ಏರ್ಪಟ್ಟಿತ್ತು. ಆ ಸಭೆಯಲ್ಲಿ ಗೋಕಾಕರು ಮಾತನಾಡುತ್ತಾ ಇಂಗ್ಲಿಷ್‌ನ ಅಮೆರಿಕ ಮಾದರಿಯ ಚುಟುಕು ಸಾಹಿತ್ಯ ಸೃಷ್ಟಿಗೆ ಕರೆಕೊಟ್ಟಿದ್ದರಿಂದ ಪ್ರೇರಿತರಾಗಿ ಚುಟುಕು ಕವನಗಳನ್ನು ಮತ್ತು ಅಷ್ಟಪದಿಯನ್ನು ಬರೆಯಲು ಪ್ರಾರಂಭಿಸಿದರು. ಆಗ ಅಕಬರ್ ಅಲಿಯವರು ಮುಂಬೈ ವಿಶ್ವವಿದ್ಯಾನಿಲಯದಿಂದ ಬಿ.ಎ.ಆನರ್ಸ್ ಪದವಿ (1949)ಪಡೆದು ಇವರು ಓದಿದ್ದ ಹೈಸ್ಕೂಲಿನಲ್ಲೇ ಶಿಕ್ಷಕರಾಗಿದ್ದರು.
ಹೀಗೆ ಬರೆದ ಅಷ್ಟಪದಿ ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡ ನಂತರ 1951ರಲ್ಲಿ ‘ವಿಷಸಿಂಧು’ ಎಂಬ ಸಂಕಲನವನ್ನು ಹೊರತಂದರು. 1952ರಲ್ಲಿ ಮಿತ್ರರಾದ ಶ್ರೀನಿವಾಸ ತೋಫ ಖಾನೆಯವರೊಡನೆ ಸೇರಿ ಪ್ರಕಟಿಸಿದ ಕೃತಿ ‘ಅನ್ನ’ ಎಂಬ ಚುಟುಕು ಕವನ ಸಂಕಲನ.
1960ರಲ್ಲಿ ಪುಣೆಯ ವಿಲ್ಲಿಂಗ್‌ಡನ್ ಕಾಲೇಜಿನಿಂದ ಎಂ.ಎ.ಪದವಿ ಪಡೆದ ನಂತರ ಕಾರವಾರದ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿ ವಿಭಾಗದ ಮುಖ್ಯಸ್ಥರಾಗಿಯೂ ದುಡಿದರು. ಈ ಹುದ್ದೆಯನ್ನು ಹದಿನಾಲ್ಕು ವರ್ಷಗಳ ಸೇವೆಯ ನಂತರ 1975ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿ ಅಲ್ಲೇ ನಿವೃತ್ತರಾದರು. ಹೀಗೆ 35 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಪ್ರೌಢಶಾಲಾ ಮಟ್ಟದಿಂದ ಸ್ನಾತಕೋತ್ತರ ತರಗತಿಯವರೆಗೂ ಬೋಧನ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದರು.
ಬೋಧನೆಯ ಜೊತೆಗೆ ಅಧ್ಯಯನದ ಕೆಲಸವೂ ಸತತವಾಗಿ ನಡೆಯುತ್ತಾ 1983ರಲ್ಲಿ ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ ಎಂಬ ಮಹಾ ಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ನವೋದಯ ಕಾವ್ಯ ರಚನಾ ರೀತಿಯ ಪ್ರಭಾವದ ಕಾಲದಲ್ಲಿಯೂ ಅಕಬರ್ ಅಲಿಯವರು ಕವಿತೆಯನ್ನು ರಚಿಸಲು ಪ್ರಾರಂಭಿಸಿದ್ದರೂ ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯ ರಚಿಸುತ್ತಾ ಬಂದವರು. ನಾಡಿನ ಪತ್ರಿಕೆಗಳಲ್ಲೆಲ್ಲಾ ಇವರ ಕವನ, ಚುಟುಕುಗಳು ಪ್ರಕಟಗೊಂಡಿವೆ.
ಹೀಗೆ ಬರೆದ ಕವನಗಳು ನವಚೇತನ (1961), ಸುಮನ ಸೌರಭ (1965), ಗಂಧಕೇಶರ (1972), ಆಯ್ದ ಕವನ ಸಂಕಲನ-ತಮಸಾನದಿ ಎಡಬಲದಿ (1977), ಅಕಬರ್ ಅಲಿಯವರ ಚುಟುಕುಗಳು (1989), ಕಸಿಗುಲಾಬಿಕಥನ (1993), ಬೆಳಕಿನ ಆರಾಧನೆ (2005)ಮುಂತಾದವು ಪ್ರಕಟಗೊಂಡ ನಂತರ ಅಲಿಯವರ ಸಮಗ್ರ ಕವಿತೆಗಳು 2006ರಲ್ಲಿ ಪ್ರಕಟಗೊಂಡಿದೆ. ಅಕಬರ್ ಅಲಿಯವರ ನೂರಾರು ಕವಿತೆಗಳು 500ಕ್ಕೂ ಹೆಚ್ಚು ಚುಟುಕುಗಳು ಹಲವಾರು ಸಂಕಲನಗಳಲ್ಲಿ ಸೇರ್ಪಡೆಯಾಗಿವೆ.
ಕಾವ್ಯದಷ್ಟೆ ಗದ್ಯ ಪ್ರಕಾರವನ್ನು ಪ್ರೀತಿಸುವ ಅಲಿಯವರು ರಚಿಸಿದ್ದು, ಪ್ರಬಂಧ ಪರಿಚಯ, ನಿರೀಕ್ಷೆಯಲ್ಲಿ ಕಾದಂಬರಿ(1955)ಹಾಗೂ ಎರಡು ವಿಮರ್ಶಾ ಕೃತಿಗಳಾದ ಸಾಹಿತ್ಯ ವಿವೇಚನೆ (1975)ಮತ್ತು ಕನ್ನಡ ಕಾವ್ಯಾಧ್ಯಯನ(1993)ಪ್ರಕಟಗೊಂಡಿವೆ.
ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪ್ರವರ್ತಕ ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ ಜಿಲ್ಲಾ ಸಾಹಿತ್ಯ ಸಂಘಟನೆ ಮುಂತಾದವುಗಳಲ್ಲಿ ಶ್ರದ್ಧೆಯಿಂದ ನಿರ್ವಹಿಸಿದ ಅಲಿಯವರು ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ ಕಿರಿಯರ ವಿಶ್ವಕೋಶವಾದ ಜ್ಞಾನಗಂಗೋತ್ರಿಯ ಎಂಟನೆಯ ಸಂಪುಟದ ಸಂಪಾದಕ ಮಂಡಲಿಯ ಸದಸ್ಯರಾಗಿ,1975ರಲ್ಲಿ ದಿಲ್ಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ, 1985ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ,ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (1981-83), ರಾಜ್ಯ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿ (1986-92), ಮಂಡ್ಯದಲ್ಲಿ ಜರಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಉದ್ಘಾಟಕರಾಗಿ (1994), ಮೈಸೂರಿನಲ್ಲಿ ನಡೆದ ದಸರಾ ಕವಿಗೋಷ್ಠಿಯ ಅಧ್ಯಕ್ಷರಾಗಿ (1998), ಮೈಸೂರು ಜಿಲ್ಲಾ 9ನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (2009), ಸಂಕೇಶ್ವರದಲ್ಲಿ ಜರಗಿದ ತಾಲೂಕು ಸಮ್ಮೇಳನದ ಅಧ್ಯಕ್ಷರಾಗಿ (2011)ಹೀಗೆ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವ ಪಡೆದಿದ್ದಾರೆ.
ಸುಮನ ಸೌರಭ ಕೃತಿಗೆ (1967)ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಗಂಧಕೇಶರ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ, ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ (ಪಿಎಚ್.ಡಿ.ಪ್ರಬಂಧ)ಕೃತಿಗೆ (1984)ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠದಿಂದ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(1984) ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (1984) ಪ್ರಕೃತಿ ಸಂಸ್ಥೆಯಿಂದ ಪ್ರಕೃತಿ ಪ್ರಶಸ್ತಿ (2000) ಡಿ.ವಿ.ಜಿ.ಮುಕ್ತರ ಪ್ರಶಸ್ತಿ (2009)ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.
ಅಕಬರ್ ಅಲಿ ಸಾಹಿತ್ಯವಲಯದಲ್ಲಿ ಯಾವುದೇ ಗುಂಪು, ಪಂಗಡಗಳಿಗೆ ಸೇರಲಿಲ್ಲ. ಅಥವಾ ತಮ್ಮ ಬರಹಗಳಲ್ಲಿ ಇಂತಹದೇ ಒಂದು ವಿಚಾರಗಳನ್ನು ಹೇರುವ ಪ್ರಯತ್ನವನ್ನು ಮಾಡಲಿಲ್ಲ. ಅವರು ಕಾಗೆಯಂತೆ ತನ್ನ ಕೆಲಸವನ್ನಷ್ಟೇ ಶ್ರದ್ಧೆಯಿಂದ ಮಾಡಿದರು. ಕವಿತೆಗಳನ್ನು, ಚುಟುಕುಗಳನ್ನು ಬರೆಯುತ್ತಲೇ ಹೋದರು. ಹಲವು ಕವಿತೆಗಳಲ್ಲಿ ನವ್ಯದ ಸಣ್ಣದೊಂದು ಪ್ರಭಾವವನ್ನು ನಾವು ಗುರುತಿಸಬಹುದು. ಈ ಕಾಗೆ ಅಲ್ಲ ಅಂತಿಂಥ ಪಕ್ಷಿ
ಇದು ಏಕಾಕ್ಷಿ
ಜೀವ ಜೀವನ ರಕ್ಷಿ... ಅವರ ಕವಿತೆಗಳೂ ಈ ತತ್ವದ ಮೇಲೆಯೇ ನಿಂತವುಗಳು. ಕಾವ್ಯ ವೃಕ್ಷದ ಮೇಲೆ ಹಲವು ಕಾಲಗಳಿಂದ ನೆಲೆನಿಂತು ಕೂಗಿ ಕತ್ತಲನ್ನು ಎಚ್ಚರಿಸುತ್ತಿದ್ದ ಕಾಗೆ ಕಾಣದ ಊರಿಗೆ ರೆಕ್ಕೆ ಬಿಚ್ಚಿದೆ. ಆ ಕಾಗೆಗೆ ಹೃದಯ ತುಂಬಿದ ವಿದಾಯ ಕೋರುವುದು, ಆ ಕಾಗೆಯ ಧ್ವನಿಯನ್ನು ನಮ್ಮಿಳಗೆ ಭದ್ರವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ.
ನಾ ಮೆಚ್ಚಿದ ಕವಿತೆ
ನಾ ಮೆಚ್ಚಿದ ಕವಿತೆ
ಈ ಇಲ್ಲಿ ಹುಟ್ಟಿದವಳೆ
ಆದರೂ ಇವಳಲ್ಲಿದೆ
ಅಪರೂಪದ ಒಂದು ಕಳೆ, ಸೆಳೆ!
ರಕ್ತಮಾಂಸತುಂಬಿದಂಗಾಂಗದ
ಈ ಬಿನ್ನಾಣಗಿತ್ತಿಯ ಅಡಿ
ಈ ಮಣ್ಣು ನೆಲದಲ್ಲೇ ತಣ್ಣಗೋಡಾಡಿದರೂ,
ನಕ್ಷತ್ರಮಾಲೆಯ ಸೂಡಿ ಮುಗಿಲಲ್ಲಿ ಮೆರೆದಿಹುದಿವಳ ಮುಡಿ...
ನನ್ನ ಕಣ್ಮನಗಳಿಗೆ ಬೀರಿ ಮಾಯಾ-ಮೋಡಿ!
ಈ ಇವಳ ಬಟ್ಟಲಗಣ್ಣು,
ಆ ಕಲ್ಪವೃಕ್ಷದ ಹಣ್ಣು!
ಈ ಇವಳ ತುಂಬಿದೆದೆ
ಒಡ್ಡರ್ಹೆಣ್ಣಿನ ಹಾಗೆ ತೆರೆದ ಅಂಗಡಿ ಅಲ್ಲ ;
ಘೋಷಾದ ಹೆಣ್ಣಿನ ತೆರದಿ ಬರೇ ಗೊಂಗಡಿಯೂ ಅಲ್ಲ
ಈ ಇದರದು, ಇದರದೇ ಆದ ಥಾಟ!
ತೆರೆದೂ ತೆರೆದಿರದ, ಮುಚ್ಚಿಯೂ ಮುಚ್ಚಿರದ ಅರೆಮರೆವು ಮಾಡುವ ಮಾಟ!
ಕಾಮಧೇನುವಿನ ಕೆಚ್ಚಲೇ ಥೇಟ!
ಅದಕೆ ನಾನೆನ್ನುವದು
ನಾ ಮೆಚ್ಚಿದ ಈ ಕವಿತೆ
ಈ ಲೋಕದವಳೇ ಆದರೂ
ಲೋಕಾತೀತೆ !
-ಡಾ. ಎಂ.ಅಕಬರ್ ಅಲಿ