ಕನ್ಹಯ್ಯೂ ಪರ ನಿಲ್ಲಲು ಇದು ಸಕಾಲ

Update: 2016-02-22 17:24 GMT

ಪ್ರಕರಣ ತಿರುಚುವುದರಿಂದ ಹಿಡಿದು, ಹಿಂಸೆಗೆ ಕುಮ್ಮಕ್ಕು ನೀಡುವುದು, ನಕಲಿ ಪುರಾವೆಗಳನ್ನು ಸೃಷ್ಟಿಸುವುದು ಹೀಗೆ ಒಬ್ಬ ಯುವಕನ ಬದುಕು ನಾಶಪಡಿಸಲು ಎಲ್ಲ ಪ್ರಯತ್ನಗಳೂ ನಡೆಯುತ್ತಿವೆ ಎನ್ನುವುದು ಗಮನಿಸಬೇಕಾದ ಅಂಶ.
ಸಿನಿಕ ರಾಜಕಾರಣಿಗಳು, ನಿರ್ದಯಿ ಪೊಲೀಸ್ ಅಧಿಕಾರಿಗಳು, ಕ್ರೂರ ವಕೀಲರು, ಕಲ್ಲೆದೆಯ ವಿಶ್ವವಿದ್ಯಾನಿಲಯ ಅಧಿಕಾರಿಗಳು, ಹೀನ, ಭ್ರಷ್ಟ ಪತ್ರಕರ್ತರ ದುಷ್ಟಕೂಟ ಒಬ್ಬ ಯುವಕನ ಜೀವನ ನಾಶಪಡಿಸುವ ಕುಕೃತ್ಯಕ್ಕೆ ಒಂದಾದ ಸಂದರ್ಭದಲ್ಲಿ ನಿಮ್ಮ ಮಕ್ಕಳು ಅಥವಾ ಮೊಮ್ಮಕ್ಕಳು ಸಹಜವಾಗಿಯೇ ನೀವೂ ತಪ್ಪು ಮಾಡಬೇಡಿ ಎಂದು ಸಹಜವಾಗಿಯೇ ಮನವಿ ಮಾಡಿಕೊಳ್ಳಬಹುದು.
ಇಂತಹದ್ದೇ ಪರಿಸ್ಥಿತಿ ರೋಹಿತ್ ವೇಮುಲಾ ವಿಚಾರದಲ್ಲೂ ಉದ್ಭವಿಸಿತ್ತು. ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯವನ್ನೂ ಲೆಕ್ಕಿಸದೆ ಅಧಿಕಾರಸ್ಥ ಭ್ರಷ್ಟ ವ್ಯಕ್ತಿಗಳು ಹಾಕಿದ ಸುಳ್ಳು ಪ್ರಕರಣದಿಂದ ಬೇಸತ್ತು ಆತ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಇಡೀ ದೇಶ ತಡೆಯಲಾಗಲಿಲ್ಲ. ಇಡೀ ದೇಶದ ಕನಿಕರ ಅತಿರಾಷ್ಟ್ರೀಯವಾದಿಗಳ ಭೂಮಿಕೆಯಲ್ಲಿ ಬತ್ತಿಹೋಯಿತು.
ಕಪೋಲಕಲ್ಪಿತ ಪ್ರಕರಣದಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸಿಲುಕಿಸುವುದು ಅಥವಾ ಆತನ ವಿರುದ್ಧದ ಹಿಂಸೆಗೆ ಗುಪ್ತವಾಗಿ ಕುಮ್ಮಕ್ಕು ನೀಡುವಷ್ಟಕ್ಕೆ ತೃಪ್ತಿಪಡದ ಇಂತಹ ವಿಘ್ನಸಂತೋಷಿಗಳು ಝೀ ಟಿವಿ, ನ್ಯೂಸ್ ಎಕ್ಸ್‌ನಂಥ ಟಿವಿ ಚಾನೆಲ್‌ಗಳಲ್ಲಿ ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಿಸಿದರು. ಇಂಡಿಯಾ ನ್ಯೂಸ್‌ನಂತಹ ಚಾನಲ್‌ಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ಹಯ್ಯೆ ಕಾಶ್ಮೀರದ ಸ್ವಾತಂತ್ರ್ಯದ ಕುರಿತು ಘೋಷಣೆ ಕೂಗುವಂತಹ ವೀಡಿಯೊ ಸೃಷ್ಟಿಸಿ ಪ್ರಸಾರ ಮಾಡಿದವು.
ದಿಲ್ಲಿ ಪೊಲೀಸರು ಫೆಬ್ರವರಿ 12ರಂದು ದೇಶದ್ರೋಹದ ಪ್ರಕರಣ ದಾಖಲಿಸಿ ಕನ್ಹಯ್ಯೋ ಅವರನ್ನು ಬಂಧಿಸುವವರೆಗೂ ಅವರ ಬಗ್ಗೆ ಬಹುತೇಕ ನಮಗೆ ಯಾರಿಗೂ ತಿಳಿದಿರಲಿಲ್ಲ. ಭಾರತದ ನ್ಯಾಯವ್ಯವಸ್ಥೆಯಲ್ಲಿ ಇರುವ ಅತ್ಯಂತ ಕ್ರೂರ ಪ್ರಕರಣವನ್ನು ಆತನ ವಿರುದ್ಧ ದಾಖಲಿಸಲಾಗಿದೆ. ಕೇವಲ ಕ್ಯಾಂಪಸ್‌ನಲ್ಲಿ ಘೋಷಣೆ ಕೂಗಿದ್ದಕ್ಕೆ ಇಂತಹ ಘೋರ ಪ್ರಕರಣ. ಈ ಘೋಷಣೆ ಕೂಗಿದ್ದಕ್ಕೂ ಕನ್ಹಯ್ಯೆ ಅವರಿಗೂ ನೇರ ಸಂಬಂಧ ಇಲ್ಲ. ಆತ್ಮಸ್ಥೈರ್ಯವಿರುವ ಪ್ರಜಾಪ್ರಭುತ್ವ ದೇಶಕ್ಕೆ ಅದೊಂದು ಪ್ರಕರಣವೇ ಅಲ್ಲ.
ಆ ಬಳಿಕ ದೇಶದ ಗೃಹಸಚಿವರು, ಬಿಜೆಪಿಯ ಅಧಿಕೃತ ವಕ್ತಾರ, ದಿಲ್ಲಿ ಪೊಲೀಸ್ ಅಧಿಕಾರಿಗಳು, ವಕೀಲರ ಮುಖವಾಡ ಧರಿಸಿದ ಕಪ್ಪುಕೋಟಿನ ದುಷ್ಟರು ಹಾಗೂ ಟಿವಿ ನಿರೂಪಕರು ಕನ್ಹಯ್ಯು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರು. ಕೋರ್ಟ್ ಆವರಣದಲ್ಲೇ ಆತನ ಮೇಲೆ ಹಲ್ಲೆ ನಡೆಯಿತು. ನಮಗೆ ಅಗತ್ಯವಾದ ಎಲ್ಲ ಪುರಾವೆಗಳೂ ಇವೆ ಎಂದು ದಿಲ್ಲಿ ಪೊಲೀಸ್ ಮುಖ್ಯಸ್ಥ ಬಿ.ಎಸ್.ಬಸ್ಸಿ ಘೋಷಿಸಿದರು. ಗೃಹಸಚಿವರು ಒಂದು ಹೆಜ್ಜೆ ಮುಂದೆ ಹೋಗಿ ಕನ್ಹಯ್ಯೆಗೆ ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆಗಳ ಜತೆ ಸಂಪರ್ಕವಿದೆ ಎಂದು ಟ್ವೀಟ್ ಮಾಡಿದರು.
ತಿರುಚುವಿಕೆಯಿಂದ ನಕಲಿ ಕಡೆಗೆ
ಮಫ್ತಿಯಲ್ಲಿದ್ದ ಪೊಲೀಸ್ ಪತ್ತೆದಾರರು ಫೆಬ್ರವರಿ 9ರಂದು ನಡೆದ, ಕನ್ಹಯ್ಯೆ ದೇಶವಿರೋಧಿ ಕೃತ್ಯ ಎಸಗಿದ್ದಾರೆ ಎನ್ನಲಾದ ಸಮಾರಂಭದಲ್ಲಿ ಹಾಜರಿದ್ದರು. ಎಬಿವಿಪಿ ಮಾಡಿದ ದೂರಿನ ಹೊರತಾಗಿಯೂ ಪೊಲೀಸರಿಗೆ ಕ್ರಮ ಕೈಗೊಳ್ಳಬಹುದಾದ ಯಾವ ಅತಿರೇಕವೂ ಕಾಣಿಸಲಿಲ್ಲ.
ಮರುದಿನ ಕ್ಯಾಂಪಸ್‌ನ ಕೆಲ ವ್ಯಕ್ತಿಗಳು ಘೋಷಣೆ ಕೂಗುವ ಕುರಿತ ಫೋನ್ ವೀಡಿಯೊಗಳನ್ನು ಝೀ ಟಿವಿಗೆ ಪೂರೈಸಿದರು. ಅದು ಚಾನೆಲ್‌ನ ಮಾಲಕ ಹಾಗೂ ಆರೆಸ್ಸೆಸ್ ಜತೆ ನಿಕಟ ಸಂಬಂಧ ಹೊಂದಿರುವ ಸುಭಾಶ್ಚಂದ್ರ ಕೈಸೇರಿತು. ಝೀ ಟಿವಿಯ ಲೀಡ್ ಸುದ್ದಿಯನ್ನು ಟೈಮ್ಸ್ ನೌ ಹಾಗೂ ನ್ಯೂಸ್ ಎಕ್ಸ್ ಅನುಸರಿಸಿದವು. ಎರಡು ದಿನಗಳಲ್ಲಿ ಇದನ್ನು ಟಿವಿ ಚಾನೆಲ್‌ಗಳು ಎಳೆದಾಡಿದವು. ಫೆಬ್ರವರಿ 12ರಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ಜೆಎನ್‌ಯುನಲ್ಲಿ ನಡೆದದ್ದು ತೀರಾ ದುರದೃಷ್ಟಕರ. ದೇಶದ್ರೋಹಿ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ದಿಲ್ಲಿ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಆ ದಿನ ಸಂಜೆ ಕನ್ಹಯ್ಯ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿ ದೇಶದ್ರೋಹ ಆರೋಪ ಹೊರಿಸಿದರು. ಆಗ ರಾಜನಾಥ್ ಸಿಂಗ್, ಕನ್ಹಯ್ಯೋ ಅವರನ್ನು ಲಷ್ಕರೆ ತಯ್ಯಿಬಾ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ಮಾಡಿದರು. ಲಜ್ಜೆಗೇಡಿ ಗುಪ್ತಚರ ವಿಭಾಗದ ಅಧಿಕಾರಿಗಳ ಈ ಸೃಷ್ಟಿಯನ್ನು ಕೆಲ ಮಾಧ್ಯಮಗಳೂ ಪ್ರಚುರಪಡಿಸಿದವು. ಮತ್ತೊಬ್ಬ ಎಡಪಂಥೀಯ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ವಿರುದ್ಧ ಆರೋಪ ಮಾಡಿ, ಆತ ಜೈಶೆ ಮುಹಮ್ಮದ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಎಂದು ಬಿಂಬಿಸಿದವು.
ಈ ವೇಳೆ ದಿಲ್ಲಿ ಪೊಲೀಸರು ಸಮರ್ಪಕ ತನಿಖೆ ನಡೆಸದೆ ರಾಜಕೀಯ ಒತ್ತಡಕ್ಕೆ ಮಣಿದು ಕ್ರಮ ಕೈಗೊಂಡರು. ತಮ್ಮ ಆರೋಪವನ್ನು ಈ ವೀಡಿಯೊ ದೃಶ್ಯಾವಳಿ ಆಧಾರದಲ್ಲಿ ಸಮರ್ಥಿಸಿಕೊಳ್ಳಬಹುದು ಎಂಬ ನಂಬಿಕೆಯಿಂದ ಟಿವಿ ಚಾನೆಲ್‌ಗಳಿಂದ ಕಾರ್ಯಕ್ರಮದ ವೀಡಿಯೊ ದೃಶ್ಯಾವಳಿ ಪಡೆಯುವ ಪ್ರಯತ್ನ ಮಾಡಿದರು. ಆದರೆ ಅದರಲ್ಲಿ ಅಂತಹದ್ದೇನೂ ಸಿಗಲಿಲ್ಲ.
ದಿಲ್ಲಿ ಪೊಲೀಸ್ ಮುಖ್ಯಸ್ಥ ಬಸ್ಸಿಯವರ ಪಕ್ಷಪಾತ ಧೋರಣೆ ಫೆಬ್ರವರಿ 15ರಂದು ಜಗಜ್ಜಾಹೀರಾಯಿತು. ಬಿಜೆಪಿ ಶಾಸಕ ಒ,ಪಿ.ಶರ್ಮಾ ಪಟಿಯಾಲಾ ಹೌಸ್ ಕೋರ್ಟ್‌ನ ಹೊರಗೆ ಸಿಪಿಐ ಮುಖಂಡರೊಬ್ಬರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸೆರೆಹಿಡಿಯಲಾಗಿತ್ತು. ಬಿಜೆಪಿ ಪರ ವಕೀಲ ವಿಕ್ರಮ್ ಸಿಂಗ್ ಚೌಹಾಣ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸುವ ಬದಲು ಬಸ್ಸಿ, ಶಾಸಕರ ಮೇಲೆ ಮೊದಲು ಹಲ್ಲೆ ನಡೆದಿತ್ತು ಎಂದು ಸಮರ್ಥಿಸಿಕೊಂಡರು. ಇದಕ್ಕಿಂತಲೂ ಆಘಾತಕಾರಿ ಎಂದರೆ, ಪಾಕಿಸ್ತಾನಿ ಪರ ಎಂಬ ಆರೋಪ ಹೊತ್ತಿರುವವನ್ನು ಗುಂಡಿಕ್ಕಿ ಕೊಲ್ಲಲು ಕೂಡಾ ನಾನು ತಯಾರಾಗಿದ್ದೆ ಎಂದು ಶರ್ಮಾ ಹೇಳಿಕೆ ನೀಡಿರುವುದು. ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಇದನ್ನು ನೇರಪ್ರಸಾರದ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದರು. ಇದುವರೆಗೂ ಶರ್ಮಾ ಅವರ ಹೇಳಿಕೆ ಅಥವಾ ಕೃತ್ಯದ ಬಗ್ಗೆ ಬಿಜೆಪಿ ಅಪಸ್ವರ ಎತ್ತಿಲ್ಲ. ಹಿಂಸೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಶರ್ಮಾ ವಿರುದ್ಧ ಯಾವ ವಿಚಾರಣೆಯೂ ನಡೆದಿಲ್ಲ. ಎರಡು ದಿನಗಳ ಬಳಿಕ ಸುಪ್ರೀಂಕೋರ್ಟ್‌ನ ಸ್ಪಷ್ಟ ನಿರ್ದೇಶನದ ಹೊರತಾಗಿಯೂ, ದುಷ್ಟರು ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ದಾಂಧಲೆ ನಡೆಸಲು ಪೊಲೀಸರು ಅವಕಾಶ ಕೊಟ್ಟರು. ಭಾರತೀಯ ದಂಡಸಂಹಿತೆಯ ಸೆಕ್ಷನ್ 124ಎ ಅನ್ವಯ ದೇಶದ್ರೋಹ ಎಂದರೆ, ಶಬ್ದ್ಧ ಅಥವಾ ಲಿಖಿತವಾಗಿ ಇಲ್ಲವೇ ಸಂಜ್ಞೆಗಳಿಂದ ಅಥವಾ ದೃಶ್ಯಗಳ ಮೂಲಕ, ಇಲ್ಲವೇ ಇನ್ಯಾವುದೇ ವಿಧಾನಗಳ ಮೂಲಕ ಭಾರತ ಸರಕಾರದ ವಿರುದ್ಧ ದ್ವೇಷ ಮೂಡಿಸುವುದು ಅಥವಾ ದ್ವೇಷಕ್ಕೆ ಕುಮ್ಮಕ್ಕು ನೀಡುವುದು. ನ್ಯಾಯಾಲಯಗಳು ದೇಶದ ಅವಿಭಾಜ್ಯ ಅಂಗ. ನ್ಯಾಯಾಲಯದ ಒಳಗೆ ಹಿಂಸಾಚಾರ ನಡೆಸುವುದು ನ್ಯಾಯಾಲಯ ನಿಂದನೆಯಾಗುತ್ತದೆ. ಇಷ್ಟಾಗಿಯೂ ಯಾವ ಪುರಾವೆಯೂ ಇಲ್ಲದೆ ಕನ್ಹಯ್ಯಾ ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ.
ಇದೀಗ ಮುಖ ಉಳಿಸಿಕೊಳ್ಳುವ ಸಲುವಾಗಿ ಕನ್ಹಯ್ಯ ದೇಶವಿರೋಧಿ ಘೋಷಣೆ ಕೂಗುತ್ತಿರುವುದಕ್ಕೆ ಪ್ರಬಲ ಪುರಾವೆ ಸಿಕ್ಕಿದೆ ಎಂದು ಬಸ್ಸಿ ಹೇಳಿಕೊಳ್ಳುತ್ತಿದ್ದಾರೆ. ಬಹುಶಃ ಈ ಪುರಾವೆಗಳು ಸದ್ಯದಲ್ಲೇ ಝೀ, ನ್ಯೂಸ್ ಎಕ್ಸ್ ಹಾಗೂ ಇಂಡಿಯಾ ನ್ಯೂಸ್‌ನಂತಹ ಚಾನಲ್‌ಗಳಲ್ಲಿ ಪ್ರಸಾರವಾಗಬಹುದು.
ಟೈಮ್ಸ್ ನೌ ನಿರೂಪಕ ಅರ್ನಬ್ ಗೋಸ್ವಾಮಿ ಇದಕ್ಕೆ ಅನುಕೂಲಕರ ವಿಧಾನ ಬಳಸಿಕೊಂಡು, ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರನ್ನು ಮುಂದಿಟ್ಟಿದ್ದಾರೆ. ಗೋಸ್ವಾಮಿ ಪದೇ ಪದೇ ಪಾತ್ರ ಅವರಿಗೆ, ವೀಡಿಯೊ ಪ್ರದರ್ಶಿಸಿ ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅದನ್ನು ಪ್ರದರ್ಶಿಸಿದಾಗ ಅವರು, ಟೈಮ್ಸ್ ನೌ ಕ್ಯಾಮರಾ ಅದನ್ನು ಫೋಕಸ್ ಮಾಡುವಂತೆ ಸೂಚಿಸುತ್ತಾರೆ. ತೀರಾ ಹತ್ತಿರದಿಂದ ವೀಡಿಯೊ ತೋರಿಸಿ ಎಂದು ಗೋಸ್ವಾಮಿ ಹೇಳುತ್ತಾರೆ. ಈ ನಕಲಿ ದೃಶ್ಯಾವಳಿಯನ್ನು ಪ್ರಸಾರ ಮಾಡಿದ ಬಳಿಕ ಗೋಸ್ವಾಮಿ, ವೀಡಿಯೊದಲ್ಲಿ ಲೇಕೆ ರಹೇಗೆ ಆಝಾದಿ ಎಂದು ಹೇಳುವುದು ಸ್ಪಷ್ಟವಾಗಿದೆ ಎಂದು ತೀರ್ಪು ನೀಡುತ್ತಾರೆ. ಬಳಿಕ ಅತಿಥಿಗಳತ್ತ ತಿರುಗಿ ಜೆಎನ್‌ಯುನ ಆನಂದ್ ಕುಮಾರ್ ಅವರನ್ನು ಕುರಿತು, ಈ ವೀಡಿಯೊ ಸರಿಯಾಗಿದ್ದರೆ, ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸುತ್ತಾರೆ. ಎಬಿಪಿ ನ್ಯೂಸ್ ಗುರುವಾರ ಕಂಡುಕೊಂಡಂತೆ, ಇದು ಸಂಪಾದಿತ ವೀಡಿಯೊ ಎನ್ನುವುದು ಸ್ಪಷ್ಟವಾಗಿದೆ. ಕನ್ಹಯ್ಯಾ ಎಲ್ಲೂ ಕಾಶ್ಮೀರ ಆಝಾದಿ ಬಗ್ಗೆ ಮಾತನಾಡದಿದ್ದರೂ, ಬುಕ್ಮಾರಿ, ಸಮಂತ್‌ವಾದ್, ಸಂಘವಾದ್‌ನಿಂದ ಸ್ವಾತಂತ್ರ್ಯ ಪಡೆಯೋಣ ಎಂದು ಕರೆ ನೀಡಿರುವುದನ್ನು ತಿರುಚಿರುವುದು ಸ್ಪಷ್ಟವಾಗಿದೆ.
ಕನ್ಹಯ್ಯ ಕ್ರಮೇಣ ಜೈಲಿನಿಂದ ಬಿಡುಗಡೆಯಾಗಿ ಅವರ ವಿರುದ್ಧದ ಎಲ್ಲ ಆರೋಪಗಳೂ ಕೈಬಿಟ್ಟಮೇಲೆ ಸುಪ್ರೀಂಕೋರ್ಟ್ ಖಂಡಿತವಾಗಿಯೂ ವಿಶೇಷ ತನಿಖಾ ತಂಡವನ್ನು ರಚಿಸಿ, ಈ ನಕಲಿ ವೀಡಿಯೊ ಸೃಷ್ಟಿಸಿ, ಪ್ರಸಾರ ಮಾಡಿದ ಅಪರಾಧಿಗಳನ್ನು ಪತ್ತೆ ಮಾಡಲೇಬೇಕು. ಇಂತಹ ಸುಳ್ಳು ಹಾಗೂ ಅವಮಾನಕರ ವಿಚಾರಣೆಗೆ ಕಾರಣವಾದ ಪೊಲೀಸರು ಹಾಗೂ ರಾಜಕಾರಣಿಗಳನ್ನು ನ್ಯಾಯಾಲಯದ ಕಟಕಟೆಗೆ ಎಳೆಯಲೇಬೇಕು. ಇದನ್ನು ತಿದ್ದಿ, ಪ್ರಸಾರ ಮಾಡಿಸುವಲ್ಲಿ ಪಾತ್ರ ಇದೆ ಎಂದು ಸಾಬೀತಾದಲ್ಲಿ ಬಸ್ಸಿ ಸೇರಿದಂತೆ ಯಾರನ್ನೂ ಬಿಡಬಾರದು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪತ್ರಕರ್ತರ ಮೇಲೆ ಪಟಿಯಾಲಾಹೌಸ್ ಕೋರ್ಟ್ ಹೊರಗೆ ದಾಳಿ ಮಾಡಿದ ವಕೀಲರನ್ನೂ ವಿಚಾರಣೆಗೆ ಗುರಿಪಡಿಸಬೇಕು ಹಾಗೂ ಅವರನ್ನು ವೃತ್ತಿಯಿಂದ ವಜಾ ಮಾಡಬೇಕು.
ಆದರೆ ಕನ್ಹಯ್ಯ ಕುಮಾರ್ ಅವರ ಚಾರಿತ್ರವಧೆಗೆ ಕಳೆದ ಹತ್ತು ದಿನಗಳಿಂದ ಶ್ರಮಿಸುತ್ತಿರುವ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಯಾವ ಕಾನೂನೂ ನಮ್ಮಲ್ಲಿಲ್ಲ. ಈ ಪೈಕಿ ಕೆಲವರು ಕನ್ಹಯ್ಯಿ ಅವರ ವಯಸ್ಸಿನ ಮಗ ಅಥವಾ ಮಗಳನ್ನು ಹೊಂದಿದ್ದಾರೆ. ಇಷ್ಟಾಗಿಯೂ ಒಬ್ಬ ಯುವಕನನ್ನು ಹುಚ್ಚುನಾಯಿಗಳಿಗೆ ಆಹಾರವಾಗಿ ಕೊಡುವ ಬಗ್ಗೆ ಸ್ವಲ್ಪ ಕೂಡಾ ಹಿಂಜರಿಕೆ ಇವರಿಗಿಲ್ಲ. ಅವರಿಗೆ ಖಂಡನೆಯೇ ಶಿಕ್ಷೆ. ಅವರು ಪತ್ರಿಕೋದ್ಯಮಕ್ಕೆ ಮತ್ತು ದೇಶಕ್ಕೆ ಕಳಂಕ.

ಹೆಮ್ಮೆಯ ಭಾರತೀಯ
ಈತನ ಮೇಲೆ ಹೂಡಿರುವ ಇಂತಹ ಘೋರ ಆರೋಪದ ಬಗ್ಗೆ ಪುರಾವೆಗಳನ್ನು ಹುಡುಕಲು ಹೊರಟಾಗ, ಗೃಹಸಚಿವರು ಹೇಳಿದಂತೆ ಆತ ಯಾವ ದೇಶವಿರೋಧಿ ಕೃತ್ಯದಲ್ಲೂ ಶಾಮೀಲಾಗಿಲ್ಲ ಎನ್ನುವುದು ಖಚಿತವಾಗಿ ತಿಳಿಯಿತು.
ಆತನ ಭಾಷಣ ಅಥವಾ ಆತನ ಭಾವನೆಗಳನ್ನು ವೀಡಿಯೊದಲ್ಲಿ ನೋಡಿದಾಗ ನಮ್ಮ ಬಹುತೇಕ ರಾಜಕಾರಣಿಗಳು ಹಾಗೂ ಪತ್ರಕರ್ತರಿಗಿಂತ ಒಳ್ಳೆಯ ರಾಜಕೀಯ ಪ್ರಜ್ಞೆ ಹಾಗೂ ಭಾಷೆಯ ಮೇಲೆ ಪ್ರಭುತ್ವ ಇರುವುದು ಕಾಣುತ್ತದೆ. ಎಡಪಂಥೀಯ ರಾಜಕಾರಣ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆತ ಟೀಕಿಸುವುದನ್ನು ನೀವು ಒಪ್ಪಿಕೊಳ್ಳಬೇಕಾಗಿಲ್ಲ. ಆದರೆ ದೇಶದ ಜನತೆಯ ಬಗ್ಗೆ ಇರುವ ಆತನ ಬದ್ಧತೆ ಹಾಗೂ ಪ್ರೇಮವನ್ನು ಗಮನಿಸಲೇಬೇಕಾಗುತ್ತದೆ.
ಭಾರತೀಯ ಕಮ್ಯುನಿಷ್ಟ್ ಪಕ್ಷಕ್ಕೆ ನಿಷ್ಟವಾಗಿರುವ ಹಾಗೂ ದೇಶದ ಅತ್ಯಂತ ಹಳೆಯ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಷನ್ ಸದಸ್ಯನಾಗಿ, ಆತ ಖಂಡಿತವಾಗಿಯೂ ಕಾಶ್ಮೀರದ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಲು ಸಾಧ್ಯವೇ ಇಲ್ಲ. ಆದರೆ ಆ ಕಾರಣವನ್ನು ಪ್ರತಿಪಾದಿಸುವ ಮಂದಿಯ ಜತೆಗೆ ಹೇಗೆ ಸಂವಾದ ನಡೆಸಬೇಕು ಎಂಬ ಜಾಣ್ಮೆ ಹಾಗೂ ರಾಜಕೀಯ ಕೌಶಲ ಆತನಲ್ಲಿದೆ. ಜತೆಗೆ ಅವರ ಸ್ವಾತಂತ್ರ್ಯ ಹೋರಾಟವನ್ನು ಭಾರತದ ನಾಗರಿಕರ ಗೌರವ ಕಾಪಾಡುವ ಹೋರಾಟವಾಗಿ ಹೇಗೆ ರೂಪಿಸಬಹುದು ಎನ್ನುವುದು ಆತನಿಗೆ ಗೊತ್ತಿದೆ. ಆತನ ಸ್ವಾತಂತ್ರ್ಯದ ಕಲ್ಪನೆ ಇಡೀ ದೇಶದ ಜನ ಎದುರುನೋಡುತ್ತಿರುವ ಸ್ವಾತಂತ್ರ್ಯ. ಅಂದರೆ ಹಸಿವಿನಿಂದ ಮುಕ್ತಿ; ಊಳಿಗಮಾನ್ಯ ಪದ್ಧತಿಯಿಂದ ಹಾಗೂ ಕೋಮುವಾದದಿಂದ ಮುಕ್ತಿ.
ವಾಜಪೇಯಿ ಪ್ರಧಾನಿಯಾಗಿದ್ದಾಗ ಕಾಶ್ಮೀರ ವಿಮೋಚನೆ ಹೋರಾಟದ ಹುರಿಯತ್ ಕಾನ್ಫರೆನ್ಸ್ ಜತೆ ಮಾತನಾಡುವಾಗ ಸಂಕುಚಿತ ಸಂವಿಧಾನತ್ವಕ್ಕೆ ಸೀಮಿತವಾಗದೇಚರ್ಚೆ ನಡೆಸಿದಂತೆ, ಕನ್ಹಯ್ಯೆ ಕ್ಯಾಂಪಸ್ ರಾಜಕೀಯ ಕೂಡಾ ಮಾನವತೆ ಹಾಗೂ ನ್ಯಾಯವನ್ನು ಅಪ್ಪಿಕೊಂಡಿತ್ತು. ಕ್ಯಾಂಪಸ್‌ನಲ್ಲಿ ಕೆಲವರು ಪ್ರಚೋದಕ ಘೋಷಣೆಗಳನ್ನು ಕೂಗಿದ ಮಾತ್ರಕ್ಕೆ ಛಿದ್ರವಾಗುವಷ್ಟು ನಮ್ಮ ದೇಶ ದುರ್ಬಲವಲ್ಲ ಎಂಬ ನಂಬಿಕೆ ಇರುವ ದೇಶಭಕ್ತ.
ಆತನ ಬಂಧನದ ಹಿಂದಿನ ದಿನ ಆತ ಮಾಡಿದ ಭಾಷಣದ ತುಣುಕುಗಳನ್ನು ನೋಡಿ:
ಇಲ್ಲಿ ಆತ ಏನು ಮಾಡುತ್ತಿದ್ದಾನೆ? ದೇಶದ ಎಲ್ಲ ಪ್ರಜೆಗಳಿಗೂ ಸಮಾನವಾದ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸುತ್ತಿದ್ದಾನೆ. ದೇಶದ ಭವಿಷ್ಯ ಸುಭದ್ರವಾಗಿರಬೇಕು ಎಂಬ ಸಲುವಾಗಿ. ಬಳಿಕ ಪ್ರತಿಯೊಂದು ರಾಜಕೀಯ ಸವಾಲನ್ನು ದೇಶಕ್ಕೆ ಮಿಲಿಟರಿ ಅಪಾಯ ಎಂದು ಪರಿಗಣಿಸುವವರ ಬಗ್ಗೆ ಮಾತನಾಡುತ್ತಾನೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ, ದೇಶದ್ರೋಹ ಹಾಗೂ ಇಂತಹ ಇನ್ನಿತರ ವಿಧಾನಗಳನ್ನು ಹೊರತುಪಡಿಸಿ ಬೇರೇನೂ ಚಿಂತಿಸದ ದೇಶಕ್ಕಿಂತ ಕಾಶ್ಮೀರ ಅಥವಾ ಬೇರೆ ಯಾವುದೇ ಭಾಗಗಳಿಗೆ ಆಕರ್ಷಕ ಎನ್ನುವ ಮೂಢ ಆಕರ್ಷಣೆಯನ್ನು ಪ್ರಶ್ನಿಸುತ್ತಾನೆ. ಇಂತಹ ಆಕರ್ಷಕ ವ್ಯಕ್ತಿತ್ವದ ಯುವಕನ ವಿರುದ್ಧ ಮೋದಿ ಸರಕಾರದ ಬುದ್ಧಿಗೇಡಿ ಕಿರುಕುಳಕ್ಕೆ ಕಾರಣ ಏನು ಎನ್ನುವುದು ತಿಳಿಯುತ್ತಿಲ್ಲ. ಈ ಬಂಧನ ಅಸಾಮರ್ಥ್ಯದ ಪರಿಣಾಮ ಎಂದು ಕೆಲವರು ವಾದಿಸುತ್ತಾರೆ. ಬಹುಶಃ ಇದು ಹೆಚ್ಚು ಸೂಕ್ತ ಎನಿಸುತ್ತದೆ. ಆದರೆ ಆ ಘಟನೆಯ ಬಳಿಕ ನಡೆದ ಘಟನಾವಳಿಗಳು ಅದನ್ನು ನಂಬುವುದು ಕಷ್ಟ ಎಂದು ನಿರೂಪಿಸುತ್ತವೆ.

Writer - ಸಿದ್ಧಾರ್ಥ ವರದರಾಜನ್

contributor

Editor - ಸಿದ್ಧಾರ್ಥ ವರದರಾಜನ್

contributor

Similar News