ಕಾನೂನಿನ ಆಧಿಪತ್ಯದ ಅಗತ್ಯ

Update: 2016-02-24 18:43 GMT

ತ್ತೀಚೆಗೆ ದಿಲ್ಲಿಯ ಪಟಿಯಾಲ ನ್ಯಾಯಾಲಯದ ಆವರಣದಲ್ಲಿ ವಕೀಲರು ವಿದ್ಯಾರ್ಥಿವೃಂದದ ಮತ್ತು ಪತ್ರಕರ್ತರ ಮೇಲೆ ಹರಿಹಾಯ್ದ ಘಟನೆ ನಡೆಯಿತು. ಕರಿಕೋಟಿಗೆ ಕರಿಚುಕ್ಕೆಯಾದ ಈ ಘಟನೆಗೆ ನನ್ನೊಬ್ಬ ವಕೀಲ ಮಿತ್ರರು ತುಂಬಾ ಹರ್ಷ ಪಟ್ಟರು. ಪಟಿಯಾಲದಲ್ಲಿ ಗಲಾಟೆ ಮಾಡಿದ ವಕೀಲರು ದೇಶಭಕ್ತರು ಎಂದರು. ವಾದ ಮಾಡಿದರೆ ನನ್ನ ಗೆಳೆಯರೂ ಪಟಿಯಾಲವನ್ನು ಇಲ್ಲಿ ಪುನರಾವರ್ತಿಸಿ ದೇಶಭಕ್ತರಾದಾರು ಎಂಬ ಭಯದಿಂದ ನಾನು ಸುಮ್ಮನಾದೆ. ಸುಮಾರು ನಾಲ್ಕು ದಶಕಗಳ ನನ್ನ ವಕೀಲ ವೃತ್ತಿಯಲ್ಲಿ ನಾನು ಯಾವುದೇ ಪ್ರಕರಣದಲ್ಲಿ ಎದುರಾಳಿಯನ್ನು ಆತ ಎಷ್ಟೇ ಪ್ರಬಲ/ದುರ್ಬಲನಾಗಿದ್ದಾಗಲೂ ದೈಹಿಕವಾಗಿ ಆತನನ್ನು ಮುಗಿಸುವ ಅಥವಾ ಆತನ ಮೇಲೆ ಹಲ್ಲೆ ಮಾಡಿ ಆ ಮೂಲಕ ಗೆಲ್ಲಬಹುದೆಂದು ಅಥವಾ ಹಿಂಸಾತ್ಮಕವಾಗಿ ಕಾನೂನನ್ನು ಅನುಷ್ಠಾನಗೊಳಿಸಬಹುದೆಂದಾಗಲಿ ಯೋಚಿ ಸುವ ವಾತಾವರಣದಲ್ಲಿ ಇಲ್ಲವೇ ಆಡಳಿತದಲ್ಲಿ ಬೆಳೆದವನೇ ಅಲ್ಲ. ಕಾನೂನನ್ನು ಎತ್ತಿಹಿಡಿಯುವ ಸ್ಥಳದಲ್ಲೇ ಹೀಗಾಗುವುದು ಮತ್ತು ಇದನ್ನು ಇಷ್ಟೊಂದು ಸುಲಭ ದಲ್ಲಿ ದೇಶಭಕ್ತಿಯೊಂದಿಗೆ ಸಮೀಕರಿಸುವುದು ಕಂಡಾಗ ಸಮೂಹ ಸನ್ನಿ ಹೇಗೆ ಸಮಾಜ ವನ್ನಾವರಿಸುತ್ತದೆಯೆಂಬುದು ಗೊತ್ತಾಗುತ್ತದೆ. ದೇಶಭಕ್ತರಾಗಬೇಕಾದರೆ ಕಾನೂನನ್ನು ಕೈಗೆತ್ತಿಕೊಳ್ಳಬಹುದು ಮತ್ತು ಇದರಿಂದ ಕಾನೂನು ಪಾಲನೆಯಾಗಬೇಕಾದ ಮತ್ತು ಎಲ್ಲವೂ ಕಾನೂನು ರೀತಿಯ ನಡೆ ಯುತ್ತದೆಂದು ಸಮಾಜವು ನಿರೀಕ್ಷಿಸುವ ಮತ್ತು ಅಂತಹ ಶಿಸ್ತನ್ನು ಬಯಸುವ ನ್ಯಾಯಾಲಯದಲ್ಲೂ ಕಾನೂನನ್ನು ನಿರ್ಲಕ್ಷಿಸಬಹುದು ಎಂಬ ಭಯಾನಕವಾದ ಸಾಧ್ಯತೆಯ ಅರಿವಾಯಿತು. ಈ ಸಾಧ್ಯತೆಯ ಹಿಂದೆ ಇರುವ ಶಕ್ತಿಗಳು ಯಾವುವು?ರಲ್ಲಿ ಇಂದಿರಾ ಗಾಂಧಿ ಈ ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯನ್ನು ಹೇರಿದರು. 18 ತಿಂಗಳ ಕಾಲ ಪ್ರಭುತ್ವದ ಅಟ್ಟಹಾಸದ ವಿರುದ್ಧ ಪ್ರಜಾಶಕ್ತಿ, ಲೋಕಶಕ್ತಿ ಅಹಿಂಸಾತ್ಮಕವಾಗಿ ಹೋರಾಡಿತು. ಕೊನೆಗೆ ರಾಜಶಕ್ತಿ ತಲೆಬಾಗಿತು. ಮತ್ತೆ ಪ್ರಜಾತಂತ್ರ ತಲೆಯೆತ್ತಿತು. ಹೀಗೆ ತುರ್ತುಪರಿಸ್ಥಿತಿ ರದ್ದಾದಾಗ ಖ್ಯಾತ ಸಂವಿಧಾನ ತಜ್ಞ ನಾನಿ ಪಾಲ್ಕಿ ವಾಲಾ ತುರ್ತುಪರಿಸ್ಥಿತಿಯ ನೈಜ ಲಾಭವೆಂದರೆ ವಿರೋಧಪಕ್ಷಗಳ ಐಕ್ಯತೆ, ದೇಶದ ರಾಜಕೀಯ ಪ್ರಜ್ಞೆಯ ಉತ್ಕಟ ಎಚ್ಚರ ಮತ್ತು ಜನರಲ್ಲಿ ತಾವೇ ಸಂವಿಧಾನದ ರಕ್ಷಕರೆಂಬ ಅರಿವು ಎಂದು ಇತಿಹಾಸವು ದಾಖಲಿಸುತ್ತದೆ ಎಂದಿದ್ದರು. ಮುಂದುವರಿದು ಅವರು ತುರ್ತುಸ್ಥಿತಿಯಲ್ಲಿ ಜನರು ಭಾರೀ ಬೆಲೆಯನ್ನು ತೆತ್ತರಾದರೂ ಅದರ ಕರ್ತೃಗಳಿಂದ ಅಷ್ಟೇ ಪ್ರಮಾಣದ ಬೆಲೆಯನ್ನೂ ಪಡೆದರು ಎಂದರು. ಸಂವಿಧಾನದ ರಕ್ಷಣೆಯ ಹೆಸರಿನಲ್ಲಿ ಇಂತಹ ಸರ್ವಾಧಿಕಾರ ಮತ್ತೆ ತಲೆಯೆತ್ತದಂತೆ ಕಾಳಜಿ ವಹಿಸುವುದು ಬರಲಿರುವ ಹೊಸ ಸರಕಾರದ ಮೊದಲ ಹೆಜ್ಜೆಗಳಲ್ಲೊಂದಾಗಬೇಕು ಎಂದರು. ಹೊಸ ಸರಕಾರ ಬಂದಿತು. ಆದರೆ ಒಗ್ಗಟ್ಟನ್ನು ಸಾಧಿಸುವುದು, ಸ್ಥಾಪಿಸುವುದು ಅವರಿಂದ ಸಾಧ್ಯವಾಗಲಿಲ್ಲ. ಮತ್ತೆ ಇಂದಿರಾ ಸರಕಾರವೇ ಬಂದಿತು. ಆದರೆ ಈ ಬಾರಿ ಹಿಂದಿನ ತಪ್ಪನ್ನು ಇಂದಿರಾ ಮಾಡಲಿಲ್ಲ. ಆದರೂ ರಾಜಕೀಯ ಬಿಕ್ಕಟ್ಟುಗಳನ್ನು ಎದುರಿಸಲಾಗದೆ ನಿಧಾನಕ್ಕೆ ಅಕ್ಷರಶಃ ನಾಶಹೊಂದಿದರು. ನಂತರ ರಾಜೀವ್ ಗಾಂಧಿಯಾಗಲಿ ಇನ್ಯಾರೇ ಆಗಲಿ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತುವುದು ಸಾಧ್ಯವಾಗಲೇ ಇಲ್ಲ. ಹೀಗಾಗಿ ಕಾಂಗ್ರೆಸ್ ರಾಜಕೀಯ ಮೇಲಾಟದಲ್ಲಿ ಬಹುಕಾಲ ಅಧಿಕಾರವನ್ನು ಪಡೆಯಿತೆನ್ನಿಸಿದರೂ ಅದರ ಶಕ್ತಿ ಕುಂದಿದ್ದು ನಿಚ್ಚಳವಾಗಿ ಕಾಣಿಸುತ್ತದೆ. ಮೊನ್ನೆ ಮೊನ್ನೆ ಮೋದಿ ಸರಕಾರ ಬರುವ ಮೊದಲು ಸುಮಾರು ಒಂದು ದಶಕಗಳ ಕಾಲ ಆಳ್ವಿಕೆ ನಡೆಸಿದ ಮನಮೋಹನ್ ಸಿಂಗ್ ಸರಕಾರ ಸಾಕಷ್ಟು ಕಾಲವನ್ನು ಭ್ರಷ್ಟಾಚಾರ, ಹಗರಣ ಮತ್ತು ಸಮ್ಮಿಶ್ರ ಪಕ್ಷಗಳನ್ನು ಸಮಾಧಾನಪಡಿಸುವುದರಲ್ಲೇ ಮಗ್ನವಾಗಿ ಮರಳಿಬಾರದಷ್ಟು ನಿಶ್ಶಕ್ತವಾಗಿ ಸಂಖ್ಯಾಬಲದ ಕುಸಿತದೊಂದಿಗೆ ಅಧಿಕೃತ ವಿರೋಧಪಕ್ಷದ ಸ್ಥಾನಮಾನವನ್ನು ಪಡೆಯುವಲ್ಲೂ ವಿಫಲವಾಯಿತು. ದೇಶದ ಜನ ಒಂದು ವೈಚಿತ್ರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದು ಎಲ್ಲ ರಾಜ್ಯಗಳಲ್ಲೂ ಕಂಡುಬರುತ್ತಿದೆ. ಈ ವೈಶಿಷ್ಟ್ಯವು ತುರ್ತುಪರಿಸ್ಥಿತಿಯನ್ನು ರದ್ದುಗೊಳಿಸುವಲ್ಲಿ ಸಾಫಲ್ಯವನ್ನು ಕಂಡಿದೆಯೆಂದು ಬಿಟ್ಟರೆ ಉಳಿದೆಡೆ ಅನಿಶ್ಚಿತ ಸಂಶಯದ ಹಾದಿಯೇನೋ ಎನ್ನುವಂತಿದೆ. ಅಂದರೆ ತಮಗಿಷ್ಟವಾದ ಸರಕಾರವನ್ನು ಆರಿಸುವುದರಲ್ಲಿ ಉತ್ಸಾಹವನ್ನು ತೋರಿಸದೆ ತಮಗೆ ಇಷ್ಟವಾಗದ ಸರಕಾರವನ್ನು ಬೀಳಿಸುವುದರಲ್ಲಿ ಉತ್ಸಾಹಿತರಾಗುತ್ತಾರೆ. ಪರಿಣಾಮವೆಂದರೆ ವಿರೋಧಪಕ್ಷಗಳು ಸರಕಾರ ತಪ್ಪು ಮಾಡುವುದನ್ನೇ ಕಾಯುತ್ತಿರುತ್ತವೆೆ. ಇದರಿಂದಾಗಿ ಪಲಿತಾಂಶದಲ್ಲಿ ಆಳುವ ಪಕ್ಷ ಜನರ ಪ್ರೀತಿ-ವಿಶ್ವಾಸ-ಅನುಕಂಪಗಳನ್ನು ತಾತ್ಕಾಲಿಕವಾಗಿಯಾದರೂ ಕಳೆದುಕೊಂಡು ಹೊಸ ಸರಕಾರಕ್ಕೆ ದಾರಿ ಮಾಡಿಕೊಡುತ್ತದೆ. ಹೀಗೆ ಆಯ್ಕೆಯು ನೇತ್ಯಾತ್ಮಕವಾಗಿರುತ್ತದೆ. ಕಳೆದ ಬಾರಿ ಆದದ್ದು ಇದೇ: ಕಾಂಗ್ರೆಸ್ ಸರಕಾರವನ್ನು ಬೀಳಿಸುವ ಉತ್ಸಾಹದಲ್ಲಿ ಮೋದಿಗೆ ಅಭೂತಪೂರ್ವ(-ಹಾಗೆನ್ನುವುದೂ ಸರಿಯಲ್ಲ, ಏಕೆಂದರೆ ಹಿಂದೆಯೂ ಇಷ್ಟು ಅಥವಾ ಇದಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದ ಉದಾಹರಣೆಗಳಿವೆ; ರಾಜೀವ್ ಗಾಂಧಿ 400ಕ್ಕೂ ಮಿಕ್ಕಿ ಸ್ಥಾನಗಳನ್ನು ಹೊಂದಿದ್ದರು!) ಬೆಂಬಲವನ್ನು ನೀಡಿದರು. ಈ ಬೆಂಬಲ ಎಷ್ಟಿತ್ತೆಂದರೆ ಭಾಜಪವೆಂಬ ಪಕ್ಷವೂ ಗೌಣವಾಗಿಹೋಯಿತು. ಂತಹ ಬಹುಮತವು ಸಹಜವಾಗಿಯೇ ಅಧಿಕಾರದ ಅಹಂಕಾರವನ್ನು, ಶಾಶ್ವತ ಪ್ರಸಿದ್ಧಿ-ಪ್ರತಿಷ್ಠೆಯ ವಾಂಛೆ ಯನ್ನು ಹೆಚ್ಚಿಸುತ್ತದೆ. ಉಪವಾಸವಿದ್ದವನಿಗೆ ಊಟ ಎದುರಾದಂತೆ ಗಬಗಬನೆ ತಿನ್ನುವ ಚಾಪಲ್ಯ ಹೆಚ್ಚಾಗುತ್ತದೆ. ಅದರಿಂದಾಗುವ ಹಾನಿ ಗಮನಕ್ಕೆ ಬರುವುದೇ ಇಲ್ಲ. ಆಗ ಕಾನೂನು, ನ್ಯಾಯ, ಸಿದ್ಧಾಂತ, ಇವೆಲ್ಲವೂ ಅಧಿಕಾರವನ್ನು ಉಳಿಸುವಉಪಕರಣಗಳಾಗುತ್ತವೆ. ಪಾಲ್ಕಿವಾಲ 1977 ರಲ್ಲಿ ಹೇಳಿದ ಸಂವಿಧಾನದ ರಕ್ಷಣೆಯ ಹೆಸರಿ ನಲ್ಲಿ ಸರ್ವಾಧಿಕಾರವು ಮತ್ತೆ ತಲೆಯೆತ್ತ ದಂತೆ ಕಾಳಜಿ ವಹಿಬೇಕಾದ ಕರ್ತವ್ಯವು ಮರೆತು ಹೋಗುತ್ತದೆ.  ದೇಶದಲ್ಲಿ ಇಂತಹ ಒಂದು ಅಪಾಯ ಎದುರಾಗುತ್ತಲಿದೆ. 1975ರ ಸಂದರ್ಭದಲ್ಲಿ ಇಂದಿರಾ ತನ್ನ ಅಧಿಕಾರವು ಅಸ್ಥಿರವಾಗುತ್ತದೆಂಬ ಭಯದಿಂದಲೇ ಪ್ರಜಾ ತಂತ್ರದ ದಮನಕ್ಕೆ ಕೈಹಾಕಿದರು. ತುರ್ತುಸ್ಥಿತಿ ಅಥವಾ ಇತರ ಬಿಗಿ ಮಾರ್ಗೋಪಾಯಗಳು ಬೇಕಾಗುವಂತಹ ಅಪಾಯ ಇರಬೇಕಾದ್ದು ದೇಶಕ್ಕೆ; ಸರಕಾರಕ್ಕೂ ಅಲ್ಲ; ಆಳುವವರಿಗೂ ಅಲ್ಲ. 1971ರಲ್ಲಿ ಬಾಂಗ್ಲಾ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇಂದಿರಾ ಗಾಂಧಿ ಒಬ್ಬ ಮುತ್ಸದ್ದಿಯಂತೆ ವರ್ತಿಸಿದ್ದರು. ಅಂತಾ ರಾಷ್ಟ್ರೀಯ ಕಾನೂನನ್ನು ಭಾರತದ ರಕ್ಷಣೆಗೆ ಮತ್ತು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ವಿಶ್ವಾದ್ಯಂತ ಪ್ರವಾಸ ಕೈಗೊಂಡು ಭಾರತಕ್ಕೆ ಈ ನೆರೆಮನೆಯ ಹೋರಾಟ ತಂದೊಡ್ಡುವ ಅಪಾಯವನ್ನು ಮನವರಿಕೆ ಮಾಡಿಕೊಟ್ಟರು. ನಂತರವೇ ಭಾರತೀಯ ಸೇನೆಯನ್ನು ಬಾಂಗ್ಲಾದಲ್ಲಿ ಬಳಸಿದರು. ಹೀಗಾಗಿ ಭಾರತ ನಡೆಸಿದ್ದು ತಾಂತ್ರಿಕವಾಗಿ ಕಾನೂನುರೀತಿಯ ಕ್ರಮವೆಂದು ವಿಶ್ವಮಟ್ಟದಲ್ಲಿ ದಾಖಲಾಯಿತು. ಹಿಟ್ಲರ್ ತನ್ನ ಅಸ್ತ್ತಿತ್ವಕ್ಕೆ ತನ್ನದೇ ದೇಶದ ಯಹೂದಿಗಳಿಂದ, ಇತರ ಸಾರ್ವಭೌಮ ರಾಷ್ಟ್ರಗಳಿಂದ ಅಪಾಯ ಬಂದು ತನ್ನ ಬುನಾದಿ ಅಲುಗಾಡುತ್ತಿದೆಯೆಂಬ ಭಯ ದಿಂದಲೇ ಫ್ಯಾಶಿಸ್ಟ್ ಮನೋಭಾವವನ್ನು ತಾಳಿದ. ಭಯವಿಲ್ಲದೇ ಹುಲಿ ಕೂಡಾ ಎದುರಾಳಿಯ ಮೇಲೆ ದಾಳಿ ಮಾಡುವುದಿಲ್ಲವಂತೆ! ಇಂದಿರಾ ಗಾಂಧಿ ಅಲಹಾಬಾದ್ ನ್ಯಾಯಾಲಯವು ತೀರ್ಪು ಕೊಟ್ಟಾಗ ಇಂತಹ ಅಸ್ಥಿರತೆಯನ್ನು ಅನುಭವಿಸಿ ಪ್ರತಿಯೊಂದರಲ್ಲೂ ವಿದೇಶಿ ಕೈವಾಡವನ್ನು ಅನುಭವಿಸಿದ್ದರಿಂದಲೇ ಸರ್ವಾಧಿಕಾರಕ್ಕೆ ಮನಮಾಡಿದರು. ಮೊನ್ನೆಯಷ್ಟೇ ಮೋದಿ ಒರಿಸ್ಸಾದಲ್ಲಿ ಜೆಎನ್‌ಯುವನ್ನು ಪ್ರಸ್ತಾಪಿ ಸದೆಯೂ ವಿರೋಧ ಪಕ್ಷಗಳಿಂದ ತನ್ನ ಸರಕಾರವನ್ನು ಅಸ್ಥಿರಗೊಳಿಸುವ ಕುತಂತ್ರ ನಡೆಯುತ್ತಿದೆಯೆಂದು ಹೇಳಿದರು. ಈ ಎಲ್ಲ ಅಭಿಪ್ರಾಯಗಳಿಗೆ ಒಂದು ಸಹಜ ಸಾಮ್ಯತೆಯಿದೆ. ಪ್ರಕೃತ ಕೇಂದ್ರ ಸರಕಾರವು ತನ್ನ ಪ್ರತಿಷ್ಠೆಯನ್ನು, ಹಾಗೆಯೇ ತನ್ನ ಸೈದ್ಧಾಂತಿಕ ಬುನಾದಿಯನ್ನು ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಕಾಂಗ್ರೆಸಿನ ದೌರ್ಬಲ್ಯ ಮತ್ತು ಹಗರಣಗಳಿಂದ ಸೋತ ಬಡ ಭಾರತೀಯನಿಗೆ ಸ್ವರ್ಗದ ಕನಸನ್ನು ಮಾರಿ ಹಲವಾರು ಆಶ್ವಾಸನೆಗಳೊಂದಿಗೆ ಅಧಿಕಾರಕ್ಕೆ ಬಂದದ್ದರಿಂದ ಈ ಕನಸುಗಳನ್ನು ಹೇಗಾದರೂ ತೇಲಿಬಿಡುವ ಅಪಾಯಕಾರಿ ಸರ್ಕಸ್ಸನ್ನು ಸರಕಾರ ಮಾಡುತ್ತಿದೆ. ಇದಕ್ಕೆ ಕಾನೂನಿನ ಬೆಂಬಲವಿಲ್ಲದಿದ್ದಾಗಲೂ ಕಾನೂನಿನ ಮೂಲಕವೇ ತಾನು ಸರಿಯೆಂದು ಬಿಂಬಿಸಲು ಸರಕಾರವು ಪ್ರಯ ತ್ನಿಸುತ್ತಿದೆ. ಜೆಎನ್‌ಯು ಪ್ರಕರಣವು ಒಂದು ಅಶಿಸ್ತಿನ ವಿರುದ್ಧದ ಕಾರ್ಯಕ್ರಮವಾಗಿದ್ದರೆ ಪುಟ್ಟದರಲ್ಲೇ ದಾಟಿಹೋಗುತ್ತಿತ್ತು. ಆದರೆ ಅದನ್ನು ಭೂತಗನ್ನಡಿಯಲ್ಲಿಟ್ಟು ತನ್ನ ವಿದ್ಯಾರ್ಥಿ ಸಂಘಟನೆಯನ್ನು ಬೆಳೆಸುವ ಉದ್ದೇಶ ದಿಂದ ದೇಶದ್ರೋಹವೆಂಬ ಮಹಾನ್ ಪರಿಕಲ್ಪನೆಯೊಂದಿಗೆ ಶೋಕೇಸ್ ಮಾಡಲು ಮತ್ತು ಪಟಿಯಾಲ ನ್ಯಾಯಾಲಯದ ಆವರಣ ದಲ್ಲಿ ದೇಶಭಕ್ತರನ್ನು ಸೃಷ್ಟಿಸಲು ಬಳಸಿದರೆ ಸರಕಾರವು ತಾನು ಮಾತ್ರವಲ್ಲ ತಾನು ಬಳಸಿದ ಕಾನೂನು ಮತ್ತು ಪೊಲೀಸ್, ವಕೀಲರು ಮುಂತಾದ ಕಾನೂನುಪಾಲ ಕರನ್ನೂ ನಗೆಪಾಟಲಿಗೊಡ್ಡುತ್ತದೆ. ಒಂದು ಹಂತದವರೆಗೆ ಇದು ಸಹ್ಯ; ಹೇಗೋ ಸರಿಹೋಗಬಹುದೆಂಬ ಆಶಯದಲ್ಲಿ ಜನರು ಕಾಲ ಕಳೆಯುತ್ತಾರೆ. ನಂತರ ಪರಿಸ್ಥಿತಿ ಭಯಾನಕವಾಗುತ್ತದೆ. ಸಮಾಜವೇ ಅಸ್ತವ್ಯಸ್ತವಾಗುತ್ತದೆ. ವ್ಯವಸ್ಥೆಯ ನಿಯಂತ್ರಣ ತಪ್ಪುತ್ತದೆ. ಆಗ 1975 ಮತ್ತೆ ಮರುಕಳಿಸುತ್ತದೆ. ಪ್ರಜಾತಂತ್ರದಲ್ಲಿ ಕಾನೂನೇ ಸರ್ವೋಚ್ಚ. ನೀವೆಷ್ಟೇ ದೊಡ್ಡವರಿದ್ದರೂ ಕಾನೂನು ನಿಮಗಿಂತ ಎತ್ತರದಲ್ಲಿದೆಯೆಂಬ ಅರಿವು ಎಲ್ಲರಿಗಿರಬೇಕು. ಆಗ ಸಂವಿಧಾನಬದ್ಧ ವಿನಯ, ಸೌಜನ್ಯ ನಮ್ಮ ಎಲ್ಲ ಕಾರ್ಯಕ್ರಮಗಳಲ್ಲಿರುತ್ತದೆ. ಆದರೆ ನಾವೇ ಸಂವಿಧಾನದ ಚಾಲಕರು ಅದು ನಮ್ಮ ನಿಯಂತ್ರಣದಲ್ಲಿರಬೇಕು ಎಂಬಂತೆ ವರ್ತಿಸಿದರೆ ಆಗ ಮೇಲಿನಿಂದ ಎಲ್ಲವೂ ಶಾಂತವಾಗಿದೆಯೆಂದು ಕಂಡರೂ ಒಳಗೆ ಬೆಂಕಿ ಕುದಿ ಯುತ್ತಿರುತ್ತದೆ. ಈ ಬೆಂಕಿ ತನ್ನನ್ನು ಸುಡಲಾರದಷ್ಟು ಕಿರಿದೆಂದು ಯಾವ ಸರಕಾರವೂ ಭಾವಿಸಬಾರದು. ನಾಝಿ ಸರ್ವಾಧಿಕಾರಿ ಹಿಟ್ಲರನ ಆಳ್ವಿಕೆಯಲ್ಲಿ ಜರ್ಮನಿಯು ಅಭಿವೃದ್ಧಿ ಸಾಧಿಸಿತ್ತು. ಆದರೆ ವ್ಯಕ್ತಿಯ, ಪಕ್ಷದ, ಮಹತ್ವಾಕಾಂಕ್ಷೆಯು ದೇಶಕ್ಕಿಂತ ಹೆಚ್ಚಾದಾಗ 1933ರಲ್ಲಿ ಜರ್ಮನಿಯಲ್ಲಿ ನಡೆದದ್ದು 1975ರಲ್ಲಿ ಭಾರತದಲ್ಲಿ ಸಂಭವಿಸಿತು. ಅದೀಗ ಭಾರತದಲ್ಲಿ ಮತ್ತೆ ತಲೆಯೆತ್ತಬಾರದಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News