ಭಾರತೀಯ ರೈಲನ್ನು ಮರಳಿ ಹಳಿಗೆ ತರಲು ರೈಲ್ವೆ ಸಚಿವರ ಆರು ಪರಿಕಲ್ಪನೆಗಳು

Update: 2016-02-25 18:11 GMT

ಹೊಸದಿಲ್ಲಿ.ಫೆ.25: ಮುಂಗಡಪತ್ರದಲ್ಲಿ ಪ್ರಯಾಣ ದರಗಳನ್ನು ಹೆಚ್ಚಿಸಲು ರೈಲ್ವೆ ಸಚಿವ ಸುರೇಶ ಪ್ರಭು ಉದ್ದೇಶಿಸಿದ್ದರಾದರೂ ರಾಜಕೀಯ ಅವರ ಕೈಗಳನ್ನು ಕಟ್ಟಿಹಾಕಿದೆ.ಅತ್ತ ಸರಕು ಸಾಗಣೆ ದರಗಳನ್ನಾದರೂ ಹೆಚ್ಚಿಸೋಣವೆಂದರೆ ಅದಕ್ಕೂ ಹೆಚ್ಚಿನ ಅವಕಾಶವಿಲ್ಲ. ಸರಕು ಸಾಗಣೆ ರೈಲ್ವೆಯ ಆದಾಯದಲ್ಲಿ ಶೇ.67ರಷ್ಟು ಪಾಲು ಹೊಂದಿದೆ. ಈಗಾಗಲೇ ಹೆಚ್ಚಿನ ದರಗಳನ್ನು ವಿಧಿಸಲಾಗುತ್ತಿದ್ದು,ಗ್ರಾಹಕರು ರಸ್ತೆ ಸಾರಿಗೆಯತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಪ್ರಭು ಅವರು ತನ್ನ ಬಜೆಟ್ ಪ್ರಸ್ತಾವನೆಗಳಲ್ಲಿ ಶುಲ್ಕ ಏರಿಕೆಗೆ ಕೈ ಹಾಕದೆ ನಷ್ಟದಲ್ಲಿರುವ ರೈಲ್ವೆಯ ಆದಾಯವನ್ನು ಹೆಚ್ಚಿಸಲು ಆರು ಹೊಸ ಪರಿಕಲ್ಪನೆಗಳನ್ನು ಮುಂದಿಟ್ಟಿದ್ದಾರೆ.

1. ಹಳಿಗಳ ಪಕ್ಕದ ಭೂಮಿಯನ್ನು ಲೀಸ್‌ಗೆ ನೀಡಿಕೆ: ಹಳಿಗಳ ಪಕ್ಕದಲ್ಲಿರುವ ತನಗೆ ಸೇರಿದ ಖಾಲಿ ಜಾಗವನ್ನು ತೋಟಗಾರಿಕೆ ಮತ್ತು ತೋಪುಗಳ ನಿರ್ಮಾಣಕ್ಕಾಗಿ ಲೀಸ್ ಆಧಾರದಲ್ಲಿ ನೀಡಲು ರೈಲ್ವೆ ಉದ್ದೇಶಿಸಿದೆ. ಇದು ದುರ್ಬಲ ವರ್ಗಗಳಿಗೆ ಉದ್ಯೋಗಗಳನ್ನು ಒದಗಿಸುವುದರೊಂದಿಗೆ ಆಹಾರ ಭದ್ರತೆಯನ್ನು ಹೆಚ್ಚಿಸಲಿದೆ ಮತ್ತು ಅತಿಕ್ರಮಣಗಳನ್ನು ತಡೆಯಲಿದೆ.
2.ಮೃದು ಆಸ್ತಿಗಳ ನಗದೀಕರಣ: ರೈಲ್ವೆಯು ತನ್ನ ಪ್ರಯಾಣಿಕರ ಆದ್ಯತೆಗಳು,ಟಿಕೆಟಿಂಗ್, ಸರಕುಗಳು, ವಿವಿಧ ಸೇವೆಗಳು ಮತ್ತು ಕಾರ್ಯಾಚರಣೆಗಾಗಿ ಸಂಚರಿಸುವ ರೈಲುಗಳ ಕುರಿತು ಸಂಗ್ರಹಿತ ದತ್ತಾಂಶಗಳನ್ನು ನಗದೀಕರಿಸಲಿದೆ. ತನ್ನ ಜಾಲತಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಂದ ಹಣಗಳಿಕೆಯ ಬಗ್ಗೆ ಐಆರ್‌ಸಿಟಿಸಿ ಕೂಡ ಅನ್ವೇಷಿಸಲಿದೆ.
3. ರೈಲ್ವೆ ನಿಲ್ದಾಣಗಳಲ್ಲಿ, ರೈಲುಗಳ ಮೇಲೆ ಮತ್ತು ಹಳಿಗಳ ಪಕ್ಕದ ಜಾಗಗಳಲ್ಲಿ ಹೆಚ್ಚೆಚ್ಚು ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಹೆಚ್ಚಿನ ಆದಾಯವನ್ನು ಕ್ರೋಡೀಕರಿಸಲಾಗುವುದು.
4. ತನ್ನ ಪಾರ್ಸೆಲ್ ಸಾಗಾಟ ವ್ಯವಸ್ಥೆಯನ್ನು ಪುನಃಶ್ಚೇತನಗೊಳಿಸಲಿರುವ ಇಲಾಖೆಯು ಇ-ಕಾಮರ್ಸ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಯತ್ನಿಸಲಿದೆ
5.ಉತ್ಪಾದಕತೆಯಲ್ಲಿ ಏರಿಕೆ: ರೈಲ್ವೆಯು ತನ್ನ ಘಟಕಗಳ ಉತ್ಪಾದಕತೆಯನ್ನು ಹೆಚ್ಚಿಸಲಿದೆ ಮತ್ತು 2020ರವೇಳೆಗೆ ವಾರ್ಷಿಕ 4,000 ಕೋ.ರೂ.ಆದಾಯ ಗಳಿಕೆಯ ನಿರೀಕ್ಷೆಯನ್ನು ಹೊಂದಿದೆ.
6.ನಿಲ್ದಾಣಗಳ ಪುನರ್‌ಅಭಿವೃದ್ಧಿ: ರೈಲ್ವೆ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಗೊಳಿಸಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಜಾಗಗಳನ್ನು ಬಳಸಿಕೊಳ್ಳಲಾಗುವುದು,ಅಲ್ಲದೇ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಹೆಚ್ಚಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News