ಹೊಸ ಆದಾಯ ಮೂಲಗಳು, ವೆಚ್ಚ ಕಡಿತದತ್ತ ಸಚಿವರ ಚಿತ್ತ
ಹೊಸದಿಲ್ಲಿ, ಫೆ. 25: ಮುಂದಿನ ಹಣಕಾಸು ವರ್ಷದಲ್ಲಿ ವೆಚ್ಚಗಳನ್ನು ಕಡಿಮೆ ಮಾಡಲು ಹಾಗೂ ನೂತನ ಆದಾಯ ಮೂಲಗಳನ್ನು ಸೃಷ್ಟಿಸಲು ರೈಲ್ವೆ ಇಲಾಖೆಯು ಯೋಜನೆ ರೂಪಿಸಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ಹೇಳಿದ್ದಾರೆ.
ವೇತನ ಬಿಲ್‌ನಲ್ಲಿ ಆಗುವ ಬೃಹತ್ ಹೆಚ್ಚಳವನ್ನು ಸರಿದೂಗಿಸಲು ಹಾಗೂ ಮಹತ್ವಾಕಾಂಕ್ಷೆಯ ಆಧುನೀಕರಣ ಯೋಜನೆ ಹಳಿತಪ್ಪದಂತೆ ನೋಡಿಕೊಳ್ಳಲು ಇದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ಜಗತ್ತಿನ ನಾಲ್ಕನೆ ಅತಿದೊಡ್ಡ ರೈಲ್ವೆ ಜಾಲವನ್ನು ಆಧುನೀಕರಿಸಲು ಐದು ವರ್ಷಗಳಲ್ಲಿ 9.4 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ನರೇಂದ್ರ ಮೋದಿ ಸರಕಾರ ಕಳೆದ ವರ್ಷ ಘೋಷಿಸಿತ್ತು. ಆದರೆ, ಈಗ ಒಂದು ವರ್ಷದ ಬಳಿಕ ಪ್ರಯಾಣ ಮತ್ತು ಸರಕು ಸಾಗಣೆ ಆದಾಯ ಬೆಳವಣಿಗೆ ಕುಂಠಿತಗೊಂಡಿದ್ದು, ರೈಲ್ವೆಯ ಆರ್ಥಿಕತೆ ಮೇಲೆ ಒತ್ತಡ ಬಿದ್ದಿದೆ.
‘‘ಇದು ಪರೀಕ್ಷೆಯ ಸಮಯ. ನಾವು ಎರಡು ಪ್ರವಾಹಗಳ ವಿರುದ್ಧ ಈಜು ತ್ತಿದ್ದೇವೆ ಹಾಗೂ ಇದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಮೊದಲನೆ ಯದು, ಅಂತಾರಾಷ್ಟ್ರೀಯ ಆರ್ಥಿಕತೆಯ ಕುಸಿತದಿಂದಾಗಿ ಆರ್ಥಿಕತೆಯ ಮಹತ್ವದ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿರುವ ಕುಂಠಿತ ಬೆಳವಣಿಗೆ ಮತ್ತು ಎರಡನೆಯದು, ಏಳನೆ ವೇತನ ಆಯೋಗದ ಪರಿಣಾಮ’’ ಎಂದು ಪ್ರಭು ಲೋಕಸಭೆಯಲ್ಲಿ ಹೇಳಿದರು.
ಪರಿಸ್ಥಿತಿಯನ್ನು ಸರಿದೂಗಿಸಲು ರೈಲ್ವೆಯು ವೆಚ್ಚಗಳನ್ನು ಕಡಿತಗೊಳಿಸ ಬೇಕಾಗಿದೆ, ಒಟ್ಟು ಆದಾಯದ ಮೂರನೆ ಎರಡು ಭಾಗವನ್ನು ತಂದುಕೊಡುವ ಸರಕು ಸಾಗಣೆ ವ್ಯವಹಾರವನ್ನು ವಿಸ್ತರಿಸಬೇಕಾಗಿದೆ ಮತ್ತು ರೈಲು ನಿಲ್ದಾಣಗಳನ್ನು ನವೀಕರಣಗೊಳಿಸುವ ಮೂಲಕ ಪ್ರಯಾಣ ದರಯೇತರ ಆದಾಯದ ನೂತನ ಮೂಲಗಳನ್ನು ಅನ್ವೇಷಿಸಬೇಕಾಗಿದೆ ಎಂದರು. ‘‘ನಾವು ಸಾಗಿಸುವ ಸರಕಿನ ವ್ಯಾಪ್ತಿಯನ್ನು ಹಿಗ್ಗಿಸುವುದಕ್ಕಾಗಿ ಹಾಲಿ ನಿಯಮಗಳನ್ನು ಮೀರಿ ನಿಲ್ಲಬೇಕಾಗಿದೆ’’ ಎಂದು ಲೋಕಸಭೆಯಲ್ಲಿ ರೈಲ್ವೆ ಸಚಿವರು ಹೇಳಿದರು.