ಸ್ಮತಿ ಇರಾನಿ ಸಂಸತ್‌ನಲ್ಲಿ ಆಡಿದ ಮಾತುಗಳ ಸತ್ಯಾಂಶ ಪರಿಶೀಲನೆ

Update: 2016-02-26 17:45 GMT

ಪ್ರತಿಪಕ್ಷಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಬುಧವಾರದಂದು ಲೋಕಸಭೆಯಲ್ಲಿ ಪ್ರಬಲವಾದ ಹೇಳಿಕೆಯೊಂದನ್ನು ನೀಡುತ್ತಾ ಕನ್ಹಯ್ಯಾ ಕುಮಾರ್ ಮತ್ತು ಇತರ ಕೆಲವು ವಿದ್ಯಾರ್ಥಿಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಜೆಎನ್‌ಯುನ ಅಧಿಕಾರಿಗಳೇ ಖುದ್ದು ಕಂಡಿದ್ದಾರೆ ಎಂದು ಹೇಳಿದ್ದರು. ಸ್ಮತಿ ಇರಾನಿ ಲೋಕಸಭೆಯಲ್ಲಿ ಹೇಳಿದ ಕೆಲವೊಂದು ವಾಕ್ಯಗಳು, ಅದರಲ್ಲಿ ಕೆಲವಂತೂ ಉಸಿರುಗಟ್ಟುವ ರೀತಿಯಲ್ಲಿ ಹೇಳಿದ್ದಾರೆ. ‘‘ನನ್ನನ್ನು ಗಲ್ಲಿಗೇರಿಸಲು ನೀವು ಬಯಸಿದ್ದೀರಾ.... ಅಮೇಠಿಯಲ್ಲಿ ಚುನಾವಣೆಗೆ ನಿಂತಿದ್ದಕ್ಕೆ ನನಗೆ ಶಿಕ್ಷೆ ನೀಡುತ್ತಿದ್ದೀರಾ?’’ ಇರಾನಿ ಅಮೇಠಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದರು. ‘‘ನಾನು ನಿಮ್ಮ ದೇಶಪ್ರೇಮಕ್ಕೆ ಪ್ರಮಾಣಪತ್ರ ನೀಡುತ್ತಿಲ್ಲ, ಆದರೆ ನನ್ನ ದೇಶಪ್ರೇಮವನ್ನು ಕೀಳಾಗಿ ನೋಡಬೇಡಿ. ನನಗೆ ಭಾರತದ ಬಗ್ಗೆ ನನ್ನದೇ ಆದ ಕಲ್ಪನೆಯಿದೆ ಅದನ್ನು ತುಚ್ಛಗೊಳಿಸಬೇಡಿ. ಜನ್ಮ ನೀಡುವ ತಾಯಿ ಎಂದೂ ಪ್ರಾಣ ತೆಗೆಯಲು ಸಾಧ್ಯವಿಲ್ಲ. ಮಕ್ಕಳು ತಪ್ಪು ಮಾಡಿದ್ದಾರೆ ಎಂದು ಕೆಲವರು ಹೇಳುತ್ತಾರೆ ಆದರೆ ನಾವು ಅವರನ್ನು ಕ್ಷಮಿಸಬೇಕು. ಜೆಎನ್‌ಯುನಲ್ಲಿ ಕೆಲವು ಮಕ್ಕಳನ್ನು ದೇಶದ ವಿರುದ್ಧ ಎತ್ತಿಕಟ್ಟಲಾಗುತ್ತದೆ. ಜೆಎನ್‌ಯುನಲ್ಲಿ ಸಿಕ್ಕ ಒಂದು ಭಿತ್ತಿಪತ್ರದಲ್ಲಿ ಮಹಿಷಾಸುರನನ್ನು ಹೊಗಳಲಾಗಿದೆ ಮತ್ತು ದುರ್ಗೆ ಓರ್ವ ವೇಶ್ಯೆ ಮತ್ತು ಆಕೆಗೆ ಮಹಿಷಾಸುರನನ್ನು ಕೊಲ್ಲುವ ಸಲುವಾಗಿ ಹಣ ನೀಡಲಾಗಿತ್ತು ಎಂದು ಬರೆಯಲಾಗಿತ್ತು. ಇಂತಹ ಉಲ್ಲೇಖಗಳನ್ನು ಯಾರಾದರೂ ಕೊಲ್ಕತ್ತಾದ ರಸ್ತೆಗಳಿಗೆ ಕೊಂಡೊಯ್ಯಲು ಬಯಸುತ್ತಾರೆಯೇ? ಯಾರು, ಈ ಬಗ್ಗೆ ಕೊಲ್ಕತ್ತಾದ ರಸ್ತೆಗಳಲ್ಲಿ ಮಾತನಾಡುವವರು ಯಾರು ಎಂದು ನಾನು ತಿಳಿಯಲು ಬಯಸುತ್ತೇನೆ, ಅದು ಮಾರ್ಕ್ಸ್‌ವಾದಿಗಳೇ? ಯುಪಿಎ ಸರಕಾರದ ಅವಧಿಯಲ್ಲಿ ನೇಮಕಗೊಂಡಿರುವ ಯಾರಾದರೂ ಒಬ್ಬ ಉಪಕುಲಪತಿ ನಾನು ಶಿಕ್ಷಣದಲ್ಲಿ ಕೇಸರೀಕರಣವನ್ನು ಬೆರೆಸುತ್ತಿದ್ದೇನೆ ಎಂದು ಹೇಳಿದರೆ ನಾನು ರಾಜಕೀಯವನ್ನೇ ತೊರೆಯುತ್ತೇನೆ.’’
ಇರಾನಿ ಲೋಕಸಭೆಯಲ್ಲಿ ಹೇಳಿದ ಕೆಲವು ಅಂಶಗಳು ಮತ್ತು ಅವುಗಳ ನಿಖರತೆ ಪರೀಕ್ಷೆಯಲ್ಲಿ ಎಲ್ಲಿ ನಿಲ್ಲುತ್ತದೆ;

ಎರಡು ಪತ್ರಗಳು

ಕಾಂಗ್ರೆಸ್ ಸಂಸದ ಹನುಮಂತ ರಾವ್ ಹೈದರಾಬಾದ್ ವಿಶ್ವವಿದ್ಯಾನಿಲಯದ ಬಗ್ಗೆ ಬರೆದ ಪತ್ರವನ್ನು ಸಂಸ್ಥೆಗೆ ನೀಡುವ ಅವರ ಸಚಿವಾಲಯದ ನಿರ್ಧಾರವನ್ನು ಇರಾನಿ ತಿಳಿಸಿದರು. ಆಕೆಯ ತಂಡ ವಿಶ್ವವಿದ್ಯಾ ನಿಲಯಕ್ಕೆ ಬರೆದಿರುವ ಪತ್ರಗಳನ್ನು ಸರಿ ಎಂದು ಸಾಬೀತು ಮಾಡುವ ಮತ್ತು ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ ಬರೆದ ಪತ್ರವನ್ನು ನೆನಪಿಸುವ ಸಲುವಾಗಿ ಸಚಿವೆ ಹೀಗೆ ಮಾಡಿದ್ದರು. ಆದರೆ ವಿಪಕ್ಷ ಸಂಸದರ ಪತ್ರ ಮತ್ತು ಸಂಪನ್ಮೂಲ ಸಚಿವಾಲಯದ ವಿಪರೀತ ಆಸಕ್ತಿ ಜನವರಿಯಲ್ಲಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣವಾಯಿತು ಎಂದು ಬೆಟ್ಟು ಮಾಡಿತು. ನಮ್ಮ ಸಿದ್ಧಾಂತಗಳು ತೀರಾ ಭಿನ್ನವಾಗಿದ್ದರೂ ಕೂಡಾ ನಾನು ಎಲ್ಲ ಸಂಸದರಿಂದ ಪತ್ರಗಳನ್ನು ಪಡೆದುಕೊಂಡಿದ್ದೇನೆ ಎಂದು ಇರಾನಿ ಹೇಳಿಕೊಂಡಿದ್ದಾರೆ. ಸತ್ಯಾಂಶ: ಇರಾನಿಯ ಸಚಿವಾಲಯ-ಹನುಮಂತ ರಾವ್ ಮತ್ತು ಬಂಡಾರು ದತ್ತಾತ್ರೇಯ- ಇಬ್ಬರ ಪತ್ರವನ್ನೂ ಹೈದರಾಬಾದ್ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿದ್ದರು. ಆದರೆ ಈ ಎರಡು ಪತ್ರಗಳನ್ನು ಹೋಲಿಸುವುದೆಂದರೆ ಸೇಬು ಮತ್ತು ಮೂಸಂಬಿಯನ್ನು ಹೋಲಿಕೆ ಮಾಡಿದಂತೆ. ರಾವ್ ಅವರ ಪತ್ರ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹೆಚ್ಚುತ್ತಿರುವ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಯ ಕುರಿತು ಮಾನವ ಸಂಪನ್ಮೂಲ ಸಚಿವಾಲಯವನ್ನು ಎಚ್ಚರಗೊಳಿಸುವ ಉದ್ದೇಶ ಹೊಂದಿತ್ತು. ಆದರೆ ದತ್ತಾತ್ರೇಯ ಬರೆದ ಪತ್ರದಲ್ಲಿ ರೋಹಿತ್ ವೇಮುಲಾ ಸದಸ್ಯನಾಗಿದ್ದ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯನ್ನು ರಾಷ್ಟ್ರ ವಿರೋಧಿ ಎಂದು ಉಲ್ಲೇಖಿಸಲಾಗಿತ್ತು. ರೋಹಿತ್‌ನ ಆತ್ಮಹತ್ಯೆ ರಾವ್ ಅವರ ಎಚ್ಚರಿಕೆಗೆ ಸ್ಪಂದಿಸುವಲ್ಲಿ ವಿಶ್ವವಿದ್ಯಾನಿಲಯ ವಿಫಲವಾಗಿದ್ದನ್ನು ಸ್ಪಷ್ಟಪಡಿಸಿದರೆ, ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ತೆಗೆದುಕೊಂಡ ಕ್ರಮಗಳು ಅದು ದತ್ತಾತ್ರೇಯ ಅವರ ಪತ್ರ ಮತ್ತು ಸಂಪನ್ಮೂಲ ಸಚಿವಾಲಯದ ಆದೇಶವನ್ನು ಪಾಲಿಸಿರುವುದನ್ನು ಸ್ಪಷ್ಟಗೊಳಿಸುತ್ತದೆ.

ಜೆಎನ್‌ಯು ವರದಿ

ಇರಾನಿಯವರು ಫೆಬ್ರವರಿ 11, 2016ರ ವರದಿಯನ್ನು ಉಲ್ಲೇಖಿಸಿದ್ದರು, ಇದರಲ್ಲಿ ಜೆಎನ್‌ಯುನ ಭದ್ರತಾ ಸಿಬ್ಬಂದಿ ಎರಡು ದಿನಗಳ ಮೊದಲು ಉಮರ್ ಖಾಲಿದ್, ಕನ್ಹಯ್ಯ ಕುಮಾರ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ನಾಲ್ಕು ಇತರ ವಿದ್ಯಾರ್ಥಿಗಳು ರ್ಯಾಲಿವೊಂದರ ಭಾಗವಾಗಿದ್ದು ಕಾಶ್ಮೀರದ ಸ್ವಾತಂತ್ರ್ಯ ಮತ್ತು ಭಾರತದ ಸರ್ವನಾಶಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರು ಎಂದು ಹೇಳಿಕೊಂಡಿದ್ದರು. ಜೆಎನ್‌ಯುನ ಭದ್ರತಾ ಸಿಬ್ಬಂದಿಗೆ ಸರಕಾರದ ಜೊತೆ ಯಾವುದೇ ಸಂಪರ್ಕವಿಲ್ಲ ಎಂದು ಇರಾನಿ ಹೇಳಿದ್ದರು. ಸತ್ಯಾಂಶ: ಜೆಎನ್‌ಯುಗೆ ಖಾಸಗಿ ಭದ್ರತಾ ಸಿಬ್ಬಂದಿಯಿದ್ದಾರೆ ಆದರೆ ಅವರನ್ನು ನೇಮಿಸುವವರು, ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗೃಹಸಚಿವ ಮತ್ತು ಮಾನವ ಸಂಪನ್ಮೂಲ ಸಚಿವೆ ತಿಳಿಸಿದ ಕೂಡಲೇ ಪೊಲೀಸರಿಗೆ ಮತ್ತು ಕೇಂದ್ರ ಸರಕಾರಕ್ಕೆ ವಿಶ್ವವಿದ್ಯಾನಿಲಯದ ಸ್ವಾಯತ್ತತೆಯನ್ನು ಬಿಟ್ಟುಕೊಟ್ಟ ಆರೋಪವನ್ನು ಎದುರಿಸುತ್ತಿರುವ ಅದೇ ವಿಶ್ವವಿದ್ಯಾನಿಲಯದ ಆಡಳಿತವರ್ಗ.

ಜೆಎನ್‌ಯು ತಂಡ
ಇರಾನಿ: ಶಿಕ್ಷಕರು ಮತ್ತು ವಿಶ್ವವಿದ್ಯಾನಿಲಯದ ಮುಖ್ಯಾಧಿಕಾರಿಗಳನ್ನು ಹೊಂದಿರುವ ಜೆಎನ್‌ಯುನ ಆಂತರಿಕ ಸಮಿತಿ ಮೇಲ್ನೋಟಕ್ಕೆ ಈ ವಿದ್ಯಾರ್ಥಿಗಳು ತಪ್ಪಿತಸ್ಥರು ಎಂದು ನಿರ್ಧರಿಸಿ ಅವರನ್ನು ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಿತ್ತು -ಈ ಸಮಿತಿಯ ಯಾವ ಸದಸ್ಯರನ್ನೂ ನಾವು ನೇಮಿಸುವುದಿಲ್ಲ.

ಸತ್ಯಾಂಶ:

ಜೆಎನ್ ಯುನ ಉಪಕುಲಪತಿಯಿಂದ ನೇಮಿಸಲ್ಪಡುವ ವಿಶ್ವವಿದ್ಯಾನಿಲಯದ ಆಂತರಿಕ ಸಮಿತಿ, ವಿದ್ಯಾರ್ಥಿಗಳ ಹೇಳಿಕೆಗೂ ಅನುವು ಮಾಡಿಕೊಡದೆ ಅವರನ್ನು ಒಂದೇ ದಿನದ ಒಳಗಾಗಿ ಅಮಾನತುಗೊಳಿಸಿದ ಕಾರಣಕ್ಕೆ ಟೀಕೆಗೊಳಗಾಗಿದೆ. ರೋಹಿತ್ ಉಚ್ಚಾಟನೆ

ಹೈದರಾಬಾದ್ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಸಮಿತಿ ವೇಮುಲಾ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳನ್ನು ಉಚ್ಚಾಟಿಸಲು ನಿರ್ಧರಿಸಿತು ಎಂದು ಇರಾನಿ ಹೇಳಿದ್ದರು. ಸತ್ಯಾಂಶ: ಕಾರ್ಯಕಾರಿ ಸಮಿತಿ ವಿದ್ಯಾರ್ಥಿಗಳನ್ನು ಕೇವಲ ಅಮಾನತುಗೊಳಿಸಿತ್ತು, ಅದೂ ಕೂಡಾ ಅವರ ವಸತಿ ನಿಲಯದಿಂದ ಮಾತ್ರ. ಹೈದರಾಬಾದ್ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆರೆಸ್ಸೆಸ್‌ನ ಅಂಗ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಅಸಾದ ವಿದ್ಯಾರ್ಥಿಗಳ ಮಧ್ಯೆ ನಡೆದ ದೈಹಿಕ ಸಂಘರ್ಷದ ಕುರಿತು ಕೂಡಾ ಇರಾನಿ ವೌನವಹಿಸಿದ್ದರು. ಎಬಿವಿಪಿಯ ಓರ್ವ ನಾಯಕ ತನ್ನ ಮೇಲೆ ಅಸಾದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ಆದರೆ ಆಸ್ಪತ್ರೆಯ ದಾಖಲೆಗಳು ಆತ ಮೊದಲೇ ಇದ್ದ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ತೆರಳಿದ್ದನೇ ಹೊರತು ಹಲ್ಲೆಯಿಂದ ಉಂಟಾದ ಗಾಯದ ಚಿಕಿತ್ಸೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿತ್ತು.

ಮಹಿಷಾಸುರ

ಇರಾನಿಯವರು ಜೆಎನ್‌ಯುನಲ್ಲಿ ಮಹಿಷಾಸುರ-ದುರ್ಗಾ ಮಾತೆಯಿಂದ ವಧಿಸಲ್ಪಟ್ಟ ರಾಕ್ಷಸನನ್ನು ಪ್ರಶಂಸಿಸುವ ಬಗ್ಗೆ ಉಲ್ಲೇಖಿಸುತ್ತಾ ಇಂತಹ ವಿಷಯಗಳನ್ನು ಕೊಲ್ಕತ್ತಾದಲ್ಲಿ ಸಹಿಸಲು ಸಾಧ್ಯವೇ ಎಂದು ಸೋಜಿಗ ವ್ಯಕ್ತಪಡಿಸಿದ್ದರು. ಸತ್ಯಾಂಶ: ಮಹಿಷಾಸುರನನ್ನು ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಪೂಜಿಸಲಾ ಗುತ್ತದೆ ಮತ್ತು ಆತನ ಕಪ್ಪು ಬಣ್ಣ ಮತ್ತು ದುರ್ಗೆಯ ಬಿಳಿ ಬಣ್ಣ ಆರ್ಯ-ದ್ರಾವಿಡ ವಿಭಜನೆಯನ್ನು ಸೂಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕರ್ನಾಟಕದ ಎರಡನೆ ಅತೀದೊಡ್ಡ ನಗರ ಮೈಸೂರಿನ ಹೆಸರು ಮಹಿಷಾಸುರನ ಆಂಗ್ಲೀಕೃತ ರೂಪವಾಗಿದೆ, ಅದರರ್ಥ ಮಹಿಷಾಸುರ ನೆಲೆಬೀಡು ಎಂದು.

ಪಠ್ಯಪುಸ್ತಕಗಳು
ನರೇಂದ್ರ ಮೋದಿಯವರ ಮಗ್ಗಲಮುಳ್ಳಿನಂತಿರುವ ತೀಸ್ತಾ ಸೆಟಲ್ವಾಡ್ ಬರೆದಿರುವ ನಾಲ್ಕನೆ ತರಗತಿಯ ಶಿಕ್ಷಕರ ಮಾರ್ಗದರ್ಶಕವನ್ನು ಉಲ್ಲೇಖಿಸಿದ ಇರಾನಿ, ನಾವು ಪ್ರಾಚೀನ ಭಾರತವು ಹಿಂದೂ ಮತ್ತು ಮಧ್ಯಯುಗದ ಭಾರತವು ಮುಸ್ಲಿಮ್ ಎಂಬ ವಾದವನ್ನು ನಾವು ಜೀವಂತವಾಗಿರಿಸಬಾರದು. ಎಂದು ಹೇಳಿಕೊಂಡಿದ್ದರು. ತಪ್ಪುಗಳನ್ನು ಹೊಂದಿರುವ ಶಾಲೆಯ ಪಠ್ಯಗಳು ರಾಷ್ಟ್ರ ವಿರೋಧಿ ಭಾವನೆಯನ್ನು ಕಾಲೇಜು ವಿದ್ಯಾರ್ಥಿಗಳಲ್ಲಿ ಉಂಟು ಮಾಡುತ್ತದೆ ಎಂಬ ತಮ್ಮ ವಾದಕ್ಕೆ ಪುಷ್ಠಿ ನೀಡು ವಂತೆ ಅವರು ಇತರ ಎರಡು ಪಠ್ಯಪುಸ್ತಕಗಳನ್ನು ಉಲ್ಲೇಖಿ ಸಿದರು. ನಾವು ಶಿವಾಜಿ ಮತ್ತು ಔರಂಗಝೇಬನ ಬಗ್ಗೆ ಪಾಠ ಮಾಡುವಾಗ ಯಾವ ಶಿವಾಜಿಯನ್ನು ನಾವು ತರಗತಿ ಯ ಒಳಗೆ ಕೊಂಡೊಯ್ಯುತ್ತೇವೆ ಎಂಬುದನ್ನು ನಾವು ನಿರ್ಧರಿಸುವ ಅಗತ್ಯವಿದೆ ಎಂದು ಪುಸ್ತಕ ಹೇಳುತ್ತದೆ. ಇನ್ನೊಂದು ಪುಸ್ತಕದಲ್ಲಿ ಮಕ್ಕಳಿಗೆ 1984ರ ಸಿಖ್ ವಿರೋಧಿ ದಂಗೆ ಮತ್ತು ಕನ್ಯಾಕುಮಾರಿಯಲ್ಲಿ ನಡೆದ ಹಿಂದೂ-ಕ್ರೈಸ್ತ ಗಲಭೆಯ ಬಗ್ಗೆ ಪಾಠ ಮಾಡುವ ಅಗತ್ಯವಿದೆ ಎಂದು ಹೇಳುತ್ತದೆ.

ಸತ್ಯಾಂಶ: ಇರಾನಿಯವರು ಉಲ್ಲೇಖಿಸಿದ ಪಠ್ಯಗಳಿಗೆ ಅವರ ಆಕ್ಷೇಪ ಅರ್ಥಮಾಡಿಕೊಳ್ಳುವುದು ಕಷ್ಟ ಯಾಕೆಂದರೆ ಇವುಗಳು ಭಾರತದ ಸಂಕೀರ್ಣ ಇತಿಹಾಸವನ್ನು ಅದೇ ಹಳೆಯ ಕಪ್ಪು ಬಿಳುಪು ದೃಷ್ಟಿಕೋನದಲ್ಲಿ ವಿವರಿಸುವುದನ್ನು ಬಿಟ್ಟು ಅದರ ಸೂಕ್ಷ್ಮ ವ್ಯತ್ಯಾಸಗಳನ್ನು ವಿವರಿಸುತ್ತದೆ. ಮತ್ತು 1984ರ ದಂಗೆ, ಇರಾನಿಯ ಸೈದ್ಧಾಂತಿಕ ವಿರೋಧಿಯಾಗಿರುವ ಕಾಂಗ್ರೆಸ್ ಮೇಲಿನ ರಾಜಕೀಯ ಕರಿಚುಕ್ಕೆಯಾಗಿದೆ. ಸೆತಲ್ವಾಡ್ ಬುಧವಾರದಂದು ಈ ಹೇಳಿಕೆಯನ್ನು ನೀಡಿದರು: ಡಾನ್ ಬೋಸ್ಕೊ ಶಾಲೆಯ ಪುಸ್ತಕ ಮತ್ತು ಶಿಕ್ಷಕರ ತರಬೇತಿ ಪುಸ್ತಕದಲ್ಲಿ ಶಿವಾಜಿ ಬಗ್ಗೆ ಪ್ರಸ್ತಾಪಿಸಿರುವ ಉಲ್ಲೇಖ ಹೆಸರಾಂತ ಇತಿಹಾಸತಜ್ಞರಾದ ಜಾದುನಾಥ್ ಸರ್ಕಾರ್ ಮತ್ತು ಗೋವಿಂದ್ ಸಾಕಾರಾಮ್ ಸರ್ದೇಸಾಯಿ ಯವರ ಸಂಶೋಧನೆಯ ಆಧಾರವನ್ನು ಹೊಂದಿದೆ. ಅದು ಶಿವಾಜಿಯವರ ಪಟ್ಟಾಭಿಷೇಕಕ್ಕೆ ಜಾತಿ ಪ್ರಮುಖ ತಡೆ ಯಾಗಿತ್ತು ಎಂಬ ವಿಷಯದ ಬಗ್ಗೆ ವಿವರಿಸುತ್ತದೆ. ಅಷ್ಟಕ್ಕೂ, ಶಿವಸೇನೆ ನನ್ನ ವಿರುದ್ಧ ಅಭಿಯಾನವನ್ನು ಆಯೋಜಿಸಿತ್ತು ಮತ್ತು ರಾಜ್ಯ ಮಾನವ ಹಕ್ಕು ಆಯೋಗ, ಇದು ಯಾವುದೇ ದ್ವೇಷ ಹರಡುವುದಿಲ್ಲ ಮತ್ತು ನಿಜವಾಗಿ ಇದು ಇತಿಹಾಸದ ತರ್ಕಬದ್ಧ ದೃಷ್ಠಿಕೋನವಾಗಿದ್ದು ಅದನ್ನು ಹರಡುತ್ತಿದೆ ಎಂದು ಹೇಳುತ್ತಾ ನನ್ನ ಪರವಾಗಿ ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News