ಆದಿವಾಸಿಗಳ ಅರಣ್ಯ ಹಕ್ಕುಗಳ ಮೇಲೆ ಮೋದಿ ಸರಕಾರದ ಬುಲ್ಡೋಜರ್‌

Update: 2016-03-01 17:44 GMT

ಮೋದಿ ಸರಕಾರದ ಕಾರುಬಾರಿನಲ್ಲಿ ಬಡವರು, ದಲಿತರು, ರೈತರು, ಆದಿವಾಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಂತಹ ನಿರ್ಲಕ್ಷಿತ ಜನ ಸಮುದಾಯಗಳ ಗೋಳನ್ನು ಕೇಳುವವರೇ ಇಲ್ಲವೆಂದಾಗಿದೆ. ಉದಾಹರಣೆಗೆ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಛತ್ತೀಸ್‌ಗಡ ರಾಜ್ಯದ ಬಿಜೆಪಿ ಸರಕಾರ ಆದಿವಾಸಿಗಳನ್ನು ಅವರ ಸಾಂಪ್ರದಾಯಿಕ ಭೂಮಿಯಿಂದ ಒಕ್ಕಲೆಬ್ಬಿಸಿ ಅಲ್ಲಿ ಕಾರ್ಪೊರೇಟ್ ಗಣಿಗಾರಿಕೆಗೆ ಮುಕ್ತ ಅವಕಾಶ ಒದಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಮುಖ್ಯವಾಹಿನಿಯ ಕಾರ್ಪೊರೇಟ್ ಮಾಧ್ಯಮಗಳ ನಿರ್ಲಕ್ಷ್ಯದಿಂದಾಗಿ ಇದು ರಾಷ್ಟ್ರಮಟ್ಟದ ಸುದ್ದಿಯಾಗಲಿಲ್ಲ. ಇಂತಹ ನಿರ್ಲಕ್ಷ್ಯಕ್ಕೆ ಕಾರಣವೇನೆಂದು ವಿವರಿಸುವ ಅಗತ್ಯವಿಲ್ಲ. ಏಕೆಂದರೆ 2014ರ ಚುನಾವಣೆಗಳಲ್ಲಿ ಬಿಜೆಪಿ ಸಾಧಿಸಿದ ಅಭೂತಪೂರ್ವ ಗೆಲುವಿಗೆ ಕಾರ್ಪೊರೇಟುಗಳ ಅಪರಿಮಿತ ಬೆಂಬಲವೇ ಮುಖ್ಯ ಕಾರಣವೆನ್ನುವುದು ತೆರೆದ ರಹಸ್ಯ. ಈ ಋಣವನ್ನು ತೀರಿಸುವುದಕ್ಕೋಸ್ಕರವೇ ಮೊದಲಿಗೆ ಹಳೆಯ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು ಕಾರ್ಪೊರೇಟ್‌ಗಳಿಗೆ ರೈತರ ಭೂಮಿಯನ್ನು ಕಬಳಿಸಲು ಅನುವು ಮಾಡಿಕೊಡುವ ದೊಡ್ಡ ಪ್ರಯತ್ನವೊಂದು ನಡೆಯಿತು. ಆದರೆ ಇದಕ್ಕೆ ದೇಶದ ವಿವಿಧ ಭಾಗಗಳಿಂದ, ವಿವಿಧ ಜನವರ್ಗಗಳಿಂದ ಭಾರೀ ಪ್ರತಿರೋಧ ಬರುತ್ತದೆಂದು ಮೋದಿ ಸರಕಾರ ಕನಸಿನಲ್ಲೂ ಎಣಿಸಿರಲಿಲ್ಲ. ಈಗ ಏನಾಗಿದೆಯೆಂದರೆ ಭೂಮಿ ನುಂಗಲು ಹಾತೊರೆಯುತ್ತಿದ್ದ ಕಾರ್ಪೊರೇಟ್ ದಿಗ್ಗಜಗಳು ಸಹನೆ ಕಳೆದುಕೊಂಡಿವೆ. ಪರಿಣಾಮವಾಗಿ ಮೋದಿ ಸರಕಾರದ ಕಣ್ಣು ಇದೀಗ ವಿಫುಲ ಭೂಗರ್ಭ ಸಂಪತ್ತನ್ನು ಹೊಂದಿರುವ ಛತ್ತೀಸ್‌ಗಡ ರಾಜ್ಯದ ಆದಿವಾಸಿ ಜಮೀನುಗಳ ಮೇಲೆ ಬಿದ್ದಿದೆ. ಇತ್ತೀಚೆಗಿನ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಮೋದಿ, ತನ್ನ ಸರಕಾರಕ್ಕೆ ರೈತರ ಬಗ್ಗೆ ಅಪಾರ ಕಾಳಜಿಯಿದೆ ಎಂದು ಬೂಸಿ ಬಿಡುತ್ತಿದ್ದಂತೆ ಅತ್ತ ಛತ್ತೀಸ್‌ಗಡದ ಬಿಜೆಪಿ ಸರಕಾರ ಸರ್ಗುಜಾ ಜಿಲ್ಲೆಯ ಘಾಟ್‌ಬಾರಾ ಗ್ರಾಮದಲ್ಲಿ ವಾಸವಾಗಿರುವ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ಹೊರಟಿದೆ! ಜೊತೆಗೆ ಆದಿವಾಸಿಗಳಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ದನಿಯೆತ್ತಿ ಹೋರಾಟ ಮಾಡುತ್ತಿರುವ ಪತ್ರಕರ್ತರು, ಲಾಯರುಗಳು ಮತ್ತು ಮಾನವಹಕ್ಕು ಕಾರ್ಯಕರ್ತರಿಗೆ ಪರೋಕ್ಷ ಬೆದರಿಕೆ ಒಡ್ಡುವ ಮೂಲಕ ಅವರು ರಾಜ್ಯ ಬಿಟ್ಟು ಹೋಗುವಂತೆ ಮಾಡಲಾಗುತ್ತಿದೆ.

ಇವತ್ತು ದೇಶದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮೋದಿಯ ರಂಗುರಂಗಿನ ಚುನಾವಣಾಪೂರ್ವದ ಭರವಸೆಗಳಲ್ಲಿ ಒಂದಾದರೂ ಈಡೇರಿಲ್ಲ; ಆರ್ಥಿಕ ಸ್ಥಿತಿ ಬಿಗಡಾಯಿಸಿದೆ; ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇನ್ನೊಂದೆಡೆ ಕಾರ್ಪೊರೇಟ್‌ಗಳಿಗೆ ದೇಶದ ಸಂಪತ್ತನ್ನು ಲೂಟಿ ಹೊಡೆಯಲು ಮುಕ್ತ ಅವಕಾಶ. ಇಂತಹ ಸನ್ನಿವೇಶದಲ್ಲಿ ರಾಮ ಮಂದಿರ, ಗೋವಧೆ ನಿಷೇಧ, ದೇಶಪ್ರೇಮ- ದೇಶದ್ರೋಹದಂತಹ ಭಾವನಾತ್ಮಕ ವಿಚಾರಗಳು ಭಟ್ಟಂಗಿ ಮಾಧ್ಯಮಗಳ ಮೂಲಕ ಬಿಸಿಬಿಸಿ ಚರ್ಚೆಯ ವಸ್ತುವಾಗಿರುವುದು ಕಾಕತಾಳೀಯವೇನಲ್ಲ. ಅದರ ನೈಜ ಉದ್ದೇಶ ಜನರ ಗಮನವನ್ನು ಬೇರೆಡೆ ಸೆಳೆಯುವುದೇ ಆಗಿದೆ. ವಾಸ್ತವದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಲಯಗಳ ಕೇಸರೀಕರಣವನ್ನೂ ಒಳಗೊಂಡಂತೆ ಇವೆಲ್ಲವೂ ಫ್ಯಾಶಿಸಂನ ಒಳಪ್ರವೇಶದ ಲಕ್ಷಣಗಳು. ಅದು ಸಮಾಜದ ಮೇಲೆ ತನ್ನ ಹಿಡಿತವನ್ನು ಬಲಪಡಿಸುತ್ತಿರುವುದರ ಚಿಹ್ನೆಗಳು. ದೇಶ ಸರ್ವಾಧಿಕಾರದತ್ತ ಸಾಗುತ್ತಿರುವುದರ ಸೂಚನೆಗಳು.


ಘಾಟ್‌ಬಾರಾ ಗ್ರಾಮ ಹಸದೇವ ಅರಂದ್ ಅರಣ್ಯದಲ್ಲಿದೆ. 2011ರ ಅರಣ್ಯ ಸಮೀಕ್ಷೆ ಪ್ರಕಾರ ಮಧ್ಯ ಭಾರತದ ಅನಧಿಕೃತ ವಲಯದಲ್ಲಿರುವ ಅತಿ ದೊಡ್ಡ ಕಾಡು ಇದಾಗಿದೆ. ಬುಡಕಟ್ಟುಗಳ ಬಗ್ಗೆ ಇನಿತೂ ಕಾಳಜಿಯಿಲ್ಲದ ಸರಕಾರ ಇಂದು ಅವರನ್ನು ಕಿತ್ತೊಗೆಯುವುದರೊಂದಿಗೆ ಇಂತಹ ಅಪರೂಪದ ಕಾಡನ್ನು ನಾಶ ಮಾಡಲು ಹೊರಟಿದೆ. ಕಾರಣ? ಆ ನೆಲದಡಿ ಇರುವ ಪ್ರಾಸಾ ಈಸ್ಟ್ ಮತ್ತು ಕೆತೆ ಬೆಸನ್ ಎಂಬ ಕಲ್ಲಿದ್ದಲು ನಿಕ್ಷೇಪವನ್ನು ರಾಜಸ್ಥಾನ ವಿದ್ಯುತ್ ಉತ್ಪಾದನಾ ನಿಗಮಕ್ಕೆ ನೀಡಲಾಗಿದ್ದು ನಿಗಮದ ಗುತ್ತಿಗೆದಾರನಾದ ಅದಾನಿ ಮಿನರಲ್ಸ್ ಲಿಮಿಟೆಡ್ ಅಲ್ಲಿ ಗಣಿಗಾರಿಕೆ ಶುರುಮಾಡಲು ಚಡಪಡಿಸುತ್ತಿದೆ. ಅಂತೆಯೇ ಛತ್ತೀಸ್‌ಗಡ ಸರಕಾರ ಇದೇ ಜನವರಿ 8ರಂದು ಒಂದು ಆದೇಶ ಹೊರಡಿಸಿ ಘಾಟ್‌ಬಾರಾದ ಬುಡಕಟ್ಟು ಸಮುದಾಯಕ್ಕೆ ಅರಣ್ಯ ಹಕ್ಕುಗಳ ಕಾಯ್ದೆಯಡಿ ಸಿಕ್ಕಿದ್ದ ಭೂಮಿ ಹಕ್ಕುಗಳನ್ನು ರದ್ದುಗೊಳಿಸಿದೆ. ಈ ರೀತಿಯಾಗಿ ಅರಣ್ಯ ಹಕ್ಕುಗಳ ಕಾಯ್ದೆಯಡಿ ವಿತರಣೆಯಾದ ಹಕ್ಕುಗಳನ್ನು ವಾಪಸು ಪಡೆದಿರುವುದು ದೇಶದಲ್ಲೇ ಪ್ರಥಮ ಬಾರಿಗೆ. ಸಮುದಾಯ ಅಥವಾ ವ್ಯಕ್ತಿಗಳಿಗೆ ಒಮ್ಮೆ ವಿತರಣೆಯಾದ ಭೂಹಕ್ಕುಗಳನ್ನು ಮರಳಿ ಪಡೆಯಲು ಸಾಧ್ಯವಿಲ್ಲವೆಂದು ಅರಣ್ಯ ಹಕ್ಕುಗಳ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಅರಣ್ಯ ಹಕ್ಕುಗಳ ಕಾಯ್ದೆಯಡಿ ತಾವು ಸಾಂಪ್ರದಾಯಿಕವಾಗಿ ಅನುಭೋಗಿಸುತ್ತಿರುವ ಅರಣ್ಯ ಭೂಮಿಯ ಮೇಲಿನ ಸಾಮುದಾಯಿಕ ಮತ್ತು ವೈಯಕ್ತಿಕ ಹಕ್ಕು ತಮ್ಮದೆಂದು ಹೇಳಿಕೊಳ್ಳುವ ಅಧಿಕಾರ ಆದಿವಾಸಿಗಳಿಗೆ ಇದೆ. ಘಾಟ್‌ಬಾರಾ ಗ್ರಾಮಸಭೆಯೂ ಹೀಗೆ ಘೋಷಿಸಿಕೊಂಡ ನಂತರವೇ ರಾಜ್ಯ ಸರಕಾರ 2013ರ ಸೆಪ್ಟಂಬರ್ 3ರಂದು ಆ ಭೂಮಿಯನ್ನು ಅವರಿಗೆ ಹಸ್ತಾಂತರಿಸಿದೆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ಕೃಪೆಯಿಂದಾಗಿ ಗಣಿಗಾರಿಕೆ ರದ್ದುಗೊಂಡಿದ್ದರೂ ತಮ್ಮ ಭೂಮಿಯ ಮೇಲೆ ಸರಕಾರದ ಹದ್ದಿನ ಕಣ್ಣು ಮತ್ತೆ ಬೀಳಬಹುದು ಎಂಬುದರ ಅರಿವು ಘಾಟ್‌ಬಾರಾ ಗ್ರಾಮಸಭೆಗೆ ಇತ್ತು. ಆದುದರಿಂದಲೇ 2014ರ ಅಕ್ಟೋಬರ್‌ನಲ್ಲಿ ಘಾಟ್‌ಬಾರಾ ಮತ್ತು ಇತರ 19 ಗ್ರಾಮಗಳ ಜನ ಒಟ್ಟಾಗಿ ತಮ್ಮ ಜಮೀನುಗಳಲ್ಲಿ ಗಣಿಗಾರಿಕೆ ವಿರೋಧಿಸುವ ಒಂದು ಠರಾವನ್ನು ಅಂಗೀಕರಿಸಿದ್ದರು. ಒಂದು ಪಕ್ಷ ಸರಕಾರಕ್ಕೆ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸಬೇಕೆಂದಿದ್ದರೆ ಅದು ಮೊದಲು ಗ್ರಾಮಸಭೆ ಮತ್ತು ಬುಡಕಟ್ಟು ಸಮುದಾಯಗಳ ಪೂರ್ವಾನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಅರಣ್ಯ ಹಕ್ಕುಗಳ ಕಾಯ್ದೆಯಡಿ ಆದಿವಾಸಿಗಳ ಸಾಂಪ್ರದಾಯಿಕ ಭೂ ಹಕ್ಕುಗಳ ಭವಿಷ್ಯವನ್ನು ನಿರ್ಧರಿಸುವ ಅಧಿಕಾರ ಇರುವುದು ಗ್ರಾಮಸಭೆಗೆ ಮಾತ್ರ. ಅಡವಿಗಳಲ್ಲಿ ವಾಸಿಸುತ್ತಿರುವ ಬುಡಕಟ್ಟುಗಳು ಮತ್ತಿತರ ಜನರನ್ನು ಒಕ್ಕಲೆಬ್ಬಿಸುವ ಮುನ್ನ ಸರಕಾರ ಅವರೆಲ್ಲರ ಹಕ್ಕು ಮತ್ತು ಬೇಡಿಕೆಗಳನ್ನು ಪರಸ್ಪರ ಸಮ್ಮತಿಯಿಂದ ಬಗೆಹರಿಸಬೇಕು ಎನ್ನುತ್ತದೆ ಕಾಯ್ದೆಯ ಸೆಕ್ಷನ್ 4(5) ಮತ್ತು ಇನ್ನಿತರ ನಿಯಮಗಳು. ಆದರೆ 2012ರಲ್ಲಿ ಅಂದಿನ ಯುಪಿಎ ಸರಕಾರ ಇದ್ಯಾವುದಕ್ಕೂ ಕ್ಯಾರೇ ಅನ್ನದೆ ಭೂಮಿಯನ್ನು ಗಣಿಗಾರಿಕೆಗೆ ತೆರವು ಮಾಡುವ ಆದೇಶ ನೀಡಿತ್ತು. ಪರಿಸರ ಸಚಿವಾಲಯದಲ್ಲಿ ಇದಕ್ಕೆ ಸಂಬಂಧಿಸಿದಂತೆ ಎರಡು ಬಗೆಯ ಆದೇಶಗಳಿರುವುದನ್ನು ಗಮನಿಸಬಹುದು. ಒಂದರಲ್ಲಿ ಆದಿವಾಸಿಗಳು ಮತ್ತು ಇತರ ಜನರ ಹಕ್ಕುಗಳ ವಿಷಯವನ್ನು ಬಗೆಹರಿಸಿದ ನಂತರವೇ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಲಾಗುವುದು ಎಂದಿದೆ. ಆದರೆ ಎರಡನೆ ಹಂತದಲ್ಲಿ ಹಕ್ಕುಗಳ ವಿಷಯ ಇತ್ಯರ್ಥ ವಾಗಿದೆಯೇ ಎಂದು ಪರಿಶೀಲಿಸುವ ಗೋಜಿಗೆ ಹೋಗದೆ ಭೂಮಿಯನ್ನು ಸೀದಾ ಗಣಿಗಾರಿಕೆಗೆ ಬಿಟ್ಟುಕೊಡಲಾಗಿದೆ. ಈಗ ಮೋದಿ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಘಾಟ್‌ಬಾರಾ ಬುಡಕಟ್ಟುಗಳ ಸಾಮುದಾಯಿಕ ಅರಣ್ಯ ಹಕ್ಕುಗಳನ್ನು ಪೂರ್ತಿ ರದ್ದುಪಡಿಸಿದೆ. ಛತ್ತೀಸ್‌ಗಡ ರಾಜ್ಯ ಸರಕಾರದ ಜನವರಿ 8ರ ಆದೇಶದಲ್ಲಿ ಪ್ರಾಸಾ ಈಸ್ಟ್ ಮತ್ತು ಕೆತೆ ಬೆಸನ್ ಕಲ್ಲಿದ್ದಲು ಬ್ಲಾಕುಗಳಿಗಾಗಿ ಅರಣ್ಯಭೂಮಿಯನ್ನು ನೀಡಲು ಹೊರಟ ಸಂದರ್ಭದಲ್ಲಿ ಗ್ರಾಮಸ್ಥರು ಕಲೆಕ್ಟರ್ ಕೊಟ್ಟಿರುವ ಭೂಮಿ ಹಕ್ಕುಗಳ ನೆಪವೊಡ್ಡಿ ಗಣಿಗಾರಿಕೆಯ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ, ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬರೆಯಲಾಗಿದೆ. ಇದರ ತನಿಖೆ ನಡೆಸಿದ ಸರ್ಗುಜಾ ಅರಣ್ಯ ಸಂರಕ್ಷಣಾಧಿಕಾರಿ ಆದಿವಾಸಿಗಳಿಗೆ ಭೂಮಿ ಹಕ್ಕುಗಳನ್ನು ನೀಡಿರುವುದು 2013ರಲ್ಲಿ; ಆದರೆ ರಾಜಸ್ಥಾನ ವಿದ್ಯುತ್ ನಿಗಮಕ್ಕೆ 2012ರಲ್ಲೇ ಅರಣ್ಯ ತೆರವಿಗೆ ಅನುಮತಿ ನೀಡಲಾಗಿದೆ. ಆದುದರಿಂದ ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ರದ್ದುಪಡಿಸಬಹುದು ಎಂದು ಟಿಪ್ಪಣಿ ಬರೆಯುತ್ತಾರೆ. ಅರಣ್ಯ ಸಂರಕ್ಷಣಾಧಿಕಾರಿಯ ವರದಿಯನ್ನು ಆಧರಿಸಿ ಜಿಲ್ಲಾಡಳಿತ ಆದಿವಾಸಿಗಳ ಹಕ್ಕುಗಳನ್ನು ರದ್ದುಗೊಳಿಸುವ ಆದೇಶ ಹೊರಡಿಸುತ್ತದೆ. ಸದರಿ ಆದೇಶದಲ್ಲಿ ಆದಿವಾಸಿಗಳಿಗೆ 2013ರಲ್ಲಿ ನೀಡಲಾದ ಅರಣ್ಯ ಹಕ್ಕುಗಳು ಊರ್ಜಿತವಲ್ಲ; ಏಕೆಂದರೆ 2012ರಲ್ಲಿ ಭೂಮಿಯನ್ನು ರಾಜಸ್ಥಾನ ವಿದ್ಯುತ್ ನಿಗಮಕ್ಕೆ ನೀಡಲಾಗಿರುವುದರಿಂದ 2013ರಲ್ಲಿ ಅದು ಅರಣ್ಯ ಭೂಮಿ ಆಗಿರಲಿಲ್ಲ ಎಂಬ ವಾದವನ್ನು ಮುಂದಿಡುತ್ತದೆ.
ಆದರೆ ಈ ಅರಣ್ಯ ತೆರವಿನ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಲಯ 2014ರಷ್ಟು ಹಿಂದೆಯೇ ರದ್ದುಗೊಳಿಸಿದೆ. ಪರಿಸರ ಇಲಾಖೆ ಕಲ್ಲಿದ್ದಲು ಗಣಿಗಾರಿಕೆಯಿಂದ ಆನೆ ಮತ್ತಿತರ ಸಂರಕ್ಷಿತ ಪ್ರಾಣಿವರ್ಗಗಳು ಮತ್ತು ಅನ್ಯ ಜೀವಪ್ರಭೇದಗಳ ಮೇಲಾಗುವ ಪರಿಣಾಮಗಳ ಅಧ್ಯಯನ ನಡೆಸಿಲ್ಲವೆಂದು ಹೇಳಿದ ನ್ಯಾಯಾಲಯ ಇಡೀ ಪ್ರಕರಣವನ್ನು ಪುನರ್‌ಪರಿಶೀಲಿಸುವಂತೆ ಆದೇಶಿಸಿದೆ. ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಕಾಮಗಾರಿ ನಡೆಸುವುದರ ವಿರುದ್ಧ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಂಡಿದೆಯಾದರೂ ಪುನರ್‌ಪರಿಶೀಲನೆ ವಿರುದ್ಧ ಯಾವುದೆ ತಡೆಯಾಜ್ಞೆ ನೀಡದಿರುವುದು ಗಮನಾರ್ಹ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಪರಿಸರ ಇಲಾಖೆಯ ಆದೇಶದ ನಂತರವೇ ಗಣಿಗಾರಿಕೆಯನ್ನು ಆರಂಭಿಸಬಹುದಾಗಿದೆ. ಆದರೆ ಕಳೆದ ವರ್ಷ ಹಸದೇವ ಅರಂದ್ ಅರಣ್ಯದ ಮೂಲಕ ಹಾದುಹೋಗಲಿರುವ ಕಲ್ಲಿದ್ದಲು ಸಾಗಾಟದ ರೈಲು ಮಾರ್ಗಕ್ಕೆ ಸದ್ದಿಲ್ಲದೆ ಅನುಮತಿ ನೀಡಿರುವ ಪರಿಸರ ಇಲಾಖೆ ಪುನರ್‌ಪರಿಶೀಲನೆಯ ಬಗ್ಗೆ ಮೌನ ತಾಳಿರುವುದು ಏನನ್ನು ಸೂಚಿಸುತ್ತದೆ?

(ಆಧಾರ: Business Standard ನಲ್ಲಿ ನಿತಿನ್ ಸೇಠಿ; ಮತ್ತು Facebook ನಲ್ಲಿ ಕಾಂಚಿ ಕೊಹ್ಲಿ, ಅಲೋಕ್ ಶುಕ್ಲಾ ಇವರ ಲೇಖನಗಳು) 

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News