ಫ್ಲಿಪ್ ಕಾರ್ಟ್ ಗೆ ನಾಮ ಹಾಕಿ ಪೋಲೀಸರ ಅತಿಥಿಯಾದ ಚೋರ ತಂಡ !
ಅಮೃತಸರ, ಮಾ. 2 : ಖ್ಯಾತ ಇ ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ನ ಸುಲಭ ವಾಪಸ್ ನೀತಿಯನ್ನು ದುರುಪಯೋಗಪಡಿಸಿಕೊಂಡು ಕಂಪೆನಿಗೆ 25 ಲಕ್ಷಕ್ಕೂ ಹೆಚ್ಚು ಮೊತ್ತದ ವಂಚನೆ ಎಸಗಿದ ಆರೋಪದಲ್ಲಿ ಪಂಜಾಬ್ ನ ಮನ್ಸದಲ್ಲಿ ೫ ಅಮ್ನ್ದಿಯ ತಂಡವೊಂದು ಪೋಲೀಸರ ಅತಿಥಿಯಾಗಿದೆ.
ಈ ತಂಡದ " ದರೋಡೆ " ವಿಧಾನ ತೀರಾ ಸರಳವಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಮೊದಲು ದುಬಾರಿ ಮೊಬೈಲ್ ಫೋನ್ ಗಳನ್ನು ಖರೀದಿಸುವುದು. ಅದರ ಡೆಲಿವರಿ ಪಡೆದ ಬಳಿಕ ಅದರ ಬಗ್ಗೆ ತಥಾಕಥಿತ ದೂರುಗಳನ್ನು ನೀಡಿ ಅದನ್ನು ವಾಪಸ್ ತೆಗೊಳ್ಳಿ ಎಂದು ಫ್ಲಿಪ್ ಕಾರ್ಟ್ ಗೆ ಹೇಳುವುದು. ಫ್ಲಿಪ್ ಕಾರ್ಟ್ ನಿಯಮ ಪ್ರಕಾರ ಗ್ರಾಹಕ ಪಡೆದ ವಸ್ತುವನ್ನು ವಾಪಸ್ ಮಾಡಲು ಬಯಸಿದರೆ ಕೂಡಲೇ ಆತನ ಬ್ಯಾಂಕ್ ಅಕುಂಟ್ ಗೆ ಅದು ಹಣ ಹಾಕುತ್ತದೆ. ಮತ್ತೆ ತನ್ನ ಉತ್ಪನ್ನವನ್ನು ಗ್ರಾಹಕನಿಂದ ಪಡೆದು ಅದು ಕಳಿಸಿದ ಸ್ವರೂಪದಲ್ಲೇ ಇದೆಯೇ ಎಂದು ನೋಡುತ್ತದೆ.
ಈ ನಿಯಮವನ್ನು ದುರುಪಯೋಗ ಪಡಿಸಿಕೊಂಡ ಈ ತಂಡ ವಾಪಸ್ ತೆಗೆದುಕೊಳ್ಳಲು ಬರುವ ಕಂಪೆನಿಯ ಪ್ರತಿನಿಧಿಗೆ ತಾವು ತರಿಸಿದ ಉತ್ಪನ್ನದ ಹಾಗೆ ಕಾಣುವ ನಕಲಿ ಉತ್ಪನ್ನ ( ಮೊಬೈಲ್ ) ನೀಡಿ ತಾವು ಪಡೆದ ಮೊಬೈಲ್ ಅನ್ನು ಬೇರೆಯವರಿಗೆ ಮಾರಿ ದುಡ್ಡು ಮಾಡಿಕೊಳ್ಳುತ್ತಿತ್ತು. ತಂಡದಲ್ಲಿ ಒಬ್ಬ ಮೊಬೈಲ್ ಫೋನ್ ಮಾರಾಟಗಾರ ಹಾಗು ಒಬ್ಬ ಸಿಮ್ ಮಾರುವವನು ಇದ್ದ. ಈ ತಂದ ನಕಲಿ ಇ ಮೇಲ್ ಐಡಿ ಗಳನ್ನೂ ಬಳಸಿ ಮೊಬೈಲ್ ಗಳನ್ನೂ ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸುತ್ತಿತ್ತು.
" ಒಂದೇ ಕಡೆಯಿಂದ ದೊಡ್ಡ ಸಂಖ್ಯೆಯಲ್ಲಿ ಉತ್ಪನ್ನಗಳು ವಾಪಸ್ ಬರುತ್ತಿದ್ದರಿಂದ ಸಂಶಯಗೊಂಡು ನಾವು ಪೋಲಿಸ್ ದೂರು ದಾಖಲಿಸಿದೆವು" ಎಂದು ಫ್ಲಿಪ್ ಕಾರ್ಟ್ ಅಧಿಕಾರಿ ತಿಳಿಸಿದ್ದಾರೆ.
ಬಂಧಿತ ಸುರೇಶ ಕುಮಾರ್ , ಗಗನ್ ಡೀಪ್ ಸಿಂಗ್, ಯದ್ವೇಂದ್ರ ಸಿಂಗ್ , ಕುಲದೀಪ್ ಸಿಂಗ್ ಹಾಗು ಸಂದೀಪ್ ಸಿಂಗ್ ಅವರು ಆನ್ ಲೈನ್ ನಲ್ಲಿ ಖರೀದಿಸಿ ಬಳಿಕ ಅದರ ಬದಲು ನಕಲಿ ಉತ್ಪನ್ನದೊಂದಿಗೆ ಬದಲಾಯಿಸುತ್ತಿದ್ದರು. 17 ಲಕ್ಷ ರೂಪಾಯಿ , ಹತ್ತು ಮೊಬೈಲ್ ಹಾಗು ಒಂದು ಲ್ಯಾಪ್ ಟಾಪ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 80 ಲಕ್ಷಕ್ಕೂ ಹೆಚ್ಚು ಹಣ ಈ ರೀತಿ ಸಂಪಾದಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಸರಿಯಾದ ಮೊತ್ತ ತಿಳಿಯಬಹುದು.