ಗಾಂಧಿಯನ್ನು ಕೊಂದವರು ನಮ್ಮನ್ನು ದೇಶದ್ರೋಹಿಗಳು ಎನ್ನು ತ್ತಿದ್ದಾರೆ!

Update: 2016-03-02 17:26 GMT

ಭಾಗ 4

ಆದರೆ ಈ ಕೆಲವು ಜನರನ್ನು ಹೊರತುಪಡಿಸಿ ಸರಕಾರ, ಬೌದ್ಧಿಕ ವಲಯ, ಮಾಧ್ಯಮಗಳಲ್ಲಿ ಕೃಷಿ ಬಿಕ್ಕಟ್ಟಿನ ಕುರಿತು ನಾಚಿಕೆಗೆಟ್ಟ ಧೋರಣೆಯೊಂದು ಪ್ರಭಾವಿಸಿಕೊಂಡಿದೆ. ವಿಚಾರಣಾ ಆಯೋಗದ ಇಬ್ಬರು ಉಪಕುಲಪತಿಗಳು...... ಈ ದೇಶದಲ್ಲಿ ಕೃಷಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ವಿಚಾರಣಾ ಅಯೋಗಗಳು ರಚನೆಯಾಗಿವೆ. ಭಾರತದ ರಾಜಕಾರಣದ ಒಂದು ಒಳ್ಳೆಯ ಸಂಪ್ರದಾಯವಿದೆ. ಅದು ಯಾವುದೆಂದರೆ ಒಂದು ಸಮಸ್ಯೆಯ ಕುರಿತಂತೆ ಪ್ರಭುತ್ವ ನಿರೀಕ್ಷೆ ಮಾಡುವ ವರದಿಯನ್ನು ನೀಡುವ ಅಯೋಗವೊಂದು ಬರುವವರೆಗೂ ಆಯೋಗಗಳನ್ನು ರಚಿಸುತ್ತಲೇ ಹೋಗುವುದು. ಅವುಗಳ ಸಂಖ್ಯೆ ಎಷ್ಟಾದರೂ ಪರವಾಗಿಲ್ಲ! ನಾನು ಆಗಲೇ ಹೇಳುತ್ತಿದ್ದೆ ವಿಚಾರಣಾ ಆಯೋಗವೊಂದರ ಇಬ್ಬರು ಉಪಕುಲಪತಿಗಳು, ಒಬ್ಬರು ಕರ್ನಾಟಕದ ವೀರೇಶ್ ಎಂಬುವವರು ರೈತರ ಆತ್ಮಹತ್ಯೆಗೆ ಮೂಲ ಕಾರಣ ಕುಡಿತ ಎಂಬ ವರದಿಯನ್ನು ನೀಡಿದ್ದರು. ಇದನ್ನು ಆ ತಕ್ಷಣವೇ ಸುಮಾರು ಶೇ.90 ರಷ್ಟು ಮಾಧ್ಯಮಗಳು ಹೌದು ಹೌದು ಎಂದು ಬೆಂಬಲಿಸಿದ್ದವು. ಈ ವಾದದಲ್ಲಿನ ಸಮಸ್ಯೆ ಏನೆಂದರೆ ಆತ್ಮಹತ್ಯೆಗೆ ಒಂದು ಕಾರಣ ಅಂತ ಇರಬೇಕಿಲ್ಲ. ಒಬ್ಬ ವ್ಯಕ್ತಿಯ ಆತ್ಮಹತ್ಯೆಗೆ ಹಲವಾರು ಕಾರಣಗಳು ಇರುತ್ತವೆ ವೀರೇಶ್ ಹೇಳುವಂತೆ ವ್ಯಕ್ತಿಯ ಆತ್ಮಹತ್ಯೆಗೆ ಕುಡಿತವೇ ಮೂಲ ಕಾರಣ ಎಂಬುದು ಸತ್ಯವಾಗಿದ್ದರೆ ಅತಿಯಾದ ಕುಡಿತ ಆತ್ಮಹತ್ಯೆಗೆ ವ್ಯಕ್ತಿಯನ್ನು ದೂಡುತ್ತದೆ ಎಂಬುದು ಸತ್ಯವಾಗಿದ್ದರೆ ಇಂದು ಜಗತ್ತಿನಲ್ಲಿ ಯಾವೊಬ್ಬ ಪತ್ರಕರ್ತನೂ ಬದುಕಿರುತ್ತಿರಲಿಲ್ಲ, ಕೆಲವೇ ಕೆಲವು ಬುದ್ಧಿಜೀವಿಗಳು ಬದುಕಿರುತ್ತಿದ್ದರು. ಮಾನವ ಹಕ್ಕುಗಳ ಹೋರಾಟಗಾರರಂತೂ ಒಬ್ಬರೂ ಇರುತ್ತಿರಲಿಲ್ಲ... ಆದ್ದರಿಂದ ಈ ಉಪಕುಲಪತಿಯನ್ನು ಬಿಡೋಣ ಮತ್ತೊಬ್ಬ ಉಪಕುಲಪತಿಯವರ ಬಳಿ ತೆರಳೋಣ...
ನಾನು ಮಹಾರಾಷ್ಟ್ರದ ವಿದರ್ಭದಲ್ಲಿನ ರೈತರ ಆತ್ಮಹತ್ಯೆಗಳ ಹಿನ್ನಲೆಯಲ್ಲಿ ವಿಲಾಸ್ ರಾವ್ ದೇಶ್ ಮುಖ್ ರವರನ್ನು ನನ್ನ ವರದಿಗಳ ಮೂಲಕ ತುಂಬಾ ಕಾಡುತ್ತಿದ್ದೆ. ನಿಮಗೆ ಗೊತ್ತಿರಲಿ ಸರಕಾರಿ ವರದಿಗಳ ಪ್ರಕಾರವೇ 95ರಿಂದ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ 63,000. ಆಗ ಇನ್ನೊಬ್ಬ ಮಹಾರಾಷ್ಟ್ರದ ಉಪಕುಲಪತಿ ಒಬ್ಬ ರೈತನನ್ನೂ ಭೇಟಿಯಾಗದೆ, ಒಂದೇ ಒಂದು ರೈತ ಕುಟುಂಬದ ಜೊತೆ ಸಂವಾದಿಸದೆ ವರದಿಯೊಂದನ್ನು ನೀಡಿದರು. ಅದರಲ್ಲಿ ಅವರು ಒಂದು ಪ್ಯಾರಾದ ಹೊರತಾಗಿ ರೈತರ ಆತ್ಮಹತ್ಯೆಗಳ ಕುರಿತು ಏನನ್ನೂ ಬರೆದಿರಲಿಲ್ಲ. ಅವರ ವರದಿಯ ಒಟ್ಟು ಪ್ರಯತ್ನ ನಾನು ರೈತರ ಆತ್ಮಹತ್ಯೆಗಳ ಕುರಿತು ಮಹಾರಾಷ್ಟ್ರದಲ್ಲಿ ಕೃತಕ ಭಯವೊಂದನ್ನು ಹುಟ್ಟುಹಾಕಿದ್ದೇನೆ ಎಂಬುದನ್ನು ಸಾಧಿಸುವುದಕ್ಕೆ ಸೀಮಿತವಾಗಿತ್ತು. ಅದನ್ನು ಅವರು ಸಾಧಿಸಿದರು. ಒಂದು ದಿನ ಬೆಳಗ್ಗೆ ಎದ್ದು ನೋಡುತ್ತೇನೆ. ಮುಂಬೈ ಮಿರರ್ ಪತ್ರಿಕೆಯ ಮೊದಲ ಪುಟದ ಮುಖ್ಯ ಹೆಡ್ ಲೈನ್ ‘‘ಸಾಯಿನಾಥ್ ರಾಜ್ಯದ ಶತ್ರು’’!. ಆ ಅರ್ಥದಲ್ಲಿ ನನ್ನ ರಾಷ್ಟ್ರದ್ರೋಹ ಮಹಾರಾಷ್ಟ್ರಕ್ಕೆ ಸೀಮಿತವಾಗಿತ್ತು! ಇಡೀ ವರದಿ ಸಾಯಿನಾಥ್ ರಾಜ್ಯವನ್ನು ಅಪಮಾನಕ್ಕೆ ಈಡುಮಾಡಿದ್ದಾರೆ ಎನ್ನುವುದಾಗಿತ್ತು. ನಾನು ಆ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾನ್ಯಾಕೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಏಕೆಂದರೆ ಅದು ಅಷ್ಟು ಮೂರ್ಖತನದಿಂದ ಕೂಡಿತ್ತು. ಆ ವರದಿ ಮತ್ತು ಸುದ್ದಿಯಿಂದ ವಿಲಾಸ್ ರಾವ್ ಸಂತೋಷಗೊಂಡರು, ಆ ಕುಲಪತಿಗಳು ಸಂತೋಷಗೊಂಡರು. ಈ ವರದಿ ನೀಡಿದ ಮಹತ್ಕಾರ್ಯಕ್ಕೆ ಅವರನ್ನು ಮುಂದೆ ಯೋಜನಾ ಆಯೋಗದ ಸದಸ್ಯರನ್ನಾಗಿ ನೇಮಿಸಲಾಯಿತು.
 ಇದು ನಮ್ಮ ಬೌದ್ಧಿಕತೆಯು ಬಿಕ್ಕಟ್ಟಿಗೆ ಸ್ಪಂದಿಸುತ್ತಿರುವ ರೀತಿ! ನೀವು ಕೃಷಿ ಕುಟುಂಬವೊಂದರ ಖರ್ಚು ವೆಚ್ಚಗಳನ್ನು ಒಮ್ಮೆ ಗಮನಿಸಬೇಕು. ಇಂದು ಕೃಷಿ ಕುಟುಂಬಗಳು ಅತೀ ಹೆಚ್ಚು ವೆಚ್ಚವನ್ನು ಆರೋಗ್ಯದ ಮೇಲೆ ಮಾಡುತ್ತಿವೆ. ಪ್ರತಿಯೊಂದು ಕೃಷಿ ಕುಟುಂಬ ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚದ ಎರಡರಷ್ಟನ್ನು ಆರೋಗ್ಯಕ್ಕೆ ವ್ಯಯಿಸುತ್ತಿವೆ. ನಿಮಗೆ ಗೊತ್ತಿರಲಿ ಜಗತ್ತಿನ ದೊಡ್ಡ ದೇಶಗಳಲ್ಲಿ ಆರೋಗ್ಯವನ್ನು ಖಾಸಗೀಕರಣ ಮಾಡಿದ ಮೊದಲ ರಾಷ್ಟ್ರ ಭಾರತ. ಈ ದೇಶದ ಆರೋಗ್ಯ ಉದ್ಯಮ ಗಳಿಸುತ್ತಿರುವ ಶೇ.85 ರಷ್ಟು ಹಣ ಈ ದೇಶದ ಸಾಮಾನ್ಯನ ಜೇಬಿನ ಹಣ. ಇವರು ಸರಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆಯೋ ಇಲ್ಲವೋ ಇತ್ತೀಚೆಗೆ 4,000 ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣಕ್ಕೆ ಒಳಪಡಿಸಲಾಗಿದೆ. ವೇದಾಂತ ಕಂಪೆನಿಯ ಮುಂಚೂಣಿಯ ಒಂದು ಸಂಸ್ಥೆಗೆ 4,000 ಅಂಗನವಾಡಿಗಳನ್ನು ನೋಡಿಕೊಳ್ಳುವ ಹೊಣೆ ಹೊರಿಸಲಾಗಿದೆ. ಈ ವಿಷಯ ನಿಮ್ಮನ್ನು ಅಘಾತಕ್ಕೆ ಒಳಪಡಿಸುತ್ತದೆ ಎಂದು ನನಗೆ ಗೊತ್ತು... ಒಂದರಿಂದ ಆರು ವರ್ಷದ ವಯಸ್ಸೇನಿದೆ ಅದು ಈ ದೇಶವನ್ನು ಭವಿಷ್ಯದಲ್ಲಿ ಯಾವ ದಿಕ್ಕಿನಲ್ಲಿ ಕಟ್ಟಬೇಕು ಎಂಬುದನ್ನು ತಿಳಿಹೇಳುವ ವಯಸ್ಸಾಗಿದೆ. ಆ ಮಕ್ಕಳ ಆರೋಗ್ಯ, ಅಹಾರ, ಪೌಷ್ಟಿಕತೆಗಳನ್ನು ಸರಕಾರವೇ ಖುದ್ದು ನಿರ್ವಹಿಸಬೇಕಾದ ಮಹತ್ವದ ಅಂಶವಾಗಿದೆ. ಏಕೆಂದರೆ ಅವರು ಈ ದೇಶದ ಭವಿಷ್ಯ! ಅಂತಹ ಜವಾಬ್ದಾರಿಯುತ ಸಂಸ್ಥೆಗಳನ್ನು ನೀವು ಲಾಭದ ಉದ್ದೇಶಹೊಂದಿರುವ ಒಂದು ಕಾರ್ಪೋರೇಟ್ ಕಂಪೆನಿಗೆ ನೀಡುತ್ತೀರ ಎಂಬುದೇ ಒಂದು ಸೋಜಿಗ. ಇಂದು 4,000 ಅಂಗನವಾಡಿ ಕೊಟ್ಟಿರಬಹುದು ಮುಂದೆ ಅವುಗಳ ಸಂಖ್ಯೆ ಏರಲಿದೆ...
ನಾವು ಇಂದು ಬೆಳೆಯ ವಿಮೆಯ ಕುರಿತು ಮಾತನಾಡುತ್ತಿದ್ದೇವೆ. ರೈತರು ಪರಿಹಾರದ ಆಸೆಗೆ, ವಿಮೆಯ ಆಸೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರೋಪಿಸುತ್ತಿರುವವರು ಇಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಾರ್ಪೊರೇಟ್ ಕಂಪೆನಿಗಳಿಗಾಗಿ ಎಂಬ ವಾಸ್ತವ ಸಂಗತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆದರೆ ಆಶ್ಚರ್ಯ ಅಂದರೆ ಇನ್ನು ಮುಂದೆ ಕೃಷಿ ಮತ್ತು ಬೆಳೆ ವಿಮೆಗಳ ಲೆಕ್ಕವನ್ನು ನೀಡುವ ಜವಾಬ್ದಾರಿಯನ್ನು ಆ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಲಾಗಿದೆ.
1991ರಿಂದ 2011ರ ಅವಧಿಯಲ್ಲಿ ಭಾರತದ ಕೃಷಿಕನ ಅತಂತ್ರ ಸ್ಥಿತಿ ಎರಡು ಪಟ್ಟು ದ್ವಿಗುಣಗೊಂಡಿದೆ. ನ್ಯಾಷನಲ್ ಸ್ಯಾಂಪಲ್ ಸರ್ವೇ ಅಂಕಿ-ಅಂಶಗಳು 1991 ಕ್ಕೆ ಹೋಲಿಸಿದರೆ 2011 ರಲ್ಲಿ ಸಾವಿಗೆ ಶರಣಾದವರ ಸಂಖ್ಯೆ ದ್ವಿಗುಣ ಗೊಂಡಿದೆ ಎಂಬುದನ್ನು ಹೇಳುತ್ತಿವೆ. 10 ವರ್ಷಗಳಲ್ಲಿ ಶೇ.26 ರಿಂದ ಶೇ.56.8 ಗೆ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಈ ಸಂಖ್ಯೆಯನ್ನು ಒಪ್ಪುವುದಿಲ್ಲ ಅದೊಂದು ದೊಡ್ಡ ಹಾಸ್ಯ ಎಂದು ಜನರೇ ನಗುತ್ತಾರೆ...
ಕಳೆದ ವಾರ ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಪಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್) ಮಹಾರಾಷ್ಟ್ರದ ಕುರಿತಂತೆ ಒಂದು ವರದಿಯನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರದ ಒಟ್ಟು ಕೃಷಿ ಸಾಲದಲ್ಲಿ 51ಶೇ. ಕೃಷಿ ಸಾಲಗಳು ಮುಂಬೈ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ನೀಡಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಇದು ಸೋರಿಕೆಯಾದ ವರದಿಯಲ್ಲ. ಬದಲಾಗಿ ನಬಾರ್ಡ್ ಬಿಡುಗಡೆಮಾಡಿದ ಅಧಿಕೃತ ವರದಿ. ಇದರ ಮೂಲಕ ಅವರು ನಮಗೆ ಈ ದೇಶದಲ್ಲಿ ಕೃಷಿಗಿಂತ ಕೃಷಿ ಆಧಾರಿತ ಉದ್ಯಮ ಹೆಚ್ಚು ಮುಖ್ಯ ಎಂಬುದನ್ನು ಹೇಳುತ್ತಿದ್ದಾರೆ. ಇದನ್ನು ಕೇಳಿ ನಿಮಗೆ ಅಘಾತ ಆಗಬಹುದು ಆಗಲೇ ಬೇಕು ಕೂಡಾ. ನಾನು ನಿಮ್ಮನ್ನು ಈ ಎಲ್ಲ ಸಂಗತಿಗಳನ್ನು ಹೇಳಿ ಉದ್ರೇಕಿಸುತ್ತಿದ್ದೇನೆ ಎಂದುಕೊಳ್ಳುತ್ತಿದ್ದರೆ ಅರ್ಥಮಾಡಿಕೊಳ್ಳಿ ನನ್ನ ಉದ್ದೇಶವೂ ಅದೇ ಆಗಿದೆ...
ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನ ಪ್ರೊ.ಆರ್ ರಾಮಕುಮಾರ್ ಅವರು ಶೇ.55 ಗ್ರಾಮೀಣ ಪ್ರದೇಶ ಹೊಂದಿರುವ ಮಹಾರಾಷ್ಟ್ರದಲ್ಲಿ ನೀಡಿರುವ ಒಟ್ಟು ಕೃಷಿ ಸಾಲದಲ್ಲಿ ಶೇ.53 ರಷ್ಟು ಮೂರು ನಗರಗಳಿಗೆ ಹಂಚಲಾಗಿದೆ ಎಂಬ ಅಂಶವನ್ನೂ ಹೊರಗೆಡವಿದ್ದಾರೆ. ಶೇ.53 ಕೃಷಿ ಸಾಲ ಮಹಾರಾಷ್ಟ್ರದ ಮೂರು ನಗರಗಳ ಪಾಲಾಗಿದೆ. ನಿಮಗೆ ಆಶ್ಚರ್ಯವಾಗಬಹುದು, ಅದರಲ್ಲಿ ಶೇ.38 ಕೃಷಿ ಸಾಲಗಳು ಗ್ರಾಮೀಣ ಶಾಖೆಗಳಿಂದಲೇ ನೀಡಲಾಗಿದೆ. ಇದು ಪರಿಸ್ಥಿತಿ...
 ಕೃಷಿ ಸಾಲದ ಅರ್ಧಕ್ಕಿಂತ ಹೆಚ್ಚು ಸಾಲ ಮುಂಬೈ, ಪುಣೆ, ಮಲಬಾರ್ ಜಿಲ್ಲೆಗಳ ಪ್ರಮುಖ ನಗರಗಳನ್ನು ತಲುಪಿವೆ. ಒಂದು ಅರ್ಥದಲ್ಲಿ ಅವರೂ ಕೃಷಿ ಮಾಡುತ್ತಾರೆ. ಅವರು ಕೃಷಿಯ ಗುತ್ತಿಗೆದಾರರಲ್ಲ, ಬದಲಾಗಿ ಕೃಷಿ ವ್ಯವಸ್ಥೆಯ ಗುತ್ತಿಗೆದಾರರು. ಪ್ರೊ.ರಾಮಕುಮಾರ್ ತೋರಿಸುವಂತೆ 50,000 ಒಳಗಿನ ಕೃಷಿ ಸಾಲಗಳ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ಅಂದರೆ, 50,000 ಸಾಲ ಪಡೆಯುವವರು ಸಣ್ಣ ರೈತರು. ಆ ಸಾಲ ಇಳಿಮುಖವಾಗಿದೆ. ಆದರೆ ನಿಮಗೆ ಅಘಾತವಾಗುತ್ತದೆ 10 ರಿಂದ 20 ಕೋಟಿ ಕೃಷಿ ಸಾಲಗಳನ್ನು ಪಡೆಯುವವರ ಸಂಖ್ಯೆ ವಿಪರೀತ ಏರಿಕೆಯಾಗಿದೆ. ನೀವು ಎಂದಾದರೂ ಬ್ಯಾಂಕಿನ ಮುಂದೆ ,‘ಹೇ.. ಒಂದು ನಿಮಿಷ ತಾಳು, ನಾನು ನನ್ನ 25 ಕೋಟಿ ಕೃಷಿ ಸಾಲ ಪಡೆದು ಬರುತ್ತೇನೆ ಎಂದು ನಿಂತಿರುವ ಸಣ್ಣ ರೈತನನ್ನು ನೋಡಿದ್ದಿರೇನು? ಆದರೆ ನಾನು ಇಬ್ಬರನ್ನು ನೊಡಿದ್ದೇನೆ. ಒಬ್ಬರು ಮುಖೇಶ್ ಮತ್ತೊಬ್ಬರು ಅನಿಲ್. ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟ ಸಂಪನ್ಮೂಲದ ಅರ್ಧಕ್ಕಿಂತ ಹೆಚ್ಚು ಕಾರ್ಪೊರೇಟ್ ವ್ಯವಸ್ಥೆ ನುಂಗಿಹಾಕುತ್ತಿದೆ...’
ಇವೆಲ್ಲ ಸಂಗತಿಗಳು ನಮಗೆ ತಿಳಿಸುವುದು ಏನೆಂದರೆ ಇಂದು ನಾವು ನಿಧಾನವಾಗಿ ಕಾರ್ಪೊರೇಟ್ ರಾಜ್ಯವ್ಯವಸ್ಥೆಯ ಕಡೆಗೆ ಚಲಿಸುತ್ತಿದ್ದೇವೆ. ನಮಗೆ ಅರ್ಥವಾಗಬೇಕಾದ ಸಂಗತಿ ಎಂದರೆ, ನಾವು ಇಂದು ಸಾಮಾಜಿಕ, ಧಾರ್ಮಿಕ ಮೂಲಭೂತವಾದ ಮತ್ತು ಆರ್ಥಿಕ, ಮಾರುಕಟ್ಟೆ ಮೂಲಭೂತವಾದವೆಂಬ ಶತ್ರುಗಳನ್ನು ಎದುರಿಸಬೇಕಿದೆ. ಇದು ಭಾರತಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ. ಮಾರುಕಟ್ಟೆ ಮೂಲಭೂತವಾದದ ವ್ಯಾಟಿಕನ್ (ಪವಿತ್ರ ಭೂಮಿ) ಎಂದು ಕರೆಯಲ್ಪಡುವ ಅಮೆರಿಕ; ಇಂದು ಜಗತ್ತಿನ ಅತ್ಯಂತ ಸಂಪ್ರದಾಯಿಕ ಧಾರ್ಮಿಕ ಮೂಲಭೂತವಾದಿ ರಾಷ್ಟ್ರಗಳಾದ ಇಸ್ರೇಲ್ ಮತ್ತು ಸೌದಿ ಅರೇಬಿಯಗಳನ್ನು ಆಧರಿಸಿದೆ. ಇಡೀ ಅಮೆರಿಕದ ನೀತಿಗಳು ನಿರ್ಧಾರವಾಗುತ್ತಿವೆ. ಆದ್ದರಿಂದ ಮಾರುಕಟ್ಟೆ ಮತ್ತು ಧಾರ್ಮಿಕ ಮೂಲಭೂತವಾದದ ಮೈತ್ರಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದುಕೊಳ್ಳಬೇಡಿ. ಅವರು ತಮ್ಮ ಅಸ್ತಿತ್ವಕ್ಕಾಗಿ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿಯಲ್ಲಿ ಇದ್ದಾರೆ...
ಇನ್ನು ಮಾಧ್ಯಮಗಳು ನಿಜಕ್ಕೂ ಅತಂಕ ಹುಟ್ಟಿಸುತ್ತಿವೆ. ಅವು ಕಳೆದ 20-25 ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಬಹಳಷ್ಟು ಬದಲಾಗಿವೆ. ಇದನ್ನು ಬಹಳ ಸರಳವಾಗಿ ನಿಮ್ಮ ಮುಂದೆ ಹೀಗೆ ವಿವರಿಸುತ್ತೇನೆ. ಇಂದು ಎರಡು ರೀತಿಯ ಪತ್ರಿಕೋದ್ಯಮಗಳು ನಮ್ಮ ನಡುವೆ ಇವೆ. ಒಂದು ಪತ್ರಿಕೋದ್ಯಮ, ಇನ್ನೊಂದು ಸ್ಟೆನೋಗ್ರಫಿ(ಟೈಪಿಸಿ ವರದಿ ಮಾಡುವುದು)! ಅದರಲ್ಲಿಯೂ ಕಾರ್ಪೊರೇಟ್ ಸ್ಟೆನೋಗ್ರಫಿ. ನಾನು ತಮಿಳುನಾಡಿನಲ್ಲಿ ಮಾಧ್ಯಮಗಳನ್ನು ಹೀಗೆ ಸ್ಟೆನೋಗ್ರಾಪರ್ಸ್ ಎಂದು ಹೇಳುತ್ತಿದ್ದಾಗ, ಒಬ್ಬ ಕೇಳುಗ ಎದ್ದು, ಸಾರ್ ದಯಮಾಡಿ ಸ್ಟೆನೋಗ್ರಾಪರ್ಸ್ ರನ್ನು ನೀವು ಹೀಗೆ ಪತ್ರಿಕೋದ್ಯಮಕ್ಕೆ ಹೋಲಿಸಿ ತೆಗಳಬೇಡಿ ಎಂದು ಕೂಗಿದ. ನಾನು ಏಕೆ ಎಂದು ಕೇಳಿದೆ. ಅದಕ್ಕೆ ಆತ ನಾನು ವೃತ್ತಿಯಲ್ಲಿ ಒಬ್ಬ ಸ್ಟೆನೋಗ್ರಾಪರ್ ಸಾರ್. ನನ್ನನ್ನು ಅವರೊಂದಿಗೆ ಹೋಲಿಸಿ ಮಾತನಾಡಿದರೆ ತುಂಬಾ ನೋವಾಗುತ್ತದೆ ಎಂದ...
ನಾನು ಆತನಲ್ಲಿ ಕ್ಷಮೆ ಕೇಳಿದೆ. ಅವನು ತಾವು ಕ್ಷಮೆ ಕೇಳುವ ಅಗತ್ಯವಿಲ್ಲ ಸಾರ್ ಇಂದು ಪತ್ರಿಕೋದ್ಯಮಕ್ಕಿಂತ ಸ್ಟೆನೋಗ್ರಫಿ ಮಾಡುವವರು ನೈತಿಕವಾಗಿ ತುಂಬಾ ಉನ್ನತ ಹಂತದಲ್ಲಿ ಇದ್ದಾರೆ ಅವರು ಅರೋಪಿ, ಆಪಾದಿತ, ಆರೋಪಿ ಪರ/ವಿರೋಧ ವಕೀಲರುಗಳ ವಾದಗಳನ್ನು ಯಾವುದೇ ಭಾವಾವೇಶಕ್ಕೆ ಒಳಗಾಗದೆ ಟೈಪಿಸುತ್ತಾರೆ. ಆದರೆ ಪತ್ರಕರ್ತರು ಬಲಾಢ್ಯರು ಎನು ಹೇಳುತ್ತಾರೋ ಅದನ್ನು ಟೈಪಿಸುತ್ತಾರೆ. ಆ ಅರ್ಥದಲ್ಲಿ ಸ್ಟೆನೋಗ್ರಫಿ ಮಾಡುವವರು ಒಳ್ಳೆಯವರು ಸಾರ್...
ಇಂದು ನೀವು ಮಾಧ್ಯಮಗಳ ಮಾಲಕತ್ವವನ್ನು ನೋಡಬೇಕು. ನಿಮಗೆ ಗೊತ್ತಿರಲಿ ಭಾರತದಲ್ಲಿನ ಅತಿ ದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯ ಮುಖೇಶ್ ಅಂಬಾನಿ ಆಗಿದ್ದಾರೆ. ಇಂದು ನಾವು ಮಾಧ್ಯಮ ಜಗತ್ತಿನ್ನು ಹಿಂದಿನಂತೆ ನೋಡಲು ಸಾಧ್ಯವಿಲ್ಲ. ಹಿಂದೆ ಸುದ್ದಿ ಪತ್ರಿಕೆಗಳು ಮತ್ತು ಟಿ.ವಿ ವಾಹಿನಿಗಳು ಕೆಲವು ಹಿತಾಸಕ್ತಿಗಳನ್ನು ಹೊಂದಿದ್ದವು. ಆದರೆ ಇಂದು ಇಡೀ ಮಾಧ್ಯಮವೆಂಬುದು ಬಹಳ ದೊಡ್ಡ ಕಾರ್ಪೊರೇಟ್ ಪ್ರಪಂಚದ ಹಿತಾಸಕ್ತಿಯ ಅತಿ ಸಣ್ಣ ವಿಭಾಗವಾಗಿ ಬದಲಾಗಿದೆ. ಇದು ನಮಗೆ ಅರ್ಥವಾಗಬೇಕು. ನೆಟ್‌ವರ್ಕ್ 18 ದೇಶದಲ್ಲಿ ಮಾಧ್ಯಮಗಳನ್ನು ಒಗ್ಗೂಡಿಸುವ ಬಹಳ ದೊಡ್ಡ ಜಾಲವನ್ನು ಹೊಂದಿದ್ದರೂ ಅದು ರಿಲಯನ್ಸ್ ಕಂಪೆನಿಯ ಅತಿ ಸಣ್ಣ ಉದ್ಯಮವಾಗಿದೆ ಎಂಬ ಸತ್ಯವನ್ನು ನಾವು ತಿಳಿಯಬೇಕಿದೆ. ಇಂದು ನಿಜಕ್ಕೂ ಫೋರ್ಥ್ ಸ್ಟೇಟ್ ಮತ್ತು ರಿಯಲ್ ಎಸ್ಟೇಟ್‌ಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಬಹಳ ಕಷ್ಟವಾದ ಕೆಲಸವಾಗಿದೆ. ಇಂದು ಅಸಮಾನತೆಯನ್ನು ಪೋಷಿಸುವ ವ್ಯವಸ್ಥೆ ನಮ್ಮನ್ನು ಅಳುತ್ತಿದೆ. ನಾನು ನಿಮ್ಮಿಂದಿಗೆ ಇರುತ್ತೇನೆ, ನಿಮ್ಮ ಬದ್ಧತೆಯ ಕುರಿತು ನನಗೆ ಗೌರವವಿದೆ. ಆದರೆ ಈ ದೇಶದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ಅವರಣದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಾವು ಗಮನಿಸಬೇಕಿದೆ...

ನಿಮಗೆ ನೆನಪಿರಲಿ, ಕಳೆದ 105 ದಿನಗಳಿಂದ ‘‘ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್’’ ಪುಣೆ ವಿದ್ಯ್ಯಾರ್ಥಿಗಳು ಈ ಸರಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಠಿರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ? ನೈಜವಾದ ಮಹಾಭಾರತದಲ್ಲಿ ಯುಧಿಷ್ಠಿರ ಎಷ್ಟು ಪರಿಶುದ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಅವನು ದ್ರೋಣರಿಗೆ ‘‘ಅಶ್ವತ್ಥಾಮ ಸತ್ತ’’ ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ. ಆದರೆ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್’’ ನ ಯುಧಿಷ್ಠಿರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . ಇನ್ನೂ ರೋಹಿತ್ ವೇಮುಲಾ ಪ್ರಕರಣ, ನಾನು ಜನಸಂಖ್ಯೆಯ ಒಂದು ಅಂಕಿ-ಅಂಶವನ್ನು ನಿಮಗೆ ನೀಡುವುದು ಮರೆತೆ. ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಭಾರತದಲ್ಲಿ ಕೇವಲ ಶೇ. 3, ಕೇವಲ ಮೂರೇ ಮೂರು ಶೇ. ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನೆಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಆ ಹಿನ್ನೆಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಎಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ಇವರು ಇಂದು ಸಂಸ್ಕೃತ ಹೇರಿಕೆಯನ್ನು ನಮ್ಮ ಮೇಲೆ ಮಾಡುತ್ತಿದ್ದಾರೆ.
ನನಗೆ ಅನ್ನಿಸುವಂತೆ ನಮ್ಮ ಶಿಕ್ಷಣ ಸಚಿವೆಯಾದ ಮಿಸ್ ಇರಾನಿಯವರು ಈ ಹಿಂದೆ ನಟಿಸಿರುವ ಎಲ್ಲ ಧಾರವಾಹಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿ ಪ್ರದರ್ಶಿಸಬೇಕು. ಅದು ಸಂಸ್ಕೃತವನ್ನು ಪ್ರೋತ್ಸಾಹಿಸಲು ಬಹಳ ಸಹಕಾರಿಯಾಗಿರುತ್ತದೆ ಎಂಬುದು ನನ್ನ ಭಾವನೆ. ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಒಬ್ಬರು ಕುಲಪತಿಗಳನ್ನು ಮನಬಂದಂತೆ ಥಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು.
ನೀವು ಈ ಹೋರಾಟದಲ್ಲಿ ಒಬ್ಬರೇ ಅಲ್ಲ ಅಥವಾ ದಾಳಿಗಳು ನಿಮ್ಮ ಮೇಲೆ ಮಾತ್ರ ನಡೆಯುತ್ತಿಲ್ಲ. ಇದು ಇವರ ನಿಜವಾದ ಮುಖ. ಈ ದೇಶದ ಪಿತಾಮಹನಾದ ಗಾಂಧಿಯನ್ನು ಕೊಂದು ಭ್ರಾತೃತ್ವದ ಮಾತನಾಡುವ ಇವರು ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಿದ್ದಾರೆ, ದಯಮಾಡಿ ಸೆರೆಯಿಂದ ನಮ್ಮನ್ನು ಬಿಟ್ಟುಬಿಡಿ. ನಾವು ಎಲ್ಲ ಬಿಟ್ಟು ಒಳ್ಳೆಯ ಹುಡುಗರಂತೆ ವರ್ತಿಸುತ್ತೇವೆ ಎಂದು ಬ್ರಿಟಿಷರ ಮುಂದೆ ಬೇಡಿಕೊಂಡ ನಾಯಕರನ್ನು ಹೊಂದಿದ ಸಂಘಟನೆಯವರು ಇಂದು ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ...
 ಇಂದು ನಾವು ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲ ಭೂತವಾದಿಗಳನ್ನು ಎದುರಿಸಬೇಕಿದೆ. ಒಂದು ಅಂಶ ನಾನು ಕಳೆದ ಕೆಲವು ವರ್ಷಗಳಿಂದ ನೋಡುತ್ತಿದ್ದೇನೆ. ಜೆಎನ್‌ಯು ವಿವಿಧತೆಗೆ, ಭಿನಾಭಿಪ್ರಾಯದ ಚರ್ಚೆಗೆ ಹೆಸರಾಗಿದೆ. ಇಲ್ಲಿರುವ ಎಲ್ಲಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಕಳೆದ ಹತ್ತು ವರ್ಷಗಳಿಂದ ಅತ್ಯಂತ ಕೆಟ್ಟ ಆಡಳಿತದ ವಿರುದ್ಧ ತಾವುಗಳು ಮಾಡುತ್ತಿರುವ ಹೋರಾಟ ನಿಜಕ್ಕೂ ಹೆಮ್ಮೆಯ ವಿಷಯ. ದಯಮಾಡಿ ಈ ಒಗ್ಗಟ್ಟನ್ನು ಕಳೆದುಕೊಳ್ಳಬೇಡಿ. ನಿಮ್ಮ ನಿಮ್ಮ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡೇ ಈ ಸಾಮಾಜಿಕ, ಧಾರ್ಮಿಕ/ಆರ್ಥಿಕ, ಮಾರುಕಟ್ಟೆ ಮೂಲಭೂತವಾದಿಗಳನ್ನು ಎದುರಿಸಿ. ನನಗೆ ನಿಜಕ್ಕೂ ನಿಮ್ಮಗಳ ಮೇಲೆ ಹೆಮ್ಮೆ ಇದೆ...
ಧನ್ಯವಾದಗಳು...
 

Writer - ಪಿ. ಸಾಯಿನಾಥ್

contributor

Editor - ಪಿ. ಸಾಯಿನಾಥ್

contributor

Similar News