ಮೇಕಿಂಗ್ ಹಿಸ್ಟರಿ ವಸಾಹತುಶಾಹಿಯ ಆಳ್ವಿಕೆಗೆ ಪ್ಯೂಡಲಿಸಂ ತಳಹದಿ
ಈ ಅಧ್ಯಾಯ ಕಣ್ತಪ್ಪಿನಿಂದಾಗಿ ಅವಗಣನೆಗೊಳಗಾದ ಇತಿಹಾಸದ ಕಡೆಗೆ ಗಮನಹರಿಸುತ್ತದೆ. ಬ್ರಿಟಿಷ್ ಆಳ್ವಿಕೆಯ ಪ್ರಾರಂಭ ವಸಾಹತುಶಾಹಿ ಮತ್ತು ಫ್ಯೂಡಲ್ ಪದ್ಧತಿಯ ನಡುವೆ ಒಂದು ಗಟ್ಟಿ ಬಾಂಧವ್ಯವನ್ನು ಸ್ಥಾಪಿಸಿತು. ಒಂದೆಡೆ ವಿದೇಶಿ ಬಂಡವಾಳಶಾಹಿತನ, ಮತ್ತೊಂದೆಡೆ ದೇಶೀ ಫ್ಯೂಡಲಿಸಂ; ಎರಡು ಭಿನ್ನ ಮತ್ತು ಐತಿಹಾಸಿಕವಾಗಿ ವಿರುದ್ಧ ನೆಲೆಯಲ್ಲಿ ಕಾರ್ಯನಿರ್ವಹಿಸಿದ ಶಕ್ತಿಗಳ ಸಂಬಂಧ ಭಾರತ ಮತ್ತು ಕರ್ನಾಟಕದ ಸಾಮಾಜಿಕ ಬೆಳವಣಿಗೆಯ ರೀತಿ ಮತ್ತು ವೇಗವನ್ನು ನಿರ್ಧರಿಸಿದವು, ಇವತ್ತಿಗೂ ನಿರ್ಧರಿಸುತ್ತಿವೆ. ಕರ್ನಾಟಕ ಮತ್ತು ಭಾರತದ ಇತಿಹಾಸದಲ್ಲಿ ಆರ್ಥಿಕ ಬದಲಾವಣೆಗಳು ಮತ್ತದಕ್ಕೆ ಸಂಬಂಧಪಟ್ಟಂತಹ ರಾಜಕೀಯ ಏರಿಳಿತಗಳಿಂದ ಮೂಡಿದ ಸಮುದಾಯದ ಚಳವಳಿಗಳು ಫ್ಯೂಡಲಿಸಂನ ಸಾಮಾಜಿಕ ಬೇರುಗಳನ್ನು ಅಲುಗಾಡಿಸಿದ್ದನ್ನು ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದ್ದೇವೆ. ವಸಾಹತುಶಾಹಿ ಆಕ್ರಮಣ ಇದರ ವೇಗವನ್ನು ಬದಲಿಸಿತು. ಸಾಯುತ್ತಿದ್ದ ಫ್ಯೂಡಲ್ ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡ ವಸಾಹತುಶಾಹಿ ಫ್ಯೂಡಲಿಸಂನ ಅಂತ್ಯ ತಡೆಗಟ್ಟಲು ಬಂಡವಾಳಶಾಹಿತನದ ಗೆಳೆತನವನ್ನು ಉಪಯೋಗಿಸಿಕೊಂಡಿತು. ಈ ಅಧ್ಯಾಯದಲ್ಲಿ ಫ್ಯೂಡಲಿಸಂ ಮತ್ತು ವಸಾಹತುಶಾಹಿ ನಡುವಿನ ಅನೈತಿಕ ಮದುವೆ ಹುಟ್ಟಿಸುವ ಪ್ರಶ್ನೆಗಳ ಕಡೆಗೆ, ಅವರ ಸಂಬಂಧದ ರೀತಿ ನೀತಿಗಳು, ಒಬ್ಬರು ಮತ್ತೊಬ್ಬರನ್ನು ಪ್ರಭಾವಿಸಿದ ಬಗೆ, ಇಬ್ಬರೂ ಸೇರಿದ್ದರಿಂದ ರಾಜ್ಯದ ಮೇಲಾದ ಪರಿಣಾಮ, ಐತಿಹಾಸಿಕ ವೈರುಧ್ಯದ ಎರಡು ಶಕ್ತಿಗಳು ಒಂದೇ ಹಾಸಿಗೆ ಹಂಚಿಕೊಳ್ಳುವಷ್ಟು ಹತ್ತಿರವಾದ ಕಾರಣ ಮತ್ತು ಈ ಸಂಬಂಧದಿಂದ ದೇಶೀ ಫ್ಯೂಡಲಿಸಂ ವಿದೇಶಿ ವಸಾಹತುಶಾಹಿಯ ಅಧಿಕೃತ ವಕ್ತಾರನಾಗಿ ರೂಪುಗೊಂಡ ರೀತಿಯ ಕುರಿತು ಗಮನ ಹರಿಸೋಣ.
1. ವಸಾಹತುಶಾಹಿ ಮತ್ತು ಫ್ಯೂಡಲಿಸಂ ನಡುವಿನ ಕಲ್ಯಾಣ
ಬ್ರಿಟಿಷರು ಸಹಕಾರಿ ಒಪ್ಪಂದಕ್ಕೆ ಧಾರವಾಡ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಯ ದೇಸಾಯಿಗಳ ಜೊತೆಗೆ, ಮೈಸೂರಿನ ಒಡೆಯರು ಮತ್ತು ಹೈದರಾಬಾದಿನ ನಿಜಾಮರ ಜೊತೆಗೆ ಸಹಿ ಹಾಕಿದ್ದನ್ನು ನಾವೀಗಾಗಲೇ ನೋಡಿದ್ದೇವೆ. ಅವರೆಲ್ಲರೂ ಒಂದೋ ಊಳಿಗಮಾನ್ಯ ಪದ್ಧತಿಯನ್ನು ನೇರವಾಗಿ ಪ್ರತಿನಿಧಿಸಿದವರು ಅಥವಾ ಊಳಿಗಮಾನ್ಯ ನೆಲೆಯಿಂದ ಹುಟ್ಟಿಬಂದ ರಾಜರು. ವರ್ಷಗಳಿಂದ ಬೆಳೆದು ನಿಂತಿದ್ದ ಈ ಪ್ರತಿನಿಧಿಗಳು, ದೊರೆಯುವ ಸವಲತ್ತುಗಳಿಗಾಗಿ ಬ್ರಿಟಿಷರೊಡನೆ ಸಹಕಾರಿ ಒಪ್ಪಂದಕ್ಕೆ ಸಹಿ ಹಾಕಿದರು. ಮೈಸೂರಿನ ಹೈದರಾಲಿ ಮತ್ತು ಟಿಪ್ಪುವಿನಿಂದ ಸೋಲನುಭವಿಸಿ ತಮ್ಮ ನೆಲೆ ಕಳೆದುಕೊಂಡು ಓಡಿಹೋಗಿದ್ದ ಪಾಳೇಗಾರರು ಬ್ರಿಟಿಷರ ಆಶ್ರಯ ಪಡೆದರು. ವಸಾಹತುಶಾಹಿಯನ್ನು ಅಪ್ಪಿಕೊಳ್ಳಲು ತೋಳಗಲಿಸಿದವರಿಗೆ ಬ್ರಿಟಿಷರ ಸ್ನೇಹವಷ್ಟೇ ತಮ್ಮ ವರ್ಗವನ್ನು ಉಳಿಸಿಕೊಳ್ಳಲಿಕ್ಕಿರುವ ಕೊನೆಯ ಮಾರ್ಗ ಎನ್ನುವುದರ ಅರಿವಿತ್ತು. ಈ ಊಳಿಗಮಾನ್ಯ ದೊರೆಗಳು ಬ್ರಿಟಿಷರ ರಾಜಕೀಯ ವಿಸ್ತರಣೆಗೆ ಅತ್ಯಂತ ಮುಖ್ಯವಾದರು. ಇತಿಹಾಸದ ಚಲನೆಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದ ಒಂದು ಸಾಮಾಜಿಕ ವರ್ಗಕ್ಕೆ ಬ್ರಿಟಿಷ್ ವಸಾಹತುಶಾಹಿ ಆಶ್ರಯ ಕೊಟ್ಟು, ಮುದ್ದಿಸಿ, ಮರಣಮಂಚದ ಮೇಲಿದ್ದ ವ್ಯಕ್ತಿ ಮತ್ತಷ್ಟು ವರುಷಗಳ ಕಾಲ ಬದುಕುಳಿಯುವಂತೆ ಮಾಡಿತು. ಪಾಳೇಗಾರರು ಮತ್ತು ದೇಶಗತಿಗಳ ಉಸಿರು ಕಾಪಾಡಿದ ವಸಾಹತುಶಾಹಿ ವಿದ್ರೋಹದ ಚಿಂತನೆಗಳು ಮತ್ತೆ ಮೊಳಕೆಯೊಡೆಯದಿರುವ ಕಡೆಗೂ ಗಮನ ಹರಿಸಿತು.
ಬೆಂಗಳೂರಿನ ಬಳಿಯ ಬಟ್ಟೆ ಉದ್ಯಮದ ಊರಾದ ವಲ್ಲೂರಿನ ಬಗ್ಗೆ ಫ್ರಾನ್ಸಿಸ್ ಬುಚನನ್ ಹೀಗೆ ಹೇಳುತ್ತಾನೆ: ‘‘ವಲ್ಲೂರಿನಲ್ಲಿ ಅರಮನೆಯಂತಹ ಒಂದು ಮನೆ, ಕೋಟೆ, ಕೋಟೆಯೊಳಗೊಂದು ನಗರ ಮತ್ತು ಪುಟ್ಟ ಉಪನಗರವಿತ್ತು. ಅರಮನೆಯಲ್ಲಿ ಹದಿನೈದು ಜನರ ರಾಜಪೂತ ಕುಟುಂಬವಿತ್ತು. ಇವರ ಹಿರೀಕರು ಈ ಜಾಗದ ಮತ್ತು ನೆರೆಹೊರೆಯ ಹಳ್ಳಿಗಳ ಜಾಗೀರುದಾರರಾಗಿದ್ದು; ಅವರ ವಾರ್ಷಿಕ ಆದಾಯ 11,000 ಪಗೋಡಾಗಳಷ್ಟಿತ್ತು (33,000 ರುಪಾಯಿ). ಹೈದರಾಲಿಯಿಂದ ಅವರು ಉಚ್ಚಾಟಿತರಾದರು; ಆದರೆ ಲಾರ್ಡ್ ಕಾರ್ನ್ ವಾಲಿಸ್ ನಡೆಸಿದ ಯುದ್ಧದ ಸಂದರ್ಭದಲ್ಲಿ ಅವರನ್ನು ಮತ್ತೆ ಜಾಗೀರುದಾರರನ್ನಾಗಿ ಮಾಡಿದ್ದು ಕೊಲೊನಲ್ ರೀಡ್. ಶಾಂತಿಯ ದಿನಗಳ ನಂತರ ಪುನಃ ಅವರನ್ನು ಉಚ್ಚಾಟಿಸಿದ್ದು ಟಿಪ್ಪು?.. ಈಗಿನ ಮೈಸೂರು ಸರಕಾರ (ಅಸಲಿಗೆ ಬ್ರಿಟಿಷರೇ ಆಡಳಿತ ನಡೆಸುತ್ತಿದ್ದವರು ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು) ಆ ಕುಟುಂಬ ವಂಶಸ್ಥರಿಗೆ ವಾರ್ಷಿಕ 400 ಪಗೋಡಾಗಳನ್ನು (1,200 ರೂಪಾಯಿ) ನಿವೃತ್ತಿ ವೇತನದಂತೆ ನೀಡುತ್ತಾ ಅರಮನೆಯಲ್ಲಿ ಬದುಕು ನಡೆಸಲು ಅವಕಾಶ ಮಾಡಿಕೊಟ್ಟಿದೆ.’’ (37)
ಬುಚನನ್ನಿನ ಬರಹಗಳು ಮೈಸೂರಿನ ಪಾಳೇಗಾರರ ಇಂತಹ ಅನೇಕ ಕಥನಗಳನ್ನು ತೆರೆದಿಡುತ್ತದೆ. ಹೈದರಾಲಿ ಮತ್ತು ಟಿಪ್ಪುವಿನ ಆಡಳಿತಾವಧಿಯಲ್ಲಿ ಕೊನೆಯ ಉಸಿರನ್ನು ಬಿಗಿ ಹಿಡಿದುಕೊಂಡಿದ್ದವರು ಬ್ರಿಟಿಷರ ವಿಜಯದೊಂದಿಗೆ ಶಾಂತಿ ಒಪ್ಪಂದಗಳನ್ನು ಮಾಡಿಕೊಂಡು ಅಳಿದುಳಿದ ಊಳಿಗಮಾನ್ಯ ಪದ್ಧತಿಯ ವೈಭವಗಳನ್ನು ಮರಳಿ ಗಳಿಸಿಕೊಂಡರು.
ಕಿರ್ಮಾನಿ ಹೇಳುತ್ತಾರೆ: ‘‘ಗುಪ್ತಚರ ವಿಭಾಗದ ಮುಖ್ಯಸ್ಥ ಕೊಲೊನಲ್ ರೀಡ್ ಅಂಬೂರಿನ ಹೊಣೆ ಹೊತ್ತುಕೊಂಡಾಗ ಹಣ, ಸಿಹಿ ಮಾತುಗಳು ಮತ್ತು ಕಾರುಣ್ಯದ ಕೆಲಸಗಳಿಂದ ಬಾಳಗಾಟಿನ ಎಲ್ಲ ಪಾಳೇಗಾರರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ. ನವಾಬರ ಕ್ರೌರ್ಯ ಮತ್ತು ದಬ್ಬಾಳಿಕೆಯಿಂದ ಸುಲ್ತಾನನ ನಿರಂಕುಶ ವ್ಯಕ್ತಿತ್ವ ಸಹಿಸಲಾಗದೆ ತಮ್ಮ ಸ್ವಂತ ದೇಶ ತೊರೆದಿದ್ದ ಪಾಳೇಗಾರರು ಕರ್ನಾಟಿಕ್ ಪಯನಗಾಟಿನಲ್ಲಿ ನಿರಾಶ್ರಿತರಾಗಿ ನೆಲೆ ಕಂಡುಕೊಂಡಿದ್ದರು. ಗುಂಗೂಂಡಿ ಪಾಳದ ಪಾಳೇಗಾರ, ಬೈರೇ ಕೋರಿನ ಮಕ್ಕಳು, ಚಿಕ್ಕಬಳ್ಳಾಪುರದ ಪಾಳೇಗಾರ, ವೆಂಕಟಗಿರಿ ಕೋಟೆಯ ಪಾಳೇಗಾರ ಪುದು ನಾಯರ್, ಪುಂಗಾನೂರಿನ ಮುಖ್ಯಸ್ಥರ ಜೊತೆಗೆ ಮದನಪಲ್ಲಿ, ಆನೇಕಲ್ಲಿನ ಪಾಳೇಗಾರರು ತಮ್ಮ ನೆಲೆ ನೆಲವನ್ನು ಕಳೆದುಕೊಂಡಿದ್ದರು. ಇವರೆಲ್ಲರಿಗೂ ರಕ್ಷಣೆ ನೀಡುವುದಾಗಿ ಲಿಖಿತ ಭರವಸೆ ನೀಡಲಾಯಿತು. ಅವರವರ ಜಿಲ್ಲೆಗಳಿಗೆ ಸಂಪನ್ಮೂಲ ಮತ್ತು ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಬ್ರಿಟಿಷ್ ಸೈನ್ಯಕ್ಕೆ ರವಾನಿಸುವ ಶರತ್ತಿನ ಮೇಲೆ ಕಳುಹಿಸಲಾಯಿತು. ಯಾವುದೇ ಮಾರ್ಗದಿಂದ ತಮ್ಮ ತಮ್ಮ ಜಿಲ್ಲೆ ಮತ್ತು ತಾಲೂಕುಗಳನ್ನು ವಶಪಡಿಸಿಕೊಳ್ಳುವ ಅಧಿಕಾರವೂ ದೊರೆಯಿತು...’’ (38)
ಮದ್ರಾಸಿನ ಗವರ್ನರ್ ಮೆಕ್ ಕಾರ್ಟ್ನಿ 1782ರಲ್ಲಿ ಬರೆದ ಪತ್ರದಲ್ಲಿ: ‘‘ಪಾಳೇಗಾರರ ಸಹಾಯದೊಂದಿಗೆ ನಿರೀಕ್ಷಿಸಬಹುದಾದ ಮುನ್ನಡೆಗಾಗಿ... (ಪದಗಳು ಅಳಿಸಿಹೋಗಿವೆ)...ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹವನ್ನು ನೀಡಲಾಗುತ್ತಿದೆ...ಅವರ ನ್ಯಾಯಬದ್ಧ ಹಕ್ಕುಗಳನ್ನು ಕಂಪನಿ ಸರಕಾರ ರಕ್ಷಿಸುವುದೂ ಇದರ ಭಾಗವಾಗಿದೆ’’ (39)ಪತ್ರದ ಮುಂದಿನ ಭಾಗದಲ್ಲಿ ಮೆಕ್ ಕಾರ್ಟ್ನಿ ಮತ್ತು ಚಾರ್ಲ್ಸ್ ಸ್ಮಿತ್ 1782ರಲ್ಲಿ 13 ಪಾಳೇಗಾರರಿಗೆ ನೀಡಿದ ಕರಾರು ಪತ್ರದ ವಿವರಗಳಿವೆ.
1782ರ ನವೆಂಬರಿನಲ್ಲಿ ಬರೆದ ಮತ್ತೊಂದು ಪತ್ರದಲ್ಲಿ ಮೆಕ್ ಕಾರ್ಟ್ನಿ: ‘‘ಹೈದರಾಲಿಯಿಂದ ನೆಲೆ ಕಳೆದುಕೊಂಡಿದ್ದ ಅನೇಕ ಪಾಳೇಗಾರರು ಮತ್ತು ಮುಖ್ಯಸ್ಥರಲ್ಲಿ ಕೆಲವರನ್ನು ಕಳೆದ ವರುಷ ಒಪ್ಪಂದಕ್ಕೆ ಒಳಪಡಿಸಿತ್ತು. ಇವರಿಗೆ ಹೈದರಾಲಿಯ ಸಾಮ್ರಾಜ್ಯದ ಮೇಲೆ ಪೂರ್ಣಪ್ರಮಾಣದ ಯುದ್ಧವನ್ನಲ್ಲದಿದ್ದರೂ ತಕ್ಕಮಟ್ಟಿಗಿನ ಗಲಭೆ ಗೊಂದಲಗಳನ್ನು ಸೃಷ್ಟಿಸುವ ಆಸೆ ಮತ್ತು ಮನಸ್ಸಿದೆ...’’(40)
ಹೈದರಾಲಿ ಮತ್ತು ಟಿಪ್ಪುವಿನ ವಿರುದ್ಧ ವಸಾಹತುಶಾಹಿ ಮತ್ತು ಫ್ಯೂಡಲಿಸಂ ಜೊತೆಯಾಗಿ ಯುದ್ಧ ಮಾಡಿತು.
ಬಳ್ಳಾರಿ ಜಿಲ್ಲೆಯಲ್ಲಿ ಪಾಳೇಗಾರ ಕುಟುಂಬಗಳಿಗೆ ಬ್ರಿಟಿಷರು ಘೋಷಿಸಿದ ಸವಲತ್ತುಗಳ ಬಗ್ಗೆ ಜೆ.ಸಿ.ದುವಾ ವಿವರವಾಗಿ ಬರೆಯುತ್ತಾರೆ. (41) ಪಾಳೇಗಾರರಿಗೆ ಕೊಡಲಾಗುತ್ತಿದ್ದ ಪಿಂಚಣಿ ಎಷ್ಟು ನಿರಂತರವಾಗಿತ್ತೆಂದರೆ ‘ಸ್ವಾತಂತ್ರ್ಯ’ ಬಂದ ಎರಡು ದಶಕಗಳ ನಂತರ 1969ರಲ್ಲಿ ತಹಶೀಲ್ದಾರ್ ಕಚೇರಿಗೆ ಭೇಟಿ ಕೊಟ್ಟಾಗ ಪಾಳೇಗಾರರ ವಂಶಸ್ಥರು ಸರಕಾರದಿಂದ ಇನ್ನೂ ಪಿಂಚಣಿ ನೀಡುತ್ತಿದ್ದ ವಿಷಯ ತಿಳಿಯಿತು! (42)
ಬುಚನನ್ ಹೇಳುತ್ತಾರೆ: ‘‘ಎಲ್ಲ ಪಾಳೇಗಾರರಿಗೆ ಅವರವರ ಆಸ್ತಿಪಾಸ್ತಿಯನ್ನು ಹಿಂದಿರುಗಿಸಲಾಯಿತು ಮತ್ತು ಬಂಗಾಲದ ಜಮೀನುದಾರರಿಗೆ ರೂಪಿಸಿದ ನೀತಿಗಳನ್ನು ಹೇರಲಾಯಿತು. ಒಂದು ನಿರ್ಧಿಷ್ಟ ಮೊತ್ತವನ್ನು ಬಾಡಿಗೆಯಾಗಿ ನೀಡಬೇಕಿತ್ತು ಅಥವಾ ಕಪ್ಪಕಾಣಿಕೆಯನ್ನು ಒಪ್ಪಿಸಬೇಕಿತ್ತು. ಆದರೆ ಜನರ ಮೇಲೆ ಇವರಿಗೆ ಯಾವುದೇ ನ್ಯಾಯಾಧಿಕಾರ ನೀಡಲಿಲ್ಲ; ಜನರ ರಕ್ಷಣೆಗೆ ಶಿರಸ್ತೇದಾರರನ್ನು ಸಂಬಳದ ಮೇಲೆ ಸರಕಾರವೇ ನೇಮಿಸಿತು. ರೆವೆನ್ಯೂ ಮತ್ತು ಪೋಲೀಸ್ ಅಧಿಕಾರಿಗಳ ಖರ್ಚನ್ನು ಪಾಳೇಗಾರರು ನೋಡಿಕೊಳ್ಳಬೇಕಿತ್ತು. ಮೊದಲಿನ ಆದಾಯಕ್ಕೆ ಹೋಲಿಸಿದರೆ ಈಗವರಿಗೆ ಆಗುತ್ತಿದ್ದ ಲಾಭ ನಾಲ್ಕರಲ್ಲಿ ಒಂದರಷ್ಟಾದರೂ ದೇಶದ ಪರಿಸ್ಥಿತಿ ಸುಧಾರಿಸಿದಂತೆ ಆದಾಯ ಬಹಳಷ್ಟು ಹೆಚ್ಚಾಗುತ್ತದೆ.’’ (43)
ಹಳೆಯ ಮೈಸೂರಿನಲ್ಲಿ ಎರಡು ರೀತಿಯಿಂದ ವಸಾಹತುಶಾಹಿ ಫ್ಯೂಡಲಿಸಮ್ಮಿನ ಜೊತೆ ಹೊಂದಿಕೊಂಡಿತು. ಒಂದೆಡೆ ಮೈಸೂರು ಸಾಮ್ಯಾಜ್ಯದ ಹೃದಯ ಭಾಗದಲ್ಲಿ ಪಾಳೇಗಾರರ ನಿರ್ನಾಮವಾಗಿಬಿಟ್ಟಿತ್ತು. ಉಳಿದ ಕೆಲವೇ ಕೆಲವು ಪಾಳೇಗಾರರಿಗೆ ಪಿಂಚಣಿ ನೀಡಿ ಹಳ್ಳಿಗಳ ಪಟೇಲರನ್ನಾಗಿ ಮಾಡಲಾಯಿತು. ಮತ್ತೊಂದೆಡೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿಗಳಿಗೆ ಹೊಂದಿಕೊಂಡ ಭಾಗಗಳಲ್ಲಿ ಪಾಳೇಗಾರ ಪದ್ಧತಿ ಇನ್ನೂ ಸಶಕ್ತವಾಗಿತ್ತು; ಕಾರಣ ಟಿಪ್ಪು ಸುಲ್ತಾನ ಅವರ ವಿರುದ್ಧ ಹೋರಾಡಲಾರಂಭಿಸಿದ್ದು ತುಂಬ ತಡವಾಗಿ. ಈ ಪಾಳೇಗಾರರು ಜಮೀನ್ದಾರರಾದರು ಮತ್ತು ರೈತ ? ಕೂಲಿಯವರಿಂದ ತೆರಿಗೆ ವಸೂಲಿ ಮಾಡುತ್ತಿದ್ದರು.
ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನೋಡಿದಂತೆ ಮಲೆನಾಡು ಮತ್ತು ಕರಾವಳಿ ದೊಡ್ಡ ದೊಡ್ಡ ಭೂಮಾಲಕರ ಪ್ರದೇಶವಾಗಿತ್ತು. ಕರಾವಳಿಯಲ್ಲಿ ದೊಡ್ಡ ಭೂಮಾಲೀಕರನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಾಯಿಸಿದರು, ಬಂಧಿಸಿದರು, ಓಡಿಸಿದರು, ‘‘ಸ್ಥಳೀಯ ತೆರಿಗೆ ಸಂಗ್ರಹಕಾರರ ಜಾಗದಲ್ಲಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಸೈನಿಕ ಅಧಿಕಾರಿಗಳು ನೇಮಕವಾಗಿದ್ದರು’’; ಭೂಮಿಯನ್ನು ಗುತ್ತಿಗೆಗೆ ಪಡೆದಿದ್ದ ಮೂಲಗೇಣಿದಾರರು ಕೃಷಿ ಮಾಡುತ್ತಿದ್ದುದು ಕಡಿಮೆ. (44) ಉಪಗುತ್ತಿಗೆ ನೀಡುತ್ತದ್ದ ಮೂಲಗೇಣಿದಾರರು ಭೂಮಾಲೀಕರ ಅನುಪಸ್ಥಿತಿಯಲ್ಲಿ ತಾವೇ ಒಡೆಯರಾದರು. ಮೂಲಗೇಣಿದಾರರ ಬಳಿ ಜೀತದ ಕೆಲಸಗಾರರಿದ್ದರು.
ಕರಾವಳಿ 1800-1802ರಲ್ಲಿ ಬ್ರಿಟಿಷರ ಕೈವಶವಾದ ತಕ್ಷಣ ಅದರ ಕುರಿತು ನಿರ್ಣಯಗಳನ್ನು ತೆಗೆದುಕೊಂಡ ಮನ್ರೋ ತನ್ನ ಕೆಲಸವನ್ನು ಪೂರ್ಣಗೊಳಿಸಿದ ಕುರಿತು ಈ ರೀತಿ ಹೇಳುತ್ತಾನೆ: ‘‘ದೇಶವನ್ನು ದೊಡ್ಡ ಎಸ್ಟೇಟುಗಳಾಗಿ ವಿಭಾಗಿಸಿದ ಮೇಲೆ, ಪಟೇಲರಿಗೆ ಮತ್ತು ಚಿಕ್ಕ ಎಸ್ಟೇಟಿನ ಮಾಲಕರಿಗೆ ಒಪ್ಪಿಸಬೇಕು. ತನ್ನ ಭೂಭಾಗವನ್ನು ಬಿಟ್ಟು ಉಳಿದೆಡೆಯ ಸ್ಥಿರಾಸ್ತಿಯಲ್ಲಿ ಯಾವುದೇ ಪಾಲಿಲ್ಲದ ಕಾರಣ ಇವರು ಅವರ ಜಹಗೀರಿಗಷ್ಟೇ ದೊರೆಯ ರೀತಿ ಉಳಿಯುತ್ತಾರೆ. ವೈಫಲ್ಯಗಳಿಗೂ ಅವರೇ ಹೊಣೆಗಾರರಾಗುವುದರಿಂದ ಈ ಕೆಳಗಿನ ಸವಲತ್ತುಗಳನ್ನು ಅವರಿಗೆ ನೀಡಲಾಗುವುದು. ಮೊದಲನೆಯದಾಗಿ ಜಮಾ ಆದ ಹಣದಲ್ಲಿ ಎರಡು ಪರ್ಸೆಂಟಿನಷ್ಟು ರಿಯಾಯತಿಯನ್ನು ಈಗಾಗಲೇ ನಾನು ಪ್ರಸ್ತಾಪಿಸಿರುವ ಕಡಿತದಲ್ಲಿ ಸೇರಿಸಬೇಕು. ಉಳಿದದ್ದು ಚಿಕ್ಕ ಭೂಮಾಲಕರು ಮತ್ತು ರೈತರು ತುಂಬಿ ಕೊಡಬೇಕು. ಎರಡನೆಯದಾಗಿ ಒಣ ಭೂಮಿಯ ಮಾಲೀಕತ್ವ ಹೊಂದಿರುವವರೊಡನೆ ಏರ್ಪಾಡು ಮಾಡಿಕೊಂಡು ವ್ಯವಸಾಯ ಪ್ರಾರಂಭಿಸಿದ ಎರಡನೆ ವರ್ಷದಿಂದ ಬಿದನೂರು ಕಾಯ್ದೆಯ ಪ್ರಕಾರ ಹಣ ಪಾವತಿಸಬೇಕು. ಮೂರನೆಯದಾಗಿ ಕೆಳಜಾತಿಯವರಿಗೆ ಉತ್ತರಾಧಿಕಾರಿಗಳಿಲ್ಲದಿದ್ದಲ್ಲಿ ಇದುವರೆಗೆ ತಮ್ಮ ಆಸ್ತಿಯನ್ನು ಸರಕಾರಕ್ಕೆ ವಹಿಸುತ್ತಿದ್ದರು; ಇನ್ನು ಮುಂದೆ ಪಟೇಲರಿಗೆ ಒಪ್ಪಿಸಬೇಕು. ಮತ್ತು ಆ ಆಸ್ತಿ ಪಟೇಲರ ಸ್ವಂತ ಆಸ್ತಿಯಂತಾಗುತ್ತದೆ. ... ನಾನು ಅನುಮೋದಿಸಿದ ಈ ನಿಯಮಗಳು ಕೆನರಾದ ಎಲ್ಲ ಭಾಗಗಳಿಗೆ ಮತ್ತು ಅಂಕೋಲಾ, ಸುಂಡಾ ಹಾಗೂ ಬಿಳಗಿಯ ಬಹುತೇಕ ಭಾಗಗಳಿಗೆ ಅನ್ವಯಿಸುತ್ತದೆ?.’’ (45) ಬ್ರಿಟಿಷರ ಎಲ್ಲ ಯತ್ನಗಳು ಸ್ಥಳೀಯ ಆಡಳಿತದಲ್ಲಿ ಭೂಮಾಲಕರ ವರ್ಗವನ್ನು ಸಬಲಗೊಳಿಸುವುದಾಗಿತ್ತು. ಈ ಭೂಮಾಲೀಕರು ಕೆಲವೇ ದಶಕಗಳ ಹಿಂದೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಆಡಳಿತಾವಧಿಯಲ್ಲಿ ನಿರ್ನಾಮವಾಗಿಬಿಟ್ಟಿದ್ದರು. ಮೂಡಬಿದಿರೆಯಲ್ಲಿನ ಭೂವ್ಯಾಜ್ಯಗಳನ್ನು ಪರಿಹರಿಸುವ ಸಂದರ್ಭದಲ್ಲಿ (ಅಕ್ಟೋಬರ್ 1800) ಮನ್ರೋ ಬರೆದ ಪತ್ರವೊಂದರಲ್ಲಿ: ‘‘ಭೂವ್ಯಾಜ್ಯಗಳ ಪರಿಹಾರವನ್ನು ಭೂಮಾಲಕರೊಡನೆ ಮಾಡಲಾಯಿತು. ಭೂಮಾಲಕರಿಲ್ಲದ ಕಡೆಗಳಲ್ಲಿ ಮೂಲಗೇಣಿದಾರರೊಡನೆ ಭೂವ್ಯವಹಾರ ನಡೆಸಲಾಯಿತು...’’ (46) ಕುರುಪ್‌ನ ಮಾತುಗಳನ್ನು ಉಲ್ಲೇಖಿಸುತ್ತ ಶಾಮ್ ಭಟ್ ಮನ್ರೋನ ಪರಿಹಾರಗಳ ಬಗ್ಗೆ: ‘‘ಕಾಸರಗೋಡಿನ (ಹಳೆಯ ಬೇಕಲ್) ಭೂಮಾಲಕತ್ವ ಮತ್ತು ಕೃಷಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿದ ಕೆ.ಕೆ.ಎನ್.ಕುರುಪ್ ಹೇಳುತ್ತಾರೆ: ‘ವಿದ್ವಾಂಸರಾದ ಆರ್.ಸಿ.ದತ್ ರವರು ಮನ್ರೋನ ರೈತವಾರಿ ಪದ್ಧತಿ ಭೂಮಿಯ ಮಾಲಕತ್ವವನ್ನು ಗೇಣಿ ಮಾಡುತ್ತಿದ್ದ ರೈತರಿಗೆ ಮತ್ತು ಕೂಲಿಯವರಿಗೆ ನೀಡುವುದೆಂದು ಅಭಿಪ್ರಾಯ ಪಟ್ಟರೂ ಅಸಲಿಗೆ ಮನ್ರೋನ ರೈತವಾರಿ ಪದ್ಧತಿ ಭೂಮಿಯ ಏಕಸ್ವಾಮ್ಯವನ್ನು ಸಾರುತ್ತ, ಸಾವಿರಾರು ಎಕರೆ ಜಮೀನುಗಳನ್ನು ವ್ಯವಸಾಯವೇ ಮಾಡದ ಜಮೀನ್ದಾರರ ಪಾಲು ಮಾಡಿತ್ತು. ದಕ್ಷಿಣ ಕನ್ನಡದಲ್ಲಿ ಮನ್ರೋ ಮಾಡಿದ್ದೂ ಇದನ್ನೇ. ಕೆನರಾದಲ್ಲಿ ಥಾಮಸ್ ಮನ್ರೋ ಪರಿಚಯಿಸಿದ ರೈತವಾರಿ ಪದ್ಧತಿಯಲ್ಲಿ ‘ಭೂಮಿಯ ಮಾಲಕತ್ವದ ನಿರ್ಧಾರವಾಗುತ್ತಿದ್ದುದು ಹಕ್ಕು ಪತ್ರ ಅಥವಾ ಮೂಲಪಹಣಿ ಹೊಂದಿದ್ದ ಆಧಾರದ ಮೇಲೆ. ಕೃಷಿ ಮಾಡುತ್ತಿದ್ದರೇ ಇಲ್ಲವೇ ಎನ್ನುವುದು ಮುಖ್ಯವಾಗುತ್ತಿರಲಿಲ್ಲ’.’’ (47)