ಗುಜರಾತ್‌ನ ನಕಲಿ ಎನ್‌ಕೌಂಟರ್‌ಗಳ ಇತಿಹಾಸ
2004ರಲ್ಲಿ ಗುಜರಾತ್‌ನಲ್ಲಿ ಗುಂಡಿಗೆ ಬಲಿಯಾದ 19ರ ಹರೆಯದ ಮುಂಬರ ನಿವಾಸಿ ಇಶ್ರತ್ ಜಹಾನ್ ಇಂದು ಮತ್ತೆ ಮತ್ತೆ ರಾಜಕೀಯದ ಆಟದಲ್ಲಿ ಕೊಲೆಯಾಗುತ್ತಿದ್ದಾಳೆ ಹಾಗೂ ಭಯೋತ್ಪಾದಕಿ ಎಂಬ ಹಣೆಪಟ್ಟಿಗೊಳಗಾಗುತ್ತಿದ್ದಳು. ಈಗ ಇಶ್ರತ್ ಲಷ್ಕರೆತ್‌ಯ್ಯಿಬಾದದ ಭಯೋತ್ಪಾದಕಿ ಆಗಿದ್ದಳೇ ಇಲ್ಲವೇ ಎಂಬ ಬಗ್ಗೆ ಎನ್.ಡಿ.ಎ ಹಾಗೂ ಯುಪಿಎಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಆದರೆ ಈ ರಾಜಕೀಯ ಫುಟ್ಬಾಲ್ ಆಟದ ನಡುವೆ ಒಂದು ಮುಖ್ಯ ವಾಸ್ತವ ತೆರೆಯ ಮರೆಗೆ ಸರಿದು ಹೋಗುತ್ತಿದೆ. ಅದು ಗುಜರಾತ್‌ಗಿರುವ ನಕಲಿ ಎನ್‌ಕೌಂಟರ್‌ಗಳ ಇತಿಹಾಸದ್ದು. ಈ ಎಲ್ಲ ರಾಜಕೀಯ ಆರೋಪ-ಪ್ರತ್ಯಾರೋಪಗಳ ಚರ್ಚೆಯಿಂದ ಸ್ವಲ್ಪ ಹೊತ್ತು ಹಿಂದೆ ಸರಿದು ನಮಗೆ ಲಭ್ಯವಿರುವ ದೇಶದ ನ್ಯಾಯಾಲಯಗಳಲ್ಲಿ ಸಾಬೀತಾಗಿರುವ ವಾಸ್ತವಗಳತ್ತ ಒಮ್ಮೆ ಗಮನ ಹರಿಸೋಣ. ಗುಜರಾತ್ ಸರಕಾರ ಸ್ವತ: ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡ ವಾಸ್ತವ - ಅದು ಇಶ್ರತ್‌ನನ್ನು ಕೊಂದು ಹಾಕಿದೆ ಎಂಬುದು. ಆದರೆ ಹೀಗೆ ಗುಜರಾತ್ ಸರಕಾರದಿಂದ ವಿವಾದಿತ ನಕಲಿ ಎನ್‌ಕೌಂಟರ್‌ನಲ್ಲಿ ಬಲಿಯಾಗಿರುವುದು ಇಶ್ರತ್ ಮಾತ್ರ ಅಲ್ಲ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್ ಸರಕಾರ ಹಲವು ನಕಲಿ ಎನ್‌ಕೌಂಟರ್‌ಗಳ ವಿವಾದಕ್ಕೆ ಸಿಲುಕಿದೆ. ಈ ಎಲ್ಲ ಪ್ರಕರಣಗಳಲ್ಲೂ ಪೊಲೀಸರ ವಾದ ಹಾಗು ಕಾರ್ಯ ವೈಖರಿ ಒಂದೇ ಆಗಿತ್ತು. ಸಣ್ಣ ಪುಟ್ಟ ಗೂಂಡಾಗಳನ್ನು ಭಯೋತ್ಪಾದಕರು ಎಂದು ಬಿಂಬಿಸುವುದು, ಅವರು ಮೋದಿಯನ್ನು ಕೊಲ್ಲಲು ಬಂದಿದ್ದರು ಹಾಗೂ ಅವರನ್ನು ಬಂಧಿಸಲು ಪ್ರಯತ್ನಿಸುವಾಗ ತಪ್ಪಿಸಿಕೊಳ್ಳಲು ಯತ್ನಿಸಿದರು ಎಂದು ಹೇಳಿ ಅವರನ್ನು ಎನ್‌ಕೌಂಟರ್‌ನಲ್ಲಿ ಮುಗಿಸುವುದು-ಇದು ಗುಜರಾತ್‌ನ ಐಪಿಎಸ್ ಅಧಿಕಾರಿ ಡಿ ಜಿ ವಂಝಾರ ನೇತೃತ್ವದ ಎನಕೌಂಟರ್ ತಜ್ಞರ ಸಾಮಾನ್ಯ ವಿಧಾನವಾಗಿತ್ತು. ಇಶ್ರತ್‌ಗೆ ಮೊದಲು ಎನ್‌ಕೌಂಟರ್‌ಗೆ ಬಲಿಯಾದ ಸಮೀರ್ ಖಾನ್ ಪ್ರಕರಣವನ್ನೇ ನೋಡಿ: ಸಮೀರ್ ಪಾಕಿಸ್ತಾನಕ್ಕೆ ಹೋಗಿ ಜೈಷೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯಲ್ಲಿ ತರಬೇತಿ ಪಡೆದಿದ್ದ. ಅಲ್ಲಿಂದ ವಾಪಸ್ ಬಂದ ಬಳಿಕವೂ ರಾವಲ್ಪಿಂಡಿಯಲ್ಲಿರುವ ಉಗ್ರರೊಂದಿಗೆ ಸಂಪರ್ಕದಲ್ಲಿದ್ದ ಎಂದು ಗುಜರಾತ್ ಪೊಲೀಸರು ಹೇಳಿದ್ದರು. ಇಶ್ರತ್‌ನ ಕುರಿತು ಹೇಳಿದ ಹಾಗೆ ಆತನ ಬಗ್ಗೆಯೂ ಬೇಹು ಇಲಾಖೆಯಿಂದ ಮಾಹಿತಿ ಇತ್ತು ಹಾಗೂ ಆತ ಅಹ್ಮದಾಬಾದ್‌ಗೆ ಮೋದಿಯನ್ನು ಕೊಲ್ಲಲು ಬರುತ್ತಿದ್ದ ಎಂದೂ ಪೊಲೀಸರು ಹೇಳಿದ್ದರು . ಆದರೆ ಗುಜರಾತ್ ಸರಕಾರ ಇದಕ್ಕೆ ತದ್ವಿರುದ್ಧ ತೀರ್ಪು ನೀಡಿತು. ಸಮೀರ್ ಪಾಕಿಸ್ತಾನಕ್ಕೆ ಹೋಗಿದ್ದಕ್ಕೆ ಯಾವುದೇ ಸಾಕ್ಷಿ ಇಲ್ಲ. ಆಟ ಪಾಕ್‌ಗೆ ಕಾಲಿಡಲೇ ಇಲ್ಲ. ಹಾಗಾಗಿ ಇಂತಹ ಆರೋಪ ಮಾಡಿದ ತನಿಖಾ ಸಂಸ್ಥೆ (ಗುಜರಾತ್ ಪೊಲೀಸ್ ) ವಿರುದ್ಧವೇ ಸಂಶಯ ಮೂಡುತ್ತದೆ ... ಎಂದು ಗುಜರಾತ್ ಹೈಕೋರ್ಟ್ ನೇರವಾಗಿ ಹೇಳಿತು. ಮತ್ತೆ ಸೊಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲೂ ಗುಜರಾತ್ ಪೊಲೀಸರು ಮತ್ತೆ ಅದೇ ರಾಗ ಹಾಡಿದರು. ಆದರೆ ಅದು ಹೆಚ್ಚು ದಿನ ನಡೆಯಲಿಲ್ಲ. ಕೊನೆಗೆ ರಾಜ್ಯ ಸರಕಾರವೇ ಸೊಹ್ರಾಬುದ್ದೀನ್ ಹಾಗು ಆತನ ಪತ್ನಿ ಕೌಸರ್ ಭೀ ಅವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಮುಗಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಳ್ಳಲೇಬೇಕಾಯಿತು. ಈಗ ಈ ಚರ್ಚೆ ನಡೆಯುತ್ತಿರುವಾಗ ನಮಗೆಲ್ಲರಿಗೂ ಒಂದು ವಿಷಯ ಸ್ಪಷ್ಟವಾಗಿ ತಿಳಿದಿರಬೇಕು. ಏನೆಂದರೆ ಯಾವುದೇ ಸರಕಾರಕ್ಕೆ ಯಾರನ್ನೂ ನ್ಯಾಯಯುತ ವಿಚಾರಣೆ ನಡೆಸದೆ ಕೊಂದು ಬಿಡುವ ಅಧಿಕಾರವಿಲ್ಲ. ಅಜ್ಮಲ್ ಕಸಬ್‌ಗೂ ನ್ಯಾಯಯುತ ವಿಚಾರಣೆಯ ಹಕ್ಕು ನೀಡಿದ ದೇಶ ನಮ್ಮದು. ಇನ್ನೊಂದು ಬಹುಮುಖ್ಯ ಪ್ರಶ್ನೆ: ಇಶ್ರತ್ ಲಷ್ಕರ್ ಉಗ್ರೆಯೇ ಆಗಿದ್ದಾಳೆ ಎಂದು ರಾಜ್ಯ ಸರಕಾರಕ್ಕೆ ಸ್ಪಷ್ಟ ಆಗಿದ್ದರೂ ಆಕೆಯನ್ನು ಹಾಗೆ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುವ ಅಗತ್ಯವೇನಿತ್ತು ? ಅದೇ ಪ್ರಶ್ನೆ ಸಮೀರ್ ಖಾನ್ ಹಾಗೂ ಸೊಹ್ರಾಬುದ್ದೀನ್ ಪ್ರಕರಣದಲ್ಲೂ ಅನ್ವಯವಾಗುತ್ತದೆ.