ನಿಜಕ್ಕೂ ಭಾರತ ಪೋಲಿಯೊ ಮುಕ್ತವೇ?

Update: 2016-03-03 18:18 GMT

ಪೋಲಿಯೊ  ವೈರಸ್‌ನಿಂದಾಗಿ ಈಗಲೂ ಅಂಗ ಊನತೆಗೊಳಗಾಗುತ್ತಿರುವ ಮಕ್ಕಳು
ಅರ್ಶ್ ಸಿಂಗ್ ಕೇವಲ ಒಂಬತ್ತು ತಿಂಗಳ ಮಗುವಾಗಿದ್ದಾಗ 2013ರಲ್ಲಿ ತನ್ನ ದೇಹದ ಎಡಬದಿಯ ಬಲವನ್ನು ಕಳೆದುಕೊಂಡ. ಒಂದು ವೈರಸ್ ಆತನ ಆ ಭಾಗದ ಅಂಗಾಂಗದ ಬಲವನ್ನೇ ಕಸಿದುಕೊಂಡಿತು. ಓರ್ವ ವರದಿಗಾರ ನಮಗೆ ಆ ಮಗು ಲಸಿಕೆಯ ಮೂಲಕ ಬಂದಂತಹ ಪೋಲಿಯೊ ವೈರಸ್ ನಿಂದಾಗಿ ಈ ಸ್ಥಿತಿಗೆ ಬಂತು ಎಂಬುದಾಗಿ ತಿಳಿಸಿದರು ಎಂದು ಆತನ ಚಿಕ್ಕಪ್ಪ ಅಖಿಲೇಶ್ ಸಿಂಗ್ ಹೇಳುತ್ತಾರೆ. ವೈದ್ಯರು ಈ ವಿಷಯವನ್ನು ನಮಗೆ ತಿಳಿಸುವ ಗೋಜಿಗೆ ಹೋಗಿರಲಿಲ್ಲ ಎಂದು ನವಿ ಮುಂಬೈಯ ನಿವಾಸಿ ಅಖಿಲೇಶ್ ಸಿಂಗ್ ಹೇಳುತ್ತಾರೆ. ಸರಕಾರ ನಮಗೆ ಸಹಾಯ ಮಾಡಲಿಲ್ಲ. ಇದು ಅವರ ಜವಾಬ್ದಾರಿಯಾಗಬೇಕಿತ್ತು.

ಪ್ರತೀ ತಿಂಗಳು ಅರ್ಶ್ ಕುಟುಂಬವು ಆತನ ಚಿಕಿತ್ಸೆಗೆಂದು ರೂ. 15,000 ಖರ್ಚು ಮಾಡುತ್ತದೆ. ಮಗುವಿನ ತಂದೆ ಸದ್ಯ ನಿರುದ್ಯೋಗಿಯಾಗಿದ್ದು, ಜಮೀನು ವ್ಯವಹಾರ ಮಾಡುವ ಅಖಿಲೇಶ್ ಸಿಂಗ್ ಆ ಪರಿವಾರವನ್ನು ಸಲಹುತ್ತಾರೆ. ಈ ಕುಟುಂಬವು ಕಳೆದ ಮೂರು ವರ್ಷಗಳಿಂದ ಕ್ರೂರ ವ್ಯಂಗ್ಯದೊಂದಿಗೆ ಜೀವಿಸುತ್ತಿದೆ. ಅರ್ಶ್ ಸಿಂಗ್‌ಗೆ ಒದಗಿರುವ ಈ ಅಂಗ ಊನತೆಯ ಸ್ಥಿತಿ, ಮಕ್ಕಳಲ್ಲಿ ಬಹುತೇಕ ಸರಿಪಡಿಸಲಾಗದ ಅಂಗ ಊನತೆಯನ್ನು ಉಂಟು ಮಾಡುವ ಅತ್ಯಂತ ಸಾಂಕ್ರಾಮಿಕ ರೋಗವಾದ ಪೋಲಿಯೊ ಬರದಂತೆ ತಡೆಯಲು ಬಾಯಿಯ ಮೂಲಕ ನೀಡಲಾದ ಲಸಿಕೆಯಿಂದ ಬಂದಿದೆ. ವೈದ್ಯರ ಪ್ರಕಾರ, ಪೋಲಿಯೊ ಲಸಿಕೆಯು ಒಂದು ಜೀವಂತ ಆದರೆ ಶಕ್ತಿಗುಂದಿಸಲ್ಪಟ್ಟ ಪೋಲಿಯೊ ವೈರಾಣುವನ್ನು ಹೊಂದಿರುತ್ತದೆ ಈ ವೈರಾಣು ದೇಹದೊಳಗಿರುವ ಪೋಲಿಯೊ ವೈರಾಣುಗಳಿಗೆ ನಮ್ಮ ದೇಹದ ರೋಗನಿರೋಧಕ ಶಕ್ತಿ ಯಾವ ರೀತಿಯ ಪ್ರತಿರೋಧ ತೋರುತ್ತದೆಯೋ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಲಸಿಕೆಯ ವೈರಾಣು ಕರುಳಿನಲ್ಲಿ ವೃದ್ಧಿಹೊಂದುತ್ತದೆ ಮತ್ತು ಆರರಿಂದ ಎಂಟು ವಾರಗಳಲ್ಲಿ ಮಲ ವಿಸರ್ಜನೆಯ ಮೂಲಕ ದೇಹದಿಂದ ಹೊರಹೋಗುತ್ತದೆ. ಆದರೆ ಬಹಳ ಕಡಿಮೆ ಸಂದರ್ಭಗಳಲ್ಲಿ ಈ ವೈರಾಣುಗಳು ದೇಹದೊಳಗೆ ವೃದ್ಧಿಹೊಂದುವ ಸಮಯದಲ್ಲಿ ತನ್ನ ವಂಶವಾಹಿಯನ್ನು ಮರುಪಡೆಯುತ್ತದೆ ಮತ್ತು ಬಲಗೊಳ್ಳುತ್ತದೆ-ಇದನ್ನು ಲಸಿಕೆಯಿಂದ ಬಂದ ಪೋಲಿಯೊ ವೈರಾಣು ಎಂದು ಕರೆಯಲಾಗುತ್ತದೆ. ಬಾಯಿ ಮೂಲಕ ನೀಡುವ ಪೋಲಿಯೊ ಲಸಿಕೆಯ ಅಪಾಯವೇನೂ ತಿಳಿಯದಿರುವ ಸಂಗತಿಯಲ್ಲ. ವೌಖಿಕ ಪೋಲಿಯೊ ಲಸಿಕಾ ಪದ್ಧತಿಯನ್ನು 1990ರಲ್ಲಿ ಬಹಳಷ್ಟು ಸುರಕ್ಷಿತವಾಗಿದ್ದ ಸೂಜಿಯ ಮೂಲಕ ನೀಡಲಾಗುತ್ತಿದ್ದ ನಿಷ್ಕ್ರಿಯ ಪೋಲಿಯೊ ಲಸಿಕೆಯ ಬದಲಾಗಿ ಒಂದು ನೈತಿಕವಾಗಿ ವಿವಾದಾತ್ಮಕವಾಗಿದ್ದ ನಿರ್ಧಾರದ ಮೂಲಕ ಜಾರಿಗೆ ತರಲಾಯಿತು.

ಮೌಖಿಕವಾಗಿ ನೀಡುವ ಪೋಲಿಯೊ ಲಸಿಕೆಯಲ್ಲಿ ವೈರಾಣುವಿನ ಶಕ್ತಿಯನ್ನು ಕಡಿಮೆಗೊಳಿಸಿದ್ದರೆ ಸೂಜಿಯ ಮೂಲಕ ನೀಡಲಾಗುವ ಲಸಿಕೆಯಲ್ಲಿ ನಿಷ್ಕ್ರಿಯ ವೈರಾಣುವನ್ನು ಬಳಸಲಾಗುತ್ತದೆ. ಆದರೆ ಸೂಜಿಯ ಮೂಲಕ ನೀಡಲಾಗುವ ಲಸಿಕೆಯು ಮೌಖಿಕವಾಗಿ ನೀಡುವ ಲಸಿಕೆಗಿಂತ ಐದು ಪಟ್ಟು ಹೆಚ್ಚು ದುಬಾರಿಯಾಗಿದೆ. ಆ ಸಮಯದಲ್ಲಿ ಮೌಖಿಕವಾಗಿ ನೀಡಲಾಗುವ ಲಸಿಕೆಯನ್ನು ನೀಡಲು ಬಹಳ ಸುಲಭ ಎಂಬ ವಾದವನ್ನೂ ಮಾಡಲಾಗಿತ್ತು. ಈ ಲಸಿಕೆಯನ್ನು ಮಕ್ಕಳಿಗೆ ವೈದ್ಯರು ಅಥವಾ ನರ್ಸ್‌ಗಳೇ ನೀಡಬೇಕೆಂಬ ಅಗತ್ಯವೇನಿಲ್ಲ ಆರೋಗ್ಯ ಕಾರ್ಯಕರ್ತರು ಕೂಡಾ ಇದನ್ನು ಮಕ್ಕಳಿಗೆ ನೀಡಬಹುದು. ಪೋಲಿಯೊವನ್ನು ಸಂಪೂರ್ಣವಾಗಿ ಹೋಗಲಾಡಿಸಲು ದೇಶದಲ್ಲಿ ಶೇ.ನೂರು ಲಸಿಕೆ ನೀಡಲ್ಪಡುವ ಅಗತ್ಯವಿತ್ತು, ಇದನ್ನು ಸೂಜಿ ಮೂಲಕ ನೀಡುವ ಲಸಿಕೆಯಿಂದ ಸಾಧಿಸುವುದು ಅಸಾಧ್ಯವೆಂಬ ವಾದವೂ ಇತ್ತು. ಈ ಎಲ್ಲ ಲಾಭಗಳನ್ನು ಪರಿಗಣಿಸಿದ ಕಾರಣ ಮೌಖಿಕವಾಗಿ ನೀಡಲ್ಪಡುವ ಪೋಲಿಯೊ ಲಸಿಕೆಯಿಂದ ಬರುವ ಪೋಲಿಯೊ ವೈರಾಣುವಿನಿಂದ ಉಂಟಾಗುವ ಅಂಗ ಊನತೆಯ ಅಂಶವನ್ನು ಕಡೆಗಣಿಸಲಾಯಿತು. ಅಂತಿಮವಾಗಿ ಬಾಯಿ ಮೂಲಕ ನೀಡುವ ಲಸಿಕೆಯನ್ನು ಆರಿಸಲಾಯಿತು. ನಮ್ಮಲ್ಲಿ ಮೌಖಿಕವಾಗಿ ನೀಡಲಾಗುವ ಪೋಲಿಯೊ ಲಸಿಕೆಯು ಇರುವ ವರೆಗೆ ಅದರಿಂದ ಹರಡುವ ಪೋಲಿಯೊ ವೈರಾಣು ಕೂಡಾ ಇರುತ್ತದೆ, ಎನ್ನುತ್ತಾರೆ ಮಕ್ಕಳತಜ್ಞ ವೈದ್ಯರ ಭಾರತೀಯ ಸಂಘದ ಮಾಜಿ ಅಧ್ಯಕ್ಷರಾದ ಡಾ. ವಿಜಯ್ ಯೆಲವಲೆ. ಬಹಳಷ್ಟು ಮಕ್ಕಳು ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಾರೆ.

ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಬದಲಾವಣೆ: 20 ವರ್ಷಗಳ ನಂತರ, 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೊ ಮುಕ್ತ ಎಂದು ಘೋಷಿಸಿತು. ಮತ್ತೀಗ, ಅದಾದ ಎರಡು ವರ್ಷಗಳ ನಂತರ ದೇಶದ ಪೋಲಿಯೊ ಲಸಿಕಾ ಕಾರ್ಯಕ್ರಮವು ಪರಿವರ್ತನೆಯ ಹಾದಿಯಲ್ಲಿದೆ. ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ, ಆರು ರಾಜ್ಯಗಳಲ್ಲಿ ಸೂಜಿ ಮೂಲಕ ನೀಡಲಾಗುವ ಲಸಿಕೆಯನ್ನು ನವಂಬರ್ 2015ರಲ್ಲಿ ಆರಂಭಿಸಿದ್ದಾರೆ ಮತ್ತು ಅದನ್ನು ಉಳಿದ ರಾಜ್ಯಗಳಿಗೂ ಪರಿಚಯಿಸುವ ಯೋಚನೆಯಲ್ಲಿದ್ದಾರೆ. ಈ ವರ್ಷ ಎಪ್ರಿಲ್ 25ರಂದು ಭಾರತವು, ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ತ್ರಿವಲೆಂಟ್ ಮೌಖಿಕ ಪೋಲಿಯೊ ಲಸಿಕೆಯಿಂದ ಬಿವಲೆಂಟ್ ಮೌಖಿಕ ಪೋಲಿಯೊ ಲಸಿಕೆಗೆ (ಪೋಲಿಯೊ ಲಸಿಕೆಯಲ್ಲಿರುವ ಮೂರು ಅಂಶಗಳಲ್ಲಿ ಎರಡನೆ ಅಂಶವನ್ನು ತೆಗೆದು ಹಾಕುವುದು) ಬದಲಾಗಲಿರುವ ಜಾಗತಿಕ ಬದಲಾವಣೆಯಲ್ಲಿ ಪಾಲ್ಗೊಳ್ಳುವ 156 ದೇಶಗಳು ಮತ್ತು ಪ್ರದೇಶಗಳಲ್ಲಿ ಒಂದಾಗಲಿದೆ. ತ್ರಿವಲೆಂಟ್ ಮೌಖಿಕ ಪೋಲಿಯೊ ಲಸಿಕೆಯಲ್ಲಿ ಮೂರು ಜಾತಿಯ ಜೀವಂತ ಆದರೆ ಶಕ್ತಿಗುಂದಿಸಲ್ಪಟ್ಟ ವೈರಾಣುಗಳು ಇರುತ್ತದೆ. ಆದರೆ ಬಿವಲೆಂಟ್‌ನಲ್ಲಿ ಕೇವಲ ಎರಡು ತಳಿಯ ವೈರಾಣುಗಳಿರುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಮಾದರಿಯ ತಳಿಯ ಅಗತ್ಯವಿಲ್ಲ ಎಂದು ಹೇಳಿರುವುದರಿಂದ ಈ ಜಾತಿಯ ವೈರಾಣುವನ್ನು ತೆಗೆದು ಹಾಕಲಾಗಿದೆ. ಈ ಎರಡನೇ ಜಾತಿಯ ವೈರಾಣುವೇ ಶೇ.90 ಲಸಿಕೆಯ ಮೂಲಕ ಬರುವ ಪೋಲಿಯೊಗೆ ಕಾರಣವಾಗಿದೆ. ಈ ಬದಲಾವಣೆಯು ಪೋಲಿಯೊ ಬಗ್ಗೆ ಮತ್ತೆ ಚರ್ಚೆಗಳು, ಸುದ್ದಿಗಳು ಬರತೊಡಗಿದ ಸಮಯದಲ್ಲೇ ನಡೆಯುತ್ತಿದೆ. ಕಳೆದ ತಿಂಗಳಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಪೋಲಿಯೊ ಲಸಿಕೆಯ ವ್ಯತಿರಿಕ್ತ ಪರಿಣಾಮಗಳು ಕಂಡುಬಂದಿದ್ದವು. ಕಾಶ್ಮೀರದ ಪಾಂಪೋರ್ ಪಟ್ಟಣದಲ್ಲಿ 18 ವರ್ಷದ ಯುವಕನೊಬ್ಬ ಪೋಲಿಯೊ ಲಸಿಕೆ ಹಾಕಿಸಿದ ನಂತರ ಮಗುವೊಂದು ಮೃತಪಟ್ಟಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಕಾರಣ ಹೆತ್ತವರಲ್ಲಿ ಆತಂಕ ನೆಲೆಮಾಡಿತ್ತು.

ಒರಿಸ್ಸಾದಲ್ಲಿ 21 ದಿನಗಳಷ್ಟೇ ತುಂಬಿದ ರೋಗಪೀಡಿತ ಮಗುವೊಂದು ಲಸಿಕೆಯನ್ನು ನೀಡಲಾದ ನಂತರ ಮೃತಪಟ್ಟಿತ್ತು. ಸ್ವತಹ ಘಟನೆಗಳನ್ನು ತಡೆಗಟ್ಟಲು ಸರಕಾರದಲ್ಲಿ ಒಂದು ಪ್ರಕ್ರಿಯೆಯಿದೆ, ರಾಜ್ಯಮಟ್ಟದಲ್ಲಿ ತಂಡವೊಂದನ್ನು ರಚಿಸಿ ಈ ಘಟನೆಯ ತನಿಖೆ ನಡೆಸುವುದು ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಒಂದು ತಂಡ ರಚಿಸುವುದು ಅದರಲ್ಲಿ ಸೇರಿವೆ. ಒರಿಸ್ಸಾದ ಕೇಂದ್ರಪದಾ ಜಿಲ್ಲೆಯಲ್ಲಿ ನಡೆದ ಘಟನೆಯ ಪ್ರಾಥಮಿಕ ವರದಿಯಲ್ಲಿ ಮಗು ಸೋಂಕಿನಿಂದ ಮೃತಪಟ್ಟಿದೆಯೇ ಹೊರತು ಲಸಿಕೆಯಿಂದ ಅಲ್ಲ ಎಂದು ಲಸಿಕಾ ಕಾರ್ಯಕ್ರಮದ ಜವಾಬ್ದಾರಿಯನ್ನು ನೋಡಿಕೊಳ್ಳುವ ಆರೋಗ್ಯ ಸಚಿವಾಲಯದ ಸಹಾಯಕ ಆಯುಕ್ತರಾದ ಪ್ರದೀಪ್ ಹಲ್ದಾರ್ ತಿಳಿಸಿದ್ದರು. ಪೋಲಿಯೊ ಒಂದು ಅತ್ಯಂತ ಸುರಕ್ಷಿತ ಲಸಿಕೆ ಎಂದು ಹಲ್ದಾರ್ ಹೇಳುತ್ತಾರೆ. ಲಸಿಕೆಯಿಂದ ಯಾರಾದರೂ ಮೃತಪಟ್ಟಿದ್ದಾರೆ ಎಂಬುದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಪ್ರತೀ ವರ್ಷ 13.5 ಲಕ್ಷ ಐದಕ್ಕಿಂತ ಕೆಳಗಿನ ಹರೆಯದ ಮಕ್ಕಳು ಮೃತಪಡುತ್ತಾರೆ, ಆದರೆ ಸಾರ್ವಜನಿಕರಲ್ಲಿ ಇರುವ ಕಲ್ಪನೆಯೆಂದರೆ ಈ ಸಾವುಗಳು ಲಸಿಕೆಯಿಂದ ಉಂಟಾಗುತ್ತವೆ ಎಂಬುದು.

ಆರೋಗ್ಯತಜ್ಞರು ಪೋಲಿಯೊ ನಿರ್ಮೂಲನೆಯ ಈ ಹೊಸ ಹಂತವನ್ನು ಸುಧಾರಣೆ ಎಂದು ಪ್ರಶಂಸಿಸಿದರೆ, ವಿಶ್ವ ಆರೋಗ್ಯ ಸಂಸ್ಥೆ ಮುನ್ನಡೆಸಿದ, ಸಂಪೂರ್ಣವಾಗಿ ಮೌಖಿಕ ಪೋಲಿಯೊ ಲಸಿಕೆಯ ಮೇಲೆ ಅವಲಂಬಿತವಾಗಿದ್ದ, ವಿವಾದಾತ್ಮಕ ಪೋಲಿಯೊ ನಿರ್ಮೂಲನಾ ಅಭಿಯಾನದಲ್ಲಿ ಭಾಗವಹಿಸಿದ ಪರಿಣಾಮವಾಗಿ ದೇಶದ ಮಕ್ಕಳು ಬೆಲೆತೆರಬೇಕಾಗಿದ್ದರ ಬಗ್ಗೆ ದುಃಖ ವ್ಯಕ್ತಪಡಿಸುತ್ತಾರೆ. ಹಲವು ವರ್ಷಗಳಿಂದ ಮಕ್ಕಳು ಈ ಕಾರ್ಯಕ್ರಮದ ಪರಿಣಾಮವನ್ನು ಹೊರಬೇಕಾಗಿತ್ತು ಮತ್ತು ಅಂಗ ಊನತೆಯಿಂದ ನರಳಬೇಕಿತ್ತು ಎಂದು ಸಾರ್ವಜನಿಕ ಆರೋಗ್ಯದ ಮೇಲೆ ಕಾರ್ಯಾಚರಿಸುವ ನಾಗರಿಕ ಸಮಾಜದ ಗುಂಪು, ಜನ್ ಸ್ವಾಸ್ಥ್ಯ ಅಭಿಯಾನದ ಡಾ. ಅನಂತ್ ಫಡ್ಕೆ ಹೇಳುತ್ತಾರೆ. ಸೂಜಿಯ ಮೂಲಕ ನೀಡಲಾಗುವ ಲಸಿಕೆಯಿಂದ ಲಸಿಕೆ ಮೂಲಕ ಉಂಟಾಗುವ ಪೋಲಿಯೊ ಬರುವುದಿಲ್ಲ. ಹಾಗಾಗಿ ಅದು ಒಳ್ಳೆಯದು.

ಕಳೆದ ವರ್ಷವೂ ಭಾರತದಲ್ಲಿ ಲಸಿಕೆಯಿಂದ ಬಂದಂಥಾ ಪೋಲಿಯೊದ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದವು. 2014ರಲ್ಲಿ ಅಂಥಾ ಪ್ರಕರಣಗಳ ಸಂಖ್ಯೆ ಮೂರಾಗಿದ್ದರೆ 2009ರಲ್ಲಿ 44 ಆಗಿತ್ತು. ಎಚ್ಚರಿಕೆಯನ್ನು ನಿರ್ಲಕ್ಷಿಸುವುದು
ಭಾರತದ ತಜ್ಞರ ಸಲಹಾ ತಂಡದ (ಇದು ಲಸಿಕೆ ಕಾರ್ಯಕ್ರಮದ ಬೆಳವಣಿಗೆಯ ಮೇಲೆ ನಿಗಾಯಿಡುತ್ತದೆ) ಮುಖ್ಯಸ್ಥನಾಗಿ ನಾನು ಯಾವಾಗಲೂ ವೌಖಿಕ ಲಸಿಕೆಗಿಂತ ಸೂಜಿಯ ಮೂಲಕ ನೀಡುವ ಲಸಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಎಲ್ಲರಲ್ಲೂ ಹೇಳುತ್ತಾ ಬಂದಿದ್ದೇನೆ ಎಂದು ವೈರಾಣುಶಾಸ್ತ್ರದ ತಜ್ಞ ಮತ್ತು ವೆಲ್ಲೂರು ಕ್ರೈಸ್ತ ವೈದ್ಯಕೀಯ ಕಾಲೇಜಿನ ಮಾಜಿ ಉಪನ್ಯಾಸಕರಾದ ಡಾ. ಟಿಜೆ ಜಾನ್ ಹೇಳುತ್ತಾರೆ. ಆರಂಭದಲ್ಲಿ ಸೂಜಿ ಮೂಲಕ ಪೋಲಿಯೊ ಲಸಿಕೆಯನ್ನು ಉಪಯೋಗಿಸುವ ಮೂಲಕ ನಾವು ಸ್ವಲ್ಪ ಮೊತ್ತವನ್ನು ಉಳಿಸಬಹುದಿತ್ತು. ನೈತಿಕತೆಯು ಸೂಜಿ ಲಸಿಕೆಯನ್ನು ಬಯಸುತ್ತದೆ ಮತ್ತು ಇಡೀ ಜಗತ್ತು ಅದನ್ನು ಉಪಯೋಗಿಸುತ್ತದೆ. ಮೌಖಿಕ ಲಸಿಕೆಯದ್ದೂ ಕೂಡಾ ಅದರದ್ದೇ ಆತ ಪಾತ್ರವಿದೆ, ಅದಿಲ್ಲದೆ ನಾವು ಸಂಪೂರ್ಣ ಪೋಲಿಯೊ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ನಿಜವಾಗಿ, 1988ರಲ್ಲಿ ಅಣು ಮತ್ತು ಕೋಶ ಜೀವಶಾಸ್ತ್ರ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿರುವ ಮತ್ತು ಇತ್ತೀಚೆಗೆ ತಮ್ಮ ಪದ್ಮಭೂಷಣ ಪ್ರಶಸ್ತಿಯನ್ನು ವಾಪಸ್ ನೀಡುವ ಮೂಲಕ ಸುದ್ದಿಯಲ್ಲಿದ್ದ ವಿಜ್ಞಾನಿ ಪುಷ್ಪಾ ಭಾರ್ಗವ ಅವರು ಮೌಖಿಕ ಲಸಿಕೆಯ ವಿರುದ್ಧ ವಾದ ಮಾಡಿದ್ದರು. ದ ಹಿಂದೂ ಪತ್ರಿಕೆಗೆ ಬರೆದ ಲೇಖನವೊಂದರಲ್ಲಿ ಅವರು, ನಾನು ಮೌಖಿಕ ಲಸಿಕೆಯ ಅಸಮರ್ಥತೆಯ ಕಾರಣ ಭಾರತದಲ್ಲಿ ಸೂಜಿ ಲಸಿಕೆಯನ್ನು ಉಪಯೋಗಿಸಲು ನಿರ್ಧರಿಸಲಾದ ಸಭೆಯ ಭಾಗವಾಗಿದ್ದೆ ಎಂದು ಬರೆದಿದ್ದರು. ಸೂಜಿ ಲಸಿಕೆಯನ್ನು ತಯಾರಿಸುವ ಸಲುವಾಗಿ ಹರ್ಯಾಣದ ಗುಡ್ ಗಾಂವ್ ನಲ್ಲಿ ಕಾರ್ಖಾನೆಯೊಂದನ್ನು ತೆರೆಯಲಾಯಿತು ಆದರೆ 1992ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯ ಮೇರೆಗೆ ಅದನ್ನು ಮುಚ್ಚಲಾಯಿತು. ಸರಕಾರವು ಮೌಖಿಕ ಲಸಿಕೆಗೆ ಬದಲಾಯಿಸಲು ಯಾವ ಅಂಶ ಪ್ರೇರಣೆಯಾಯಿತು ಎನ್ನುವುದನ್ನು ತಿಳಿಯುವ ಸಲುವಾಗಿ ವಿವಿಧ ಮಂಡಳಿಗಳಿಗೆ, ಸಂಸ್ಥೆಗಳಿಗೆ ಪತ್ರ ಬರೆದಿದ್ದೆ ಎಂದು ಭಾರ್ಗವ ತಿಳಿಸುತ್ತಾರೆ. ಸ್ಪಷ್ಟವಾಗಿ ಅಂದು ಸರಕಾರವು ಭಾರ್ಗವ ಅವರ ಕಾಳಜಿಯನ್ನು ಪರಿಗಣಿಸಲು ಯೋಚಿಸಲಿಲ್ಲ. ಇಂದೂ ಕೂಡಾ ಭಾರತದಲ್ಲಿ ಬಹಳಷ್ಟು ಸಂದರ್ಭಗಳಲ್ಲಿ ಲಸಿಕೆಯಿಂದ ಬಂದಂಥಾ ಪೋಲಿಯೊದಿಂದ ನರಳುತ್ತಿರುವ ಮಗುವಿನ ಹೆತ್ತವರಿಗೆ ರೋಗ ಬಂದ ಮೂಲದ ಬಗ್ಗೆ ತಿಳಿಸಲಾಗುವುದಿಲ್ಲ. ಮತ್ತು ಇತರ ದೇಶಗಳಲ್ಲಂತಲ್ಲದೆ ಇಲ್ಲಿ ಯಾರೂ ಕೂಡಾ ಜವಾಬ್ದಾರಿ ತೆಗೆದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಕನಿಷ್ಠ 19 ದೇಶಗಳಲ್ಲಿ ಲಸಿಕೆ ಪರಿಹಾರ ಯೋಜನೆಯಿದೆ. 1961 ಲಸಿಕೆಯ ಮೂಲಕ ಪಡೆದ ಪೋಲಿಯೊ ಉಂಟಾದವರಿಗೆ ಪರಿಹಾರ ಯೋಜನೆಯನ್ನು ಪರಿಚಯಿಸುವ ಮೂಲಕ ಜರ್ಮನಿಯು ಹೀಗೆ ಮಾಡಿದ ಮೊದಲ ದೇಶವಾಯಿತು. ನಂತರ ಫ್ರಾನ್ಸ್, ಆಸ್ಟ್ರೀಯಾ, ಜಪಾನ್, ನ್ಯೂಜಿಲ್ಯಾಂಡ್, ಸ್ವೀಡನ್ ಮತ್ತು ಬ್ರಿಟನ್ ಇದನ್ನೇ ಅನುಸರಿಸಿದವು. ಯುಎಸ್, ಕ್ಯೂಬೆಕ್, ಇಟಲಿ, ನಾರ್ವೆ, ಕೊರಿಯಾ ಗಣರಾಜ್ಯ, ಹಂಗೇರಿ, ಐಸ್ ಲ್ಯಾಂಡ್ ಮತ್ತು ಸ್ಲೊವೇನಿಯಾ ದೇಶಗಳೂ ಇದೇ ಮಾದರಿಯನ್ನು ಅನುಸರಿಸಿದವು. ಬ್ರಿಟನ್ ನಲ್ಲಿ ಲಸಿಕೆಯಿಂದ ಉಂಟಾದ ನಷ್ಟದ ಪರಿಹಾರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದ್ದ 1,20,000 ಪೌಂಡ್ ಪರಿಹಾರ ನೀಡಲಾಗುತ್ತದೆ. ಮೌಖಿಕ ಲಸಿಕೆಯ ಪ್ರಮಾಣವನ್ನು ಹೆಚ್ಚಿಸುವುದು

ನಾವು ಒಂದು ಮಟ್ಟಿಗೆ ಪೋಲಿಯೊ ಮುಕ್ತವಾಗಿದ್ದರೂ ಮಕ್ಕಳು ಅಂಗ ಊನತೆಯಿಂದ ಬಳಲುತ್ತಿಲ್ಲ ಎಂಬುದು ಇದರರ್ಥವಲ್ಲ. ರಾಷ್ಟ್ರೀಯ ಪೋಲಿಯೊ ವಿಚಕ್ಷಣಾ ಅಂಕಿ ಅಂಶಗಳ ಪ್ರಕಾರ ಪೋಲಿಯೊ ಪ್ರಕರಣಗಳು ಶೂನ್ಯವಾಗಿದ್ದರೆ (ಲಸಿಕೆಯಿಂದ ಬಂದ ಪೋಲಿಯೊವನ್ನು ಪರಿಗಣಿಸಲಾಗಿಲ್ಲ), ಇತರ ಕಾರಣಗಳಿಂದ ಪಾರ್ಶ್ವವಾಯು ಪೀಡಿತರಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೆಲವು ಅಧ್ಯಾಯನಗಳು, ಪೋಲಿಯೊ ಹೊರತಾದ ಪಾರ್ಶ್ವವಾಯು ಮತ್ತು ಮೌಖಿಕ ಪೋಲಿಯೊ ಲಸಿಕೆಯ ಹೆಚ್ಚಿನ ಪ್ರಮಾಣದ ನಡುವೆ ಸಂಬಂಧವಿದೆಯೆಂದು ಹೇಳುತ್ತವೆ. ಕಳೆದ ವರ್ಷ 42, 804 ಪೊಲೀಯೊ ಹೊರತಾದ ಪಶ್ರ್ವವಾಯು ಪ್ರಕರಣಗಳು ಬೆಳಕಿಗೆ ಬಂದಿದ್ದು ಅವುಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶ ಮತ್ತು ಬಿಹಾರದಿಂದ ವರದಿಯಾಗಿದ್ದವು. 2012ರಲ್ಲಿ ಈ ಸಂಖ್ಯೆ 59,436 ಆಗಿದ್ದರೆ 2013 ಮತ್ತು 14ರಲ್ಲಿ ಕ್ರಮವಾಗಿ 53,421 ಮತ್ತು 53,383 ಆಗಿತ್ತು. ಎಲ್ಲ ಪಾರ್ಶ್ವವಾಯು ಪ್ರಕರಣಗಳ ಮೇಲೆ ನಿಗಾಯಿಡುವುದು ಲಸಿಕೆ ಕಾರ್ಯಕ್ರಮದ ಭಾಗವಾಗಬೇಕು, ಆಗ ಎಲ್ಲ ಅಂಗ ಊನತೆಗಳು ಪರೀಕ್ಷೆಗೆ ಒಳಪಟ್ಟು ಅವುಗಳು ಪೋಲಿಯೊ ಎಂಬುದನ್ನು ತಳ್ಳಿಹಾಕಬಹುದು. ಸಂಪೂರ್ಣ ನಿರ್ಮೂಲನೆಯಿಂದಾಗಿ ವಿಚಕ್ಷಣೆಗೆ ಒಳಪಡುವ ಎಲ್ಲ ಪ್ರಕರಣಗಳು ಪೋಲಿಯೊ ಹೊರತಾದ ಅಂಗ ಊನತೆ ಎಂದು ಸಾಬೀತಾಗುತ್ತದೆ. ಈ ಕಾಯಿಲೆಗೆ ಗ್ವಿಲೈನ್ ಬಾರೆ ಸಿಂಡ್ರೊಮ್ ಸೇರಿದಂತೆ ಹಲವು ಏರುಪೇರುಗಳು ಕಾರಣವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ, ವನ್ಯ ಪೋಲಿಯೊ ಪ್ರಸರಣದ ಗೈರಿನಿಂದಾಗಿ ಪೋಲಿಯೊ ಹೊರತಾದ ಅಂಗ ಊನತೆಯು ಲಕ್ಷದಲ್ಲಿ ಒಂದು ಪ್ರಕರಣ ವರದಿಯಾಗಬೇಕು. ಆದರೆ ರಾಷ್ಟ್ರೀಯ ಪೋಲಿಯೊ ಹೊರತಾದ ಅಂಗ ಊನತೆಯ ಪ್ರಮಾಣ ಶೇ.9.82. ಉತ್ತರ ಪ್ರದೇಶದಲ್ಲಿ ಇದು 16.11 ಆಗಿದ್ದರೆ ಬಿಹಾರದಲ್ಲಿ 25.28 ಆಗಿದೆ. ಪೋಲಿಯೊ ಅಲ್ಲದ ಪಾರ್ಶ್ವವಾಯು ಕೂಡಾ ಪೋಲಿಯೊ ಅಂಗ ಊನತೆಯಂತೆಯೇ ಇದ್ದರೂ ಅಧ್ಯಯನಗಳು ತಿಳಿಸುವಂತೆ ಅದು ಎರಡುಪಟ್ಟು ಹೆಚ್ಚು ಮಾರಣಾಂತಿಕವಾಗಿರುತ್ತದೆ. ದಿಲ್ಲಿಯ ಸಾಮಾಜಿಕ ಹಿತರಕ್ಷಣಾ ಮಂಡಳಿಯ, ಆರೋಗ್ಯದ ಬಗ್ಗೆ ಸಾರ್ವಜನಿಕ ವರದಿಯನ್ನು ತಯಾರಿಸಿದ ಪ್ರತಿನಿಧಿಗಳು ಬಹುತೇಕ ಪೋಲಿಯೊ ಅಲ್ಲದ ಪಾರ್ಶ್ವವಾಯುಗಳನ್ನು ಸರಿಯಾಗಿ ಗಮನಿಸಲಾಗಿಲ್ಲ ಎಂಬುದನ್ನು ಕಂಡುಕೊಂಡಿತ್ತು. ದಿಲ್ಲಿಯ ಸಂತ ಸ್ಟೀವನ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾಗಿರುವ ಡಾ. ಜಾಕೊಬ್ ಪುಲಿಯೆಲ್ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಂತೆ 10,055 ಪೋಲಿಯೊ ಹೊರತಾದ ಪಾರ್ಶ್ವವಾಯು ಪ್ರಕರಣಗಳಲ್ಲಿ ಕೇವಲ 2,553 ಪ್ರಕರಣಗಳನ್ನು ತನಿಖೆಗೊಳಪಡಿಸಲಾಗಿದೆ.

ಈ 2,553 ಪ್ರಕರಣಗಳಲ್ಲಿ 898 ಉಳಿಕೆಯಾದ ಪಾರ್ಶ್ವವಾಯುವಾಗಿದ್ದವು ಮತ್ತು 217 ಮಕ್ಕಳು ಮೃತಪಟ್ಟಿದ್ದರು. ಸಾಧಾರಣ ಪೋಲಿಯೊ ಪ್ರಕರಣಗಳಲ್ಲಿ ಹತ್ತರಲ್ಲಿ ಒಂದು ಮಗು ಪಾರ್ಶ್ವವಾಯುವಿನಿಂದ ಬಳಲುತ್ತದೆ ಅಥವಾ ಮೃತಪಡುತ್ತದೆ, ಆದರೆ ಪೋಲಿಯೊ ಅಲ್ಲದ ಅಂಗ ಊನತೆಯಲ್ಲಿ ಅರ್ಧಕ್ಕರ್ಧ ಮಕ್ಕಳು ಪಾರ್ಶ್ವವಾಯು ಪೀಡಿತರಾಗುತ್ತಾರೆ ಅಥವಾ ಸಾವನ್ನಪ್ಪುತ್ತಾರೆ ಎಂದು ಡಾ. ಪುಲಿಯೆಲ್ ಹೇಳುತ್ತಾರೆ. ಇದು ಕೇವಲ ಒಂದು ರೋಗವಲ್ಲ ಎಂದವರು ಹೇಳುತ್ತಾರೆ. ಪೋಲಿಯೊ ಅಲ್ಲದ ಪಾರ್ಶ್ವವಾಯು ಮತ್ತು ಮೌಖಿಕ ಪೋಲಿಯೊ ಲಸಿಕೆ ನೀಡಲ್ಪಟ್ಟ ಸಂಖ್ಯೆಯ ಮಧ್ಯೆ ಪರಸ್ಪರ ಸಂಬಂಧವಿದೆ ಎಂದು ಕಳೆದ ವರ್ಷದ ಅಮೆರಿಕದ ಮಕ್ಕಳತಜ್ಞರ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿತ್ತು. 2012ರಲ್ಲಿ ಭಾರತದಲ್ಲಿ ಪ್ರಕಟವಾದ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್ ಎಂಬ ಪುಸ್ತಕದಲ್ಲಿ 2005ರಲ್ಲಿ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ತೀವ್ರಗೊಳಿಸಿದ ನಂತರ ಪೋಲಿಯೊ ಅಲ್ಲದ ಪಾರ್ಶ್ವವಾಯು ಪಕ್ರರಣಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಯಿತು ಎಂದು ಹೇಳಲಾಗಿದೆ. ಪಲ್ಸ್ ಪೋಲಿಯೊ ಅಭಿಯಾನವು ಬಹುತೇಕ ಪ್ರತೀ ತಿಂಗಳೂ ನಡೆಯುವ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಈ ರೀತಿಯ ಏರಿಕೆ ಸ್ಪಷ್ಟವಾಗಿ ಕಾಣುತ್ತಿತ್ತು. ಕೇವಲ ವರ್ಷದಲ್ಲಿ ಆರಕ್ಕಿಂತ ಕಡಿಮೆ ಬಾರಿ ಲಸಿಕೆಯನ್ನು ನೀಡಲಾದ ಪ್ರದೇಶಗಳಲ್ಲಿ ಮಾತ್ರ ಪೋಲಿಯೊ ಹೊರತಾದ ಅಂಗ ಊನತೆಯ ಪ್ರಮಾಣ ಕಡಿಮೆಯಿತ್ತು. ಪಶ್ಚಿಮ ಬಂಗಾಳದಲ್ಲಿ ಕೊನೆಯ ಪೋಲಿಯೊ ಪ್ರಕರಣ ವರದಿಯಾದ ನಂತರ ಬಿಹಾರ ಮತ್ತು ಉತ್ತರ ಪ್ರದೇಶ ಮೌಖಿಕ ಲಸಿಕೆಯ ಪ್ರಮಾಣವನ್ನು ಕಡಿಮೆಗೊಳಿಸಿದ ನಂತರ 2012ರಿಂದ ಈ ರಾಜ್ಯಗಳಲ್ಲಿ ಪೋಲಿಯೊ ಅಲ್ಲದ ಪಾರ್ಶ್ವವಾಯು ಪೀಡಿತರ ಸಂಖ್ಯೆ ಕೂಡಾ ಇಳಿಮುಖವಾಗುತ್ತಾ ಸಾಗಿತು. ಬಂಗಾಳ ಮತ್ತು ಉತ್ತರ ಪ್ರದೇಶದ ಪ್ರಕರಣಗಳನ್ನು ಅಧ್ಯಯನ ಮಾಡಿದ ನಂತರ ಮೌಖಿಕ ಲಸಿಕೆ ಮತ್ತು ಪೋಲಿಯೊ ಹೊರತಾದ ಪಾರ್ಶ್ವವಾಯುವಿನ ಪ್ರಮಾಣದ ಮಧ್ಯೆ ಇರುವ ಪ್ರಮಾಣವು ಎದ್ದು ಕಾಣುತ್ತದೆ ಎಂದು ಮಕ್ಕಳತಜ್ಞರ ಅಧ್ಯಯನ ತಿಳಿಸುತ್ತದೆ. ಆದರೆ, ಡಾ. ಹಲ್ದಾರ್ ಈ ಅಂಶಗಳನ್ನು ತಳ್ಳಿಹಾಕುತ್ತಾರೆ. ಪೋಲಿಯೊ ಹೊರತಾದ ಪಾರ್ಶ್ವವಾಯು ಹೆಚ್ಚಾಗುತ್ತಿದೆ ಎಂದು ಹೇಳುವವರು ಈ ಕಾರ್ಯಕ್ರಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇದನ್ನು ಹೇಳುತ್ತಿದ್ದಾರೆ ಎನ್ನುತ್ತಾರೆ ಅವರು. 2005ರಲ್ಲಿ ಕೆಲವೊಂದು ಪ್ರಕರಣಗಳು ನಮ್ಮಿಂದ ತಪ್ಪುತ್ತಿದೆ ಎಂದು ನಮಗನಿಸಿತ್ತು ಮತ್ತು ಹಾಗಾಗಿ ನಾವು ಯಾವುದೇ ರೀತಿಯ ಊನತೆಯನ್ನು ಕಂಡುಹಿಡಿಯುವಂತಹ ಅತ್ಯಂತ ಸೂಕ್ಷ್ಮವಾಗಿ ಪೋಲಿಯೊ ಅಲ್ಲದ ಅಂಗ ಊನತೆಯ ಮೇಲೆ ನಿಗಾಯಿಡಲು ನಿರ್ಧರಿಸಿದೆವು. ನಾವು ಎಲ್ಲ ರೀತಿಯ ಅಂಗ ಊನತೆಗಳನ್ನು ಆರಿಸಲು ನಿರ್ಧರಿಸಿದೆವು-ಕೇವಲ ಸ್ನಾಯುಗಳು ಸಡಿಲವಾಗಿರುವುದು ಮಾತ್ರವಲ್ಲ. ನಾವು ದೃಢೀಕರಣಕ್ಕಾಗಿ ಪ್ರಯೋಗಾಲಯಕ್ಕೆ ಹೋದಾಗ ಕೇವಲ ಶೇ.25-ಶೇ.30ಮಾತ್ರ ಪೋಲಿಯೊ ಪ್ರಕರಣ ಎಂದು ಆ ಸಮಯದಲ್ಲಿ ಕಂಡುಬಂದಿತ್ತು. ಹಾಗಾಗಿ ನಮ್ಮಲ್ಲಿ ಪೋಲಿಯೊ ಅಲ್ಲದ ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗಿವೆ. ನಾವು ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಪ್ರಯಾಸಪಟ್ಟ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮತ್ತಷ್ಟು ಎಚ್ಚರಿಕೆಯಿಂದ ಕಾರ್ಯಾಚರಿಸಿದ್ದೆವು. ಅದರರ್ಥ ಅಲ್ಲಿ ಪೋಲಿಯೊ ಹೊರತಾದ ಅಂಗ ಊನತೆ ಹೆಚ್ಚಿದೆ ಎಂದಲ್ಲ ಎಂದವರು ಹೇಳುತ್ತಾರೆ. ಈ ವಿವರಣೆಯನ್ನು ಒಪ್ಪುವುದಾದರೆ, ಪೋಲಿಯೊ ಹೊರತಾದ ಪಾರ್ಶ್ವವಾಯು ಪ್ರಕರಣಗಳು ಅತ್ಯಂತ ಕಡಿಮೆಯಿರುವ ಗೋವಾ ಮತ್ತು ಕೇರಳದಲ್ಲಿ ಇಟ್ಟಂತಹ ಕಣ್ಗಾವಲು ಅಸಮರ್ಪಕವಾಗಿತ್ತು ಎಂದು ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಯುಪಿ ಮತ್ತು ಬಿಹಾರದಲ್ಲಿ ಪೋಲಿಯೊ ಅಲ್ಲದ ಅಂಗ ಊನತೆ ಪ್ರಮಾಣ ಇಳಿಮುಖವಾಗುತ್ತಿರುವುದರಿಂದ ಅಲ್ಲಿಯೂ ಕಣ್ಗಾವಲು ಕಡಿಮೆಯಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಡಾ. ಪುಲಿಯೆಲ್ ಹೇಳುತ್ತಾರೆ. ನಮಗೆ ಪೋಲಿಯೊ ಅಲ್ಲದ ಅಂಗ ಊನತೆಯನ್ನು ಯಾವುದು ಉಂಟು ಮಾಡುತ್ತಿದೆ ಎಂಬುದು ತಿಳಿದಿಲ್ಲ. ಅದು ಪೋಲಿಯೊ ಅಲ್ಲ ಎಂಬುದು ಮಾತ್ರ ಖಚಿತ ಸದ್ಯ ಪೋಲಿಯೊ ವೈರಾಣುವಿನ ಸ್ಥಾನವನ್ನು ಅದೇ ರೀತಿ ಅಂಗ ಊನತೆ ಉಂಟು ಮಾಡುವ ಇನ್ನೊಂದು ವೈರಾಣು ಪಡೆದುಕೊಂಡಿದೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಬೇಕು ಎನ್ನುತ್ತಾರೆ ಪುಲಿಯೆಲ್.
ಈ ವಿದ್ಯಮಾನವನ್ನು ಅಧ್ಯಯನ ಮಾಡುವ ಅಗತ್ಯವ�

Writer - ಮೇನಕಾ ರಾವ್

contributor

Editor - ಮೇನಕಾ ರಾವ್

contributor

Similar News