ದೇಶದಲ್ಲೇ ಪ್ರಪ್ರಥಮ : ರಾಜ್ಯದಲ್ಲಿ ಅಪಘಾತಕ್ಕೊಳಗಾದ ಯಾವುದೇ ವ್ಯಕ್ತಿಗೆ ಮೊದಲ 48 ಗಂಟೆಗಳ ಚಿಕಿತ್ಸೆ
ಇಂದು ಅಪಘಾತ ನಡೆದ ಸಂದರ್ಭಗಳಿಗಿಂತ ಚಿಕಿತ್ಸೆ ದೊರೆಯುವ ವಿಳಂಬದಿಂದಲೇ ಹೆಚ್ಚಿನ ಸಾವು ಸಂಭವಿಸುತ್ತವೆ. ಅಪಘಾತಕ್ಕೊಳಗಾದ ವ್ಯಕ್ತಿಗಳು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪುವ ಪ್ರಕರಣಗಳೇ ಹೆಚ್ಚುತ್ತಿವೆ. ಒಂದು ವೇಳೆ ಗಾಯಾಳುಗಳನ್ನು ಆಸ್ಪತ್ರೆಗಳಿಗೆ ತಲುಪಿಸಿದರೂ ಚಿಕಿತ್ಸೆಯ ವೆಚ್ಚ ಭರಿಸಲು ಸಮಸ್ಯೆ, ಕಾನೂನಿನ ತೊಡಕುಗಳಿಂದ ಸಾವಿನ ಸಂಖ್ಯೆ ಹೆಚ್ಚುತ್ತಿವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ, ಅಪಘಾತದ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ‘ಮುಖ್ಯಮಂತ್ರಿ ಸಾಂತ್ವನ’ ಎಂಬ ಮಹತ್ವದ ಯೋಜನೆಯನ್ನು ಮಾ. 8ರಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬಾಂಕ್ವೆಟ್‌ಹಾಲ್‌ನಲ್ಲಿ ಚಾಲನೆ ನೀಡಲಿದೆ.
ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗೆ ರಸ್ತೆ ಅಪಘಾತಕ್ಕೆ ಒಳಗಾದ ಯಾವುದೇ ವ್ಯಕ್ತಿಗೆ ತುರ್ತಾಗಿ ಪ್ರಥಮ ಆದ್ಯತೆಯ ಮೇಲೆ ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ನೀವು ತಿಳಿದಿರಲೇ ಬೇಕಾದ ಮಾಹಿತಿಗಳು...
*ಈ ಯೋಜನೆಯ ಪ್ರಕಾರ ಅಪಘಾತಕ್ಕೊಳಗಾದ ವ್ಯಕ್ತಿಯ ಜೀವವನ್ನು ರಕ್ಷಿಸಲು ಮೊದಲ 48 ಗಂಟೆಗಳ ಅವಧಿಗೆ 25000 ರೂ.ವರೆಗಿನ ಚಿಕಿತ್ಸೆ ನೀಡಲು ಅವಕಾಶ.
*ರಾಜ್ಯದ ಗಡಿಯೊಳಗೆ ಅಪಘಾತಕ್ಕೊಳಗಾದ ಯಾವುದೇ ವ್ಯಕ್ತಿ (ರಾಜ್ಯದ, ಇತರ ರಾಜ್ಯದ, ಇತರ ದೇಶದ)ಗಳಿಗೆ ಗುರುತಿಸಲ್ಪಟ್ಟ ಅತಿ ಹತ್ತಿರದ ಆಸ್ಪತ್ರೆಗಳಲ್ಲಿ ತಕ್ಷಣದ ಚಿಕಿತ್ಸೆ.
*ಅಪಘಾತಕ್ಕೊಳಗಾದ ಗಾಯಾಳುಗಳನ್ನು ಗುರುತಿಸಲಾದ ಆಸ್ಪತ್ರೆಗಳಿಗೆ ತಕ್ಷಣ ಕೊಂಡೊಯ್ಯಲು ಸರಕಾರಿ ಆ್ಯಂಬುಲೆನ್ಸ್ ವಾಹನಗಳ ತುರ್ತು ನೆರವನ್ನು ಪಡೆಯಲು ವ್ಯವಸ್ಥೆ.
*ಅಪಘಾತದ ಸ್ಥಳದಲ್ಲಿಯೇ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ವೈದ್ಯಕೀಯ ಸಹಾಯಕರು, ಪ್ರಥಮ ಚಿಕಿತ್ಸೆಯ ಉಪಕರಣಗಳು, ಆಮ್ಲಜನಕ ಮತ್ತು ಔಷಧಿ ಮತ್ತಿತರ ವ್ಯವಸ್ಥೆಯನ್ನು ಈ ವಾಹನಗಳು ಒಳಗೊಂಡಿರುತ್ತವೆ. ಅಷ್ಟೇ ಅಲ್ಲದೆ ಅತಿ ಹತ್ತಿರದ ಆಸ್ಪತ್ರೆಯನ್ನು ಗುರುತಿಸಲು ಅನುಕೂಲವಾಗುವಂತೆ ರಸ್ತೆಯ ನಕಾಶೆ, ಜಿಪಿಎಸ್ ಅಳವಡಿಸಲಾಗಿರುತ್ತದೆ.
*ಅಪಘಾತಕ್ಕೀಡಾದ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಲಭ್ಯವಿರುವ ಇನ್ನಾವುದೇ ಖಾಸಗಿ ಆ್ಯಂಬುಲೆನ್ಸ್ ಅಥವಾ ಇನ್ನಿತರ ಸಾರಿಗೆಯ ನೆರವನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು.
*ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ತುರ್ತಾಗಿ ಚಿಕಿತ್ಸೆ ಲಭಿಸಲು ಹಾಗೂ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸಲು ‘104’ ಮತ್ತು ‘108’ ಸಹಾಯವಾಣಿಗಳ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಈ ಸಹಾಯವಾಣಿಗಳ ಮೂಲಕ ಗುರುತಿಸಲ್ಪಟ್ಟ ಆಸ್ಪತ್ರೆಗಳ ಬಗ್ಗೆ ವಿವರಗಳನ್ನು ಸಾರ್ವಜನಿಕರು ಬಳಸಿಕೊಳ್ಳಬಹುದು.
*ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆಯನ್ನು ಒದಗಿಸಲು ಅನುಕೂಲವಾಗುವಂತೆ ಸೂಕ್ತವಾದ ಹಾಗೂ ಉತ್ತಮ ಗುಣಮಟ್ಟದ ಆಸ್ಪತ್ರೆಗಳನ್ನು ಲೆವೆಲ್‌ಗಳ ಆಧಾರದ ಮೇಲೆ ಗುರುತಿಸಿ ಈಗಾಗಲೇ ನೋಂದಾಯಿಸಲಾಗಿದೆ.
*ಲೆವೆಲ್-1 ಅಥವಾ ಪ್ರಮುಖ ಟ್ರಾಮಾ ಕೇಂದ್ರಗಳು:
ಈ ಪ್ರಮುಖ ಟ್ರಾಮಾ ಕೇಂದ್ರಗಳು ಅಪಘಾತದ ಎಲ್ಲ ರೀತಿಯ ಸಂಕೀರ್ಣ ಚಿಕಿತ್ಸೆಗಳನ್ನು ಒದಗಿಸಬಲ್ಲ ಸಾಮರ್ಥ್ಯವುಳ್ಳ ಪರಿಣಿತ ವೈದ್ಯರು, ವೈದ್ಯಕೀಯ ತಪಾಸಣಾ ವ್ಯವಸ್ಥೆ, ಪರಿಣಿತ ಸಿಬ್ಬಂದಿ ಮತ್ತು ಅವಶ್ಯಕ ಮೂಲಸೌಕರ್ಯಗಳನ್ನು ಒಳಗೊಂಡ ಕೇಂದ್ರಗಳಾಗಿರುತ್ತವೆ. ಈ ರೀತಿಯ ಕೇಂದ್ರಗಳು ಪ್ರಾದೇಶಿಕ ಟ್ರಾಮಾ ಕೇಂದ್ರಗಳ ಸಾಮರ್ಥ್ಯಾಭಿವೃದ್ಧಿಗೆ ನೆರವು ಒದಗಿಸುವಂತಿರಬೇಕು.
*ಲೆವೆಲ್-2 ಅಥವಾ ಮಧ್ಯಮ ಹಂತದ ಟ್ರಾಮಾ ಕೇಂದ್ರಗಳು:
ಈ ಟ್ರಾಮ ಕೇಂದ್ರಗಳು ಬಹುತೇಕ ಎಲ್ಲ ಅಪಘಾತದ ಗಾಯಾಳುಗಳಿಗೆ ಚಿಕಿತ್ಸೆ ನೀಡಬಲ್ಲ ಹಾಗೂ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ.
*ಲೆವೆಲ್-3 ಅಥವಾ ಪ್ರಾಥಮಿಕ ಟ್ರಾಮಾ ಘಟಕಗಳು:
ಸುಸಜ್ಜಿತವಾದ ಹಾಗೂ ತರಬೇತಿಗೊಂಡ ಮಾನವ ಸಂಪನ್ಮೂಲ, ಜೀವರಕ್ಷಕ ಟ್ರಾಮಾ ವ್ಯವಸ್ಥೆಯನ್ನು ಹೊಂದಿರುವ ಮತ್ತು ತಕ್ಷಣದ ಚಿಕಿತ್ಸೆಯನ್ನು ಒದಗಿಸಬಲ್ಲ ಆಸ್ಪತ್ರೆಗಳು ಲೆವೆಲ್-3 ಆಸ್ಪತ್ರೆಗಳಾಗಿರುತ್ತವೆ. ಈ ಆಸ್ಪತ್ರೆಗಳು ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ಮುಂದಿನ ಹಂತದ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡುವ ಹೊಣೆಯನ್ನು ಹೊಂದಿರುತ್ತವೆ.
ಆನ್‌ಲೈನ್ ವ್ಯವಸ್ಥೆ:
ನ್ಯಾಶನಲ್ ಇನ್‌ಫಾರ್ಮೇಶನ್ ಸೆಂಟರ್ (ಎನ್‌ಐಸಿ) ಮೂಲಕ ಮುಖ್ಯಮಂತ್ರಿಗಳ ಸಾಂತ್ವನ ಯೋಜನೆಯ ಅನುಷ್ಠಾನಕ್ಕಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಅಪಘಾತದ ಗಾಯಾಳುಗಳ ನೋಂದಣಿ, ಆಸ್ಪತ್ರೆಗಳ ನೋಂದಣಿ ಹಾಗೂ ಕ್ಲೇಮುಗಳ ಸಲ್ಲಿಕೆ ಮುಂತಾದ ಎಲ್ಲ ಕಾರ್ಯಗಳೂ ಸಹ ಆನ್‌ಲೈನ್ ಮೂಲಕ ತ್ವರಿತಗತಿಯಲ್ಲಿ ನಡೆಸಲಾಗುತ್ತದೆ.
ರಾಷ್ಟ್ರದಲ್ಲೇ ಪ್ರಥಮ ರಾಜ್ಯ!
ರಾಜ್ಯದಲ್ಲಿ ‘ಮುಖ್ಯಮಂತ್ರಿಗಳ ಸಾಂತ್ವನ’ ಯೋಜನೆಯು ಜಾರಿಗೊಳ್ಳುವ ಮೂಲಕ ರಾಷ್ಟ್ರದಲ್ಲೇ ಇಂತಹದ್ದೊಂದು ಮಹತ್ವದ ಹಾಗೂ ಅಪೂರ್ವ ಯೋಜನೆಯನ್ನು ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
ಅಪಘಾತದಲ್ಲಿ ಗಾಯಗೊಳ್ಳುವವರಿಗೆ ಕ್ಷಿಪ್ರ ವೈದ್ಯಕೀಯ ನೆರವು ದೊರಕಿಸುವ ಉದ್ದೇಶದಿಂದ ‘ಮುಖ್ಯಮಂತ್ರಿ ಸಾಂತ್ವನ ಯೋಜನೆ’ ಜಾರಿಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಯೋಜನೆಗೆ ಇತ್ತೀಚೆಗೆ ಅಪಘಾತದಲ್ಲಿ ಅಸುನೀಗಿದ ‘ಹರೀಶ್’ ಹೆಸರಿಡಲು ಚಿಂತನೆ ನಡೆಸಲಾಗಿದೆ.
-ಯು.ಟಿ.ಖಾದರ್, ಆರೋಗ್ಯ ಸಚಿವ