ನದಿ ನುಂಗುವ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಹಾಗು ART OF LYING !
ರವಿಶಂಕರ್ ಗುರು ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮಾರ್ಚ್ ೧೧ ರಿಂದ ೧೩ ರವರೆಗೆ ದೆಹಲಿಯ ಯಮುನಾ ನದಿ ಕಿನಾರೆಯಲ್ಲಿ ಆಯೋಜಿಸುತ್ತಿರುವ ಬೃಹತ್ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಯಮುನಾ ನದಿ ಹಾಗು ಅಲ್ಲಿನ ಪರಿಸರಕ್ಕೆ ದೊಡ್ಡ ಹಾನಿ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.ಇದಕ್ಕಾಗಿ ಆರ್ಟ್ ಆಫ್ ಲಿವಿಂಗ್ ಗೆ 120 ಕೋಟಿ ರೂ. ಭಾರೀ ದಂಡವನ್ನೂ ಹಾಕಲಾಗಿದೆ. ಈಗಾಗಲೇ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಭಾವಹಿಸುವುದನ್ನು ರದ್ದು ಪಡಿಸಿದ್ದಾರೆ. ತನ್ನ ವಿರುದ್ಧ ಕೇಳಿ ಬಂಡ ಆರೋಪಗಳಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸ್ಪಷ್ಟೀಕರಣ ನೀಡಿ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದೆ. ಆದರೆ http://www.dailyo.in/ ನ ವಿಮಲೆಂದು ಜ್ಹಾ ಅವರು ಕಾರ್ಯಕ್ರಮ ನಡೆಯುವ ಜಾಗಕ್ಕೆ ಭೇಟಿ ನೀಡಿ ವಾಸ್ತವವನ್ನು ಮುಂದಿಟ್ಟಿದ್ದಾರೆ. ಅದಕ್ಕೆ ಸಾಕ್ಷ್ಯವಾಗಿ ಚಿತ್ರಗಳೂ ಇಲ್ಲಿವೆ.
ಫೆಬ್ರವರಿ 28 ಕ್ಕೆ ನೀಡಿದ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಆರ್ಟ್ ಆಫ್ ಲಿವಿಂಗ್ (AOL) ಸಂಸ್ಥೆ ಈ ಕೆಳಗಿನ ಹೇಳಿಕೆಗಳನ್ನು ನೀಡಿದೆ.
ಆರ್ಟ್ ಆಫ್ ಲಿವಿಂಗ್ (AOL) ಹೇಳಿಕೆ 1 :
" ಎನ್ ಜಿ ಟಿ ಮಾರ್ಗದರ್ಶಿ ಸೂತ್ರವನ್ನು ಕಟ್ಟುನಿಟ್ಟಾಗಿ ಪಾಲಿಸಿರುವ ಆರ್ಟ್ ಆಫ್ ಲಿವಿಂಗ್ (AOL) ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಜಾಗದಲ್ಲಿ ಯಾವುದೇ ನಿರ್ಮಾಣ / ಕಾಂಕ್ರಿಟೀಕರಣ ಮಾಡಿಲ್ಲ. "
ವಾಸ್ತವ 1೧ :
ಕಾಂಕ್ರೀಟ್ ನಿರ್ಮಾಣ ಮಾಡಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಇಡೀ ಕಾರ್ಯಕ್ರಮದ ಪ್ರಮಾಣ ಹಾಗು ಅದಕ್ಕಾಗಿ ಮಾಡಿರುವ ನಿರ್ಮಾಣಗಳು ಎನ್ ಜಿ ಟಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿವೆ.
ಆರ್ಟ್ ಆಫ್ ಲಿವಿಂಗ್ (AOL) ಹೇಳಿಕೆ 2 :
" ನಾವು ಕೇವಲ ಮರ, ಮಣ್ಣು , ಬಟ್ಟೆ ಇತ್ಯಾದಿ ಪರಿಸರ ಸ್ನೇಹಿ ವಸ್ತುಗಳನ್ನು ಮಾತ್ರ ಬಳಸಿ ಮೂರು ದಿನಗಳ ಕಾರ್ಯಕ್ರಮಕ್ಕಾಗಿ ತಾತ್ಕಾಲಿಕ ವೇದಿಕೆ ನಿರ್ಮಿಸಿದ್ದೇವೆ "
ವಾಸ್ತವ 2:
ಸ್ಟೀಲ್ , ಕಬ್ಬಿಣ , ಫ್ಲೆಕ್ಸ್ , ಪ್ಲಾಸ್ಟಿಕ್ ಹಾಗು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಳ ಬಳಕೆಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ವೇದಿಕೆ ತಾತ್ಕಾಲಿಕವಾದರೂ ಈ ಅಪಾಯಕಾರಿ ವಸ್ತುಗಳ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದು ಖಚಿತ ಹಾಗು ಇದು ಆರ್ಟ್ ಆಫ್ ಲಿವಿಂಗ್ ನ ಹೇಳಿಕೆಗೆ ತದ್ವಿರುದ್ಧವಾಗಿದೆ.
ಆರ್ಟ್ ಆಫ್ ಲಿವಿಂಗ್ (AOL) ಹೇಳಿಕೆ 3 :
ನಾವು ಯಾವುದೇ ತ್ಯಾಜ್ಯ ಎಸೆದು ಯಮುನಾ ನದಿಯ ಕಾಲುವೆಯನ್ನು ತಡೆದಿಲ್ಲ. ಅಲ್ಲಿರುವುದು ಈಗಾಗಲೇ ಸ್ಥಳೀಯ ಗ್ರಾಮಸ್ಥರು ತಮ್ಮ ಓಡಾಟಕ್ಕೆ ದಾರಿ ಮಾಡಿಕೊಳ್ಳಲು ಮೊದಲೇ ಹಾಕಿಟ್ಟಿದ್ದ ತ್ಯಾಜ್ಯವಾಗಿದೆ. ಅಲ್ಲಿರುವ ನಿರ್ಮಾಣ ತ್ಯಾಜ್ಯ ಮೊದಲೇ ಅಲ್ಲಿತ್ತು ಮತ್ತು ಉಳಿದದ್ದು ಪಕ್ಕದಲ್ಲಿ ನಡೆಯುತ್ತಿರುವ ಬೇರೆ ನಿರ್ಮಾಣದ್ದು.
ವಾಸ್ತವ 3 :
ಇಡೀ ಒಂದು ಸಾವಿರ ಎಕರೆ ಜಾಗ ಏಕಾಏಕಿ ಸಂಪೂರ್ಣ ಸಮತಟ್ಟಾಗಿ, ಚೊಕ್ಕವಾಗಿ ಫುಟ್ಬಾಲ್ ಮೈದಾನದಂತೆ ಆಗಿದೆ ಎಂದರೆ ನಿಮ್ಮ " ದೈವಿಕ " ಶಕ್ತಿ ಹಾಗು ಇದನ್ನು ಮಾಡಿದ ಸಿವಿಲ್ ಇಂಜಿನಿಯರಿಂಗ್ ಎರಡೂ ಅತ್ಯಂತ ಅಸಾಮಾನ್ಯವಾಗಿರಬೇಕು. ಹೊರಗಿನಿಂದ ನಿರ್ಮಾಣ ತ್ಯಾಜ್ಯವನ್ನು ತಂದು ಲ್ಯಾಂಡ್ ಮೂವರ್ ಗಳು ಇಲ್ಲಿ ಭೂಮಿ ಸಮತಟ್ಟು ಮಾಡುತ್ತಿರುವುದನ್ನು ನೋಡಲಾಗಿದೆ.
ಆರ್ಟ್ ಆಫ್ ಲಿವಿಂಗ್ (AOL) ಹೇಳಿಕೆ 4 :
" ನಾವು ಯಾವುದೇ ಗಿಡ ಮರಗಳನ್ನು ಅಲ್ಲಿಂದ ತೆಗೆದಿಲ್ಲ ಹಾಗು ಹೊರಗಿನಿಂದ ನಿರ್ಮಾಣ ತ್ಯಾಜ್ಯವನ್ನು ತಂದು ಹಾಕಿಲ್ಲ. ತಾತ್ಕಾಲಿಕ ವೇದಿಕೆಗಾಗಿ ಬಳಸಿದ ಯಾವುದೇ ವಸ್ತುಗಳು ನದಿ ತಳಕ್ಕೆ ತಲುಪಿಲ್ಲ. ಸ್ಥಳದಲ್ಲಿ ಯಾವುದೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಲ್ಲ. ಅಲ್ಲಿ ನಿರ್ಮಿಸಿರುವ ರ್ಯಾಂಪ್ಗಳೂ ಕಾಂಕ್ರೀಟ್ ರಹಿತ ಮಣ್ಣಿನಿಂದ ಮಾಡಿರುವ ತಾತ್ಕಾಲಿಕ ನಿರ್ಮಾಣವಾಗಿದೆ.
ವಾಸ್ತವ 4 :
ಹೊರಗಿನಿಂದ ತಂದ ನಿರ್ಮಾಣ ಹಾಗು ಕಾಂಕ್ರೀಟ್ ತ್ಯಾಜ್ಯಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಬೃಹತ್ ಟ್ರಕ್ಕುಗಳ ಸಹಿತ ಸಾವಿರಾರು ವಾಹನಗಳು ಪ್ರಯಾಣಿಸುವ ಈ ರಸ್ತೆಗಳು ಇಲ್ಲಿನ ಪರಿಸರಕ್ಕೆ ಭಾರೀ ಹಾನಿ ಮಾಡಲಿವೆ. ಈಗಾಗಲೇ ಸಾಕಷ್ಟು ಹಾನಿ ಮಾಡಿವೆ.
ಇದೇ ಕಾರ್ಯಕ್ರಮ ಜಾಗವನ್ನು ಬೃಹತ್ ಯಂತ್ರಗಳು ಹಾಗು ಜೆಸಿಬಿ ಗಳನ್ನು ಬಳಸಿ ಸಮತಟ್ಟು ಮಾಡಲಾಗಿದೆ. ಸ್ಥಳದಲ್ಲಿ ಎಲ್ಲ ಗಿಡ ಮರಗಳನ್ನು ಕಿತ್ತು ಹಾಕಲಾಗಿದೆ. ಇದರಿಂದ ಇಲ್ಲಿನ ಪ್ರಾಣಿ ಪಕ್ಷಿ ಸಂಕುಲಕ್ಕೆ ದೊಡ್ಡ ನಷ್ಟವಾಗಿದೆ. ಇಲ್ಲಿ ಚಾಲನೆಯಲ್ಲಿರುವ ಬೃಹತ್ ಡೀಸಲ್ ಜನರೇಟರ್ ಗಳು ಸಾಕಷ್ಟು ಹಾನಿ ಮಾಡುತ್ತಿವೆ.
ಆರ್ಟ್ ಆಫ್ ಲಿವಿಂಗ್ (AOL) ಹೇಳಿಕೆ 5 :
" ನಾವು ಭರವಸೆ ನೀಡಿದಂತೆ ಕಾರ್ಯಕ್ರಮದ ಸ್ಥಳ ನದಿ ದಂಡೆಯಿಂದ ಸುರಕ್ಷಿತ ಅಂತರದಲ್ಲಿದೆ. ಯಮುನಾ ನದಿಗೆ ಯಾವುದೇ ತ್ಯಾಜ್ಯ ಹೋಗದಂತೆ ನಾವು ೬೫೦ ಬಯೋ ಟಾಯ್ಲೆಟ್ ಗಳನ್ನೂ ಅಳವಡಿಸುತ್ತಿದ್ದೇವೆ. "
ವಾಸ್ತವ 5 :
ಯಾವುದು ಸುರಕ್ಷಿತ ಅಂತರ ? ನದಿಯಿಂದ ಕೇವಲ 20 ಮೀಟರ್ ದೂರದಲ್ಲಿ ಕನಿಷ್ಠ ೧೦೦ ಟ್ರಕ್ಕುಗಳನ್ನು ನಿಲ್ಲಿಸಲಾಗಿದೆ ಹಾಗು ಕೇವಲ 50 ಮೀಟರ್ ದೂರದಲ್ಲಿ ಟೆಂಟ್ಗಳನ್ನೂ ನಿರ್ಮಿಸಲಾಗಿದೆ. ನಾವು ನೋಡಿದ ಟಾಯ್ಲೆಟ್ ಗಳು ಸಾಮಾನ್ಯ ಟಾಯ್ಲೆಟ್ ಗಳು. ಅವು ಹೇಗೆ ಪರಿಸರ ಸ್ನೇಹಿ ಎಂದು ಗೊತ್ತಾಗುತ್ತಿಲ್ಲ. ಒಂದು ವೇಳೆ ಅವು ಪರಿಸರ ಸ್ನೇಹಿ ಆಗಿದ್ದರೂ 35 ಲಕ್ಷ ಜನ ಯಮುನಾ ನದಿ ಕಿನಾರೆಯಲ್ಲಿ ಮೂತ್ರ ಮಾಡಿದ್ದನ್ನು ಯಾವ ತಂತ್ರಜ್ಞಾನ ಸರಿಪಡಿಸಬಲ್ಲದು ? ಇಡೀ ಸ್ಥಳವನ್ನು ಡಂಪಿಂಗ್ ಮೈದಾನವಾಗಿ ಪರಿವರ್ತಿಸಲಾಗಿದೆ.
ಆರ್ಟ್ ಆಫ್ ಲಿವಿಂಗ್ (AOL) ಹೇಳಿಕೆ 6 :
" ಯಾವುದೇ ಪಾರ್ಕಿಂಗ್ ಜಾಗವನ್ನು ಯಮುನಾ ನದಿ ದಂಡೆಯಲ್ಲಿ ನಿರ್ಮಿಸಿಲ್ಲ. ಕೇವಲ ಜನರು ಕಾರ್ಯಕ್ರಮ ಜಾಗಕ್ಕೆ ತಲುಪುವಂತೆ ತಾತ್ಕಾಲಿಕ ದಾರಿಯನ್ನು ನಿರ್ಮಿಸಲಾಗಿದೆ. ಅಷ್ಟೇ . "
ವಾಸ್ತವ 6:
ಇಡೀ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತಮುತ್ತ ಎಕರೆಗಟ್ಟಲೆ ಜಾಗವನ್ನು ಪಾರ್ಕಿಂಗ್ ಜಾಗವೆಂದು ಗುರುತಿಸಲಾಗಿದೆ. 35 ಲಕ್ಷ ಜನ ಅದರಲ್ಲಿ ಕೆಲವು ಸಾವಿರ ಗಣ್ಯರು ಭಾಗವಹಿಸುವ ಕಾರ್ಯಕ್ರಮವೆಂದರೆ ಅವರ ಕಾರುಗಳನ್ನು ಇಲ್ಲಿ ಪಾರ್ಕ್ ಮಾಡಲೇಬೇಕು ಎಂಬುದು ಕಾಮನ್ ಸೆನ್ಸ್ ಅಲ್ಲವೇ ?"
courtesy : http://www.dailyo.in