ಸಿದ್ಧತೆ, ಬದ್ಧತೆ ಮತ್ತು ಪ್ರಬುದ್ಧತೆಗಳ ಮೊತ್ತವೇ ಅರಸು

Update: 2016-03-08 18:05 GMT

 ಕಾನಗೋಡು ಮನೆ, ಒಳಸೊನ್ನೆ ಹೊರಸೊನ್ನೆ, ಚಂದ್ರ ನೀನೊಬ್ಬನೆ- ಮೂರು ಕವನ ಸಂಕಲನಗಳು; ಗುಬ್ಬಚ್ಚಿಯ ಗೂಡು ಎಂಬ ಚುಟುಕುಗಳ ಸಂಕಲನ; ಕೀನ್ ಎಂಬ ನಾಟಕ, ಸಾರ್ತೃನ ಪದಚರಿತ, ಸಾದತ್ ಹಸನ್ ಮಾಂಟೊ ಕುರಿತ ಅನುವಾದಿತ ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ಕೊಟ್ಟ ಕೆ.ಎಚ್.ಶ್ರೀನಿವಾಸ್(77) ಶಿವಮೊಗ್ಗ ಜಿಲ್ಲೆಯ ಸಾಗರದವರು. ಕೆೆ.ಎಚ್.ಶ್ರೀನಿವಾಸರ ಯೌವನದ ದಿನಗಳಲ್ಲಿ ಸಾಗರ ಸಮಾಜವಾದಿಗಳ ತವರೂರಾಗಿತ್ತು. ಗೇಣಿದಾರರ ಹೋರಾಟದ ಕಣವಾಗಿತ್ತು. ಸೈದ್ಧಾಂತಿಕ ರಾಜಕಾರಣಿಗಳನ್ನು ಹುಟ್ಟುಹಾಕಿದ ಸ್ಥಳವಾಗಿತ್ತು. ತಂದೆಯ ಕಾಲಕ್ಕೇ ಪ್ರಭುತ್ವದ ವಿರುದ್ಧ ನಿಲ್ಲುವ, ತಮ್ಮ ಮನೆಯನ್ನೇ ಅಡಗುತಾಣ ವನ್ನಾಗಿ ಪರಿವರ್ತಿಸಿದ ಕೀರ್ತಿಗೆ ಇವರ ಕುಟುಂಬ ಭಾಜನವಾಗಿತ್ತು. ಅಂತಹ ಪರಿಸರದಿಂದ ಬಂದ ಶ್ರೀನಿವಾಸರು ಸಹಜವಾಗಿಯೇ ಸಮಾಜವಾದಿ ಸಿದ್ಧಾಂತ, ಪ್ರಗತಿಪರ ಆಲೋಚನೆ ಮತ್ತು ಜಾತ್ಯತೀತ ನಿಲುವುಗಳನ್ನು ಮೈಗೂಡಿಸಿಕೊಂಡು ಬೆಳೆದರು. ಕುವೆಂಪು-ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿ, ಅನಂತಮೂರ್ತಿ-ಲಂಕೇಶರಂತಹ ಸಾಹಿತಿಗಳ ಸಹವಾಸಕ್ಕೆ ಬಿದ್ದು, ಸಮಾಜವಾದಿ ಹೋರಾಟಗಾರರ ಒಡನಾಟವಿಟ್ಟುಕೊಂಡವರು. ಕವಿ ಹೃದಯದ, ಸೌಮ್ಯಸ್ವಭಾವದ ವ್ಯಕ್ತಿ ಎಂದೇ ಹೆಸರಾದ ಕೆ.ಎಚ್.ಶ್ರೀನಿವಾಸ್, ಇಂಗ್ಲಿಷ್ ಎಂಎ ಜೊತೆಗೆ ಕಾನೂನು ಪದವಿ ಪಡೆದು ದೂರದ ದಿಲ್ಲಿಯ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯವಾದಿಯಾಗಬೇಕಿದ್ದವರು ರಾಜಕಾರಣಿಯಾದರು.
 
 ಮೂರು ಬಾರಿ ಶಾಸಕರಾಗಿ ಗೆದ್ದು, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಂಡ ಶ್ರೀನಿವಾಸರು ಗೆಲುವಿಗಿಂತ ಹೆಚ್ಚಾಗಿ ಸೋಲನ್ನೇ ಕಂಡವರು. ಅರಸು ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಇಂಧನ, ವಾರ್ತಾ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯೋಜನಾ ಖಾತೆಗಳನ್ನು ನಿರ್ವಹಿಸಿದವರು. ದೇವರಾಜ ಅರಸು ಮತ್ತು ಜೆ.ಎಚ್.ಪಟೇಲರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿ ಸಿಎಂ ಕಚೇರಿಯ ರಾಜಕಾರಣವನ್ನು ಅರೆದು ಕುಡಿದವರು. 1990ರಲ್ಲಿ ವೀರೇಂದ್ರ ಪಾಟೀಲರು ಮುಖ್ಯ ಮಂತ್ರಿಯಾದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಶ್ರೀನಿವಾಸರು, 1999ರಲ್ಲಿ ಜೆ.ಎಚ್.ಪಟೇಲರ ಮೂಲಕ ಜೆಡಿಎಸ್ ಸೇರಿ ವಿಧಾನ ಪರಿಷತ್ ಸದಸ್ಯರಾಗಿ, ಮೇಲ್ಮನೆ ನಾಯಕರಾದರು. ಎಸ್.ಎಂ.ಕೃಷ್ಣರ ಕಾಲಕ್ಕೆ ಮತ್ತೆ ಕಾಂಗ್ರೆಸ್‌ಗೆ ಮರಳಿ ಬಂದರು. ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಬಿಜೆಪಿಗೆ ಹತ್ತಿರವಾದರು, ಅವರು ಬಿಜೆಪಿ ಬಿಟ್ಟು ಕೆಜೆಪಿ ಮಾಡಿದಾಗ ಅಲ್ಲೂ ಸ್ವಲ್ಪ ದಿನ ಇದ್ದರು. ಸಾಹಿತ್ಯ, ಸಂಗೀತ, ಕಾನೂನು, ರಾಜಕಾರಣ.. ಹೀಗೆ ಎಲ್ಲವನ್ನೂ ಬಲ್ಲ, ಎಲ್ಲ ಕ್ಷೇತ್ರಗಳ ಜನರೊಂದಿಗೂ ಉತ್ತಮ ಬಾಂಧವ್ಯವನ್ನಿಟ್ಟುಕೊಂಡ ಶ್ರೀನಿವಾಸರು ಸದ್ಯಕ್ಕೆ ಯಾವ ಪಕ್ಷಕ್ಕೂ ಸೇರದೆ ತಟಸ್ಥವಾಗಿದ್ದಾರೆ. ಸಾಗರದ ಲಾಲ್ ಬಹದ್ದೂರ್ ವಿದ್ಯಾ ಕೇಂದ್ರದ ಉಸ್ತುವಾರಿ ಹೊತ್ತಿರುವ, ದೇವರಾಜ ಅರಸು ಅವರ ನೆನಪಿನಲ್ಲಿ ಅರಸು ಕಲಾಕ್ಷೇತ್ರ ಸ್ಥಾಪಿಸಿರುವ ಕೆ.ಎಚ್.ಶ್ರೀನಿವಾಸರು, 1967ರಿಂದ 1982ರವರೆಗೆ ದೇವರಾಜ ಅರಸು ಅವರನ್ನು ಹತ್ತಿರದಿಂದ ಬಲ್ಲವರು, ಅವರ ಆಪ್ತ ಬಳಗದಲ್ಲೊಬ್ಬರು. ಅವರು ಕಂಡ ಅರಸರನ್ನು ಕಂಡಿರಿಸಿದ್ದಾರೆ.

ಅರಸು ಸಿದ್ಧತೆ 1972 ರ ವಿಧಾನಸಭಾ ಚುನಾವಣೆಯಲ್ಲಿ ಅರಸು ಗೆದ್ದು ಮುಖ್ಯಮಂತ್ರಿಯಾದರು. ನಾನು ರಾಜಕೀಯದಿಂದ ದೂರ ಉಳಿದು ಹೈಕೋರ್ಟ್‌ನತ್ತ ಮುಖ ಮಾಡಿದೆ. ಆಗಲಿಲ್ಲ, ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಪ್ರಾಕ್ಟೀಸ್ ಕಂಟಿನ್ಯೂ ಮಾಡಿದೆ. ಆಗೊಂದು ದಿನ ಅರಸು ನನ್ನನ್ನು ಕರೆಸಿದರು. ಪ್ಯಾಲೆಸ್ ಗ್ರೌಂಡ್‌ನಲ್ಲಿ ವಾಕಿಂಗ್ ಮಾಡ್ತಾ ಭೂ ಸುಧಾರಣೆ ಕಾಯ್ದೆ ಬಗೆಗಿನ ಅವರ ಸಿದ್ಧತೆಗಳನ್ನು ವಿವರಿಸಿದರು. ನನಗೆ ನಮ್ಮ ಸಾಗರ ಶಿವಮೊಗ್ಗ ಕಡೆಯ ಗೇಣಿದಾರರ ಹೋರಾಟದ ಕತೆ ನೆನಪಾಯಿತು. ಈಗ ಗೆದ್ದಿರುವ, ಸೋಷಲಿಸ್ಟ್ ಪಾರ್ಟಿಯ ಕಾಗೋಡು ತಿಮ್ಮಪ್ಪ, ಬಂಗಾರಪ್ಪ, ಕೋಣಂದೂರು ಲಿಂಗಪ್ಪನವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ, ಸೋಷಲಿಸ್ಟ್ ಪಾರ್ಟಿಯ ಅಸ್ತಿತ್ವವೂ ಉಳಿಯುತ್ತೆ, ನಿಮ್ಮ ಭೂ ಸುಧಾರಣೆ ಕಾಯ್ದೆಗೆ ನ್ಯಾಯವೂ ದೊರಕುತ್ತೆ, ರಾಜಕೀಯವಾಗಿ ನಿಮಗೂ ಬಲ ಬರುತ್ತೆ ಎಂದು ಬಹಳ ಸ್ಟ್ರಾಂಗ್ ಆಗಿ ಹೇಳಿದೆ. ನಾನು ಅವರಲ್ಲಿ ಕಂಡ ವಿಶೇಷವಾದ ಗುಣವೇ ಅದು. ಯಾರಾದರೂ ಏನಾದರೂ ಹೇಳಿದರೆ, ಸಹನೆಯಿಂದ ಕೇಳುತ್ತಿದ್ದರು. ಕೇಳಿದ್ದರ ಸಾಧಕ-ಬಾಧಕಗಳ ತುಲನೆ ಮಾಡುತ್ತಿದ್ದರು. ತಮ್ಮ ತಲೆಯೊಳಗಿರುವ ಸಿದ್ಧತೆಗಳೊಂದಿಗೆ ಸಮೀಕರಿಸುತ್ತಿದ್ದರು. ಆನಂತರ ಅನುಷ್ಠಾನಕ್ಕಿಳಿಸುತ್ತಿದ್ದರು. ಅಂತಃಕರುಣಿ ಅರಸು

 ನಾನು ಈ ರಾಜಕಾರಣವೇ ಬೇಡ ಎಂದು ಶಿವಮೊಗ್ಗದಲ್ಲಿ ವಕೀಲಿಕೆ ಮಾಡಿಕೊಂಡಿದ್ದೆ. ಆಗ ಒಂದು ದಿನ, ನನ್ನ ಗೆಳೆಯ ಪಾರ್ಥಸಾರಥಿ, ಭದ್ರಾವತಿಯ ಪೇಪರ್ ಮಿಲ್‌ನಲ್ಲಿ ಅಧಿಕಾರಿಯಾಗಿದ್ದರು, ಹುಡುಕಿಕೊಂಡು ಬಂದವರೆ, ‘ಅವನು ಎಲ್ಲಿದ್ರು ಸರಿ, ಹುಡುಕಿ ಹಿಡಿದುಕೊಂಡು ಬಾ ಅಂತ ಅರಸು ಹೇಳಿಕಳುಹಿಸಿದ್ದಾರಪ್ಪ’ ಅಂದರು. ‘ನಾನು ಯಾಕ್ ಬೇಕಪ್ಪ ಅವರಿಗೆ, ಈಗ....’ ಎಂದು ರಾಗ ಎಳೆದೆ. ‘ಅದೆಲ್ಲ ಗೊತ್ತಿಲ್ಲ, ನೀನು ಈ ತಕ್ಷಣ ಬಸ್ ಹತ್ತಿ ಬೆಂಗಳೂರಿಗೆ ಹೋಗಿ ಅರಸು ಅವರನ್ನು ಕಾಣಬೇಕು’ ಎಂದು ಆರ್ಡರ್ ಮಾಡಿದರು. ಬೆಂಗಳೂರಿಗೆ ಬರುವಷ್ಟರಲ್ಲಿ ಸಂಜೆಯಾಗಿತ್ತು, ಅಶೋಕ ಹೊಟೇಲ್ ಪಕ್ಕದ ಮುಖ್ಯಮಂತ್ರಿಗಳ ನಿವಾಸ, ಆಗ ಎರಡೂ ಮನೆ ಒಂದೇ ಆಗಿತ್ತು. ಮನೆ ಮುಂದೆ ಜನವೋ ಜನ. ಖಾಲಿಯಾಗಲಿ ಎಂದು ರಸ್ತೆಯಲ್ಲಿಯೇ ನಿಂತೆ. ಕೊನೆಗೆ ಜನ ಖಾಲಿಯಾದ್ರು. ಆಗ ಹೋಗಿ ಪೊಲೀಸರಿಗೆ, ‘ನನ್ನ ಹೆಸರು ಕೆ.ಎಚ್.ಶ್ರೀನಿವಾಸ್ ಅಂತ, ಸಿಎಂ ಸಾಹೇಬರು ಬರಕೇಳಿದ್ರು, ಅವರಿಗೆ ವಿಷಯ ಮುಟ್ಟಿಸಬಹುದಾ’ ಎಂದು ವಿನಂತಿಸಿಕೊಂಡೆ. ಆತ ಹೋಗಿ ಹೇಳಿದ.
ಇತ್ತ ನಾನು, ಅವರು ಮುಖ್ಯಮಂತ್ರಿಗಳು, ಬಿಡುವಿರಲ್ಲ, ಈತ ಹೋಗಿ ಹೇಳಿದರೆ ಅದೇ ನನ್ನ ಪುಣ್ಯ. ವಿಷಯ ತಿಳಿದ ಅರಸು ಹೆಚ್ಚೆಂದರೆ ನಾಳೆ ಬರಲಿಕ್ಕೇಳಿ ಎನ್ನಬಹುದು. ಅಥವಾ ಒಳಕ್ಕೆ ಕರೀರಿ ಎಂಬ ಸಂದೇಶ ಬರಬಹುದು ಎಂದು ಕಾಯುತ್ತಾ ನಿಂತೆ. ನೋಡಿದರೆ ಅವರೇ, ಅರಸರೇ ನಡಕೊಂಡು ನಾನಿದ್ದಲ್ಲಿಗೇ ಬಂದರು. ‘ಏನಯ್ಯಾ, ಯಾಕಯ್ಯ ಇಲ್ಲಿ ನಿಂತಿದ್ದೀಯಾ’ ಎಂದು ಒಳಕ್ಕೆ ಕರೆದುಕೊಂಡು ಹೋದರು. ಆ ಮಾನವೀಯತೆ, ಆ ಹೃದಯ ವೈಶಾಲ್ಯತೆ ಇದೆಯಲ್ಲ ಅದೇ ಅರಸು. ಅದು ಅವರಲ್ಲಿ ಮಾತ್ರ. ಅವತ್ತು ಅವರ ಮಗಳ ಬರ್ತ್‌ಡೇ ಅಂತ ಕಾಣುತ್ತೆ, ಮನೆಯಲ್ಲಿ ಹೆಚ್ಚು ಜನರಿದ್ದರು. ನಾನು ‘ಫಸ್ಟ್ ಊಟ ಹಾಕ್ರಿ, ಬಸ್‌ನಿಂದ ಇಳಿದು ಇಲ್ಲಿಗೆ ನೇರ ಬಂದಿದ್ದೇನೆ, ನೋಡ್ಕಂಡು ಹೋಗ್‌ಬಿಡ್ತೀನಿ’ ಅಂದೆ. ‘ನೋಡ್ ಹೋಗಕ್ಕಲ್ಲ ನಿನ್ನ ಕರೆಸಿದ್ದು’ ಎಂದ ಉದಾರಿ ಅರಸು ಊಟದ ಟೇಬಲ್ ಬಳಿಗೆ ಕೈ ಹಿಡಿದು ಕರೆದುಕೊಂಡು ಹೋಗಿ ಊಟ ಕೊಡಿಸಿ ಎದುರು ಕೂತರು. ಊಟ ಆದಮೇಲೆ ‘ಮನೇಲಿ ಜನ ಜಾಸ್ತಿ ಇದಾರೆ, ಎಲ್ಲಿ ಉಳಕತಿಯ’ ಎಂದರು. ನಾನು ಸ್ನೇಹಿತನ ಮನೆ ಇದೆ ಅಂದೆ. ‘ನಾಳೆ ಬೆಳಗ್ಗೆ 5:30ಕ್ಕೆ ಬಾ, ಈ ಬಾಗಿಲ ಮೂಲಕ ಬಾ, ನಿನ್ನನ್ಯಾರು ತಡೆಯಲ್ಲ, ಆಮೇಲೆ ಮಾತಾಡೋಣ’ ಎಂದರು. ಸಮಾನ ಮನಸ್ಥಿತಿ ಒಂದು ಮಾಡಿತು

ಅರಸು ಸರಕಾರ ಬಂದು ಒಂದು ವರ್ಷವಾಗಿದ್ದರೂ, ಆಗಲೆ ಅವರ ವಿರುದ್ಧ ಸಣ್ಣ ಮಟ್ಟದಲ್ಲಿ ಭಿನ್ನಮತ ಶುರುವಾಗಿತ್ತು. ಕೆ.ಎಚ್.ಪಾಟೀಲರ ಸೆಕ್ರೆಟರಿಯಾಗಿದ್ದ ರೆಡ್ಡಿ ಅನ್ನುವ ವ್ಯಕ್ತಿ, ಅರಸು ಸರಕಾರ ಇನ್ನೆರಡೇ ದಿನ, ಒಂದೇ ವಾರ, ಮುಗೀತು ಕತೆ ಅಂತೆಲ್ಲ ಟಾಂ ಟಾಂ ಹೊಡಕೊಂಡು ತಿರುಗುತ್ತಿದ್ದ. ಇದು ಅರಸು ಅವರಿಗೆ ಕೊಂಚ ಕಸಿವಿಸಿ ತರಿಸಿತ್ತು. ಜೊತೆಗೆ ಅಧಿಕಾರಿಗಳಲ್ಲಿ ಹೆಚ್ಚಿನವರು ಮೇಲ್ಜಾತಿಯವರೇ ಆದ್ದರಿಂದ ಸಹಕರಿಸದೆ ಸತಾಯಿಸುತ್ತಿದ್ದರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ, ಬೆಳಗ್ಗೆ 5:30ಕ್ಕೆ ಹೋದೆ. ಅರಸು, ‘ನೋಡಯ್ಯ, ಕೆಲವು ದಿನಗಳಿಂದ ನಾನು ಯೋಚಿಸ್ತಿದೀನಿ, ಸಕಲ ಜ್ಞಾನವಿರುವ ಒಬ್ಬ ವ್ಯಕ್ತಿ ಬೇಕು, ಪೊಲಿಟಿಕಲ್ ಫೈಲ್ ಸ್ಕ್ರೂಟಿನೈಸ್, ಪುಟಪ್, ಕರೆಸ್ಪಾಂಡೆನ್ ್ಸಗೆ ಅನುಕೂಲವಾಗಲಿಕ್ಕೆ... ಒಟ್ಟಾರೆ ನನ್ನ ಬರ್ಡನ್ ಕಡಿಮೆ ಮಾಡಲಿಕ್ಕೆ ಪಾಲಿಟಿಕ್ಸ್‌ನಲ್ಲಿ ಜ್ಞಾನವಿರುವ ನಿನ್ನಂಥೋನು ಬೇಕು ನನಗೆ. ಈ ಬ್ಯೂರಕ್ರಾಟ್ಸ್‌ಗೆ ಅದೆಲ್ಲ ಏನೂ ತಿಳಿಯಲ್ಲ ಕಣಯ್ಯ. ನಮ್ ಲಿನ್ ಕೂಡ ಹೇಳಿದಾರೆ, ಅದಕ್ಕೆ ನಿನ್ನ ಕರೆಸಿದೆ. ಏನ್ ಮಾಡಬೇಕು, ಅದೆಂತ ಪೋಸ್ಟ್, ಅದ್ನ ನೀನೇ ಡಿಸೈಡ್ ಮಾಡು. ಲಿನ್ ಜೊತೆ ಮಾತಾಡಿ ಬೇಗ ಫೈನಲೈಸ್ ಮಾಡು’ ಎಂದರು. ಏಕೆಂದರೆ ನನ್ನ ಶಾಸನ ಸಭೆಯ ಭಾಷಣ, ಸೆಕ್ರೆಟರಿಯಾಗಿ ನಿರ್ವಹಿಸಿದ ಕೆಲಸವನ್ನೆಲ್ಲ ನೋಡಿದ್ದರಲ್ಲ, ಆಯ್ತು ಅಂದು, ಲಿನ್ ಜೊತೆ ಕೂತು ಚರ್ಚಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಕ್ರಿಯೇಟ್ ಮಾಡಿದೆ. ಅದು ಆ ಕಾಲಕ್ಕೆ ಇಡೀ ಇಂಡಿಯಾದಲ್ಲಿ ಯಾವ ರಾಜ್ಯದಲ್ಲೂ ಇರಲಿಲ್ಲ. ಅದೇ ಮೊದಲು. ಅಂದಿನಿಂದಲೇ ನಾನು ಮುಖ್ಯಮಂತ್ರಿ ದೇವರಾಜ ಅರಸು ಅವರ ರಾಜಕೀಯ ಕಾರ್ಯದರ್ಶಿಯಾದೆ. ದಿಲ್ಲಿಯ ಹೈಕಮಾಂಡ್ ಜೊತೆ ಕೋ ಆರ್ಡಿನೇಟ್ ಮಾಡೋದು, ಪ್ರತಿ ವಾರದ ಕೊನೆಯಲ್ಲಿ ಅರಸು ಕಾರ್ಯಕ್ರಮಗಳನ್ನು ದಿಲ್ಲಿ ಜನಕ್ಕೆ ತಿಳಿಸೋದು, ದಿಲ್ಲಿಯಿಂದ ಬರುವ ಸಮಿತಿಗಳಿಗೆ ಸಂಪೂರ್ಣ ಮಾಹಿತಿ ನೀಡೋದು, ಆ ಮೂಲಕ ಅರಸು ಅವರನ್ನು ಅವರ ಸರಕಾರವನ್ನು ಮೇಲೆತ್ತುವ ಕೆಲಸ ಮಾಡತೊಡಗಿದೆ. ಆ ಮುಖಾಂತರ ನನಗೆ ದಿಲ್ಲಿಯ ದೊಡ್ಡ ದೊಡ್ಡ ನಾಯಕರ ಜೊತೆಗಿನ ಸಂಪರ್ಕ ಸಲೀಸಾಯಿತು. ಅರಸು ಸರಕಾರದ ಕಾರ್ಯವೈಖರಿಯನ್ನು ವಿವರಿಸಿದ ನಂತರ, ಇಂದಿರಾ ಗಾಂಧಿ ಕೂಡ ಅರಸು ಹಠಾವೋಗೆ ಸೊಪ್ಪು ಹಾಕದೆ ಇದ್ದದ್ದು ಅರಸರಲ್ಲಿ ಆತ್ಮವಿಶ್ವಾಸ ಮೂಡಿಸಿತು. ನನ್ನ-ಅವರ ವೇವ್ ಲೆಂಥ್ ಒಂದೇ ಆಗಿತ್ತು. ಚಿಂತನ-ಮಂಥನ ಹೊಂದಾಣಿಕೆಯಾಗಿತ್ತು. ಇಬ್ಬರದೂ ಸಮಾನ ಆಸಕ್ತಿ, ಕಾಳಜಿ, ಕಳಕಳಿ. ಅದೇ ನಮ್ಮಿಬ್ಬರನ್ನು ಒಂದಾಗಿಸಿತ್ತು. ಅಲ್ಲಿಂದಲೇ ಅವರೊಂದಿಗೆ ಆತ್ಮೀಯ ಒಡನಾಟ ಶುರುವಾಗಿದ್ದು. ಅರಸರ ಶೈಲಿಯೇ ಬೇರೆ ಅರಸು ರಾಜಕಾರಣದಲ್ಲಷ್ಟೇ ಅಲ್ಲ, ಇತರ ವಿಷಯಗಳನ್ನು ಅರಿತ ಬುದ್ಧಿವಂತರು. ಅಪಾರ ಅನುಭವ, ಶಿಸ್ತುಬದ್ಧ ಅಧ್ಯಯನ, ತಿಳಿವಳಿಕೆಯ ಜೊತೆಗೆ ಸಾಮಾನ್ಯಜ್ಞಾನವೂ ಇತ್ತು. ಆಡಳಿತದಲ್ಲಿ ಅವರದೇ ಆದ ವಿಶಿಷ್ಟ ಶೈಲಿಯೊಂದನ್ನು ರೂಢಿಸಿಕೊಂಡಿದ್ದರು. ಡಿಷಿಷನ್ ಮೇಕಿಂಗ್ ಎರಾಟಿಕ್ಕಾಗಲಿ ಅಥವಾ ಪರ್ಸನಲ್‌ಲೈಸ್ ಆಗಲಿ ಇರ್ತಿರಲಿಲ್ಲ. ಸಂದರ್ಭಗಳನ್ನು ನೋಡಿ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ನಾನು ಅವರ ಪೊಲಿಟಿಕಲ್ ಸೆಕ್ರೆಟರಿಯಾದ ಮೇಲೆ ಪ್ರತಿದಿನ, ನನಗಾಗಿ ಸಮಯವನ್ನೇ ಕೊಡದೆ ಕೆಲಸದಲ್ಲಿ ಮುಳುಗಿಹೋಗಿರುತ್ತಿದ್ದೆ. ಅರಸು ಕೂಡ ರಾತ್ರಿ ಹಗಲೆನ್ನದೆ ಇಡೀ ರಾಜ್ಯವನ್ನು ಸುತ್ತುತ್ತಿದ್ದರು. ಅವರ ಶೈಲಿ ಅಂದನಲ್ಲ, ಅದಕ್ಕೊಂದು ಉದಾಹರಣೆ ಇದೆ ಕೇಳಿ. ಅವರ ತಲೆಗೆ ಸಂಜೆ ಹೊತ್ತಿಗೆ ಯಾವುದೋ ಒಂದು ವಿಷಯ ಬಂದಿರ್ತಿತ್ತು. ‘ಶ್ರೀನಿವಾಸ್, ಈಗ ಹೋಗಿ ರಾತ್ರಿ ಹತ್ತಕ್ಕೆ ಮನೆಗೆ ಬಾ’ ಎನ್ನುತ್ತಿದ್ದರು. ಅಂದರೆ ಒಂದು ಹೊಸ ಕಾಯ್ದೆಯೋ, ಯೋಜನೆಯೋ, ಕಾರ್ಯಕ್ರಮವೋ ಜಾರಿಗೆ ತರುವ ಮುಂಚೆ, ಅವರೇ ಯೋಚಿಸುತ್ತಿದ್ದರು. ಮತ್ತು ನನಗೆ ‘ಈ ವಿಷಯಕ್ಕೆ ವಿರುದ್ಧವಾಗಿ ಯೋಚಿಸಿಕೊಂಡು ಬಾ’ ಎಂದು ಹೇಳುತ್ತಿದ್ದರು. ಅಂದರೆ ತನ್ನ ತೀರ್ಮಾನವೇ ಅಂತಿಮ ಅನ್ನುವುದಲ್ಲ. ನಾನು ಅದಕ್ಕೆ ತದ್ವಿರುದ್ಧವಾಗಿ ವಿಷಯ ಸಂಗ್ರಹಿಸಿಕೊಂಡು ಸಿದ್ಧನಾಗಿ ಹೋಗುತ್ತಿದ್ದೆ. ಅದರ ಸಾಧಕ-ಬಾಧಕಗಳನ್ನು ಬಿಡಿಸಿ ಅವರ ಮುಂದಿಡುತ್ತಿದ್ದೆ.

ಇದು, ಮುಂದೆ ತಮ್ಮ ಪಕ್ಷದವರಿಂದ, ದಿಲ್ಲಿಯ ಹೈಕಮಾಂಡಿನಿಂದ, ಮಾಧ್ಯಮಗಳಿಂದ, ವಿರೋಧ ಪಕ್ಷದ ನಾಯಕರಿಂದ ಎದುರಾಗಬಹುದಾದ ಟೀಕೆ, ವಿರೋಧ, ವಿವಾದಗಳನ್ನು ಸಮರ್ಪಕವಾಗಿ ನಿಭಾಯಿಸಲು, ನಿವಾರಿಸಲು ಅರಸು ಕೈಗೊಳ್ಳುತ್ತಿದ್ದ ಮುನ್ನೆಚ್ಚರಿಕೆಯ ಕ್ರಮವಾಗಿತ್ತು. ಇದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಯಕನೂ ನಡೆದುಕೊಳ್ಳಬೇಕಾದ ರೀತಿ ಕೂಡ. ಅರಸು ಅವರಿಗೆ ರೈತರ ಕಷ್ಟವೂ ಗೊತ್ತಿತ್ತು, ನಗರದ ಮಧ್ಯಮವರ್ಗದ ಜನರ ಜಂಜಾಟವೂ ತಿಳಿದಿತ್ತು. ಸಂವಿಧಾನಾತ್ಮಕ ಕ್ರಮಗಳ ಅರಿವೂ ಇತ್ತು. ಹೀಗಾಗಿಯೇ ಯಾವ ಹೊಸ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಬೇಕಾದರೂ, ಹತ್ತು ಹಲವು ದೃಷ್ಟಿಕೋನಗಳಿಂದ ಅವಲೋಕಿಸಿ, ಅನುಷ್ಠಾನಗೊಳಿಸುತ್ತಿದ್ದರು. ಈ ಕ್ರಮವಿದೆಯಲ್ಲ, ಇದನ್ನು ನಿರಂತರವಾಗಿ ಜಾರಿಯಲ್ಲಿಟ್ಟಿದ್ದರು. ಈ ಥರದ ಸಿದ್ಧತೆ, ಬದ್ಧತೆ ಮತ್ತು ಪ್ರಬುದ್ಧತೆಯನ್ನು ನಾನು ಬೇರೆ ಯಾವ ಮುಖ್ಯಮಂತ್ರಿಯಲ್ಲೂ ಕಾಣಲಿಲ್ಲ.
ಲಾಯರ್ ಆಗಬೇಕಾದವನು ಶಾಸಕನಾದೆ
 
1967ರಲ್ಲಿ ವಿದ್ಯಾಭ್ಯಾಸ ಮುಗಿಸಿ, ದಿಲ್ಲಿಯ ಸೀನಿ ಯರ್ ಅಡ್ವೊಕೇಟ್‌ರೊಂದಿಗೆ ಮಾತಾಡಿ, ಅವರ ಕೈಕೆಳಗೆ ಕೆಲಸ ಮಾಡಲು ದಿಲ್ಲಿಗೆ ಹೋಗಲು ತೀರ್ಮಾನಿಸಿದ್ದೆ. ದಿಲ್ಲಿಗೆ ಹೋಗಲು ಇನ್ನೂ ಟೈಮಿತ್ತು, ಊರಿಗೆ ಹೋಗಿ ಬರೋಣವೆಂದು ಸಾಗರಕ್ಕೆ ಹೋದೆ. ಅಲ್ಲಿ ನನ್ನ ಸೋಷಲಿಸ್ಟ್ ಪಾರ್ಟಿ ಗೆಳೆಯರು ಸಿಕ್ಕಿದರು. ಅವತ್ತು ಅವರು ಭಾಗ ವಹಿಸುವ ಸಭೆ ಇತ್ತು. ನನ್ನನ್ನೂ ಬಲವಂತವಾಗಿ ಆ ಸಭೆಗೆ ಕರೆದುಕೊಂಡು ಹೋದರು. ಆಕಸ್ಮಿಕವಾಗಿ ಹೋದವನು, ಅಲ್ಲಿ ನಡೆದ ವಿದ್ಯಮಾನಗಳಿಂದಾಗಿ ಚುನಾವಣೆಗೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ, ಗೆದ್ದು ಶಾಸಕನಾದೆ. ಲಾಯರ್ ಆಗಿ ದಿಲ್ಲಿಯ ಸುಪ್ರೀಂ ಕೋರ್ಟ್ ಮೆಟ್ಟಿಲು ತುಳಿಯಬೇಕಾದವನು ಶಾಸಕ ನಾಗಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲು ಹತ್ತಿದೆ.
 
   ಆಗ ದೇವರಾಜ ಅರಸು ಅವರು ಸಾರಿಗೆ ಮಂತ್ರಿಯಾ ಗಿದ್ದರು. ಅವರ ಗತ್ತು-ವಿದ್ವತ್ತು- ಗಾಂಭೀರ್ಯವನ್ನು ಕೇಳಿದ್ದೆ, ತುಂಬಾನೆ ಆದರ್ಶಗಳಿರುವ ಒಳ್ಳೆಯ ಮನುಷ್ಯ ಅಂತ ಗೊತ್ತಿತ್ತು, ಪರಿಚಯವಿರಲಿಲ್ಲ. ಒಂದು ವರ್ಷದೊಳಗೆ ಶಾಸನಸಭೆಯಲ್ಲೊಮ್ಮೆ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸುವ ಕೆಲಸ ನನ್ನದಾಗಿತ್ತು. ರಾಜ್ಯಶಾಸ್ತ್ರ ಓದಿದ್ದೆ, ಕಾನೂನು ಪದವಿ ಪಡೆದಿದ್ದೆ, ಸಮಾಜವಾದಿ ಗೋಪಾಲಗೌಡರ ಸಂಪರ್ಕವಿತ್ತು... ಈ ಹಿನ್ನೆಲೆಯಲ್ಲಿ ಅವತ್ತು ನಾನು ಮಾಡಿದ ಭಾಷಣ ನನ್ನನ್ನು ಶಾಸನ ಸಭೆಯ ಮೂಲಕ ನಾಡಿಗೆ ಪರಿಚಯಿಸಿತು. ಹಲವು ಹಿರಿಯ ನಾಯಕರ ಕಣ್ಣಿಗೆ ಬಿದ್ದೆ. ಅರಸು ಕೂಡ ನನ್ನನ್ನು ಗಮನಿಸಿದರು. ಭಾಷಣ ಮೆಚ್ಚಿ ಮಾತನಾಡಿದರು. 1968ರಲ್ಲಿ ನಿಜಲಿಂಗಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಆಗ ಸಹಜವಾಗಿಯೇ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿ ಅರಸು, ಹೆಗಡೆ ಮತ್ತು ವೀರೇಂದ್ರ ಪಾಟೀಲರಿದ್ದರು. ನಿಜಲಿಂಗಪ್ಪನವರಿಗೆ ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬುದಿತ್ತು. ಅರಸರಿಗೂ ಸಿಎಂ ಆಗಬೇಕೆಂಬ ಆಸೆೆ ಇತ್ತು. ಆದರೆ ರಾಜಕಾರಣ, ಯಾರಿಗೆ ಯಾರು ಯಾವಾಗ ವಿರೋಧಿಗಳಾಗುತ್ತಾರೆಂದು ಹೇಳಲಿಕ್ಕೆ ಬರುವುದಿಲ್ಲ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಅರಸು ಅವರನ್ನು ಪಕ್ಷದಿಂದ ಎಕ್ಸ್‌ಪೆಲ್ ಮಾಡಿ ಅವಮಾನಿಸಿದರು. ಅರಸು ವಿರೋಧಿಗಳ ಗುಂಪಿನಲ್ಲಿ ಗುರುತಿಸಿಕೊಂಡು ಸರಕಾರದಿಂದ ಹೊರಗುಳಿದರು. ಆ ನಂತರ ನಾನು, ವೀರೇಂದ್ರ ಪಾಟೀಲರ ಸರಕಾರದಲ್ಲಿ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಯಾಗಿ ನೇಮಕಗೊಂಡೆ. ಶಾಸನ ಸಭೆಗಳಲ್ಲಿ ಯಾರು ಮಾತನಾಡಬೇಕು, ಯಾರು ಪ್ರಶ್ನೆ ಮಾಡಬೇಕು, ಮಾತನಾಡುವವರಿಗೆ ಸಮಯ ಅಲಾಟ್ ಮಾಡೋದು ಇದೆಲ್ಲ ನಾನೆ ನಿರ್ಧರಿಸುತ್ತಿದ್ದೆ. ಅರಸು ಡಿಬೇಟ್‌ಗಳನ್ನು ಇಷ್ಟಪಡ್ತಿದ್ದರು. ಇಂಪಾರ್ಟೆಂಟ್ ಸಬ್ಜೆಕ್ಟ್ ಗಳ ಮೇಲೆ ಮಾತಾಡೋರು. ಅವರು ಬಂದು, ‘ಮಿಸ್ಟರ್ ಶ್ರೀನಿವಾಸ್, ಡು ಯೂ ಥಿಂಕ್ ದಟ್ ಐ ಯಾಮ್ ಸ್ಪೀಕ್ ಟುಡೆ’ ಎಂದರು. ನಾನು ವೈ ನಾಟ್ ಸರ್.. ಎಂದು ಟೈಮ್ ಅಲಾಟ್ ಮಾಡಿದೆ. ಅವರು ಕೇಳಿದ ರೀತಿ ವಿಶೇಷವಾಗಿತ್ತು. ಅದು ನನಗೆ ಇಷ್ಟವಾಯಿತು. ಅವರಿಗೂ ನಾನು ವೀರೇಂದ್ರ ಪಾಟೀಲರ ಥರ ಅಲ್ಲ ಅನ್ನಿಸಿ ಹತ್ತಿರವಾದರು. ಹೀಗೆ ನಾವಿಬ್ಬರೂ ಒಂದಾಗುವ ಸ್ಥಿತಿ ನಿರ್ಮಾಣವಾಯಿತು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News