ಚಾಯ್‌ವಾಲಾ ಪ್ರಹಸನ: ತಲೆ- ಬುಡ ಅರಿಯದ ಖೇರ್ ಕಹಾನಿ

Update: 2016-03-08 18:14 GMT

ಪ್ರಧಾನಿ ನರೇಂದ್ರ ಮೋದಿಯವರ ಸರಳ ಚಾಯ್‌ವಾಲಾ ಮೂಲದ ಕಥೆ ಬಹುಶಃ ಬಾಲಿವುಡ್ ನಟ ಅನುಪಮ್ ಖೇರ್‌ಗೆ ಅರ್ಥವಾದಂತಿಲ್ಲ. ಟೆಲಿಗ್ರಾಪ್ ಪತ್ರಿಕೆ ಶನಿವಾರ ಅಸಹಿಷ್ಣುತೆ ಹೊಸ ಸಹಿಷ್ಣುತೆ ಎಂಬ ವಿಚಾರದ ಬಗ್ಗೆ ಚರ್ಚೆ ಆಯೋಜಿಸಿತ್ತು. ಅನುಪಮ್ ಖೇರ್ ಅದರಲ್ಲಿ ಮಾತನಾಡಿದರು. ಅವರ ಭಾಷಣದ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಸ್‌ನಂತೆ ಹರಡುತ್ತಿವೆ. ಬಳಕೆದಾರರಿಂದ ವ್ಹಾವ್ ವ್ಹಾವ್.. ಪ್ರತಿಕ್ರಿಯೆಗಳೂ ಬರುತ್ತಿವೆ. ಆದ್ದರಿಂದ ನಾನು ಅದನ್ನು ಕೇಳಿದ್ದು, ನೀವು ಕೂಡಾ ಅದನ್ನು ನೋಡಿ.
ಪ್ರಹಸನ
ಇಡೀ ಪ್ರಹಸನದಲ್ಲಿ ಖೇರ್ ಸಿದ್ಧಾಂತ ಹೀಗೆ ಇದ್ದಂತಿದೆ. ಒಬ್ಬ ಚಹಾ ಮಾರುವ ವ್ಯಕ್ತಿ ಈ ದೇಶದ ಪ್ರಧಾನಿಯಾಗಿದ್ದಾನೆ; ಉದಾರಿಗಳು ಹಾಗೂ ಉಳ್ಳವರ ವಂಶಜರಿಗೆ ಇದನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ; ಭ್ರಷ್ಟಾಚಾರಕ್ಕೆ ತಡೆ ಬಿದ್ದಿದೆ; ಈ ಕಾರಣದಿಂದ ಅಸಹಿಷ್ಣುತೆ ಎಂಬ ವಾತಾವರಣ ಹುಟ್ಟುಹಾಕಿ ಆ ಬಡ ಚಾಯ್‌ವಾಲಾನನ್ನು ನಿಂದಿಸಲಾಗುತ್ತಿದೆ
ಹೌದೇ? ಮೊಟ್ಟಮೊದಲನೆಯದಾಗಿ ಚಾಯ್‌ವಾಲಾ ಪ್ರಧಾನಿಯಾಗಿರುವುದು ಎಷ್ಟು ಸರಳ ನಿದರ್ಶನ ಎಂದರೆ, ಒಬ್ಬ ಮಾದಕ ವ್ಯಸನಿ, ಅರ್ಧದಿಂದ ಕಾಲೇಜು ಬಿಟ್ಟ ಒಬ್ಬ ವ್ಯಕ್ತಿ ಪತ್ರಕರ್ತನಾದಂತೆ (ಅದು ನಾನೇ). ಇದು ಹಲವು ಪ್ರಮುಖ ಹೆಜ್ಜೆಗಳನ್ನು ತಪ್ಪಿಸಿದೆ. ಚಾಯ್‌ವಾಲಾ ಒಬ್ಬಸಾಮಾನ್ಯ ವಿದ್ಯಾರ್ಥಿಯಾದ; ಅದ್ಭುತ ವಾಗ್ಮಿಯಾದ ಜತೆಗೆ ರಂಗನಟನೂ ಆದ, ಅನುಭವಕ್ಕಾಗಿ ದೇಶ ಸುತ್ತಿದ (ಕಳೆದು ಹೋದ ಆ ವರ್ಷಗಳ ಬಗ್ಗೆ ಅಷ್ಟೊಂದು ತಿಳಿಯದು)
ಆ ಅಲೆಮಾರಿ ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾದ; ಪ್ರಾದೇಶಿಕ ಸಂಘಟಕನಾದ. ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೊಣೆ ಹೆಗಲಿಗೇರಿಸಿಕೊಂಡ. ಎಬಿವಿಪಿ ಕಾರ್ಯಕರ್ತನಾಗಿ ತುರ್ತುಪರಿಸ್ಥಿತಿ ವಿರೋಧ ಚಳವಳಿಯಲ್ಲಿ ಸಕ್ರಿಯನಾದ. ಬಳಿಕ ಈ ಹೋರಾಟಗಾರ ಬಿಜೆಪಿಯ ಗುಜರಾತ್ ಘಟಕದ ಸಂಘಟನಾ ಕಾರ್ಯದರ್ಶಿಯಾದ. ಸಂಘಟನಾ ಚಾತುರ್ಯದಿಂದ ಅಡ್ವಾಣಿ ರಥಯಾತ್ರೆಯ ಯಶಸ್ಸಿನ ಸೂತ್ರಧಾರನಾದ. ಬಳಿಕ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಯಾಗಿ ಭಡ್ತಿ ಪಡೆದ. ಪಕ್ಷದ ಧುರೀಣರು ಗುಜರಾತ್‌ನ ಮುಖ್ಯ ಮಂತ್ರಿಯಾಗಿ ಪ್ರತಿಷ್ಠಾಪಿಸಿದರು (ಮೊದಲ ಬಾರಿ ಸಿಎಂ ಆದ ಕೇಶುಬಾಯ್ ಪಟೇಲ್ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ). ಈ ಎಲ್ಲ ಹಂತಗಳನ್ನು ದಾಟಿ ಕೊನೆಗೆ ದೇಶದ ಪ್ರಧಾನಿಯಾದದ್ದು.
ಅಂದರೆ ಸುದೀರ್ಘ ರಾಜಕೀಯ ಪಯಣದ ಕ್ಲೈಮ್ಯಾಕ್ಸ್ ಎಂಬಂತೆ ಗುಜರಾತ್‌ನ ಸಿಎಂ ಪ್ರಧಾನಿಯಾದದ್ದು ಎನ್ನುವುದು ಸ್ಪಷ್ಟ. ಚಾಯ್‌ವಾಲಾ ಪ್ರಧಾನಿಯಾದ ಎಂದು ಪದೇ ಪದೇ ಪ್ರಸ್ತಾಪಿಸುವುದು, ಯಾವ ಪ್ರಗತಿಯ ನಿರೀಕ್ಷೆಯೂ ಇಲ್ಲದೇ ಆ ಕಾರ್ಯವನ್ನು ಜೀವನಾಧಾರವಾಗಿ ಮುಂದುವರಿಸುತ್ತಿರುವವರನ್ನು ಅವಹೇಳನ ಮಾಡಿದಂತೆ.
ಇತರ ಜಿಗಿತ
ಅದಕ್ಕಿಂತ ಹೆಚ್ಚಾಗಿ, ಐಸ್‌ಕ್ರೀಂ ಮಾರುವ ಹುಡುಗ (ಬರಾಕ್ ಒಬಾಮಾ, ಬಾಸ್ಕಿನ್ ರಾಬಿನ್ಸ್), ಹ್ಯಾಂಬರ್ಗ್‌ನ ಹೋಟೆಲ್ ಪರಿಚಾರಕ (ಜೆರಾಲ್ಡ್ ಪೋರ್ಡ್) ಅಮೆರಿಕದ ಅಧ್ಯಕ್ಷರಾದರು ಎಂದು ಬಣ್ಣಿಸುವುದು ತೀರಾ ಕ್ಷುಲ್ಲಕ. ಹಾರ್ವರ್ಡ್ ಜಾನ್ಸನ್ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹುಡುಗ ಫ್ರಾನ್ಸ್‌ನ ಅಧ್ಯಕ್ಷರಾದದ್ದು (ಜಾಕ್ವಿಸ್ ಚಿರಾಕ್), ಹೋಟೆಲ್ ಮಾಣಿ ಸೆನೆಟರ್ ಆದದ್ದು, (ಪ್ಯಾಟ್ ಸ್ಪಿಯರ್‌ಮನ್) ಹಾಗೂ ಹಿಂದೆ ಬೇಬಿಸಿಟ್ಟಿಂಗ್ ಕೇಂದ್ರ ನಡೆಸುತ್ತಿದ್ದಾಕೆ ಅಮೆರಿಕ ಪ್ರಥಮ ಮಹಿಳೆಯಾದದ್ದು ಹಾಗೂ ಇದೀಗ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುತ್ತಿರುವುದು, ಸಲಿಂಗ ಕಾಮಿ ಜೋಡಿ ನ್ಯಾಶನಲ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿರುವುದು (ಈ ಕುರಿತ ಹೇಳಿಕೆಯನ್ನು ಬಲಪಂಥೀಯರು ನಿಗ್ರಹಿಸಿದಿದ್ದಾರೆ) ಎಂದು ವಿವರಿಸುತ್ತಾ ಹೋಗುವುದು ತೀರಾ ಅಪ್ರಸ್ತುತ.
ಇದು ಚುನಾವಣಾ ಪ್ರಚಾರದಲ್ಲಿ ಜನರನ್ನು ಸೆಳೆಯುವ ಸಲುವಾಗಿ ಹೇಳಿದ ಒಂದು ಸರಳ ಪ್ರಚಾರ ವಾಕ್ಯ. ಇಲ್ಲಿ ಅನುಪಮ್ ಖೇರ್‌ಗೆ ಕ್ಷಮೆ ಇದೆ; ಏಕೆಂದರೆ ಚುನಾವಣಾ ಪ್ರಚಾರ ಹಲವು ಹೊಗೆ, ದರ್ಪಣ (ಸುಳ್ಳಿನ ಕಂತೆ) ಯನ್ನೂ ಒಳಗೊಂಡಿರುತ್ತದೆ. ಇದೀಗ ಚಾಯ್‌ವಾಲಾ ನೆನಪು, ಪ್ರಧಾನಿಯಿಂದ ದೂರ, ಬಹುದೂರ ಹೋಗಿದೆ. ಏಕೆಂದರೆ ಆ ವಾಕ್ಯ ತನ್ನ ಬಳಕೆಯ ಗಡುವನ್ನು ಮೀರಿದೆ. ರಾಜಕೀಯ ವಿರೋಧ ಪಕ್ಷ ಮಾತ್ರ ಎಷ್ಟು ಅವಿವೇಕ ಹೊಂದಿದೆ ಎಂದರೆ, ಈ ಬುದ್ಧಿಗೇಡಿ ಹೇಳಿಕೆಗೆ ಪ್ರತಿಯಾಗಿ ಏನೂ ಹೇಳಲೇ ಇಲ್ಲ. ಆದರೆ ಸಾರ್ವಜನಿಕರ ತಲೆಯಲ್ಲಿ ಮೆದುಳು ಇದೆ.
ಖೇರ್ ಉಪಸಿದ್ಧಾಂತ
ಭ್ರಷ್ಟಾಚಾರ ಇಲ್ಲ ಎಂಬ ಕಾರಣಕ್ಕೆ ಅಸಹಿಷ್ಣುತೆ ವಿವಾದವನ್ನು ಹುಟ್ಟುಹಾಕಲಾಗಿದೆ ಎನ್ನುವ ಖೇರ್ ಉಪಸಿದ್ಧಾಂತದ ಬಗ್ಗೆ ಗಮನ ಹರಿಸೋಣ. ಈ ದಿನಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ನೀವು ಕೇಳಿದ್ದೀರಾ? ಎಂದು ತನ್ನ ನಟನಾದಿನಗಳ ಗತವೈಭವವನ್ನು ಬಿಂಬಿಸುವಂತೆ ಖೇರ್ ಪ್ರಶ್ನಿಸಿದರು. ಅವರು ಸವಾಲು ಹಾಕಿದ ರೀತಿಯೇ ಅವರು ಹಿಂದೆ ಅದೆಂಥ ಅದ್ಭುತ ನಟರಾಗಿದ್ದರು ಎನ್ನುವುದನ್ನು ತೋರಿಸುತ್ತದೆ.
ನಿಮಗೆ ತಿಳಿದಿಲ್ಲವೇ?
ಈ ಕೆಳಗಿನ ಸುದ್ದಿ ತುಣುಕುಗಳನ್ನು ಪರಿಶೀಲಿಸಿ...
    1.ಶಾಸನಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಅಲ್ಯುಮಿನಾ ರಿಫೈನರಿ ಲಿಮಿಟೆಡ್ ಸಂಸ್ಥೆಗೆ 1.2 ಕೋಟಿ ರೂಪಾಯಿಗೆ ಮೋದಿ ಸರಕಾರ 40 ಎಕರೆ ಜಮೀನು ಮಂಜೂರು ಮಾಡಿದ ಕ್ರಮವನ್ನು ತಳ್ಳಿಹಾಕಿದೆ. (2014 ಜನವರಿ). ಮೋದಿಯವರ ಕಂದಾಯ ಸಚಿವೆ ಆನಂದಿ ಬೆನ್ ಪಟೇಲ್ ಅವರು ಉನ್ನತ ಅಧಿಕಾರಿಗಳ ಆಕ್ಷೇಪವನ್ನು ಮೀರಿ ಬೇರೆ ಕಂಪೆನಿಯ ಜಾಗವನ್ನು ಮಾರಾಟ ಮಾಡಿದ ಕ್ರಮವನ್ನು ಭಾರತದ ಅತ್ಯುನ್ನತ ನ್ಯಾಯಾಲಯ ಕಟು ಶಬ್ದಗಳಲ್ಲಿ ಟೀಕಿಸಿದೆ.
    2.ರಾಜಸ್ಥಾನ ಹೌಸಿಂಗ್ ಬೋರ್ಡ್ ಆಸ್ತಿಯನ್ನು ಕಾನೂನು ಬಾಹಿರವಾಗಿ ಬಿಜೆಪಿ ಶಾಸಕ ಸೂರ್ಯಕಾಂತ ವ್ಯಾಸ್ ಅವರಿಗೆ ನೀಡಲಾಗಿದೆ. (ಮೇ, 2014)
    3.ಮಧ್ಯಪ್ರದೇಶದ ರೈತಕಲ್ಯಾಣ ಹಾಗೂ ಕೃಷಿ ಅಭಿವೃದ್ಧಿ ಖಾತೆ ಸಚಿವ ಗುರುಶಂಕರ್ ಬೈಸನ್ ಅವರ ವಿರುದ್ಧ 2000 ಕೋಟಿ ರೂಪಾಯಿ ಲಂಚ ಆರೋಪ ಕೇಳಿಬಂದಿದೆ. (ಜೂನ್ 2014). (ನಾನು ಇದನ್ನು ಬರೆಯುತ್ತಿರುವಾಗ ಮೋದಿ ರೈತರ ಸಮಾವೇಶದಲ್ಲಿ ಮಾತನಾಡುತ್ತಿದ್ದು, ರೈತರು ನಮ್ಮ ಸೈನಿಕರಿಗಿಂತ ಧೈರ್ಯಶಾಲಿಗಳು ಎಂದು ಬಣ್ಣಿಸಿದ್ದಾರೆ)
    4.ವ್ಯಾಪಂ ಅತಿದೊಡ್ಡ ಹಗರಣ. ಇದು ಹಿಂದಿನ ಎಲ್ಲ ಲಂಚ ಹಗರಣಗಳನ್ನೂ ಮೀರಿಸುವಂಥದ್ದು. (ಓಹ್..ಆದರೆ ಅದು ಮೋದಿ ಸರಕಾರಅಧಿಕಾರಕ್ಕೆ ಬರುವ ಮೊದಲು ನಡೆದದ್ದು? ಹೌದು; ಮೋದಿ ಈಗ ಪ್ರಧಾನಿ; ಅವರೇ ಆಯ್ಕೆ ಮಾಡಿದ ತಂತ್ರಗಾರ ಪಕ್ಷದ ಅಧ್ಯಕ್ಷ. ಹಗರಣದ ಕಳಂಕಿತರೇ ಈಗ ರಾಜ್ಯವನ್ನು ಆಳುತ್ತಿರುವುದು)
    5.ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ಹರ್ಯಾಣ ಹಾಗೂ ರಾಜಸ್ಥಾನದಿಂದ ಅರವಳ್ಳಿ ಬೆಟ್ಟದ ಲೂಟಿ. (ಜುಲೈ, 2014)
    6.ಮಕ್ಕಳಿಗಾಗಿ ಇದ್ದ ಕಡಲೆಕಾಯಿ ಹಗರಣದಿಂದ ಬಚಾವ್ ಆಗಲು ದಾರಿ ಕಂಡುಕೊಂಡ ಪಂಕಜಾ ಮುಂಢೆ.
    7.ಪಂಜಾಬ್, ಹರ್ಯಾಣ ಹಾಗೂ ಗುಜರಾತ್ ರಾಜ್ಯಗಳನ್ನೊಳಗೊಂಡ 1000 ಕೋಟಿ ರೂಪಾಯಿ ಅಕ್ಕಿ ರಫ್ತು ದಂಧೆ ಬೆಳಕಿಗೆ (ಫೆಬ್ರವರಿ 2016)
ಹೀಗೆ ನಾನು ಹೇಳುತ್ತಾ ಹೋಗಬಹುದು. ಆದರೆ ಅದರಲ್ಲಿ ಯಾವ ಅರ್ಥವಿದೆ?
ಕಿವುಡು ಯುಗ 

ಇತ್ತೀಚಿನ ದಿನಗಳಲ್ಲಿ ಯಾವುದೇ ಹಗರಣಗಳ ಬಗ್ಗೆ ಜನ ಮಾತನಾಡುತ್ತಾರೆಯೇ ಎಂದು ಖೇರ್ ಪ್ರಶ್ನಿಸುತ್ತಾರೆ. ಬಹುಶಃ ಅವರು ಕೇಳಿರಲಾರರು. ಹಾಗೆಂದರೆ ಹಗರಣಗಳು ಇಲ್ಲ ಎಂಬ ಅರ್ಥವಲ್ಲ; ಅಂಥ ವಿಷಯಗಳು ಚರ್ಚೆಯಾಗುವ ವರ್ತುಲದಲ್ಲಿ ಅವರು ಬೆರೆತಿಲ್ಲ. ಚುನಾವಣಾ ಪ್ರಚಾರ ವೇಳೆಯಲ್ಲಿ ಮೋದಿ ಗಂಟಲು ಹರಿದುಕೊಂಡ ಕಪ್ಪು ಹಣವನ್ನು ವಾಪಸು ತರುವ ವಿಚಾರದಲ್ಲಿ ಸರಕಾರಹಿಂದೇಟು ಹಾಕುತ್ತಿರುವುದಕ್ಕಿಂತ ದೊಡ್ಡ ಅಚ್ಚರಿ ಇದೆಯೇ? ಕಾಂಗ್ರೆಸ್ ಅವಧಿಯಲ್ಲಿ ನಡೆದ ಹಗರಣಗಳನ್ನು ದಯವಿಟ್ಟು ಉಲ್ಲೇಖಿಸಬೇಡಿ. ಹಾಗೆಂದರೆ, ಹಿಂದಿನ ಸರಕಾರ ಭ್ರಷ್ಟಾಚಾರ ಮುಕ್ತವಾಗಿತ್ತು ಎನ್ನುವುದು ನನ್ನ ಅಭಿಪ್ರಾಯವಲ್ಲ. ಈ ಸರಕಾರನಿರ್ದಿಷ್ಟವಾಗಿ ಭ್ರಷ್ಟಾಚಾರ ತಡೆಯುವ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದ್ದರಿಂದ ನಾ ಖಾನೆ ದೂಂಗಾ ಕೆಲಸ ಮಾಡುತ್ತಿದೆಯೇ?
ಅಡಿ ಟಿಪ್ಪಣಿ: ಚಾಯ್ ವಾಲಾ ತಂತ್ರ ಚುನಾವಣೆ ಸಂದರ್ಭದಲ್ಲಿ ಅದ್ಭುತವಾಗಿ ಕೆಲಸ ಮಾಡಿತು. ಸಾಮಾನ್ಯ ಭಾರತೀಯನ ನಿರೀಕ್ಷೆಯನ್ನು ತಟ್ಟಿತು ಎಂದು ನನ್ನ ಸ್ನೇಹಿತ ಬರೆದಿದ್ದಾನೆ. ಇರಬಹುದು. ಆದರೆ ಆಗಲೂ ಅದನ್ನು ಪ್ರಶ್ನಿಸಲಾಗಿತ್ತು. ಚಾಯ್‌ವಾಲಾ ಹಾಗೂ ಅನುಭವಿ ಆಡಳಿತಗಾರ ಹಾಗೂ ಗುಜರಾತ್ ಮಾದರಿಯ ಸಂಶೋಧಕ ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿ ಹೇಗೆ ತೂಗುತ್ತೀರಿ?

Writer - ಪ್ರೇಮ್ ಪಣಿಕ್ಕರ್

contributor

Editor - ಪ್ರೇಮ್ ಪಣಿಕ್ಕರ್

contributor

Similar News