ಶ್ರೀ ರವಿಶಂಕರ್ ‘ಯಮುನೆ’ಯನ್ನು ಕೊಲ್ಲುತ್ತಿದ್ದಾರೆ: ವಿಮಲೆಂದು ಝಾ

Update: 2016-03-10 19:11 GMT

ಕಲಬುರ್ಗಿಯನ್ನು ಕೊಂದಿದ್ದೇವೆ ಎಂದು ಬಹಿರಂಗವಾಗಿ ಹೇಳುವವರಿಂದ ನನಗೆ ಸರ್ಟಿಫಿಕೆಟ್ ಬೇಡ
ಹಿಂದೂ ಮಹಾಸಭಾದ ಸ್ವಾಮಿ ಓಂಜೀ ಪ್ರಕಾರ ಪರಿಸರ ಕಾರ್ಯಕರ್ತ ವಿಮಲೆಂದು ಝಾ ಒಬ್ಬ ‘ದೇಶ ವಿರೋಧಿ,’ ಒಬ್ಬ ‘ಉಗ್ರವಾದಿ,’ ‘ಹಿಂದೂ-ವಿರೋಧಿ’ ಹಾಗೂ ಸಿಐಎ ಏಜಂಟ್.ಏಕೆ? ಝಾ ಅವರು ಆಧ್ಯಾತ್ಮಿಕ ಗುರು ಶ್ರೀ ರವಿ ಶಂಕರ್‌ರವರ ಆರ್ಟ್ ಆಫ್ ಲಿವಿಂಗ್ ಪರಿಸರ ಸೂಕ್ಷ್ಮ ಯಮುನಾ ನದಿ ತೀರದಲ್ಲಿ ಆಯೋಜಿಸುತ್ತಿರುವ ಬೃಹತ್ ಸಾಂಸ್ಕೃತಿಕ ಉತ್ಸವವನ್ನು ವಿರೋಧಿಸುತ್ತಿದ್ದಾರೆ. ಈ ವಿಶ್ವ ಸಾಂಸ್ಕೃತಿಕ ಉತ್ಸವವು ಮಾರ್ಚ್ 10, 11 ಹಾಗೂ 13ರಂದು ನಡೆಯಲಿದೆ.
ಈ ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಝಾ ಇದೀಗ ಚೇಂಜ್.ಆರ್ಗ್‌ನಲ್ಲಿ ದೂರು ದಾಖಲಿಸಿದ್ದು ಇದಕ್ಕೆ ಈಗಾಗಲೇ 21,047 ಮಂದಿಯ ಬೆಂಬಲ ದೊರಕಿದೆ. ಈ ಸಾಂಸ್ಕೃತಿಕ ಉತ್ಸವವನ್ನು ಅವರೇಕೆ ವಿರೋಧಿಸುತ್ತಿದ್ದಾರೆ ಹಾಗೂ ಅವರು ಎದುರಿಸಿದ ಬೆದರಿಕೆಗಳ ಬಗ್ಗೆ ಈ ಸಂದರ್ಶನದಲ್ಲಿ ಝಾ ಮಾತನಾಡಿದ್ದಾರೆ.
     

ಈ ಕಾರ್ಯಕ್ರಮಕ್ಕೆ ನೀವು ವಿರೋಧ ವ್ಯಕ್ತಪಡಿಸಲು ಕಾರಣವೇನು?

-ಈ ಕಾರ್ಯಕ್ರಮವು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಜನವರಿ 13,2015ರಂದು ನೀಡಿದ ‘ಮೈಲಿ ಸೆ ನಿರ್ಮಲ್ ಯಮುನಾ’ ತೀರ್ಪಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಯಮುನಾ ತೀರಕ್ಕೆ ತೊಂದರೆಯುಂಟು ಮಾಡಬಾರದೆಂದೂ ಹಾಗೂ ಅಲ್ಲಿರುವ ಕಾಡು ಸಸ್ಯಗಳಿಗೆ ಕೂಡ ಹಾನಿ ಮಾಡಬಾರದೆಂದು, ಅವುಗಳನ್ನು ಮಾಲಿನ್ಯದಿಂದ ರಕ್ಷಿಸಲು ಹಾಗೂಅಂತರ್ಜಲ ಹೆಚ್ಚಿಸಲು ಸಹಕಾರಿಯೆಂದು ಅದು ಹೇಳಿದೆ.
ಆಯೋಜಕರು ಅತ್ಯಂತ ಪರಿಸರ ಸೂಕ್ಷ್ಮ ಯಮುನಾ ನದಿ ತೀರದ 1700 ಎಕರೆ ಪ್ರದೇಶವನ್ನು ಜಲಸಂಪನ್ಮೂಲ ಸಚಿವಾಲಯದ, ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಯಾವುದೇ ಅನುಮತಿಯಿಲ್ಲದೆ ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದಾರೆ ಹಾಗೂ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಶರತ್ತುಬದ್ಧ ಅನುಮತಿ ಪಡೆದಿದ್ದಾರೆ. ನದಿ ತೀರದ ಪ್ರದೇಶಗಳಲ್ಲಿದ್ದ ಕಾಡು ಸಸ್ಯಗಳೆಲ್ಲವೂ ಈಗ ಇಲ್ಲವಾಗಿದೆ.
ಈ ಕಾರ್ಯಕ್ರಮಕ್ಕೆ 3.5 ಲಕ್ಷ ಜನ ಬರುವರೆಂದು ಡಿಡಿಎ ಅದಕ್ಕೆ ಅನುಮತಿ ನೀಡಿದ್ದರೆ ಈ ಕಾರ್ಯಕ್ರಮಕ್ಕೆ ಆಗಮಿಸುವ ಜನರ ನಿಜವಾದ ಸಂಖ್ಯೆ 35 ಲಕ್ಷವಾಗಬಹುದು. ಇಂತಹ ಬೃಹತ್ ಸಂಖ್ಯೆಯ ಜನರು ಬಂದಾಗ ಈ ಪ್ರದೇಶಕ್ಕಾಗುವ ಹಾನಿಯ ಬಗ್ಗೆ ಯೋಚಿಸಿ. ಇದೆಲ್ಲಾ ಪರಿಸರದ ವೆಚ್ಚದಲ್ಲಿಲ್ಲವೇ?.
ಈ ಬೃಹತ್ ಕಾರ್ಯಕ್ರಮ ಆಯೋಜನೆಗಾಗಿಭಾರೀ ಸಂಪನ್ಮೂಲಗಳನ್ನು ಬಳಸಲಾಗುತ್ತಿದ್ದು ಸೇನೆಯ ಸಹಾಯ ಕೂಡ ಪಡೆಯಲಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯಿಂದ ಯಾವುದೇ ಅನುಮತಿ ಪಡೆಯಲಾಗಿಲ್ಲ. ಇಲ್ಲಿಗೆ ಆಗಮಿಸುವ 35 ಲಕ್ಷ ಜನರ ಜೀವಕ್ಕೆ ಎಷ್ಟು ಅಪಾಯವೊಡ್ಡಲಾಗುತ್ತಿದೆಯೆಂದು ಯೋಚಿಸಿ.
   

 ನೀವು ಯಾವ ತರಹದ ಬೆದರಿಕೆಗಳನ್ನು ಎದುರಿಸಿದ್ದೀರಿ? ಇವುಗಳ ಹಿಂದೆ ಯಾರಿದ್ದಾರೆ?
 -ನಾವು ಈ ಕಾರ್ಯಕ್ರಮಕ್ಕೆ ವ್ಯಕ್ತಪಡಿಸುತ್ತಿರುವ ವಿರೋಧ ಹಾಗೂ ಯಮುನಾ ನದಿ ಸಂರಕ್ಷಣೆಗೆ ನಮ್ಮ ಬೆಂಬಲವನ್ನು ದೇಶ ವಿರೋಧಕ್ಕೆ ಹೋಲಿಸುವವರು ಆರ್ಟ್ ಆಫ್ ಲಿವಿಂಗ್‌ನಲ್ಲಿ ಹಲವರಿದ್ದಾರೆ. ಇಂಥವರಿಗೆ ನಾನುನನ್ನ ಮನಸ್ಸಿನಲ್ಲಿ ಯಾ ಮಾಧ್ಯಮದಲ್ಲಿ ಯಾವುದೇ ಸ್ಥಳ ನೀಡಲು ಬಯಸುವುದಿಲ್ಲ. ಇಂದು, ಶ್ರೀ ರವಿಶಂಕರ್ ಯಮುನಾ ನದಿಗೆ ‘ಮರಣದಂಡನೆ’ ವಿಧಿಸಿದ್ದಾರೆನ್ನುವುದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.

ನೀವು ಯಮುನಾ ನದಿಯ ಸಂರಕ್ಷಣೆಗಾಗಿ ಹೋರಾಡುತ್ತಿದ್ದೀರೆಂದು ಹೇಳುತ್ತಿದ್ದರೂ ನಿಮ್ಮನ್ನು ಹಿಂದೂ-ವಿರೋಧಿ ಎಂದು ಹೇಳಲಾಗುತ್ತಿದೆಯಲ್ಲ?

-ರಾಷ್ಟ್ರೀಯತೆ ಹಾಗೂ ಧರ್ಮದ ಬಗೆಗಿನ ನಮ್ಮ ಭಾಷಣಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.ನಾನೊಬ್ಬ ಭಾರತೀಯ ಹಾಗೂ ಹಿಂದೂ ಎನ್ನಲು ಹೆಮ್ಮೆ ಪಡುತ್ತೇನೆ. ಕಲಬುರ್ಗಿಯನ್ನು ಕೊಂದಿದ್ದೇವೆ ಹಾಗೂ ನಿಮ್ಮನ್ನೂ ಕೊಲ್ಲುತ್ತೇವೆ ಎಂದು ಹೇಳುವ ಇಂತಹ ಜನರಿಂದ ನನಗೆ ಯಾವ ಸರ್ಟಿಫಿಕೇಟಿನ ಅಗತ್ಯವಿಲ್ಲ. ಜನರನ್ನು ಹಾಡಹಗಲೇ ಬೆದರಿಸುವ ಅವರ ಧೈರ್ಯ ನೋಡಿ-ಅದು ಕೂಡ ನ್ಯಾಯಾಲಯದ ಮುಂದೆ, ಮಾಧ್ಯಮ ಮಂದಿಯ ಉಪಸ್ಥಿತಿಯಲ್ಲಿ ಹಾಗೂ ಕೋರ್ಟಿನೊಳಗೆ.

ಈ ಕಾರ್ಯಕ್ರಮ ಆಯೋಜನೆಯನ್ನು ಆರ್ಟ್ ಆಫ್ ಲಿವಿಂಗ್ ಸಮರ್ಥಿಸಿಕೊಳ್ಳಬಹುದೇ?

-ಇಂತಹ ಒಂದು ಕಾರ್ಯಕ್ರಮಕ್ಕೆ ಜನರು ಭೇಟಿ ನೀಡಿ ಹಿಂದಿರುಗಬಹುದು. ಆದರೆ ಮುಂದೆ ಇಂತಹುದೇ ಕಾರ್ಯಕ್ರಮ ನಡೆಸಲು ಇತರರು ಯೋಚಿಸಬಹುದು.ಆದರೆ ಇಷ್ಟೊಂದು ಸಂಖ್ಯೆಯ ಜನರು ಆಗಮಿಸುವಂತಹ ಕಾರ್ಯಕ್ರಮವನ್ನು ಇಂತಹ ಒಂದು ಸ್ಥಳದಲ್ಲಿ ಅನುಮತಿಸಿದರೆ ನದಿಯನ್ನುಹಾಗೂ ದಿಲ್ಲಿಯ ನಾಲೆಗಳನ್ನು ಸಂರಕ್ಷಿಸುವುದು ಅಸಾಧ್ಯದ ಮಾತು. ಇಂತಹ ಕಾರ್ಯಕ್ರಮಕ್ಕೆ ನ್ಯಾಯಾಲಯ ನಿಷೇಧ ಹೇರಿದರಷ್ಟೇ ನಮಗೆ ವಿಜಯ ದೊರೆಯಿತೆಂದು ಹೇಳಬಹುದು.

                                                                            ಕೃಪೆ: www.catchnews.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News