ದೇಶದ್ರೋಹಿ ಗಳನ್ನುಸೃಷ್ಟಿಸುತ್ತಿರುವ ಕೇಸರಿ ಪತ್ರಿಕೋದ್ಯಮ
ಕೇಸರಿ ಬಣ್ಣದ ಗ್ಲಾಸುಗಳು
ಜೆಎನ್‌ಯು ವಿವಾದದಲ್ಲಿ ಕನ್ಹಯ್ಯ ಕುಮಾರ್‌ಗೆ ಮತ್ತು ಇತರರಿಗೆ ರಾಷ್ಟ್ರದ್ರೋಹಿಗಳ ಪಟ್ಟ ಕಟ್ಟುವಲ್ಲಿ ಝೀ ನ್ಯೂಸ್ ಮುಖ್ಯಪಾತ್ರ ವಹಿಸಿದೆ.
ಈಗ ಅದು ಅದೇ ಲೇಬಲನ್ನು ವಿಜ್ಞಾನಿ ಮತ್ತು ಕವಿ ಗೌಹರ್ ರಝಾ ಮೇಲೆ ದಿಲ್ಲಿ ಮುಷೈರಾದಲ್ಲಿ ಕವಿತೆ ಓದಿರುವುದಕ್ಕೆ ಕೊಟ್ಟಿದೆ.
ಮಾಲಕರ ಹೆಮ್ಮೆ
ಝೀ ನ್ಯೂಸ್ ಅಧ್ಯಕ್ಷ ಸುಭಾಶ್ಚಂದ್ರ ತಮ್ಮ ವಾಹಿನಿ ಭಾರತ ಪರವೇ ವಿನಾ ಬಿಜೆಪಿ ಪರವಲ್ಲ ಎಂದು ಸಮರ್ಥಿಸಿದ್ದಾರೆ.
ಝೀ ಕೋಮುವಾದಿಯಲ್ಲ ಎಂದು ಸಾಧಿಸಲು ಅವರು ಪಾಕಿಸ್ತಾನಿ ಧಾರಾವಾಹಿ ಪ್ರಸಾರ ಮಾಡುವ ಜಿಂದಗಿ ವಾಹಿನಿಯ ಉದಾಹರಣೆ ಕೊಟ್ಟಿದ್ದಾರೆ.
ಹೆಚ್ಚಿನ ವಿವರ
ಝೀ ಸುಳ್ಳು ಸುಳ್ಳೇ ನನ್ನ ಸಂಬಂಧಿಯನ್ನು ಭಯೋತ್ಪಾದಕ ಕೃತ್ಯದ ಜೊತೆಗೆ ತಳಕು ಹಾಕಿ ನಂತರ ಕ್ಷಮೆಯನ್ನೂ ಕೇಳಲಿಲ್ಲ.
ಮಾಲಕ ಸುಭಾಶ್ಚಂದ್ರರ ಬಿಜೆಪಿ ಸಂಪರ್ಕ- ವಾಸ್ತವ
ಗೌಹರ್ ರಝಾ ಮೇಲೆ ಗುರಿ
ಸರಿಯಾಗಿ ಅವಲೋಕಿಸಿದಲ್ಲಿ ಇಬ್ಬರು ಮಹಿಳೆಯರು ಅದೃಷ್ಟವಂತರು. ಪ್ರೈಮ್‌ಟೈಮ್ ಅಲ್ಲಿ ತೆರೆ ಮೇಲೆ ಅವರ ಚಿತ್ರಗಳನ್ನು ಅಂಟಿಸಿ ಅವರನ್ನು ರಾಷ್ಟ್ರವಿರೋಧಿಗಳೆಂದು ಬ್ರಾಂಡ್ ಮಾಡಲಾಗಿಲ್ಲ. ಏಕೆಂದರೆ ವಿಜ್ಞಾನಿ ಮತ್ತು ಕವಿ ಗೌಹರ್ ರಝಾ ದಿಲ್ಲಿಯ ಶಂಕರ್ ಶಾದ್ ಮುಷೈರಾದಲ್ಲಿ ಮಾರ್ಚ್ 5ರಂದು ಓದಿದ ಕವಿತೆಗೆ ಝೀ ನ್ಯೂಸ್ ಇದನ್ನೇ ಮಾಡಿದೆ. ಮಾರ್ಚ್ 9ರ ಇಡೀ ಸಂಜೆ ಅದು ಗೌಹರ್‌ರನ್ನು ರಾಷ್ಟ್ರ ವಿರೋಧಿ ಎಂದು ಕರೆದಿದೆ ಮತ್ತು ಒಟ್ಟಾರೆ ಮುಷೈರಾವನ್ನು ಅಫ್ಝಲ್ ಗುರು ಪ್ರೇಮಿಗಳ ಗ್ಯಾಂಗ್ ಎಂದು ಕರೆದಿದೆ. ರಝಾರ ಕವಿತೆಯಲ್ಲಿ ದೂರ ದೂರಕ್ಕೂ ರಾಷ್ಟ್ರವಿರೋಧದ ಗಂಧವೇ ಇರಲಿಲ್ಲ. ಆದರೆ ಮತ್ತೊಂದು ವಿಷಯ. ಬಹುತೇಕರು ಹೇಳುವಂತೆ ರಝಾರನ್ನು ಗುರಿ ಮಾಡಲು ಕಾರಣ, ಅವರು ಮತ್ತು ಅವರ ಪತ್ನಿ ಕಾರ್ಯಕರ್ತೆ ಶಬ್ನಂ ಹಶ್ಮಿ ಅವರು ನರೇಂದ್ರ ಮೋದಿ ಮತ್ತು ಗುಜರಾತ್ ಗಲಭೆಯಲ್ಲಿ ಅವರ ಪಾತ್ರದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು.
ವಾಸ್ತವದಲ್ಲಿ ರಝಾರ ಕವಿತೆಯನ್ನು ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಝೀ ನ್ಯೂಸ್ ಪಾಲಿಸುತ್ತಿರುವ ಪತ್ರಿಕೋದ್ಯಮದ ಬ್ರಾಂಡ್ ಬಗ್ಗೆ ಇಲ್ಲಿ ಹೇಳಲೇಬೇಕು. ಮಾರ್ಚ್ 10ರಂದು 200 ಮಂದಿ ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರು ವ್ಯಕ್ತಿಗಳನ್ನು ಪ್ರತ್ಯೇಕವಾಗಿ ನೋಡುವುದು ಮತ್ತು ಅವರ ವಿರುದ್ಧ ಸಾಮೂಹಿಕ ಉನ್ಮಾದ ಸೃಷ್ಟಿಸುವ ಝೀ ನ್ಯೂಸ್ ಅನ್ನು ಖಂಡಿಸಿ ಹೇಳಿಕೆ ನೀಡಿದರು. ರಝಾರ ಮೇಲೆ ದಾಳಿ ನಡೆಸಿದ ಹಿಂದಿನ ದಿನ ಝೀ ನ್ಯೂಸ್ ಜೆಎನ್‌ಯು ಶಿಕ್ಷಕರಾದ ನಿವೇದಿತಾ ಮೆನನ್‌ರನ್ನು ರಾಷ್ಟ್ರವಿರೋಧಿ ಎಂದು ಜರೆದಿತ್ತು. ಝೀ ನ್ಯೂಸ್ ಒಂದು ಸರಣಿಯನ್ನು ಹಿಂಬಾಲಿಸುತ್ತಿರುವಂತೆ ಕಾಣಿಸುತ್ತಿದೆ. ಒಟ್ಟಾರೆ ಜೆಎನ್‌ಯು ದೇಶದ್ರೋಹ ವಿವಾದದಲ್ಲಿ ಅದು ನಿರ್ವಹಿಸಿದ ಪಾತ್ರಕ್ಕಿಂತ ದೊಡ್ಡ ಉದಾಹರಣೆ ಇನ್ನೇನು ಬೇಕಿದೆ.
ಡಿಸೆಂಬರ್ 2001ರಲ್ಲಿ ಕೆನಡಾದಿಂದ ಭಾರತಕ್ಕೆ ಬಂದ ಗುಜರಾತಿ ಮುಸ್ಲಿಮ್ ಮೂಲದ ಉದ್ಯಮಿಗಳ ಗುಂಪೊಂದು ಶೋಷಿತ ವರ್ಗದ ಮಕ್ಕಳ ಶಿಕ್ಷಣದ ಸಣ್ಣ ಯೋಜನೆಯೊಂದನ್ನು ಕೈಗೆತ್ತಿಕೊಂಡಿತ್ತು. ಅವರ ಭೇಟಿಯ ಸಂದರ್ಭದಲ್ಲಿ ಅವರು ಬಹಳಷ್ಟು ಸರಕಾರೇತರ ಸಂಘಟನೆಗಳನ್ನು ಭೇಟಿಯಾದರು. ಅವರಲ್ಲಿ ನನ್ನ ಸಂಬಂಧಿಯೂ ಸೇರಿದ್ದರು. ಉದ್ಯಮಿಗಳು ತಮ್ಮ ಕೆಲಸ ಮುಗಿಸಿ 2001 ಡಿಸೆಂಬರ್ 13ರಂದು ಭಾರತದ ಸಂಸತ್ತಿನ ದಾಳಿಯಾದ ದಿನ ಹಿಂದಿರುಗಿ ಹೋದರು.
ಅವರನ್ನು ವಿಮಾನ ನಿಲ್ದಾಣದಲ್ಲಿ ವಿಚಾರಣೆ ನಡೆಸಲಾಯಿತು. ಕೆಲವೇ ಗಂಟೆಗಳಲ್ಲಿ ಟಿವಿ ವಾಹಿನಿಯೊಂದು ಅವರ ಹೆಸರುಗಳನ್ನು ಭಿತ್ತರಿಸುತ್ತಾ ದೇಶವನ್ನು ತೊರೆಯಲು ಯತ್ನಿಸಿದ ಭಯೋತ್ಪಾದಕ ಶಂಕಿತರು ಎಂದು ಪ್ರಸಾರ ಮಾಡಿತು! ಅಷ್ಟೇ ಅಲ್ಲ, ವಾಹಿನಿ ಆ ಭೇಟಿಯ ಸಂದರ್ಭ ಕೆನಡಾದ ಉದ್ಯಮಿಗಳನ್ನು ಭೇಟಿಯಾದ ನನ್ನ ಸಂಬಂಧಿ ಮತ್ತು ಅವರ ಮತ್ತೊಬ್ಬ ಸಹೋದ್ಯೋಗಿಗಳ ಹೆಸರನ್ನೂ ವಾಹಿನಿಯಲ್ಲಿ ಫ್ಲಾಷ್ ಮಾಡಿತು. ಒಟ್ಟಾರೆ ಪಿತೂರಿಯಲ್ಲಿ ಈ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ವಾಹಿನಿ ಹೇಳಿತು. ಕುತೂಹಲಕರ ಅಂಶವೆಂದರೆ ಕೆನಡಾ ಉದ್ಯಮಿಗಳನ್ನು ಬೇಗನೇ ಬಿಡಲಾಯಿತು ಮತ್ತು ಅವರು ದೇಶಕ್ಕೆ ಮರಳಿದರು. ಭಾರತದ ಶೋಷಿತ ವರ್ಗದ ಮಕ್ಕಳಿಗಾಗಿ ಅವರು ರೂಪಿಸಿದ್ದ ಯೋಜನೆಯೂ ಅಲ್ಲಿಗೇ ರದ್ದಾಯಿತು.ದರೆ ನಿರೀಕ್ಷೆಯಂತೆ ವಾಹಿನಿಯು ಕೆನಡಾದ ಉದ್ಯಮಿಗಳು ಅಮಾಯಕರು ಎಂದು ಸುದ್ದಿ ಪ್ರಸಾರ ಮಾಡುವ ಅಗತ್ಯವನ್ನೇ ಕಾಣಲಿಲ್ಲ. ವಾಹಿನಿಯು ಉದ್ಯಮಿಗಳ ಹೆಸರನ್ನು ಉಲ್ಲೇಖಿಸುವುದನ್ನು ಬಿಟ್ಟರೂ, ನನ್ನ ಸಂಬಂಧಿ ಮತ್ತು ಸಹೋದ್ಯೋಗಿಯ ಹೆಸರನ್ನು ಉಚ್ಛರಿಸುವುದನ್ನು ಮುಂದುವರಿಸಿತು. ಸಹೋದ್ಯೋಗಿ ಕಾಶ್ಮೀರ ಪಂಡಿತರೇ ಹೆಚ್ಚಾಗಿರುವ ಪಾಂಪೋಶ್ ಎನ್ಕ್ಲೇವ್ ಪ್ರಾಂತದಲ್ಲಿ ನೆಲೆಸಿದ್ದರು. ಭಯೋತ್ಪಾದಕ ದಾಳಿಯ ಸಂಬಂಧ ಅವರ ಹೆಸರು ಬಂದದ್ದೇ ತಡ ಮನೆ ಮಾಲಕರು ಅವರನ್ನು ಹೊರಗಟ್ಟಿದರು. ಪೊಲೀಸ್ ತನಿಖೆಯಲ್ಲಿ ಇವರಿಬ್ಬರ ಹೆಸರೇ ಇರಲಿಲ್ಲ. ದಾಳಿಯ ಜೊತೆಗೆ ಇವರಿಗೆ ದೂರದ ಸಂಬಂಧವೂ ಇರಲಿಲ್ಲ. ಸ್ಪಷ್ಟನೆ ಅಥವಾ ಕ್ಷಮಾಪಣೆ ಕೇಳುವುದು ಇರಲಿ, ವಾಹಿನಿ ತಾನು ಪ್ರತ್ಯೇಕ ಎಂದು ಪ್ರದರ್ಶಿಸಿದ ಸುದ್ದಿಯ ಬೆನ್ನು ಹತ್ತಲೂ ಹೋಗಲಿಲ್ಲ. ಆ ವಾಹಿನಿಯೇ ಝೀ ನ್ಯೂಸ್. ಜೆಎನ್‌ಯು ವಿವಾದ
ಬೆರಳಚ್ಚು ವರದಿಯನ್ನು ಆಧರಿಸಿ, ದಿಲ್ಲಿ ಸರಕಾರವು ಫೆಬ್ರವರಿ 9ರಂದು ಜೆಎನ್‌ಯುನಲ್ಲಿ ಪಾಕಿಸ್ತಾನಿ ಜಿಂದಾಬಾದ್ ಎನ್ನುವ ಘೋಷಣೆ ಕೂಗಿದ ತಿರುಚಿದ ವೀಡಿಯೊವನ್ನು ಝೀ ನ್ಯೂಸ್ ವರದಿ ಮಾಡಿರುವುದನ್ನು ಬಯಲಿಗೆಳೆದಿದೆ. ದಿಲ್ಲಿ ಪೊಲೀಸರು ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್ ವಿರುದ್ಧ ಕೇಸು ಹಾಕಲು ಮೂಲ ಆಧಾರವಾಗಿದ್ದೇ ಈ ವೀಡಿಯೊ ದೃಶ್ಯಗಳು. ಅಲ್ಲದೆ, ಫೆಬ್ರವರಿ 9ರಂದು ಪೊಲೀಸರು ಕ್ಯಾಂಪಸ್‌ನಲ್ಲಿ ಹಾಜರಿದ್ದರು ಮತ್ತು ಮೊಕದ್ದಮೆ ದಾಖಲಿಸುವ ಯಾವುದೇ ಕಾರಣ ಅವರಿಗೆ ಕಂಡಿರಲಿಲ್ಲ. ಝೀ ನ್ಯೂಸ್ ಫೆಬ್ರವರಿ 10ರಂದು ತೋರಿಸಿದ ವೀಡಿಯೊಗಳ ಬಳಿಕವೇ ಅದು ನಡೆದಿದೆ. ಅಲ್ಲದೆ ಫೆೆಬ್ರವರಿ 9ರಂದು ಝೀ ನ್ಯೂಸ್ ಸಿಬ್ಬಂದಿಗೆ ಜೆಎನ್‌ಯುಗೆ ಪ್ರವೇಶ ಸಿಗುವಂತೆ ಮಾಡಿರುವುದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಜಂಟಿ ಕಾರ್ಯದರ್ಶಿ ಎಬಿವಿಪಿಯ ಸೌರಬ್ ಕುಮಾರ್ ಶರ್ಮಾ. ಹಾಗಿದ್ದರೆ ಶರ್ಮಾ ಮತ್ತು ಝೀ ನ್ಯೂಸ್‌ಗೆ ಕಾರ್ಯಕ್ರಮದಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೂಗಲಾಗುತ್ತದೆ ಎಂದು ಗೊತ್ತಿತ್ತೇ? ಗೊತ್ತಿಲ್ಲದಿದ್ದರೆ, ಜೆಎನ್‌ಯುನ ಸಣ್ಣ ಕಾರ್ಯಕ್ರಮವನ್ನು ವರದಿ ಮಾಡಲು ವಾಹಿನಿ ಮುಂದಾಗಿದ್ದೇಕೆ?
ಎಬಿವಿಪಿ ಮತ್ತು ಝೀ ನ್ಯೂಸ್ ನಡುವಿನ ಆಪ್ತ ಸಂಬಂಧ ಹೊರಗೆ ಬಂದದ್ದು ಫೆಬ್ರವರಿ 21ರಂದು.
ಅಂದು 9 ದಿನಗಳ ಕಾಲ ಅಡಗಿ ಕುಳಿತಿದ್ದ, ದೇಶದ್ರೋಹದ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಮತ್ತು ಇತರ ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಕ್ಯಾಂಪಸ್‌ನಲ್ಲಿ ಎನ್‌ಡಿಟಿವಿ ಪತ್ರಕರ್ತ ಶ್ರೀನಿವಾಸನ್ ಜೈನ್ ಬರುವುದನ್ನು ಎಬಿವಿಪಿ ವಿರೋಧಿಸಿತ್ತು ಎಂದು ಜೆಎನ್‌ಯು ಭದ್ರತಾ ವಿಭಾಗ ಹೇಳಿದೆ. ಜೈನ್ ಕ್ಯಾಂಪಸ್‌ನಿಂದ ಹೊರಗೆ ಹೋಗದೆ ಇದ್ದಲ್ಲಿ ಝೀ ನ್ಯೂಸ್ ತಂಡಕ್ಕೂ ಕ್ಯಾಂಪಸ್‌ಗೆ ಬರಲು ಅವಕಾಶ ಕೊಡಬೇಕು ಎಂದು ಅವರು ಒತ್ತಾಯಿಸಿದ್ದರು. ಯಾವ ವಾಹಿನಿ ತಮ್ಮ ಪರವಾಗಿ ವರದಿ ಪ್ರಸಾರ ಮಾಡುವ ನಂಬಿಕೆ ಎಬಿವಿಪಿಗೆ ಇದೆ ಎನ್ನುವುದು ಇದರಲ್ಲಿ ತಿಳಿದುಬರುತ್ತದೆ. ಝೀ ನ್ಯೂಸ್‌ನ ತಾರತಮ್ಯದ ವರದಿಗೆ ಇನ್ನಷ್ಟು ಸಾಕ್ಷ್ಯಗಳು ಬೇಕೆಂದರೆ, ಪತ್ರಕರ್ತ ವಿಶ್ವ ದೀಪಕ್ ಪತ್ರವನ್ನು ಓದಬಹುದು. ಅವರು ಜೆಎನ್‌ಯು ವಿವಾದವನ್ನು ಅನೈತಿಕವಾಗಿ ಪ್ರಸಾರ ಮಾಡಿರುವುದನ್ನು ವಿರೋಧಿಸಿ ಸಂಸ್ಥೆ ತೊರೆದಿದ್ದರು. ಬಿಜೆಪಿ ಅಥವಾ ಆರೆಸ್ಸೆಸ್ ಏನು ಹೇಳುತ್ತದೆಯೋ ಅದನ್ನೇ ಮಾಡಲು ನಾವು ಅವರ ಮುಖವಾಣಿಯೇ? ವೀಡಿಯೊದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆಗಳು ಇರಲೇ ಇಲ್ಲ. ಹಾಗಿದ್ದರೂ ಹುಚ್ಚು ಮತ್ತು ಉನ್ಮಾದವನ್ನು ಹರಡಲು ನಾವು ಪದೇ ಪದೇ ಅದನ್ನೇ ಪ್ರಸಾರ ಮಾಡಿದ್ದೇವೆ. ಕತ್ತಲಲ್ಲಿ ಬರುವ ಯಾವುದೋ ಧ್ವನಿಗಳು ಕನ್ಹಯ್ಯಾ ಕುಮಾರ್ ಮತ್ತು ಅವರ ಸಹಚರರದು ಎಂದು ನಾವು ಹೇಗೆ ನಂಬುವುದು? ನಮ್ಮ ತಾರತಮ್ಯದ ಧೋರಣೆಯ ಕಾರಣದಿಂದ ಭಾರತೀಯ ನ್ಯಾಯಾಲಯ ದೀರ್ಘಾಯುವಾಗಲಿ ಎನ್ನುವುದನ್ನು ದೀರ್ಘಾಯು ಪಾಕಿಸ್ತಾನ ಎಂದು ಕೇಳಿಸಿಕೊಂಡೆವು ಮತ್ತು ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಇದರ ಹಿನ್ನೆಲೆಯಲ್ಲಿ ಕೆಲವರ ವೃತ್ತಿಗಳು, ಭರವಸೆಗಳು, ಆಶೋತ್ತರಗಳು ಮತ್ತು ಕುಟುಂಬವನ್ನು ನಾಶಪಡಿಸಿದ್ದೇವೆ ಎಂದು ವಿಶ್ವ ದೀಪಕ್ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಸುಭಾಶ್ಚಂದ್ರರಿಗೂ ಬಿಜೆಪಿಗೂ ಇರುವ ಆಪ್ತತೆ
ತಾರತಮ್ಯದ ಹೇಳಿಕೆಗಳ ವಿರುದ್ಧ ತಮ್ಮ ವಾಹಿನಿಯನ್ನು ಸಮರ್ಥಿಸಿಕೊಳ್ಳುವ ಝೀ ಮಾಧ್ಯಮ ಅಧ್ಯಕ್ಷ ಸುಭಾಶ್ಚಂದ್ರ ತಾವು ಯಾವುದೇ ತಿರುಚಿದ ವೀಡಿಯೊಗಳನ್ನು ಪ್ರಸಾರ ಮಾಡಿಲ್ಲ ಎಂದಿದ್ದಾರೆ. ಝೀ ನ್ಯೂಸ್ ಭಾರತ ಪರವೇ ವಿನಾ ಬಿಜೆಪಿ ಪರ ಇಲ್ಲ ಎಂದಿದ್ದಾರೆ. ಝೀ ಕೋಮುವಾದಿಯಲ್ಲ ಎಂದು ತೋರಿಸಲು ತಮ್ಮ ವಾಹಿನಿ ಜಿಂದಗಿಯಲ್ಲಿ ಪಾಕಿಸ್ತಾನಿ ಧಾರವಾಹಿಗಳನ್ನು ಬಿತ್ತರಿಸುವುದನ್ನು ಅವರು ಉದಾಹರಿಸುತ್ತಾರೆ. ಇವೆರಡರ ನಡುವೆ ಎತ್ತಣದ ಸಂಬಂಧ ಎಂದು ಹೇಳುವುದು ಕಷ್ಟ. ಬಿಜೆಪಿಯಲ್ಲಿ ಇರುವ ಬಹುತೇಕರ ಹಾಗೆ ಸುಭಾಶ್ಚಂದ್ರ ಕೂಡ ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನದ ಜೊತೆಗೆ ಹೋಲಿಸುತ್ತಾರೆ. ಬಿಜೆಪಿ ಜೊತೆಗಿನ ಚಂದ್ರರ ಆಪ್ತತೆ ಗೊತ್ತಿರುವುದೇ ಆಗಿದೆ. ಕಳೆದ ವರ್ಷದ ಹರಿಯಾಣದ ವಿಧಾನಸಭಾ ಚುನಾವಣೆಯಲ್ಲಿ ಚಂದ್ರ ಅವರು ಹಿಸಾರ್‌ನ ಬಿಜೆಪಿ ಅಭ್ಯರ್ಥಿ ಕಮಲ್ ಗುಪ್ತಾ ಪರವಾಗಿ ಪ್ರಚಾರ ನಡೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ತಿರುಚದೆ ಇರುವ ವೀಡಿಯೊ ಕೂಡ ಇದೆ. ಹಾಗೆಂದು ತಿರುಚಿದೆಯೇ ಇಲ್ಲವೇ ಎಂದು ಸ್ಪಷ್ಟವಾಗಿ ಹೇಳುವುದೂ ಕಷ್ಟ! ಝೀ ನೇತೃತ್ವದ ಡಿಎನ್‌ಎನಲ್ಲಿ ಬಂದಿರುವ ವರದಿಯೊಂದರ ಪ್ರಕಾರ ಹಿಸಾರ್‌ನಲ್ಲಿ ಯಾವುದೇ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಮತ್ತು ಕಳೆದ ಎರಡು ದಶಕಗಳಿಂದ ಬಿಜೆಪಿ ಜೊತೆಗೆ ಸಂಬಂಧವಿದೆ ಎಂದು ಚಂದ್ರ ಹೇಳಿದ್ದಾರೆ. ತಾನು ಕೇಳಿದ್ದರೆ ಪಕ್ಷದ ಟಿಕೆಟ್ ಕೂಡ ಸಿಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಸುಭಾಶ್ಚಂದ್ರ ಗೋಯೆಲ್ ಹಿಸಾರ್‌ನ ಬನಿಯಾ ಸಮುದಾಯದವರು. ಝೀ ನ್ಯೂಸ್‌ನ ಪ್ರಸಿದ್ಧ ಎರಡು ವಿವಾದಗಳು ಆಗಿರುವುದು ಬನಿಯ ಸಮುದಾಯದವರಾದ ನವೀನ್ ಜಿಂದಾಲ್ ಮತ್ತು ಅರವಿಂದ ಕೇಜ್ರಿವಾಲ್ ಜೊತೆಗೆ. ಕುರುಕ್ಷೇತ್ರದ ಮಾಜಿ ಸಂಸದ ಜಿಂದಾಲ್ ಮೂಲತಃ ಹಿಸಾರ್‌ನವರು. ಕಲ್ಲಿದ್ದಲು ಹಗರಣದಲ್ಲಿ ತಮ್ಮ ಪಾತ್ರದ ಬಗ್ಗೆ ವರದಿ ಪ್ರಸಾರ ಮಾಡದೆ ಇರಲು ಝೀ ನ್ಯೂಸ್ ಆಡಳಿತ ಮಂಡಳಿ ಮತ್ತು ಸಂಪಾದಕರು ತಮ್ಮಿಂದ ರೂ. 100 ಕೋಟಿ ಕೇಳಿರುವುದಾಗಿ 2012ರಲ್ಲಿ ಜಿಂದಾಲ್ ಆರೋಪಿಸಿದ್ದರು. ಝೀ ನ್ಯೂಸ್ ಸಂಪಾದಕರಾದ ಸುಧೀರ್ ಚೌಧುರಿ ಮತ್ತು ಸಮೀರ್ ಅಹ್ಲುವಾಲಿಯಾ ಜೈಲಿಗೆ ಹೋದರು ಮತ್ತು ಜಾಮೀನಿನ ಮೇಲೆ ಬಿಡುಗಡೆಯಾದರು. ಹಿಸಾರ್‌ನಿಂದ 30 ಕಿಮೀ ದೂರದಲ್ಲಿ ಸಿವಾನಿ ಎನ್ನುವ ಸಣ್ಣ ಗ್ರಾಮದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನಿಸಿದ್ದಾರೆ. ವಿಶ್ವ ದೀಪಕ್ ತಮ್ಮ ಪತ್ರದಲ್ಲಿ ಹೇಳಿರುವಂತೆ ಝೀ ನ್ಯೂಸ್ ಪ್ರತೀ ಬಾರಿ ಕೇಜ್ರಿವಾಲ್ ಬಗ್ಗೆ ವರದಿ ಮಾಡುವಾಗ ಉದ್ದೇಶಪೂರ್ವಕ ವಿರೋಧಿಸುತ್ತಾರೆ. ಕೇಜ್ರಿವಾಲ್ ವಿರುದ್ಧ ನಿರಂತರ ಪ್ರಚಾರಾಭಿಯಾನ ನಡೆದಿದೆ ಮತ್ತು ಈಗಲೂ ನಡೆಯುತ್ತಿದೆ. ಕೇಜ್ರಿವಾಲ್ ವಿರುದ್ಧ ಪ್ರಸಾರವಾದ ನಕಾರಾತ್ಮಕ ವರದಿಗಳ ಪಟ್ಟಿ ಮಾಡ ಹೊರಟರೆ ಹಲವು ಪುಟಗಳೇ ಬೇಕಾಗಬಹುದು ಎಂದು ಅವರು ಬರೆದಿದ್ದಾರೆ.
ಈಗ ಕೇಜ್ರಿವಾಲ್ ಸರಕಾರ ತಿರುಚಿದ ವೀಡಿಯೊಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಝೀ ನ್ಯೂಸ್ ಮತ್ತು ಇತರ ಕೆಲವು ವಾಹಿನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಇಲ್ಲಿ ಕೇಳಬೇಕಾದ ಪ್ರಶ್ನೆ ಎಂದರೆ: ವಾಹಿನಿಯೊಂದರ ಮಾಲಕ ಬಹಿರಂಗವಾಗಿ ಒಂದು ಪಕ್ಷದ ಪರವಾಗಿದ್ದಾರೆ, ಅದರ ಸಂಪಾದಕರು ಸುಲಿಗೆಯ ಆರೋಪ ಎದುರಿಸುತ್ತಿದ್ದಾರೆ ಮತ್ತು ಜನರನ್ನು ರಾಷ್ಟ್ರವಿರೋಧಿ ಎಂದು ಬ್ರಾಂಡ್ ಮಾಡಲು ತಿರುಚಿದ ವೀಡಿಯೊ ಪ್ರಸಾರ ಮಾಡಿ ಸಿಕ್ಕಿಬಿದ್ದ ವಾಹಿನಿಯೊಂದರಲ್ಲಿ ತೋರಿಸಿರುವ ವರದಿಗಳನ್ನು ಪತ್ರಿಕೋದ್ಯಮವೆಂದು ಕರೆಯಬಹುದೇ?. ಅದೇನೇ ಇದ್ದರೂ, ಝೀ ನ್ಯೂಸ್ ನಡೆಸುತ್ತಿರುವ ಪತ್ರಿಕೋದ್ಯಮದ ಬ್ರಾಂಡ್ ಬದಲಾಗುವುದು ಸಂಶಯ. ಅದಲ್ಲದೆ, ರಾಷ್ಟ್ರ ವಿರೋಧಿಗಳನ್ನು ತಯಾರಿಸುವುದು ಈಗ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ.