ಜಾಮಿಯಾ, ಅಲಿಘರ್ ವಿರುದ್ಧ ವ್ಯವಸ್ಥಿತ ಸಂಚು: ತಲತ್ ಅಹ್ಮದ್

Update: 2016-03-12 18:09 GMT

ಜಾಮಿಯಾ ಮಿಲಿಯಾ ಇಸ್ಲಾಮಿಯದ ಅಲ್ಪಸಂಖ್ಯಾತ ದರ್ಜೆಯನ್ನು ದಿಲ್ಲಿ ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. 96 ವರ್ಷದ ಹಳೆಯ ಸಂಸ್ಥೆಯ ಅಲ್ಪಸಂಖ್ಯಾತ ದರ್ಜೆಯನ್ನು ಯುಪಿಎ ಸರಕಾರ ಬೆಂಬಲಿಸಿತ್ತಾದರೂ, ಎನ್‌ಡಿಎ ಸರಕಾರ ಈಗ ಉಲ್ಟಾ ಹೊಡೆದಿದೆ ಮತ್ತು ಬೆಂಬಲಿಸುವುದಿಲ್ಲ ಎಂದು ಹೇಳಿದೆ. ಟೆಲಿಗ್ರಾಫ್ ಪತ್ರಿಕೆಯ ಬಸಂತ್ ಕುಮಾರ್ ಮೊಹಾಂತಿ ಜೊತೆಗೆ ಸಂದರ್ಶನದಲ್ಲಿ ಉಪಕುಲಪತಿ ತಲತ್ ಅಹ್ಮದ್ ಅವರು ಜಾಮಿಯಾ ಮತ್ತು ಎಎಂಯುವನ್ನು ಏಕೆ ಪ್ರತ್ಯೇಕವಾಗಿ ನೋಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ.

 ಸರಕಾರವು ಎಎಂಯು (ಆಲಿಘರ್ ಮುಸ್ಲಿಮ್ ಯುನಿವರ್ಸಿಟಿ) ಮತ್ತು ಜಾಮಿಯಾದ ಅಲ್ಪಸಂಖ್ಯಾತ ದರ್ಜೆಯನ್ನು ವಿರೋಧಿಸುವ ನಿರ್ಧಾರವನ್ನು ಇತ್ತೀಚೆಗೆ ಕೈಗೊಂಡಿದೆ. ನೀವು ಈ ಬಗ್ಗೆ ಏನು ಹೇಳುವಿರಿ?
- ಜಾಮಿಯಾಗೆ ಅಲ್ಪಸಂಖ್ಯಾತ ದರ್ಜೆಯನ್ನು ಸಂಸತ್ತು ರಚಿಸಿದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಆಯೋಗವು (NCMEI) ಕೊಟ್ಟಿದೆ. ಜಾಮಿಯಾ ಈ ದರ್ಜೆಗೆ ಅರ್ಹವಾಗಿರುವ ಕಾರಣ ಅದಕ್ಕೆ ನೀಡಲಾಗಿದೆ. ಈ ಸಂಸ್ಥೆಯನ್ನು ಮುಸ್ಲಿಮರು ಸ್ಥಾಪಿಸಿದ್ದಾರೆ. ಅದೇನೇ ಇದ್ದರೂ, ಹೈಕೋರ್ಟ್ ನಿರ್ಧಾರ ಕೈಗೊಳ್ಳಲು ನಾವು ಕಾಯುತ್ತಿದ್ದೇವೆ.

 ಒಂದು ಕೇಂದ್ರೀಯ ವಿಶ್ವವಿದ್ಯಾನಿಲಯದ ಮೂಲಕ ಯಾವುದೇ ಸರಕಾರವು ನಿರ್ದಿಷ್ಟ ಸಮುದಾಯವನ್ನು ಪ್ರಾಯೋಜಿಸುವುದನ್ನು ನೋಡಲು ಸಾಧ್ಯವಿಲ್ಲ ಎಂದು ಸಾಮಾಜಿಕ ನ್ಯಾಯ ಸಚಿವ ಥಾವರ್ ಚಂದ್ ಗೆಹ್ಲೊಟ್ ಸರಕಾರದ ಬದಲಾದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ನೀವು ಅವರ ಮಾತನ್ನು ಒಪ್ಪಿಕೊಳ್ಳುವಿರಾ?

- ಸರಕಾರದ ಅನುದಾನ ಪಡೆಯುವ ಬಹಳಷ್ಟು ಅಲ್ಪಸಂಖ್ಯಾತ ಸಂಸ್ಥೆಗಳಿವೆ. ಉದಾಹರಣೆಗೆ, ಸೈಂಟ್ ಸ್ಟೀಪನ್ ಕಾಲೇಜ್, ಖಾಲ್ಸಾ ಕಾಲೇಜುಗಳಿಗೆ ಕೇಂದ್ರ ಸರಕಾರ ಅನುದಾನ ನೀಡುತ್ತದೆ. ಹಾಗಿದ್ದ ಮೇಲೆ ಜಾಮಿಯಾ ಮತ್ತು ಎಎಂಯುವನ್ನು ಮಾತ್ರ ಪ್ರತ್ಯೇಕವಾಗಿ ನೋಡುತ್ತಿರುವುದೇಕೆ ಎಂದು ನನಗೆ ಅರ್ಥವಾಗುವುದಿಲ್ಲ. ಸಂವಿಧಾನವು ಅಲ್ಪ ಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆಡಳಿತ ನಡೆಸುವ ಹಕ್ಕನ್ನು ನೀಡಿದೆ. ಸಂವಿಧಾನವು ನಮಗೆ ಕೊಟ್ಟದ್ದನ್ನು ನಾವು ಪಾಲಿಸುತ್ತಿದ್ದೇವೆ.

ಹೈಕೋರ್ಟ್ ಅಲ್ಪಸಂಖ್ಯಾತ ದರ್ಜೆಯನ್ನು ನೀಡಿದ ಘೆಇಉಐ ಆದೇಶಕ್ಕೆ (2011ರ) ತಡೆಯಾಜ್ಞೆ ಕೊಟ್ಟಿಲ್ಲ. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.50 ಅಲ್ಪಸಂಖ್ಯಾತ ಕೋಟಾವನ್ನು ಆರಂಭಿಸಿದೆ. ಆದರೆ ಸಿಬ್ಬಂದಿ ನೇಮಕದಲ್ಲಿ ಅಲ್ಲ. ನೇಮಕಾತಿಯಲ್ಲೂ ಇದೇ ಮೀಸಲಾತಿಯನ್ನು ಮುಂದುವರಿಸುವ ಯೋಜನೆ ಏನಾದರೂ ಇದೆಯೇ?
- ನ್ಯಾಯಾಲಯದಲ್ಲಿ ಈ ವಿಷಯವು ಪರಿಹಾರ ಕಾಣುವವರೆಗೂ ಏನೂ ಹೊಸತನ್ನು ಮಾಡುವುದಿಲ್ಲ. (ವಿದ್ಯಾರ್ಥಿಗಳ ದಾಖಲಾತಿ ಯಲ್ಲಿ ಮೀಸಲಾತಿ ಆರಂಭಿಸಿದ ಮೇಲೆ ಅಲ್ಪಸಂಖ್ಯಾತ ದರ್ಜೆಯನ್ನು ಪ್ರಶ್ನಿಸಲಾಗಿದೆ.)
  ಯುಪಿಎ ಅಧಿಕಾರದಲ್ಲಿರುವಾಗ ನೀವು ಅಧಿಕಾರ ವಹಿಸಿಕೊಂಡಿದ್ದೀರಿ. ನೀವು ಎನ್‌ಡಿಎ ಸರಕಾರದ ಜೊತೆಗೂ ಕೆಲಸ ಮಾಡಿದ್ದೀರಿ. ಅಲ್ಪಸಂಖ್ಯಾತ ದರ್ಜೆಯ ಬದಲಾವಣೆಯ ನಿಲುವಿಗೆ ಕಾರಣ ಏನಾಗಿರಬಹುದು?
- ಸರಕಾರಕ್ಕೆ ಕಾರಣ ತಿಳಿದಿರಬಹುದು. ಈ ಹಂತದಲ್ಲಿ ನಾನು ಇನ್ನೇನೂ ಹೇಳಲು ಬಯಸುವುದಿಲ್ಲ. ನಾವು ಉತ್ತಮ ಕೆಲಸದ ಕಡೆಗೆ ಗಮನಹರಿಸುತ್ತಿದ್ದೇವೆ. ಸಂಸ್ಥೆಯಲ್ಲಿ ಹಲವು ಯಶೋಗಾಥೆಗಳಿವೆ. ನಮ್ಮ ವಿಶ್ವವಿದ್ಯಾನಿಲಯ ರಾಷ್ಟ್ರೀಯ ವಿಶ್ಲೇಷಣೆ ಮತ್ತು ಮಾನ್ಯತೆ ಕೌನ್ಸಿಲ್‌ನಿಂದ ಎ ಗ್ರೇಡ್ ಪಡೆದಿದೆ. ಇನ್ನೂ ಎರಡು ಹಾಸ್ಟೆಲ್‌ಗಳನ್ನು- ಒಂದು ಪರಿಶಿಷ್ಟ ಜಾತಿ ಮತ್ತು ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ- ಪ್ರತ್ಯೇಕವಾಗಿ ಆರಂಭಿಸುತ್ತಿದ್ದೇವೆ. ನಾವು ಶೈಕ್ಷಣಿಕ ಜಾಲ ಯೋಜನೆಯ ಜಾಗತಿಕ ಆರಂಭವನ್ನು ಕೈಗೆತ್ತಿಕೊಂಡಿದ್ದು, 10 ಪ್ರಮುಖ ವಿದೇಶಿ ಉಪನ್ಯಾಸಕರು ಕ್ಯಾಂಪಸ್‌ಗೆ ಬಂದಿದ್ದಾರೆ ಮತ್ತು ವಿಶೇಷ ತರಗತಿಗಳನ್ನು ಆರಂಭಿಸಿದ್ದಾರೆ.

  ವಿವಿಧ ಸಂಸ್ಥೆಗಳ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಸಂಸ್ಥೆಗಳ ಸ್ವಾಯತ್ತ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದೆ ಎನ್ನುವ ಭಾವನೆಯಿದೆ. ಕೆಲವೊಮ್ಮೆ ಕ್ಯಾಂಪಸ್‌ಗಳ ರಾಷ್ಟ್ರವಿರೋಧಿ ಚಟುವಟಿಕೆಗಳ ಕುರಿತಾಗಿ ಅನಾಮಧೇಯ ಅರ್ಜಿಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಆದೇಶಿಸುತ್ತಿದೆ. ನೀವು ಈ ಬಗ್ಗೆ ಏನು ಹೇಳುವಿರಿ?
- ನಮ್ಮ ಕ್ಯಾಂಪಸ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಚಿವಾಲಯದಿಂದ ಯಾವುದೇ ಪತ್ರವನ್ನು ನಾವು ಸ್ವೀಕರಿಸಿಲ್ಲ. ಆದರೆ, ನನಗೆ ಅಂತಹ ಪತ್ರ ಅಥವಾ ಅರ್ಜಿಗಳು ಬಂದಲ್ಲಿ ತರಾತುರಿಯಲ್ಲಿ ಕ್ರಮ ಕೈಗೊಳ್ಳುವುದಿಲ್ಲ. ಉಪಕುಲಪತಿಯಾಗಿ ಏನು ಮಾಡಬೇಕೋ ಅದನ್ನೇ ಮಾಡುವೆ ಮತ್ತು ನನ್ನ ಕೆಲಸದ ಮೇಲೆ ಹೊರಗಿನ ಒತ್ತಡ ಅಥವಾ ಪ್ರಭಾವಕ್ಕೆ ಅವಕಾಶ ಕೊಡುವುದಿಲ್ಲ. ಉಪಕುಲಪತಿಯನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.

  ಕ್ಯಾಂಪಸ್‌ನಲ್ಲಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಸರಕಾರ ಹೇಳಿಕೆಗಳನ್ನು ಕೊಟ್ಟಾಗ ಪೊಲೀಸರನ್ನು ಒಳಗೆ ಬಿಟ್ಟು ಜೆಎನ್‌ಯು ತರಾತುರಿಯಲ್ಲಿ ಕೆಲಸ ಮಾಡಿದೆ ಎಂದು ನಿಮಗೆ ಅನಿಸುತ್ತಿದೆಯೇ?
- ಜಾಧವಪುರ ವಿಶ್ವವಿದ್ಯಾನಿಲಯ ಇಂತಹುದೇ ಸನ್ನಿವೇಶ ಎದುರಿಸಿತ್ತು. ಆದರೆ ಪೊಲೀಸರನ್ನು ಒಳಗೆ ಬಿಡಲಿಲ್ಲ ಮತ್ತು ಆಂತರಿಕ ಸಮಿತಿಯ ಮೂಲಕ ವ್ಯವಹಾರಗಳನ್ನು ನಿಭಾಯಿಸಿದೆ. ಪ್ರತೀ ವಿಶ್ವವಿದ್ಯಾನಿಲಯವು ಈ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಲು ಒಂದು ಪ್ರಾಕ್ಟರುಗಳ (ವಿವಿಯಲ್ಲಿ ವಿದ್ಯಾರ್ಥಿಗಳ ಶಿಸ್ತಿಗೆ ಬಾಧ್ಯಸ್ಥ ಅಧಿಕಾರಿ) ವ್ಯವಸ್ಥೆಯನ್ನು ಹೊಂದಿದೆ. ಜೆಎನ್‌ಯು ಆರಂಭದಲ್ಲಿ ಪೊಲೀಸರನ್ನು ಒಳಬಿಟ್ಟಿತು. ಅಂತಹ ವಿಷಯಗಳನ್ನು ಕಾನೂನು ಮತ್ತು ಸುವ್ಯವಸ್ಥೆಗೆ ಹಾನಿಯಾಗಿ ಪೊಲೀಸ್ ಮಧ್ಯಪ್ರವೇಶದ ಅಗತ್ಯದ ವಿನಾ ವಿಶ್ವವಿದ್ಯಾನಿಲಯವೇ ನಿಭಾಯಿಸಬೇಕು.
  ಜಾಮಿಯಾದ ಕೆಲವು ವಿದ್ಯಾರ್ಥಿಗಳು ಸಹ ಜೆಎನ್‌ಯುನಲ್ಲಿ ನಡೆದ ಭಾರತ ವಿರೋಧಿ ಘೋಷಣೆಗಳ ಭಾಗವಾಗಿದ್ದರು ಎಂದು ಪೊಲೀಸರಿಗೆ ಸಂಶಯವಿದೆ.
-ಜೆಎನ್‌ಯು ಪ್ರಕರಣದಲ್ಲಿ ನಮ್ಮ ಯಾವುದೇ ವಿದ್ಯಾರ್ಥಿಗಳು ಭಾಗಿಯಾಗಿರುವ ಬಗ್ಗೆ ನಮಗೆ ಪೊಲೀಸರಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಗೆಯೇ ವಿದ್ಯಾರ್ಥಿಗಳು ಹೊರಗೆ ಹೋಗುವುದು ಅಥವಾ ಪ್ರತಿಭಟನೆಯಲ್ಲಿ ಭಾಗವಹಿಸುವುದು ಅಥವಾ ಚರ್ಚೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ.

 ಕೇಂದ್ರೀಯ ವಿಶ್ವವಿದ್ಯಾನಿಲಯದ ಮೇಲೆ 35 ಕೆಜಿ ರಾಷ್ಟ್ರ ಧ್ವಜವನ್ನು ನಿರ್ದಿಷ್ಟ ಎತ್ತರದಲ್ಲಿ ಹಾರಿಸಬೇಕು ಎನ್ನುವ ಆದೇಶದ ಬಗ್ಗೆ ಅಧ್ಯಾಪಕರ ಕೆಲವು ವಿಭಾಗಗಳಲ್ಲಿ ಕಳವಳ ವ್ಯಕ್ತವಾಗಿದೆ. ಅಂತಹ ನಿರ್ದಿಷ್ಟತೆಗಳು ಏಕೆ?
-ನಾವು ಕ್ಯಾಂಪಸ್‌ನಲ್ಲಿ ಪ್ರತೀದಿನ ರಾಷ್ಟ್ರಧ್ವಜ ಹಾರಿಸುತ್ತೇವೆ. ಉಪಕುಲಪತಿಗಳ ಸಮ್ಮೇಳನವು ಕೇಂದ್ರೀಯ ಸ್ಥಳದಲ್ಲಿ ಪ್ರಮುಖವಾಗಿ ಮತ್ತು ಹೆಮ್ಮೆಯಿಂದ ರಾಷ್ಟ್ರಧ್ವಜ ಹಾರಿಸುವ ನಿರ್ಣಯ ತೆಗೆದುಕೊಂಡಿದೆ. 24 ಗಂಟೆಯೂ ಇದನ್ನು ಹಾರಿಸುವ ನಿರ್ಧಾರವೇನೂ ಇಲ್ಲ. ಕಂಬದ ಎತ್ತರ ಅಥವಾ ಧ್ವಜದ ಭಾರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಎತ್ತರ ಮತ್ತು ಭಾರವನ್ನು ನಿರ್ದಿಷ್ಟವಾಗಿ ಹೇಳಿದಂತಹ ಯಾವುದೇ ಸೂಚನೆ ನನಗೆ ಬಂದಿಲ್ಲ.

 ಹಲವಾರು ಶೈಕ್ಷಣಿಕ ಸುಧಾರಣೆಗಳನ್ನು ಮಾನವಸಂಪನ್ಮೂಲ ಸಚಿವಾಲಯ ಮತ್ತು ಯುಜಿಸಿಯ ಅಡಿಯಲ್ಲಿ ತರಾತುರಿಯಲ್ಲಿ ಹೇರಲಾಗುತ್ತದೆ ಎನ್ನುವ ಭಾವನೆ ವಿಶ್ವವಿದ್ಯಾನಿಲಯಗಳಲ್ಲಿದೆ. ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ ಅನುಷ್ಠಾನ (CBCS) ಅದಕ್ಕೆ ಒಂದು ಉದಾಹರಣೆಯಾಗಿದೆ.
-CBCSಯನ್ನು ಎಲ್ಲಾ ವಿಶ್ವವಿದ್ಯಾನಿಲಯಗಳ ಎಲ್ಲಾ ಉಪಕುಲಪತಿಗಳು ಮತ್ತು ಅಧ್ಯಾಪಕರ ಜೊತೆಗೆ ಚರ್ಚಿಸಿದ ನಂತರವೇ ಆರಂಭಿಸಲಾಗಿದೆ. ಸಚಿವಾಲಯ ಮತ್ತು ಯುಜಿಸಿ ಇದನ್ನು ಹೇರುತ್ತಿದೆ ಎನ್ನುವುದು ತಪ್ಪಾಗುತ್ತದೆ. ನಮ್ಮ ವಿಶ್ವವಿದ್ಯಾನಿಲಯದಲ್ಲಿ CBCS ಅನ್ವಯಿಸಿ ಹೊಸ ಕೋರ್ಸುಗಳನ್ನು ಸೂಕ್ತ ವೇದಿಕೆಯಲ್ಲಿ ಅಂಗೀಕರಿಸಲಾಗಿದೆ.

 ಸಚಿವಾಲಯದ ಮಟ್ಟದಲ್ಲಿ ಆಗಿರುವ ಮತ್ತೊಂದು ನಿರ್ಧಾರದ ಪ್ರಕಾರ ವಿಶ್ವವಿದ್ಯಾನಿಲಯಗಳು ದ್ವಿತೀಯ ಪಾಳಿ ಮಾಡಲು ಅವಕಾಶ ಕೊಡಬೇಕಿದೆ. ನೀವು ಹೆಚ್ಚು ಅಧ್ಯಾಪಕರನ್ನು ನೇಮಿಸಿಕೊಳ್ಳುವಿರಾ ಅಥವಾ ಈಗಿನ ಅಧ್ಯಾಪಕರಿಗೆ ದ್ವಿಪಾಳಿ ಕೊಡುವಿರಾ?
-ಇದನ್ನೂ ಸಹ ಉಪಕುಲಪತಿಗಳ ಸಮ್ಮೇಳನದಲ್ಲಿಯೇ ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಒಟ್ಟು ನೋಂದಣಿ ಅನುಪಾತವನ್ನು ಸುಧಾರಿಸಲು ತರಲಾಗಿದೆ. ಇದನ್ನು ಹೇಗೆ ಮಾಡಬೇಕು ಎಂದು ವಿವರಗಳನ್ನು ನಿರ್ಧರಿಸಿಲ್ಲ. ಆದರೆ, ನಮ್ಮಲ್ಲಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳು ವೌಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಜೆ ಸಮಯದಲ್ಲಿ ಈಗಿನ ಸಿಬ್ಬಂದಿಯಿಂದಲೇ ನಡೆಸಲಾಗುತ್ತಿದ್ದು, ಅದಕ್ಕಾಗಿ ಅವರಿಗೆ ಸ್ವಲ್ಪ ಗೌರವಧನ ಕೊಡಲಾಗುತ್ತಿದೆ.

Writer - ತಲತ್ ಅಹ್ಮದ್

contributor

Editor - ತಲತ್ ಅಹ್ಮದ್

contributor

Similar News