ಕೊಳಗೇರಿಯಲ್ಲೊಂದು ಗ್ರಂಥಾಲಯ: 9 ವರ್ಷದ ಮುಸ್ಕಾನ್ ಅಹಿರ್ವಾರ್ ಗ್ರಂಥಪಾಲಕಿ

Update: 2016-03-14 05:11 GMT

ಭೋಪಾಲ್, ಮಾ.14: ಇಲ್ಲಿನ ದುರ್ಗಾನಗರದ ಕೊಳೆಗೇರಿಯಲ್ಲಿ ಪ್ರತೀ ಸಂಜೆ ಮುಸ್ಕಾನ್ ಆಹಿರ್ವಾರ್‌ಳ ಮಣ್ಣಿನಲ್ಲಿ ಕಟ್ಟಿದ ಜೋಪಡಿಯ ಹೊರಗಿನ ಅಂಗಳ ಗ್ರಂಥಾಲಯವಾಗಿ ಬದಲಾಗುತ್ತದೆ. 9 ವರ್ಷದ ಬಾಲಕಿ ಗ್ರಂಥಪಾಲಕಿಯಾಗುತ್ತಾಳೆ. ಇದೇನು ಆಟವಲ್ಲ. ಇತರ ಮನೆಗಳಿಂದ ಮಕ್ಕಳು ಇಲ್ಲಿಗೆ ಓದಲೆಂದೇ ಬರುತ್ತಾರೆ. ಪ್ರತೀ ಸಂಜೆ ಆಕೆ ಗ್ರಂಥಾಲಯವನ್ನು ಸಿದ್ಧಪಡಿಸುವುದನ್ನೇ ಮಕ್ಕಳು ಆಸೆಯಿಂದ ಕಾಯುತ್ತಿರುತ್ತಾರೆ.

ಇದೆಲ್ಲಾ ಆರಂಭವಾಗಿದ್ದು ಕಳೆದ ಜನವರಿಯಲ್ಲಿ ಮುಸ್ಕಾನ್ ವಾಸಿಸುವ ಕೊಳೆಗೇರಿಯ ಬಳಿಯ ಅರೆರಾ ಹಿಲ್ಸ್‌ನಲ್ಲಿ ಕಚೇರಿ ಹೊಂದಿರುವ ರಾಜ್ಯ ಶಿಕ್ಷಣ ಕೇಂದ್ರದ ಸರ್ಕಾರಿ ಅಧಿಕಾರಿಗಳು ಹೊಸ ವರ್ಷವನ್ನು ಕೊಳೆಗೇರಿ ಮಕ್ಕಳ ಜೊತೆಗೆ ಆಚರಿಸಲು ನಿಶ್ಚಯಿಸಿದ ನಂತರ. ಆ ಸಂಭ್ರಮಾಚರಣೆಯ ಅಂಗವಾಗಿ ಅವರು ಕೆಲವು ಪುಸ್ತಕಗಳನ್ನು ಮಕ್ಕಳಿಗೆ ಹಂಚಿದರು.

ಮುಸ್ಕಾನ್ ಮತ್ತು ಆಕೆಯ ಸ್ನೇಹಿತರಿಗೆ ಓದುವ ಹವ್ಯಾಸವಿರುವುದನ್ನು ಕಂಡು ಅವರಿಗೆ ಇನ್ನೂ ಅಚ್ಚರಿಯಾಯಿತು. ಆಗಲೇ ಮುಸ್ಕಾನ್ ಕೊಳೆಗೇರಿಯ ಮಕ್ಕಳಿಗಾಗಿ ಗ್ರಂಥಾಲಯ ಸಿದ್ಧಪಡಿಸುವ ಕೆಲಸವನ್ನು ಹೊತ್ತುಕೊಂಡದ್ದು. ಆಕೆಯ ಮನೆಯಲ್ಲಿ ಜನವರಿ 26ರಂದು ಗ್ರಂಥಾಲಯ ಉದ್ಘಾಟನೆಯಾದಾಗ 200 ಪುಸ್ತಕಗಳಿದ್ದವು. ಆರಂಭದಲ್ಲಿ ಕೆಲವೇ ಮಕ್ಕಳು ಈ ಗ್ರಂಥಾಲಯಕ್ಕೆ ಆಗಮಿಸುತ್ತಿದ್ದರೂ, ನಿಧಾನವಾಗಿ ಇದು ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ. ಈಗ ಪ್ರತೀ ಸಂಜೆ ಮಕ್ಕಳು ಓದುವ ಉತ್ಸಾಹದಲ್ಲಿ ಮುಸ್ಕಾನ್ ಶಾಲೆಯಿಂದ ಬಂದು ಗ್ರಂಥಾಲಯ ತೆರೆಯುವುದನ್ನೇ ಕಾಯುತ್ತಿರುತ್ತಾರೆ.


ಮುಸ್ಕಾನ್ ಗ್ರಂಥಾಲಯಕ್ಕೆ ಇಷ್ಟೊಂದು ಯಶಸ್ಸು ಸಿಕ್ಕಿರುವುದನ್ನು ಕಂಡ ರಾಜ್ಯದ ಶಿಕ್ಷಣ ಕೇಂದ್ರವು ಈಗ ಭೋಪಾಲ್‌ನ ಇತರ ಕೊಳೆಗೇರಿಗಳಲ್ಲೂ ಈ ವ್ಯವಸ್ಥೆಯನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News