42 ವರ್ಷಗಳ ಬಳಿಕ ಭಾರತೀಯ ತಾಯಿಯನ್ನು ಭೇಟಿಯಾದ ಸ್ವೀಡನ್ ಮಹಿಳೆ

Update: 2016-03-14 08:27 GMT

ಅದೊಂದು ತಾಯಿ-ಮಗಳ ಅತ್ಯಂತ ಭಾವನಾತ್ಮಕ ಪುನರ್ಮಿಲನವಾಗಿತ್ತು. ಇದು 23 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ತನ್ನ ತಾಯಿಯ ಮಡಿಲಿನಿಂದ ಬೇರ್ಪಟ್ಟ ಹಾಗೂ ಇದೀಗ ಸ್ವೀಡನ್ನಿನಲ್ಲಿ ನೆಲೆಸಿರುವ42 ವರ್ಷದ ಎಲಿಸಬೆತ್-ಪೂರ್ವೆ ಜೊರೆಂದಾಲ್ ತಮ್ಮ ತಾಯಿಯನ್ನು ಹುಡುಕಿ ಹೊರಟು 18 ವರ್ಷಗಳ ನಂತರ ಅವರನ್ನು ಭೇಟಿಯಾದಮನೋಜ್ಞ ಕಥೆಯನ್ನು ಬಿಬಿಸಿ ವರದಿ ಮಾಡಿದೆ.

ಎಲಿಜಬೆತ್‌ಳನ್ನು ಸ್ವೀಡನನ್ನಿನ ಕುಟುಂಬವೊಂದು 42 ವರ್ಷಗಳ ಹಿಂದೆ ದತ್ತು ಪಡೆದಿತ್ತು. ‘‘ಆಗ ನನ್ನ ತಾಯಿಗೆ 21 ವರ್ಷ ವಯಸ್ಸು, ರೈತನೊಬ್ಬನನ್ನು ಆಕೆ ವಿವಾಹವಾಗಿದ್ದಳು. ಮೂರು ವರ್ಷ ಅವರು ಜತೆಗಿದ್ದರು. ಕೊನೆಗೊಂದು ದಿನ ನನ್ನ ತಂದೆ ಯಾರೊಡನೆಯೋ ಜಗಳವಾಡಿ ಮನೆಗೆ ಬಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ, ಆಗ ತವರು ಮನೆಗೆ ಹಿಂದಿರುಗಿದ ನನ್ನ ತಾಯಿ ಗರ್ಭಿಣಿಯಾಗಿದ್ದರು. ಅವರ ಹೆತ್ತವರು ಅವರನ್ನು ಅನಾಥಾಶ್ರಮಕ್ಕೆ ಸೇರಿಸಿದಾಗ ಅಲ್ಲಿ ನಾನುಜನಿಸಿದೆನು,’’ಎಂದು ಎಲಿಜಬೆತ್ ಹೇಳಿದರು.
ಕೆಲವು ತಿಂಗಳ ನಂತರ ಆ ಮಗುವನ್ನು ಸ್ವೀಡನ್ನಿನ ದಂಪತಿಗಳು ದತ್ತು ತೆಗೆದುಕೊಂಡರು. ಸ್ವೀಡನ್ನಿನಲ್ಲಿಯೇ ಓದಿ ದೊಡ್ಡವಳಾದ ಎಲಜಬೆತ್‌ಗೆ ಯಾವಾಗಲೂ ತನ್ನ ಹೆತ್ತತಾಯಿಯನ್ನು ನೋಡುವ ಹೆಬ್ಬಯಕೆಯಿತ್ತು. ಆಕೆಯ ಬಳಿಯಿದ್ದಿದ್ದು ದತ್ತು ಪತ್ರದಲ್ಲಿದ್ದ ಆಕೆಯ ತಾಯಿ ಹಾಗೂ ತಾತನ ಹೆಸರುಗಳು ಮಾತ್ರ. ಅದನ್ನು ಮುಂದಿಟ್ಟುಕೊಂಡು ತಾಯಿಯನ್ನು ಹುಡುಕುವ ಪ್ರಯತ್ನಕ್ಕೆ 1998ರಲ್ಲಿ ಮೊದಲು ಕೈ ಹಾಕಿದರು ಎಲಿಜಬೆತ್. 2014ರಲ್ಲಿ ಆಕೆ ಬೆಲ್ಜಿಯಂ ಮೂಲದ ಎಗೇನ್ಸ್ಟ್ ಚೈಲ್ಡ್ ಟ್ರಾಫಿಕ್ಕಿಂಗ್ ಸಂಸ್ಥೆಗೆ ಮೊರೆಯಿಟ್ಟ ಪರಿಣಾಮ ಈ ಸಂಸ್ಥೆ ಆಕೆಯ ತಾಯಿ ಮಹಾರಾಷ್ಟ್ರದಲ್ಲಿದ್ದಾರೆಂದು ಪತ್ತೆ ಹಚ್ಚಿತು. ತಡ ಮಾಡದೆ ಎಲಿಜಬೆತ್ ಭಾರತಕ್ಕೆ ಹೊರಟು ನಿಂತರು. ಮಹಾರಾಷ್ಟ್ರದಲ್ಲಿದ್ದ ಆಕೆಯ ತಾಯಿಗೆ ಎರಡನೇ ಮದುವೆಯಾಗಿ ಆಕೆಗೆ ಒಬ್ಬ ಪುತ್ರ ಹಾಗೂ ಪುತ್ರಿಯಿದ್ದರು. ತನ್ನ ಎರಡನೇ ಪತಿಗೆ ತನ್ನ ಮೊದಲನೇ ವಿವಾಹದ ಬಗ್ಗೆ ಆಕೆ ಹೇಳಿರಲಿಲ್ಲ. ಆತ ಕಳೆದ ವರ್ಷ ತೀರಿಕೊಂಡಿದ್ದರೆ, ಆಕೆಯ ತಾಯಿ ತನ್ನ ಮಗ ಹಾಗೂ ಸೊಸೆಯೊಂದಿಗಿದ್ದರು. ಸಾಮಾಜಿಕ ಕಾರ್ಯಕರ್ತೆಯರ ಮುಖಾಂತರ ಎಲಿಜಬೆತ್ ತಾಯಿಯನ್ನು ಭೇಟಿಯಾದಾಗ ಆದ ಆನಂದ ಅವ್ಯಕ್ತ. ಆದರೆ ಆಕೆಯನ್ನುತಾಯಿಯ ಸಹೋದರನ ಸಂಬಂಧಿಯೆಂದು ಪರಿಚಯಿಸಲಾಯಿತು.
ಅಲ್ಲಿಂದ ಆಕೆ ತನ್ನ ತಾಯಿಯೊಂದಿಗೆ ಬಿಚ್ಚು ಮನಸ್ಸಿನಿಂದ ಮಾತನಾಡಲು ಆಕೆಯನ್ನು ಹೊಟೇಲೊಂದಕ್ಕೆ ಕರೆದೊಯ್ದರು. ತಾಯಿ ಮಗಳಿಬ್ಬರು ಹೀಗೆ ಎರಡು ದಿನಗಳ ಕಾಲ ಸಂತಸದಿಂದ ಕಷ್ಟ ಸುಖ ಹಂಚಿಕೊಂಡರು, ಎಲಿಜಬೆತ್‌ಗೆ ತಾಯಿಯನ್ನು ಬಿಟ್ಟು ಹೊರಡುವ ಮನಸ್ಸೇ ಇರಲಿಲ್ಲ. ಆಕೆಯ ಕಣ್ಣಂಚಿನಲ್ಲಿ ನೀರಿತ್ತು. ತಾನು ತಾಯಿಯ ಪಡಿಯಚ್ಚು ಮಾತ್ರವಲ್ಲ ತಮ್ಮಿಬ್ಬರ ಹಾವಭಾವ ಕೂಡ ಒಂದೇ ರೀತಿಯಾಗಿತ್ತು ಎಂಬುದು ಆಕೆಗೆತಿಳಿದಿತ್ತು.
ತಾಯಿಯಿಂದ ದೂರವಿರಲು ಸಾಧ್ಯವೇ ಇಲ್ಲವೆನ್ನುವಷ್ಟು ಎಲಿಜಬೆತ್ ಮಾತೃ ವಾತ್ಸಲ್ಯದ ಅಲೆಯಲ್ಲಿ ಕೊಚ್ಚಿ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News