ಮಾರ್ಚ್ 15: ಇಂದು ವಿಶ್ವಗ್ರಾಹಕರ ದಿನ

Update: 2016-03-14 16:41 GMT

ಅಮೆರಿಕದ ಸೆನೆಟ್‌ನಲ್ಲಿ ಐವತ್ತಾರು ವರ್ಷಗಳ ಹಿಂದೆ, ಜಾನ್ ಎಫ್.ಕೆನಡಿಯವರ ಗ್ರಾಹಕ ಹಕ್ಕುಗಳನ್ನು ಘೋಷಿಸಿ ಸ್ಥಾಪಿಸಿಕೊಟ್ಟ ದಿನ ಮಾರ್ಚ್ 15. ವಿಶ್ವಸಂಸ್ಥೆ ಅಂಗೀಕಾರ ನೀಡಿ, ಇಂದು ವಿಶ್ವದ 200ಕ್ಕಿಂತ ಹೆಚ್ಚು ದೇಶಗಳು ತಮ್ಮ ದೇಶದ ಕಾನೂನುಗಳಾಗಿ ಈ ಹಕ್ಕುಗಳನ್ನು ಘೋಷಿಸಿದೆ. ನಮ್ಮ ದೇಶದಲ್ಲೂ 1986ರ ಗ್ರಾಹಕ ಸಂರಕ್ಷಣೆ ಕಾಯ್ದೆಯಾಗಿ ಜಾರಿಯಾಗಿದೆ. ಜನಸಾಮಾನ್ಯರಿಗೆ ಪೂರಕವಾದ ಹಕ್ಕುಗಳ ರಕ್ಷಣೆ ಸಿಗುವಂತೆ 2002ರಲ್ಲಿ ತಿದ್ದುಪಡಿಯೂ ಆಗಿದೆ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮಾತ್ರವಲ್ಲದೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಜನರ ಹಕ್ಕುಗಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಗ್ರಾಹಕ ಹಕ್ಕುಗಳಿಗೆ ಪೂರಕವಾಗಿಯೇ, ಮಾಹಿತಿ ಹಕ್ಕು ಕಾಯ್ದೆ, ಸಕಾಲ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆಗಳು ಜನಸಾಮಾನ್ಯರ ಹಿತರಕ್ಷಣೆಗೆ ನೆರವಾಗುತ್ತದೆ.

 ಈ ಎಲ್ಲಾ ಕಾಯ್ದೆಗಳು, ವ್ಯವಸ್ಥೆಗಳು ಜಾರಿಯಲ್ಲಿದ್ದರೂ ಜನಸಾಮಾನ್ಯರು ಅದನ್ನು ಬಳಸಲು ಹಿಂಜರಿಯುತ್ತಿರುವುದು, ಜನಪ್ರತಿನಿಧಿಗಳು ಬೆಂಬಲಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ‘ಹಕ್ಕುಗಳಿವೆ, ರಕ್ಷಣೆ ಇದೆ’ ಎಂದು ಜನಸಾಮಾನ್ಯರಿಗೆ ಇನ್ನೂ ತಿಳಿದಂತಿಲ್ಲ. ಕಾಯ್ದೆ ಬಂದು ಮೂವತ್ತು ವರ್ಷಗಳಾದರೂ ಹಳ್ಳಿಯ ಜನರ ಶೋಷಣೆ ನಿಲ್ಲಲಿಲ್ಲ. ಇದೊಂದು ಸಾಮಾಜಿಕ ಸುರಕ್ಷೆಯ ಕಾಯ್ದೆ ಆಗಿದ್ದರೂ, ಜಿಲ್ಲಾಡಳಿತ ನಗರಪಾಲಿಕೆ, ಪುರಸಭೆ ಪಂಚಾಯತುಗಳಾಗಲೀ ಗಮನಹರಿಸಿದಂತಿಲ್ಲ. ಪ್ರತೀ ಜಿಲ್ಲೆಯಲ್ಲೂ ಗ್ರಾಹಕ ನ್ಯಾಯಾಲಯಗಳಿವೆ. ದೂರು ನೀಡಿ ನ್ಯಾಯ ಪರಿಹಾರ ಪಡೆಯಬಹುದು ಎಂಬುದನ್ನು ಜನರಿಗೆ ತಿಳಿಸುವವರಿಲ್ಲ. ಜನಸಾಮಾನ್ಯರ ನಿತ್ಯ ಜೀವನದಲ್ಲಿ ನಡೆಯುವ ಶೋಷಣೆ ನಿಲ್ಲಬೇಕೆಂಬ ಆಶಯ ರಾಜಕಾರಣಿಗಳಿಗಿಲ್ಲ. ಭ್ರಷ್ಟಾಚಾರ ಹೇಗೆ ತಡೆಗೋಡೆ ಇಲ್ಲದೆ ಹರಿದು ಹೋಗುತ್ತಿದೆಯೋ ಹಾಗೆಯೇ ಜನರ ಶೋಷಣೆಯೂ ನಡೆಯುತ್ತಿದೆ. ಜನಸಾಮಾನ್ಯರೆಲ್ಲರೂ ಗ್ರಾಹಕರೇ. ಪುಟ್ಟ ಮಗುವಾಗಲಿ, ಮಹಿಳೆಯಾಗಲಿ, ವಯೋವೃದ್ಧರಾಗಲಿ, ನಮ್ಮ ದೇಶದ ನಾಗರಿಕರು ಅವರ ರಕ್ಷಣೆ ಸರಕಾರದ ಹೊಣೆ ಮಾತ್ರವಲ್ಲ, ಸಮುದಾಯದ ಹೊಣೆಯೂ ಆಗಿದೆ. ಗ್ರಾಹಕ ಜಾಗೃತಿ ಮೂಡಿಸಿದಾಗಲೇ ಜನರ ರಕ್ಷಣೆಯ ಅರಿವಾಗುತ್ತದೆ. ಗ್ರಾಹಕರಿಗಾಗಿ ಸರಕಾರ ಹಣ ವ್ಯಯಿಸುತ್ತದೆ. ಗ್ರಾಹಕ ಇಲಾಖೆಯೇ ಇದೆ. ಮಂತ್ರಿಗಳೂ ಇದ್ದಾರೆ. ಗ್ರಾಹಕ ರಕ್ಷಣಾ ಪರಿಷತ್ತುಗಳು ರಾಜ್ಯದಲ್ಲೂ, ಜಿಲ್ಲೆಗಳಲ್ಲೂ ಇವೆ. ಪ್ರತಿ ಜಿಲ್ಲೆಯಲ್ಲೂ ಮಾಹಿತಿ ಕೇಂದ್ರಗಳಿವೆ. ಶಾಲಾ ಕಾಲೇಜುಗಳಲ್ಲಿ ಸರಕಾರದ ನೆರವು ಪಡೆವ ಗ್ರಾಹಕ ಕ್ಲಬ್‌ಗಳೂ ಇವೆ. ಇವುಗಳಿಗೆಲ್ಲಾ ಸರಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಆಹಣ ಹೇಗೆ ವ್ಯಯಿಸಲ್ಪಡುತ್ತದೆ ಎಂಬುದನ್ನು ಕೇಳುವವರೇ ಇಲ್ಲ. ಗ್ರಾಹಕ ದಿನಾಚರಣೆ ಮಾಡಿದ ವರದಿ ಕಾಣಿಸಿಕೊಳ್ಳಬಹುದು. ಆದರೆ, ಅದರಿಂದ ಯಾರು ಫಲಾನುಭವಿಗಳಾಗಿದ್ದಾರೆ ಎಂಬುದು ನಿಗೂಢ ವಾಗಿರುತ್ತದೆ. ಸಾಮಾನ್ಯ ಗ್ರಾಹಕರ ಶೋಷಣೆ ನಿವಾರಣೆಯಾಗಿದೆಯೇ? ವಿವರ ಇಲ್ಲ.

 ದಿನನಿತ್ಯ ವ್ಯಾಪಾರಿಗಳು ಮಾಡುತ್ತಿರುವ ಶೋಷಣೆಯ ಕುರಿತು ತಿಳಿದರೂ ಚಕಾರವೆತ್ತುವುದಿಲ್ಲ. ಮುದ್ರಿತ ಬೆಲೆಗಿಂತ ಹೆಚ್ಚಿಗೆ ಮಾರುವುದು ಅಪರಾಧ. ಮಂಗಳೂರು ನಗರದಲ್ಲಿ ಹಲವಾರು ಮಾಲುಗಳೂ, ಮಾರ್ಕೆಟ್‌ಗಳೂ ಇವೆ. ಚೀನಾ ನಿರ್ಮಿತ ವಸ್ತುಗಳ ಮಾರಾಟ ಆಗುತ್ತಿವೆ. ಮುದ್ರಿತ ಬೆಲೆ ಇದ್ದರೂ ಬೆಲೆ ದುಬಾರಿ. ಉದಾಹರಣೆಗೆ ಸೊಳ್ಳೆ ಬ್ಯಾಟುಗಳು. ಅವುಗಳ ಪ್ಲಾಸ್ಟಿಕ್ ಹೊದಿಕೆಯಲ್ಲಿ ರೂ.35 ಎಂಆರ್‌ಪಿ ಎಂದು ಸ್ಪಷ್ಟ ಮುದ್ರಿಸಲಾಗಿದೆ. ಮಾರುವ ಬೆಲೆ ರೂ.150 ಈ ರೀತಿ ಮೊಬೈಲ್, ಪೆನ್‌ಡ್ರೈವ್‌ಗಳು ಮುಂತಾದ ಹಲವಾರು ವಸ್ತುಗಳು ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಗ್ರಾಹಕ ಕಾಯ್ದೆಯಲ್ಲಿ ಇದು ಅಪರಾಧ. ಗ್ರಾಹಕ ಇಲಾಖೆಗಿದು ಗೊತ್ತಿಲ್ಲವೇ? ಮಾನಮಾಪಕ ಇಲಾಖೆ ನಿದ್ರಿಸುತ್ತಿದೆಯೇ? ಗ್ರಾಹಕರು ಎಚ್ಚೆತ್ತುಕೊಳ್ಳಬೇಕಾಗಿದೆ.

 ಸ್ವಚ್ಛಭಾರತ ಆಂದೋಲನ ದೇಶವ್ಯಾಪಿಯಾಗಿ ಹಬ್ಬಿದೆ. ಬಯಲು ಮಾಲಿನ್ಯ ತಡೆಗೆ ಬಹಳಷ್ಟು ಪ್ರಚಾರ ಇದೆ. ಕ್ಲೀನ್ ಸಿಟಿ ಮತ್ತು ಗ್ರೀನ್ ಸಿಟಿ ನಮ್ಮ ನಗರಪಾಲಿಕೆಯ ಧ್ಯೇಯ. ಫಲಕಗಳು ರಾರಾಜಿಸುತ್ತಿವೆ. ಕಸದ ತೊಟ್ಟಿಗಳು ಮಾಯವಾಗಿವೆ. ಕಸಹೊರುವ ಲಾರಿಗಳು ದಿನಕ್ಕೊಮ್ಮೆ ಕಸ ಕೊಂಡೊಯ್ಯುತ್ತಿವೆ. ಮಧ್ಯಾವಧಿಯಲ್ಲಿ ತುಂಬಿಸಿಟ್ಟ ಕಸದ ಹೊಲಸು ಚೀಲಗಳನ್ನು ನಾಯಿಗಳೂ ಎಳೆದೊಯ್ಯುವ ದೃಶ್ಯಗಳು ಸಾಮಾನ್ಯ. ಸ್ವಚ್ಛವಾಗಿರಿಸಲು ಜನರ ಸಹಕಾರ ಬೇಕು ನಿಜ. ಅಂತಹ ವ್ಯವಸ್ಥೆ ಇರಬೇಕಲ್ಲವೇ? ನಾಗರಿಕರೆನಿಸಿದ ಜನರೇ ರಸ್ತೆ ಬದಿಗಳಲ್ಲಿ ನಿಂತು ಮೂತ್ರ ಮಾಡುವ ದೃಶ್ಯ ಸ್ವಚ್ಛ ನಗರಕ್ಕೆ ನೀಡುವ ಕೊಡುಗೆಯೇ? ಜನಪ್ರತಿನಿಧಿಗಳಿಗಿದು ಕಾಣಿಸುತ್ತಿಲ್ಲವೇ?

ಕಾರ್ಪೊರೇಟರ್‌ಗಳು ತಮ್ಮ ತಮ್ಮ ವಾರ್ಡುಗಳಿಗೊಂದು ಸುತ್ತು ಅಲೆದಾಡಿ ನೋಡಬೇಕು ಕನಿಷ್ಠ ತಿಂಗಳಿಗೊಮ್ಮೆಯಾದರೂ. ವರ್ಷಕ್ಕೊಮ್ಮೆ ವನಮಹೋತ್ಸವ ಆಚರಿಸಿ, ರಸ್ತೆ ಬದಿಗಳಲ್ಲಿ ಗಿಡನೆಟ್ಟು ಸಂಭ್ರಮಿಸುತ್ತೇವೆ. ಚುನಾವಣೆ ನಂತರ ಯಾವತ್ತೂ ಮುಖ ತೋರಿಸದ ಶಾಸಕರೂ ಇಂತಹ ಸಂಭ್ರಮಕ್ಕೆ ಬರುತ್ತಾರೆ. ಅವುಗಳು ಬೆಳೆದು ಮೇಲೆ ಬರುತ್ತವೆ. ಸಂತೋಷದ ವಿಚಾರವೆ. ನಮ್ಮ ನಗರ ಹಸಿರಾಗುವ ಸಂತೋಷ! ಬೇಸಿಗೆ ಬಂದಾಗ ನಗರಪಾಲಿಕೆಯ ಕಸಗುಡಿಸುವ ಕಾರ್ಮಿಕರು ಅವುಗಳ ಬುಡದಲ್ಲೇ ಕಸ ರಾಶಿ ಹಾಕಿ ಸುಡುತ್ತಾರೆ. ಬೆಳೆದು ಹಸಿರಾದ ಗಿಡಗಳನ್ನು ಕಾರ್ಪೊರೇಟರ್‌ಗಳು ನೋಡಲು ಕೂಡಾ ಬರುವುದಿಲ್ಲ. ಇಂತಹ ಕರುಣಾಜನಕ ದೃಶ್ಯವನ್ನು ನೋಡಲು ಮಂಗಳೂರಿನ ನಂದಿಗುಡ್ಡೆಗೆ ಬನ್ನಿ. ನಾಯಕ್ಸ್ ಕಂಪೆನಿ ಮುಂದಿನ ಅಡ್ಡರಸ್ತೆಗೆ ಬನ್ನಿ. ಎರಡು ಬದಿಗಳಲ್ಲೂ ಸ್ಮಶಾನಗಳಿವೆ. ಮಧ್ಯದ ಈ ರಸ್ತೆಯು ಹಸಿರು ಮರಗಿಡಗಳಿಗೂ ರುದ್ರಭೂಮಿ. ಶಾಸಕರು, ಕಾರ್ಪೊರೇಟರ್‌ಗಳು ಇಲ್ಲಿ ಬಂದು ನೋಡಬೇಕು. ಆನಂದಿಸುವರೋ, ದುಃಖಿಸುವರೋ ಗೊತ್ತಿಲ್ಲ. ಆದರೆ ಅಭಿಮಾನಿ ನಾಗರಿಕರಿಗಿದು ದುಃಖದ ಸಂಗತಿ ‘ಗ್ರೀನ್‌ಸಿಟಿ’ ಹೇಗೆ?

  ನಗರಾದ್ಯಂತ ವಾಹನ ದಟ್ಟಣೆ ಇದೆ. ನೂರಾರು ಬಸ್‌ಸ್ಟಾಪ್‌ಗಳಿವೆ. ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೂಡಾ ಸೂಚನಾ ಫಲಕಗಳಿರುವುದಿಲ್ಲ. ಯಾವ ಬಸ್ ಎಲ್ಲಿಗೆ ಹೋಗುತ್ತಿದೆಯೆಂಬುದನ್ನು ಬಸ್ ನೋಡಿಯೇ ಹೇಳಬೇಕು. ಪ್ರತಿ ಬಸ್ಸಿನಲ್ಲೂ ಮಹಿಳೆಯರಿಗಾಗಿ, ಹಿರಿಯ ನಾಗರಿಕರಿಗೆ, ಅಂಗ ವಿಕಲರಿಗೆ ಪ್ರತ್ಯೇಕ ಸೀಟುಗಳಿವೆ. ಮಹಿಳಾ ಸೀಟ್‌ನಲ್ಲಿ ಪುರುಷರು ಕುಳಿತರೆ, ನಿರ್ವಾಹಕರು ಮಾತೆತ್ತುವುದಿಲ್ಲ. ಮಹಿಳಾ ಸೀಟು ಖಾಲಿ ಇದ್ದರೂ ಪುರುಷರ ಸೀಟಿನಲ್ಲಿ ಕುಳಿತುಕೊಳ್ಳುವ ಮಹಿಳೆಯರಿದ್ದಾರೆ. ಇದು ವ್ಯವಸ್ಥೆಯೋ, ಅವ್ಯವಸ್ಥೆಯೋ ಗೊತ್ತಿಲ್ಲ. ಹಿರಿಯ ನಾಗರಿಕರ ಸೀಟಿನಲ್ಲಿ ಯುವಕರೇ ಇರುತ್ತಾರೆ. ಜೋತು ಬೀಳುವ ಹಿರಿಯರಿದ್ದರೂ, ಸೀಟು ಬಿಟ್ಟು ಕೊಡುವ ಕನಿಷ್ಠ ಸೌಜನ್ಯ ಆ ಯುವಕರಿಗಿರುವುದಿಲ್ಲ.ಇದು ನಮ್ಮ ಭಾರತೀಯತೆ! ನಿರ್ವಾಹಕರಿಗಂತೂ ಅಂತಹ ಚಿಂತೆಯೇ ಇರುವುದಿಲ್ಲ. ನಿಯಂತ್ರಿಸಬೇಕಾದ ಸಾರಿಗೆ ಇಲಾಖೆ ವೌನವಾಗಿರುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಇವೆಲ್ಲವೂ ಬರುತ್ತದೆ.

 ರೋಗಿಗಳ ಸುರಕ್ಷೆ ಬಹು ಮುಖ್ಯ ವಿಚಾರ. ವೈದ್ಯಕೀಯ ಶಿಕ್ಷಣ ವ್ಯಾಪಾರೀಕರಣವಾದ ನಂತರ ಆಸ್ಪತ್ರೆಗಳು ಸುರಕ್ಷಿತ ಆರೋಗ್ಯ ಕೇಂದ್ರಗಳಾಗಿ ಉಳಿದಿಲ್ಲ. ಸಾಮಾನ್ಯ ಜ್ವರಕ್ಕೆ ವೈದ್ಯರ ಬಳಿ ಹೋಗಲು ಕೂಡಾ ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ದುಬಾರಿ ಯಂತ್ರಗಳಿವೆ. ಯಾವ ರೋಗಿ ಬರುತ್ತಾರೋ ಕಾದಿರುವ ಸ್ಥಿತಿ ಇರುತ್ತದೆ. ಚಿಕ್ಕಪುಟ್ಟ ಕಾಯಿಲೆಗಳಿಗೂ ದುಬಾರಿ ಪರೀಕ್ಷೆಗಳು, ದುಬಾರಿ ದರ, ಚಿಕಿತ್ಸೆಯೂ ದುಬಾರಿ. ಹಾಗಾಗಿ ರೋಗಿಗೆ ಮಾನಸಿಕ ಭಯ ಉಂಟಾಗುತ್ತದೆ. ಹಿಂದಿನ ಕಾಲದಲ್ಲಿ ಪೊಲೀಸರೆಂದರೆ ಭಯಪಡುತ್ತಿದ್ದರಂತೆ. ಈಗ ಹಾಗಿಲ್ಲ. ಆಸ್ಪತೆಯೆಂದರೆ, ವೈದ್ಯರೆಂದರೆ ಭಯ. ಹೆಣವನ್ನು ಐಸಿಯುನಲ್ಲಿರಿಸಿ ಹಣ ವಸೂಲು ಮಾಡುವ ಆಸ್ಪತ್ರೆಗಳಿವೆಯಂತೆ. ಅದಕ್ಕಾಗಿಯೇ ಐಸಿಯುಗೆ ರೋಗಿಗಳ ಸಮೀಪ ಬಂಧುಗಳಿಗೂ ಪ್ರವೇಶ ನಿರ್ಬಂಧ ಇರಬಹುದೇ? ಗ್ರಾಹಕರು ನಿದ್ರಾವಸ್ಥೆಯಿಂದ ಎಚ್ಚರಗೊಳ್ಳದಿದ್ದರೆ, ಬಲಿಪಶುಗಳಾಗುವುದು ತಪ್ಪುವುದಿಲ್ಲ. ಆದುದರಿಂದ ಎದ್ದೇಳಿ ಗ್ರಾಹಕರೇ, ಗ್ರಾಹಕ ಹಕ್ಕುಗಳ ರಕ್ಷಣೆಗಾಗಿ ನಿಮ್ಮ ಹಕ್ಕುಗಳ ಸದ್ಬಳಕೆಗಾಗಿ, ನಿಮ್ಮ ಜನಪ್ರತಿ ನಿಧಿಗಳನ್ನು ಒತ್ತಾಯಿಸಿ ನೀವು ಸುರಕ್ಷಿತವಾಗಿ ಬದುಕಬೇಕಲ್ಲವೇ? ಶೋಷಣೆ ಮುಕ್ತ ಸಮಾಜಬೇಕಲ್ಲವೇ? ವಿಶ್ವಗ್ರಾಹಕ ದಿನವಾದ ಇಂದು ನೆನಪಿಸಬೇಕಾದ ವಿಚಾರ ಇದು.

Writer - ಪ್ರೊ. ಬಿ.ಎಂ. ಇಚ್ಲಂಗೋಡು

contributor

Editor - ಪ್ರೊ. ಬಿ.ಎಂ. ಇಚ್ಲಂಗೋಡು

contributor

Similar News