ಶೋಷಿತರಿಗೆ ಅವಕಾಶ ಸೃಷ್ಸಿಟಿಸಿದ ರಾಜಕೀಯ ವಿಜ್ಞಾನಿ ಕಾನ್ಸೀರಾಂ
ವಿಜ್ಞಾನಿ ಅಥವಾ ವಿಜ್ಞಾನ ಎಂದರೆ ಅಲ್ಲಿ ಮೂಡಿಬರುವುದೇ ಫಲಿತಾಂಶ ನೀಡುವ ನೂತನ ಫಾರ್ಮುಲಾಗಳು(ಸೂತ್ರಗಳು). ಹಾಗೆಯೇ ಆ ಫಾರ್ಮುಲಾಗಳ ಮೂಲಕ ಹೊಸತನ್ನು ಸೃಷ್ಟಿಸುವ ಆ ವಿಜ್ಞಾನಿಯ ಸಂಶೋಧನೆ. ಭಾರತದ ಮಟ್ಟಿಗೆ ಹೀಗೆ ರಾಜಕೀಯದಲ್ಲಿ ವಿಜ್ಞಾನ ಬೆರೆಸಿ ಪ್ರಯೋಗ ಮಾಡಿ ಹೊಸ ಫಾರ್ಮುಲಾ ಸೃಷ್ಟಿಸಿ ಪ್ರಯೋಗಿಸಿ ಭಾರತದ ರಾಜಕಾರಣದ ದಿಕ್ಕನ್ನೇ ಬದಲಿಸಿದ ಕೀರ್ತಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ, ಡಿಆರ್‌ಡಿಓದ ಮಾಜಿ ವಿಜ್ಞಾನಿ ಕಾನ್ಷೀರಾಮರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಕಾನ್ಷೀರಾಂ ಭಾರತದ ರಾಜಕಾರಣದ ಗತಿ ಬದಲಿಸಿದ ನೈಜ ವಿಜ್ಞಾನಿಯಾಗುತ್ತಾರೆ, ಶೋಷಿತರಿಗಾಗಿ ಹೊಸ ಬಗೆಯ ರಾಜಕೀಯ ಪ್ರಯೋಗ ನಡೆಸಿ ಗೆದ್ದ ಅಪ್ರತಿಮ ರಾಜನೀತಿಜ್ಞರಾಗುತ್ತಾರೆ. ಹಾಗಿದ್ದರೆ ಇದು ಎಂಥ ನೀತಿ? ಎಂಥ ವಿಜ್ಞಾನ? ರಸಾಯನಶಾಸ್ತ್ರದ ಸಮೀಕರಣವೊಂದನ್ನೆ ಇಲ್ಲಿ ಉದಾಹರಣೆಯಾಗಿ ಹೇಳುವುದಾದರೆ ಜಲಜನಕ(ಏ)ದ 2 ಪರಮಾಣುಗಳು ಗಂಧಕ(ಖ)ದ 1 ಪರಮಾಣು ಮತ್ತು ಆಮ್ಲಜನಕ()ದ 4 ಪರಮಾಣು ಸೇರಿದರೆ ಏ2ಖ4 (ಗಂಧಕಾಮ್ಲ) ಉಂಟಾಗುತ್ತದೆ. ಹೀಗೆಯೇ ಬಹುಜನ ಸಮಾಜ ಪಕ್ಷದ ತಮ್ಮ ಬಹುಜನ ಸಮೀಕರಣದ ಬಗ್ಗೆ ಕಾನ್ಷೀರಾಮ್‌ರವರು ಹೇಳುವುದೇನೆಂದರೆ ಬಹುಜನರೆಂದರೆ ಶೇ.15 ಇರುವ ಪರಿಶಿಷ್ಟಜಾತಿ, ಶೇ.7.5 ಇರುವ ಪರಿಶಿಷ್ಟ ವರ್ಗ, ಶೇ. 52.5 ಇರುವ ಹಿಂದುಳಿದ ವರ್ಗ ಮತ್ತು ಶೇ.10.5 ಇರುವ ಧಾರ್ಮಿಕ ಅಲ್ಪಸಂಖ್ಯಾತರು. ಒಟ್ಟಾರೆ (15+7.5+52+10.5)= ಶೇ. 85 ಜನರು ಬಹುಜನರು. ಇನ್ನುಳಿದ ಶೇ.15 ಜನರು (ಬ್ರಾಹ್ಮಣ ಶೇ.3.5+ ಕ್ಷತ್ರಿಯ ಶೇ.5.5+ ಶೇ.ವೈಶ್ಯ6) ಮನುವಾದಿಗಳು. ಆ ಕಾರಣದಿಂದ ಬೇರೆ ಎಲ್ಲ ಪಕ್ಷಗಳು ಶೇ.15 ಮನುವಾದಿಗಳು ಕೈಯಲ್ಲಿದ್ದು ಬ್ರಾಹ್ಮಣೀಕೃತ ಸಾಮಾಜಿಕ ಶ್ರೇಣೀಕರಣ ಉಳಿಸಿಕೊಳ್ಳುವ ಯಥಾಸ್ಥಿತಿವಾದ ಕಾಪಾಡುವ ಪಕ್ಷಗಳಾಗಿವೆ. ಬಹುಜನ ಸಮಾಜ ಪಕ್ಷ ಮಾತ್ರ ಸಂಪೂರ್ಣ ಸಾಮಾಜಿಕ ಪರಿವರ್ತನೆ ಬಯಸುತ್ತದೆ. ಇದೊಂದು ಸಮಾಜೋ-ಆರ್ಥಿಕ ಚಳವಳಿಯ ಜೊತೆಗೆ ಸಮಗ್ರ ಸಾಂಸ್ಕೃತಿಕ ಕ್ರಾಂತಿ ಬಯಸುವ ಚಳವಳಿ ಕೂಡ ಆಗಿದೆ.ಕಾನ್ಷೀರಾ ಮರ ಈ ವ್ಯಾಖ್ಯೆಯಲ್ಲಿ, ಲೆಕ್ಕಾಚಾರಭರಿತ ಈ ಜಾತಿ ಸಮೀಕರಣದಲ್ಲಿ ದಶಮಾಂಶವಾದರೂ ತಪ್ಪು ಎಲ್ಲಿದೆ? ತಪ್ಪಿರಲಿ, ಎಲ್ಲಕ್ಕೂ ರಸಾಯನಶಾಸ್ತ್ರದಂತೆ ಸ್ಪಷ್ಟ ಪ್ರಮಾಣ ನಿಗದಿಪಡಿಸಲಾಗಿದೆ. ಗೊಂದಲ ಎಂಬ ಮಾತೇ ಇಲ್ಲ! ಕಾನ್ಷೀರಾಮರ ಈ ಜಾತಿಸಮೀಕರಣಕ್ಕೆ ನೀವು ಜಾತಿವಾದಿ ಪಕ್ಷ ಕಟ್ಟುತ್ತಿದ್ದೀರಿ ಎಂಬ ಟೀಕೆಯೂ ವ್ಯಕ್ತವಾಯಿತು. ಅದಕ್ಕೆ ಕಾನ್ಷೀರಾಮರು ಕೊಟ್ಟ ಉತ್ತರ ಬಿಎಸ್‌ಪಿ ಒಂದು ಜಾತಿವಾದಿ ಪಕ್ಷವಲ್ಲ. ನಾವು ಬಹುಜನ ತತ್ವದ ಮೂಲಕ 6,000 ಜಾತಿಗಳನ್ನು ಒಗ್ಗೂಡಿಸುತ್ತಿದ್ದೇವೆ. ಹೀಗಿರುವಾಗ ನಾವು ಜಾತಿವಾದಿ ಆಗಲು ಹೇಗೆ ಸಾಧ್ಯ? ಎಂಬುದಾಗಿತ್ತು. ಅಂದಹಾಗೆ ದೂರದ ಪಂಜಾಬ್‌ನ ರೋಪರ್ ಜಿಲ್ಲೆಯ ಖಾವಸ್‌ಪುರದಲ್ಲಿ ಜನಿಸಿದ ಕಾನ್ಷೀರಾಮ್‌ರವರು (ಜನ್ಮದಿನ ಮಾರ್ಚ್15, 1932) ಅಂಬೇಡ್ಕರರ ಮಾತೃಭೂಮಿ ಮಹಾರಾಷ್ಟ್ರಕ್ಕೆ ಬಂದರು. ಹಾಗಿದ್ದರೆ ಕಾನ್ಷೀರಾಮರು ರಾಜಕೀಯ ಮಾಡಲೆಂದೇ ಮಹಾರಾಷ್ಟ್ರಕ್ಕೆ ಬಂದರೇ? ಖಂಡಿತ ಇಲ್ಲ. ಪುಣೆಯ ಡಿಆರ್‌ಡಿಒದಲ್ಲಿ ಸಹಾಯಕ ವಿಜ್ಞಾನಿಯಾಗಿ ನೇಮಕಗೊಂಡು ಕಾನ್ಷೀರಾಮ್‌ರು ಮಹಾರಾಷ್ಟ್ರಕ್ಕೆ ಬಂದದ್ದು. ಹಾಗೆ ಬಂದವರೆ ಅವರು ಮಹಾರಾಷ್ಟ್ರದ ಪರಿಶಿಷ್ಟರಾದ ಮಹಾರ್ ಮತ್ತು ಮಾಂಗ್‌ರ ಪರಿಸ್ಥಿತಿ ನೋಡಿ ಆತಂಕಗೊಂಡರು ಮತ್ತು ಇಂತಹ ಆತಂಕದ ನಡುವೆಯೇ ಮುಂದೆ ಸೃಷ್ಟಿಯಾದದ್ದು ಇತಿಹಾಸ. ಅಂಬೇಡ್ಕರರು ಸ್ಥಾಪಿಸಿದ್ದ ಆರ್‌ಪಿಐ ಪಕ್ಷದ ಸಂಪರ್ಕಕ್ಕೆ ಬಂದದ್ದು, ಆರ್‌ಪಿಐನವರ ಆಂತರಿಕ ಕಚ್ಚಾಟದಿಂದ ನೊಂದು ಬಾಂಸೆಫ್(BAMCEF=Backward And Minorities Communities Employees Federation) ಸ್ಥಾಪನೆ, ಅದರ ಮೂಲಕ ದೇಶದ ಉದ್ದಗಲಕ್ಕೂ ಲಕ್ಷಾಂತರ ಶೋಷಿತ ನೌಕರರ ಸಂಘಟನೆ, ನೌಕರರಿಗೆ ಸಮಾಜಕ್ಕೆ ವಾಪಸ್ ಕೊಡಿ (Pay Back to Society Programme =PBSP) ಎಂಬ ಕಾರ್ಯಕ್ರಮ, ಮುಂದೆ 1977ರ ಸೆಪ್ಟಂಬರ್ ತಿಂಗಳ ಒಂದು ದಿನ ಕಿವಿಗೆ ಬಿದ್ದ ದಿಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನ ಸಮ್ಮೇಳನವೊಂದರಲ್ಲಿ ಜನತಾದಳದ ರಾಜ್‌ನಾರಾಯಣ್‌ಗೆ ಸಾರ್ವಜನಿಕವಾಗಿ ಮಹಿಳೆಯೊಬ್ಬರು ಧಿಕ್ಕಾರ ಕೂಗಿದ ಸುದ್ದಿ ಮತ್ತು ಹಾಗೆ ಕಣ್ಣಿಗೆ ಬಿದ್ದ ಐಎಎಸ್‌ಗೆ ತಯಾರಿ ನಡೆಸುತ್ತಿದ್ದ ಪ್ರೌಢಶಾಲಾ ಟೀಚರ್ ಮಾಯಾವತಿ, ಹಾಗೆ ಮಾಯಾವತಿಯವರೊಡಗೂಡಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಸ್ಥಾಪನೆ, ಮುಂದೆ ಅದೇ 1984ರ ಎಪ್ರಿಲ್ 14ರ ಅಂಬೇಡ್ಕರ್ ಜನ್ಮದಿನದ ಹೊತ್ತಿಗೆ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ)ವಾಗಿ ರೂಪ ತಳೆದದ್ದು, ತರುವಾಯ ಮುಂದುವರಿದ ಬಿಎಸ್‌ಪಿಯ ಸಾಧನೆ.
ಈ ನಡುವೆ ಕಾನ್ಷೀರಾಮ್‌ರವರು ತಮ್ಮ ರಾಜಕೀಯ ಸಿದ್ಧಾಂತವನ್ನು ಸ್ಪಷ್ಟಪಡಿಸಲು 1982 ಸೆಪ್ಟ್ಟಂಬರ್ ತಿಂಗಳಲ್ಲಿ ಕೃತಿಯೊಂದನ್ನು ಹೊರತಂದರು. ಆ ಕೃತಿಗೆ ಕಾನ್ಷೀರಾಮ್‌ರವರು ಇಟ್ಟ ಹೆಸರು ಚಮಚಾ ಯುಗ. ತಮ್ಮ ಆ ಕೃತಿಯಲ್ಲಿ ಕಾನ್ಷೀರಾಮ್‌ರವರು ತಮ್ಮ ಸ್ವಾರ್ಥದ ಹಿತಕ್ಕಾಗಿ ಸಮುದಾಯದ ಹಿತ ಬಲಿಕೊಡುವ ಪರಿಶಿಷ್ಟಜಾತಿಯ ರಾಜಕಾರಣಿಗಳನ್ನು ಚಮಚಾಗಳು ಎಂದು ಕರೆದರು. ಯಾಕೆಂದರೆ ಚಮಚಾಗೆ ಸ್ವಂತ ತಿನ್ನುವ ಶಕ್ತಿ ಇಲ್ಲ. ಆದರೆ ಅದು ಬೇರೆಯವರಿಗೆ ತಿನ್ನಲು ನೆರವಾಗುತ್ತದೆ ಮತ್ತು ಆ ಚಮಚಾಗಳನ್ನು ಮೇಲ್ವರ್ಗದ ಪಕ್ಷಗಳು ಶೋಷಿತ ಸಮುದಾಯದ ಸಮರ್ಥ ನೇತಾರರನ್ನು ಹಣಿಯಲು ಬಳಸುತ್ತವೆ. ಹಾಗೆ ಕಾನ್ಷೀರಾಮ್‌ರವರು ಹೇಳಿದ್ದು ಈ ಚಮಚಾಗಳುಸೃಷ್ಟಿಯಾಗಲು ಪ್ರಮುಖ ಕಾರಣ ಗಾಂಧಿಯವರು ಎಂದು. 1932 ಸೆಪ್ಟಂಬರ್ 24ರಂದು ಮಹಾತ್ಮ ಗಾಂಧಿಯವರು ಬ್ರಿಟಿಷರು ಅಸ್ಪಶ್ಯರಿಗೆ ನೀಡಿದ್ದ ಪ್ರತ್ಯೇಕ ಮತದಾನ ಎಂಬ ಮತದಾನ ಪದ್ಧತಿಯ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ಕೂರದಿದ್ದರೆ ಅಂಬೇಡ್ಕರರು ಪ್ರತ್ಯೇಕ ಮತದಾನ ಪದ್ಧ್ದತಿ ಪಡೆದಿರು ತ್ತಿದ್ದರು. ಆ ಮೂಲಕ ಪರಿಶಿಷ್ಟರಲ್ಲಿ ಸ್ವಾಭಿಮಾನಿ ಮತ್ತು ಸಮುದಾಯದ ಹಿತ ಬಯಸುವ ರಾಜಕಾರಣಿಗಳು ಸಹಜವಾಗಿ ಸೃಷ್ಟಿಯಾಗಿರುತ್ತಿದ್ದರು. ಆದರೆ ಗಾಂಧಿ ಯವರು ತಡೆಯಾದ್ದರಿಂದ ಅದು ಜಾರಿಯಾಗಲಿಲ್ಲ. ಪರಿಣಾಮ ಪರಿಶಿಷ್ಟರಲ್ಲಿ ಸೃಷ್ಟಿಯಾದವರು ಚಮಚಾಗಳು. ಹೀಗೆ ಸಾಗುತ್ತದೆ ಕಾನ್ಷೀರಾಮರ ವಿವರಣೆ. ಈ ವಿವರಣೆಯಲ್ಲಿ ಕಂಡುಬರುವ ಪ್ರಯೋಗಾತ್ಮಕ, ಕಣ್ಣಿಗೆ ರಾಚುವ ವಾಸ್ತವವನ್ನು ಎಂತಹವರಾದರೂ ಗಮನಿಸಬಹುದು. ಈ ನಿಟ್ಟಿನಲ್ಲಿ ಹೇಳುವುದಾದರೆ ಪರಿಶಿಷ್ಟರ ರಾಜಕೀಯ ಅವನತಿಗೆ ಕಾರಣ ಕಂಡುಹಿಡಿದ ಇದು ರಾಜಕೀಯದಲ್ಲಿ ವಿಜ್ಞಾನ ಅಥವಾ ವಿಜ್ಞಾನಿಯೋರ್ವ ಕಂಡುಕೊಂಡ ಸ್ಪಷ್ಟ ರಾಜಕೀಯ ಸಂಶೋಧನೆ ಎಂಬುದು ತಿಳಿಯುತ್ತದೆ. ಹಾಗೆ ಸಂಶೋಧನೆ ಮೂಲಕ ಕಂಡುಕೊಂಡ ಕಾನ್ಷೀರಾಮ ರ ಶೇ.85 ಬಹುಜನ ಸಿದ್ಧಾಂತ ಫಲ ನೀಡಿತೇ? ಎಂದು ಈ ಸಂದರ್ಭದಲ್ಲಿ ಕೇಳಬೇಕಾಗುತ್ತದೆ. ಖಂಡಿತ, ಯಾಕೆಂದರೆ 1996ರಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಪಕ್ಷ ಸಮಾಜ ವಾದಿ ಪಕ್ಷದೊಂದಿಗೆ(109 ಸ್ಥಾನ) ಹೊಂದಾಣಿಕೆ ಮಾಡಿಕೊಂಡ ಕಾನ್ಷೀರಾಮರ ಪಕ್ಷ ಬಿಎಸ್‌ಪಿ (69ಸ್ಥಾನ) ಉತ್ತರ ಪ್ರದೇಶದಲ್ಲಿ ಪ್ರಥಮ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆ ಮೂಲಕ ಅತೀ ದೊಡ್ಡ ಪಕ್ಷವಾಗಿದ್ದರೂ ಬಿಜೆಪಿಯನ್ನು(177 ಸ್ಥಾನ) ಮುಲಾಯಂ-ಕಾನ್ಷೀರಾಮ್ ಜೋಡಿ ಅಧಿಕಾರದಿಂದ ದೂರ ಇಟ್ಟಿತು. ಆದರೆ ವಾಸ್ತವ ವೆಂದರೆ ಯಾವ ಕೋಮುವಾದಿ ಬಿಜೆಪಿಯನ್ನು ದೂರ ಇಡ ಬೇಕು ಎಂದು ಕಾನ್ಷೀರಾಮ್ ಬಯಸಿದ್ದರೋ ಅದರ ವ್ಯತಿರಿಕ್ತ ಪರಿಣಾಮ ನಡೆದದ್ದು ಅದೇ ಹಿಂದುಳಿದ ವರ್ಗಗಳ ಮುಲಾಯಂಸಿಂಗ್ ಯಾದವ್‌ರಿಂದ ಮುಂದುವರಿದ ದಲಿತರ ಮೇಲಿನ ತಡೆಯಿಲ್ಲದ ದೌರ್ಜನ್ಯ. ಪರಿಣಾಮ ವಾಗಿ ಇದನ್ನು ನೋಡುತ್ತಾ ಕೂರದ ಕಾನ್ಷೀರಾಮರು ಸ್ವತಃ ತಮ್ಮ ಪಕ್ಷಕ್ಕೆ ಅಧಿಕಾರದ ಅವಕಾಶ ಸೃಷ್ಟಿಸಿಕೊಂಡರು.ತನ್ಮೂಲಕ 1995 ರ ಜೂನ್ 3ರಂದು ಮಾಯಾವತಿಯವ ರನ್ನು ಬಿಜೆಪಿಯ ಬೆಂಬಲದೊಂದಿಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯಾಗಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಕಾನ್ಷೀರಾಮರನ್ನು ನೀವು ಅವಕಾಶವಾದಿಗಳಲ್ಲವೇ? ಎಂದಾಗ ಅವರು ಉತ್ತರಿಸಿದ್ದು ಹೌದು, ನಾನು ಅವಕಾಶವಾದಿ. ಶೋಷಿತಸಮುದಾಯಗಳಿಗೆ ಅವಕಾಶ ಸೃಷ್ಟಿಸುವುದೇ ನನ್ನ ಕೆಲಸ ಮತ್ತು ಅವಕಾಶಗಳಿಗಾಗಿ ನಾನು ಕಾಯು ತ್ತಲೇ ಇರುತ್ತೇನೆ. ಅಂದಹಾಗೆ ಹೀಗೆ 1995ರಲ್ಲಿ ಪ್ರಥಮ ಬಾರಿಗೆ ತಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟಕ್ಕೆ ಅವಕಾಶ ಪಡೆದ ಕಾನ್ಷೀರಾಮ್ ಮುಂದೆ ಅದೇಸಾಧನೆಯನ್ನು ಮತ್ತೂ 3 ಬಾರಿ (1998, 2002 ಮತ್ತು 2007) ಮುಂದುವ ರಿಸಿದ್ದು ಅವರ ಅವಕಾಶ ಸಿದ್ಧಾಂತದ ಮಹತ್ವವನ್ನು ತಿಳಿಸುತ್ತದೆ.
ಈ ನಿಟ್ಟಿನಲ್ಲಿ ಹೇಳುವುದಾದರೆ ಯಾವ ಒಂದು ಸಮುದಾಯ (ಪರಿಶಿಷ್ಟ ಜಾತಿ, ಜನಸಂಖ್ಯೆ ಶೇ.20) ಬರೇ ಮೇಲ್ವರ್ಗದ ಪಕ್ಷಗಳ ಮತ ಬ್ಯಾಂಕ್ ಆಗಿತ್ತೋ, ಬರೇ ಹೆಂಡ-ಹಣಕ್ಕೆ ಓಟು ಮಾರಿಕೊಳ್ಳುವ ಸಮುದಾಯವಾಗಿತ್ತೋ ಅದನ್ನು ತಮ್ಮ ಅಪ್ರತಿಮ ವೈಜ್ಞಾನಿಕ ರಾಜನೀತಿ ಮೂಲಕ ಅಧಿಕಾರದ ಗದ್ದುಗೆಗೇರಿಸಿದ್ದು ಕಾನ್ಷೀರಾಮ್. ಕಾನ್ಷೀರಾಮರ ಈ ರಾಜಕೀಯ ಹೋರಾಟವನ್ನು ಕೆಲವರು ಆಗ ‘ಬ್ರಾಹ್ಮಣವಾದದ ವಿರುದ್ಧದ ಹೋರಾಟ’ ಎಂದು ಕರೆದರು. ಈ ಬಗ್ಗೆ ಕಾನ್ಷೀರಾಮರನ್ನು ಕೂಡ ಅವರು ಪ್ರಶ್ನಿಸಿದರು. ಅದಕ್ಕೆ ಕಾನ್ಷೀರಾಮರು ಕೊಟ್ಟ ಉತ್ತರ ನಮ್ಮ ಹೋರಾಟ ಬ್ರಾಹ್ಮಣವಾದದ ವಿರುದ್ಧವಲ್ಲ. ನಮ್ಮ ಹೋರಾಟ ಇರುವುದು ಸಾಮಾಜಿಕ ಶ್ರೇಣೀಕರಣದ ಪರಿವರ್ತನೆಯ ಪರ. (ತಮ್ಮ ಬಳಿ ಇದ್ದ ಪಾರ್ಕರ್ ಪೆನ್ ಒಂದನ್ನು ತೆಗೆದು ಅದನ್ನು ಲಂಬವಾಗಿ ಹಿಡಿದು ನಂತರ ಅದನ್ನು ಸಮತಲಕ್ಕೆ ತಿರುಗಿಸಿ) ನೋಡಿ ನನ್ನ ಉದ್ದೇಶ ಇರುವುದು ಹೀಗೆ ಒಬ್ಬರಿಗೊಬ್ಬರು ಮೇಲು ಎಂಬ ಲಂಬ ಶ್ರೇಣಿಯ ಸಮಾಜವನ್ನು, ಒಬ್ಬರಿಗೊಬ್ಬರು ಅಕ್ಕಪಕ್ಕ ಎಂಬಂಥ ಸಮತಲ ಶ್ರೇಣಿಗೆ ಬದಲಿಸುವುದು ಮತ್ತು ಅಂತಹ ಶ್ರೇಣಿಯಲ್ಲಿ ಬ್ರಾಹ್ಮಣರು ಬ್ರಾಹ್ಮಣರಾಗಿಯೇ ಇರುತ್ತಾರೆ, ಚಮ್ಮಾರರು ಚಮ್ಮಾರರಾಗಿಯೇ ಇರುತ್ತಾರೆ. ಆದರೆ ಯಾರೂ ಒಬ್ಬರ ಮೇಲೊಬ್ಬರು ಇರುವುದಿಲ್ಲ.
ಸಮಾನತೆ ಎಂದರೆ ಅದು ಹೀಗೆಯೇ ಇರುತ್ತದೆ ಮತ್ತು ಅದು ಹೀಗೆಯೇ ಇರಬೇಕು. ಕಾನ್ಷೀರಾಮರು ಪ್ರತಿಪಾದಿಸಿದ ಪೆನ್ನಿನ ಆ ಉದಾಹರಣೆ ಸೂಚಕ ಸಮಾನತೆಯ ಸಿದ್ಧಾಂತದಲ್ಲಿ ಯಾರೂ ಮೇಲಲ್ಲ, ಯಾರು ಕೀಳಲ್ಲ. ಎಲ್ಲರೂ ತಮ್ಮತನವನ್ನು ಉಳಿಸಿಕೊಂಡು ಅಕ್ಕಪಕ್ಕ ಬಂಧುಗಳಂತೆ ಬಾಳುವಂತಾಗಬೇಕು. ಇದೇ ಕಾನ್ಷೀರಾಮರ ವೈಜ್ಞಾನಿಕ ಸಮಾನತೆಯ ಸಿದ್ಧಾಂತ ಮತ್ತು ಇದೇ ಕಾನ್ಷೀರಾಮರ ಗುರು ಬಾಬಾಸಾಹೇಬ್ ಅಂಬೇಡ್ಕರರ ಸಮಾನತೆಯ ಸಿದ್ಧಾಂತ. ಈ ಸಿದ್ಧಾಂತವನ್ನೇ ಅಂಬೇಡ್ಕರರು ಮೈತ್ರಿ ಅಥವಾ ಸಹೋದರತೆ ಎಂದು ಕರೆದದ್ದು ಮತ್ತು ಭಾರತದ ಸಂವಿಧಾನದ ಪೀಠಿಕೆಯಲ್ಲಿ ಅವರು ಅದನ್ನು FRATERNITY ಎಂದು ಸೇರಿಸಿದ್ದು. ಈ ಹಿನ್ನೆಲೆಯಲ್ಲಿ ಸಮಾನತೆಯ ಈ ಸಿದ್ಧಾಂತವನ್ನು ಪ್ರಾಯೋಗಿಕ ರೂಪಕ್ಕೆ ತಂದು ‘ನನ್ನ ಜನರು ಈ ದೇಶದ ಆಳುವ ವರ್ಗವಾಗಬೇಕು’ ಎಂಬ ಅಂಬೇಡ್ಕರರ ಕನಸನ್ನು ನನಸಾಗಿದ ಕೀರ್ತಿ ಅದು ಕಾನ್ಷೀರಾಮರಿಗಷ್ಟೆ ಸಲ್ಲುತ್ತದೆ.