ಎರಡು ಕಾಲಲ್ಲಿ ಸರಿಯಾಗಿ ನಡೆಯಲು ಇನ್ನೂ ಕಲಿತಿಲ್ಲ ಮಾನವ!
ವಾಶಿಂಗ್ಟನ್, ಮಾ. 15: ವಿಜ್ಞಾನ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನಿಬ್ಬೆರಗಾಗುವಂತಹ ಪ್ರಗತಿ ಸಾಧಿಸಿರುವ ಮಾನವ ತನ್ನೆರಡು ಕಾಲುಗಳಲ್ಲಿ ಸರಿಯಾಗಿ ನಡೆದಾಡಲು ಇನ್ನೂ ಕಲಿತಿಲ್ಲವೇ? ಈ ಪ್ರಶ್ನೆ ನಗು ತರಬಹುದಾದರೂ ಅಧ್ಯಯನವೊಂದರ ಫಲಿತಾಂಶಗಳ ಪ್ರಕಾರ ಮಾನವನನ್ನೂ ನಡೆದಾಡಲು ಸಂಪೂರ್ಣ ಪರಿಣತಿಯನ್ನು ಹೊಂದಿಲ್ಲ.
ಇಂಡಿಯಾನಾದ ಪುರ್ದುವೇ ವಿಶ್ವ ವಿದ್ಯಾನಿಲಯ ನಡೆಸಿದ ಅಧ್ಯಯನವೊಂದರಲ್ಲಿ ಕಂಡುಕೊಂಡಂತೆ ಸಾವಿರಾರು ವರ್ಷಗಳಿಂದ ಮನುಷ್ಯರು ನಡೆದಾಡುತ್ತಿದ್ದರೂ ಇನ್ನೂ ಎಡವದೆ ಯಾ ಬೀಳದೆ ನಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಡೆಯುವಾಗ ವಯಸ್ಸಾದವರು ಮಾತ್ರ ಬೀಳುತ್ತಾರೆಂದು ನಾವು ನಂಬಿದ್ದರೆ ಈ ಅಧ್ಯಯನದ ಪ್ರಕಾರ ಯುವಕರೂ ವೃದ್ಧರಂತೆಯೇ ಬೀಳುತ್ತಾರೆ.
ಈ ವಿಶ್ವವಿದ್ಯಾಲಯದ ತಜ್ಞರು ಸುಮಾರು 19 ವರ್ಷದ ಒಟ್ಟು 94 ಪದವಿ ವಿದ್ಯಾರ್ಥಿಗಳನ್ನು ಈ ಅಧ್ಯಯನಕ್ಕೆ ಆಯ್ದುಕೊಂಡಿದ್ದರು. ಹೀಗೆ ಆಯ್ಕೆ ಮಾಡಲಾದವರಿಗೆ ಅಧ್ಯಯನಕಾರರು ಪ್ರತಿ ದಿನ ಬೆಳಿಗ್ಗೆ ಇಮೇಲ್ ಕಳುಹಿಸಿ ಅವರು ಕಳೆದ 24 ಗಂಟೆಗಳಲ್ಲಿ ಯಾವತ್ತಾದರೂ ನಡೆಯುವಾಗ ಎಡವಿದ್ದರೇ ಅಥವಾ ಬಿದ್ದಿದ್ದರೇ ಎಂದು ಕೇಳುತ್ತಿದ್ದರು. ಅಧ್ಯಯನದ ಕೊನೆಗೆ ಅವರೆಲ್ಲ ಒಟ್ಟು 1,495 ಬಾರಿ ಎಡವಿದ್ದರೆ, 46 ಮಂದಿ ಒಟ್ಟು 82 ಬಾರಿ ಬಿದ್ದಿದ್ದರು. ಹೆಚ್ಚಿನವರು ನಡೆದಾಡುವಾಗ ಜಾರಿದ್ದರೆ (48%), ಕೆಲವರು ಎಡವಿದ್ದಾರೆ (25%).
ಈ ಅಧ್ಯಯನದ ವರದಿ ಹ್ಯೂಮನ್ ಮೂವ್‌ಮೆಂಟ್ ಸಯನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.