ವಾಸ್ತವವಾಗಿ ಆಧಾರ್ ‘ಕಣ್ಗಾವಲು’ ತಂತ್ರಜ್ಞಾನ ಸುನೀಲ್ ಅಬ್ರಹಾಂ

Update: 2016-03-15 18:12 GMT

 ಆಧಾರ್ ಹಾಗೂ ಯುಐಡಿಎಐ ಮಸೂದೆ ಬಗ್ಗೆ ನಿಮ್ಮ ಅನಿಸಿಕೆ ಏನು?

- ತಂತ್ರಜ್ಞಾನದಿಂದ ತುಂಡಾದ್ದನ್ನು ಕಾನೂನಿನಿಂದ ಜೋಡಿಸಲಾಗದು. ಆಧಾರ್ ಎನ್ನುವುದು ಮುರಿದ ತಂತ್ರಜ್ಞಾನ. ಇದು ಕಣ್ಗಾವಲು ತಂತ್ರಜ್ಞಾನ. ಅಭಿವೃದ್ಧಿ ಹಸ್ತಕ್ಷೇಪದ ಹೆಸರಿನಲ್ಲಿ ಜನರ ಒಪ್ಪಿಗೆ ಇಲ್ಲದೇ ಅವರ ಗುರುತನ್ನು ಪತ್ತೆ ಮಾಡುವಂತಹ ತಂತ್ರಜ್ಞಾನ. ಜತೆಗೆ ಅವರ ಹೆಸರಿನಲ್ಲಿ ಅಧಿಕೃತ ವ್ಯವಹಾರವನ್ನು ಮಾಡುವ ವಿಧಾನ. ಭದ್ರತಾ ದೃಷ್ಟಿಕೋನದಿಂದ ಈ ವಿನ್ಯಾಸವೇ ಹಾನಿಕಾರಕ. ನಾಗರಿಕರ ಹಕ್ಕನ್ನು ಉಲ್ಲಂಘಿಸಲು ಯಾವ ಕಾನೂನು ಕೂಡಾ ಆಸರೆ ನೀಡಲಾರದು. ಇನ್ನೊಂದು ಮುಖ್ಯ ಆಕ್ಷೇಪವೆಂದರೆ, ಆಧಾರ್ ಮಸೂದೆಯ ಉಪಶೀರ್ಷಿಕೆಯಲ್ಲಿ ನೀಡಿರುವ ಸೇವೆಗಳು ಎಂಬ ಪದ. ಇಲ್ಲಿ ಆಧಾರ್ ಕಾರ್ಡ್‌ಗಳನ್ನು ನಿವಾಸಿಗಳಿಗೆ ನೀಡಲಾಗುತ್ತದೆಯೇ ಅಥವಾ ನಾಗರಿಕರಿಗೆ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸರಕಾರದ ಬಹುತೇಕ ಸೇವೆಗಳು ನಾಗರಿಕರಿಗೆ ಇವೆಯೇ ವಿನಃ ನಿವಾಸಿಗಳಿಗೆ ಅಲ್ಲ.
 ಈ ಮುರಿದ ತಂತ್ರಜ್ಞಾನದ ಪರಿಣಾಮ ಏನಾಗಬಹುದು?
-ನಿಗದಿತ ಸೇವೆ ಅಥವಾ ಸಬ್ಸಿಡಿ ಪಡೆಯುವುದನ್ನು ಅಧಿಕೃತಗೊಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಪ್ರಜ್ಞಾಪೂರ್ವಕ ಸಹಕಾರ ಇಲ್ಲದೆಯೇ ಒಪ್ಪಿಗೆ ನೀಡಿದಂತಾಗುತ್ತದೆ. ಇದರ ಜತೆಗೆ ಸೇವೆಯನ್ನು ನೀಡುವ ವ್ಯಕ್ತಿ ಬಯೋಮೆಟ್ರಿಕ್ ರೀಡರ್ ಹಿಡಿದುಕೊಂಡು, ಈ ಸಾಧನ ಕೆಲಸ ಮಾಡುತ್ತಿಲ್ಲ ಎಂದು ಸಬೂಬು ನೀಡಿ ನಿಮ್ಮ ಸಬ್ಸಿಡಿ ನಿರಾಕರಿಸಬಹುದು. ಅದಾಗ್ಯೂ ಅದರ ಆಧಾರದಲ್ಲಿ ನೀಡಿರುವ ಮಾಹಿತಿಗಳಲ್ಲಿ, ನೀವು ಸಬ್ಸಿಡಿ ಪಡೆದಿದ್ದೀರಿ ಎಂದು ಸಾಬೀತುಪಡಿಸಬಹುದು. ಏಕೆಂದರೆ ಇದಕ್ಕೆ ಪೂರ್ವಭಾವಿಯಾಗಿಯೇ ದೃಢೀಕರಣ ಅಂತಿಮವಾಗಿರುತ್ತದೆ. ಈ ಕಾರಣದಿಂದ ಆ ವ್ಯಕ್ತಿ ಏನು ಹೇಳುತ್ತಾನೋ ಅದನ್ನು ನೀವು ಒಪ್ಪಲೇಬೇಕಾಗುತ್ತದೆ. ಏಕೆಂದರೆ ಆ ವ್ಯಕ್ತಿ ಹಾಗೂ ಯುಐಡಿಎಐಗಷ್ಟೇ ಈ ಮಾಹಿತಿಗಳನ್ನು ಪರಿಶೀಲಿಸಲು ಅವಕಾಶ ಇರುತ್ತದೆ. ಆಧಾರ್ ನಾಗರಿಕರನ್ನು ಸರಕಾರಕ್ಕೆ ಪಾರದರ್ಶಕವಾಗಿ ಮಾಡುತ್ತದೆಯೇ ವಿನಃ ಸರಕಾರ ನಾಗರಿಕರಿಗೆ ಹೊಣೆಗಾರಿಕೆ ಹೊಂದಿರುವುದಿಲ್ಲ.
 ವರ್ಗಾವಣೆ ಬಗ್ಗೆ ಫಲಾನುಭವಿಗಳಿಗೆ ಸಂದೇಶ ಬರುವುದಿಲ್ಲವೇ?
-ಬ್ಯಾಂಕುಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಈ ಸಂದೇಶ ಬರುತ್ತದೆ. ನ್ಯಾಯಬೆಲೆ ಅಂಗಡಿಯಲ್ಲಿ, ಫಲಾನುಭವಿಗೆ ಯಾವ ಸಂದೇಶವೂ ಬರುವುದಿಲ್ಲ. ವಿಶ್ವಾದ್ಯಂತ ಭದ್ರತಾ ವೃತ್ತಿಪರರು ಬಯೋಮೆಟ್ರಿಕ್ ಆಧರಿತ ದೃಢೀಕರಣವನ್ನು ನಂಬುವುದಿಲ್ಲ. ಬದಲಾಗಿ ಅಳಿಸಿಹಾಕಬಹುದಾದ ಇತರ ದೃಢೀಕರಣ ಅಂಶಗಳಿಗೆ ಒತ್ತು ನೀಡುತ್ತಾರೆ. ಬಯೋಮೆಟ್ರಿಕ್ ವಿವರಗಳ ವಿಚಾರದಲ್ಲಿ ರಾಜಿ ಮಾಡಿಕೊಂಡರೆ ಅದು ಅಳಿಸಿಹಾಕದ ದಾಖಲೆಯಾಗುತ್ತದೆ. ಇದರ ಬದಲಾಗಿ ಬರೆಯಬಹುದಾದ ಸ್ಮಾರ್ಟ್ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ನೀಡಿ ಅದರಲ್ಲಿ ಸರಕಾರಿ ಅಧಿಕಾರಿಗಳ ವಿವರಗಳನ್ನು ದಾಖಲಿಸಬಹುದು. ಇದರಿಂದ ಜನತೆ ಸರಕಾರಕ್ಕೆ ಪಾರದರ್ಶಕವಾದಂತೆ, ಸರಕಾರವೂ ಜನತೆಗೆ ಪಾರದರ್ಶಕವಾದಂತಾಗುತ್ತದೆ.
 ಗೃಹ ಸಚಿವಾಲಯ ಅಧೀನದಲ್ಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ರಿಜಿಸ್ಟ್ರಾರ್, ಸ್ಮಾರ್ಟ್ ಕಾರ್ಡ್ ಬಳಕೆಯನ್ನು ಪ್ರತಿಪಾದಿಸುತ್ತಿದ್ದಾರಲ್ಲವೇ?
-ಇಲ್ಲಿ ವ್ಯಕ್ತಿಗಳನ್ನು ಸ್ಮಾರ್ಟ್ ಕಾರ್ಡ್ ಜತೆ ಸಂಪರ್ಕಿಸಲು ಮಾತ್ರ ಬಯೋಮೆಟ್ರಿಕ್ಸ್ ಮಾಹಿತಿಯನ್ನು ಬಳಸಬೇಕಾಗುತ್ತದೆ. ಬಯೋಮೆಟ್ರಿಕ್ ಮಾಹಿತಿಗಳನ್ನು ಸ್ಮಾರ್ಟ್ ಕಾರ್ಡ್‌ನಲ್ಲಿ ಸಂಗ್ರಹಿಸಿ, ಯಾವುದೇ ಕಾರಣಕ್ಕೆ ಈ ಮಾಹಿತಿಗಳನ್ನು ಕೇಂದ್ರೀಯ ವ್ಯವಸ್ಥೆಯಲ್ಲಿ ಒಂದೆಡೆ ದಾಸ್ತಾನು ಮಾಡಬಾರದು. ಕೇಂದ್ರೀಕೃತ ಮಾಹಿತಿ ವ್ಯವಸ್ಥೆಯನ್ನು ನಿರ್ವಹಿಸುವುದು ಎಂದರೆ ಪ್ರತಿ ಮನೆಗಳ ಕೀಲಿ ಕೈಗಳನ್ನು ದಿಲ್ಲಿಯಲ್ಲಿ ಪಡೆದುಕೊಂಡು, ಕೇಂದ್ರೀಯ ಪೊಲೀಸ್ ಠಾಣೆಯಲ್ಲಿ ದಾಸ್ತಾನು ಮಾಡಿದಂತಾಗುತ್ತದೆ. ಕೇಂದ್ರೀಕೃತ ಮಾಹಿತಿ ವ್ಯವಸ್ಥೆಯನ್ನು ಆ ಮಾಹಿತಿಯ ಸ್ವರೂಪಕ್ಕೆ ಅನುಗುಣವಾಗಿ ರಾಜಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಭದ್ರತೆಯ ಕಾರಣಕ್ಕಾಗಿ, ಒಂದು ಜೇನುಗೂಡಿನ ಮೇಲೆ ಹಲವು ಮಂದಿ ದಾಳಿ ಮಾಡುವ ವಾತಾವರಣ ಸೃಷ್ಟಿಸಬಾರದು. ಇಂಟರ್‌ನೆಟ್ ಯಾಕೆ ಸುರಕ್ಷಿತವೆಂದರೆ, ಇದು ಕೇಂದ್ರೀಕೃತ ಮಾಹಿತಿ ವ್ಯವಸ್ಥೆ ಹೊಂದಿರುವುದಿಲ್ಲ. ಇತರ ಭಿನ್ನಾಭಿಪ್ರಾಯವೆಂದರೆ, ನಕಲಿ ಬಯೋಮೆಟ್ರಿಕ್ ಮಾಹಿತಿ ನೀಡುವುದು ನಕಲಿ ಸ್ಮಾರ್ಟ್ ಕಾರ್ಡ್ ಮಾಡುವುದಕ್ಕಿಂತಲೂ ಸುಲಭ.
 ಅಂದರೆ ನಿಮ್ಮ ಮೂಲಭೂತ ವಿರೋಧ ಇರುವುದು ಬಯೋಮೆಟ್ರಿಕ್ ಮಾಹಿತಿಗಳ ಕೇಂದ್ರೀಯ ಸಂಗ್ರಹಾಗಾರ ಸ್ಥಾಪಿಸುವ ಬಗ್ಗೆ?
-ಬಯೋಮೆಟ್ರಿಕ್ಸ್ ಪದ್ಧತಿಯನ್ನು ಗುರುತಿಸುವಿಕೆ ಹಾಗೂ ದೃಢೀಕರಣಕ್ಕೆ ಬಳಸುವ ಬಗ್ಗೆಯೂ ನನ್ನ ವಿರೋಧವಿದೆ; ಇದು ಕಣ್ಗಾವಲು ಅಲ್ಲದೇ ಬೇರೇನೂ ಅಲ್ಲ. ಎಲ್ಲರ ಕಣ್ಣುಹುಬ್ಬಿನ ಮಾಹಿತಿಯನ್ನು ಸೆರೆಹಿಡಿದು, ಮುಂದಿನ ಪೀಳಿಗೆಯ ಕ್ಯಾಮರಾಗಳಿಗೆ ಬಳಸುವುದು ತೀರಾ ಸುಲಭ. ಉದಾಹರಣೆಗೆ ಪೊಲೀಸರು ಪ್ರತಿಭಟನಾಕಾರರ ಕಣ್ಣುಹುಬ್ಬಿನ ಮಾಹಿತಿಗಳನ್ನು ರಹಸ್ಯವಾಗಿ ಸೆರೆಹಿಡಿದು, ಅವುಗಳನ್ನು ಬಯೋ ಮೆಟ್ರಿಕ್ ಮಾಹಿತಿ ಜತೆ ತಾಳೆ ಮಾಡಿ ಗುರುತಿಸುವ ಪರಿಸ್ಥಿತಿಯನ್ನು ನೆನೆಸಿಕೊಳ್ಳಿ.
 ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸುವವರನ್ನು ಭದ್ರತಾ ಏಜೆನ್ಸಿಗಳು ಗುರುತಿಸಿದರೆ ತೊಡಕು ಏನು?
-ಗುಪ್ತಚರ ಹಾಗೂ ತನಿಖಾ ಸಂಸ್ಥೆಗಳು ಹಿಂಬಾಗಿಲ ಮೂಲಕ ಪ್ರವೇಶಿಸಲು ಮಾಡಿದ ಪ್ರಯತ್ನವನ್ನು ತಿರಸ್ಕರಿಸುವಾಗ ಆ್ಯಪಲ್ ಕೂಡಾ ಇದೇ ವಾದವನ್ನು ಮುಂದಿಟ್ಟಿದೆ. ಉತ್ತಮ ಆಡಳಿತಕ್ಕಾಗಿ ನೀವು ಕಣ್ಗಾವಲು ಸಾಮ್ಯರ್ಥ್ಯವನ್ನು ಸೃಷ್ಟಿಸಿಕೊಂಡರೆ, ದುರಾಡಳಿತದ ಅಥವಾ ದಮನಕಾರಿ ಸರಕಾರ, ದೈತ್ಯ ಕಾರ್ಪೊರೇಟ್ ಸಂಸ್ಥೆ ಅಥವಾ ಅಪರಾಧಿಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಇಂತಹ ಕಣ್ಗಾವಲು ವ್ಯವಸ್ಥೆಯ ಭೀತಿಯಿಂದಾಗಿ ಜನ ಯಾವ ಬಗೆಯ ಪ್ರತಿಭಟನೆಗಳನ್ನೂ ಮಾಡಲು ಹಿಂಜರಿಯುವಂತಾಗುತ್ತದೆ.
 ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸುರಕ್ಷತಾ ಮತ್ತು ಭದ್ರತಾ ಅಂಶಗಳನ್ನು ಆಧಾರ್ ಪಾಲಿಸಿಲ್ಲವೇ?
-ಯುರೋಪಿಯನ್ ನಿಯಂತ್ರಣ ಸಂಸ್ಥೆ ಹಾಗೂ ನ್ಯಾಯಾಲಯಗಳಿಗೆ ಹೋಲಿಸಿದರೆ, ನಮ್ಮ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಗುಣಮಟ್ಟ ಇನ್ನೂ ಅಸಮರ್ಪಕ. ಗರಿಷ್ಠ ಗುಣಮಟ್ಟಕ್ಕೆ ಬದ್ಧವಾದರೆ, ಯೂರೋಪಿಯನ್ ಖಾಸಗಿತನದ ಕಮಿಷನರ್ ಹಾಗೂ ಮಾಹಿತಿ ಸಂರಕ್ಷಣಾ ಅಧಿಕಾರಿಗಳು ಭಾರತಕ್ಕೆ ಸಮರ್ಪಕ ಕಾಯ್ದೆ ಹೊಂದಿರುವ ದೇಶದ ಸ್ಥಾನಮಾನ ನೀಡುತ್ತಿದ್ದವು. ಎರಡನೆ ಸಮಸ್ಯೆಯೆಂದರೆ, ಪ್ರಸ್ತುತ ಇರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯು, ಸರಕಾರಕ್ಕೆ ಅನ್ವಯವಾಗುವುದಿಲ್ಲ. ಸರಕಾರ ನಿರ್ದಿಷ್ಟ ಮಾಹಿತಿಯನ್ನು ಹಿಡಿದಿಟ್ಟರೆ, ನಿಮ್ಮ ಹಕ್ಕುಗಳನ್ನು ರಕ್ಷಿಸುವ ಯಾವ ಹಂಗೂ ಸರಕಾರಕ್ಕೆ ಇರುವುದಿಲ್ಲ.
 ಖಾಸಗಿತನ ಕುರಿತ ಎ.ಪಿ.ಶಹಾ ಸಮಿತಿಯ ಭಾಗವಾಗಿದ್ದವರು ನೀವು. ಪ್ರಸ್ತುತ ಸನ್ನಿವೇಶದಲ್ಲಿ ಪ್ರತ್ಯೇಕ ಖಾಸಗಿತನದ ಕಾನೂನು ಎಷ್ಟರಮಟ್ಟಿಗೆ ಮಹತ್ವದ್ದು?
-ಇದು ಕೇವಲ ಮಾನವಹಕ್ಕುಗಳ ಸಂರಕ್ಷಣೆ ದೃಷ್ಟಿಯಿಂದ ಮಾತ್ರ ಪ್ರಮುಖವಾದುದಲ್ಲ; ನಮ್ಮ ಬಿಪಿಒ, ಮಾಹಿತಿ ತಂತ್ರಜ್ಞಾನ ಆಧರಿತ ಸೇವೆಗಳು ಹಾಗೂ ಕೆಪಿಒ ವಲಯದ ಸ್ಪರ್ಧಾತ್ಮಕತೆಯನ್ನು ರಕ್ಷಿಸುವ ಸಲುವಾಗಿ ಕೂಡಾ ಅಗತ್ಯ. ಯುರೋಪಿಯನ್ ಮಾಹಿತಿ ಸಂರಕ್ಷಣಾ ನಿಯಂತ್ರಣ ವ್ಯವಸ್ಥೆಯಲ್ಲಿ ಕೊರತೆ ಎನ್ನಬಹುದಾದ ಮಾಹಿತಿ ಸಂರಕ್ಷಣೆ ಕಾನೂನು ನಮಗೆ ಅಗತ್ಯವಿದೆ.
 ತಮ್ಮ ಮಾಹಿತಿ ವಿಚಾರದಲ್ಲಿ ಕೇಂದ್ರೀಯ ಸಂಗ್ರಹಣಾ ವ್ಯವಸ್ಥೆ ರಾಜಿ ಮಾಡಿಕೊಂಡಾಗ, ಅಂಥ ಕಾನೂನು ನಮಗೆ ಹೇಗೆ ನೆರವಾಗುತ್ತದೆ?
 -ಖಾಸಗಿತನದ ವಿಚಾರದಲ್ಲಿ ಒಬ್ಬ ವ್ಯಕ್ತಿ ಯಾವ ಸ್ಥಾನದಲ್ಲಿದ್ದಾನೆ ಎನ್ನುವ ಸ್ಪಷ್ಟತೆಯನ್ನು ಇದು ನೀಡುತ್ತದೆ. ಆದರೆ ಸರಕಾರ ಖಾಸಗಿತನ ಕುರಿತ ಎರಡು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿರುವುದು ನಿಜಕ್ಕೂ ಅಚ್ಚರಿಯ ವಿಷಯ. ಕೆಲ ಹೋರಾಟಗಾರರು ಯುಐಡಿಎಐ ಕಡ್ಡಾಯಗೊಳಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದಾಗ, ಸಂವಿಧಾನಾತ್ಮಕವಾಗಿ ಖಾಸಗಿತನದ ಹಕ್ಕು ಇಲ್ಲ ಎಂದು ಸರಕಾರ ಪ್ರತಿಪಾದಿಸಿತು. ಆದರೆ ಪೊಲೀಸರು ಯುಐಡಿಎಐನಿಂದ ಬಯೋಮೆಟ್ರಿಕ್ ಮಾಹಿತಿಯನ್ನು ಕೇಳಿದಾಗ, ಇದೇ ಸರಕಾರ, ಪ್ರತಿಯೊಬ್ಬರಿಗೂ ಖಾಸಗಿತನದ ಹಕ್ಕು ಇದೆ. ಆದ್ದರಿಂದ ಆ ಮಾಹಿತಿಗಳನ್ನು ಪೊಲೀಸರ ಜತೆ ಹಂಚಿಕೊಳ್ಳುವಂತಿಲ್ಲ ಎಂದು ಹೇಳಿತು. ಎರಡೂ ಪ್ರಕರಣಗಳಲ್ಲಿ ಸರಕಾರದ ಧ್ವನಿ ಪರಸ್ಪರ ವಿರುದ್ಧವಾಗಿದೆ. ನ್ಯಾಯಾಲಯಗಳು ಕೂಡಾ ಈ ಬಗ್ಗೆ ಒಂದೇ ಅಭಿಪ್ರಾಯ ಹೊಂದಿಲ್ಲ. ಏಕೆಂದರೆ ಈ ಸಂಬಂಧ ಪರಸ್ಪರ ವೈರುಧ್ಯದ ತೀರ್ಪುಗಳು ಬಂದಿವೆ. ಆದ್ದರಿಂದ ಈ ಉದ್ದೇಶಿತ ಕಾನೂನು, ಖಾಸಗಿತನದ ಬಗ್ಗೆ ಸ್ಪಷ್ಟತೆಯನ್ನು ಜನತೆಗೆ ನೀಡಲಿದ್ದು, ಇದು ಉಲ್ಲಂಘನೆಯಾದರೆ, ಸಂಬಂಧಪಟ್ಟ ವ್ಯಕ್ತಿಗಳು ಪರಿಹಾರ ಪಡೆಯಲೂ ಇದರಲ್ಲಿ ಅವಕಾಶವಿದೆ.
 ಇದೇ ವೇಳೆ, ಆಧಾರ್ ಸೋರಿಕೆ ತಡೆಯುವ ಮೂಲಕ ಖಜಾನೆಗೆ ದೊಡ್ಡ ಮೊತ್ತದ ಉಳಿತಾಯಕ್ಕೂ ಕಾರಣವಾಗುತ್ತದೆ..?
- ಆಧಾರ್ ಕೇವಲ ಎರಡು ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಈ ನಿರ್ದಿಷ್ಟ ಬಯೋಮೆಟ್ರಿಕ್ ವಿಶಿಷ್ಟವೇ ಹಾಗೂ ಸಂಗ್ರಹಿತ ಮಾಹಿತಿ ಜತೆಗೆ ಇದು ತಾಳೆಯಾಗುತ್ತದೆಯೇ? ಈ ವ್ಯವಸ್ಥೆಯಲ್ಲಿ ಒಬ್ಬ ಬಾಂಗ್ಲಾದೇಶಿ ಪ್ರಜೆಯನ್ನು ತಂದರೆ, ಎರಡೂ ಪ್ರಶ್ನೆಗಳಿಗೆ ದೃಢವಾದ ಉತ್ತರ ದೊರಕುತ್ತದೆ. ಒಬ್ಬನೇ ವ್ಯಕ್ತಿ ಎರಡು ಬಾರಿ ಸೌಲಭ್ಯ ಪಡೆಯುವುದನ್ನು ಮಾತ್ರ ಆಧಾರ್ ತಡೆಯಬಹುದು. ಇದೇ ವೇಳೆ, ವಾಸ್ತವವಾಗಿ ಇಲ್ಲದ ಫಲಾನುಭವಿಯೊಬ್ಬನನ್ನು ವ್ಯವಸ್ಥೆಯಲ್ಲಿ ಸೇರಿಸುವುದು ಬಹಳ ಸುಲಭ. ಆಧಾರ್ ನಿಜವಾಗಿಯೂ ಕೆಲಸ ಮಾಡಬೇಕಿದ್ದರೆ, ದಿಲ್ಲಿಯಿಂದ ಗ್ರಾಮಗಳಿಗೆ ಹರಿಯುವ ಸಬ್ಸಿಡಿ ಬಗ್ಗೆ ಸಾರ್ವಜನಿಕರಿಗೆ ಕಾಣುವಂಥ ಪರಿಶೋಧನಾ ವ್ಯವಸ್ಥೆ ಅಗತ್ಯವಾಗುತ್ತದೆ. ಅದು ಖಂಡಿತವಾಗಿಯೂ ಈ ಸರಣಿಯಲ್ಲಿರುವ ಭ್ರಷ್ಟಾಚಾರವನ್ನು ತಡೆಯಬಹುದು.
 ಈ ವ್ಯವಸ್ಥೆಗೆ ದೊಡ್ಡ ಸಂಖ್ಯೆಯ ಸುಳ್ಳು ಫಲಾನುಭವಿಗಳನ್ನು ಸೇರಿಸುವುದು ಕಷ್ಟವಲ್ಲವೇ?
 - ಫಲಾನುಭವಿಗಳು ನೈಜ ಫಲಾನುಭವಿಗಳನ್ನು ಅಥವಾ ನಕಲಿ ಫಲಾನುಭವಿ ಗಳನ್ನು ಕಿತ್ತುಹಾಕಲಾಗಿದೆಯೇ ಎಂದು ಪರಿಶೀಲಿಸುವ ಯಾವ ವ್ಯವಸ್ಥೆಯೂ ಇದರಲ್ಲಿ ಇಲ್ಲ. ಇದು ಪಾರದರ್ಶಕವಲ್ಲ; ಏಕೆಂದರೆ, ಯಾರನ್ನು ಯಾರೂ ದೃಢೀಕ ರಿಸಬೇಕಾಗಿಲ್ಲ. ಪ್ರಸ್ತುತ ವ್ಯವಸ್ಥೆಯಲ್ಲಿ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿದವರು ಯಾರು ಎನ್ನುವುದನ್ನು ಪತ್ತೆ ಮಾಡುವುದು ಸಾಧ್ಯವಿಲ್ಲ. ಇಂತಹ ನಕಲಿಗಳ ಸೃಷ್ಟಿಗಾಗಿ ಯಾರೂ ಕೆಲಸ ಕಳೆದುಕೊಳ್ಳಲಾರರು; ಇಲ್ಲಿ ಪ್ರತಿಯೊಬ್ಬರಿಗೂ ಉತ್ತೇಜಕಗಳಿವೆ.
 ಯುಐಡಿಎಐ ವ್ಯವಸ್ಥೆಯಲ್ಲಿ ಸಮಸ್ಯೆಗಳಿದ್ದರೆ. ಸರಕಾರ ಈ ಬಗ್ಗೆ ಏಕೆ ಉತ್ಸಾಹ ಹೊಂದಿದೆ?
- ತಂತ್ರಜ್ಞಾನ ಮೆಚ್ಚಿಕೆಯಿಂದ ತಂತ್ರಜ್ಞಾನ ಎಲ್ಲಕ್ಕೂ ಉತ್ತರಿಸಬೇಕು ಹಾಗೂ ನಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಬೇಕು ಎಂದು ಸರಕಾರ ಬಯಸು ತ್ತದೆ. ಯಾವುದೇ ತಪ್ಪುಗಳಾದರೆ, ಸುಲಭವಾಗಿ ಅದನ್ನು ತಂತ್ರಜ್ಞಾನವನ್ನು ಹೊಣೆಗಾ ರನಾಗಿ ಮಾಡಬಹುದು.


 

Writer - ಸಾಹಿಲ್ ಮಕ್ಕಾರ್

contributor

Editor - ಸಾಹಿಲ್ ಮಕ್ಕಾರ್

contributor

Similar News