ಇಂದಿರಾರನ್ನು ಗೆಲ್ಲಿಸಿದ ಅರಸರಿಗೆ ಅಹಂ ಅತಿಯಾಗಿತ್ತು: ಕೆ.ಎಚ್.ಶ್ರೀನಿವಾಸ್
ಮಂತ್ರಿ ಮಾಡಿದ್ದು ಅರಸು
1977-78 ರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನಗರಾಳ್ ನೇಮಕಗೊಳ್ಳುವಾಗ, ಅವರು ಅರಸು ಬಳಿ ಬಂದು, ಕೆ.ಎಚ್.ಶ್ರೀನಿವಾಸ್‌ರನ್ನು ಜನರಲ್ ಸೆಕ್ರೆಟರಿಯನ್ನಾಗಿ ಮಾಡಬೇಕಂತ ಶರತ್ತು ಹಾಕಿದರು. ಆದರೆ ಅರಸು ನನ್ನನ್ನು ಪೊಲಿಟಿಕಲ್ ಸೆಕ್ರೆಟರಿ ಸ್ಥಾನದಿಂದ ಬಿಟ್ಟುಕೊಡಲು ಸಿದ್ಧರಿಲ್ಲ. ನಗರಾಳ್‌ರ ಒತ್ತಡ ಹೆಚ್ಚಾದಾಗ ಅರಸು ಒಪ್ಪಿದರು, ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾದೆ. ಆದರೆ ಅವರ-ನನ್ನ ನಡುವಿನ ಇಂಟಿಮೆಸಿ ಹಾಗೇ ಇತ್ತು. ಆ ಸಂದರ್ಭದಲ್ಲಿ ಶಿವಮೊಗ್ಗದ ಬದರಿ ನಾರಾಯಣ ಕೆ.ಎಚ್. ಪಾಟೀಲರ ಗುಂಪಿನಲ್ಲಿದ್ದರು. ಅವರನ್ನು ಕರೆತಂದು ಅರಸು ಗುಂಪಿಗೆ ಸೇರಿಸಿ, ಲೋಕಸಭೆಗೆ ಟಿಕೆಟ್ ಖಾತ್ರಿ ಮಾಡಿಸಿದೆ. ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದ ಬಂಗಾರಪ್ಪನನ್ನು ಕೆ.ಎಚ್.ಪಾಟೀಲ್ ಉದ್ದಕ್ಕೂ ವಿರೋಧಿಸುತ್ತಲೇ ಬಂದಿದ್ದರು. ಆದರೆ ಅರಸರಿಗೆ ಬಂಗಾರಪ್ಪನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕೆಂಬುದಿತ್ತು. ನಾನೇ ಮುಂದೆ ನಿಂತು ಬಂಗಾರಪ್ಪನನ್ನು ಪಕ್ಷಕ್ಕೆ ಕರೆತಂದೆ. ಅದು ಅರಸುಗೆ ಆನೆಬಲದಷ್ಟು ಧೈರ್ಯ ತಂದಿತು.
ಏತನ್ಮಧ್ಯೆ ಚುನಾವಣೆ ಬಂತು, ಶಿವಮೊಗ್ಗದಿಂದ ನೀನೇ ಕ್ಯಾಂಡಿಡೇಟ್ ಎಂದರು ಅರಸು. ಸ್ಪರ್ಧಿಸಲು ಸಿದ್ಧನಾದೆ. ಆದರೆ ನಾನೇ ಅರಸು ಗುಂಪಿಗೆ ಸೇರಿಸಿದ್ದ ಅದೇ ಬದರಿ ನಾರಾಯಣ, ಅದೇ ಬಂಗಾರಪ್ಪರೆ ನನಗೆ ಟಿಕೆಟ್ ತಪ್ಪಿಸುವ ಪ್ರಕ್ರಿಯೆಯಲ್ಲಿ ಮುಂದಿದ್ದರು. ಹಿರಿಯ ನಾಯಕರೆಲ್ಲ ಒಂದಾಗಿ ಮುಸ್ಲಿಮ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ ಅರಸು ‘ಐ ಯಾಮ್ ಹೆಲ್ಪ್‌ಲೆಸ್’ ಎಂದುಬಿಟ್ಟರು. ಕೊನೆಗೆ ದಿಲ್ಲಿಯ ಅಬ್ಸರ್‌ವರ್ಸ್‌ಗೆ ಕನ್ವಿನ್ಸ್ ಮಾಡಿ ಟಿಕೆಟ್ ಗಿಟ್ಟಿಸಿಕೊಂಡು ಹೊರಬಂದಾಗ, ಅರಸು, ‘ದಿಲ್ಲಿ ನಾಯಕರಿಗೆ ಏನ್ ಮೋಡಿ ಮಾಡಿಬಿಟ್ಟಯ್ಯಿ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಎಲ್ಲರ ವಿರೋಧದ ನಡುವೆಯೂ ಅಭ್ಯರ್ಥಿಯಾದೆ, ಗೆದ್ದೆ. ಗೆದ್ದಂತಹ ಸಂದರ್ಭದಲ್ಲಿ, ದಿಲ್ಲಿಗೆ ಹೋಗಿದ್ದ ಅಜೀಜ್ ಸೇಠ್ ಮತ್ತು ಎಫ್.ಎಂ.ಖಾನ್ ಫೋನ್ ಮಾಡಿ, ‘ನೀನು ಕ್ಯಾಬಿನೆಟ್ ಮಂತ್ರಿಯಾಗಲಿದ್ದೀಯ’ ಎಂದು ಅಭಿನಂದಿಸಿದರು. ಆದರೆ ಮಾರ್ಗಮಧ್ಯೆ, ಬಾಂಬೆಯಲ್ಲಿ ನಡೆದ ಲಿಕ್ಕರ್ ಲಾಬಿಯಿಂದಾಗಿ ಶಿವಮೊಗ್ಗ ಜಿಲ್ಲೆಯಿಂದ ಬಂಗಾರಪ್ಪ ಕ್ಯಾಬಿನೆಟ್ ಮಂತ್ರಿಯಾದರು, ನಾನು ಮಿನಿಸ್ಟರ್ ಆಫ್ ಸ್ಟೇಟ್ ಆದೆ. ಆಗಲೂ ಅರಸು ‘ಐ ಯಾಮ್ ಹೆಲ್ಪ್‌ಲೆಸ್’ ಅಂದರು. ಮಂತ್ರಿ ಮಾಡಿದ ಅರಸು ಅವರನ್ನು ಕಂಡು ಧನ್ಯವಾದಗಳನ್ನು ಅರ್ಪಿಸಿದೆ. ನಾನು ಕೇಳದಿದ್ದರೂ ಅವರೇ, ‘ಇಲ್ಲಯ್ಯ, ನಿನಗೆ ಫೈನಾನ್ಸ್ ಕೊಡಬೇಕು ಅಂತ ಆಗಿತ್ತು, ಆದರೆ ರಾಜಕಾರಣದಲ್ಲಿ ಒಂದೊಂದ್ಸಲ ಏನೇನೋ ಆಗುತ್ತೆ’ ಅಂದು ಸಮಾಧಾನಿಸಿದರು. ಕೊನೆಗೆ ಕಾಂಪನ್ಸೇಟ್ ಮಾಡಲು ನಾಲ್ಕೈದು ಖಾತೆ ಕೊಟ್ಟರು. ಸ್ವತಂತ್ರ ಮಂತ್ರಿಯಾದ ನಾನು ಮುಖ್ಯಮಂತ್ರಿ ಅರಸು ಅವರಿಗೆ ನನ್ನೆಲ್ಲ ಫೈಲ್‌ಗಳನ್ನು ಕಳುಹಿಸಿಕೊಡಬೇಕಾಗಿತ್ತು. ನನ್ನ-ಅವರ ನಡುವಿನ ಬಾಂಧವ್ಯ ಚೆನ್ನಾಗಿದ್ದರಿಂದ ಫೈಲ್‌ಗಳನ್ನು ನೋಡದೆ ಸಹಿ ಮಾಡ್ತಿದ್ರು. ಇಬ್ಬರಲ್ಲೂ ಸ್ವಾರ್ಥವಿರಲಿಲ್ಲ, ಹಣ ಮಾಡಬೇಕೆಂಬ ಆಸೆ ಇರಲಿಲ್ಲ. ಇಲ್ಲೂ ಕೂಡ ನಮ್ಮಿಬ್ಬರ ನಡುವಿನ ಮನಸ್ಥಿತಿಯೇ ಕೆಲಸ ಮಾಡಿದ್ದು.
ನಾನು ಹೆಗಡೆ ವಿರೋಧಿಯಲ್ಲ
ನಾನು ಮೊದಲ ಬಾರಿಗೆ ಶಾಸಕನಾದ ಸಂದರ್ಭದಲ್ಲಿ ನನಗೆ ವೀರೇಂದ್ರ ಪಾಟೀಲ್ ಮತ್ತು ಹೆಗಡೆಯವರೇ ನಾಯಕರು. ಅವರ ಜೊತೆ ಒಳ್ಳೆಯ ಸಂಪರ್ಕ ಏರ್ಪಟ್ಟಿತ್ತು. ಅರಸು ಮುಖ್ಯಮಂತ್ರಿಯಾಗಿದ್ದಾಗ ರಾಮಕೃಷ್ಣ ಹೆಗಡೆ ಮೇಲ್ಮನೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಇಂತಹ ಸಂದರ್ಭದಲ್ಲಿ ಅರಸು ನನ್ನನ್ನು ಕರೆಸಿಕೊಂಡು ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದು ಹಲವರಿಗೆ ವಿಚಿತ್ರವಾಗಿ ಕಂಡಿತ್ತು. ಅವರ ಸುತ್ತ ಇದ್ದವರು, ಇವನು ಎಲ್ಲಿಂದ ಬಂದ, ಯಾಕೆ ಬಂದ, ಈತ ಹೆಗಡೆ ಮನುಷ್ಯ, ಈತನನ್ನು ಯಾಕೆ ಸೇರಿಸ್ಕೊಂಡ್ರು ಅಂತೆಲ್ಲ ರಾಜಕೀಯ ವಲಯದಲ್ಲಿ ಚರ್ಚೆಗಳಾದವು. ಅರಸು ಅವರು ನನ್ನ ಕರೆದು, ‘ನನ್ನ ಕಿವಿಗೂ ಬಿತ್ತು. ಅಲ್ಲದೇ ಕೆಲವರು ನೇರವಾಗಿಯೇ ಬಂದು ದೂರಿದರು. ಅದೆಲ್ಲ ಇದ್ದದ್ದೆ ಬಿಡು’ ಎಂದವರು, ‘ನಾನು ಹೆಗಡೆ ವಿರೋಧಿಯಲ್ಲ’ ಅಂದರು. ನಾನೂ ಕೂಡ ಹೆಗಡೆ ಪರವಲ್ಲ, ಅರಸು ವಿರೋಧಿಯಲ್ಲ ಎನ್ನುವುದು ಅವರಿಗೂ ಗೊತ್ತಿತ್ತು. ಈ ಹೆಗಡೆ ವಿರೋಧಿಯಲ್ಲ ಅಂದರಲ್ಲ, ಅದನ್ನು ಅರಸು ತಮ್ಮ ಸಹಜ ನಡವಳಿಕೆಗಳಿಂದಲೇ ತೋರಿದ್ದರು. ಅದು ಅವರ ದೊಡ್ಡ ಗುಣ. ತುರ್ತು ಪರಿಸ್ಥಿತಿ ಸಮಯದಲ್ಲಿ ಹೆಗಡೆಯವರನ್ನು ಬಂಧಿಸಿದರು, ಬೆಳಗಾಂ ಜೈಲಿಗೆ ಹಾಕಿದರು. ಅದೂ ಕೂಡ ಕೇಂದ್ರದಿಂದ ಬಂದ ಸೂಚನೆಯ ಮೇರೆಗೆ ಮಾತ್ರ. ಹೆಗಡೆಯವರ ಆರೋಗ್ಯ ಸರಿ ಇರಲಿಲ್ಲ. ಬೆನ್ನು ನೋವು ಜಾಸ್ತಿಯಾಗಿತ್ತು. ಅವರ ಮನೆಯವರು ನನ್ನ ಬಳಿ ಬಂದು, ಏನಾದ್ರು ಮಾಡಿ ಬೆಂಗಳೂರಿಗೆ ಹಾಕಿಸಿ, ಅಲ್ಲಿ ಚಿಕಿತ್ಸೆಗೆ, ನಾವು ಹೋಗಿಬರಲು ಅನುಕೂಲವಾಗುತ್ತದೆ ಎಂದು ಕೇಳಿಕೊಂಡರು. ನಾನು ಅರಸು ಅವರಿಗೆ ತಿಳಿಸಿದೆ. ಅದಕ್ಕೆ ಅವರು ಒಪ್ಪಿ ಬೆಂಗಳೂರಿಗೆ ಹಾಕಿಸಿಕೊಟ್ಟರು. ಇಷ್ಟಕ್ಕೇ ಸುಮ್ಮನಾಗದ ಅರಸು, ನನ್ನ ಗಮನಕ್ಕೆ ತರದೆ ಹೆಗಡೆಯವರನ್ನು ಪೆರೋಲ್ ಮೇಲೆ ಬಿಡುವಂತೆ ಜೈಲರ್‌ಗೆ ಪತ್ರ ಬರೆದಿದ್ದರು. ಆದರೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳ ಪತ್ರಕ್ಕೆ ಪ್ರತಿಯಾಗಿ ಪೆರೋಲ್ ಬೇಡ ಎಂದು ಪತ್ರ ಬರೆದಿದ್ದರು. ಒಂದು ದಿನ ಅರಸು ಫೈಲ್ ಹಿಡಿದುಕೊಂಡು ನನ್ನ ಬಳಿ ಬಂದರು, ಹೆಗಡೆಯವರ ಪತ್ರ ತೋರಿಸಿದರು, ‘ನೋಡಪ್ಪ ನಿನ್ನ ಹೆಗಡೆ’ ಎಂದರು. ಇದಾವುದೂ ಹೆಗಡೆಗೂ ಗೊತ್ತಿಲ್ಲ, ಅರಸು ವಿರೋಧಿಗಳಿಗೂ ಗೊತ್ತಾಗಲಿಲ್ಲ. ಮಾಡಿದ್ದನ್ನು ಹೇಳಿಕೊಳ್ಳದ ಗುಣ ಅರಸು ಅವರಲ್ಲಿತ್ತು. ಆದರೆ ಜಗತ್ತು ಅದಕ್ಕೆ ವಿರುದ್ಧವಾಗಿ ಯೋಚಿಸುತ್ತಿತ್ತು.
ವರುಣ ಮರಣದ ಪಾಠ
ಮುಖ್ಯಮಂತ್ರಿ ದೇವರಾಜ ಅರಸು ಅವರ ಮಹತ್ವದ ಯೋಜನೆಗಳಲ್ಲೊಂದಾದ ವರುಣಾ ನಾಲಾ ಯೋಜನೆಯಿಂದ ಮಂಡ್ಯ ಮರುಭೂಮಿಯಾಗುತ್ತದೆ, ನೀರಿಲ್ಲದ ಬೆಂಗಾಡಾಗುತ್ತದೆ ಎಂದು ನಮ್ಮ ಪಕ್ಷದವರೇ ಆದ ಎಸ್.ಎಂ.ಕೃಷ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಂಡ್ಯದಲ್ಲಿ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರಕ್ಕೆ ಮುಜುಗರವನ್ನುಂಟುಮಾಡಿದರು.
ಇದನ್ನು ಕಂಡು ನಾನು, ಅರಸು ಅವರಲ್ಲಿಗೆ ಹೋಗಿ ವರುಣ ಯೋಜನೆಯನ್ನು ಕೈಬಿಡಿ ಎಂದೆ. ಅದಕ್ಕವರು ಊಟ ಮಾಡಿಕೊಂಡು ರಾತ್ರಿಗೆ 10ಕ್ಕೆ ಮನೆಗೆ ಬಾ ಎಂದರು. ನಾನು ಹೋಗುವಷ್ಟರಲ್ಲಿ ಅಲ್ಲೊಂದು ಕ್ಲಾಸ್ ರೂಮ್ ರೆಡಿಯಾಗಿತ್ತು. ಒಂದು ಬ್ಲಾಕ್ ಬೋರ್ಡಿತ್ತು. ಆ ಬೋರ್ಡಿನ ಮೇಲೆ ವರುಣಾ ನಾಲೆಯ ಚಿತ್ರವಿತ್ತು. ಅದು ಎಲ್ಲಿಂದ ಶುರುವಾಗಿ ಎಲ್ಲಿಗೆ ಮುಗಿಯುತ್ತದೆ ಎಂಬುದೆಲ್ಲವನ್ನು ಬಿಡಿಸಿದ್ದರು. ಒಬ್ಬ ಸಿವಿಲ್ ಎಂಜಿನಿಯರ್‌ನಂತೆ ಮ್ಯಾಪ್ ತಯಾರಿಸಿದ್ದರು. ನೋಡು, ಇದು ಚಾಮರಾಜನಗರ ಜಿಲ್ಲೆಯ ಜನರ ದಾಹ ತಣಿಸಲು ರೂಪಿಸಿರುವ ಯೋಜನೆ. ಇದರಿಂದ ಮಂಡ್ಯದ ರೈತರಿಗೆ ನಯಾಪೈಸೆಯ ನಷ್ಟವೂ ಇಲ್ಲ. ನಾನು ರೈತರ ವಿರೋಧಿಯಲ್ಲ, ನಾನೂ ಕೃಷಿಕನಾಗಿದ್ದವನು, ಕೃಷಿ ಕಷ್ಟಗಳನ್ನು ಕಂಡುಂಡವನು. ನಾನೇ ಅವರ ಬಾಯಿಗೆ ಮಣ್ಣಾಕಲು ಮುಂದಾಗುತ್ತೇನೆಯೇ. ನಿನಗೆ ಬುದ್ಧಿ ಇದ್ದರೆ ಇದರಲ್ಲಿ ತಪ್ಪೇನಿದೆ ಹೇಳು ತಿದ್ದಿಕೊಳ್ಳುತ್ತೇನೆ ಎಂದರು. ಚಿಕ್ಕ ಮಕ್ಕಳಿಗೆ ಪಾಠ ಹೇಳುವಂತೆ ವಿವರಿಸಿದ್ದರು. ನನಗೆ ಎಸ್.ಎಂ.ಕೃಷ್ಣರ ರಾಜಕೀಯ ನಡೆ ಅರ್ಥವಾಗಿತ್ತು. ಅರ್ಥವಾಗದ ಮಂಡ್ಯದ ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು.
ಅಮಾಯಕನಿಗೆ 10 ಸಾವಿರ
ಅರಸು ಭ್ರಷ್ಟರಾಗಿದ್ದರು, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದರು ಎಂದು ದೇಶವ್ಯಾಪಿ ಸುದ್ದಿ ಹಬ್ಬಿತ್ತು. ನಾನು ಅವರ ಬುಡದಲ್ಲೇ ಇದ್ದನಲ್ಲ, ಮುಖ್ಯಮಂತ್ರಿಗಳ ಕಚೇರಿಯಲ್ಲಿ, ಮನೆಯಲ್ಲಿಯೇ ಓಡಾಡಿಕೊಂಡಿದ್ದನಲ್ಲ- ನನ್ನ ಗಮನಕ್ಕೆ ಬರದೆ ಇರುತ್ತಿತ್ತೆ?
ಒಂದು ದಿನ ಅವರ ಕಲ್ಲಳ್ಳಿಯ ಪಕ್ಕದ ಊರಿನವನು ಅಂತ ಕಾಣುತ್ತೆ, ಅರಸು ಅವರನ್ನು ಕಾಣಲು ಬಂದ. ಆತನನ್ನು ನೋಡಿದರೆ ಅವನ ಸ್ಥಿತಿ ಅರ್ಥವಾಗುವಂತಿತ್ತು. ಅರಸು ಆತನ ಹೆಸರಿಡಿದು ಕರೆದು, ಏನೋ ಅಂದರು. ಆತ ಮಗಳ ಮದುವೆ ಇಟ್ಕಂಡಿದೀನಿ... ಅಂದು ಸುಮ್ಮನಾದ. ಆದರೆ ಆತನಿಗಿಂತ ದಿಕ್ಕೆಟ್ಟ ಸ್ಥಿತಿ ಅರಸು ಅವರದು. ಏಕೆಂದರೆ ಅವರು ಜೇಬಿನಲ್ಲಿ ಹಣ ಇಟ್ಟುಕೊಂಡಿದ್ದೇ ಇಲ್ಲ. ಅಕಸ್ಮಾತ್ ಇದ್ದರೂ ಅದು ಯಾರಿಗಾದರೂ ಕೊಟ್ಟುಬಿಡುತ್ತಿದ್ದರು. ಅವತ್ತು ಆ ಬಡವನ ಅದೃಷ್ಟಕ್ಕೆ ಬಿಡಿಗಾಸೂ ಇರಲಿಲ್ಲ. ತಡಕಾಡಿದರು, ಅಲ್ಲಿ ಇಲ್ಲಿ ನೋಡಿದರು, ಇರಬೇಕಲ್ಲ, ಎಲ್ಲೂ ಇಲ್ಲ. ಬೇಸರದಲ್ಲಿಯೇ, ಏ ಇಲ್ಲ ಹೋಗೋ ಅಂದರು. ಆತನೂ ಮರು ಮಾತಾಡದೆ, ಮನೆಯಿಂದ ಹೊರಗೆ ಹೋಗಿಯೇಬಿಟ್ಟ. ಆತ ಅತ್ತ ಹೋಗುವುದಕ್ಕೂ ಇತ್ತ ಯಾರೋ ಒಬ್ಬರು ಬಂದು 10 ಸಾವಿರ ಕೊಡುವುದಕ್ಕೂ ಸರಿಯಾಗಿತ್ತು. ತಕ್ಷಣ ಅರಸು ನನ್ನ ಕರೆದು, ‘ಏ ನೋಡು, ಈಗ ಹೊರಗೆ ಹೋದನಲ್ಲ, ಅವನ್ನ ಹುಡುಕಿ ಕರೆದುಕೊಂಡು ಬಾ’ ಎಂದು ಕಳುಹಿಸಿದರು. ನನ್ನ ಅದೃಷ್ಟಕ್ಕೆ ಆತ ಕಾಂಪೌಂಡ್ ಬಿಟ್ಟು ಸ್ವಲ್ಪ ದೂರು ನಡೆದಿದ್ದ. ನಾನು ಕೂಗಿ ಕರೆದೆ, ಬಂದ. ಅರಸು ಮುಂದೆ ನಿಂತ. ಅರಸು ಆಗತಾನೆ ಯಾರೋ ಕೊಟ್ಟುಹೋಗಿದ್ದರಲ್ಲ 10 ಸಾವಿರ, ತೆಗೆದು ಆತನ ಕೈಗಿತ್ತರು. ಆತನೂ ಮಾತನಾಡಲಿಲ್ಲ, ಇವರೂ ಮಾತನಾಡಲಿಲ್ಲ. ಆತ ಕೇಳಿಕೊಂಡು ಬಂದದ್ದು ಐನೂರೋ ಸಾವಿರವೋ. ಅರಸು ಕೊಟ್ಟಿದ್ದು 10 ಸಾವಿರ. ಅದು ಆ ಕಾಲಕ್ಕೆ ಬಹಳ ದೊಡ್ಡ ಮೊತ್ತ. ಆ ಮೊತ್ತ ಗಿತ್ತ ಎಲ್ಲ ಅರಸುಗೆ ಗೊತ್ತಿರಲಿಲ್ಲ.
ಅರಸು ಬಹಳ ಕಡಿಮೆ ಸಂಖ್ಯೆಯುಳ್ಳ ಸಮುದಾಯದಿಂದ ಬಂದವರು, ಬಹುಸಂಖ್ಯಾತರನ್ನು ಅಧಿಕಾರದಿಂದ ದೂರವಿಟ್ಟಿದ್ದರು, ತಮ್ಮ ಕುರ್ಚಿ ಉಳಿಸಿಕೊಳ್ಳಲು ಶಾಸಕರನ್ನು ಹಿಡಿದಿಟ್ಟುಕೊಂಡಿದ್ದರು, ಅವರ ಬೇಕು-ಬೇಡಗಳನ್ನು ಪೂರೈಸುತ್ತಿದ್ದರು ಎಂಬುದೆಲ್ಲ ಸುಳ್ಳು. ಅವರು ಎಂದೂ ಹಣದ ಬಲದಿಂದ ರಾಜಕಾರಣ ಮಾಡಿದವರಲ್ಲ. ಕೆಲಸ ಮತ್ತು ತನ್ನತನದ ಬಲದಿಂದ ರಾಜಕಾರಣ ಮಾಡಿದವರು. ಈಗ ಹಣದ್ದೇ ರಾಜಕಾರಣ, ರಾಜಕಾರಣದ ಸಂಸ್ಕೃತಿ ಬದಲಾಗಿದೆ. ಕ್ಯಾಬರೆ ನೋಡಿದ ಅರಸು
ಅರಸು ಮುಖ್ಯಮಂತ್ರಿಗಳಾಗಿದ್ದಾಗ ಬಿ.ಎನ್.ಗರುಡಾಚಾರ್ ಸಿಟಿ ಪೊಲೀಸ್ ಕಮಿಷನರ್ ಆಗಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ಕ್ಲಬ್‌ಗಳಲ್ಲಿ ನಡೆಯುತ್ತಿದ್ದ ಕ್ಯಾಬರೆ ಡಾನ್ಸ್ ಅನ್ನು ಕಮಿಷನರ್ ಗರುಡಾಚಾರ್ ಬ್ಯಾನ್ ಮಾಡಿದರು. ಕ್ಯಾಬರೆ ಡಾನ್ಸರ್‌ಗಳು ನಮಗೆ ಗೊತ್ತಿರುವುದೇ ಈ ಕಸುಬು, ಇದನ್ನು ಬಿಟ್ಟರೆ ಬದುಕುವುದು ಹೇಗೆ ಎಂದು ಸಂಬಂಧಪಟ್ಟವರಿಗೆ ದೂರು ಕೊಟ್ಟರು. ಮನವಿ ಮಾಡಿಕೊಂಡರು. ಪ್ರತಿಭಟಿಸಿದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಅರಸು ಗಮನಕ್ಕೆ ಬಂತು. ಅವರು ‘ಏನಿದು ಕ್ಯಾಬರೆ ಡಾನ್ಸ್’ ಅಂತ ಕೇಳಿದರು. ಅವರ ಪಕ್ಕದಲ್ಲಿದ್ದ ಒಬ್ಬ ಉದ್ಯಮಿ, ಅರಸು ಅವರಿಗೆ ಕ್ಯಾಬರೆ ಕಂಡರೆ ಇಷ್ಟ ಇದೆ, ಡಾನ್ಸರ್‌ಗಳ ಬಗ್ಗೆ ಆಸೆ ಇದೆ ಅಂತ ಭಾವಿಸಿದ. ‘ಅದಕ್ಕೇನಂತೆ ಸಾರ್, ಸ್ಪೆಷಲ್ ಪ್ರೊಗ್ರಾಂ ಅರೇಂಜ್ ಮಾಡ್ತೀನಿ ನೋಡಿ’ ಅಂದ. ಇವರಿಗೂ ಅದೇನು ಅಂತ ಗೊತ್ತಿಲ್ಲವಲ್ಲ, ಆಗಲಿ ಅಂದರು.
ನಗರದಲ್ಲಿ ಬ್ಯಾನ್, ಮುಖ್ಯಮಂತ್ರಿಗಳಿಗಾಗಿ ಗೌಪ್ಯ ಸ್ಥಳದಲ್ಲಿ ಕ್ಯಾಬರೆ ಡಾನ್ಸ್ ಅರೇಂಜ್ ಆಯಿತು. ಅರಸು ಬಂದರು, ಜೊತೆಯಲ್ಲಿ ಕೆಲವರಿದ್ದರು. ಆ ಉದ್ಯಮಿ ಜೋಷ್‌ನಲ್ಲಿದ್ದ. ಲೈಟ್ಸ್ ಆಫ್ ಆಗಿ ಕ್ಯಾಬರೆ ಡಾನ್ಸ್ ಶುರುವಾಯಿತು. ಅರಸು ನೋಡಿದ್ದೆಲ್ಲ ಆದಮೇಲೆ, ‘ಹೊಟ್ಟೆಪಾಡಿಗಾಗಿ ಆ ಹೆಣ್ಮಕ್ಕಳು ಎಷ್ಟೆಲ್ಲ ಮೈ ಕುಣಿಸುತ್ತಾರಲ್ಲ, ಪಾಪ. ಆ ಹುಡುಗಿಯರಿಗೆ ಹತ್ತದಿನೈದು ಸಾವಿರ ಹಣ ಕೊಟ್ಟು ಕಳಿಸಿ’ ಎಂದು ಹೇಳಿ ಎದ್ದುಹೋದರು. ಆ ಶ್ರೀಮಂತ ಉದ್ಯಮಿಗೆ ಹತ್ತಿದ್ದ ಜೋಷ್ ಜರ್ರಂತ ಇಳಿದುಹೋಗಿತ್ತು.
ಮಾರನೆ ದಿನ ಕಮಿಷನರ್ ಗರುಡಾಚಾರ್‌ರನ್ನು ಕರೆಸಿಕೊಂಡ ಸಿಎಂ ಅರಸು, ಕ್ಯಾಬರೆ ಡಾನ್ಸ್ ಬ್ಯಾನ್ ತೆರವು ಮಾಡಲು ಹೇಳಿದರು. ಅವರು ಆಗಲಿ ಸರ್ ಎಂದರು. ಮತ್ತೆ ಕ್ಲಬ್‌ಗಳಲ್ಲಿ ಕ್ಯಾಬರೆ ಚಾಲೂ ಆಯಿತು. ಅಲ್ಲಿ ಅರಸು ನೋಡಿದ್ದು ಡಾನ್ಸ್‌ನಲ್ಲ, ಮನರಂಜನೆಯನ್ನಲ್ಲ, ವಿಕೃತತೆಯನ್ನೂ ಅಲ್ಲ, ಹುಡುಗಿಯರ ಕರುಣಾಜನಕ ಸ್ಥಿತಿಯನ್ನ. ಅದಕ್ಕೆ ಅವರ ಮನ ಮಿಡಿಯಿತು, ಹಣ ಕೊಡಿಸಿದರು, ಬ್ಯಾನ್ ತೆರವು ಮಾಡಿಸಿದರು.
ಅಧಿಕಾರದ ಅಮಲೇರಿದ ಅರಸು ಎರಡನೆ ಸಲ ವಿಧಾನಸಭಾ ಚುನಾವಣೆಯನ್ನು ಗೆದ್ದಿದ್ದು, ಚಿಕ್ಕಮಗಳೂರಿನ ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಯನ್ನು ಗೆಲ್ಲಿಸಿಕೊಂಡು ಬಂದಿದ್ದು ಅರಸು ಅವರಿಗೆ ತಾನೊಬ್ಬ ರಾಷ್ಟ್ರೀಯ ನಾಯಕ ಎಂಬ ಭ್ರಮೆ ಹುಟ್ಟಿಸಿತು. ಅದಕ್ಕೆ ಸರಿಯಾಗಿ ದಿಲ್ಲಿಯ ನಾಯಕರು (ನಾನು ಇವರನ್ನು ರಣಹದ್ದುಗಳು ಎನ್ನುತ್ತೇನೆ) ಗಾಳಿ ಊದಿದರು. ಅರಸು ಉಬ್ಬಿ ಹೋದರು. ಆ ಸಂದರ್ಭವೂ ಹಾಗೇ ಇತ್ತು. ಕಾಂಗ್ರೆಸ್ ಧೂಳೀಪಟವಾಗಿ, ಇಂದಿರಾ ಗಾಂಧಿ ಸೋತು ಸದ್ದಿಲ್ಲದಂತಾಗಿದ್ದರು. ಇದೆಲ್ಲದರಿಂದಾಗಿ ಅರಸು, ಇಂದಿರಾ ಗಾಂಧಿಯವರನ್ನು ಅಂಡರ್ ಎಸ್ಟಿಮೇಟ್ ಮಾಡಿ ಮಾತನಾಡತೊಡಗಿದರು. ತಮ್ಮನ್ನು ತಾವು ಓವರ್ ಎಸ್ಟಿಮೇಟ್ ಮಾಡಿಕೊಂಡು ರಾಷ್ಟ್ರೀಯ ನಾಯಕನಂತೆ ಪೋಸು ಕೊಡತೊಡಗಿದರು. ತಮ್ಮ ಮಿತಿಯನ್ನು ಅರಿಯದಾದರು. ಮುಂದುವರೆದು ಯಾವುದೋ ಕ್ಷುಲ್ಲಕ ಕಾರಣಕ್ಕೆ ಅನಗತ್ಯವಾಗಿ ಇಂದಿರಾ ಗಾಂಧಿ ಜೊತೆ ರಬ್ ಮಾಡಿಕೊಂಡರು. ಇದು ಅರಸುಗೆ ಬೇಕಿರಲಿಲ್ಲ. ಅಧಿಕಾರದ ಅಮಲು ಏರಿತ್ತು. ಅಹಂ ಅವರನ್ನು ಆಳುತ್ತಿತ್ತು. ಅರಸು ಅವರ ಈ ಮನಸ್ಥಿತಿಯನ್ನು ಅರಿತು ಅಧಿಕಾರ ಗಿಟ್ಟಿಸಿದವರು ಗುಂಡೂರಾವ್. ಅರಸು ಮನೆಯಲ್ಲಿದ್ದವರೇ ಗುಂಡೂರಾವ್‌ರ ಮಾಹಿತಿದಾರರಾಗಿದ್ದರು. ಅದರ ಬಲದಿಂದ ಅವರು ರಾಜಕೀಯ ದಾಳ ಉರುಳಿಸತೊಡಗಿದರು. ಹೈಕಮಾಂಡ್ ಕೂಡ ಗುಂಡೂರಾವ್ ಪರವಿತ್ತು. ಅರಸು ವಿರುದ್ಧವಿದ್ದ ಸಂಜಯ್ ಗಾಂಧಿ ಗುಂಡೂರಾವ್ ಬೆಂಬಲಕ್ಕೆ ನಿಂತರು. ಹೀಗಾಗಿ ಅರಸು ಡೌನ್ ಫಾಲ್ ಅಲ್ಲಿಂದಲೇ ಶುರುವಾಗಿತ್ತು. ಅರಸು ಮತ್ತು ಸನ್ಯಾಸಿ
ಕೊನೆ ಕೊನೆಗೆ ಅರಸು ಮಾತು ಕೇಳದಂತಾದರು. ಮೊಂಡುತನ ಹೆಚ್ಚಾಯಿತು. ಹಲವಾರು ರಾಜಕೀಯ ತಪ್ಪು ನಡೆಗಳನ್ನಿಟ್ಟರು. ಇಂದಿರಾ ಗಾಂಧಿಯವರಿಂದ ದೂರವಾಗಿ, ಹೊಸ ಪಕ್ಷ ಕಟ್ಟಿದರು, ಚುನಾವಣೆಗೆ ಸ್ಪರ್ಧಿಸಿ ಸೋತು ಸಣ್ಣವರಾದರು. ಇದರಿಂದೆಲ್ಲ ಪಾಠ ಕಲಿಯಬೇಕಾಗಿದ್ದ ಅರಸು, ಇನ್ನಷ್ಟು ಒರಟಾಗಿ ವರ್ತಿಸತೊಡಗಿದರು. ಒಂದು ದಿನ ನಾನು, ‘ನೀವು ಮೊದಲು ಹೀಗಿರಲಿಲ್ಲ, ನಿಮ್ಮ ಆಲೋಚನೆಗಳಿಗೆ ವಿರುದ್ಧವಾಗಿ ಯೋಚಿಸಿಕೊಂಡು ಬಾ ಎನ್ನುತ್ತಿದ್ದಿರಿ, ನಾನು ಹೇಳಿದ್ದನ್ನು ಗೌರವಿಸುತ್ತಿದ್ದಿರಿ, ಈಗ ನಿಮ್ಮ ನಡೆ ಸರಿಯಿಲ್ಲ ಎಂದರೆ ಒಪ್ಪಿಕೊಳ್ಳಲು ಸಿದ್ಧರಿಲ್ಲ, ಇದು ನಾನು ನೋಡಿದ ಅರಸು ಅಲ್ಲವೇ ಅಲ್ಲ’ ಎಂದೆ. ಇದು ಕೂಡ ರಾತ್ರಿಯೇ ನಡೆದ ಮಾತುಕತೆ. ಆಗಲೇ ಬೆಳಗಿನ ಜಾವ ಮೂರೂವರೆಯಾಗಿತ್ತು. ಆಗ ಅರಸು, ಒಂದು ಕತೆ ಹೇಳ್ತೀನಿ ಕೇಳು ಎಂದರು.
ಒಂದು ಹಳ್ಳಿಯ ಹೊರಗಡೆ ಒಬ್ಬ ಸನ್ಯಾಸಿ ಧ್ಯಾನಕ್ಕೆ ಕುಳಿತಿದ್ದ. ಹಳ್ಳಿಯ ಒಳಗಡೆ ಒಬ್ಬ ಹುಡುಗಿ ತನ್ನ ಬಾಯ್ ಫ್ರೆಂಡ್ ಜೊತೆ ಕೂಡಿ ಗರ್ಭಿಣಿಯಾಗಿದ್ದಳು. ರಕ್ಷಣೆಯ ಮಾರ್ಗ ತೋಚದ ಹುಡುಗಿ ಈ ಬಸಿರಿಗೆ ಈ ಸನ್ಯಾಸಿಯೇ ಕಾರಣ ಎಂದುಬಿಟ್ಟಳು. ಊರಿನ ಜನರೆಲ್ಲ ಸೇರಿ ಸನ್ಯಾಸಿ ಮುಂದೆ ನಿಂತು, ಏನಿದು ಅಂದರು. ಆತ ಅಷ್ಟೇ ಕೂಲಾಗಿ ‘ಈಸ್ ಇಟ್ ಸೋ’ ಅಂದ. ಹಳ್ಳಿಯ ಜನಕ್ಕೆ ಉರಿದು ಹೋಯಿತು. ಇದಕ್ಕೆ ಶಿಕ್ಷೆ ಏನು ಗೊತ್ತ, ಈ ಹುಡುಗಿಯನ್ನು ಇಲ್ಲೇ ಬಿಟ್ಟು ಹೋಗ್ತೀವಿ, ಈಕೆಯ ಜವಾಬ್ದಾರಿ ನಿನ್ನದೆ ಎಂದರು. ಆಗಲೂ ಸನ್ಯಾಸಿ ‘ಈಸ್ ಇಟ್ ಸೋ’ ಅಂದ. ಆಶ್ರಮದಲ್ಲಿ ಹುಡುಗಿ ಮತ್ತು ಸನ್ಯಾಸಿ ಅವರವರ ಪಾಡಿಗೆ ಅವರಿದ್ದರು. ಕಾಲ ಉರುಳಿತು. ಊರೊಳಗೆ ಗುಸುಗುಸು ಶುರುವಾಗಿ ಅಸಲಿ ವಿಷಯ ಹೊರಬಿತ್ತು. ಮತ್ತೆ ಜನರೆಲ್ಲ ಸನ್ಯಾಸಿಯ ಬಳಿ ಬಂದರು. ಈ ಹುಡುಗಿ ಗರ್ಭಿಣಿಯಾಗಿದ್ದು ಈ ಹುಡುಗನಿಂದ, ಕರೆದುಕೊಂಡು ಹೋಗ್ತೀವಿ ಅಂದರು. ಆಗಲೂ ಆ ಸನ್ಯಾಸಿ ಅಷ್ಟೇ ಕೂಲಾಗಿ ‘ಈಸ್ ಇಟ್ ಸೋ’ ಅಂದ.
ನೋಡು ಶ್ರೀನಿವಾಸ್ ನಾನು ಈ ಸನ್ಯಾಸಿ ಥರ, ಹೆಲ್ಪ್‌ಲೆಸ್ ಅಂದರು. ಹೌದು, ಅವರ ಮಾತಿನಲ್ಲಿ ಸತ್ಯವಿತ್ತು, ಹೆಲ್ಪ್ ಲೆಸ್ ಆಗಿದ್ದರು. ನಿಜ, ಆದರೆ...
ಮೇಡಂ ಕಾಲಿಂಗ್
ಅರಸು ಅಧಿಕಾರದಿಂದ ಕೆಳಗಿಳಿದು, ಚಾರ್ಮ್ ಕಳೆದುಕೊಂಡು ದಿಲ್ಲಿ ಮಟ್ಟದ ನಾಯಕರೊಂದಿಗೆ ವ್ಯವಹರಿಸುತ್ತಿದ್ದಾಗ; ಅತ್ತ ದಿಲ್ಲಿಯಲ್ಲಿ ಸಂಜಯ್‌ಗಾಂಧಿಯ ಅಕಾಲಿಕ ಮರಣದಿಂದ ಇಂದಿರಾ ಗಾಂಧಿ ಕೂಡ ಜರ್ಝರಿತಗೊಂಡಿದ್ದರು. ಹಾಗೆಯೇ ಕರ್ನಾಟಕದಲ್ಲಿ ಗುಂಡೂರಾವ್ ಆಡಳಿತದಿಂದ ಕಾಂಗ್ರೆಸ್ಸಿಗೆ ಕೆಟ್ಟ ಹೆಸರು ಬಂದಿತ್ತು. ಆ ಸಮಯದಲ್ಲಿ, ಮೇಡಂಗೆ ತೀರಾ ಹತ್ತಿರವಿರುವ ವ್ಯಕ್ತಿಯೊಬ್ಬರಿಂದ ನನಗೆ ಬುಲಾವ್ ಬಂತು. ಅವರು, ‘ಮೇಡಂ ಅರಸು ಬಗ್ಗೆ ಸಾಫ್ಟ್ ಆಗಿದ್ದಾರೆ. ಮತ್ತೆ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರಿಗೂ ಅರಸು ಶಕ್ತಿ ಏನೆಂದು ಅರ್ಥವಾಗಿದೆ. ನೀವು ಅರಸುಗೆ ಹತ್ತಿರದವರು, ಮಾತಾಡಿ ಒಪ್ಪಿಸಲು ಸಾಧ್ಯವೇ’ ಎಂದರು.
ನಾನು ಆಗಲಿ ಎಂದು ಅರಸು ಅವರನ್ನು ಕಂಡು ವಿಷಯ ತಿಳಿಸಿದೆ. ಮೊದಲಿಗೆ ಸಾಧ್ಯವೇ ಇಲ್ಲ ಎಂದವರು, ಕೊನೆಗೆ ನನ್ನ ಬಲವಂತಕ್ಕೆ ಒಪ್ಪಿ ದಿಲ್ಲಿಗೆ ಬರಲು, ಮೇಡಂ ಮೀಟ್ ಮಾಡಲು ಒಪ್ಪಿದರು. ನಾನು ಅವರ ಜೊತೆ ದಿಲ್ಲಿಗೆ ಹೋದೆ. ನಾಳೆ ಸಂಜೆಗೆ ಮೇಡಂ ಇಂದಿರಾ ಗಾಂಧಿಯೊಂದಿಗೆ ಅರಸು ಮಾತುಕತೆ ಸಮಯ ನಿಗದಿಯಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಅರಸು ಅವರು ಭೀವಂಡಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ವಾಜಪೇಯಿಯೊಂದಿಗೆ ವೇದಿಕೆ ಹಂಚಿಕೊಂಡು, ಇಂದಿರಾ ಗಾಂಧಿಯನ್ನು ಬಾಯಿಗೆ ಬಂದಂತೆ ಬಯ್ದರು. ಅದು ಮಾರನೆ ದಿನ ಎಲ್ಲ ಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಗಿ ಅಚ್ಚಾಗಿತ್ತು. ಅದನ್ನು ಇಂದಿರಾ ಗಾಂಧಿಯ ಸುತ್ತ ಇದ್ದ ಜನ ಅವರ ಬ್ರೇಕ್ ಫಾಸ್ಟ್ ಟೈಮಿಗೆ ಸರಿಯಾಗಿ ಅವರ ಗಮನಕ್ಕೆ ತಂದರು. ಕೋಪಗೊಂಡ ಮೇಡಂ ಭೇಟಿಯನ್ನು ರದ್ದು ಮಾಡಿದರು. ಅಲ್ಲಿಗೆ ಇಂದಿರಾ-ಅರಸು ಸಂಬಂಧ ಕೊನೆಯಾಯಿತು. ನನಗನ್ನಿಸುವ ಪ್ರಕಾರ ಅರಸು ಮತ್ತೆ ಕಾಂಗ್ರೆಸ್‌ಗೆ ಬಂದರೆ, ಅಧಿಕಾರ ಕೈತಪ್ಪುವುದನ್ನ ಅರಿತ ಕರ್ನಾಟಕ ಕಾಂಗ್ರೆಸ್ಸಿಗರೇ, ಭೀವಂಡಿ ಸಭೆ, ಮಾಧ್ಯಮಗಳಲ್ಲಿ ಸುದ್ದಿ, ಮೇಡಂ ಗಮನಕ್ಕೆ... ಎಲ್ಲವನ್ನು ನೀಟಾಗಿ ಪ್ಲಾನ್ ಮಾಡಿದ್ದರು. ಅದರಲ್ಲಿ ಅವರು ಯಶಸ್ವಿಯೂ ಆದರು. ದುರಂತವೆಂದರೆ, ಅವರೆಲ್ಲ ಅರಸು ಗರಡಿಯಲ್ಲಿ ಪಳಗಿದ ಪೈಲ್ವಾನರೆ!