ಇದು ಪರೀಕ್ಷಾ ಸಮಯ
ಯುರೋಪಿನಲ್ಲಿ ಮಧ್ಯಯುಗದಲ್ಲಿ ಒಬ್ಬ ವಿದ್ಯಾರ್ಥಿ ಒಂದು ವರ್ಷದ ಅವಯಲ್ಲಿ ಶೈಕ್ಷಣಿಕವಾಗಿ ಎಷ್ಟು ಬೆಳೆದಿದ್ದಾನೆ ಎಂದು ತಿಳಿಯಲು ತಲೆಯ ಸುತ್ತಳತೆಯನ್ನು ಅಳೆಯುತ್ತಿದ್ದರೆಂದು ಕೇಳಿದ್ದೆ. ಪ್ರಾಚೀನ ಕಾಲದಲ್ಲಿ ಗುರುಕುಲದಲ್ಲಿ ಹದಿನಾಲ್ಕು ವರ್ಷ ‘ಕಲಿತು’ ಹೊರಬೀಳುತ್ತಿದ್ದ ವಿದ್ಯಾರ್ಥಿಯ ಪಾಡು ಭಿನ್ನವೇನಾಗಿರಲಿಲ್ಲ. ‘ಗುರು ವೌನವಾಗಿ ವ್ಯಾಖ್ಯಾನ ಮಾಡುತ್ತಾನೆ; ಶಿಷ್ಯರು ಸಂಶಯವಿಲ್ಲದೆ ಜ್ಞಾನಿಗಳಾಗುತ್ತಾರೆ’ ಎನ್ನುವ ಮಾತಿದೆ. ಗುರುವಿನ ಮನೆಯಲ್ಲಿ ಹಗಲಿಡೀ ಈ ಶಿಷ್ಯ, ಗುರುಪತ್ನಿ ಮತ್ತು ಮಕ್ಕಳ ಸೇವೆ ಮಾಡುತ್ತ ಊಳಿಗದವನಂತೆ ಶ್ರಮಿಸಬೇಕಿತ್ತು. ದಿನದ ಕಾರ್ಯಭಾರ ಮುಗಿದ ಮೇಲೆ ಮನಸ್ಸಾದರೆ ಗುರು ಶಿಷ್ಯನಿಗೆ ಸ್ವಲ್ಪಸ್ವಲ್ಪವೇ ಪಾಠ ಮಾಡುತ್ತಿದ್ದ. ಪಾಠ ಎಂದರೆ ಕಂಠಪಾಠ. 21ನೆ ಶತಮಾನಕ್ಕೆ ಬಂದರೂ ನಮ್ಮ ಶಿಕ್ಷಣದ ಸ್ವರೂಪದಲ್ಲಿ ಅಂಥ ಮಹತ್ವದ, ಕ್ರಾಂತಿಕಾರಿ ಮಾರ್ಪಾಡಾಗಿದೆ ಎಂದು ಅನಿಸುವುದಿಲ್ಲ.
ವಿದ್ಯಾರ್ಥಿ ವರ್ಷವಿಡೀ ಶಾಲೆಯಲ್ಲಿ ಕಲಿತದ್ದನ್ನು ವರ್ಷಾಂತ್ಯದಲ್ಲಿ ಕೇಳಿದ ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸುವುದನ್ನು ಪರಿಶೀಲಿಸಿ ಅವನ ಶೈಕ್ಷಣಿಕ ಮಟ್ಟವನ್ನು ಅಳೆಯಲಾಗುತ್ತದೆ. ಈಗಂತೂ ಒಂದನೆ ತರಗತಿಯಿಂದ ಒಂಬತ್ತನೆ ತರಗತಿಯವರೆಗೆ ಪಬ್ಲಿಕ್ ಪರೀಕ್ಷೆಯಿಲ್ಲ. ಮೊದಲ ಪಬ್ಲಿಕ್ ಪರೀಕ್ಷೆ ಎಂದರೆ ಎಸ್ಸೆಸೆಲ್ಸಿಯದು. ಅಲ್ಲೂ ಕೂಡ ಪ್ರಶ್ನೆಪತ್ರಿಕೆ-ಉತ್ತರಪತ್ರಿಕೆ ಒಂದೇ. ಪ್ರಶ್ನೆಗಳ ನಂತರ ಉತ್ತರಿಸಲು ಮೂರ್ನಾಲ್ಕು ಸಾಲುಗಳಷ್ಟು ಖಾಲಿಜಾಗ ಬಿಡಲಾಗುತ್ತದೆ. ಎಲ್ಲವೂ ಕಿರುಪ್ರಶ್ನೆಗಳು; ಐವತ್ತು ವರ್ಷಗಳಾಚೆ ನಾವು ಕಲಿಯುತ್ತಿದ್ದಾಗ ಕೇಳುತ್ತಿದ್ದ ದೀರ್ಘ ಉತ್ತರದ ಪ್ರಶ್ನೆಗಳೇ ಇಲ್ಲ. ಮೂರ್ನಾಲ್ಕು ಗೆರೆ ಗೀಚಿ ನೂರರಲ್ಲಿ ನೂರಂಕ ಗಳಿಸಿದ ವಿದ್ಯಾರ್ಥಿ, ಪಿಯುಸಿಯ ಪರೀಕ್ಷೆಗಳಲ್ಲಿ ಕೈಕಾಲು ಬಿಡುವುದು ಸಹಜ. ಪಿಯುಸಿಯಲ್ಲೂ ಪರೀಕ್ಷೆ ‘ವೈಜ್ಞಾನಿಕ ಪದ್ಧತಿ’ ಯಲ್ಲಿ ನಡೆಯುವುದರಿಂದ ಕಿರುಪ್ರಶ್ನೆಗಳೇ ಅಕ.
ಎಲ್ಲಿಯವರೆಗೆ ಶಿಕ್ಷಣವು ವಿದ್ಯಾರ್ಥಿ ಕೇಂದ್ರಿತವಾಗಿರುವುದಿಲ್ಲವೋ, ಅಲ್ಲಿಯವರೆಗೆ ಈ ಪ್ರಹಸನ ಮುಂದುವರಿಯುತ್ತದೆ. ವಿದ್ಯಾರ್ಥಿ ಕೇಂದ್ರಿತ ಅಂದ ಕೂಡಲೇ ವಿದ್ಯಾರ್ಥಿಯ ವಯಸ್ಸು, ಅಭಿರುಚಿ, ಮನೋಭಾವ, ಸಾಮಾಜಿಕ-ಆರ್ಥಿಕ ಹಿನ್ನೆಲೆ ಮುಂತಾದುವೆಲ್ಲಾ ಪಠ್ಯಕ್ರಮ ಮತ್ತು ಬೋಧನಾ ಕ್ರಮದ ಮುನ್ನೆಲೆಯಲ್ಲಿರಬೇಕಾಗುತ್ತದೆ. ಆದರೆ, ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರು ಗಂಟೆಯ ನಂಟರು; ಪ್ರೌಢಶಾಲೆಯಲ್ಲಿ 45 ನಿಮಿಷ; ಕಾಲೇಜಲ್ಲಿ ಒಂದು ಗಂಟೆ ಶಿಕ್ಷಕ ಒದರುವುದು; ವಿದ್ಯಾರ್ಥಿ ಕೇಳಿ ಜೀವನ ಸಾಲ್ಯ ಸಾಸಿದಂತೆ ನಟಿಸುವುದು. ಮಾರನೆ ದಿನ ಕೇಳಿದ ಪ್ರಶ್ನೆಗಳಿಗೆ ‘ಮಾರ್ಗದರ್ಶಿ’ ನೋಡಿ ಉತ್ತರ ಬರೆದು ಶಿಕ್ಷಕರೆದುರು ‘ಆದರ್ಶ ವಿದ್ಯಾರ್ಥಿ’ ಎನಿಸಿಕೊಳ್ಳುವುದು.
ಕೆಲವೇ ವರ್ಷಗಳ ಹಿಂದೆ ಪಿಯುಸಿಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿ ತಾನು ಮನೆಪಾಠಕ್ಕೆ ಹೋಗಿಲ್ಲ; ಶಿಕ್ಷಕರ ಪಾಠವನ್ನು ಗಮನವಿಟ್ಟು ಕೇಳಿ ಅದಕ್ಕೆ ಪೂರಕವಾದ ವಿಷಯಗಳನ್ನು ಗ್ರಂಥಾಲಯದಲ್ಲಿ ಸಂಗ್ರಹಿಸಿ ಟಿಪ್ಪಣಿ ಮಾಡಿಕೊಂಡೆ; ನಾನಾಗಿ ಪಠ್ಯವಿಷಯಕ್ಕೆ ಸಂಬಂಸಿದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದುದರಿಂದ ನನಗೆ ರ್ಯಾಂಕ್ ಬರಲು ಸಾಧ್ಯವಾಯಿತು ಎಂದು ಹೇಳಿದ್ದು ನೆನಪಾಗುತ್ತದೆ.
ವಿದ್ಯಾರ್ಥಿಗೇ ಆಗಲಿ, ನಾಗರಿಕರಿಗೆ ಆಗಲಿ, ಪ್ರಶ್ನಿಸುವ ಮತ್ತು ಮತ್ತೆ ಮತ್ತೆ ಜಿಜ್ಞಾಸೆ ಮಾಡುವ ಪ್ರವೃತ್ತಿ ಅಗತ್ಯ. ಕಾಮ ಕ್ರೋಧಾದಿ ಆರು ಶತ್ರುಗಳ ಪಟ್ಟಿ ನಮ್ಮಲ್ಲಿದೆ; ಆರು ಮಿತ್ರರ ಬಗ್ಗೆ ನಾವು ತಿಳಿದದ್ದು, ಅರಗಿಸಿಕೊಂಡದ್ದು ಕಡಿಮೆ. ಈ ಆರು ಮಿತ್ರರೆಂದರೆ-ಯಾರು?(ಯಾವುದು?) ಎಲ್ಲಿ? ಯಾವಾಗ? ಏನು? ಹೇಗೆ? ಏಕೆ? ಈ ಆರು ಪ್ರಶ್ನೆಗಳನ್ನು ಹಾಕಿಕೊಂಡು ನಾವು ಯಾವುದೇ ಮಾಹಿತಿಯ ಬಗ್ಗೆ ಚಿಂತಿಸಿದ್ದಾದರೆ ಖಂಡಿತವಾಗಿ ಅತ್ಯುತ್ತಮ ಲಿತಾಂಶ ಪರೀಕ್ಷೆಯಲ್ಲಾಗಲಿ ಜೀವನದಲ್ಲಾಗಲಿ ಲಭಿಸಬಲ್ಲದು.
ಮೆದುಳಿನಲ್ಲಿ ಎರಡು ಭಾಗಗಳಿವೆ. ಎಡಭಾಗ ಬರಿಯ ಕಂಠಪಾಠ ಮಾಡುವುದಷ್ಟೆ; ಬಲಭಾಗ ಸೃಜನಾತ್ಮಕ ಆಯಾಮವನ್ನು ನಿಮ್ಮ ಸ್ಮರಣಶಕ್ತಿಗೆ ನೀಡಬಲ್ಲುದು. ಮೇಲೆ ಹೇಳಿದ ಆರು ಮಿತ್ರರೋಪಾದಿಯ ಪ್ರಶ್ನೆಗಳನ್ನು ಹಾಕಿಕೊಳ್ಳುವುದು; ಉತ್ತರಗಳನ್ನು ವಿವೇಕ-ವಿವೇಚನೆ-ಕೌಶಲ-ವಿಮರ್ಶಾತ್ಮಕ ನೋಟಗಳ ಮೂಲಕ ಪಡೆಯುವುದು; ಇದಕ್ಕೆ ಪ್ರೇರಕವಾಗಿ ಸೃಜನಾತ್ಮಕ ಕಲಾವ್ಯಾಸಂಗ, ಯಕ್ಷಗಾನ, ಕ್ರೀಡೆ, ಭಾಷಣ, ಪ್ರಬಂಧ, ವಿಜ್ಞಾನ ಮಾದರಿಗಳು, ರಸಪ್ರಶ್ನೆ; ಇಷ್ಟೇ ಏಕೆ? ಈಜು, ಸೈಕಲ್ ಸವಾರಿ, ಬೆರಳಚ್ಚು, ಕಂಪ್ಯೂಟರ್ ಕಲಿಕೆ-ಹೀಗೆ, ಇಂದು ನೂರಾರು ಬಾಗಿಲುಗಳು ನಮಗೆ ತೆರೆದಿವೆ. ಅವುಗಳನ್ನು ಬಳಸಿಕೊಂಡು ಅದ್ಭುತವಾಗಿ ಕಲಿಯುವುದಲ್ಲದೆ, ಕಲಿತದ್ದನ್ನು ಚಾಚೂ ತಪ್ಪದೆ ಪರೀಕ್ಷೆಯ ವೇಳೆ ಶಿಕ್ಷಕರಿಗಿಂತ ಹೆಚ್ಚು ಪರಿಪೂರ್ಣವಾಗಿ ಕ್ರೋಡೀಕರಿಸಿ ಬರೆದು ಅಮೋಘ ಸಾಧನೆ ಮಾಡಬಹುದು. ಏನಿಲ್ಲವಾದರೂ ಓದಿದ್ದನ್ನು ನೆನಪಿಗೆ ತಂದುಕೊಂಡು, ಟಿಪ್ಪಣಿ ಹಾಕಿಕೊಂಡು, ಅನಂತರ ಅದನ್ನು ಮತ್ತೊಮ್ಮೆ ಓದಿ, ಮರೆತು ಹೋದ ಪೂರಕ ಅಂಶಗಳನ್ನು ಭಿನ್ನ ಬಣ್ಣದ ಪೆನ್ನಿನಲ್ಲಿ ಹಂಸಪಾದ ಹಾಕಿ ಸೇರಿಸಿಕೊಂಡರೆ ಓದಿದ್ದು, ಕಲಿತದ್ದು ಸಾರ್ಥಕ; ಪರೀಕ್ಷೆಯ ವೇಳೆ ‘ಹೊಟ್ಟೆಯಲ್ಲುಂಟು; ಬಾಯಿಗೆ ಬರುವುದಿಲ್ಲ’ ಎಂಬ ಉದ್ಗಾರಕ್ಕೆ ಆಸ್ಪದವಿಲ್ಲ.
1971ರಲ್ಲಿ ಬಿ.ಎ. ಪದವಿಯ ಅಂತಿಮ ಪರೀಕ್ಷೆಗೆ ಹಾಜರಾದೆ. 1969-1970-1971 ಹೀಗೆ ಮೂರು ವರ್ಷ ಓದಿದ್ದ ಕನ್ನಡ ಮತ್ತು ಅರ್ಥಶಾಸ ಐಚ್ಛಿಕ ವಿಷಯಗಳ ನಾಲ್ಕು ನಾಲ್ಕು ಪತ್ರಿಕೆಗಳನ್ನು ಅಂತಿಮ ಪರೀಕ್ಷೆಯಲ್ಲಿ ಉತ್ತರಿಸಬೇಕು. ಇಂದು ಸೆಮಿಸ್ಟರ್ ಪರೀಕ್ಷೆಯಡಿ ಪದವಿ ಗಳಿಸುವ ವಿದ್ಯಾರ್ಥಿಗಳು ನಾಲ್ಕು ತಿಂಗಳಲ್ಲಿ ಕಲಿತದ್ದನ್ನು ಪರೀಕ್ಷೆಗೆ ಬರೆದು ಉತ್ತೀರ್ಣರಾಗಿ ಮುಂದಿನ ತರಗತಿಗೆ ಹೋಗುತ್ತಾರೆ; ಹಳೆಯದನ್ನು ಮರೆತೇ ಬಿಡುತ್ತಾರೆ. ನಮ್ಮ ಕಾಲದಲ್ಲಿ ಮೂರು ವರ್ಷಗಳಲ್ಲಿ ಓದಿದ್ದನ್ನು ಮೂರನೆ ವರ್ಷದ ಕೊನೆಯಲ್ಲಿ ಪರೀಕ್ಷಾ ವೇಳೆ ನೆನಪಿಸಿಕೊಳ್ಳುವುದು ಹೇಗೆ ಸಾಧ್ಯ? ಶೈಕ್ಷಣಿಕ ಮನೋವಿಜ್ಞಾನದ ಅಆಇಈ ತಿಳಿದವರಿಗೆ ಅರ್ಥವಾದೀತು. ಆಗ ನನ್ನಂಥವರು ಕೈಗೊಂಡ ತಂತ್ರವೆಂದರೆ ಮೂರೂ ವರ್ಷಗಳ ಪಾಠಗಳ ಟಿಪ್ಪಣಿಯನ್ನು ನಾವಾಗಿ ಹಾಕಿಕೊಂಡು ಅದನ್ನೇ ಮೂರ್ನಾಲ್ಕು ಬಾರಿ ಓದಿದ್ದು. ಈ ತಂತ್ರ ಬಾಯಿಪಾಠ ಹಾಕುವುದಕ್ಕಿಂತ ಹೆಚ್ಚು ಪರಿಣಾಮಕಾರಿ; ಲಪ್ರದ. ಈ ತಂತ್ರವನ್ನು ಎಲ್ಲ ವಿದ್ಯಾರ್ಥಿಗಳು ಮೇಲುಮೇಲಿನ ತರಗತಿಗಳಿಗೆ ಹೋದಂತೆ ಕಟ್ಟುನಿಟ್ಟಾಗಿ ಅನುಸರಿಸಿದರೆ ಅತ್ಯುತ್ತಮ ಲಿತಾಂಶ ದೊರಕುವುದರಲ್ಲಿ ಸಂಶಯವಿರಲಾರದು. 2012ರ ವೇಳೆ ನಾನು ಪ್ರಾಂಶುಪಾಲನಾಗಿದ್ದಾಗ(ಮತ್ತು ನಿವೃತ್ತಿ ಹೊಂದಿದಾಗ) ಒಟ್ಟು 333 ವಿದ್ಯಾರ್ಥಿಗಳು ಪಿಯುಸಿಯ ಎರಡೂ ವರ್ಷಗಳಲ್ಲಿ ಅಭ್ಯಾಸ ಮಾಡುತ್ತಿದ್ದರು. ನಾನು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅಧ್ಯಯನದ ಪ್ರಗತಿ ಬಗ್ಗೆ ವಿಚಾರಿಸುತ್ತಿದ್ದೆ; ಆಗ ವಿದ್ಯಾರ್ಥಿಗಳ ನೋವು: ‘ಓದಿದ್ದು ನೆನಪುಳಿಯುವುದಿಲ್ಲ ಸಾರ್’. ಆಗ ನಾನು ಇದೇ ಟಿಪ್ಪಣಿ ಹಾಕಿಕೊಳ್ಳುವ ಉಪಾಯ ತಿಳಿಸಿದೆ; ಹತ್ತು ಬಾರಿ ಪಾಠಗಳನ್ನು ಓದುವುದಕ್ಕಿಂತ ಹೆಚ್ಚು ಪ್ರಯೋಜನ ದೊರಕುತ್ತದೆ ಎಂದು ಅನುಭವಪೂರ್ವಕವಾಗಿ ಹೇಳಿದೆ. ವಿದ್ಯಾರ್ಥಿಗಳು ಅದೇ ಪ್ರಕಾರ ಕೆಲಸ ಮಾಡಿದುದರಿಂದ ಆ ವರ್ಷ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಲಿತಾಂಶ ಲಭಿಸುವಂತಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆ ಗಮನಿಸಿದಾಗ ಈ ಲಿತಾಂಶ ‘ಅತ್ಯುತ್ತಮ’ ವೇ ಸರಿ. ಇದನ್ನು ಅನುಸರಿಸಿ ಈಗಿನ ಎಲ್ಲ ವಿದ್ಯಾರ್ಥಿಗಳೂ ‘ಪರೀಕ್ಷಾ ಜ್ವರ’ ದ ಸೋಂಕಿನಿಂದ ಹೊರಬರಲೆಂಬ ಹಾರೈಕೆ ನನ್ನದು.
ಶಿಕ್ಷಕರನ್ನು ವಿದ್ಯಾರ್ಥಿಯ ಮಿತ್ರ, ಮಾರ್ಗದರ್ಶಿ, ತಾತ್ವಿಕ ಮುಂತಾಗಿ ವರ್ಣಿಸುವುದು ಕ್ಲೀಶೆಯಾಗಿ ಉಳಿದಿದೆ. ಒಬ್ಬ ವಿಜ್ಞಾನದ ಅಥವಾ ವಾಣಿಜ್ಯ ಶಾಸದ ಶಿಕ್ಷಕನಾಗಿ ಸಾವಿರಾರು ಸುರಿದು ಮನೆಪಾಠ ತೆಗೆದುಕೊಂಡಲ್ಲಿ ಅಂಥ ಶಿಕ್ಷಕ ಮಿತ್ರ, ಮಾರ್ಗದರ್ಶಿ... ಯಾಗಿ ಉಳಿಯುವ ದುರಂತ ಸನ್ನಿವೇಶದಲ್ಲಿ ನಾವಿದ್ದೇವೆ. ಅಮೆರಿಕ ಇತ್ಯಾದಿ ಮುಂದುವರಿದ ರಾಷ್ಟ್ರಗಳನ್ನು ಅನುಕರಿಸುವ, ಅನುಸರಿಸುವ ನಾವು ವಿದ್ಯಾರ್ಥಿ ಕೇಂದ್ರಿತ ತರಗತಿಗಳನ್ನು ಯಾಕೆ ಕಲ್ಪಿಸಲು ಸಾಧ್ಯವಾಗಿಲ್ಲ? ಅಲ್ಲಿ ವಿದ್ಯಾರ್ಥಿ ಪ್ರಶ್ನಿಸುತ್ತಾನೆ; ಶಿಕ್ಷಕ ಉತ್ತರಿಸುತ್ತಾನೆ ಅಥವಾ ವಿದ್ಯಾರ್ಥಿಯ ತಿಳುವಳಿಕೆಯನ್ನು ಇನ್ನಷ್ಟು ಮೊನಚು ಮಾಡುತ್ತಾನೆ. ನಮ್ಮ ದೇಶದಲ್ಲಿ ಶಿಕ್ಷಕನ ಬಾಯಿ, ವಿದ್ಯಾರ್ಥಿಯ ಕಿವಿ ಇವುಗಳೊಳಗಣ ಸಂಬಂಧ-ಸಮನ್ವಯ ಮಾತ್ರ ಮುಖ್ಯ. ವಿದ್ಯಾರ್ಥಿಯ ಕೈ ಪರೀಕ್ಷೆಯ ವೇಳೆ ಮಾತ್ರ ಬಳಕೆಯಾಗುತ್ತದೆ. ನಮ್ಮಲ್ಲಿ ಕಲಿಕೆಯೆಂದರೆ ಮಾಹಿತಿಯನ್ನು ತಿಳಿಯುವುದು. ಈ ಮಾಹಿತಿಯೆಂಬ ಜ್ಞಾನದ ವಲಯಮೀರಿ ತಿಳುವಳಿಕೆ, ಕೌಶಲ, ತಾರತಮ್ಯಜ್ಞಾನ, ರಸಗ್ರಹಣ, ಅಭಿರುಚಿ ಪೋಷಣೆ, ಮನೋಭಾವ ನಿರ್ಮಾಣ ಮುಂತಾದ ಕಲಿಕೆಯ ಮೇಲಿನ ಸ್ತರಗಳ ಅನಾವರಣವಾಗುವುದು ಅಷ್ಟಕಷ್ಟೆ. ವಿದ್ಯಾರ್ಥಿಯು ಶಿಕ್ಷಕನನ್ನು ಪ್ರಶ್ನಿಸಿದರೆ ಶಿಕ್ಷಕನ ಬಂಡವಾಳ ಬಯಲಾದಿತೆಂಬ ಭಯದಿಂದ ಶಿಕ್ಷಕ ಹೇಳುತ್ತ ಹೋಗುತ್ತಾನೆ; ಶಿಕ್ಷಾರ್ಥಿ ಕೇಳುತ್ತ ಹೋದಂತೆ ನಟಿಸುತ್ತಾನೆ. ಇಂದು ವಿದ್ಯುನ್ಮಾನ ಯುಗದಲ್ಲಿ ಹೊಸ ತಂತ್ರಜ್ಞಾನ, ದೃಶ್ಯೀಕರಣ, ಪ್ರಾತ್ಯಕ್ಷಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ವಿಷಯವನ್ನು ಇನ್ನಷ್ಟು ವಿಸ್ತಾರವಾಗಿ, ಆಳವಾಗಿ, ರೋಚಕವಾಗಿ ಮನವರಿಕೆಮಾಡುವ ಎಲ್ಲಾ ಅವಕಾಶಗಳಿವೆ. ನನಗೆ ತಿಳಿದಂತೆ ಬೆರಳೆಣಿಕೆಯ ಶಿಕ್ಷಕರು ಆಡಳಿತದ ಸಹಕಾರದಿಂದಲೋ ಸ್ವಂತ ಮುತುವರ್ಜಿಯಿಂದಲೋ ಪ್ರಾತ್ಯಕ್ಷಿಕೆ ಮೂಲಕ ಸಮರ್ಥವಾಗಿ ಬೋಸುತ್ತಾರೆ. ಹೊಸ ತಂತ್ರಜ್ಞಾನದ ಬಳಕೆಗೆ ವಿಪುಲವಾದ ಅವಕಾಶಗಳು ನಿರ್ಮಾಣವಾಗಬೇಕು. ಪೋಷಕರು - ಉದಾರಿ ನಾಗರಿಕರು - ಆಡಳಿತ ಮತ್ತು ಶಿಕ್ಷಕರು ಕೂಡಿಕೊಂಡು ಈ ಕಾರ್ಯ ಮುಂದುವರಿಯಬೇಕು. ಸರಕಾರ ನಿಯತವಾಗಿ ಶಿಕ್ಷಕರಿಗೆ ತರಬೇತಿ ನೀಡುತ್ತಾ ಅವರನ್ನು ಹುರಿದುಂಬಿಸಿದರೆ ಅದರ ಪ್ರಯೋಜನ ವಿದ್ಯಾರ್ಥಿ ಸಮುದಾಯಕ್ಕೆ ರವಾನೆಯಾಗುತ್ತದೆ. ಆದರೆ, ಸರಕಾರ ಮತ್ತು ಸಮಾಜ ಶಿಕ್ಷಣಕ್ಕೆ ಮಾಡುವ ವೆಚ್ಚ ಒಂದು ನಷ್ಟವೆಂದು ಪರಿಗಣಿಸಬಾರದು. ಈ ವೆಚ್ಚದ ಲ ತಕ್ಷಣ ನಿರೀಕ್ಷಿಸುವಂಥದ್ದಲ್ಲ.
ಇದೀಗ ‘ಪರೀಕ್ಷಾ ಸಮಯ: 24x7’. ವಿದ್ಯಾರ್ಥಿಗಳಿಂದ-ಅಲ್ಲೂ ದ್ವಿತೀಯ ಪಿಯುಸಿ ವಿಜ್ಞಾನವಾದಲ್ಲಿ - ಪೋಷಕರಿಗೇ ಆತಂಕ. ನಂಟರು ಇಷ್ಟರು ಮನೆಗೆ ಬರುವಂತಿಲ್ಲ; ಟಿ.ವಿ. ಹಾಕುವಂತಿಲ್ಲ; ವೌನ ವ್ರತಾಚರಣೆ. ಪರೀಕ್ಷೆಯನ್ನು ಕ್ರೀಡಾತ್ಮಕವಾಗಿ ಎದುರಿಸುವ ಮನೋಭಾವ ಮೂಡುವುದೆಂದು? ಎಂತು? ಪೋಷಕರೆ, ಶಿಕ್ಷಕರೆ, ವಿದ್ಯಾರ್ಥಿಗಳೆ, ಹೇಳಬಲ್ಲಿರಾ?