ಸಂವಾದಿಸಬೇಕಾದ ಕಾಲ

Update: 2016-03-19 18:40 GMT

   ಶುಕ್ರವಾರದ ಸಂಚಿಕೆಯಿಂದ...
          ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯದ ಸಂಕೇತಗಳೆಂದರೆ ಇಲ್ಲಿನ ಜನಪದ ಕಲೆಗಳು. ಗೀಗೀ ಪದಗಳಲ್ಲಿ ಗಂಡು ಹೆಚ್ಚೋ, ಹೆಣ್ಣು ಹೆಚ್ಚೋ ಚರ್ಚೆ ನಡೆಯುತ್ತದೆ. ಮುಸ್ಲಿಮರ ರಂಜಾನ್ ಪದಗಳಲ್ಲಿ ಎಳೆ ವಯಸ್ಸಿನಲ್ಲಿ ಸತ್ತು ಹೋದ ಅಸಗರನನ್ನು ಅಭಿಮನ್ಯುವಿಗೆ ಹೋಲಿಸಲಾಗಿದೆ. ಅಕಾಲ ಮರಣಕ್ಕೀಡಾದ ಕುಂಬಳೆಯ ಅಲಿ, ಮತ್ತು ಕಡಲ ಪಯಣದಲ್ಲಿ ವಿಕ್ರಮ ಸಾಧಿಸಿದ ಬೊಬ್ಬರ್ಯ ಇಬ್ಬರೂ ಸಾಂಸ್ಕೃತಿಕ ವೀರರೆಂದು ಗುರುತಿಸಿಕೊಂಡು ತುಳುನಾಡಿನ ಭೂತಾರಾಧನೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಸ್ಲಾಮ್ ಧರ್ಮವು ಭೂತಾರಾಧನೆಯನ್ನು ತಾತ್ವಿಕವಾಗಿ ಒಪ್ಪದು, ಹಿಂದೂ ಧರ್ಮವು ಮುಸ್ಲಿಮ್ ನಾಯಕರನ್ನು ತಮ್ಮ ದೈವವಾಗಿ ಅಂಗೀಕರಿಸದು. ಆದರೆ ಇವೆರಡೂ ಕರಾವಳಿಯ ಮಣ್ಣಲ್ಲಿ ಸಾಧ್ಯವಾಗಿದೆ. ತನಗೆ ದೇವಸ್ಥಾನ ಕಟ್ಟಿಕೊಟ್ಟ ಬಪ್ಪ ಬ್ಯಾರಿಗೆ ಮೂಲ್ಕಿಯ ದುರ್ಗಾ ಪರಮೇಶ್ವರಿಯು ಇಂದಿಗೂ ಗಂಧ ಪ್ರಸಾದ ನೀಡುತ್ತಾಳೆ, ಮಾತ್ರವಲ್ಲ ಆ ಊರಿಗೆ ಬಪ್ಪನಾಡೆಂಬ ಹೆಸರು ಪ್ರದಾನ ಮಾಡುತ್ತಾಳೆ. ಹಡಗಲಿಯ ಮೈಲಾರ ಲಿಂಗಪ್ಪನು ಅತಿಯಾದ ಹಣದಾಸೆಯ ತಿರುಪತಿ ತಿಮ್ಮಪ್ಪನ ಮಗಳನ್ನು ಮೋಸದಿಂದ ಮದುವೆಯಾಗುವುದಲ್ಲದೆ, ಚಿಕ್ಕಾಸು ಕೂಡಾ ಕೊಡದೆ ತಿಮ್ಮಪ್ಪನನ್ನು ನಿರಂತರವಾಗಿ ಗೋಳಾಡಿಸುತ್ತಾನೆ. ವಿಲೋಮ ವಿವಾಹ ನಿಷಿದ್ಧ ಎಂದು ಶಾಸ್ತ್ರಗಳು ಸಾರುತ್ತಿರುವಾಗಲೇ ಬಾವಿಗೆ ಬಿದ್ದ ದಲಿತ ಹುಡುಗನನ್ನು ಸೀರೆಯ ಸೆರಗಿಳಿಸಿ ಮೇಲೆತ್ತಿದ ಬ್ರಾಹ್ಮಣ ಕನ್ಯೆಯ ಕತೆಗಳನ್ನು ಜನರು ಹೇಳುತ್ತಾ ಬಂದಿದ್ದಾರೆ. ಮುಸ್ಲಿಮ್ ಅರಸರು ಹಿಂದೂ ರಾಜ್ಯವನ್ನು ನಾಶ ಮಾಡಿದರು ಎಂದು ಅನೇಕರು ಬರೆಯುತ್ತಿದ್ದಾಗ ಮುಸ್ಲಿಮ್ ಹುಡುಗಿಯು ಹಿಂದೂ ಯುವಕನ್ನು ಪ್ರೀತಿಸಿದ ಕತೆಯನ್ನು ನಮ್ಮ ಜನಪದ ಕಲೆಗಳು ರಂಗದ ಮೇಲೆ ಪ್ರದರ್ಶಿಸುತ್ತಾ ಬಂದಿವೆ.

ಇಂತಹ ಹಲವು ಮುಕ್ತ ಮತ್ತು ಅದ್ಭುತ ನಿರೂಪಣೆಗಳಿರುವ ನಾಡು ಇದೀಗ ತನ್ನ ಬಾಗಿಲುಗಳನ್ನು ಮತ್ತಷ್ಟು ವಿಸ್ತಾರವಾಗಿ ತೆರೆದುಕೊಳ್ಳಬೇಕಿತ್ತು. ಆದರೆ ಅವು ಹೆಚ್ಚು ಹೆಚ್ಚು ಸಂಕುಚಿತಗೊಂಡು ಮುಚ್ಚಿಕೊಳ್ಳುತ್ತಿವೆ. ಜನಪದ ಸಂಸ್ಕೃತಿಗಳ ಅವನತಿಯು ಪ್ರಚಲಿತ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ವಿದ್ಯಮಾನಗಳಲ್ಲಿ ಒಂದು. ಇಂತಹ ಬೆಳವಣಿಗೆಗಳ ಬಗೆಗೆ ಗಂಭೀರವಾದ ಚರ್ಚೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ನಡೆಯಲು ಸಾಧ್ಯವಾದರೆ ಅದರಿಂದ ಸಮಾಜಕ್ಕೆ ತುಂಬಾ ಪ್ರಯೋಜನವುಂಟು. ಭಾಷೆ, ಗಡಿ ಮತ್ತು ಸಂಸ್ಕೃತಿಯ ವಿಷಯಗಳು ಬಹುಬೇಗ ಜನರನ್ನು ತಪ್ಪುದಾರಿಗೆಳೆದದ್ದನ್ನು ವಿಶ್ವದ ಇತಿಹಾಸ ರುಜುವಾತುಪಡಿಸಿದೆ. ಜಗತ್ತಿನ ಎಲ್ಲೆಡೆಯೂ ಈ ಮೂರು ಶಬ್ದಗಳನ್ನು ಉಪಯೋಗಿಸಿಯೇ ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸಿವೆ. ಕಾರಣ ನಮ್ಮ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನೆಗಳು ಈ ಬೆಳವಣಿಗೆಗಳ ಕುರಿತು ವಿಶೇಷ ಎಚ್ಚರ ವಹಿಸಬೇಕೆಂದು ನಾನು ಭಾವಿಸುತ್ತೇನೆ.

2. ಜ್ಞಾನದ ಅಂತಾರಾಷ್ಟ್ರೀಕರಣ ಮತ್ತು ಕನ್ನಡ

ಹೀಗೆ ಕನ್ನಡ ಭಾಷೆಯು ಒಳಗಿನಿಂದ ಒಂದು ಬಗೆಯ ಒತ್ತಡಕ್ಕೆ ಒಳಗಾಗುತ್ತಿದ್ದರೆ, ಇನ್ನೊಂದೆಡೆಯಲ್ಲಿ ಅದು ಇಂದಿನ ಜಾಗತೀಕರಣ ಪ್ರಕ್ರಿಯೆಯ ತೀವ್ರ ಹೊಡೆತಕ್ಕೆ ಸಿಕ್ಕಿ ಇನ್ನೊಂದು ಬಗೆಯಲ್ಲಿ ನಲುಗುತ್ತಿದೆ. ಭಾರತದ ಅನೇಕ ಭಾಷೆಗಳು ಈ ವಿಷಯದಲ್ಲಿ ಕನ್ನಡದೊಂದಿಗಿವೆ. ನಮ್ಮ ದೇಶಕ್ಕೆ ರಾಷ್ಟ್ರೀಯ ಭಾಷಾ ನೀತಿ ಎಂಬುದು ಇಲ್ಲವಾದ್ದರಿಂದ ಈ ಗೊಂದಲವು ಅನೇಕ ಭಾಷೆಗಳನ್ನು ಸುಲಭವಾಗಿ ಕೊಂದು ಹಾಕುವ ಮಟ್ಟಕ್ಕೆ ಬೆಳೆದಿದೆ. ಖಚಿತವಾಗಿ ಇದು ಜಾಗತೀಕರಣದ ಕಾಲ. ಆದರೆ ಜಾಗತೀಕರಣವು ಭಾರತಕ್ಕೆ ಹೊಸದೇನೂ ಅಲ್ಲ. ಭಾರತದ ಭೌಗೋಳಿಕತೆಯು ಚಾರಿತ್ರಿಕವಾಗಿ ಅದನ್ನು ವಿಶ್ವದೊಂದಿಗೆ ಸಹಜವಾಗಿ ಜೋಡಿಸಿದೆ. ನಮ್ಮ ಊಟದ ಮೂಲಭೂತ ಘಟಕಗಳಾದ ಬಟಾಟೆ, ಟೊಮೆಟೋ, ಗೆಣಸು, ಜೋಳ, ಮೆಣಸು ಮೊದಲಾದುವುಗಳೆಲ್ಲ ಎಂದೋ ಹೊರದೇಶದಿಂದ ಬಂದು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಕೊಂಡಿವೆ. ಅನನಾಸು, ಪೇರಳೆ ಚಿಕ್ಕು ಮೊದಲಾದ ಹಣ್ಣುಗಳೂ ಮೂಲತಃ ನಮ್ಮವಲ್ಲ. ಬೆಳ್ಳುಳ್ಳಿ, ಅರಸಿನ, ಶುಂಠಿ ಮೊದಲಾದ ಪರಕೀಯ ಪದಾರ್ಥಗಳು ಇಂದು ನಮ್ಮ ದೇಸೀ ಎನ್ನಲಾದ ವೈದ್ಯ ಪದ್ಧತಿಯೊಂದಿಗೂ ಸೇರಿಕೊಂಡಿವೆ. ರೈಮಂಡೋ ಪಣಿಕ್ಕರ್ ಅವರ ಪ್ರಕಾರ ಚೈನಾದಲ್ಲಿ ಅತಿ ಪ್ರಾಚೀನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಅನ್ನದ ಉಂಡೆಯೇ ಇಂದು ಇಡ್ಲಿಯಾಗಿ ನಮ್ಮ ಮುಂದೆ ಕಾಣಿಸಿಕೊಂಡಿದೆ. ಹೀಗೆ ಹೊರಗಿನಿಂದ ಬಂದ ಈ ಪದಾರ್ಥಗಳನ್ನು ನಮ್ಮ ದೇವರುಗಳು ಇಂದಿಗೂ ಸ್ವೀಕರಿಸಲಾರವು. ಇಷ್ಟಿದ್ದರೂ ತೊಂಬತ್ತರ ದಶಕದಿಂದೀಚೆಗೆ ಕಾಣಿಸಿಕೊಂಡ ಉದಾರೀಕರಣ, ಜಾಗತೀಕರಣ, ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಹಿಂದಿಗಿಂತ ತುಂಬಾ ಭಿನ್ನವಾಗಿದ್ದು ಜಗತ್ತನ್ನು ಅಮೂಲಾಗ್ರವಾಗಿ ಬದಲಾಯಿಸಿವೆ. ಮೇಲಿನ ಪರಿಭಾಷೆಗಳು ಮೂಲತಃ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿವೆಯಾದರೂ ಇಂದು ಅವು ನಮ್ಮ ಸಮಾಜವನ್ನು ಇಡಿಯಾಗಿ ಆಕ್ರಮಿಸಿಕೊಂಡಿವೆ. ಪರಿಣಾಮವಾಗಿ ಅವು ಇದೀಗ ಉನ್ನತ ಶಿಕ್ಷಣ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳಲು ಸಜ್ಜಾಗಿದೆ. ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ ಹಾಗೂ ಜ್ಞಾನೋತ್ಪತ್ತಿಯ ಅಂತಾರಾಷ್ಟ್ರೀಕರಣ (Internationalization of higher education and Internationalization of knowledge production) ಇಂದಿನ ತೀವ್ರವಾದ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ವಿಶ್ವದ ಕುರಿತಾದ ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ ವಿಶ್ವದ ತಿಳುವಳಿಕೆಗಾಗಿ (  To  the world understanding and understanding of India in the world) ಈ ಅಂತಾರಾಷ್ಟ್ರೀಕರಣ ಪ್ರಕ್ರಿಯೆ ಬಹಳ ಅಗತ್ಯ ಎಂದು ಎಲ್ಲ ಸರಕಾರಗಳೂ ಇಂದು ಭಾವಿಸತೊಡಗಿವೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ (United Nations Educational, Scientific and Cultural Organization- UNESCO) ಮತ್ತು ವಿಶ್ವವಿದ್ಯಾನಿಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು (International Association of Universities-IAU) ಜಂಟಿಯಾಗಿ ಪ್ರಬಲವಾದ ವಾದ ಮಂಡಿಸಿವೆ. ಸರಕಾರಗಳ ಪಾಲಿಗೆ   
 ಅನುತ್ಪಾದಕ ವಸ್ತುವಾಗಿರುವ ಉನ್ನತ ಶಿಕ್ಷಣವನ್ನು ಉತ್ಪಾದಕ ಅಥವಾ ಲಾಭದಾಯಕ ವನ್ನಾಗಿ ಪರಿವರ್ತಿಸುವುದು ಈ ವಾದಗಳ ಉದ್ದೇೀಶ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರಗಳು ತಮ್ಮ ಆರ್ಥಿಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಉನ್ನತ ಶಿಕ್ಷಣದ ಖಾಸಗೀಕರಣಕ್ಕೆ ಕ್ರಮ ಕೈಕೊಳ್ಳಲಾರಂಭಿಸಿದುವು. ಪರಿಣಾಮವಾಗಿ ಖಾಸಗಿ ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು, ಮತ್ತು ವಿದೇಶೀ ವಿಶ್ವವಿದ್ಯಾನಿಲಯಗಳು ದೊಡ್ಡ ಪ್ರಮಾಣದಲ್ಲಿ ಉನ್ನತ ಶಿಕ್ಷಣದತ್ತ ಹೊರಳಿಕೊಂಡವು. ಅವು ತಮ್ಮ ಆರ್ಥಿಕ ಭದ್ರತೆಗಾಗಿ ನಯವಾದ ಬಗೆಯಲ್ಲಿ ಶುಲ್ಕ ವಸೂಲು ಮಾಡಲು ಹೊರಟಿವೆ. ಈ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳೂ ಸರಕಾರಗಳೂ ಜೊತೆಯಾಗಿ ಹಣ ಮಾಡಲಾರಂಭಿಸಿದುವು. ಒಂದು ವರದಿಯ ಪ್ರಕಾರ 2013 -2014 ರಲ್ಲಿ ಅಮೆರಿಕ ದೇಶದಲ್ಲಿ ಹೊರದೇಶದಿಂದ ಆಗಮಿಸಿದ 11,30,000 ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು ಅದರಿಂದ ಆ ದೇಶಕ್ಕೆ 25 ಬಿಲಿಯನ್ ಡಾಲರ್ ಆದಾಯವಾಗಿದೆ. ಆಸ್ಟ್ರೇಲಿಯದಲ್ಲಿ 2001-2002ರಲ್ಲಿ ಸುಮಾರು 2 ಲಕ್ಷ ಹೊರದೇಶದ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು ಆಗ ಆ ದೇಶದ ಆದಾಯ 4.2 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಆಗಿತ್ತು. ಜಾಗತೀಕರಣದ ಪರಿಣಾಮವಾಗಿ ಈ ಆದಾಯವು 2013-14 ರಲ್ಲಿ 14 ಬಿಲಿಯನ್ ಡಾಲರ್‌ಗೆ ಏರಿತು.

ಸಣ್ಣ ದೇಶ ನ್ಯೂಝಿಲೆಂಡ್ ನಲ್ಲಿ 2001-2012ರಲ್ಲಿ ಸುಮಾರು ಒಂದು ಲಕ್ಷ ವಿದೇಶೀ ವಿದ್ಯಾರ್ಥಿಗಳು ಅಭ್ಯಾಸ ಮಾಡಿದ್ದು ಆ ದೇಶದ ಬೊಕ್ಕಸಕ್ಕೆ 1.7 ಬಿಲಿಯನ್ ಡಾಲರ್ ಆದಾಯವಾಗಿದ್ದು 2013-14 ರಲ್ಲಿ ಅದು 6 ಬಿಲಿಯನ್ ಡಾಲರ್‌ಗಳಿಗೆ ಏರಿತು. ಈ ಬಗೆಯ ಆದಾಯದ ಕುರಿತು ಅಭಿವೃದ್ಧಿಶೀಲ ದೇಶಗಳು ಕಣ್ಣು ಮುಚ್ಚಿ ಕುಳಿತಿರಲು ಸಾಧ್ಯವಿಲ್ಲ. ಏಕೆಂದರೆ 21ನೆ ಶತಮಾನದ ಮೊದಲ ದಶಕದಲ್ಲಿ ಉನ್ನತ ಶಿಕ್ಷಣವು ಬಿಲಿಯನ್ ಡಾಲರ್ ಆದಾಯದ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಶಿಕ್ಷಣದ ಅಂತಾರಾಷ್ಟ್ರೀಕರಣ ಪ್ರಕ್ರಿಯೆಯು ಗ್ಯಾಟ್ (General Agreement of Trade in Servises ಹಾಗೂ ಡಬ್ಲ್ಯುಟಿಒ ( World Trade Organizations)
  ಒಪ್ಪಂದದ ಮೇರೆಗೆ ಆರಂಭವಾಯಿತು. ಎಪ್ರಿಲ್ 1, 2005 ರಂದು ಜಾರಿಗೆ ಬಂದ ಈ ಒಪ್ಪಂದದ ಅನುಸಾರವಾಗಿ, 10ನೆ ಪಂಚವಾರ್ಷಿಕ ಯೋಜನೆಯಲ್ಲಿ (2002-2007) ಉನ್ನತ ಶಿಕ್ಷಣವನ್ನು Educational Services as sector of industry under GATS’ ಎಂದು ಇತರ 12 ವಿಷಯಗಳೊಂದಿಗೆ ಸೇರಿಸಿ ಘೋಷಿಸಲಾಗಿದೆ. 11 ಮತ್ತು 12ನೆ ಪಂಚವಾರ್ಷಿಕ ಯೋಜನೆಯಲ್ಲಿ ನಮ್ಮ ತರುಣರನ್ನು ಲೇಬರ್ ಮಾರುಕಟ್ಟೆಗೆ ಸಿದ್ಧಪಡಿಸಬೇಕಾದ ಅಗತ್ಯವಿದೆ (It equips young people with skills relevant for the labour market) ಎಂದು ಹೇಳಲಾಗಿದೆ ಮಾತ್ರವಲ್ಲ 2020ರ ಹೊತ್ತಿಗೆ ಚೀನಾ ದೇಶಕ್ಕೆ ಅಗತ್ಯವಾಗಿರುವ 40 ಕೋಟಿ ಪರಿಣಿತರನ್ನು ನಾವು ಸೃಷ್ಟಿ ಮಾಡಬೇಕಾಗಿದೆ ಎಂದೂ ಅದು ಘೋಷಿಸಿದೆ. ಹೀಗಾಗಿ ಈಗ ಇದು ಸರಕಾರದ ಒಂದು ಅಂಗೀಕೃತ ಮತ್ತು ಆದ್ಯತೆಯ ಯೋಜನೆಯಾಗಿದೆ. ಈ ಯೋಜನೆಯ ಭಾಗವಾಗಿ ವಿಶ್ವವಿದ್ಯಾನಿಲಯ ಅನುದಾನ ಆಯೋಗವು ಈ ಕೆಳಗಿನ ಮೂರು ಅಂಶಗಳನ್ನು ಜಾರಿಗೆ ತರಲು ಇದೀಗ ಕಾರ್ಯಪ್ರವೃತ್ತವಾಗಿದೆ. ಅವುಗಳೆಂದರೆ-
        1. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ

2.ದೇಶೀಯ ಮತ್ತು ವಿದೇಶೀಯ ವಿಶ್ವವಿದ್ಯಾನಿಲಯಗಳು ಜಂಟಿಯಾಗಿ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು( twinning programs)  
    ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ( exchange programs)ಮತ್ತು 3.ಅತ್ಯುತ್ತಮ ಶಿಕ್ಷಣದ ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆ (

Special educational excellence and export zones - SEEEZ)

 ಈ ಬದಲಾದ ಪರಿಸ್ಥಿತಿಗೆ ಅನುಗುಣವಾದ ಪಠ್ಯಕ್ರಮ, ಅಧ್ಯಯನದ ಅವಧಿ ಮತ್ತು ವೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಮುಖ್ಯವಾಗಿ ಇದೀಗ ಆಗಲೇ ಅನೇಕ ಖಾಸಗಿ ವಿಶ್ವವಿದ್ಯಾನಿಲಯಗಳು ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ಸಂಬಂಧ ಸ್ಥಾಪಿಸಿಕೊಂಡಿವೆ. ವಿದೇಶೀ ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ತಮ್ಮ ಅಧ್ಯಯನ ಕೇಂದ್ರಗಳನ್ನು ತೆರೆದಿವೆ. ವಿದೇಶೀ ಅಧ್ಯಾಪಕರುಗಳು ಮತ್ತು ಭಾರತೀಯ ಅಧ್ಯಾಪಕರುಗಳು ಒಟ್ಟಿಗೇ ಕೆಲಸ ಮಾಡಲು ಸಾಧ್ಯವಾಗುವ ಹಾಗೆ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ವಿಶ್ವವಿದ್ಯಾನಿಲಯಗಳ ನಡುವೆ ಗುಣಾಂಕಗಳ ( ಕ್ರೆಡಿಟ್ಸ್) ವರ್ಗಾವಣೆ ಸಾಧ್ಯವಾಗುತ್ತಿದೆ. ಈ ಕ್ರಮಗಳು ಉನ್ನತ ಶಿಕ್ಷಣದ ರೀತಿ ನೀತಿಗಳನ್ನು ಈಗಾಗಲೇ ಗಮನಾರ್ಹವಾಗಿ ಬದಲಾಯಿಸುತ್ತಿವೆ. ಸದ್ಯಕ್ಕೆ ಈ ಪ್ರಯೋಗವು ಕಾರ್ಪೋರೇಟ್ ಜಗತ್ತಿಗೆ ಬೇಕಾದ ಬುದ್ಧಿವಂತರನ್ನು ಮತ್ತು ಪರಿಣಿತ ಕೆಲಸಗಾ ರರನ್ನು ಸೃಷ್ಟಿಸಿಕೊಡುವಲ್ಲಿ ಸಫಲವಾಗಿವೆ.

ಮುಂದುವರಿಯುವುದು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News