ಶತಮಾನೋತ್ಸವ ಸಂಭ್ರಮಕ್ಕಾಗಿ ನವೀಕರಣಗೊಳ್ಳುತ್ತಿದೆ ರಾಜ್ಯ ಕೇಂದ್ರ ಗ್ರಂಥಾಲಯ

Update: 2016-03-20 18:07 GMT

     ಕಬ್ಬನ್ ಪಾರ್ಕ್‌ನಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ 100 ವರ್ಷಗಳು ತುಂಬಿದ ಬೆನ್ನಲ್ಲೇ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ನವೀಕರಣದ ಕಾರ್ಯ ಪ್ರಾರಂಭಗೊಂಡಿದೆ. ಪ್ರಸ್ತುತ ವರ್ಷದ ಜ.27ರಿಂದಲೇ ನವೀಕರಣದ ಕಾರ್ಯ ಪ್ರಾರಂಭ ಗೊಂಡಿದ್ದು, ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ಗ್ರಂಥಾಲಯದಲ್ಲಿದ್ದ 5.40 ಲಕ್ಷ ಪುಸ್ತಕಗಳು ಹಾಗೂ 802 ಬ್ರೈಲ್ ಪುಸ್ತಕಗಳನ್ನು ನವೀಕರಣದ ಹಿನ್ನೆಲೆಯಲ್ಲಿ ಸಮೀಪದ ಗ್ರಂಥಾಲಯಗಳಿಗೆ ಸ್ಥಳಾಂತರಿಸಲಾಗಿದೆ.

      ನವೀಕರಣದ ಜವಾಬ್ದಾರಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪಿಡಬ್ಲುಡಿ ಅವರಿಗೆ ವಹಿಸಿದೆ. ಪಿಡಬ್ಲುಡಿ ಅವರು ಗುತ್ತಿಗೆದಾರರಿಗೆ ನವೀಕರಣದ ಗುತ್ತಿಗೆಯನ್ನು ನೀಡಿದ್ದು, ಅವರು ಈಗಾಗಲೇ ಗ್ರಂಥಾಲಯ ಒಳಾಂಗಣದ ನವೀಕರಣದ ಕಾರ್ಯದಲ್ಲಿ ತೊಡಗಿದ್ದಾರೆ. ನವೀಕರಣದ ಕಾರ್ಯಕ್ಕಾಗಿ 1 ಕೋಟಿ ರೂ. ಬಿಡುಗಡೆ ಗೊಂಡಿದ್ದು, ಈಗಾಗಲೇ ಶೇ.33ರಷ್ಟು ಹಣ ಮೊದಲ ಕಂತಾಗಿ ಬಿಡುಗಡೆ ಮಾಡಲಾಗಿದೆ. ಬಾಕಿ ಹಣವನ್ನು ನವೀಕರಣ ಪೂರ್ಣಗೊಂಡ ಬಳಿಕ ಬಿಡುಗಡೆಗೊಳ್ಳಲಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್. ಹೊಸಮನಿ ತಿಳಿಸಿದರು. ಕೇಂದ್ರ ಸಾರ್ವಜನಿಕ ಗ್ರಂಥಾಲಯದ ಸ್ಥಳಾವಕಾಶ 300 ಚ.ಮೀ. ಮುಖ್ಯದ್ವಾರದ ವಿಸ್ತೀರ್ಣ 4.09 ಮೀ. ಪರಾಮರ್ಶನ ವಿಭಾಗದ ಅಳತೆಯ ಎತ್ತರ 44.8 ಅಡಿ ನಿಯತಕಾಲಿಕೆ ವಿಭಾಗದ ವಿಸ್ತೀರ್ಣ 8.89 ಮೀಟರ್ ಆಗಿದ್ದು, ಸದ್ಯ ಈ ಎಲ್ಲ ವಿಭಾಗಗಳನ್ನೂ ನವೀಕರಿಸಲಾಗುತ್ತಿದೆ.
    
    ಪ್ರತೀ ದಿನ ಈ ಗ್ರಂಥಾಲಯಕ್ಕೆ 400 ರಿಂದ 500 ಓದುಗರು ಭೇಟಿ ನೀಡುತ್ತಿದ್ದು, 600 ರಿಂದ 700 ಪುಸ್ತಕಗಳನ್ನು ಓದುಗರು ಪರಾಮರ್ಶಿಸುತ್ತಾರೆ. ಅಲ್ಲದೆ, ಈ ಗ್ರಂಥಾಲಯದಲ್ಲಿ ಮಾಹಿತಿ ಸೇವೆ, ಗ್ರಂಥ ಸ್ವಾಮ್ಯ ವಿಭಾಗದ ಆಯಾಯ ವರ್ಷದ ಗ್ರಂಥ ಸೂಚಿ ಸೇವೆ, ಗ್ರಂಥ ವಿವರಣೆ ಸೇವೆ, ದ್ವಿ ಪ್ರತಿ ಸೇವೆ, ವಿರಳವಾದ ಪುಸ್ತಕಗಳ ಸಂಗ್ರಹ, ಮಾಹಿತಿ ಸೇವೆ, ವಿಸ್ತರಣಾ ಸೇವೆ, ಶ್ರವಣ-ದೃಶ್ಯ ಮಾಧ್ಯಮ ಸೇವೆ, ಗಣಕ ಯಂತ್ರ ಸೇವೆಗಳ ಸೌಲಭ್ಯಗಳಿವೆ. ಗ್ರಂಥಾಲಯದ ಇತಿಹಾಸ: ಸಾರ್ವಜನಿಕ ಗ್ರಂಥಾಲಯದ ಆಡಳಿತವನ್ನು ಮೈಸೂರು ನೋಂದಣಿ ಕಾಯ್ದೆ ಅಡಿಯಲ್ಲಿ ಆಡಳಿತ ಸಮಿತಿಯು ನಡೆಸುತ್ತಿತ್ತು. ಇದರ ಮೊದಲ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಮಹಾ ನಿರೀಕ್ಷಕ ಕೃಷ್ಣರಾವ್ ಆಯ್ಕೆ ಆಗಿದ್ದರು. ಕರ್ನಾಟಕ ಸರಕಾರವು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965ರ ಅಡಿಯಲ್ಲಿ ಈ ಗ್ರಂಥಾಲಯವನ್ನು 1966ರಲ್ಲಿ ತನ್ನ ಸುಪರ್ದಿಗೆ ಪಡೆದು ರಾಜ್ಯ ಕೇಂದ್ರ ಗ್ರಂಥಾಲಯವೆಂದು ಮರು ನಾಮಕರಣ ಮಾಡಿತ್ತು. 1986ರ ಎ.1ರಂದು ಪರಾಮರ್ಶನ ಗ್ರಂಥಾಲಯವನ್ನಾಗಿ ಕೂಡ ಮಾರ್ಪಡಿಸಿ ಜು.4, 1966ರಲ್ಲಿ ಶಿಕ್ಷಣ ಮಂತ್ರಿಗಳ ನೇತೃತ್ವದಲ್ಲಿ ಕಟ್ಟಡದ ಸುವರ್ಣ ಮಹೋತ್ಸವದ ಕಾರ್ಯಕ್ರಮ ನೆರವೇರಿತ್ತು.

ಗ್ರಂಥಾಲಯದ ಪೂರ್ವಾಪರ:
   ರಾಜ್ಯ ಕೇಂದ್ರ ಗ್ರಂಥಾಲಯ ಸರ್.ಶೇಷಾದ್ರಿ ಅಯ್ಯರ್ ಭವನದಲ್ಲಿದ್ದು, ಅವರ ನೆನಪಿನಲ್ಲಿಯೆ ಗ್ರಂಥಾಲಯ ಕೂಡ ನಿರ್ಮಾಣವಾಗಿದೆ. ಇವರು ಮೈಸೂರು ಸಂಸ್ಥಾನದ ದೀವಾನರಾಗಿದ್ದರು. ಭವನವು ಶುದ್ಧ ಯುರೋಪಿಯನ್ ಶೈಲಿಯ ಲ್ಲಿದ್ದು, ಭವನದ ಮುಂಭಾ ಗದಲ್ಲಿರುವ ಗುಲಾಬಿ ಉದ್ಯಾನವನದಿಂದ ಗ್ರಂಥಾಲಯದ ಸೌಂದರ್ಯವೂ ಇಮ್ಮಡಿಯಾಗಿದೆ. ಶೇಷಾದ್ರಿ ಅಯ್ಯರ್ ಸ್ಮಾರಕ ಭವನದ ನಿರ್ಮಾಣದಲ್ಲಿ ಲಾರ್ಡ್ ಕರ್ಜನ್ ಅವರ ಪಾತ್ರವೂ ಮಹತ್ವದ್ದಾಗಿದ್ದು, ಅಯ್ಯರ್ ಅವರ ಸೇವೆ ಮತ್ತು ಸಾಧನೆಗಳನ್ನು ಮೆಚ್ಚಿ ಬ್ರಿಟಿಷ್ ರೆಸಿಡೆಂಟ್ ಸರ್ ಡೊನಾಲ್ಡ್ ರಾಬರ್ಟ್‌ಸನ್ ಬಳಿ ಭವನ ನಿರ್ಮಾಣದ ಬಗ್ಗೆ ವಿವರಿಸಿ ನಿರ್ಮಾಣಕ್ಕೆ ಒಪ್ಪಿಗೆ ಪಡೆದು ಅವರಿಂದಲೇ ಅಯ್ಯರ್ ಭವನದ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿಸಿ 1908ರಲ್ಲಿ ನಿರ್ಮಾಣವಾಗುವಂತೆ ಮಾಡಿದರು. ಬಳಿಕ ಡಿ.20, 1913ರಂದು ವೈಸರಾಯ್ ಲಾರ್ಡ್ ಹಾರ್ಡಿಂಗ್ ಅವರು ಶೇಷಾದ್ರಿ ಅಯ್ಯರ್ ಅವರ ಪ್ರತಿಮೆಯನ್ನು ಸ್ಥಾಪಿಸುವುದರ ಜೊತೆಗೆ 1914ರಲ್ಲಿ ಸ್ಮಾರಕ ಸಮಿತಿಯು ಸ್ಮಾರಕವನ್ನು ಸಾರ್ವಜನಿಕ ಕಟ್ಟಡವಾಗಿ ಹಾಗೂ ಇಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಸರ್ ಎಂ.ವಿಶ್ವೇಶ್ವರಯ್ಯನವರು ಈ ಭವನ ವನ್ನು ರಾಜ್ಯ ಸಾರ್ವಜನಿಕ ಗ್ರಂಥಾಲಯಕ್ಕೆ ಹಸ್ತಾಂತರಿಸಿದ ಬಳಿಕ (ಮೇ 1, 1915) ಸಾರ್ವಜನಿಕ ಗ್ರಂಥಾಲಯ ಸಾರ್ವಜನಿಕರ ದೇಣಿಗೆಯಿಂದ 1 ಲಕ್ಷ ರೂ.ಗಳಲ್ಲಿ ನಿರ್ಮಾಣವಾಯಿತು. ಸದಸ್ಯತ್ವ ನೋಂದಣಿಗೆ ಹಣ ನೀಡಬೇಕಾದ ಸಂದರ್ಭದಲ್ಲೇ (1920) ಗ್ರಂಥಾಲಯ ಸರಕಾರದ ಅನುದಾನಕ್ಕೆ ಒಳಪಟ್ಟಿತು. ಅಲ್ಲದೆ, ಗ್ರಂಥಾಲಯ ಪ್ರಾರಂಭವಾದಾಗ 4,750 ಪುಸ್ತಕಗಳು ಹಾಗೂ 215 ಸದಸ್ಯರಿದ್ದರು. ಸರಕಾರ, ಸ್ಥಳೀಯ ಸಂಸ್ಥೆಗಳು ಮತ್ತು ನಾಗರಿಕ ಮಿಲಿಟರಿ ಕೇಂದ್ರಗಳ ಸಂಸ್ಥೆಗಳಿಂದ ಹಣವನ್ನು ಪಡೆದುಕೊಳ್ಳಲಾಗುತ್ತಿತ್ತು.
 

Writer - ಪ್ರಕಾಶ್ ಅವರಡ್ಡಿ

contributor

Editor - ಪ್ರಕಾಶ್ ಅವರಡ್ಡಿ

contributor

Similar News