ಸಂವಾದಿಸಬೇಕಾದ ಕಾಲ

Update: 2016-03-20 18:25 GMT

ನಿನ್ನೆಯ ಸಂಚಿಕೆಯಿಂದ...
   ಇಂತಹ ಬದಲಾದ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ ಎಂಬುದು ಚಲಾವಣೆಯಲ್ಲಿಲ್ಲದ ನಾಣ್ಯವಾಗುತ್ತಿದೆ. ಜೊತೆಗೆ ಮಾನವಿಕಗಳು ಬೇಡಿಕೆಯಿಲ್ಲದ ಅಧ್ಯಯನ ಶಿಸ್ತುಗಳಾಗಿ ಪರಿವರ್ತನೆಗೊಂಡು ದುರ್ಬಲವಾಗುತ್ತಿವೆ. 10ನೆ ಪಂಚವಾರ್ಷಿಕ ಯೋಜನೆಯಲ್ಲಿ ಸಂಸ್ಕೃತ ಮತ್ತು ಹಿಂದೀ ಭಾಷೆಯ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ರೂಪಿಸಿದ್ದರೂ ಉಳಿದ ಭಾರತೀಯ ಭಾಷೆಗಳ ಬಗೆಗೆ ಅದು ದಿವ್ಯ ವೌನವನ್ನು ತಾಳಿದೆ. 11 ಮತ್ತು 12 ನೆ ಪಂಚವಾರ್ಷಿಕ ಯೋಜನೆಗಳಲ್ಲಿ ಭಾರತೀಯ ಭಾಷೆಗಳ ಬಗ್ಗೆ ಯಾಂತ್ರಿಕವಾಗಿ ನಾಲ್ಕು ಮಾತು ಹೇಳಲಾಗಿದೆಯಲ್ಲದೆ, ಅವುಗಳ ಅಭಿವೃದ್ಧಿಯ ಬಗೆಗೆ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಹೀಗೆ ಮಾರುಕಟ್ಟೆಯ ಧ್ಯೇಯ ಧೋರಣೆಗಳೇ ಉನ್ನತ ಶಿಕ್ಷಣವನ್ನು ನಿಯಂತ್ರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕನ್ನಡದಂಥ ಸಣ್ಣ ಭಾಷೆಗಳ ಭವಿಷ್ಯವೇನು? ಎಂಬುದರ ಬಗ್ಗೆ ನಾವು ಗಂಬೀರವಾಗಿ ಚಿಂತಿಸಬೇಕು.

ಮೇಲೆ ಹೇಳಿದ ಮಾರುಕಟ್ಟೆ ಕೇಂದ್ರಿತ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನದ ಉತ್ಪತ್ತಿ ಮತ್ತು ವಿತರಣೆಯು ಅಂತಾರಾಷ್ಟ್ರೀಯವಾಗುವುದು ಅನಿವಾರ್ಯ. ಈ ಪ್ರಕ್ರಿಯೆಯಲ್ಲಿ ಆಳುವ ಶಕ್ತಿ ಶಾಲೀ ಭಾಷೆಯಾಗಿ ಇಂಗ್ಲಿಷ್ ಹೊರಹೊಮ್ಮಿದೆ. ಇಂಗ್ಲಿಷ್ ಭಾಷೆ ಕಲಿತರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಜನರೂ ಈ ಬೆಳವಣಿಗೆಯನ್ನು ಒಪ್ಪಿಕೊಂಡಿದ್ದಾರೆ. ಇದು ಕನ್ನಡವೂ ಸೇರಿದಂತೆ ಜಗತ್ತಿನ ಅನೇಕ ಸಣ್ಣ ಭಾಷೆಗಳ ಕುರಿತು ಆಯಾ ದೇಶದ ಸರಕಾರಗಳು ಮತ್ತು ಜನರು ನಿರ್ಲಕ್ಷ್ಯ ವಹಿಸುವಂತೆ ಮಾಡಿದೆ. ಇದರಿಂದ ಜಗತ್ತಿನಾದ್ಯಂತ ಇಂದು ಅನೇಕ ಭಾಷೆಗಳು ಅವಸಾನದ ಅಂಚಿಗೆ ಬಂದು ನಿಲ್ಲುವಂತಾಗಿದೆ. ಸಣ್ಣ ಭಾಷೆಗಳ ಧ್ವನಿ ಉಡುಗಿವೆ, ಅವುಗಳ ನಾಲಗೆ ಕಟ್ಟಿಹೋಗಿವೆ. ಉಳಿಯುವಿಕೆಗಾಗಿ ಅವು ಹೆಣಗಾಡುತ್ತಿವೆ. ಕಲಿಕೆ ಮತ್ತು ಉಪಯೋಗಗಳ ವಿಷಯದಲ್ಲಿ ಇಂಗ್ಲಿಷ್ ಸಾವಿರಾರು ಸಣ್ಣ ಭಾಷೆಗಳನ್ನು ಅಪಾಯದ ಅಂಚಿಗೆ ತಳ್ಳಿದೆ. ಭಾರತದಲ್ಲಿ ಈ ಸಮಸ್ಯೆ ಇನ್ನೂ ತೀವ್ರತರವಾಗಿದ್ದರೂ, ಕೋಮುವಾದ, ಧರ್ಮ, ಭ್ರಷ್ಟಾಚಾರ, ಜಾತಿ, ರಾಜಕೀಯ, ಮತ್ತಿತರ ವಿಷಯಗಳ ಕುರಿತು ಇಲ್ಲಿ ಚರ್ಚೆ ನಡೆದ ಹಾಗೆ, ಅವಸಾನದ ಅಂಚಿನಲ್ಲಿರುವ ಭಾಷೆಗಳ ಉಳಿಯುವಿಕೆಯ ಕುರಿತು ಸಂವಾದ ನಡೆಯುತ್ತಿಲ್ಲ.

ಇಂದು ಬಹಳ ಪ್ರಭಾವಶಾಲಿಯಾಗಿರುವ ಮಾಧ್ಯಮಗಳಿಗೂ ಈ ಕುರಿತು ಆಸಕ್ತಿಯಿಲ್ಲ. ಭಾಷೆಯ ಅವನತಿಯ ಅಪಾಯಗಳ ಕುರಿತು ತಿಳುವಳಿಕೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಇಂದು ವಿಶ್ವದಾದ್ಯಂತ ಜೀವಂತವಿರುವ ಸುಮಾರು 7,000 ಭಾಷೆಗಳನ್ನು ಸಣ್ಣ ಭಾಷೆಗಳೆಂದು ಗುರುತಿಸಲಾಗಿದೆ. ಇದರಲ್ಲಿ ಸುಮಾರು 3,700 ರಷ್ಟು ಭಾಷೆಗಳು ಭಾರತದಲ್ಲಿಯೇ ಇವೆ. ಇದು ಸ್ಥೂಲ ರೂಪದ ತಿಳುವಳಿಕೆ. ಆದರೆ ಸೂಕ್ಷ್ಮವಾಗಿ ಮತ್ತು ಭಿನ್ನವಾಗಿ ನೋಡಿದರೆ ಇವುಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಉದಾಹರಣೆಗೆ ಇಂಗ್ಲಿಷಿಗೆ ಹೋಲಿಸಿದರೆ, ಹಿಂದಿ ಸಣ್ಣ ಭಾಷೆ ಮತ್ತು ಅದಕ್ಕೆ ಇಂಗ್ಲಿಷಿನಿಂದ ಅಪಚಾರವಾಗುತ್ತಿದೆ, ಆದರೆ ರಾಜಸ್ಥಾನಿ, ಭೋಜ್‌ಪುರಿ, ಮೈಥಿಲಿ ಮತ್ತಿತರ ಭಾಷೆಗಳನ್ನು ಗಮನಿಸಿದಾಗ ಅವುಗಳ ಮೇಲೆ ಹಿಂದಿ ಭಾಷೆಯಿಂದಲೇ ಅಪಚಾರವಾಗುವುದನ್ನು ಕಾಣುತ್ತೇವೆ. ಹಿಂದಿಗೆ ಹೋಲಿಸಿದರೆ ಕನ್ನಡ ಭಾಷೆ ಸಣ್ಣದು. ಕಾರಣ ಹಿಂದಿ ಕನ್ನಡದ ಮೇಲೆ ಆಕ್ರಮಣ ಮಾಡುತ್ತದೆ. ಕನ್ನಡ ತುಳುವನ್ನು ಆಕ್ರಮಿಸಿಕೊಳ್ಳುತ್ತದೆ. ತುಳುವನ್ನು ಮಾತ್ರ ಗಮನಿಸಿದರೂ ಸಾಕು, ಅಲ್ಲಿ ದಲಿತರ ತುಳು ಸಾಮಾನ್ಯವಾಗಿ ಸವರ್ಣೀಯರ ತುಳುವಿಗೆ ತಲೆಬಾಗುತ್ತದೆ. ನಾವು ನೋಡುತ್ತಿದ್ದಂತೆಯೇ ಕೊರಗ ಭಾಷೆಯ ಜಾಗವನ್ನು ತುಳು ಪೂರ್ತಿಯಾಗಿ ಆಕ್ರಮಿಸಿಕೊಂಡಿತು. ಹೀಗೆ ಕೊನೆಯಿಲ್ಲದ ಈ ಸಂಕಷ್ಟದಲ್ಲಿ ಭಾಷಾ ಅಲ್ಪಸಂಖ್ಯಾತರನ್ನು ನಾವು ಇದುವರೆಗೆ ಸರಿಯಾಗಿ ನಿರ್ವಚಿಸಿಯೇ ಇಲ್ಲ. ನಮ್ಮ ದೇಶಕ್ಕೆ ರಾಷ್ಟ್ರೀಯ ಭಾಷಾ ನೀತಿ ಎಂಬುದೇ ಇಲ್ಲ. ಭಾರತದಲ್ಲಿ ಇದೀಗ 22 ಭಾಷೆಗಳನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಿ ಅವುಗಳನ್ನು ಸಬಲೀಕರಣಗೊಳಿಸಲು ಯತ್ನಿಸಲಾಗಿದೆ.

ಇದರಲ್ಲಿ 18 ಭಾಷೆಗಳು ಉತ್ತರ ಭಾರತಕ್ಕೆ ಸೇರಿದರೆ, ಕೇವಲ ನಾಲ್ಕು ಭಾಷೆಗಳು ದ್ರಾವಿಡ ಭಾಷಾ ವರ್ಗಕ್ಕೆ ಸೇರಿವೆ. ಈ ನಡುವೆ ಇತರ 38 ಭಾಷೆಗಳು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಲು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದು ಅದರಲ್ಲಿ ಕೇವಲ ಎರಡು ( ತುಳು ಮತ್ತು ಕೊಡವ) ದ್ರಾವಿಡ ವರ್ಗಕ್ಕೆ ಸೇರಿವೆ. ಈ ಬೇಡಿಕೆಗಳನ್ನು ಸವಾಲಾಗಿ ಸ್ವೀಕರಿಸಿ, ಭಾಷೆಗಳ ಅಭಿವೃದ್ಧಿಗೆ ಕೆಲಸ ಮಾಡಬೇಕಾಗಿದ್ದ ಸರಕಾರ ಇದೀಗ ಎಂಟನೆಯ ಪರಿಚ್ಛೇದದ ಕೆಲವು ಸವಲತ್ತುಗಳನ್ನೇ ಕಡಿತಗೊಳಿಸಲು ಆರಂಭಿಸಿದೆ. ಉದಾಹರಣೆಗೆ, ಕೇಂದ್ರ ಲೋಕಸೇವಾ ಆಯೋಗವು ಎಂಟನೇ ಪರಿಚ್ಛೇದದಲ್ಲಿ ಹೊಸದಾಗಿ ಸೇರುವ ಭಾಷೆಗಳಲ್ಲಿ ಇದೀಗ ಪರೀಕ್ಷೆಗೆಳನ್ನು ನಡೆಸಬೇಕಾಗಿಲ್ಲ. ಅಂದರೆ, ಸ್ಪರ್ಧಿಯೊಬ್ಬನ ಮಾತೃ ಭಾಷೆಗೆ ಅಲ್ಲಿ ಅವಕಾಶವಿಲ್ಲ. ಸಣ್ಣ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಮಾಡುವವರಿಲ್ಲವೆಂದು ಅದು ಹೇಳುತ್ತದೆ. ಪ್ರಶ್ನೆ ಪತ್ರಿಕೆ ತಯಾರು ಮಾಡುವಂಥ ವಿದ್ವಾಂಸರ ಸೃಷ್ಟಿಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಳಿದರೆ ಅದರ ಬಳಿ ಉತ್ತರವಿಲ್ಲ. ಇಂತಹ ಪ್ರಕ್ರಿಯೆಗಳ ಜೊತೆಗೆ ಕೆಲವು ರಾಜ್ಯ ಸರಕಾರಗಳೂ ಸೇರಿಕೊಂಡಿವೆ. ಉದಾಹರಣೆಗೆ ದಿಲ್ಲಿಯಲ್ಲಿ ಹಿಂದಿ, ಪಂಜಾಬಿ ಮತ್ತು ಉರ್ದು ಅಧಿಕೃತ ಭಾಷೆಗಳಾದರೆ, ಪಶ್ಚಿಮ ಬಂಗಾಲದಲ್ಲಿ ಬಾಂಗ್ಲಾ, ನೇಪಾಲಿ, ಹಿಂದಿ, ಉರ್ದು, ಮತ್ತು ಸಂತಾಲಿ ಭಾಷೆಗಳು ಅಧಿಕೃತ ರಾಜ್ಯ ಭಾಷೆಗಳಾಗಿವೆ. ತೆಲಂಗಾಣದಲ್ಲಿ ತೆಲುಗುವಿನ ಜೊತೆಗೆ ಉರ್ದುವನ್ನು ಅಂಗೀಕರಿಸಲಾಗಿದೆ.

ಆದರೆ ಕರ್ನಾಟಕವು ತುಳು ಮತ್ತು ಕೊಡವ ಭಾಷೆಗಳನ್ನು ಅಧಿಕೃತ ರಾಜ್ಯ ಭಾಷೆಯಾಗಿ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದೆ. ರಾಜ್ಯಕ್ಕೇ ಬೇಡವಾದ ಭಾಷೆಯನ್ನು ಕೇಂದ್ರ ಅಂಗೀಕರಿಸುವುದಾದರೂ ಹೇಗೆ? ಹೀಗೆ ನಮ್ಮ ಭಾಷಾ ರಾಜಕೀಯವು ಜಾಗತೀಕರಣ ಪ್ರಕ್ರಿಯೆಗಳೊಂದಿಗೆ ಸೇರಿಕೊಂಡು ಸಂಕೀರ್ಣವಾದ ಸನ್ನಿವೇಶ ನಿರ್ಮಾಣಗೊಂಡಿದೆ. ಯೂನೆಸ್ಕೋವು ಸಿದ್ಧಪಡಿಸಿದ ಭಾಷೆಗಳ ಜಾಗತಿಕ ಭೂಪಟ ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. (Christopher Moseley, ed., UNESCO, Paris 2010)      ಈ ಸಣ್ಣ ಭಾಷೆಗಳನ್ನಾಡುವ ಜನರಲ್ಲಿಯೂ ತಮ್ಮ ಮಾತೃ ಭಾಷೆಗಳ ಬಗೆಗೆ ಅಭಿಮಾನ ಕಡಿಮೆಯಾಗಿ, ಇಂಗ್ಲಿಷಿನ ಮೇಲೆ ಮೋಹ ಹೆಚ್ಚಾಗುತ್ತಲಿದೆ. ಹೀಗೆ ಭಾರತದಲ್ಲಿ ಸುಮಾರು ಮೂರು ಕೋಟಿಯ ಅರುವತ್ತು ಲಕ್ಷ ಜನಗಳ ಮಾತೃ ಭಾಷೆಗಳು ಇಂದು ಪತನಮುಖಿಯಾಗಿವೆ. ಭಾಷಾವಾರು ಪ್ರಾಂತಗಳ ರಚನೆಯಾದಾಗ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದುವು, ಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಸುಮಾರು ಒಂದು ಕೋಟಿ ಜನರಾಡುವ ತುಳುವನ್ನು ಕರ್ನಾಟಕ ರಾಜ್ಯ ಇಂದಿನವರೆಗೆ ಅಧಿಕೃತ ಭಾಷೆಯೆಂದೇ ಘೋಷಿಸಿಲ್ಲ್ಲವಲ್ಲ! ಖಾಸಿ, ಜೈಂಟಿಯಾ, ಕೊಡವ, ಬೃಜ ಮೊದಲಾದ ಅನೇಕ ಸುಂದರ ಭಾಷೆಗಳ ಕತೆಯಾದರೂ ಅಷ್ಟೆ. ಕರ್ನಾಟಕದಲ್ಲಿ ಇವತ್ತಿಗೂ ತುಳು- ಕೊಡವದಂಥ ಭಾಷೆಗಳಿಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಾಧ್ಯಾಪಕರೇ ಇಲ್ಲ. ಕನ್ನಡದ ಅಧ್ಯಾಪಕರೇ ಈ ಭಾಷೆಗಳ ಉದ್ಧಾರದ ಕೆಲಸಗಳನ್ನೂ ಮಾಡಬೇಕಾಗಿದೆ. ದ್ರಾವಿಡ ಭಾಷಾ ವರ್ಗದಲ್ಲಿ ತಮಿಳು, ಮಲೆಯಾಳಂ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಮಾತ್ರ ಸಾವಿರಾರು ಅಧ್ಯಾಪಕರಿದ್ದಾರೆ, ಉಳಿದ ಸುಮಾರು 24 ಸ್ವತಂತ್ರ ಭಾಷೆಗಳಲ್ಲಿ ಪ್ರಾಧ್ಯಾಪಕರು ಏಕಿಲ್ಲ.? ಒಟ್ಟಾರೆಯಾಗಿ ಇದರರ್ಥ ಇಷ್ಟೇ-
 

ಇಂದು ಸಣ್ಣ ಭಾಷೆಗಳ ಅಭಿವೃದ್ಧಿಯ ಕುರಿತು ಸರಕಾರಗಳಾಗಲೀ ವಿಶ್ವವಿದ್ಯಾನಿಲಯಗಳಾಗಲೀ ಮಾಡಬೇಕಾದಷ್ಟು ಕೆಲಸಗಳನ್ನು ಮಾಡುತ್ತಿಲ್ಲ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಜನರ ಭಾಷೆಗಳು ಎಲ್ಲ ಸವಲತ್ತುಗಳನ್ನೂ ಪಡೆದುಕೊಳ್ಳುತ್ತಿವೆ. ದುರ್ಬಲರ ನಾಲಗೆ ಕಟ್ಟಿ ಹೋಗಿದೆ, ಅವರ ಭಾಷೆಗಳು ವಿನಾಶದತ್ತ ಚಲಿಸುತ್ತಿವೆ. ಸಂಸ್ಕೃತಿಯ ಬಗೆಗೆ ತಿಳುವಳಿಕೆಯಿಲ್ಲದ ಅಭಿವೃದ್ಧಿಯ ಪರಿಕಲ್ಪನೆಯು ಮೂಲತಃ ಅನಾಹುತಕಾರಿಯಾದುದು ಎಂಬುದನ್ನು ಜಗತ್ತಿನ್ನೂ ಅರ್ಥಮಾಡಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ನಾವು ನಮ್ಮ ಸಂಶೋಧನೆಗಳ ಬಗೆಗೆ ಹೊಸದಾಗಿ ಯೋಚಿಸುವ ಕಾಲ ಬಂದಿದೆ. ಕನ್ನಡ ವಿಶ್ವವಿಶ್ವವಿದ್ಯಾನಿಲಯದಂಥ ಭಾಷಾ ಕೇಂದ್ರಿತ ಸಂಸ್ಥೆಯ ಜವಾಬ್ದಾರಿಗಳನ್ನೂ ನಾವು ಪುನರ್ ರೂಪಿಸಿಕೊಳ್ಳಬೇಕಾಗಿದೆ. ಒಂದೆಡೆ ಸಂಶೋಧನೆಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಇನ್ನೊಂದೆಡೆ ತಿಳುವಳಿಕೆಗಳು ಅಂತಾರಾಷ್ಟ್ರೀಯಗೊಳ್ಳುತ್ತಿರುವ ಆಧುನಿಕ ಪ್ರಕ್ರಿಯೆ, ಇವೆರಡರ ನಡುವೆ ನಾವು ಬದುಕುತ್ತಾ, ನಮ್ಮ ಧ್ವನಿಯು ಇತರರಿಗೆ ಕೇಳುವಂತೆ ಕೆಲಸ ಮಾಡಬೇಕಾಗಿದೆ. ನಮಗೆ ನಾವೇ ಮಾತಾಡಿಕೊಳ್ಳುವ ಕಾಲ ಮುಗಿದುಹೋಗಿದೆ. ಜಗತ್ತಿನೊಡನೆ ಗಂಭೀರವಾಗಿ ಸನ್ನಿಹಿತವಾಗಿದೆ. ನಮ್ಮ ಯೋಚನೆಗಳ ಬಗ್ಗೆ ಎಚ್ಚರದಿಂದಿರೋಣ, ಅವು ಪದಗಳಾಗುತ್ತವೆ
ನಮ್ಮ ಪದಗಳ ಬಗ್ಗೆ ಎಚ್ಚರದಿಂದಿರೋಣ ಅವು ಕ್ರಿಯೆಗಳಾಗುತ್ತವೆ, ನಮ್ಮ ಕ್ರಿಯೆಗಳ ಬಗ್ಗೆ ಎಚ್ಚರದಿಂದಿರೋಣ

ಅವು ಅಭ್ಯಾಸಗಳಾಗುತ್ತವೆ, ನಮ್ಮ ಅಭ್ಯಾಸಗಳ ಬಗ್ಗೆ ಎಚ್ಚರದಿಂದಿರೋಣ ಅವು ವ್ಯಕ್ತಿತ್ವವಾಗಿರುತ್ತದೆ, ನಮ್ಮ ವ್ಯಕ್ತಿತ್ವದ ಬಗ್ಗೆ ಎಚ್ಚರದಿಂದಿರೋಣ ಅವು ನಾಡಿನ ಭವಿಷ್ಯವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News