ಕಬ್ಬನ್ ಉದ್ಯಾನವನಕ್ಕೆ ಹೊಸ ರೂಪ ನೀಡಲು ಸಜ್ಜು

Update: 2016-03-21 16:46 GMT
  • 7ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿ
  • ನೂತನ ಕಲ್ಯಾಣಿ ನಿರ್ಮಾಣ
  • ಆಕರ್ಷಕ ಪ್ರವೇಶ ದ್ವಾರಗಳು
  • ಪಾರ್ಕಿಗೆ ಬೆಳಕಿನ ಭಾಗ್ಯ
  • -ಸುಸಜ್ಜಿತ ಪಾದಚಾರಿ ಮಾರ್ಗ

ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಅಂದವನ್ನು ಇನ್ನಷ್ಟು ಹೆಚ್ಚಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.ಉದ್ಯಾನವನ ಅಭಿವೃದ್ಧಿ ಕಾರ್ಯಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ 7ಕೋಟಿ ರೂ.ಗಳನ್ನು ಬಿಡುಗಡೆ ಗೊಳಿಸಿದ್ದು, ಕಾಮಗಾರಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

  ಪುಂಡ-ಪೋಕರಿಗಳು,  ಯುವ ಪ್ರೇಮಿಗಳು ಹಾಗೂ ಮಂಗಳಮುಖಿಯರ ಉಪಟಳ, ಭದ್ರತೆ, ಪ್ರವಾಸಿಗರ ಸುರಕ್ಷತೆ, ನೈಮರ್ಲ್ಯ ಕೊರತೆ ಹಿನ್ನೆಲೆಯಲ್ಲಿ ಬಸವಳಿದ ಉದ್ಯಾನವನಕ್ಕೆ ಹೊಸ ಖದರ್ ನೀಡಲು ತೋಟಗಾರಿಕೆ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ.

ನೂರಾರು ಬಗೆಯ ಪಕ್ಷಿ ಪ್ರಬೇಧಗಳು, ಅಪರೂಪದ ವೃಕ್ಷ ಸಂಪತ್ತನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುವ ಕಬ್ಬನ್ ಉದ್ಯಾನವನ ಐತಿಹ್ಯ ಪ್ರಸಿದ್ಧ. ಮಾತ್ರವಲ್ಲ, ದೇಶಿ-ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಹೌದು. ಆ ಹಿನ್ನೆಲೆಯಲ್ಲಿ ಉದ್ಯಾನವನಕ್ಕೆ ಹೊಸ ರೂಪ ನೀಡಲು ಸರಕಾರ ಉದ್ದೇಶಿಸಿದೆ.

ನೂತನ ಗೇಟ್: ಇಲ್ಲಿನ ಹಡ್ಸನ್ ವೃತ್ತದಲ್ಲಿರುವ ಕಬ್ಬನ್ ಉದ್ಯಾನದ ಮುಖ್ಯ ಗೇಟ್ ಅನ್ನು 45ಲಕ್ಷ ರೂ. ವೆಚ್ಚದಲ್ಲಿ ಹೊಸ ರೂಪವನ್ನು ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ ಹೈಕೋರ್ಟ್ ಎಡ ಭಾಗದಲ್ಲಿರುವ ಮತ್ತೊಂದು ಪ್ರವೇಶ ದ್ವಾರಕ್ಕೂ ಆಧುನಿಕ ಸ್ಪರ್ಶ ನೀಡಲು 40ಲಕ್ಷ ರೂ. ಸೇರಿ ಒಟ್ಟು 95 ಲಕ್ಷ ರೂ.ಗಳನ್ನು ವೆಚ್ಚ ಮಾಡಲು ಇಲಾಖೆ ನಿರ್ಧರಿಸಿದೆ.

ಮೇಲ್ಕಂಡ ಎರಡು ಪ್ರವೇಶದ್ವಾರಗಳು ನಗರದ ಹೈಕೋರ್ಟ್‌ನ ಗೋಲ್ಡೆನ್ ಜ್ಯೂಬಿಲಿ ಗೇಟ್ ಮಾದರಿಯಲ್ಲಿ ನಿರ್ಮಾಣವಾಗಲಿವೆ. ಈ ಪ್ರವೇಶದ್ವಾರದಲ್ಲೆ ಉದ್ಯಾನವನದ ಹೆಸರು ಮತ್ತು ಅದರ ವೈಶಿಷ್ಟತೆಗಳನ್ನು ತಿಳಿಸುವ ನಾಮಫಲಕ ಅಳವಡಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ.

ಅನಧಿಕೃತ ಪಾರ್ಕಿಂಗ್‌ಗೆ ತಡೆ: ಕಬ್ಬನ್ ಉದ್ಯಾನವನದಲ್ಲಿ ಸರಕಾರಿ ಮತ್ಸಾಲಯದಿಂದ ಪ್ರೆಸ್‌ಕ್ಲಬ್ ವರೆಗೆ ಅನಧಿಕೃತ ವಾಹನಗಳ ನಿಲುಗಡೆ ತಪ್ಪಿಸಲು ಇಲಾಖೆ ಮುಂದಾಗಿದ್ದು, ಈ ಸ್ಥಳದಲ್ಲಿ 45ಲಕ್ಷ ರೂ.ವೆಚ್ಚದಲ್ಲಿ ಲಾಕ್ ಸಿಸ್ಟಮ್ ಗ್ರಿಲ್ ಆಳವಡಿಸಲಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ಮತ್ತು ಕಬ್ಬನ್ ಉದ್ಯಾನವನದ ಸುತ್ತಮುತ್ತ ವಿವಿಧ ಕಾರ್ಯಕ್ರಮಗಳ ವೇಳೆ ವಾಹನ ಸವಾರರು, ಚಾಲಕರು ತಮ್ಮ ವಾಹನಗಳನ್ನು ಪಾರ್ಕಿನ ಒಳಭಾಗದಲ್ಲೆ ನಿಲುಗಡೆ ಮಾಡುತ್ತಾರೆ. ಇದರಿಂದ ಪ್ರವಾಸಿಗರು ಹಾಗೂ ಪರಿಸರ ಪ್ರೇಮಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅಲ್ಲದೆ, ಉದ್ಯಾನವನದ ಸೌಂದರ್ಯಕ್ಕೂ ದಕ್ಕೆಯಾಗುತ್ತಿದೆ.

ನೂತನ ಕಲ್ಯಾಣಿ: ಉದ್ಯಾನವನದಲ್ಲಿನ ಪುರಾತನ ಮರಗಳ ಸಂರಕ್ಷಣೆ ಹಾಗೂ ಅಲಂಕಾರಿಕ ಸಸ್ಯಗಳ ಸಂರಕ್ಷಣೆ ದೃಷ್ಟಿಯಿಂದ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 75 ಲಕ್ಷ ರೂ.ವೆಚ್ಚದಲ್ಲಿ ಅರವತ್ತು ಅಡಿ ವಿಸ್ತೀರ್ಣದಲ್ಲಿ ಮಳೆ ನೀರು ಸಂಗ್ರಹಿಸಲು ನೂತನ ಕಲ್ಯಾಣಿ ತೋಟಗಾರಿಕಾ ಕಚೇರಿ ಹಿಂಭಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ.

ಪ್ರವಾಸಿಗರನ್ನು ಆರ್ಕಷಿಸುವ ನಿಟ್ಟಿನಲ್ಲಿ ಪುರಾತನ ಕಲ್ಯಾಣಿಯ ರೀತಿಯಲ್ಲೇ ಕಲ್ಲುಗಳಿಂದ ನಿರ್ಮಾಣ ಮಾಡಲಿದ್ದು, ಕಲ್ಯಾಣಿಯ ಮಧ್ಯದಲ್ಲಿ ಕಾರಂಜಿಯನ್ನು ನಿರ್ಮಿಸಲಾಗುವುದು. ಕಲ್ಯಾಣಿಯಲ್ಲಿ ಶೇಖರಣೆ ಆಗುವ ಮಳೆ ನೀರನ್ನು ಉದ್ಯಾನವನಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ರಸ್ತೆ ಅಭಿವೃದ್ಧಿ:  ಸುಮಾರು 5ಕೋಟಿ ರೂ.ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳ ಮಾದರಿಯಲ್ಲೆ ಕಬ್ಬನ್ ಉದ್ಯಾನದ ಒಳಗಿನ ರಸ್ತೆಗಳು ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ಈ ರಸ್ತೆಗಳ ಉದ್ದಕ್ಕೂ ಆಕರ್ಷಕ ಅಲಂಕಾರಿಕ ಸಸ್ಯಗಳನ್ನು ಇರಿಸಲಾಗುವುದು. ಎಲ್ಲ ಕಾಲಗಳಿಗೂ ಆಕರ್ಷಕವಾಗಿ ಕಾಣುವ ವಿದೇಶಿ ತಳಿಗಳಾದ ಹೀರೋಡೆಂಟಾ, ಅಕೇಲಿಫಾಸ್, ಲಂಟಾನಾಸೋ ಅಲಮಂಡ ಸಸಿಗಳನ್ನು ನೆಡಲಾಗುವುದು. ಸುಸಜ್ಜಿತ ಹೊಸ ಪಾಥ್ ವೇಗಳ ನಿರ್ಮಾಣವಾಗಲಿವೆ.

 ಕಬ್ಬನ್ ಉದ್ಯಾನದಲ್ಲಿರುವ ಕೇಂದ್ರ ಗ್ರಂಥಾಲಯದ ಮುಂಭಾಗದಿಂದ ಹಡ್ಸನ್ ವೃತ್ತದ ವರೆಗೆ ಅಭಿವೃದ್ಧಿ ಕಾಣದೆ ಉಳಿದಿದ್ದ 17 ಎಕರೆ ಪ್ರದೇಶದಲ್ಲಿ ಯೂರೋಪಿಯನ್ ಗಾರ್ಡನ್, ನೆರಳು ಉದ್ಯಾನವನಗಳ ಅಭಿವೃದ್ಧಿ, ರಕ್ಷಣಾ ದೃಷ್ಟಿಯಿಂದ ಪಾರ್ಕ್‌ನ ಸುತ್ತಮುತ್ತ 30ಕ್ಕೂ ಅಧಿಕ ಸಿಸಿ ಟಿವಿ ಕ್ಯಾಮರಾ ಅಳವಡಿಕೆಯ ಜೊತೆಗೆ ಶೌಚಾಲಯ ನಿರ್ಮಾಣ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ ಆಸ್ಥೆ ವಹಿಸಲಾಗಿದೆ.

ಬೆಳಕಿನ ಭಾಗ್ಯ: ಕಬ್ಬನ್ ಪಾರ್ಕಿನ ಅಂದವನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಬೆಸ್ಕಾಂ ವತಿಯಿಂದ 700 ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ ಮಾಡಲಾಗುವುದು. ಪ್ರಸ್ತುತ ಪಾರ್ಕಿನ ಒಳಗಿನ 340 ವಿದ್ಯುತ್ ದೀಪಗಳನ್ನು ಆಧುನೀಕರಿಸಲಾಗುವುದು. ಜೊತೆಗೆ ಹೆಚ್ಚುವರಿಯಾಗಿ 350 ಎಲ್‌ಇಡಿ ಬಲ್ಬ್‌ಗಳನ್ನು ಹೊಸ ಸ್ಥಳಗಳಲ್ಲಿ ಆಳವಡಿಸಲಾಗುವುದು ಎಂದು ಬೆಸ್ಕಾಂನ ಅಧಿಕಾರಿ ಡಿಸೋಜಾ ‘ವಾರ್ತಾ ಭಾರತಿ’ ಪತ್ರಿಕೆಗೆ ತಿಳಿಸಿದರು.

ನೈಮರ್ಲ್ಯ ಕೊರತೆ ಹಿನ್ನೆಲೆಯಲ್ಲಿ ತೀವ್ರ ನಿರ್ಲಕ್ಷಕ್ಕೆ ಗುರಿಯಾಗಿ ತನ್ನ ಹಳೆಯ ಖದರ್ ಕಳೆದುಕೊಂಡ ಕಳಹೀನವಾಗಿದ್ದ ಕಬ್ಬನ್ ಉದ್ಯಾನವನಕ್ಕೆ ಹೊಸ ರಂಗು ಬರಲಿದ್ದು, ದೇಶಿ-ವಿದೇಶಿ ಪ್ರವಾಸಿಗರನ್ನು ಕೈಬಿಸಿ ಕರೆಯಲು ಪಾರ್ಕ್ ಶೀಘ್ರದಲ್ಲೆ ಅಣಿಯಾಗುವುದು ನಿಶ್ಚಿತವಾಗಿದೆ. ಬಾಕ್ಸ್..

‘ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ಪೈಕಿ ವಿದೇಶಿಯರದ್ದೆ ಸಿಂಹಪಾಲು. ಹೀಗಾಗಿ ಮುಂದಿನ ಆರೇಳು ತಿಂಗಳಲ್ಲಿ ಪಾರ್ಕ್ ಹೊಸ ರೂಪ ಪಡೆದುಕೊಳ್ಳಲಿದ್ದು, ಪರಿಸರ ಪ್ರೇಮಿಗಳು ಹಾಗೂ ಪ್ರವಾಸಿಗರಿಗೆ ಅತ್ಯಾಕರ್ಷಕ ಕೇಂದ್ರವಂತೂ ಆಗಲಿದೆ’

-ಮಹಾಂತೇಶ್ ಮುರಗೋಡ್ ಉಪನಿರ್ದೇಶಕ ತೋಟಗಾರಿಕೆ ಇಲಾಖೆ

 ಕಬ್ಬನ್ ಉದ್ಯಾನ ವನದ ಇತಿಹಾಸ: ಮೈಸೂರು ಸಂಸ್ಥಾನದ ಹಂಗಾಮಿ ಕಮಿಷರ್ ಆಗಿದ್ದ ಸರ್ ಜಾನ್ ಮೀಡ್ ಅವರು 1870ರ ಕಬ್ಬನ್ ಉದ್ಯಾನವನ್ನು 100 ಎಕರೆ ವಿಸ್ತಿರ್ಣದಲ್ಲಿ ರೂಪಿಸಿದರು. ಆಗ ‘ಮೀಡೇಸ್ ಪಾರ್ಕ್’ ಎಂದಿತ್ತು. ಮೈಸೂರು ಸಂಸ್ಥಾನದ ಚ್ೀ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅವರು ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರಿಂದ ‘ಕಬ್ಬನ್ ಉದ್ಯಾನ’ವೆಂದು ಮರುನಾಮಕರಣ ಮಾಡಲಾಯಿತು.

1900ರ ಅಸುಪಾಸಿನಲ್ಲಿ ಕಬ್ಬನ್ ಉದ್ಯಾನ 200ಎಕರೆಗಳಿಗೂ ಅಧಿಕ ಭೂ ಪ್ರದೇಶವನ್ನು ಅವರಿಸಿತ್ತು. ಕಬ್ಬನ್‌ರ ನಂತರ ಮೈಸೂರು ಸಂಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದ ಬೌರಿಂಗ್ ಅವರು 1868ರಲ್ಲಿ ಹೈಕೋರ್ಟ್ ಕಟ್ಟಡ ಕಟ್ಟಿಸಿ, ಕಬ್ಬನ್‌ರ ಕಾರ್ಯಗಳ ನೆನಪಿನಾರ್ಥ ಆ ಕಟ್ಟಡದ ಮುಂಭಾಗದಲ್ಲಿ ಮಾರ್ಕ್ ಕಬ್ಬನ್‌ರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಧ್ಯ 190ಎಕರೆ ಭೂ ಪ್ರದೇಶದಲ್ಲಿರುವ ಕಬ್ಬನ್ ಉದ್ಯಾನವನಕ್ಕೆ ಪ್ರತಿನಿತ್ಯ 3ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಿದ್ದು ವರ್ಷಕ್ಕೆ ಸುಮಾರು 6ರಿಂದ 8ಸಾವಿರ ಮಂದಿ ವಿದೇಶಿ ಪ್ರವಾಸಿಗರು ಉದ್ಯಾನವನಕ್ಕೆ ಆಗಮಿಸುತ್ತಾರೆ. 

Writer - ಪ್ರಭಾಕರ ಟಿ. ಚೀಮಸಂದ್ರ

contributor

Editor - ಪ್ರಭಾಕರ ಟಿ. ಚೀಮಸಂದ್ರ

contributor

Similar News