ಹಿಂಗೇ ಮರ ಕಡಕೊಂಡ್ ಹೋಗಿ... ಅರಬ್ಬಿ ಸಮುದ್ರಕ್ಕೆ ಬೀಳ್ತಿರ ಎಂದಿದ್ದ ಅರಸು
ನಿವೃತ್ತ ಐಎಫ್‌ಎಸ್ ಅಧಿಕಾರಿ ಎ.ಸಿ.ಲಕ್ಷ್ಮಣ್(77) ಮೂವತ್ತು ವರ್ಷಗಳ ಕಾಲ ಕಾಡು ಮತ್ತು ಕಾಡಿನ ವಾಸಿಗಳೊಂದಿಗೆ ಒಡನಾಟ ಹೊಂದಿದ್ದವರು. ಬೆತ್ತ ಕುರಿತ 'ರ್ಯಾಟನ್ಸ್ ಆಫ್ ಸೌತ್ ಇಂಡಿಯಾ' ಎಂಬ ಸಂಶೋಧನಾ ಗ್ರಂಥ ರಚಿಸಿದವರು. ಇಂದು ಈ ಕೃತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುಚರ್ಚಿತ ಸಂಶೋಧನಾ ವಿದ್ಯಾರ್ಥಿಗಳ ಆಕರ ಗ್ರಂಥವಾಗಿದೆ. ರಾಜ್ಯದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿರುವ ಎ.ಸಿ.ಲಕ್ಷ್ಮಣ್, ನಡೆ-ನುಡಿಯಲ್ಲಿ ಉನ್ನತಾಧಿಕಾರದ ಕುರುಹನ್ನೂ ಕಾಣಗೊಡದ ಸರಳರು. ಹಳ್ಳಿಯ ಸಾಮಾನ್ಯ ರೈತನಂತೆ ಕಾಣುವ, ನೀರು, ಕಾಡು, ಪರಿಸರದ ಬಗ್ಗೆ ಅಪಾರ ಕಾಳಜಿ, ಕಳಕಳಿ ಇಟ್ಟುಕೊಂಡಿರುವ ಸಜ್ಜನ. ಈ ನಿವೃತ್ತ ಬದುಕಿನಲ್ಲೂ ನಾಡಿಗಾಗಿ ಏನಾದರೂ ಮಾಡಬೇಕು, ಮಾಡಿದ್ದು ಏನೇನೂ ಸಾಲದು ಎಂಬ ತುಡಿತವನ್ನಿಟ್ಟುಕೊಂಡವರು.
ಇಂತಹ ಲಕ್ಷ್ಮಣ್ ಹುಟ್ಟಿದ್ದು ಶ್ರೀರಂಗಪಟ್ಟಣ ಹತ್ತಿರದ ಅಗ್ರಹಾರದಲ್ಲಿ, ಸ್ವಾತಂತ್ರ ಹೋರಾಟಗಾರರ ಕುಟುಂಬದಲ್ಲಿ. ಓದು ಬರಹವೆಲ್ಲ ಮೈಸೂರಿನಲ್ಲಿ. ಹೆಚ್ಚಿನ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಆನಂತರ ಫಾರೆಸ್ಟ್ರಿ ಮುಗಿಸಿದ್ದು ಡೆಹರಾಡೂನ್‌ನಲ್ಲಿ. ವಿಶೇಷ ಉಪನ್ಯಾಸ ನೀಡುವಷ್ಟು ಪ್ರೌಢಿಮೆ ಪಡೆದುಕೊಂಡದ್ದು ಆಕ್ಸ್‌ಫರ್ಡ್‌ನಲ್ಲಿ. 1962ರಲ್ಲಿ ಅರಣ್ಯ ಅಧಿಕಾರಿಯಾಗಿ ಸೇವೆಗೆ ಸೇರಿದ ಲಕ್ಷ್ಮಣ್, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕೆಲಸ ಮಾಡಿದವರು, ಕಾಡು ಕುರಿತ ಕಕ್ಕುಲಾತಿ ಇಟ್ಟುಕೊಂಡವರು. ಸಾಮಾನ್ಯರಿಗೂ ಅರ್ಥವಾಗುವಂತೆ ಬೇರು-ನೀರುಗಳ ಸಂಬಂಧವನ್ನು ವಿವರಿಸಬಲ್ಲ ವಿಜ್ಞಾನಿ. ಯೂನಿವರ್ಸಿಟಿಗಳಿಂದ ಪಡೆದ ಬೌದ್ಧಿಕ ಶಿಸ್ತಿನ ಜೊತೆಗೆ ಕಾಡಿನ ಆದಿವಾಸಿಗಳ ಅರಿವನ್ನು, ಅನುಭವವನ್ನು ಅರೆದು ಕುಡಿದ ಲಕ್ಷ್ಮಣ್, ಕಾಡಿನಲ್ಲಿ ಕಳೆದು ಹೋಗುವುದನ್ನು ಪುಣ್ಯದ ಕೆಲಸವೆಂದೇ ಭಾವಿಸಿದವರು. ಗಿಡಮರ, ಪ್ರಾಣಿಪಕ್ಷಿ, ನೀರು ನಿಡಿಯನ್ನು ಪೊರೆವ, ಮುಂದಿನ ಪೀಳಿಗೆಗೂ ಕಾಪಿಡುವ ಕಾರ್ಯದಲ್ಲಿ, ಅರಸು ಹುಟ್ಟೂರಾದ ಕಲ್ಲಳ್ಳಿಯಲ್ಲಿ 'ವನ ತೋಟಗಾರಿಕೆ'ಯನ್ನು ಹುಟ್ಟುಹಾಕಿದವರು. ಅದರ ಮೂಲಕ ಪ್ರತಿವರ್ಷ ಸಂಕ್ರಾಂತಿಯ ಸೊಗಸು ಎಂಬ ಕಾರ್ಯಕ್ರಮ ಆಯೋಜಿಸುತ್ತ, ಹಲವು ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತ, ಆ ಮೂಲಕ ಅರಣ್ಯ, ಪರಿಸರ ಕುರಿತ ಅರಿವನ್ನು ಜನರಲ್ಲಿ ಬಿತ್ತುತ್ತಿರುವವರು.
ಶಿಸ್ತಿನ ಪ್ರಾಮಾಣಿಕ ಅಧಿಕಾರಿಯೆಂದೇ ಹೆಸರಾದ ಲಕ್ಷ್ಮಣ್, ಮಂತ್ರಿ ರಾಚಯ್ಯನವರ ಪರಮಾಪ್ತ ಅಧಿಕಾರಿಗಳಲ್ಲೊಬ್ಬರಾಗಿದ್ದರು. ಆ ಮೂಲಕ ದೇವರಾಜ ಅರಸರ ಸಂಪರ್ಕಕ್ಕೆ ಬಂದವರು. ಅರಸರಲ್ಲಿದ್ದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕಳಕಳಿ, ಕಾಳಜಿ ಮತ್ತು ಅರಣ್ಯ ಪ್ರೀತಿಯ ಕಾರಣಕ್ಕೆ ಅವರ ಆಪ್ತ ಬಳಗದ ಅಧಿಕಾರಿಯಾದರು. 1962ರಿಂದ 1982ರವರೆಗೆ, ಸುಮಾರು 20 ವರ್ಷಗಳ ಕಾಲ ಅರಸು ಅವರನ್ನು ಅಧಿಕಾರಿಯಾಗಿ ಹತ್ತಿರದಿಂದ ಕಂಡವರು. ಅಧಿಕಾರಶಾಹಿಯನ್ನು ಜನಪರ ಕಾರ್ಯಕ್ರಮಗಳಿಗೆ ಅಣಿಗೊಳಿಸಿದ ಅರಸರ ಅದ್ಭುತ ಆಡಳಿತದ ಭಾಗವಾದವರು. ಅಂತಹ ಲಕ್ಷ್ಮಣ್ ಅರಸರನ್ನು ಆನೆಗೆ ಹೋಲಿಸಿ ಬಣ್ಣಿಸಿದ್ದು ಇಲ್ಲಿದೆ...
ಆನೆ-ಹುಲಿಗಳ ನಡುವೆ...
ಅದು 1971, ವೀರೇಂದ್ರ ಪಾಟೀಲರ ಕ್ಯಾಬಿನೆಟ್‌ನಲ್ಲಿ ರಾಮಕೃಷ್ಣ ಹೆಗಡೆಯವರು ಮಂತ್ರಿಯಾಗಿದ್ದರು. ಆಗ ನಾನು ಕಾರವಾರದಲ್ಲಿದ್ದೆ. ಹೆಗಡೆ ಅವರ ಆಪ್ತರಿಗೆ ಅನುಕೂಲ ಮಾಡಿಕೊಡಲು, 1 ಲಕ್ಷ ಎಕರೆ ಅರಣ್ಯ ಭೂಮಿಯನ್ನು ಹಂಚಲು ಸರಕಾರಿ ಆದೇಶ ಹೊರಡಿಸಿದರು. ಅರಣ್ಯ ಭೂಮಿಯನ್ನು ಹೀಗೆ ಹಂಚುತ್ತಾ ಹೋದರೆ ಉಳಿಯುವುದುಂಟೆ. ನನಗಿದು ಸರಿ ಕಾಣಲಿಲ್ಲ. ಮುಂದೂಡಿದೆ. ಅದೃಷ್ಟಕ್ಕೆ ವೀರೇಂದ್ರ ಪಾಟೀಲರ ಸರಕಾರ ಬಿದ್ದುಹೋಗಿ ದೇವರಾಜ ಅರಸರ ಸರಕಾರ ಅಧಿಕಾರಕ್ಕೆ ಬಂತು. ಕೆ.ಎಚ್.ಪಾಟೀಲ್ ಅರಣ್ಯ ಮಂತ್ರಿಯಾದರು. ಮಂತ್ರಿಯಾಗುತ್ತಿದ್ದಂತೆ ಸಿರಸಿಗೆ ಟೂರ್ ಹಾಕಿಕೊಂಡರು. ಅರಣ್ಯ ಮಂತ್ರಿ ಪಾಟೀಲರು ಬರುತ್ತಾರೆಂದು ತಿಳಿದು ಅರಣ್ಯ ಭೂಮಿಗಾಗಿ ಕಾದಿದ್ದವರು, ಹೆಗಡೆಯವರ ಆಪ್ತರು ಎಲ್ಲರೂ ಜಮಾಯಿಸಿದರು. ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಜೊತೆಗೆ ಒಂದಷ್ಟು ಪೊಲೀಸರನ್ನು ಜಮೆ ಮಾಡಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು. ಜನ ನನ್ನ ವಿರುದ್ಧ ಕೂಗಾಡತೊಡಗಿದರು, ಬಿಟ್ಟರೆ ಬಡಿಯುತ್ತಿದ್ದರೇನೋ. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಮಂತ್ರಿ ಪಾಟೀಲರು, 'ನೋಡಿ, ನಾನು ನಿಮ್ಮ ಪ್ರತಿನಿಧಿ, ನನ್ನ ಹತ್ತಿರ ಮಾತಾಡಿ, ಅವರು ನನ್ನ ಆಫೀಸರ್' ಎಂದರು. ಅವರು ಹೇಳಿದ ಧಾಟಿ ಹುಲಿ ಘರ್ಜಿಸಿದಂತೆಯೇ ಇತ್ತು. ಆ ಘರ್ಜನೆಗೆ ಜನ ಸ್ತಬ್ಧರಾದರು. ಹುಲಿಕೋಟಿ ಹುಲಿಯನ್ನು ಕಣ್ಣಾರೆ ಕಂಡಿದ್ದೆ.
ಸಭೆಯ ಮುಂದುಗಡೆ ಕೋಟು-ಪೇಟಾ ಹಾಕಿಕೊಂಡು ಶ್ರೀಮಂತರು ಕೂತಿದ್ದರು, ಹಿಂದೆ ಬಡವರು ನಿಂತಿದ್ದರು. ಪಾಟೀಲರು ಆ ಬಡವರತ್ತ ನೋಡಿ, 'ನಿಮಗೆ ಎಷ್ಟು ಭೂಮಿ ಇದೆಯಪ್ಪ' ಎಂದರು. ಅವರೆಲ್ಲ 'ನಮಗೆ ಏನೂ ಇಲ್ಲ ಸ್ವಾಮಿ' ಎಂದರು. ತಕ್ಷಣ ಪಾಟೀಲರು ಮುಂದೆ ಕೂತಿದ್ದ ಶ್ರೀಮಂತರನ್ನು ಕೇಳಿದರು. ಅಲ್ಲಿ ನೆರೆದಿದ್ದ ಜನರಲ್ಲಿ ಯಾರಿಗೆ ಭೂಮಿಯ ಅಗತ್ಯವಿದೆ, ಯಾರಿಗೆ ಸಿಗುತ್ತದೆ ಎಂಬುದು ಗೊತ್ತಾಗಿ, ಗಲಾಟೆಯಾಗಿ, ಅದು ಅಲ್ಲಿಗೇ ತಣ್ಣಗಾಯಿತು.
ಅದಾದ ನಂತರ ಮುಖ್ಯಮಂತ್ರಿ ದೇವರಾಜ ಅರಸು ಅಂಕೋಲಾಕ್ಕೆ ಬಂದರು. ಅಲ್ಲೂ ಇದೇ ವಿಷಯಕ್ಕೆ ಗಲಾಟೆಯಾಗುವುದಿತ್ತು. ಆದರೆ ನಮಗೆ ಗೊತ್ತಿದ್ದರಿಂದ ಅದಕ್ಕೆ ವ್ಯವಸ್ಥೆ ಮಾಡಿದೆವು. ಸಿರಸಿಯಲ್ಲಿ ಪಾಟೀಲರು ಹೇಗೆ ನಿಭಾಯಿಸಿದ್ದರೋ ಅದಕ್ಕಿಂತ ಅಚ್ಚುಕಟ್ಟಾಗಿ ಅರಸು ಅಂಕೋಲಾದಲ್ಲಿ ಜನರನ್ನು ನಿಭಾಯಿಸಿದರು. ಅರಸರ ತಾಳ್ಮೆ, ಸಹನೆ, ವ್ಯವದಾನ ಎಲ್ಲವನ್ನು ನೋಡಿದ ನನಗೆ ಅರಸು ಆನೆಯಂತೆ ಕಾಣತೊಡಗಿದರು. ಅವರ ತಾತ್ರ, ಗತ್ತು, ಗಡಸು ಕೂಡ ಹಾಗೆಯೇ ಇತ್ತು. ಅವರು ಹುಲಿ, ಇವರು ಆನೆ. ಇಬ್ಬರು ನನ್ನ ಬೆನ್ನಿಗೆ ನಿಂತರು. ಹಾಗೆ ಅವರಿಬ್ಬರು ದೃಢ ನಿರ್ಧಾರ ತೆಗೆದುಕೊಂಡಿದ್ದರಿಂದಾಗಿ ಸಾರ್ವಜನಿಕರ ಸ್ವತ್ತಾದ 1 ಲಕ್ಷ ಎಕರೆ ಅರಣ್ಯ ಭೂಮಿ ಸರಕಾರಕ್ಕೆ ಉಳಿಯಿತು. ಇದು ಮುಖ್ಯಮಂತ್ರಿ ಅರಸರಿಗೆ ನನ್ನ ಬಗ್ಗೆ ವಿಶ್ವಾಸ ಕುದುರಲು ಕಾರಣವಾಯಿತು. ನನಗೂ, ಇವರು ನಮ್ಮವರು ಎನಿಸಿತು. ಗ್ರೀಕ್ ಹೀರೋ...
ಅರಸು ನಮ್ಮ ಹಳ್ಳಿ ಕಡೆಯ ದೇಸೀ ಪೈಲ್ವಾನ್ ಥರ. ಅವರಿಗೆ ಕುಸ್ತಿ ಬಹಳ ಇಷ್ಟದ ಕ್ರೀಡೆಯಾಗಿತ್ತು. ಜೊತೆಗೆ ಅವರ ಆ ಫಿಸಿಕ್... ಎತ್ತರದ ನಿಲುವು, ರಾಜ ಗಾಂಭೀರ್ಯ, ಅಳೆದು ತೂಗಿ ಮಾತನಾಡುವ ಪರಿ... ಎಲ್ಲವೂ ಪೈಲ್ವಾನನ ವ್ಯಕ್ತಿತ್ವಕ್ಕೆ ಮೆರುಗು ಕೊಡುವಂಥವು. ಅವರನ್ನು ನೋಡುತ್ತಿದ್ದರೆ ಗ್ರೀಕ್ ಹೀರೋ ನೋಡಿದಂತಾಗುತ್ತಿತ್ತು. ಒಂದು ರೀತಿಯ ಗೌರವ ತಾನಾಗಿಯೇ ಮೂಡಿ ಬರುತ್ತಿತ್ತು. ಮುಖ್ಯಮಂತ್ರಿ ಅರಸು ಹುಣಸೂರು, ಮಡಿಕೇರಿಗೆ ಬಂದರೆ ಪ್ರತಿದಿನ ವಾಕ್ ಮಾಡುತ್ತಿದ್ದರು. ವಾಕ್‌ಗೆ ಸಮಯ ಸಾಕಾಗುತ್ತಿರಲಿಲ್ಲವೆಂದರೆ ವ್ಹೈಟ್ ಎತ್ತುತ್ತಿದ್ದರು. ಆ ತೂಕದ ಸಾಧನಗಳನ್ನು ಅವರು ಕಾರಿನಲ್ಲಿಯೇ ಇಟ್ಟುಕೊಂಡು ತಿರುಗುತ್ತಿದ್ದರು. ಅವರ ಡ್ರೈವರ್ ಅವುಗಳನ್ನು ಎರಡೂ ಕೈಗಳಿಂದ ಎತ್ತುತ್ತಿದ್ದುದನ್ನು ನೋಡಿದ್ದೇನೆ. ಅರಸು ಅಚ್ಚುಕಟ್ಟಾಗಿ, ನೆಲದ ಮೇಲೆ ಚಕ್ಕಲಮಕ್ಕಲ ಹಾಕಿ ಕೂತು, ಹಿತ್ತಾಳೆ ತಟ್ಟೆಯಲ್ಲಿ ಒಂದಗಳು ಅನ್ನವನ್ನೂ ಬಿಡದಂತೆ ಕೈ ಬಾಯಿ ನೆಕ್ಕಿ ಸಂತೃಪ್ತಿಯಿಂದ ಊಟ ಮಾಡುತ್ತಿದ್ದರು. ಅದನ್ನು ನೋಡೋದೆ ಒಂದು ಚೆಂದ. ನಾನು ಈ ಹಳ್ಳಿಯ ಪೈಲ್ವಾನ್ ಅಂತ ಯಾಕೆ ಕರೆದೆ ಅಂದರೆ, ಈ ಪೈಲ್ವಾನರು ಮಣ್ಣಿನಲ್ಲಿ ಕಸರತ್ತು ಮಾಡುವವರಾದ್ದರಿಂದ, ಅವರ ವ್ಯಕ್ತಿತ್ವದಲ್ಲಿ ಮಣ್ಣಿನ ಗುಣವಿರುತ್ತದೆ, ಅಮ್ಮನ ಪ್ರೀತಿ-ವಾತ್ಸಲ್ಯವಿರುತ್ತದೆ, ಸಮಾಜವನ್ನು ಸಂರಕ್ಷಿಸುವ ಜವಾಬ್ದಾರಿ ಇರುತ್ತದೆ. ಜೊತೆಗೆ ಸಮಾಜವೂ ಕೂಡ ಅವರನ್ನು ಅಪಾರ ಗೌರವದಿಂದ ಕಾಣುತ್ತದೆ. ಪೈಲ್ವಾನರು ಮತ್ತು ಸಾಮಾನ್ಯರ ನಡುವಿನ ಈ ಸಂಬಂಧ ಸಮಾಜದ ಸ್ವಾಸ್ಥವನ್ನು ಪೊರೆಯುತ್ತದೆ. ಇದು ನಮ್ಮ ಪರಂಪರೆ.
ಆದರೆ ಇತ್ತೀಚಿನ ದಿನಗಳಲ್ಲಿ ಈ ಗರಡಿ ಮನೆಗಳು, ಪೈಲ್ವಾನರು, ಅವರನ್ನು ರೂಪಿಸುತ್ತಿದ್ದ ಉಸ್ತಾದ್‌ಗಳ ಸಂಖ್ಯೆ ಕ್ಷೀಣಿಸುತ್ತಿದೆ. ಬದಲಿಗೆ ಗಲ್ಲಿ ಗಲ್ಲಿಗಳಲ್ಲೆಲ್ಲ ಫಿಟ್‌ನೆಸ್ ಸೆಂಟರ್‌ಗಳು, ಏರೋಬಿಕ್ಸ್ ಜಿಮ್ ಜಾಯಿಂಟ್‌ಗಳು ನಾಯಿಕೊಡೆಗಳಂತೆ ಪ್ರಾರಂಭವಾಗಿವೆ. ಫಿಟ್‌ನೆಟ್ ಎನ್ನುವುದು ಹದಿಹರೆಯದವರ ಹೊಸ ಕಾಯಿಲೆಯಾಗಿದೆ. ಏನೇನೋ ತಿಂದು, ಮಾಡಬಾರದ್ದನ್ನೆಲ್ಲ ಮಾಡಿ, ಅಲ್ಪ ಸಮಯದಲ್ಲಿಯೇ ಅಸಹ್ಯವಾಗಿ ದೇಹ ಬೆಳೆಸಿಕೊಂಡವರನ್ನು ನೋಡುತ್ತಿದ್ದರೆ ನನಗೆ ಕೀಚಕನ ನೆನಪಾಗುತ್ತದೆ. ಹಿಂದೆ ಜಯಂಟ್ಸ್ ಆರ್ ಕೈಂಡ್ ಇತ್ತು, ಇವತ್ತು ಕಿಲ್ಲರ್‌ಗಳಾಗಿದ್ದಾರೆ. ಅದಕ್ಕೆ ನಾನು ಯೋಚಿಸಿರುವುದೇನೆಂದರೆ, ಅರಸು ನಮ್ಮ ಮಾಡೆಲ್. ಅವರನ್ನು ನಾನು ಭೀಮ ಎಂದು ಕರೆಯುತ್ತೇನೆ. ನಮಗೆ ಇವತ್ತು ಬೇಕಾಗಿರುವುದು ಇಂತಹ ಭೀಮ ಪಡೆ, ಕೀಚಕರ ಸೈನ್ಯವಲ್ಲ. ಅದಕ್ಕಾಗಿ ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹಿಸಿ, ಗರಡಿಮನೆಗಳಲ್ಲಿ ಅರಸು ಫೋಟೋ ಪ್ರತಿಷ್ಠಾಪಿಸಿ, ಪೈಲ್ವಾನ್ ಭೀಮರನ್ನು ಸೃಷ್ಟಿಸುವ ಉಸ್ತಾದ್‌ಗಳಿಗೆ ಸಮಾಜದಲ್ಲಿ ಸ್ಥಾನ ಮಾನ ನೀಡಿ ಗೌರವಿಸಿ, ಆರ್ಥಿಕ ಸಹಾಯ ನೀಡಿದರೆ, ಭವಿಷ್ಯದಲ್ಲಿ ಕೀಚಕರ ಸಂಖ್ಯೆ ಕಡಿಮೆಯಾಗಿ, ಬಲಭೀಮ ಪಡೆ ಹೆಚ್ಚಾಗುತ್ತದೆ. ಸಹಿಷ್ಣು ಸಮಾಜ ನಿರ್ಮಾಣವೂ ಸಾಧ್ಯ ಎನ್ನುವುದು ನನ್ನ ಅನಿಸಿಕೆ. ಹೀಗಾದರೆ ಅರಸು ಕೂಡ ಉಳಿಯುತ್ತಾರೆ, ಸಮಾಜದ ಸ್ವಾಸ್ಥವೂ ಉಳಿಯುತ್ತದೆ. ಹಳೇ ಮನೆ, ಹಳೇ ಕುರ್ಚಿ
ಅರಸು ಕಲ್ಲಳ್ಳಿಗೆ ಬಂದರೆ, ನಮ್ಮನ್ನೆಲ್ಲ ಕರೆಸಿಕೊಳ್ಳುತ್ತಿದ್ದರು. ನಾವು ಅಲ್ಲಿಯವರೆಗಿನ ವರದಿ ಒಪ್ಪಿಸಬೇಕಾಗಿತ್ತು. ಕೂತಲ್ಲಿಂದಲೇ ವೌಖಿಕ ಆದೇಶಗಳೂ ಜರಗುತ್ತಿದ್ದವು. ಅವರಿಗೆ ಅವರ ಹಳೇ ಮನೆ ಅಂದರೆ ಬಹಳ ಪ್ರೀತಿ. ಆ ಹಳೆಯ ಮನೆ ಮುಂದಕ್ಕೆ ಹೊಸ ಮನೆ ಕಟ್ಟಿಸಿದ್ದರೂ, ಅರಸು ಅಲ್ಲಿಗೆ ಹೋಗುತ್ತಿರಲಿಲ್ಲ. ಈ ಹಳೇ ಮನೆ ಇತ್ತಲ್ಲ, ಅಲ್ಲಿಗೇ ಬಂದು, ಅವರದೇ ಆದ ಒಂದು ಹಳೇ ಕುರ್ಚಿ ಮೇಲೆ ಕೂತರೆ, ಅದೇ ಅವರಿಗೆ ಸಿಂಹಾಸನ. ಆ ಕುರ್ಚಿಯ ಮುಂದೆ ನಾವೆಲ್ಲ ಕೂತರೆ, ಅವರು ಭಾವನಾ ಲೋಕದಲ್ಲಿ ವಿಹರಿಸುತ್ತ, ಬಾಲ್ಯ ಕಾಲದ ಕತೆಗಳನ್ನೆಲ್ಲ ವರ್ಣಿಸುತ್ತಿದ್ದರು. ನಾನು ಮುಖ್ಯಮಂತ್ರಿ, ನೀನು ಸರಕಾರಿ ನೌಕರ, ಅಧಿಕಾರಿ ಎಂಬ ಭೇದ ಭಾವವಿಲ್ಲ, ಮೇಲು ಕೀಳಿಲ್ಲ. ಸಮ ಸಮಾಜದ ಕಲ್ಪನೆ ಅವರ ಪ್ರತಿಯೊಂದು ಕ್ರಿಯೆಯಲ್ಲೂ ಕಂಡೂ ಕಾಣದಂತಿತ್ತು.
ಒಂದು ಸಲ ನಾನು ಮತ್ತು ನನ್ನ ಮೇಲಧಿಕಾರಿ ಬಾಲಯ್ಯನವರು ಅವರನ್ನು ನೋಡಲು ಹೋದೆವು. ಒಳಗಿನ ಕೋಣೆಯಲ್ಲಿ ಮಲಗಿದ್ದರು, ಅಲ್ಲಿಗೇ ಕರೆದರು. ನಾನು ಮಡಿಕೇರಿಯಲ್ಲೊಂದು ಮನೆ ಕಟ್ಟಿಸಿದ್ದೆ. ತುಂಬಾ ಚೆನ್ನಾಗಿತ್ತು. ಅದನ್ನು ಅರಸು ಅವರ ಮಗಳು ನೋಡಿ ಇಷ್ಟಪಟ್ಟಿದ್ದಳು. ಅದು ಬೇಕೆಂದು ಅರಸರಿಗೆ ತಾಕೀತು ಮಾಡಿದ್ದಳು. ಅವತ್ತು ಅರಸು ಮುಖ್ಯಮಂತ್ರಿಗಳು, ನಾನು ಯಕಶ್ಚಿತ್ ಒಬ್ಬ ಅಧಿಕಾರಿ. ಆದರೆ ಅರಸು ಮಗಳು ಮನೆ ಇಷ್ಟಪಟ್ಟಿದ್ದನ್ನು ನನಗೇ ಹೇಳಿ, 'ಲಕ್ಷ್ಮಣ ಆಸೆ ಪಟ್ಟು ಕಟ್ಟಿಸಿಕೊಂಡಿದ್ದಾನೆ, ಅದು ಬೇಡ, ನಿನಗೆ ಬೆಂಗಳೂರಲ್ಲಿ ಕೊಡಸ್ತೀನಿ' ಅಂದೆ ಎಂದರು. ಬೇರೆ ಯಾರಾದರೂ ಆಗಿದ್ದರೆ, ಇವತ್ತಿನ ಸಂದರ್ಭವಾಗಿದ್ದರೆ.. ಅದೇನು ಮಾಡುತ್ತಿದ್ದರು ಎನ್ನುವುದನ್ನು ನಿಮ್ಮ ಊಹೆಗೇ ಬಿಡುತ್ತೇನೆ.
ಅರಬ್ಬಿ ಸಮುದ್ರಕ್ಕೆ ಬೀಳಿ...
ಊರಲ್ಲಿ ಬೆಳಗಿನ ಸಮಯದಲ್ಲಿ ಸೈಕಲ್ ಹೊಡೀತಿದ್ರು. ಅಲ್ಲಿಗೆ ಒಬ್ಬ ರೈತ ಓಡಿ ಬಂದು, 'ಬುದ್ಧಿ, ಆ ನಿಂಗೇಗೌಡ ಹಲಸಿನ ಮರ ಕಡಿಸಿಹಾಕಿದ' ಎಂದ. ಹಾಗೆಯೇ ಮರ ಕಡಿಯುವ ಜಾಗಕ್ಕೆ ಹೋದ ಅರಸು, ಮರದ ಮಾಲಕ ಮತ್ತು ಮರ ಖರೀದಿದಾರ- ಇಬ್ಬರಿಗೂ ಹಿಗ್ಗಾ ಮುಗ್ಗಾ ಬಯ್ದರು. 'ಎಷ್ಟು ದೊಡ್ಡ ಹಲಸಿನಮರ, ಹಣ್ಣು ಬಿಡುತ್ತದೆ ತಿನ್ನು, ನೆರಳು ಕೊಡುತ್ತದೆ ಕೂತು ತಣ್ಣಗಿರು, ಪ್ರಾಣಿ-ಪಕ್ಷಿಗಳು ಉಲಿಯುತ್ತವೆ ಕೇಳಿ ಆನಂದಪಡು... ಅದು ಬಿಟ್ಟು ಕಡಿಯುವುದೇ' ಎಂದು ಸಿಟ್ಟಾದ ಅರಸು 'ನೀನು ನೆಡಲಿಲ್ಲ, ನೀರು ಹಾಕಲಿಲ್ಲ, ನಿನಗೆ ಕಡಿಯಲೂ ಅಧಿಕಾರವಿಲ್ಲ' ಎಂದು ನೀರಿಳಿಸಿಬಿಟ್ಟರು. ಅರಸು ಅವರ ಆ ಮಾತು ಪರಿಸರ ವಿಜ್ಞಾನಿಯ ವಿದ್ವತ್ತಿಗೆ ಸಮನಾಗಿತ್ತು. ಜೀವಸಂಕುಲದ ಪಾಠ ಹೇಳುತ್ತಿತ್ತು. ಅರಣ್ಯ ಪ್ರೇಮವನ್ನು ಅಭಿವ್ಯಕ್ತಿಸಿತ್ತು. ಆದರೆ ಹಳ್ಳಿಯ ರೈತರಿಗೆ ಅದು ಅಸಂಬದ್ಧ ಮಾತಿನಂತೆ ಕೇಳಿಸುತ್ತಿತ್ತು. ಆ ಕಾಲದಲ್ಲಿ ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿತ್ತು, ನಿರುದ್ಯೋಗವಿತ್ತು, ಬಡತನವಿತ್ತು, ಹಸಿವಿನ ಹಾಹಾಕಾರವಿತ್ತು, ಆಹಾರದ ಕೊರತೆ ಇತ್ತು. ಆಗ ಸಹಜವಾಗಿಯೇ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಮೊದಲ ಆದ್ಯತೆಯಾಗಿತ್ತು. ಅದರಿಂದಾಗಿ ಕಾಡಿನ ಜೌಗು ಪ್ರದೇಶವನ್ನು ರೈತರಿಗೆ ಬೇಸಾಯ ಮಾಡಲು ಉಚಿತವಾಗಿ ವಿತರಿಸಲಾಗುತ್ತಿತ್ತು.
ಹೀಗಾಗಿ ಅರಣ್ಯಭೂಮಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲಿತ್ತು. ಜೊತೆಗೆ ಕಳ್ಳಸಾಗಣೆದಾರರು, ಉರುವಲಿಗಾಗಿ ಹಳ್ಳಿಗರು, ಅರಣ್ಯದ ಅಂಚಿನ ಭೂಮಿಯನ್ನು ಒತ್ತ್ತುವರಿ ಮಾಡುವವರು, ಎಲ್ಲರೂ ಮರ ಕಡಿಯುತ್ತ ಹುಣಸೂರು ಸುತ್ತಮುತ್ತಲ ಕಾಡು ಬೋಳಾಗುತ್ತಲಿತ್ತು. ಜೌಗು ಪ್ರದೇಶವೆಂದರೆ ಜೀವ ಜಿನುಗುವ ಜಾಗ. ಅದು ಬತ್ತಿದರೆ ಕಾಡೇ ಕಣ್ಮರೆ. ಕೃಷಿಗಾಗಿ ವಿತರಿಸುವಂತಿಲ್ಲ, ಆಹಾರದ ಕೊರತೆಯನ್ನು ನೀಗಿಸಲಾಗುತ್ತಿಲ್ಲ. ಇದು ಅರಸರ ಧರ್ಮಸಂಕಟಕ್ಕೆ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಹಳ್ಳಿಯ ರೈತರು ಅರಣ್ಯ ಅಧಿಕಾರಿಗಳು ಕೊಡುವ ಕಷ್ಟ ಹೇಳಿಕೊಳ್ಳಲು ಬಂದರು. ಅವರೆಲ್ಲ ನನ್ನ ಮೇಲೆಯೇ ದೂರು ಹೇಳಲು ಬಂದಿದ್ದರು. ಏನೇನೋ ಹೇಳುತ್ತಲೇ ಇದ್ದರು. ಅವರ ಮಾತಿಗೆ ಬ್ರೇಕ್ ಹಾಕಿದ ಅರಸು, 'ಇಲ್ಲಿಂದ ಮರ ಕಡಕೊಂಡು ಕಡಕೊಂಡು ಹೋಗಿ ಅರಬ್ಬಿ ಸಮುದ್ರ ಸಿಕ್ತದೆ, ಅಲ್ಲಿ ಹೋಗಿ ಬೀಳಿ' ಎಂದು ಸಿಕ್ಕಾಪಟ್ಟೆ ಸಿಟ್ಟಿನಿಂದ ಕೂಗಾಡಿದರು. ಅರಸರ ಕೂಗಾಟ, ಸಂಕಟದಲ್ಲಿ ಜನರ ಬಗೆಗಿನ ಕಳಕಳಿ ಇತ್ತು, ಅರಣ್ಯದ ಬಗ್ಗೆ ಪ್ರೀತಿ ಇತ್ತು. ಅದು ನನಗೆ ಅರ್ಥವಾಗಿತ್ತು. ಆದರೆ, ಜನಕ್ಕೆ ಅರ್ಥವಾಗಲೂ ಇಲ್ಲ, ಪಾಲಿಸಲೂ ಇಲ್ಲ, ಕಾಡೂ ಉಳಿಯಲಿಲ್ಲ.
ಮುಂದುವರಿಯುವುದು...