ಅಪಸ್ಮಾರ ಮತ್ತು ಅಪನಂಬಿಕೆಗಳು

Update: 2016-03-25 18:44 GMT

ಪ್ರತೀ ವರ್ಷ ವಿಶ್ವದಾದ್ಯಂತ ಮಾರ್ಚ್ 26ರಂದು ಅಂತಾರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ಅಥವಾ ಪರ್ಪಲ್ ಡೇ ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತಿನಾದ್ಯಂತ ಸರಿಸುಮಾರು 65 ಮಿಲಿಯನ್ ಮಂದಿ ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ, ಈ ಕಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸಿಮೀತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ ಆರೋಗ್ಯ ಸಮಸ್ಯೆ ಎಂದರೂ ತಪ್ಪಲ್ಲ. ಪ್ರತಿ ವರ್ಷ ಫೆಬ್ರವರಿ 9ರಂದು ವಿಶ್ವ ಅಪಸ್ಮಾರ ದಿನ ಎಂದು ಆಚರಿಸಲಾಗುತ್ತದೆ. ಆದರೆ ಮಾರ್ಚ್ 26ರಂದು ಅಪಸ್ಮಾರ ರೋಗದ ಬಗ್ಗೆ ಅರಿವು ಮೂಡಿಸಿ ಹೆಚ್ಚಿನ ಜನಜಾಗೃತಿ ನೀಡುವ ನಿಟ್ಟಿನಲ್ಲಿ ಪರ್ಪಲ್ ಡೇ ಎಂದು ಆಚರಿಸಿ, ವಿಶ್ವದಾದ್ಯಂತ ರನ್ನಿಂಗ್, ಸ್ವೆಂಕ್ಲಿಂಗ್, ಸ್ಲಿಮಿಂಗ್, ಪೈಂಟಿಂಗ್ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಆಯೋಜಿಸಿ, ಪರ್ಪಲ್ ಬಣ್ಣದ ಬಟ್ಟೆ ಧರಿಸಿ ಅಪಸ್ಮಾರ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಿ, ರೋಗದ ವಿರುದ್ಧ ಸಮರ ಸಾರಿ, ಜಾಗೃತಿ ಮೂಡಿಸುವ ಯತ್ನವನ್ನು ಮಾಡಲಾಗುತ್ತದೆ.

ಸೆರಬ್ರಲ್ ಪಾಲ್ಸಿ ಎಂಬ ಅನುವಂಶಿಕ ಮೆದುಳು ಸಂಬಂಧಿ ರೋಗ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ ಮತ್ತು ಇವರಲ್ಲಿ ಶೇಕಡಾ 41 ಭಾಗದಷ್ಟು ಮಕ್ಕಳು ಅಪಸ್ಮಾರ ಕಾಯಿಲೆಯಿಂದ ಬಳಲುತ್ತಾರೆ. ಮಾರ್ಚ್ 25ರಂದು ವಿಶ್ವ ಸೆರಬ್ರಲ್ ಪಾಲ್ಸಿ ದಿನವೆಂದು ಆಚರಿಸಿ, ಮಾರ್ಚ್ 26ರಂದು ಪರ್ಪಲ್ ದಿನ ಎಂದು ಆಚರಿಸಿ ಅಪಸ್ಮಾರದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದ ಜನ ಸಂಖ್ಯೆಯ ಪ್ರತಿ ನೂರರಲ್ಲಿ ಒಬ್ಬ ಅಪಸ್ಮಾರ ಬಾಧೆಯಿಂದ ಬಳಲುತ್ತಿದ್ದಾರೆ ಮತ್ತು ವಿಶ್ವದಾದ್ಯಂತ 65 ಮಿಲಿಯನ್ ಮಂದಿ ಬಳಲುತ್ತಿದ್ದು, ಇವರಲ್ಲಿ ಶೇಕಡಾ 50 ಮಂದಿಗೆ ಯಾವ ಕಾರಣದಿಂದ ಅಪಸ್ಮಾರ ಬಂದಿದೆ ಎನ್ನುವುದು ಗೊತ್ತಿಲ್ಲದಿರುವುದೇ ಸೋಜಿಗದ ಸಂಗತಿ. ಭಾರತ ದೇಶದಲ್ಲಿ ಸುಮಾರು 12 ಮಿಲಿಯನ್ ಮಂದಿ ಈ ಅಪಸ್ಮಾರ ರೋಗದಿಂದ ಬಳಲುತ್ತಿದ್ದಾರೆ.

ಕೊನೆ ಮಾತು
ಅಪಸ್ಮಾರ ಎನ್ನುವುದು ಕೇವಲ ಒಂದು ರೋಗವಲ್ಲ. ಇದು ಹಲವಾರು ರೋಗಗಳಲ್ಲಿ ಕಾಣಿಸಿಕೊಳ್ಳುವ ಪ್ರಾಥಮಿಕ ಲಕ್ಷಣವಾಗಿದೆ. ಮೆದುಳಿಗೆ ಆಘಾತವಾದಾಗ ಮತ್ತು ಮೆದುಳಿನ ಕಾರ್ಯಕ್ಷಮತೆಗೆ ಧಕ್ಕೆಯಾದಾಗ ಅಥವಾ ಮೆದುಳಿನ ನರಮಂಡಲದ ನರಕೋಶಗಳ ಸಂವಹನದ ಕೊರತೆಯಿಂದಾಗಿ ಈ ಅಪಸ್ಮಾರ ರೋಗ ಕಾಣಿಸಿಕೊಳ್ಳುತ್ತದೆ. ಅಪರೂಪಕ್ಕೊಮ್ಮೆ ಬರುವ ಅಲ್ಪ ಪ್ರಮಾಣದ ಅಪಸ್ಮಾರವನ್ನು ನಿರಂತರವಾದ ಔಷಧಿ ಸೇವನೆ ಮತ್ತು ಆರೋಗ್ಯ ಪೂರ್ಣ ಜೀವನಶೈಲಿಯಿಂದ ಹತೋಟಿಯಲ್ಲಿಡಬಹುದು. ಇಂತಹ ರೋಗಿಗಳಲ್ಲಿ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಬದಲಾವಣೆಯ ಆವಶ್ಯಕತೆ ಇರುವುದಿಲ್ಲ. ಆದರೆ ತೀವ್ರತರಹದ ಅಪಸ್ಮಾರ ರೋಗವಿರುವವರು, ಪದೇ ಪದೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ರೋಗಿಗಳು ಯಾವತ್ತೂ ಕುಟುಂಬಿಕರ ಮತ್ತು ಸ್ನೇಹಿತರ ಹದ್ದಿನ ಕಣ್ಣಿನ ಕಣ್ಗಾವಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ.

ಇವರು ಔಷಧಿ ಸೇವನೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಬಹಳ ಶಿಸ್ತುಬದ್ಧರಾಗಿರಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಈ ರೋಗಿಗಳು ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಅಪಸ್ಮಾರ ರೋಗಿಗಳ ಬಗೆಗಿನ ಕೀಳರಿಮೆ ಯಾವತ್ತೂ ಒಳ್ಳೆಯದಲ್ಲ. ಈ ರೋಗ ಹೊಂದಿದ ರೋಗಿಗಳನ್ನು ಯಾವುದೇ ವಯಸ್ಸು, ಲಿಂಗ, ಜಾತಿ, ಭೇದವಿಲ್ಲದೆ ಪರಿಪೂರ್ಣ ಜೀವನ ನಡೆಸಲು ಅನುವು ಮಾಡಿಕೊಡಬೇಕು. ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಧೈರ್ಯ ತುಂಬಬೇಕು. ಆತನ ಲ್ಲಿನ ಸಕಾರಾತ್ಮಕ ವಿಚಾರಗಳ ಬಗ್ಗೆ ತಿಳಿಹೇಳಿ, ಆತ್ಮವಿಶ್ವಾಸ ತುಂಬಿ, ಒಳ್ಳೆಯ ವಿಚಾರಗಳನ್ನು ಜಾಗೃತಗೊಳಿಸಬೇಕು. ಅಂತಹ ರೋಗಿಗಳನ್ನು ಅತ್ಯಂತ ಪ್ರೀತಿ, ವಿಶ್ವಾಸ, ಆದರ, ಮಮತೆ ಮತ್ತು ಕರುಣೆಯಿಂದ ನೋಡಿಕೊಳ್ಳಬೇಕು. ಅವರ ರೋಗದ ಬಗೆಗಿನ ತಿರಸ್ಕಾರ ಮತ್ತು ಜಿಗುಪ್ಸೆ ಯಾವತ್ತೂ ಸಲ್ಲದು. ಅಂತಹ ರೋಗಿಗಳಿಗೆ ಮಾನಸಿಕ ಧೈರ್ಯ, ಸಾಂತ್ವನ ನೀಡಿ ಜೀವನೋತ್ಸಾಹ ಆರದಂತೆ ನೋಡಿಕೊಳ್ಳುವ ಸಾಮಾಜಿಕ ಹೊಣೆಗಾರಿಕೆ ನಮಗೆಲ್ಲರಿಗೂ ಇದೆ. ಆ ಮೂಲಕ ರೋಗಿಯಲ್ಲಿ ಆತ್ಮವಿಶ್ವಾಸ ಹೆಚ್ಚಿದಾಗ ಆತನಲ್ಲಿ ಜೀವನೋತ್ಸಹ ಉಕ್ಕಿದಲ್ಲಿ, ಖಂಡಿತವಾಗಿಯೂ ಅಪಸ್ಮಾರ ರೋಗದಿಂದ ಚೇತರಿಸಿಕೊಳ್ಳಲು ಸಹಾಯಕವಾಗಬಲ್ಲದು. ಹೀಗೆ ಅಪಸ್ಮಾರ ರೋಗಿಗಳಿಗೆ ಸಹಾಯನುಭೂತಿ, ಸ್ನೇಹ ಮತ್ತು ಸಹಕಾರ ನೀಡುವುದರಲ್ಲಿಯೇ ಮನುಷ್ಯತ್ವದ ಸೆಲೆ ಅಡಗಿದೆ.

ಏನಿದು ಅಪಸ್ಮಾರ ಕಾಯಿಲೆ?
ಅಪಸ್ಮಾರ ಎಂದರೆ ಪದೇ ಪದೇ ಮೆದುಳಿನ ನರಕೋಶಗಳು ಅತ್ಯಧಿಕ ಪ್ರಮಾಣದಲ್ಲಿ ಹೊರಹಾಕುವ ವಿದ್ಯುತ್ ಪ್ರಚೋದನೆಯ ಫಲವಾಗಿ ಮೆದುಳಿನ ಕಾರ್ಯದಲ್ಲಿ ಉಂಟಾಗುವ ತಾತ್ಕಾಲಿಕ ನಿಲುಗಡೆ ಅಥವಾ ವ್ಯತ್ಯಯದ ಪರಿಣಾಮವಾಗಿ ಆ ವ್ಯಕ್ತಿ ಅನುಭವಿಸುವ ಸ್ಮತಿ ಸೆಳೆತ ಮತ್ತು ಸೆಳೆವು. ಇದನ್ನೇ ಮೂರ್ಛೆ ರೋಗ, ಪಿಟ್ಸ್, ಅಪಸ್ಮಾರ, ಮಲರೋಗ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಎಪಿಲೆಪ್ಸಿ(ಉಐಔಉಖ್ಗ) ಎಂದು ಕರೆಯುತ್ತಾರೆ. ಜನಸಾಮಾನ್ಯ ಆಡುಭಾಷೆಯಲ್ಲಿ ಪಿಟ್ಸ್ ಎನ್ನುತ್ತಾರೆ.

ಅಪಸ್ಮಾರ ಉಂಟಾಗಲು ಕಾರಣಗಳೇನು?
    1.ಆನುವಂಶಿಕ ಕಾರಣಗಳು.
        2.ಹೆರಿಗೆಯ ಸಮಯದಲ್ಲಿ ಮೆದುಳಿಗೆ ಆಗುವ ಹಾನಿಯಿಂದಾಗಿ, ಅಪಸ್ಮಾರ ಕಾಯಿಲೆ ಬರಬಹುದು. ಇದು ಹೆರಿಗೆಯ ಸಮಯದಲ್ಲಿ ಮಗುವಿನ ತಲೆಯನ್ನು ಹೊರತೆಗೆಯುವ ಇಕ್ಕುಳದೊತ್ತಡದಿಂದಾಗಿ ಮೆದುಳಿಗೆ ಆಗುವ ಹಾನಿ ಅಥವಾ ಗರ್ಭಾಶಯದಲ್ಲಿರುವಾಗಲೇ ಉಂಟಾಗುವ ಆಮ್ಲಜನಕದ ಕೊರತೆಯಿಂದಾಗಿಯೂ ಬಾಲ್ಯದಲ್ಲಿ ಅಪಸ್ಮಾರ ಬರುವ ಸಾಧ್ಯತೆ ಇದೆ.

3.ಬಾಲ್ಯದಲ್ಲಿ ತಲೆಗೆ ಬಿದ್ದ ಪೆಟ್ಟು ನಂತರದ ದಿನಗಳಲ್ಲಿ ಅಥವಾ ಅನೇಕ ತಿಂಗಳು ಅಥವಾ ವರ್ಷಗಳ ಬಳಿಕ ಸೆಳವಿನ ರೂಪದಲ್ಲಿ ಕಾಣಿಸಿಕೊಳ್ಳಬಹುದು.
    
    4.ವಿಪರೀತವಾದ ಜ್ವರದಿಂದಲೂ ಕೆಲವೊಮ್ಮೆ ಅಪಸ್ಮಾರದ ಸಾಧ್ಯತೆ ಇದೆ.

5.ಕೆಲವೊಂದು ಮೆದುಳಿನ ಶಸ್ತ್ರ ಚಿಕ್ಸಿತೆಯ ಬಳಿಕ, ಮೆದುಳಿಗೆ ಉಂಟಾದ ಗಾಯದಿಂದಾಗಿ ಅಪಸ್ಮಾರ ಬರಬಹುದು.
    6.ಮೆದುಳಿಗೆ ರಕ್ತ ಸಂಚಾರ ಅಥವಾ ಆಮ್ಲಜನಕ ಕೊರತೆ ಉಂಟಾದಾಗ ಕೂಡಾ ಅಪಸ್ಮಾರ ಬರಬಹುದು. ನಮ್ಮ ಹೃದಯದಿಂದ ಹೊರಹಾಕುವ ರಕ್ತದಲ್ಲಿ 50 ಶೇಕಡಾ ಪ್ರಮಾಣ ಮೆದುಳಿಗೆ ಸರಬರಾಜಾಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಮೆದುಳು 1ರಿಂದ 1.5 ಕೆಜಿ ತೂಕ ಹೊಂದಿರುತ್ತದೆ ಮತ್ತು ಪ್ರತಿ 100 ಗ್ರಾಮ್ ಮೆದುಳಿಗೆ ಕನಿಷ್ಠ 30ML   
    ರಕ್ತದ ಆವಶ್ಯಕತೆ ಪ್ರತಿ ನಿಮಿಷಕ್ಕೆ ಇರುತ್ತದೆ. ಮೂರು ನಿಮಿಷಕ್ಕಿಂತ ಜಾಸ್ತಿ ಮೆದುಳಿಗೆ ರಕ್ತ ಸಂಚಾರ ವ್ಯತ್ಯಯವಾದಲ್ಲಿ, ಶಾಶ್ವತವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯಾಗಬಹುದು. ಒಟ್ಟಿನಲ್ಲಿ ಮೆದುಳು ನಮ್ಮ ದೇಹದ ಅತ್ಯಂತ ಕ್ರಿಯಾಶೀಲವಾದ ಅಂಗವಾಗಿದ್ದು ಆಮ್ಲಜನಕದ ಕೊರತೆಯಿಂದ, ಬಹಳ ಬೇಗ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ರಕ್ತದ ಕೊರತೆ ಕಾಣಿಸಿದ ಕೂಡಲೇ ಅಪಸ್ಮಾರದ ರೂಪದಲ್ಲಿ ಮೆದುಳು ತನ್ನ ಆಕ್ರೋಶ ಮತ್ತು ಅಸಹಕಾರವನ್ನು ಹೊರಹಾಕುತ್ತದೆ ಎಂದರೂ ತಪ್ಪಲ್ಲ.

7.ಅತಿಯಾದ ಮದ್ಯಪಾನ, ಅತಿಯಾದ ಔಷಧಿ ಸೇವನೆ, ಖಿನ್ನತೆ ಹೊಗಲಾಡಿಸುವ ಔಷಧಿಗಳ ದುರ್ಬಳಕೆ ಕೂಡಾ ಅಪಸ್ಮಾರಕ್ಕೆ ಕಾರಣವಾಗಬಹುದು. ನಿಯಮಿತವಾಗಿ ನಿರಂತರವಾಗಿ, ಮದ್ಯಪಾನ ಮಾಡುವ ಮದ್ಯವ್ಯಸನಿಗಳು ಮದ್ಯಪಾನವನ್ನು ಏಕಾಏಕಿ ಬಿಟ್ಟಾಗ ಕೂಡಾ ವ್ಯಕ್ತಿಯಲ್ಲಿ ಅಪಸ್ಮಾರ ಗೋಚರಿಸಬಹುದು. ಅದೇ ರೀತಿ ನಿದ್ರಾಹೀನತೆಗೆ ಉಪಯೋಗಿಸುವ ಗಾರ್ಡಿನಾಲ್ ಸೋಡಿಯಂ ಎಂಬ ಫಿನೋಬಾರ್ಬಿಟೋನ್ ಅಥವಾ ಬೆನ್ಜೊಡಯಜಪಿನ್ ಔಷಧಿ ಸೇವನೆ ನಿಲ್ಲಿಸಿದಾಗಲೂ ಅಪಸ್ಮಾರ ಕಾಣಿಸಿಕೊಳ್ಳಬಹುದು.

8.ಮೆದುಳಿನ ಉರಿಯೂತ (Meningitis) ಮೆದುಳಿನ ಪೊರೆ ಉರಿಯೂತ, ಮೆದುಳಿನ ಕೀವುಗಳು, ಮೆದುಳಿನ ಹೊರಮೈಯಲ್ಲಿನ ಪೊರೆಯಲ್ಲಿ ರಕ್ತ ಶೇಖರಣೆ (Sub Dural Hematoma), ಮೆದುಳಿಗೆ ಗಾಯವಾಗಿ ಊದಿಕೊಂಡಾಗ, (ಅಪಘಾತಗಳಲ್ಲಿ) ಮೆದುಳಿನ ಒಳಗಿನ ಒತ್ತಡ ಜಾಸ್ತಿಯಾದಾಗ ಅಪಸ್ಮಾರ ಕಾಣಿಸಿಕೊಳ್ಳಬಹುದು.
        9.ರಕ್ತದಲ್ಲಿ ಗ್ಲೊಕೊಸ್, ಕ್ಯಾಲ್ಸಿಯಂ, ಸೋಡಿಯಂ ಪ್ರಮಾಣ ಕಡಿಮೆಯಾದಾಗ ರಕ್ತದಲ್ಲಿ ಕಲ್ಮಶಗಳು ಜಾಸ್ತಿಯಾದಾಗ ಯೂರಿಯಾ, ಯೂರಿಕ್ ಆಸಿಡ್ ಮುಂತಾದ ಕಲ್ಮಶಗಳು, ಕಿಡ್ನಿ ವೈಫಲ್ಯದಿಂದಾಗಿ ರಕ್ತದಲ್ಲಿ ಏರಿಕೆಯಾಗಿ ಅಪಸ್ಮಾರ ಕಾಣಿಸಬಹುದು.

10.ಲಿವರ್ (ಯಕೃತ್ತು) ವಿಪರೀತ ಮದ್ಯ ಸೇವನೆಯಿಂದಾಗಿ ನಾಶಗೊಂಡು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡಾಗ ರಕ್ತದಲ್ಲಿ ಕಲ್ಮಶಗಳು ಅಥವಾ ಔಷಧಗಳ ಶೇಖರಣೆಗೊಂಡು ಅಪಸ್ಮಾರ ಉಂಟಾಗುವ ಸಾಧ್ಯತೆ ಇರುತ್ತದೆ.

ಅಪಸ್ಮಾರ ಬಂದಾಗ ಏನು ಮಾಡಬೇಕು?
ಅಪಸ್ಮಾರ ಬಂದಾಗ ತಕ್ಷಣ ಮಾಡಬೇಕಾದ ತುರ್ತು ಕೆಲಸವೆಂದರೆ, ರೋಗಿಯ ದೇಹದ ಭಾಗಕ್ಕೆ ಯಾವುದೇ ರೀತಿಯ ಅಪಾಯ ಆಗದಂತೆ ಆತನನ್ನು ನೋಡಿಕೊಳ್ಳಬೇಕು. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ, ಇತ್ಯಾದಿಗಳಿಂದ ದೂರವಿರಿಸಬೇಕು. ಬಿಗಿಯಾದ ಉಡುಪನ್ನು ಸಡಿಲಿಸಬೇಕು. ಆತನು ಉಸಿರಾಡಲು ಅನುಕೂಲವಾಗುವಂತೆ, ಉಸಿರು ಸರಾಗವಾಗಿ ಚಲನೆ ಉಂಟಾಗಲು ಪೂರಕವಾಗುವಂತೆ ತಲೆಯನ್ನು ಒಂದು ಕಡೆ ವಾಲಿಸಿ ಹಿಡಿಯಬೇಕು. ನಾಲಗೆ ಕಚ್ಚಿಕೊಳ್ಳದಂತೆ ತಡೆಯಲು, ಹಲ್ಲುಗಳ ನಡುವೆ ಕರವಸ್ತ್ರ ಅಥವಾ ಬಟ್ಟೆಯನ್ನು ಇಡಬಹುದು. ನಾಲಗೆ ಕಡಿಯದಂತೆ ತಡೆಯಲು ಮರದ ತುಂಡು, ನಾಲಗೆ ಇಕ್ಕುಳ ಮತ್ತು ದೇಹದ ಚಲನೆ ನಿರ್ಬಂಧಿಸುವ ಸಾಧನಗಳಿಂದ, ಉಪಕಾರಕ್ಕಿಂತ ಹೆಚ್ಚು ಅಪಾಯವಾಗುವ ಸಾಧ್ಯತೆ ಇರುತ್ತದೆ. ಸೆಳವು ಕಾಲದಲ್ಲಿ ಸುರಿಯುವ ವಿಪರೀತ ಜೊಲ್ಲುರಸ, ಗಂಟಲಿಗೆ ಹೋಗಿ ಉಸಿರಾಟಕ್ಕೆ ತೊಂದರೆಯಾಗಬಹುದು. ನಿಯಮಿತವಾಗಿ ಒರೆಸಿ, ಗಾಳಿಯ ಸರಾಗ ಚಲನೆಗೆ ಅನುವು ಮಾಡಿಕೊಡಬೇಕು. ಎತ್ತರದ ಜಾಗದಲ್ಲಿ ವ್ಯಕ್ತಿ ಬಿದ್ದಿದ್ದರೆ, ವ್ಯಕ್ತಿಯನ್ನು ಸಮತಟ್ಟಾದ ನೆಲದಲ್ಲಿ ಮಲಗಿಸಿ ದೇಹಕ್ಕೆ ಯಾವುದೇ ಏಟಾಗದಂತೆ ತಡೆಯಬೇಕು. ಅಪಸ್ಮಾರದಿಂದ ಹೊರಳಾಡುತ್ತಿರುವ ವ್ಯಕ್ತಿಯ ಕೈಗೆ ಚೂಪಾದ ಕಬ್ಬಿಣದ ಸರಳನ್ನು ನೀಡಿ ಸೆಳತ ನಿಲ್ಲಿಸಲು ಪ್ರಯತ್ನಿಸುವುದು ಮೂರ್ಖತನದ ಪರಮಾವಧಿಯಾಗಿರುತ್ತದೆ. ಅದೇ ರೀತಿ ಮುಖದ ಮೇಲೆ ನೀರು ಸುರಿಯುವುದರಿಂದ ಉಸಿರಾಟಕ್ಕೆ ಮತ್ತಷ್ಟು ತೊಂದರೆಯಾಗಬಹುದು. ಅಪಸ್ಮಾರದ ಬಂದು ವ್ಯಕ್ತಿ ಕಂಪಿಸುತ್ತಿರುವಾಗ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಪ್ರಯತ್ನಿಸಬಾರದು. ನೆಲದ ಮೇಲೆ ಮಲಗಿಸಿ ಅಪಸ್ಮಾರ ನಿಲ್ಲುವ ವರೆಗೆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಅಪಸ್ಮಾರದ ತೀವ್ರತೆ ಕಡಿಮೆಯಾದ ಬಳಿಕ ಆಸ್ಪತ್ರಗೆ ಸೇರಿಸಿ ಕೂಲಂಕಷವಾಗಿ ಅಪಸ್ಮಾರಕ್ಕೆ ಕಾರಣವಾದ ಸ್ಥಿತಿ ಮತ್ತು ಕಾರಣಗಳನ್ನು ತಿಳಿದು ಚಿಕ್ಸಿತೆ ನೀಡಬೇಕಾಗುತ್ತದೆ.

ಅಪಸ್ಮಾರ ರೋಗಿಗಳು ಏನು ಮಾಡಬಾರದು?
 ನಿರಂತರವಾಗಿ ಅಪಸ್ಮಾರ ರೋಗಕ್ಕೆ ತುತ್ತಾಗುವವರು, ವೈದ್ಯರ ಸೂಚನೆಯಂತೆ ನಿಯಮಿತವಾಗಿ ಔಷಧಿ ಸೇವಿಸಬೇಕು. ವೈದ್ಯರು ನೀಡಿದ ಮಾತ್ರೆಗಳನ್ನು ಅನೇಕ ವರ್ಷಗಳ ಕಾಲ ದಿನ ಬಿಡದೇ ಸೇವಿಸಬೇಕಾದ ಅನಿವಾರ್ಯತೆ ಇರುತ್ತದೆ. ಔಷಧಿ ಸೇವನೆ ನಿಲ್ಲಿಸಿದ ಕೂಡಲೇ ಅಪಸ್ಮಾರಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಪಸ್ಮಾರ ರೋಗದ ಚಿಕ್ಸಿತೆ ದೀರ್ಘಕಾಲಿಕವಾಗಿದ್ದು ವೈದ್ಯ, ರೋಗಿ ಮತ್ತು ರೋಗಿಯ ಕುಟುಂಬದ ಸದಸ್ಯರ ನಡುವೆ ಹೊಂದಾಣಿಕೆ ಅತೀ ಅಗತ್ಯ. ಅಪಸ್ಮಾರ ರೋಗಿ ಒಬ್ಬರೇ ಈಜಾಡುವುದು, ಬೆಟ್ಟ ಹತ್ತುವುದು, ಗಾಡಿಚಾಲನೆ ಮಾಡುವುದು, ಚಲಿಸುವ ಯಂತ್ರಗಳೊಡನೆ ಒಡಾಡುವುದು, ಎತ್ತರ ಪ್ರದೇಶದಲ್ಲಿ ಕೆಲಸ ಮಾಡುವುದು, ಸಂಪೂರ್ಣವಾಗಿ ನಿಷಿದ್ಧವಾಗಿರುತ್ತದೆ. ಅಪಸ್ಮಾರ ರೋಗಿಗಳನ್ನು ಯಾವತ್ತೂ ಮನೆಯಲ್ಲಿ ಒಬ್ಬಂಟಿಯಾಗಿ ಬಿಡಬಾರದು. ಸ್ನಾನ ಗ್ರಹದಲ್ಲಿಯೂ ಬಾಗಿಲು ಚಿಲಕ ಹಾಕದೇ ಸ್ನಾನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಒಟ್ಟಿನಲ್ಲಿ ಅಪಸ್ಮಾರ ರೋಗಿಗಳು ತಮ್ಮ ಆರೋಗ್ಯದ ಹಿತದೃಷ್ಟಿಯಿಂದಾಗಿ ಯಾವತ್ತೂ ಕುಟುಂಬಿಕರ ಮತ್ತು ಸ್ನೇಹಿತರ ಕಣ್ಗಾವಲಿನಲ್ಲಿಯೇ ಇರಬೇಕಾದ ಅಗತ್ಯತೆಯಂತೂ ಇದೆ.

Writer - ಡಾ. ಮುರಲೀ ಮೋಹನ್ ಚೂಂತಾರು

contributor

Editor - ಡಾ. ಮುರಲೀ ಮೋಹನ್ ಚೂಂತಾರು

contributor

Similar News