ಟಿಶ್ಯೂ ಮೆಟೀರಿಯಲ್‌ನಲ್ಲಿ ಚಿನ್ನದ ಕಸೂತಿ!
ಟಿಶ್ಯೂ ಮಾದರಿಯ ಅತಿ ತೆಳುವಿನ ಬಟ್ಟೆಯಲ್ಲಿ ಚಿನ್ನದ ದಾರದಿಂದ ಮಾಡಿದ ಅತಿ ನಾಜೂಕಿನ ಕಸೂತಿ ಕಾರ್ಯ. ನಾಲ್ಕು ಮಂದಿ ಕರಕುಶಲ ಕರ್ಮಿ ಗಳಿಂದ ಸುಮಾರು ಒಂದೂವರೆ ವರ್ಷದ ಕಠಿಣ ಪರಿಶ್ರಮದೊಂದಿಗೆ ತಯಾರಾದ ಅತ್ಯಂತ ಆಕರ್ಷಕ ಒಂದು ಸೆಟ್ (ಮೂರು ಪೀಸ್‌ಗಳು) ಟೇಬಲ್ ಮ್ಯಾಟ್. ಅಂದಾಜು ಬೆಲೆ 2.40 ಲಕ್ಷ ರೂ.! ಇದು ಮಂಗಳೂರಿನ ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಅರ್ಬನ್ ಹಾತ್‌ನಲ್ಲಿ ಮಾ. 25ರಿಂದ ಆರಂಭಗೊಂಡಿರುವ ರಾಷ್ಟ್ರೀಯ ಕ್ರಾಫ್ಟ್ ಬಝಾರ್‌ನಲ್ಲಿ ಕಂಡು ಬಂದ ಪ್ರದರ್ಶನದ ಒಂದು ಝಲಕ್. ಈ ಪ್ರದರ್ಶನವು ಎ.3ರವರೆಗೆ ಇರಲಿದೆ.
ಉತ್ತರ ಪ್ರದೇಶದ ಬರೇಲಿಯ ಕರಕುಶಲಕರ್ಮಿ ಮುಹಮ್ಮದ್ ತಹ್ಸೀನ್ ಕಮರ್ ಈ ನೈಜ ಚಿನ್ನದ ದಾರ ದ ಕಸೂತಿಯ ಬಗ್ಗೆ ವಿವರಿಸುತ್ತಾ, ‘ರಾಜ್ಯ ಮಟ್ಟದ ಈ ಟೇಬಲ್ ಮ್ಯಾಟ್ ಆಯ್ಕೆಯಾಗಿದೆ’ ಎಂದು ಹೇಳುತ್ತಾರೆ. ಗೆರಟೆಯ ಕಿವಿಯೋಲೆ, ಕ್ಲಿಪ್, ಬಳೆಗಳು!
ಪಾಂಡಿಚೇರಿಯ ಕಲೈ ತಮಿಝನ್ ಕೋಕನಟ್ ಕ್ರಾಫ್ಟ್ ಸಂಸ್ಥೆಯ ಮಳಿಗೆಯಲ್ಲಿ ತೆಂಗಿನಕಾಯಿ ಗೆರಟೆಯ ಕಿವಿಯೋಲೆಗಳು, ಬಳೆಗಳು, ಕ್ಲಿಪ್‌ಗಳು, ಧಾನ್ಯಗಳಿಂದ ತಯಾರಿಸಿದ ನಾನಾ ರೀತಿಯ ಕ್ಲಿಪ್‌ಗಳು ಸೇರಿದಂತೆ ಮಹಿಳೆಯರ ಆಲಂಕಾರಿಕ ವಸ್ತುಗಳೂ ಇಲ್ಲಿವೆ. ರೇಷ್ಮೆಯಲ್ಲಿ ಅರಳಿದ ಹೂವುಗಳು!
ತಮಿಳುನಾಡಿನ ರಾಜ್ಯ ಪ್ರಶಸ್ತಿ ವಿಜೇತರೂ ಆಗಿರುವ ಎ. ಚಿದಂಬರಂ ಅವರ ಮಳಿಗೆಯಲ್ಲಿ ರೇಷ್ಮೆಯ ಎಳೆಗಳಿಂದ ತಯಾರಿಸಿದ ಆಕರ್ಷಕ ಬಣ್ಣ ಬಣ್ಣದ ಹೂವುಗಳನ್ನು ನೋಡಬಹುದು. ಎಪ್ರಿಲ್ 3ರವರೆಗೆ ನಡೆಯಲಿರುವ ಈ ಪ್ರದರ್ಶನ ಮತ್ತು ಮಾರಾಟದ ರಾಷ್ಟ್ರೀಯ ಕ್ರಾಫ್ಟ್ ಬಝಾರ್‌ನಲ್ಲಿ ಪಾಂಡಿಚೇರಿ, ಕೊಲ್ಕತ್ತಾ ಸೇರಿದಂತೆ 40ಕ್ಕೂ ಅಧಿಕ ಮಳಿಗೆಗಳಲ್ಲಿ 60ಕ್ಕೂ ಅಧಿಕ ಕರಕುಶಲ ಕರ್ಮಿಗಳು ತಮ್ಮ ಕಲಾವೈಭವವನ್ನು ತೆರೆದಿಟ್ಟಿದ್ದಾರೆ. ಸೆಣಬಿನ ಸೀರೆಗಳು, ಬ್ಯಾಗ್‌ಗಳು, ಮರದ ಆಲಂಕಾರಿಕ ವಸ್ತುಗಳ ಜತೆಗೆ ಕನ್ನಡಿ, ಲ್ಯಾಂಪ್, ಗಂಟೆ, ಅಡುಗೆ ಸಾಮಗ್ರಿಗಳು, ಶೇ. 100ರಷ್ಟು ಹತ್ತಿ ಬಟ್ಟೆಯಿಂದ ತಯಾರಿಸಿದ ಶಾಲು, ಬೈರಾಸು, ಕೇರಳದ ಪಾಲ್ಘಾಟ್‌ನ ಆರ್ಕಿಟೆಕ್ಟ್ ವಿದ್ಯಾರ್ಥಿನಿ ತಯಾರಿಸಿದ ಟೆರಾಕೋಟಾದ ಹೆಣ್ಣು ಮಕ್ಕಳ ಆಲಂಕಾರಿಕ ವಸ್ತುಗಳು ಸೇರಿದಂತೆ ವಿವಿಧ ರಾಜ್ಯಗಳ ಕರಕುಶಲ ವಿಶೇಷತೆಗಳನ್ನು ಕ್ಟಾಫ್ಟ್ ಬಝಾರ್‌ನಲ್ಲಿ ಕಾಣಬಹುದು. ಇದಲ್ಲದೆ ಪಿಲಿಕುಳ ನಿಸರ್ಗಧಾಮದ ಕರಕುಶಲ ಗ್ರಾಮದ ಕುಶಲಕರ್ಮಿಗಳು ತಯಾರಿಸುವ ಬಿದಿರು ಹಾಗೂ ಬೆತ್ತದ ಪೀಠೋಪಕರ ಣಗಳು, ಆಲಂಕಾರಿಕ ವಸ್ತುಗಳು, ಮಣ್ಣಿನ ಮಡಕೆಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನೂ ವೀಕ್ಷಿಸಬಹುದಾಗಿದೆ.
ಬಾಸುಮತಿ ಅಕ್ಕಿ ಕಾಳಿನಲ್ಲಿ ನರೇಂದ್ರ ಮೋದಿ, ಅಬ್ದುಲ್ ಕಲಾಂ!
ಬಾಸುಮತಿ ಅಕ್ಕಿಯಲ್ಲಿ ಸುಭಾಶ್ಚಂದ್ರ ಬೋಸ್, ಛತ್ರಪತಿ ಶಿವಾಜಿ, ಮಹಾತ್ಮಗಾಂಧಿ, ಪ್ರಧಾನಿ ಮೋದಿ, ಬಾಲ ಗಂಗಾಧರ ತಿಲಕ್‌ರ ಚಿತ್ರಗಳು ತಿರುಪತಿಯ ಪಲ್ಲಿ ಚಿರಂಜೀವಿಯವರ ವಿಶೇಷತೆ. ಅಕ್ಕಿ ಕಾಳಿನಲ್ಲಿ ಸುಮಾರು ಐದು ಗಂಟೆಗಳ ಕಾಲ ಪರಿಶ್ರಮದೊಂದಿಗೆ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸುವ ಚಿರಂಜೀವಿ, ಸ್ಥಳದಲ್ಲೇ ಅಕ್ಕಿ ಕಾಳಿನಲ್ಲಿ ಹೆಸರನ್ನೂ ಬರೆದು ಕೊಡುತ್ತಾರೆ. ಅಕ್ಕಿಕಾಳಿನಲ್ಲಿ ಬರೆದ ಮಹಾನ್ ವ್ಯಕ್ತಿಗಳ ಕಲಾಕೃತಿಗಳನ್ನು ಕಿರಿದಾದ ಗಾಜಿನ ಪೆಟ್ಟಿಗೆಯಲ್ಲಿ ಭದ್ರಗೊಳಿಸಿ ಪೆಟ್ಟಿಗೆಯ ಮೇಲಿನಿಂದ ಭೂತಕನ್ನಡಿಯನ್ನು ಅಳವಡಿಸಿ ನೋಡುಗರು ಅಕ್ಕಿಕಾಳಿನಲ್ಲಿರುವ ಚಿತ್ರಗಳನ್ನು ದೊಡ್ಡದಾದ ಆಕೃತಿಯಲ್ಲಿ ನೋಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಗ್ರಾಹಕರಿಗೆ ಇದನ್ನು ಒಂದು ಸಾವಿರ ರೂ. ವೌಲ್ಯದಲ್ಲಿ ಮಾರಾಟ ಮಾಡುತ್ತೇನೆ. ಉಳಿದಂತೆ ಅಕ್ಕಿಕಾಳಿನಲ್ಲಿ ಹೆಸರು ಬರೆಸಲು ಕೇವಲ 50 ರೂ. ಎನ್ನುತ್ತಾರೆ ಚಿರಂಜೀವಿ.
ಲೋಹದಲ್ಲಿ ಭೂತಕೋಲದ ಶಿಲ್ಪ ವೈವಿಧ್ಯ
ಉಡುಪಿಯ ಕೌಶಲ ಕರಕುಶಲ ಸಂಸ್ಥೆಯ ಲೋಹದ ಶಿಲ್ಪಗಳು ಗಮನ ಸೆಳೆಯುತ್ತಿವೆ. ನಾನಾ ರೀತಿಯ ಲೋಹದ ಶಿಲ್ಪಗಳಲ್ಲಿ ತುಳುನಾಡಿನ ಭೂತಕೋಲದಲ್ಲಿ ಉಪಯೋಗಿಸುವ ಆಲಂಕಾರಿಕ ವಸ್ತುಗಳು ಆಕರ್ಷಣೀಯವಾಗಿವೆ. ತಮ್ಮ ಬೃಹದಾಕಾರದ ಭೂತಕೋಲದ ಸೆಟ್ ಒಂದು ಸ್ವಿಝರ್‌ಲ್ಯಾಂಡ್‌ನ ರಿಟ್‌ಬರ್ಗ್ ಮ್ಯೂಸಿಂನಲ್ಲಿ ಹಾಗೂ ಮದ್ರಾಸ್‌ನ ಮ್ಯೂಸಿಯಂನಲ್ಲೂ ಪ್ರದರ್ಶನದಲ್ಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳುತ್ತಾರೆ.